ಹೆದ್ದಾರಿ ಬದಿಯಲಿ ನನ್ನಪ್ಪ
ಸಮಾಧಿಯಾಗಿ ಕೂತಿದ್ದಾನೆ
ಮೇಲೆ ಹಸಿರಾಗಿ ಕಂಗೊಳಿಸುವ
ಮಾವಿನ ಮರ
ಒಳಹೊರಗೆಲ್ಲ ಚಿಲಿಪಿಲಿಸುವ
ಪಕ್ಷಿ ಸಂಕುಲ
ಪ್ರತಿಸಲದ ಬಸ್ ಪ್ರಯಾಣದಲಿ
ಕಿಟಕಿಯಿಂದಲೇ ನೋಡುತ್ತೇನೆ
ಮನದೊಳಗೆ ನಮಿಸುತ್ತೇನೆ
ಕಣ್ಣುಗಳು ಜಿನುಗುತ್ತವೆ
ಝರಿಯೇ ಕಾಲುತೊಳೆದು
ಬೆಳೆದು ನಿಂತ ಬೆಳೆ
ಚಾಮರ ಬೀಸಿ
ಪಕ್ಷಿಕಲರವದ ಗಂಟೆಯಲಿ
ನಿತ್ಯ ಪೂಜೆ ನನ್ನಪ್ಪಗೆ.

ನನ್ನಪ್ಪ ಜಿಪುಣ ಚಿನ್ನದ
ಬಳೆಸರ ಯಾಕೆ ಅನ್ನುತ್ತಿದ್ದ
ಓದಿಗೇನೂ ಬರ ಇರಲಿಲ್ಲ
ಸುಸಂಸ್ಕೃತ ಮನಸು
ಕರುಳು ಹೃದಯವಂತನೇನಲ್ಲ
ಕಠೋರ ಅಂದುಕೊಂಡದ್ದೂ
ಪಲ್ಟಿ ಆಯಿತು ನಾನು ಮದುವೆಯಾಗಿ
ಹೊರಟದಿನ, ವಿದೇಶಕ್ಕೆ ಹೊರಟದಿನ
ಅವನ ಗಂಟಲನರ

ಉಬ್ಬಿದ ಕಣ್ಣು ನೋಡಿ
ಅದೆಷ್ಟೋ ಬಿಕ್ಕಿದ್ದೆ, ನಾಲ್ಕುಮಾತನಾಡಿ
ದೂರ ದೇಶಕೆ ಕಳಿಸಿಹೋದ
ನನ್ನ ಅಪ್ಪ ಕೆಲವೇ ದಿನಗಳಲಿ
ಹೇಳದೆ ಕೇಳದೆ ತಾನೇ
ದೂರ ದೂರ ಹೋಗಿಬಿಟ್ಟ

ನಿನ್ನಪ್ಪ ಹೇಗಿದ್ದ? ಮಗನ ಮಾತಿಗೆ
ಹೊಳೆವ ನಕ್ಷತ್ರ
ಹಸಿರು ಮಾವಿನ ಮರ
ತೋರಿಸುತ್ತೇನೆ
ಒಮ್ಮೊಮ್ಮೆ ನೀನೇ ನನ್ನಪ್ಪ
ಎನ್ನುತ್ತೇನೆ.
*****

ಪುಸ್ತಕ: ಇರುವಿಕೆ