ಎಲ್ಲಿಹೋದ ನಲ್ಲ? ಚಿತ್ತವ
ಚೆಲ್ಲಿ ಹೋದನಲ್ಲ
ಮೊಲ್ಲೆ ವನದಲಿ ಮೆಲ್ಲಗೆ ಗಾಳಿ
ಸಿಳ್ಳು ಹಾಕಿತಲ್ಲ!

ಹರಿಯುವ ಹೂಳಯಲ್ಲಿ – ಫಕ್ಕನೆ
ಸುಳಿಯು ಮೂಡಿತಲ್ಲೆ
ಜಲ ತುಂಬುವ ಮುಂಚೆ – ಕಟಿಯ
ಕೊಡವೆ ಜಾರಿತಲ್ಲೆ!

ನಡಿಗೆ ಏಕೊ ತಪ್ಪಿ – ಗೆಳತಿ
ಎಡವಿ ಬಿದ್ದೆನಲ್ಲೇ
ಅರಸುತಿದ್ದ ನಿಧಿಯು – ಸಿಗುವುದೆ
ಎಡವಿದ ಎಡೆಯಲ್ಲೇ!

ಹಾಗೇ ಇದೆ ಹೊರಗೆ – ಸುತ್ತ
ಹಾಕಿದ ಬಿಗಿಬೇಲಿ
ಕಳುವಾದುದು ಹೇಗೆ – ಬಾಳೇ
ಗೊನೆಯೆ ಹಿತ್ತಿಲಲ್ಲಿ!
*****

ಪುಸ್ತಕ: ನಿನಗಾಗೇ ಈ ಹಾಡುಗಳು