ಆರೋಪ – ೩

ಆರೋಪ – ೩

ಚಿತ್ರ: ಜೆರಾರ್‍ಡ್ ಗೆಲ್ಲಿಂಗರ್‍

ಅಧ್ಯಾಯ ೫

ಕರಿಗೌಡರು ತಮ್ಮ ಈಡಿನ ಜಾಣ್ಮೆ ಬಗ್ಗೆ ಹೇಳಿಕೊಂಡುದರಲ್ಲಿ ಅತಿಶಯೋಕ್ತಿಯೇನೂ ಇರಲಿಲ್ಲ. ಸಹ್ಯಾದ್ರಿಯ ಈ ಕಡೆ ಅವರಷ್ಟು ಹೆಸರು ಹೊಂದಿದ ಬೇಟೆಗಾರರು ಇನ್ನು ಯಾರೂ ಇರಲಾರರು. ಬೇಟೆ ಅವರಿಗೆ ರಕ್ತಗತವಾಗಿ ಬಂದಂತೆ ಬಂದಿತ್ತು. ಚಿಕ್ಕಂದಿನಲ್ಲಿ ಒಬ್ಬ ಇಂಗ್ಲಿಷ್ ದೊರೆಯ ಜತೆ ಸೇರಿ ಕೋವಿ ಹಿಡಿಯಲು ಕಲಿತಿದ್ದರು. ಆತ ಹೊರಟು ಹೋಗುವಾಗ ಒಂದು ಇಂಗ್ಲಿಷ್ ಕೋವಿಯನ್ನೂ ಕೊಟ್ಟು ಹೋಗಿದ್ದ. ಗೌಡರಿಗೆ ಕೋವಿ ಇನ್ನೊಂದು ತೋಳಿನ ಹಾಗೆ ಆಗಿತ್ತು.

ಅವರ ಜತೆಯಲ್ಲಿ ಬೇಟೆಯಾಡುವವರ ಒಂದು ತಂಡವೇ ಇತ್ತು. ಎಲ್ಲರೂ ಸೇರಿ ವರ್ಷಕ್ಕೆ ಒಂದೆರಡು ಬಾರಿಯಾದರೂ ಬೇಟೆಯ ವಿನೋದದಲ್ಲಿ ಪಾಲುಗೊಳ್ಳುವುದಿತ್ತು. ಅನೇಕ ಹಂದಿ, ಹುಲಿಗಳನ್ನು ಗೌಡರು ಕೈಯಾರೆ ಗುಂಡಿಟ್ಟು ಕೊಂದು ತಮ್ಮ ಜಾಣ್ಮೆಯನ್ನು ಮೆರೆಸಿದ್ದರು. ಈಗ ಹುಲಿಗಳ ಸಂಖ್ಯೆ ಕಡಿಮೆ ಯಾಗಿದೆ. ಒಂದೆರಡು ಇದ್ದರೂ ಅವುಗಳನ್ನು ಹೊಡೆದು ಕೊಂದು ಕಾಡಿನ ಸೌಂದರ್ಯವನ್ನು ಅಳಿಸುವುದಕ್ಕೆ ಮನಸ್ಸು ಒಪ್ಪುವುದಿಲ್ಲ.

ಶಾಮರಾಯರು ಒಂದು ಬಗೆಯಾದರೆ ಕರಿಗೌಡರು ಇನ್ನೊಂದು ಬಗೆ. ರಾಯರು ಮಾತಿನಲ್ಲಿ ನಯ, ಹತ್ತು ಜನರಿಗೆ ಬೇಕಾದವರು. ಗೌಡರು ಹಾಗಲ್ಲ. ಅವರಿಗೆ ಜನರು ಹೆದರುತ್ತಿದ್ದರು. ಆದರೂ ಊರ ಈ ಎರಡು ದಿಗ್ಗಜಗಳು ಪರಸ್ಪರ ಮುಖಾಮುಖಿಯಾದುದನ್ನು ಯಾರೂ ಈ ತನಕ ನೋಡಿಲ್ಲ. ಅವರು ತಮ್ಮ ಯುದ್ಧಗಳನ್ನು ಮಾಡುತ್ತಿದ್ದುದು ಬೇರಯವರ ಮೂಲಕವೇ.

ಗೌಡರ ಅತೃಪ್ತಿಗೆ ಕಾರಣಗಳಿದ್ದುವು. ಶಾಮರಾಯರ ಹಿರಿಯರು ಈ ಊರಿಗೆ ವಲಸೆ ಬಂದವರು. ಬಂದು ಗೌಡರ ದಾಯಾದರಿಂದ ಆಸ್ತಿಯನ್ನು ಖರೀದಿಸಿ ನಾಗೂರಿನಲ್ಲಿ ತಳವೂರಿದರು, ಹೇರಳವಾಗಿ ಕರಿಮೆಣಸು ಬೆಳೆಯುವ ಭಾಗ ಅದು, ಕರಿಮೆಣಸಿಗೆ ಚಿನ್ನದ ಬೆಲೆ ಬಂತು. ಶಾಮರಾಯರ ಹಿರಿಯವರು ರಾತ್ರಿ ಬೆಳಗಾಗುವುದರೊಳಗೆ ಶ್ರೀಮಂತರಾಗಿಬಿಟ್ಟರು. ಅವರ ಪ್ರಭಾವ ಬೆಳೆಯಿತು, ಗೌಡರ ಪ್ರಭಾವ ಕುಗ್ಗಿತು, ಈ ಹುಣ್ಣು ಅವರ ಮನಸ್ಸಿನಿಂದ ಮಾಸಲೇ ಇಲ್ಲ.

ತಮಗಾಗದವರನ್ನು ಗೌಡರು ನಾಶಮಾಡುತ್ತಾರೆಂಬ ಪ್ರತೀತಿಯಿತ್ತು. ಹನಿ ನೀರನ್ನು ದೊಡ್ಡ ಮಳೆ ಕೊಚ್ಚಿಕೊಂಡು ಹೋಗುವುದು ನೈಸರ್ಗಿಕ. ಯೋಗಾ ಯೋಗದಂತೆ ಅವರಿಗೆದುರು ನಿಂತ ಸಂಕಯ್ಯ ದಾರಿಯಲ್ಲಿ ವಾಹನದ ಕೆಳಗೆ ಬಿದ್ದು ಸತ್ತ. ಇದರಲ್ಲಿ ಗೌಡರ ಕೈವಾಡವಿರಬಹುದೆಂದು ಯಾರೊಬ್ಬನೂ ಹೇಳಲಿಲ್ಲ- ಎಲ್ಲರೂ ಹಾಗೆ ಶಂಕಿಸಿದರು, ತಂತಮ್ಮ ಮನಸ್ಸಿನೊಳಗೇ ಇಟ್ಟುಕೊಂಡರು.

ಸಂಕಯ್ಯ ಹೊಲಮನೆ ಮಾಡಿಕೊಂಡು ಸಾಕಷ್ಟು ಆರಾಮವಾಗಿ ಇದ್ದವನು. ಗೌಡರಿಂದ ಗೇಣಿಗೆ ಪಡೆದ ಒಂದೆಕರೆ ಜಮೀನಿತ್ತು. ಅದಾವುದೋ ವಿಷಘಳಿಗೆಯಲ್ಲಿ ಈ ಸ್ಥಳ ತನಗೆ ಸೇರಿದ್ದೆಂದು ಲ್ಯಾಂಡ್ ಟ್ರಿಬ್ಯೂನಲಿಗೆ ಅರ್ಜಿಹಾಕಿದ. ಅಲ್ಲಿಂದ ಮುಂದೆ ಆತ ಕೋರ್ಟಿನಿಂದ ಕೋರ್ಟಿಗೆ ಅಲೆಯುವುದು ತಪ್ಪಲಿಲ್ಲ. ಕೊನೆಗೂ ಸೋತು ಜನರ ಅಪಹಾಸ್ಯಕ್ಕೆ ಗುರಿಯಾದ. ಜಮೀನನ್ನು ಗೌಡರು ವಶಕ್ಕೆ ತೆಗೆದುಕೊಂಡರು. ಸಂಕಯ್ಯನ ಕೈಯಲ್ಲಿದ್ದ ಹಣ ಎಂದೋ ಕರಗಿ ಕಂಠಮುಟ್ಟ ಸಾಲ ಮಾಡಿಕೊಂಡಿದ್ದ. ಈಗ ಸಾಲಗಾರರು ಅವನನ್ನು ಕೋರ್ಟಿಗೆ ಎಳೆಯತೊಡಗಿದರು.

ಒಂದು ಮುಂಜಾನೆ ನಸುಕಿಗೇ ಎದ್ದು ಮಂಗಳೂರಿಗೆ ಹೋಗುತ್ತೇನೆ ಎಂದು ಹೇಳಿ ಸಂಕಯ್ಯ ಮನೆಯಿಂದ ಹೊರಟಿದ್ದ. ಬೆಳಿಗ್ಗೆ ಹೆದ್ದಾರಿಯಲ್ಲಿ ಊರವರ ಕಂಡುದು ನಜ್ಜುಗುಜ್ಜಾದ ಅವನ ಹೆಣವನ್ನು, ಇದನ್ನು ಮೊದಲು ಗಮನಿಸಿದವರು ಹೋಟೆಲಿನ ಹೆಬ್ಬಾರರು, ನಾಗೂರ ಪೇಟೆಯಲ್ಲಿ ಮೊತ್ತಮೊದಲು ತೆರೆಯುವುದು ಅವರ ಹೋಟೆಲು. ಸಹಾಯಕ್ಕೆ ಒಬ್ಬ ಅಡಿಗೆಯವನಿದ್ದಾನೆ. ಆತ ಎದ್ದು ಒಲೆಗೆ ಬೆಂಕಿಹಚ್ಚಿ ಇಡ್ಲಿ ಪಾತ್ರೆ, ಇರಿಸುತ್ತಾನೆ. ಹೆಬ್ಬಾರರು ಹೋಟೆಲಿನ ಬಾಗಿಲು ತೆರೆಯುತ್ತಾರೆ.
ಬಸ್ ಸ್ಟ್ಯಾಂಡಿನ ಬಳಿ ರಸ್ತೆಯ ಮೇಲೆ ಯಾರೋ ಬಿದ್ದಿರುವುದನ್ನು ಗಮನಿಸಿ ಯಾರಿರಬಹುದೆಂಬ ಕುತೂಹಲದಿಂದ ಹೋಗಿ ನೋಡಿದರು. ವಾಹನ ಹರಿದು ಹೋಗಿ ಮಣ್ಣಿಗೆ ಅಂಟಿದ ಹೆಣ ಮೈಜುಮ್ಮೆಂದಿತು. ಹೆಣ ಯಾರದೆಂದು ಸುಲಭವಾಗಿ ಗುರುತು ಹತ್ತುವಂತಿರಲಿಲ್ಲ. ನೋಡುವ ಕುತೂಹಲವೂ ಉಳಿಯಲಿಲ್ಲ. ಏನೂ ಗೊತ್ತಿಲ್ಲದವರಂತೆ ವಾಪಸು ಬಂದರು. ಅಡಿಗೆಯವನು ಎರಡು ಕಪ್ಪು ಚಹಾ ತಯಾರಿಸಿ ಒಂದನ್ನು ಅವರ ಮುಂದೆ ಇರಿಸಿದ. ಹೆಬ್ಬಾರರು ಅವನಿಗೆ ಕಾಣಿಸದಂತೆ ಆದನ್ನು ತೊಳೆಯುವ ತೊಟ್ಟಿಯಲ್ಲಿ ಚೆಲ್ಲಿದರು. ಅಷ್ಟು ಹತ್ತಿರ ಹೆಣವನ್ನಿರಿಸಿಕೊಂಡು ಚಹಾ ಕುಡಿಯುವುದು ಅವರಿಂದ ಸಾಧ್ಯವಾಗಲಿಲ್ಲ.

ತನ್ನ ತಂದೆಯ ಸಾವಿನ ಸುದ್ದಿ ಬಂದಾಗ ಶ್ರೀನಿ ಶಾಲೆಯಲ್ಲಿದ್ದ. ಯಾರೋ ಅವನನ್ನು ಅಪಘಾತದ ಸ್ಥಳಕ್ಕೆ ಕರೆದು ತಂದರು, ಅವನು ಮನುಷ್ಯನ ಅನಾಟಮಿಯ ಕುರಿತು ಪಠ್ಯಪುಸ್ತಕದಲ್ಲಿ ಓದಿದ್ದ. ಈಗ ಅದರ ಕೆಲವು ಭಾಗಗಳು ಕಣ್ಣೆದುರಲ್ಲಿ ಕಾಣಿಸಿದುವು. ಸಂಕಯ್ಯನ ತಲೆ ಪಪ್ಪಾಯಿ ಹಣ್ಣಿನಂತೆ ಒಡೆದು, ಮಿಮಳ ಅಷ್ಟುದೂರ ಬಿದ್ದಿತ್ತು. ಮುಖದ ಗುರುತೇ ಸಿಗುತ್ತಿರಲಿಲ್ಲ. ಬಟ್ಟೆಯ ಮೇಲಿಂದ ಲಕ್ಷ್ಮಿ ಗುರುತು ಹಿಡಿದಿದ್ದಳು. ಶ್ರೀನಿಗೆ ಬವಳಿ ಬಂತು. ಮಧ್ಯಾಹ್ನದ ಸುಮಾರಿಗೆ ಪೋಲೀಸರು ಬಂದು ಮಹಜರು ನಡೆಸಿ ಹಣವನ್ನು ರಸ್ತೆಯಿಂದ ಕೆರೆದು ತೆಗೆದು ಗೋಣಿ ಚೀಲದಲ್ಲಿ ಕಟ್ಟಿಕೊಂಡು ಹೋದರು, ಮರಣೋತ್ತರ ಶವಪರೀಕ್ಷೆ ನಡಸಲು.

ಕೆಲವು ದಿನಗಳ ನಂತರ, ಮರಣದ ಕಾರಣ ವಾಹನ ಹರಿದು ಹೋದದು ಎಂದು ಪೊಲೀಸರು ತೀರ್ಮಾನಿಸಿದರು. ಆದರೆ ಬಸ್ಸಿಗೆ ಕಾಯುತ್ತಿದ್ದ ಸಂಕಯ್ಯ ವಾಹನದ ಕೆಳಗೆ ಹೇಗೆ ಬಿದ್ದ? ಅವನ ಮೇಲೆ ಹರಿದುಹೋದ ವಾಹನ ಯಾವುದು? ಇದು ಆಕಸ್ಮಿಕವೇ ಅಥವಾ ಪೂರ್ವಯೋಜಿತವೆ? ಈ ಪ್ರಶ್ನೆಗಳಿಗೆ ಉತ್ತರವಿರಲಿಲ್ಲ. ಪ್ರಶ್ನೆಗಳನ್ನು ಯಾರೂ ಎತ್ತಲೂ ಇಲ್ಲ.

ಸಂಕಯ್ಯ ಕರಿಗೌಡರಿಗೆ ತಿರುಗಿ ಬಿದ್ದುದು, ವಾಹನದ ಕೆಳಗೆ ಬಿದ್ದು ಸತ್ತುದು ಬರೇ ಯೋಗಾಯೋಗ ಇದ್ದಿರಬಹದು. ಆದರೂ ಇದರಿಂದ ಗೌಡರ ತೂಕ ಇನ್ನಷ್ಟು ಹೆಚ್ಚಿತು. ದೊಡ್ಡವರೊಡನೆ ಸೆಣಸಿದರೆ ಹೇಗೆ ! ನೋಡಿದಿರ, ನಾಯಿಯಂತೆ ಬಿದ್ದು ಸತ್ತ! ಎಂದು ಊರವರು ಸಂಕಯ್ಯನ ಕುರಿತು ಆಡಿಕೊಳ್ಳುವಂತಾಯಿತು. ಯಾರೂ ಅವನ ಕುಟುಂಬದ ಬಗ್ಗೆ ಕಳಕಳಿ ತೋರಿಸಲು ಮುಂದಾಗಲಿಲ್ಲ. ಒಂದು ರೀತಿಯಲ್ಲಿ ಸಂಕಯ್ಯನ ಮಕ್ಕಳು ಬಹಿಷ್ಕೃತರಂತೆ ಆದರು.

ಅರವಿಂದ ಕರಿಗೌಡರ ಕಾರಿನಲ್ಲಿ ಕುಳಿತು ಹೋದುದನ್ನು ವೆಂಕಟರಮಣ ಮೂರ್ತಿ ನೋಡಿದ್ದರು. ಯಾವುದೋ ಕೆಲಸಕ್ಕೆ ಪೇಟೆಗೆ ಬಂದವರಿಗೆ ಗೌಡರ ಕಾರು ಅವನ ರೂಮಿನ ಬಳಿ ಬಂದು ನಿಂತುದು, ಅವನು ಡ್ರೈವರನೊಂದಿಗೆ ಹೊರಟುದು ಕಣ್ಣಿಗೆ ಬಿದ್ದಿತ್ತು. ಯಾಕಿದ್ದೀತು? ಅವರಿಗೆ ಕುತೂಹಲವನ್ನು ತಡೆಹಿಡಿಯುವುದು ಕಷ್ಟವಾಯಿತು. ಕೆಲವು ದಿನಗಳ ಹಿಂದೆ ಆತ ಗೌಡರ ಮಗನನ್ನು ಕ್ಲಾಸಿನಿಂದ ಹೊರಗೆ ಹಾಕಿದ್ದು ನೆನಪಿಗೆ ಬಂತು. ಕ್ಲಾಸಿಗೆ ಹೊರಟು ನಿಂತಿದ್ದ ಅರವಿಂದನನ್ನು ಬದಿಗೆ ಕರೆದು ಕೇಳಿಯೇ ಬಿಟ್ಟರು.

“ಗೌಡರು ಕರೆಕಳಿಸಿದ್ದರಂತಲ್ಲ?”

ಅರವಿಂದ ಒಂದು ಕ್ಷಣ ಚಕಿತನಾದ. ತನ್ನ ಅವಮಾನದ ಗಳಿಗೆಗಳಲ್ಲಿ ಹೀಗೆ ಬಂದು ಕಾಡುವ ಮನುಷ್ಯನನ್ನು ಚಚ್ಚಿಬಿಡಬೇಕೆಂಬಷ್ಟು ಸಿಟ್ಟು ಬಂತು. ಸಿಟ್ಟನ್ನು ತಡೆದುಕೊಂಡ.
“ಹೌದು” ಎಂದು ಹೇಳಿದ.
“ಯಾಕೆ”
“ಏನು ಯಾಕೆ?”
“ಗೌಡರು ಕರೆಕಳಿಸಿದ್ದು….”
ವೆಂಕಟರಮಣ ಮೂರ್ತಿ ತಡವರಿಸಿ ಹೇಳಿದರು. ನಾಲ್ಕು ಮೈಲಿ ಸೈಕಲು
ತುಳಿದು ಮುಖ ಬೆವರಿ ಜಿಡ್ಡುಗಟ್ಟಿತ್ತು. ಕಣ್ಣುಗಳು ರೋಗಗ್ರಸ್ತನಂತೆ ಆಳಕ್ಕೆ ಇಳಿದಿದ್ದವು. ಮುಳ್ಳುಹಂದಿಯ ಮುಳ್ಳುಗಳಂತಿರುವ ತಲೆಗೂದಲು, ನೋಡಿದರೆ ಕನಿಕರವೆನಿಸಬೇಕು. ಆದರೂ ಕತ್ತೆಯಂತೆ ಒದೆಯುವ ಚಟ ಈ ಮನುಷ್ಯನಿಗೂ! ಈತ ಖಾಸಗಿಯಾಗಿ ಎಂ. ಎ. ಗೆ ಕಟ್ಟಿದ್ದಾನೆ. ಇತಿಹಾಸದ ಪಠ್ಯಪುಸ್ತಕಗಳನ್ನೂ,
ಗೈಡುಗಳನ್ನೂ ಓದಿ ಉರುಹೊಡೆಯುತ್ತಿದ್ದಾನೆ. ನೆಪೋಲಿಯನನ್ನು ಬಂದಿಸಿಟ್ಟ ದ್ವೀಪದ ಹೆಸರೇನು? ಎರಡನೇ ಮಹಾಯುದ್ಧ ಯಾವ ತಾರೀಖಿಗೆ ಆರಂಭವಾಗಿ ಯಾವ ತಾರೀಖಿಗೆ ಅಂತ್ಯವಾಯಿತು? ಇಂಥ ವಿವರಗಳನ್ನು ಮಿದುಳಿನಲ್ಲಿ ತುಂಬಿಕೊಳ್ಳಲು ಯತ್ನಿಸುತ್ತಾನೆ. ಆದರೂ ಕೆಲವೊಮ್ಮೆ ಭಯಂಕರವಾದ ಸಂದೇಹಗಳು ಅವನನ್ನು ಕಾಡುತ್ತವೆ. ಘಜನಿಯ ಮತ್ತು ಘೊರಿಯ ಮಹಮದರು ಅದಲು ಬದಲಾಗುತ್ತಾರೆ. ಸೋಮನಾಥ ದೇವಾಲಯವನ್ನು ಕೊಳ್ಳೆ ಹೊಡೆದವರು ಯಾರು? ಸಂಯುಕ್ತಿಯನ್ನು ಅಪಹರಿಸಿದವರು? ಯಾವುದು ಮೊದಲು, ಯಾವುದು ನಂತರ? ಸದಾ ಕಾಲಿನ ಮಟ್ಟದಲ್ಲಿ ಚಿಂತಿಸುವ ಈ ಮಿದುಳಿನಲ್ಲಿ ದ್ರಾಬೆತನಕ್ಕೆ ಸಾಕಷ್ಟು ಸ್ಥಳವಿತ್ತು.

ಅರವಿಂದ ಹೇಳಿದ :
“ಅವರ ಮಗನಿಗೆ ಟ್ಯೂಷನ್ ಕೊಡಿಸಲು ಸಾಧ್ಯವೇ ಎಂದು ವಿಚಾರಿಸಲು.”
“ಏನಂದಿರಿ? ಒಪ್ಪಿಕೊಂಡಿರ?”
“ಇಲ್ಲ.”
“ಒಪ್ಪಿಕೊಳ್ಳಬಹುದಿತ್ತು.”
“ಬೇಡ ಅನಿಸಿತ್ತು.”
“ಒಳ್ಳೇ ಚಾನ್ಸ್ ಕಳಕೊಂಡಿರಿ.”
“ಏನು ಚಾನ್ಸ್?”
“ಹಣ ಮಾಡಬಹುದಿತ್ತು. ಎಲ್ಲರೂ ಮಾಡುತ್ತಿದ್ದಾರೆ.”
“ನೀವು?”
ವೆಂಕಟರಮಣಮೂರ್ತಿ ಹಲ್ಲುಗಿಂಜಿದರು.
“ನನಗೆ ಸಮಯವೆಲ್ಲಿದೆ”’ ಎಂದರು.
“ಅಲ್ಲದೆ ಗೌಡರು ಹಾಗೆಲ್ಲ ಯಾರನ್ನೂ ಕೇಳುವುದಿಲ್ಲ… ಬೇರೆನೂ
ಹೇಳಲಿಲ್ಲವೆ?”
“ಕಾಡು ತೋರಿಸಿದರು, ಬೇಟೆಯ ವಿಧಾನವನ್ನು ಹೇಳಿದರು.”
“ಹೌದೆ ! ಗೌಡರು ದೊಡ್ಡ ಬೇಟೆಗಾರರು!… ಅಷ್ಟೆಯೆ?”
“ಆಷ್ಟೆ”

ಆ ದಿನದ ಕ್ಲಾಸುಗಳು ಮುಗಿಯುವಷ್ಟರಲ್ಲಿ ಅರವಿಂದ ಸುಸ್ತಾಗಿಹೋಗಿದ್ದ. ಅವನ ಸ್ಥಿತಿಯನ್ನು ಗಮನಿಸಿದ ಮೋನಾ ಮಿಸ್ತ್ರಿ ಹತ್ತಿರ ಬಂದು ಏನಾಗಿದೆ ಎಂದು ವಿಚಾರಿಸಿದಳು. ಅವನ ಕಣ್ಣುಗಳು ಕೆಂಡದಂತೆ ಕೆಂಪಾಗಿರುವುದನ್ನು ಕಂಡು ಹಣೆ ಮುಟ್ಟಿ ನೋಡಿದಳು.

“ಅರವಿಂದ್! ನಿಮಗೆ ಟೆಂಪರೇಚರ್ ಇದೆ. ಡಾಕ್ಟರರಲ್ಲಿ ಹೋಗಿ ಕೂಡಲೆ,” ಎಂದು ಆಗ್ರಹಿಸಿದಳು.

ಬೆಳಿಗ್ಗೆ ಎದ್ದಾಗ ಮೈಕೈ ನೋವು ಇತ್ತು. ಕಾಡುಗುಡ್ಡ ಅಲೆದ ಕಾರಣ ಹೀಗಿರಬಹುದು ಎಂದು ಕೊಂಡಿದ್ದ. ಕಿವಿಯೊಳಗೆ ಗುಂಯ್‌ಗುಟ್ಟುವ ಸದ್ದು ಕಿವಿಗಳಿಗೇನೂ ಆಗಿಲ್ಲವೆಂದು ಖಾತ್ರಿ ಮಾಡಿಕೊಳ್ಳಲು ಗೋಡೆಯ ಮೇಲೆ ಬೆರಳುಗಳಿಂದ ಹೊಡೆದು ಸದ್ದನ್ನು ಆಲಿಸಿಕೊಂಡಿದ್ದ. ಮೈಯ ನೋವಿಗಿಂತಲೂ ಮನಸ್ಸಿನ ನೋವು ಅಪಾರವಾಗಿತ್ತು. ಎಲ್ಲವನ್ನೂ ಮೋನಾಳಿಗೆ ಹೇಳಲೇ ಎಂದು ಯೋಚಿಸಿದ. ಆದರೆ ತನ್ನ ಅತ್ಯಂತ ವೈಯಕ್ತಿಕವಾದ ಈ ಅವಮಾನವನ್ನು ಯಾರ ಮುಂದೆಯೂ ಹೇಳಿಕೊಳ್ಳಲು ಅವನಿಗೆ ಮನಸ್ಸಾಗಲಿಲ್ಲ.

ನಾಗೂರು ಪೇಟೆಯಲ್ಲಿರುವುದು ಒಬ್ಬರೇ ಡಾಕ್ಟರರು, ಅವರು ಎರಡರ ಕಡೆ ಅಂಗಡಿಯಿಟ್ಟುಕೊಂಡಿದ್ದುದರಿಂದ ನಾಗೂರಿಗೆ ಸಾಯಂಕಾಲ ಬರುತ್ತಿದ್ದರು. ಆಚೀಚೆ ಓಡಾಡಲು ಒಂದು ಹಳೇ ಬುಲ್ಲೆಟ್ ಮೋಟಾರ್ ಸೈಕಲ್ ಇತ್ತು ಅವರ ಬಳಿ. ಅದರ ದಬದಬ ಸದ್ದು ನಾಗೂರಿನಲ್ಲಿ ಚಿರಪರಿಚಿತ.

ಅರವಿಂದ ಹೋದಾಗ ಅಂಗಡಿ ತುಂಬ ರೋಗಿಗಳು ಬಂದು ಸೇರಿದ್ದರು. ಸೀತಜ್ವರ, ಕೆಮ್ಮು ಕಾಯಿಲೆಗಳಿಂದ ನರಳುವವರು, ಡಾಕ್ಟರರು ಗಾಜಿನ ಗೂಡಿನ ತುಂಬ ಮಿಕ್ಸಚರುಗಳನ್ನು ತಯಾರಿಸಿ ಇಟ್ಟುಕೊಂಡಿದ್ದರು. ಮಳೆಗಾಲ ಸೀಸನು ಬಹಳ ಹೊತ್ತು ಕಾದ ಮೇಲೆ ಅರವಿಂದನ ಸರದಿ ಬಂತು.
“ಹೆಸರು?”
“ಅರವಿಂದ”
“ವಯಸ್ಸು?”
“ಇಪ್ಪತ್ತನಾಲ್ಕು.”
ಡಾಕ್ಟರರು ಬರೆದುಕೊಂಡರು.
“ಏನಾಗುತ್ತಿದೆ?”
ಹೇಳಿದ. ಡಾಕ್ಟರರು ಅಲ್ಲಲ್ಲಿ ಸ್ಟೆತೋಸ್ಕೋಪು ಇಟ್ಟು ಪರೀಕ್ಷೆ ಮಾಡಿದರು, ನಂತರ ತೆಗೆದರು.
“ಏನು ಕೆಲಸ”
“ಅಧ್ಯಾಪಕ.”
“ಎಲ್ಲಿ?”
“ಇಲ್ಲೇ ಹೈಸ್ಕೂಲಲ್ಲಿ.”
“ಹೊಸಬರೆ?”
“ಹೌದು.”
“ಮಳೆಗೆ ಹೋಗಿದ್ದಿರೇನು?”
“ಹೌದು?”
ಒಂದು ಇಂಜೆಕ್ಷನ್ ಚುಚ್ಚಿದರು.
“ಬಾಟಲಿ ತಂದಿಲ್ಲವೆ”
“ಇಲ್ಲ.”
“ತನ್ನಿ.”

ಪಕ್ಕದಂಗಡಿಯವನು ವಿವಿಧ ಸೈಜುಗಳ ಔನ್ಸ್ ಬಾಟಲಿಗಳನ್ನು ಮಾರುತ್ತಿದ್ದ. ಅರವಿಂದ ಬಾಟಲಿ ಕೊಂಡು ತಂದ ಡಾಕ್ಟರರು ಒಂದು ಭರಣಿಯಿಂದ ಬಣ್ಣದ ನೀರನ್ನು ಅದರಲ್ಲಿ ತುಂಬಿದರು. ಕೆಲವು ಮಾತ್ರೆಗಳನ್ನು ಕೊಟ್ಟರು.
“ಊಟವಾದ ಮೇಲೆ ಒಂದು”

ಅರವಿಂದ ಹತ್ತರ ನೋಟನ್ನು ಟೇಬಲ್ ಮೇಲೆ ಇಟ್ಟ.
“’ನಾಳೆ ಬನ್ನಿ.”
ನಂತರ ಏನೋ ನೆನಪಾದವರಂತೆ…
“ಜ್ವರ ಪೂರ್ತಿ ಗುಣವಾದ ಮೇಲೆ ಆ ಕೂದಲು ತೆಗೆಸಿಬಿಡಿ ಮೆಸ್ಟ್ರೆ ಎಂದರು.

ಅರವಿಂದ ತನ್ನ ಹುಲುಸಾದ ಕೂದಲನ್ನು ನೇವರಿಸಿಕೊಂಡ ಮೈಸೂರಿನಿಂದ ಬಂದ ಮೇಲೆ ಕ್ಷೌರ ಮಾಡಿಸಿ ಕೊಂಡಿರಲಿಲ್ಲ. ಡಾಕ್ಟರರ ಮಾತಿಗೆ ನಗಲು ಪ್ರಯತ್ನಿಸಿದ. ಆದರೆ ಅವರು ಈಗಾಗಲೇ ಬೇರೊಬ್ಬ ರೋಗಿಯ ಹೆಸರು ಕೇಳುವುದರಲ್ಲಿ ಮಗ್ನರಾಗಿದ್ದರು. ರೂಮಿಗೆ ಮರಳಿದವನೆ ಅರವಿಂದ ಹಾಸಿಗೆಯುರುಳಿಸಿ ಮಲಗಿದ. ಹೊರಗೆ ಜಿಟಿ ಮಳೆ ಬೀಳುತ್ತಲೇ ಇತ್ತು. ಮಲಗಿದಲ್ಲಿಗೇ ಜ್ವರ ಮೆಲ್ಲನೆ ಏರತೊಡಗಿ ರಾತ್ರಿಯೆಲ್ಲಾ ನರಳುತ್ತಿದ್ದ, ಏನೇನೋ ಭಯಂಕರವಾದ ಕನಸುಗಳು. ಈ ಮಧ್ಯೆಯೂ ಯಾರೋ ಸಮೀಪದಲ್ಲಿ ಕುಳಿತು ತನ್ನನ್ನು ನೋಡಿಕೊಂಡಿರುವ ಅಸ್ಪಷ್ಟವಾದ ಅನಿಸಿಕೆ.

ಬೆಳಿಗ್ಗೆ ಬೆವೆತು ಜ್ವರ ಸ್ವಲ್ಪ ಇಳಿದು ಕಣ್ಣು ತೆರೆದು ನೋಡಿದಾಗ ಕಾಣಿಸಿದುದು-ಕುರ್ಚಿಯಲ್ಲಿ ಕುಳಿತು ಸಿಗರೇಟು ಸೇದುತ್ತಿದ್ದ ನೆರೆವರಾದ ಮೆಸ್ಕರೆನ್ನಾ.

“ಈಗ ಹೇಗನಿಸುತ್ತಿದೆ?” ಎಂದು ಕೇಳುತ್ತಿದ್ದರು ಅವರು.
*****

ಅಧ್ಯಾಯ ೬

ಅರವಿಂದ ಮದ್ದಿನ ಬಾಟಲಿಯೊಂದಿಗೆ ಮರಳುವುದನ್ನು ಅವರು ನೋಡಿದ್ದರು. ಏನೋ ನೆಗಡಿ ತಲೆನೋವು ಇದ್ದರೂ ಇರಬಹುದು ಎಂದುಕೊಂಡಿದ್ದರು ಸಂಜೆ ಹೊತ್ತಿನಲ್ಲಿ ಮನೆಯೊಳಗೆ ಒಬ್ಬನೇ ಕುಳಿತು ಬೇಜಾರೆನಿಸಿ ಅರವಿಂದನನ್ನು ಕಂಡು ಮಾತಾಡಿಸಿ ಹೋಗೋಣವೆಂದು ಅವನ ಕೋಣೆಗೆ ಬಂದಾಗಲೇ ಅವರಿಗೆ ಗೊತ್ತಾದುದು-ಜ್ವರ ಏರಿ ಅವನು ಅಬೋಧಾವಸ್ಥೆಯನ್ನು ತಲುಪಿದ್ದ ಕೂಡಲೆ ಅವರು ಡಾಕ್ಟರರನ್ನು ಕರೆತಂದು ಇನ್ನೊಂದು ಇಂಜೆಕ್ಷನ್ ಕೊಡಿಸಿದರು. ರಾತ್ರಿಯೆಲ್ಲಾ ಅವನ ಪಕ್ಕದಲ್ಲೇ ಕುಳಿತು ನೋಡಿಕೊಂಡರು.

ನಂತರ ಇದನ್ನು ತಿಳಿದು ಅರವಿಂದನಿಗೆ ತುಂಬಾ ಮುಜುಗರವೇನೋ ಆಯಿತು. ಆದರೆ ಅವನು ಏನೂ ಮಾಡುವಂತಿರಲಿಲ್ಲ. ಜ್ವರ ಬಿಟ್ಟು ಎದ್ದು ಓಡಾಡುವುದಕ್ಕೆ ಆರೇಳು ದಿನಗಳೇ ಹಿಡಿದುವು. ಈ ಮಧ್ಯೆ ಅವನನ್ನು ನೋಡಿ ಕೊಂಡವರು ಮಸ್ಕರೆನ್ನಾರೇ. ಅಡಿಗೆ ಹುಡುಗನಿಗೆ ಹೇಳಿ ಅವನಿಗೆ ಬೇಕಾದ ಗಂಜಿ, ಉಪ್ಪಿನ ಕಾಯಿ ಮಾಡಿಸಿ ಕಳಿಸಿದರು. ಪೇಟೆಯಿಂದ ಹಣ್ಣು ತರಿಸಿಕೊಟ್ಟರು. ತಾನು ಇವರ ಔದಾರ್ಯಕ್ಕೆ ಹೀಗೆ ಒಳಗಾಗುತ್ತೇನೆಂದು ಅರವಿಂದ ಎಂದೂ ಊಹಿಸಿರಲಿಲ್ಲ.

ಮಸ್ಕರೆನ್ನಾ ಅವನಿಗೆ ಹೊಸ ಪರಿಚಯವೇನಲ್ಲ. ನಾಗೂರಿಗೆ ಬಂದಾಗಲೇ ಅವರ ಪರಿಚಯವೂ ಆಗಿತ್ತು. ಪೋಸ್ಟಾಫೀಸಿನ ಹಿಂದಿನ ಮನೆಯಲ್ಲಿ ಅವರು ಒಂಟಿಯಾಗಿ ತನ್ನ ನಿವೃತ್ತ ಜೀವನ ಸಾಗಿಸುತ್ತಿದ್ದರು. ಊರಿಗೆ ಹೊಸತಾಗಿ ಬಂದ ತರುಣನನ್ನು ಅವರಾಗಿಯೇ ಮಾತಾಡಿಸಿ ಪರಿಚಯ ಮಾಡಿಕೊಂಡರು. ನಂತರ ಕೆಲವೊಮ್ಮೆ ಅವರು ವಾಕಿಂಗ್ ಹೋಗುವಾಗ ಅವನನ್ನು ಜೊತೆಯಲ್ಲಿ ಕರೆಯುತ್ತಿದ್ದರು. ಕೆಲವೊಮ್ಮೆ ಮನೆಗೆ ಕರೆದು ಲೆಟ್‌ಮಿ ಕರಪ್ಟ್‍ಯು, ಯಂಗ್ ಮ್ಯಾನ್! ಎಂದು ಕುಡಿಯಲು ಕೊಡುತ್ತಿದ್ದರು. ಅಲ್ಮೇರಾ ತುಂಬ ಮದ್ಯದ ಸೀಸೆಗಳು; ಅದೆಲ್ಲಿಂದಲೋ ಹೇಗೋ ಸಂಪಾದಿಸುತ್ತಿದ್ದರು–ಗೋವಾ ಫಿನ್ನಿಯಿಂದ ಹಿಡಿದು ಫ್ರೆಂಚ್ ವೈನಿನವರೆಗೆ ಒಬ್ಬರೇ ಕುಡಿಯುವುದಕ್ಕೆ ಬೇಸರ. ನಾಗೂರಿನಲ್ಲಿ ಅವರಿಗೆ ಹೇಳತಕ್ಕೆ ಸ್ನೇಹಿತರೂ ಇಲ್ಲ, ಅರವಿಂದನನ್ನು ಏಕೆ ಹಚ್ಚಿಕೊಂಡಿದ್ದರು, ಅವನಿಗೂ ಅವರ ಮಾತುಗಳನ್ನು ಕೇಳುತ್ತ ಕುಳಿತುಕೊಳ್ಳುವುದೆಂದರೆ ಇಷ್ಟ.

ಮಸ್ಕರೆನ್ನಾ ಜಿಲ್ಲಾ ಸೆಷನ್ಸ್ ನ್ಯಾಯಾಧೀಶರಾಗಿದ್ದು ನಿವೃತ್ತರಾದವರು ಇಂಥ ಹಳ್ಳಿಕೊಂಪೆಯಲ್ಲಿ ಬಂದು ನೆಲಸಬೇಕಾದ್ದೇನೂ ಇರಲಿಲ್ಲ. ಮಸ್ಕರೆನ್ನಾ ವಿಧುರರು ಮೂವರು ಮಕ್ಕಳಲ್ಲಿ ಹಿರಿಯವನು ಡಾಕ್ಟರ ಒಬ್ಬಳು ಆಸ್ಟ್ರೇಲಿಯ ಹುಡುಗಿಯನ್ನು ಮದುವೆಯಾಗಿ ಆಸ್ಟ್ರೇಲಿಯಾದಲ್ಲಿ ನೆಲಸಿದ್ದ ಎರಡನೆಯವನು ಕಾನೂನು ವ್ಯಾಸಂಗ ಮಾಡುತ್ತಿದ್ದ, ಮೂರನೆಯವಳು ಮರೀನಾ. ಆಸ್ಟ್ರೇಲಿಯಾಕ್ಕೆ ಬಂದು ಬಿಡುವಂತೆ ಹಿರಿಯವನು ಎಲ್ಲರನ್ನೂ ಒತ್ತಾಯಿಸುತ್ತಿದ್ದ ಒಳ್ಳೆ ಪ್ರಾಕ್ಟಿಸ್ ಇತ್ತು, ತಮ್ಮನಿಗೂ ತಂಗಿಗೂ ಕೆಲಸ ಕೊಡಿಸುತ್ತೇನೆ ಎನ್ನುತಿದ್ದ. ಮಸ್ಕರೆನ್ನಾ ಈ ಕುರಿತು ಈಗ ಯೋಚನೆಮಾಡತೊಡಗಿದ್ದರು. ಆದರೂ ಮಗಳ ಬಗ್ಗೆಯೇ ಚಿಂತೆ. ಅವಳಿಗೆ ದೇಶ ಬಿಟ್ಟು ಎಲ್ಲೂ ಹೋಗುವ ವಿಚಾರವಿಲ್ಲ. ಅವಳ ಮನಸ್ಸನ್ನು ಬದಲಿಸುವುದೂ ಕಷ್ಟವೇ.

ತಾಯಿಯಿಲ್ಲದ ಮಗುವೆಂದು ಮಸ್ಕರೆನ್ನಾ ಅವಳನ್ನು ತುಂಬಾ ಪ್ರೀತಿಯಿಂದ ಬೆಳೆಸಿದ್ದರು. ಮರೀನಾ ಸ್ವತಂತ್ರ ಪ್ರವೃತ್ತಿಯವಳಾಗಿ ಬೆಳೆದಳು. ಅವಳು ಓದಿ ಡಾಕ್ಟರ್ ಆಗಬೇಕೆಂಬುದು ಮಸ್ಕರೆನ್ನಾರ ಬಯಕೆಯಾಗಿತ್ತು. ಅವಳಿಗೆ ಅದರಲ್ಲಿ ಮನಸ್ಸಿರಲಿಲ್ಲ. ಬಿ. ಎ. ಓದತೊಡಗಿದಳು ಅದರಲ್ಲೂ ಅವಳಿಗೆ ಆಸಕ್ತಿ ಉಳಿಯಲಿಲ್ಲ. ಚಿತ್ರ ಕಲೆ ಅಭ್ಯಾಸಮಾಡುತ್ತೇನೆ ಎಂದು ಹೊರಟು ಹೋದಳು ಬರೋಡಾಕ್ಕೆ. ಅಲ್ಲೇನಾಯಿತೋ ! ನಂತರ ಅವಳ ಪತ್ರ ಬಂದುದು ಮುಂಬಯಿಯಿಂದ, ಮುಂಬಯಿಗೆ ಬಂದು ಕೆಲಸಕ್ಕೆ ಸೇರಿದ್ದೇನೆಂದು ಬರೆದಿದ್ದಳು. ಒಂದ ವರ್ಷ ಕಳೆದು ಮತ್ತೆ ಅವಳ ಪತ್ರ ಬಂದುದು ಬೆಂಗಳೂರಿನಿಂದ. ತನ್ನ ಬದುಕಿನ ಬಗೆಗೆ ನಿಶ್ಚಿತವಾದ ಗುರಿಯೇನೂ ಅವಳಿಗಿದ್ದಂತೆ ತೋರುತ್ತಿರಲಿಲ್ಲ. ಊರಿಂದ ಊರಿಗೆ ಅಲೆಯುತ್ತಿರುವಂತೆ ಅನಿಸುತ್ತಿತ್ತು. ಕೆಲವೊಮ್ಮೆ ಅವಳು ತನ್ನ ಪತ್ತೆಯನ್ನೇ ಕೊಡುತ್ತಿರಲಿಲ್ಲ. ಒಮ್ಮೆ ಒಬ್ಬ ಫ್ರೆಂಚ್ ದೇಶೀಯ ಅವರನ್ನು ಹುಡುಕೊಂಡು ಬಂದಿದ್ದ. ಎರಡು ಬಾಟಲಿ ಬಿಳಿ ವೈನನ್ನು ಕೊಟ್ಟು ನಿಮ್ಮ ಮಗಳು ನನ್ನಲ್ಲಿಗೆ ಕಳಿಸಿದ್ದು,” ಎಂದು ಹೇಳಿದ. ಆತ ಫ್ರಾನ್ಸಯಾವುದೋ ಯುನಿವರ್ಸಿಟಿಯಲ್ಲಿ ಲೆಕ್ಚರರ್. ಆಂತ್ರಪಾಲಜಿ ರಿಸರ್ಚು ಮಾಡುತ್ತಿದ್ದು ಫೀಲ್ಡ್ ಸ್ಟೇ ಗೋಸ್ಕರ ಭಾರತಕ್ಕೆ ಬಂದಿದ್ದ. ದಕ್ಷಿಣ ಕನ್ನಡದ ಮೀನುಗಾರರ ಜೀವನಕ್ಕೆ ಸಂಬಂಧಿಸಿ ಆಭ್ಯಾಸ ಮಾಡುತ್ತಿದ್ದ, ಮರೀನಾ ಅವನಿಗೆ ಬೆಂಗಳೂರಲ್ಲಿ ಕಾಣಸಿಕ್ಕಿದ್ದಳು.

“ಚೆನ್ನಾಗಿದ್ದಾಳೆಯೆ?” ಎಂದು ಮೆಸ್ಕರೆನ್ನಾ ವಿಚಾರಿಸಿದರು. “ಚೆನ್ನಾಗಿದ್ದಾಳೆ,” ಎಂದು ಉತ್ತರಿಸಿದ ಆತ.
ಮಗಳ ಬಗ್ಗೆ ಅದಕ್ಕಿಂತ ಹೆಚ್ಚನ್ನು ಈ ವಿದೇಶೀಯನೊಂದಿಗೆ ವಿಚಾರಿಸಲು ಬಿಗುಮಾನವೋ ಅಭಿಮಾನವೋ ಬಿಡಲಿಲ್ಲ. ಅವನಾಗಿ ಅದಕ್ಕಿಂತ ಹೆಚ್ಚೇನೂ ಹೇಳಲೂ ಇಲ್ಲ. ಇಬ್ಬರೂ ಲೋಕಾಭಿರಾಮ ಮಾತಾಡಿದರು, ವೈನು ಸೇವಿಸಿದರು, ಒಂದು ದಿನ ಇದ್ದು ಆತ ಬಂದ ಹಾಗೆಯೇ ಹೊರಟು ಹೋದ.

ಮಸ್ಕರೆನ್ನಾರಿಗೆ ನಾಗೂರಿನಲ್ಲಿ ಸ್ವಂತಮನೆ ಜಮೀನು ಇದ್ದುವು. ನ್ಯಾಯಾಧೀಶನಾಗಿ ಅವರು ಸಂಪಾದಿಸಿದ್ದು ಮಕ್ಕಳ ವಿದ್ಯಾಭ್ಯಾಸಕ್ಕೆ ಹೋಗಿತ್ತು. ನಾಗೂರಿನ ಆಸ್ತಿ ಹತ್ತಿರದ ಅಂಕಲ್ ಒಬ್ಬರು ಅವರಿಗೆ ದತ್ತು ಕೊಟ್ಟದು. ನಿವೃತ್ತರಾದ ಮೇಲೆ ಮಸ್ಕರೆನಾ ನಾಗೂರಿಗೆ ಬಂದು ಆಸ್ತಿ ಮನೆಗಳನ್ನು ಕೈಗೆ ತೆಗೆದು ಕೊಂಡರೂ ಅಲ್ಲಿ ಸ್ಥಿರವಾಗಿ ನೆಲಸುವುದಕ್ಕೇಕೋ ಆಸಕ್ತಿಯಿರಲಿಲ್ಲ. ಮುಖ್ಯವಾಗಿ ಒಂಟಿ ಜೀವನ ಬೇಸರ ತರುತ್ತಿತ್ತು. ಅದೇನೂ ಅವರ ಹುಟ್ಟೂರೂ ಅಲ್ಲ. ಊರಿನವನಂತೆ ಕಾಣುವ ಮಂದಿಯೂ ಅಲ್ಲಿ ಇಲ್ಲ. ನಿವೃತ್ತ ನ್ಯಾಯಾಧೀಶನೆಂದು ಜನರು ಅವರನ್ನು ಸ್ವಲ್ಪ ದೂರವೇ ಇಟ್ಟಿದ್ದರು. ಈ ಎಲ್ಲ ಕಾರಣಗಳಿಂದಾಗಿ ಅವರು ತಮ್ಮ ಆಸ್ತಿಮನೆಯನ್ನು ಮಾರಿಬಿಟ್ಟು ಆಸ್ಟ್ರೇಲಿಯಾಕ್ಕೆ ಹೊರಟು ಹೋಗುವ ಯೋಚನೆ ಮಾಡತೊಡಗಿದ್ದರು.

“ಯಂಗ್ ಮ್ಯಾನ್ ! ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಲ್ಲಿ ಕುಳಿತೇನು ಮಾಡುತಿದ್ದೀರಿ? ನಾಗೂರು ಸಿಟಿಜನಾಗಿ ಮನೆ ಹೆಂಡತಿ ಮಕ್ಕಳು ಮಾಡಿಕೊಂಡು ರಿಟಯರಾಗುತ್ತೀರೇನು? ಈ ವಯಸ್ಸಿನಲ್ಲಿ ನೀವು ಹೊರಗೆ ಹೋಗಬೇಕು, ಯಾವ ರಿಸ್ಕನ್ನೂ ತೆಗೆದುಕೊಳ್ಳಲು ತಯಾರಿರಬೇಕು, ಕಳೆದುಕೊಳ್ಳುವುದಕ್ಕೇನಿದೆ ನಿಮಗೆ?” ಎಂದು ಒಮ್ಮೆ ಅರವಿಂದನಿಗೆ ಹೇಳಿದ್ದರು, ನನ್ನ ಮನಸಿನಲ್ಲಿರೋ ವಿಚಾರಗಳನ್ನೇ ನೀವು ಹೇಳುತ್ತಿದ್ದೀರಿ ಎಂದು ಅವನು ಹೇಳಲಿಲ್ಲ. ತನ್ನ ಗೋಳನ್ನು ಅವರ ಮುಂದೆ ಹೇಳಿಕೊಳ್ಳಲು ಇಷ್ಟವಾಗಲಿಲ್ಲ.

“ರಿಸರ್ಚಿಗೆ ಪ್ರಯತ್ನಿಸುತ್ತಿದ್ದೇನೆ,” ಎಂದಷ್ಟೇ ಹೇಳಿದ್ದ, “ಗುಡ್!” ಎಂದಿದ್ದರು ಮೆಸ್ಕರೆನ್ನಾ.

ವಕೀಲರಾಗಿ, ನ್ಯಾಯಾಧೀಶರಾಗಿ ಅವರ ಅನುಭವ ಅಪಾರ ಜೀವನ ಹಲವು ಮುಖಗಳಿಗೆ, ಮನುಷ್ಯನ ಅಂತರಾಳದ ಕತ್ತಲು ಬೆಳಕುಗಳಿಗೆ ಸಾಕ್ಷಿಯಾಗಿದ್ದವರು ಅವರು. ಅನೇಕ ಅಪರಾಧಿಗಳ ವಿಧಿಯನ್ನು ಬರೆದವರು, ಈಗ ಅದೆಲ್ಲ ಬರಿಯ ನೆನಪುಗಳು ಮಾತ್ರ.

ನ್ಯಾಯಾನ್ಯಾಯಗಳನ್ನು ವಿಮರ್ಶಿಸುವಾಗ ನೀವೆಂದೂ ತಪ್ಪು ಮಾಡಿರಲಿಲ್ಲವೆ? ಸಂದೇಹಗಳು ನಿಮ್ಮನ್ನು ಕಾಡಿರಲಿಲ್ಲವೆ? ಎಂದು ಅರವಿಂದ ಒಮ್ಮೆ ಕೇಳಿದ್ದ. ಅದಕ್ಕವರು, “ಹೌದು, ಹಾಗನಿಸುತ್ತದೆ… ಆದರೆ ನ್ಯಾಯಾಧೀಶ ಕುರುಡ, ಕಣ್ಣಿದ್ದೂ ಅವನು ನೋಡಲಾರ. ಆತನ ವೈಯಕ್ತಿಕ ಸಂದೇಹಗಳಿಗೆ ನ್ಯಾಯಾಲಯದಲ್ಲಿ ಸ್ಥಾನವಿಲ್ಲ. ಅದೊಂದು ಪಾತ್ರವನ್ನು ನಿರ್ವಹಿಸಿದಂತೆ, ಎಂದಿದ್ದರು. ಅದೇನೂ ಅಷ್ಟು ಸುಲಭವಾಗಿರಲಿಲ್ಲ.

ಆಗಿರುತ್ತಿದ್ದರೆ ಅವರೇಕೆ ಒಂಟಿಯಾಗಿ ಆಂಗಳದಲ್ಲಿ ಕುಳಿತು ತನ್ನ ಹಳೆಯ ಆರೋಪಿಗಳೊಂದಿಗೆ ಯಾರಿಗೂ ಕೇಳಿಸದ ಮಾತುಕತೆಯಲ್ಲಿ ತೊಡಗಿದವರಂತೆ ಕಾಣಿಸುತ್ತಿದ್ದರು? ಮಾತನಾಡುತ್ತ ಆಡುತ್ತ ಪಕ್ಕನೆ ಯಾಕೆ ಮೌನವಹಿಸುತ್ತಿದ್ದರು?

ಒಮ್ಮೆ ಒಂದು ಘಟನೆಯನ್ನು ಹೇಳಿದ್ದರು. ಒಂದು ಕೊಲೆಯಾಗಿತ್ತು, ಕೊಲೆ ಮಾಡದವನ ಮೇಲೆ ಕೊಲೆಯ ಆರೋಪ ಬಂತು. ಆರೋಪಿ ನಿರಾಕರಿಸಲಿಲ್ಲ. ಆರೋಪವನ್ನು ಒಪ್ಪಿಕೊಂಡ. ಆತ ಕೊಲೆಗಾರನಿರಲಾರದು ಅನ್ನುತ್ತಿತ್ತು. ಮಸ್ಕರೆನ್ನಾರ ಅಂತರಂಗ ಕೊಲೆಗಾರನುತೆ ಕಾಣಿಸುತ್ತಿರಲಿಲ್ಲ ಆತ. ಆದರೆ ಕೊಲೆಗಾರ ಹೇಗೆ ಕಾಣಿಸುತ್ತಾನೆ? ಉತ್ತರವಿಲ್ಲದ ಪ್ರಶ್ನೆ. ಅನೇಕ ವರ್ಷಗಳ ನಂತರ ಆತ ಅವರನ್ನು ಕಾಣಲು ಬಂದ ಶಿಕ್ಷೆಯನ್ನು ಅನುಭವಿಸಿ ಬಿಡುಗಡೆಯಾಗಿ ಬಂದಿದ್ದವನು ಸತ್ಯಸಂಗತಿಯನ್ನು ಹೇಳಿದೆ. ನಿಜಕ್ಕೂ ಅವನು ಕೊಲೆಯನ್ನು ಮಾಡಿರಲಿಲ್ಲ. ಅವರ ಅಂತರಾಳ ನುಡಿದದ್ದು ಸತ್ಯವಾಗಿತ್ತು. ಮತ್ತೆ ಯಾಕೆ ಆರೋಪವನ್ನು ಒಪ್ಪಿಕೊಂಡೆ? ಪ್ರಶ್ನೆ ತುಟಿಯ ಮೇಲೆ ಬಂದು ನಿಂತಿತ್ತು. ಆದರೆ ಕೇಳುವ ಅಗತ್ಯವಿರಲಿಲ್ಲ. ಅಂದಿನಿಂದ ಅವರು ನ್ಯಾಯಾಲಯದಲ್ಲಿ ಆರೋಪಿಗಳನ್ನು ಎದುರಿಸಲಾರದಾದರು. ಎಲ್ಲ ಆರೋಪಿಗಳೂ ಪಾರಮಾರ್ಥಿಕ ಪ್ರಶ್ನೆಗಳಂತೆ ಕಾಣಿಸತೊಡಗಿದರು.

“ಆದರೆ ಆಗ ಬಹಳ ತಡವಾಗಿ ಹೋಗಿತ್ತು. ಹಿಂದಿರುಗಲಾರದಷ್ಟು ಮುಂದೆ ಹೋಗಿದ್ದೆ ನಾನು. ಒಂದು ಇಡಿಯ ಆಯುರ್ಮಾನವೇ ಸುಳ್ಳಾಗಿ ಹೋಗಿತ್ತು.
ನಾನು ಶಿಕ್ಷೆಸಿದ, ಶಿಕ್ಷಿಸದೆ ಬಿಟ್ಟ ಅಪರಾಧಿಗಳನ್ನೆಲ್ಲ ಕರೆದು ಅವರವರ ಸತ್ಯವನ್ನು ಆವರವರ ಸುಳ್ಳನ್ನೂ ಅವರವರಿಗೆ ಬಿಟ್ಟುಕೊಡುವುದು ಸಾಧ್ಯವಿರುತ್ತಿದ್ದರೆ!” ಎನ್ನುತ್ತಿದ್ದರು ಅವರು ಕೆಲವೊಮ್ಮೆ.

ಒಂದು ದಿನ ಅರವಿಂದ ಕೆಲಸಬಿಟ್ಟು ರೂಮಿಗೆ ಮರಳಿದವನು ಕಾಫಿ ಮಾಡಿಕೊಳ್ಳಲೆಂದು ಸ್ಟವ್ ಹತ್ತಿಸಿ ನೀರಿಟ್ಟ. ನೀರಿಟ್ಟ ಮೇಲೆ ನೆನಪಾಯಿತು ಕಾಫಿ ಪುಡಿ ಮುಗಿದಿದೆಯೆಂದು, ಅಂಗಡಿಗೆ ಹೋಗಿ ಕಾಫಿ ಪುಡಿ ತಂದಾಗ ಕುರ್ಚಿಯಲ್ಲಿ ಕುಳಿತು ಅವನಿಗೋಸ್ಕರ ಕಾಯುತ್ತಿದ್ದರು ಮಸ್ಕರೆನ್ನಾ, ಕಾಪಿ, ಮಾಡಿ ಕೊಳ್ಳುವಂತಿದೆ!” ಎಂದರು.

“ಹೌದು.”
“ನಮ್ಮಲ್ಲಾಗಲಿ.”
“ಇಲ್ಲ. ಈ ದಿನ ನನ್ನ ಕಾಫಿ ರುಚಿ ನೀವೂ ನೋಡಿ.”
“ನಿಮ್ಮನ್ನು ಕರೆಯಲೆಂದೇ ಬಂದೆ.”
ಮಸ್ಕರೆನ್ನಾ ಬಹಳ ಖುಷಿಯಿಂದಿದ್ದರು.
“ಏನು ಸಂಗತಿ?”
“ಬನ್ನಿ!”
ಸ್ಟವ್ ನಂದಿಸಿ ಅವರೊಂದಿಗೆ ಹೊರಟ.
ಡ್ರಾಯಿಂಗ್ ರೂಮಿನಲ್ಲಿ ಏನೋ ಪತ್ರಿಕೆ ಓದುತ್ತ ಕುಳಿತಿದ್ದ ಯುವತಿ ಇವರನ್ನು ಕಂಡು ತಟಕ್ಕನೆ ಎದ್ದು ನಿಂತಳು.
“ಇವಳೇ ನನ್ನ ಮಗಳು ಮರೀನಾ, ಮಧ್ಯಾಹ್ನ ಬಸ್ಸಿನಲ್ಲಿ ಬಂದಳು. ಮರೀನ, ಇವರು ಅರವಿಂದ,” ಎಂದು ಪರಿಚಯಿಸಿದರು ಮಸ್ಕರೆನ್ಮಾ.
“ನಮಸ್ತೆ!”
“ನಮಸ್ತೆ” ಎಂದ ಅರವಿಂದ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾವೇರಿ ಕಾವು; ಸರ್ಕಾರ ನಿರ್ಲಕ್ಷ
Next post ಬೆಳಗು ನನ್ನ ಉಷೆ!

ಸಣ್ಣ ಕತೆ

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…