ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರ ‘ಶಿಶುಸಾಹಿತ್ಯ’

ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರ ‘ಶಿಶುಸಾಹಿತ್ಯ’

ಬಹುಶಃ ಅಡಗೂಲಜ್ಜಿ ಹೇಳುವ ಕತೆಗಳು ಎಂದು ಹುಟ್ಟಿದವೋ ಅಂದೇ ಶಿಶುಸಾಹಿತ್ಯ ಹುಟ್ಟಿತು. ಆದರೆ “ಶಿಶು ಸಾಹಿತ್ಯ” ಎಂಬ ಪರಿಕಲ್ಪನೆ ಅದನ್ನು ಬರೆಯುವ ಪ್ರವೃತ್ತಿ ಇವುಗಳಿಗೆ ಅಬ್ಬಬ್ಬಾ ಅಂದರೆ ಒಂದುನೂರು ಅಥವಾ ನೂರಿಪ್ಪತ್ತು ವರ್ಷದ ಇತಿಹಾಸವಿರಬಹುದು. ಸಧ್ಯಕ್ಕೆ ಎಸ್.ಜಿ.ನರಸಿಂಹಾಚಾರ್ಯರನ್ನು ಕನ್ನಡ ಭಾಷೆಯ ಮಕ್ಕಳ ಸಾಹಿತ್ಯದ ಆದ ಕೃಷಿಕರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. “ಗೋವಿನ ಚರಿತ್ರೆ” ಎಂಬ ಪದ್ಯದ “ನೀನಾರಿಗಾದೆಯೋ ಎಲೆ ಮಾನವಾ” ಎಸ್.ಜಿ. ನರಸಿಂಹಾಚಾರರ ಸುಪ್ರಸಿದ್ಧ ಕವಿತೆ. ಅನಂತರದಲ್ಲಿ ಎನ್. ಜಯರಾಮಾಚಾರ್ಯ, ಎಂ.ರಾಮಶೇಷಶಾಸ್ತ್ರಿ, ಸೋಸಲೆ ಅಯ್ಯಾಶಾಸ್ತ್ರಿ, ಪಂಜೆ ಮಂಗೇಶ್‌ರಾಯರು ಬರುತ್ತಾರೆ. ಪಂಜೆಯವರ “ಸುಂಟರ ಗಾಳಿಯಾಟ”, “ಹಾವಿನಹಾಡು” ಸುಪ್ರಸಿದ್ಧವಾದವು. ಅನಂತರ ಬಂದ ರಾಜರತ್ನಂ ಅವರು ಮಕ್ಕಳ ಪದ್ಯ ಲೋಕದ ‘ರಾಜ’ ಮತ್ತು ‘ರತ್ನ’ ಎರಡೂ ಆಗಿದ್ದಾರೆ. ರಾಜರತ್ನಂ ಅನುಕರಿಸಲು ಸುಲಭವಾಗುವಂತಹ ಪದ್ಯಗಳನ್ನು ಬರೆದರು. ಅವರ “ಬಣ್ಣದ ತಗಡಿನ ತುತ್ತೂರಿ” ತುಂಬಾ ಜನಪ್ರಿಯ.

ನವೋದಯದ ಸಂದರ್ಭದಲ್ಲಿ ಬರೆದ ಎಲ್ಲ ಲೇಖಕಿಯರೂ ಮಕ್ಕಳ ಪದ್ಯ ಬರೆದಿದ್ದಾರೆ. ಆರ್. ಕಲ್ಯಾಣಮ್ಮನವರು “ಮಕ್ಕಳ ಕೂಟ”ವನ್ನೇ ಸ್ಥಾಪಿಸಿದ್ದಾರೆ. ಮೊತ್ತಮೊದಲ “ಮಕ್ಕಳ ಕವನಸಂಕಲನ” ತಂದವರು ಸರೋಜಿನಿ ಮಹಿಷಿ. ಈ ದಿಕ್ಕಿನಲ್ಲಿ ಇತ್ತೀಚಿನ ಮಹತ್ವದ ಸಂಕಲನವೆಂದರೆ ಬೋಳುವಾರು ಮಹಮಹದ್ ಕುಯಿ ಸಂಪಾದಿಸಿದ “ತಟ್ಟು ಚಪ್ಪಾಳೆ ಪುಟ್ಟ ಮಗು” ಇದೊಂದು ಪ್ರಾತಿನಿಧಿಕ ಸಂಕಲನ. ಇಲ್ಲಿ ನೂರು ಕವಿಗಳು ಬರೆದ ನೂರಾ‌ಆರು ಪದ್ಯಗಳಿವೆ. ಇವುಗಳಿಗೆ ನಲವತ್ತೇಳು ಮಂದಿ ಚಿತ್ರ ಬರೆದಿದ್ದಾರೆ. ೩೧೪ ಪುಟಗಳ ಈ ಪುಸ್ತಕ ಈಗಾಗಲೇ ಸಾಕಷ್ಟು ಹೆಸರು ಮಾಡಿ ಅಕಾಡಮಿ ಪ್ರಶಸ್ತಿಯನ್ನೂ ಗಳಿಸಿದೆ. ಗಿರಿಬಾಲೆ, ಸರೋಜಿನಿ ಮಹಿಷಿ ಸೇರಿದಂತೆ, ಕಣವಿ, ಬೇಂದ್ರೆ, ಕೆ‌ಎಸ್‌ನ, ಎಂವಿಸೀ ಮೊದಲಾದ ನವೋದಯರವರ ಕವಿತೆಗಳು ಇಲ್ಲಿವೆ. ಈಗ ಬರೆಯುತ್ತಿರುವ ಸಮಕಾಲೀನ ಲೇಖಕ-ಲೇಖಕಿಯರಲ್ಲನೇಕರು ಶಿಶುಸಾಹಿತ್ಯ ರಚಿಸಿದ್ದಾರೆ. ಈ ಪಟ್ಟಿಯಲ್ಲಿ ಲಕ್ಷ್ಮೀನಾರಾಯಣ ಭಟ್ಟರದು ಗಮನಾರ್ಹವಾದ ಹೆಸರು.

ನವೋದಯದಲ್ಲಿ ಕೃಷಿ ಆರಂಭಿಸಿ ನವ್ಯದ ಆರ್ಭಟದಲ್ಲೂ ನವೋದಯದ ಜಾಡು ಅಳಿಸಿಹೋಗದಂತೆ ನೋಡಿಕೊಂಡ ಕೆಲವು ಮುಖ್ಯ ಕನ್ನಡ ಕವಿಗಳಲ್ಲಿ ಡಾ.ಎನ್.ಎಸ್. ಲಕ್ಷ್ಮೀನಾರಾಯಣಭಟ್ಟರದು ಪ್ರಮುಖ ಹೆಸರು. ನವೋದಯದ ಆಶಯಗಳು ಹಳಸಿ ಸವಕಲಾದಾಗ ಪ್ರಾಸ ಲಯವನ್ನು ಅಲ್ಲಗಳೆದ ನವ್ಯದ ರಚನೆಗಳು ಬುದ್ಧಿ ಪ್ರಚೋದಕವಾಗಿ ವ್ಯಕ್ತಿ ವಿಶಿಷ್ಟತೆಯನ್ನು ಕಾಪಾಡಿಕೊಂಡರೂ ನವೋದಯದ ಆಕರ್ಷಣೆ ಮಾಸಲಿಲ್ಲ. ಅಡಿಗರು ಪ್ರಾರಂಭಿಸಿದ ನವ್ಯ ಪಂಥಕ್ಕೆ ಕೆ.ಎಸ್‌.ನ. ಅಂಥವರೂ ಸ್ಪಂದಿಸಿ “ಗಡಿಯಾರದಂಗಡಿಯ ಮುಂದೆ” ಎಂಬಂತಹ ಕವನ ರಚಿಸಿದ ಮೇಲೆ ರಾಮಚಂದ್ರ ಶರ್ಮಾ, ಪೂರ್ಣಚಂದ್ರ ತೇಜಸ್ವಿ, ಲಂಕೇಶ್, ಚಂಪಾ ನವ್ಯದ ಬೇರೆ ಬೇರೆ ಸಾಧ್ಯತೆಗಳನ್ನೂ ತೆರೆದು ತೋರಿದ ಮೇಲೆ ನವೋದಯದ ಹಣತೆಯನ್ನು ಆರದಂತೆ ಕಾಪಾಡಿಕೊಂಡು ಬಂದವರು ಕೆಲವರಿದ್ದರು. ಅಡಿಗರ ನವೋದಯದ ರಚನೆಗಳೂ ಸೇರಿದಂತೆ ಈ ಕವಿಗಳ ಕೆಲವು ಕವಿತೆಗಳು ಹಾಡಲು ಬರುವಂತಿದ್ದವು. ಅದೇ ಸಮಯಕ್ಕೆ ನಿಸಾರ್ ಅಹಮದರ “ನಿತ್ಯೋತ್ಸವ” ಕ್ಯಾಸೆಟ್ ಬಂದಿತು, ಜನಪ್ರಿಯವೂ ಆಯಿತು. ಹಾಡಿಗೆ ಒದಗುವ ಹೊಸ ಹೊಸ ಕವಿತೆಗಳಿಗಾಗಿ ಹಾಡುಗಾರರು ಹುಡುಕತೊಡಗಿದರು. ಆಗ ಅತಿಹೆಚ್ಚಿನ ಸಂಖ್ಯೆಯಲ್ಲಿ, ಸೊಗಸಾಗಿ ಹಾಡಿಗೆ ಒದಗುವ, ಆದರೆ ಸಾಹಿತ್ಯದ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದ ಎನ್.ಎಸ್. ಲಕ್ಷ್ಮೀನಾರಾಯಣ ಭಟ್, ಹೆಚ್‌.ಎಸ್‌. ವೆಂಕಟೇಶಮೂರ್ತಿ, ಬಿ.ಆರ್. ಲಕ್ಷ್ಮಣರಾವ್ ಜೊತೆಗೆ ಕುವೆಂಪು, ಪುತಿನ, ಬೇಂದ್ರೆ, ಕಂಬಾರ, ಜಿ.ಎಸ್.ಎಸ್., ಕಣವಿ ಮೊದಲಾದವರ ಕವಿತೆಗಳ ಕ್ಯಾಸೆಟ್‌ಗಳು ಮೂಡಿಬಂದವು. ಇವುಗಳಲ್ಲಿ ಅತ್ಯಂತ ಜನಪ್ರಿಯವಾದ ಹಾಡುಗಳನ್ನು ಬರೆದ ಕವಿಗಳಲ್ಲಿ ಭಟ್ಟರಿಗೆ ಅಗ್ರಪಂಕ್ತಿ.

“ವೃತ್ತ”, “ಸುಳಿ”, “ನಿನ್ನೆಗೆ ನನ್ನ ಮಾತು”, “ಚಿತ್ರಕೂಟ”, “ಹೊಳೆ ಸಾಲಿನ ಮರ”, “ಅರುಣಗೀತ”, “ದೆವ್ವದ ಜೊತೆ ಮಾತುಕತೆ’ ಎಂಬ ಕವನ ಸಂಕಲನಗಳನ್ನೂ, “ಹೊರಳು ದಾರಿಯಲ್ಲಿ ಕಾವ್ಯ”, “ವಿವೇಚನ” ಎಂಬ ವಿಮರ್ಶಾ ಸಂಕಲನಗಳನ್ನೂ “ಪ್ರಾಯೋಗಿಕ ವಿಮರ್ಶೆ”, “ಕಾವ್ಯಶೋಧನ”, “ಅನನ್ಯ” ಎಂಬ ಸಂಪಾದಿತ ವಿಮರ್ಶಾ ಗ್ರಂಥಗಳನ್ನೂ, “ದೀಪಿಕಾ”, “ಭಾವ ಸರಿಗಮ”, “ನೀಲಾಂಜನ”, “ನಡೆದಿದೆ ಪೂಜಾರತಿ”, “ಬಂದೇ ಬರುತಾವ ಕಾಲ” ಎಂಬ ಭಾವಗೀತಾ ಸಂಕಲನಗಳನ್ನೂ, “ಷೇಕ್ಸಪಿಯರನ ಸಾನೆಟ್ ಚಕ್ರ”, “ಚಿನ್ನದ ಹಕ್ಕಿ”, “ಎಲಿಯಟ್ ಕಾವ್ಯಸಂಪುಟ”, “ಮೃಚ್ಛಕಟಿಕ”, “ಇಸ್ಪೀಟ್ ರಾಜ್ಯ” ಎಂಬ ಅನುವಾದಿತ ಗ್ರಂಥಗಳನ್ನೂ ರಚಿಸಿದ್ದಾರೆ. ಇದುವರೆಗಿನ ಇವರ ಭಾವಗೀತೆಗಳು “ಗೀತ ಭಾರತಿ” ಎಂಬ ಹೆಸರಿನಲ್ಲಿ ಸಮಗ್ರವಾಗಿ ಪ್ರಕಟವಾಗಿವೆ. ಇವಲ್ಲದೇ “ಭಾರತೀಯ ಗ್ರಂಥ ಸಂಪಾದನ ಪರಿಚಯ”, “ಧ್ರುವಚರಿತ್ರೆ”, “ಕಲ್ಲು ಸಕ್ಕರೆ ಕೊಳ್ಳಿರೋ”, “ಗೋವಿಂದ ಪೈ”, “ಕನ್ನಡ ಮಾತು”, “ಮಾಣಿಕಛಂದೋಪಾಧ್ಯಾಯ” ಎಂಬ ಕೃತಿಗಳನ್ನು ಬರೆದು, ಸಂಪಾದಿಸಿದ್ದಾರೆ. ತುಂಬ ಜನಪ್ರಿಯತೆ ಪಡೆದ ‘ದೀಪಿಕಾ’, ಬಾರೋ ವಸಂತ, ಮಂದಾರ, ಮಾಧುರಿ, ರಾಗಿಣಿ, ಭಾವೋತ್ಸವ, ನೀಲಾಂಜನ, ಕವಿತಾ, ಭಾವ ಕಾರಂಜಿ, ಪ್ರೇಮಧಾರೆ, ಛಾಯಾ, ಅಭಿನಂದನ, ಗೀತ
ಲಹರಿ, ಪ್ರೇಮಸಂಗಮ – ಇವು ಅವರ ಭಾವಗೀತೆಗಳ ಕ್ಯಾಸೆಟ್ಟುಗಳು. “Readings in Kannada” ಎಂಬ ಒಂದು ಇಂಗ್ಲಿಷಿನ ಪುಸ್ತಕವನ್ನು ಬರೆದಿರುವ ಭಟ್ಟರು “ಹಲ್ಮಿಡಿ ಶಾಸನ”ದಿಂದ ಹಿಡಿದು ಇಡೀ ಕನ್ನಡ ಸಾಹಿತ್ಯದ ಬಗ್ಗೆ ಮೂಡಿರುವ ಭಾಷಣಗಳನ್ನು ಸಿಡಿ ರೂಪದಲ್ಲಿ ಹೊರತರಲಾಗುತ್ತಿದೆ.

ಇಂತಹ ಸಮೃದ್ಧ ಸಾಹಿತ್ಯ ರಚಿಸಿದ, ಪ್ರಚಂಡ ಪಂಡಿತರಂತೆ ತೋರುವ, ಬಹುಶೃತ ವಿದ್ವತ್ತನ್ನು ಪಡೆದ, ವಿದ್ಯಾರ್ಥಿ ಪ್ರೀತಿ ಪಡೆದ ಉಪನ್ಯಾಸಕರೂ ಆದ ಲಕ್ಷ್ಮೀನಾರಾಯಣ ಭಟ್ಟರು ಪುಟ್ಟ ಮಕ್ಕಳಿಗಾಗಿಯೂ ಎಷ್ಟು ಸರಳವಾಗಿ ಎಂಥ ಸೊಗಸಾಗಿ ಬರೆಯಬಲ್ಲರೆಂದು ನೋಡಿದರೆ ಆಶ್ಚರ್ಯವಾಗುತ್ತದೆ. ಮಕ್ಕಳಿಗಾಗಿ “ಮುದ್ರಾ ಮಂಜೂಷ”, “ಜಗನ್ನಾಥ ವಿಜಯ”, “ಪೂರ್ವ ದಿಕ್ಕಿನಲ್ಲಿ ಕಾಮನಬಿಲ್ಲು”, “ಡಿ.ವಿ.ಜಿ.”, “ಕುಂತಿ”, “ಕರ್ಣ”, “ನಂದನ”, “ಕಿನ್ನರಿ”, “ಕಿಶೋರಿ”, “ಸತ್ಯವೇ ನಮ್ಮ ತಾಯಿತಂದೆ” ಎಂಬ ಪುಸ್ತಕಗಳನ್ನು ಬರೆದಿದ್ದಾರೆ. ಮಕ್ಕಳಿಗಾಗಿ ಇವರು ಬರೆದ ಪದ್ಯಗಳು “ನಂದನ”, “ಕಿನ್ನರಿ”, “ನವಿಲುಗರಿ”, “ಕಿಶೋರಿ” ಎಂಬ ಕ್ಯಾಸೆಟ್‌ಗಳಾಗಿ ಹೊರಬಂದಿರುವುದಲ್ಲದೇ ಮಕ್ಕಳ ಪದ್ಯಗಳನ್ನೆಲ್ಲಾ ಸೇರಿಸಿ “ಕಿನ್ನರ ಲೋಕ” ಎಂಬ ಸಮಗ್ರ ಸಂಪುಟವನ್ನೂ ಹೊರತರಲಾಗಿದೆ. ಇದರಲ್ಲಿ ಒಟ್ಟು ೮೬ ಕವಿತೆಗಳಿವೆ. ಇವು ಈ ಮೊದಲಿನ ಆರು ಸಂಕಲನಗಳಲ್ಲಿದ್ದುವೇ. ಉಳಿದ ೨೪ ಕಥೆ ಹೇಳುವ ಪದ್ಯಗಳೂ ಇಲ್ಲಿ ಸೇರಿವೆ. ಒಟ್ಟು ೧೬೩ ಪುಟಗಳ, ಅಕಾರಾದಿ ಪಟ್ಟಿಯನ್ನೂ ಹೊಂದಿರುವ ಈ ಪುಸ್ತಕವು ಕ್ಷಮಾ ಪ್ರಕಾಶನದಿಂದ ಸೊಗಸಾಗಿ ಮುದ್ರಿತವಾಗಿದೆ.

ಮಕ್ಕಳಿಗೆ – ಸುಮಾರು ೮ ರಿಂದ ೧೪ರ ವಯಸ್ಸಿನ ನಡುವೆ ಇರುವ ಮಕ್ಕಳಿಗೆ ಹುಟ್ಟುವ ವೈಚಾರಿಕ ಪ್ರಶ್ನೆಗಳಿವೆ. ಉದಾಹರಣೆಗೆ :- ಚಂದ್ರ ಎಂದರೇನು ಸೂರ್‍ಯ ಎಂದರೇನು ಅವರಿಬ್ಬರೂ ಒಟ್ಟಿಗೆ ಯಾಕೆ ಬರಲ್ಲ ಎಂಬ ಪ್ರಶ್ನೆ ಈ ವಯಸ್ಸಿನಲ್ಲಿ ಹುಟ್ಟಿದರೆ ಶಾಲೆಯಲ್ಲಿಯೇ ವಿಜ್ಞಾನದ ಪಠ್ಯದಲ್ಲಿಯೇ ಉತ್ತರ ಸಿಗುತ್ತದೆ. ಅದೇ ೫ ರಿಂದ ೭ರ ವಯಸ್ಸಿನ ನಡುವೆ ಇರುವ ಮಗುವಿಗೆ “ಈ ಕೈ ಯಾಕೆ ಇದೆ?” ಎನ್ನುವಂತಹ ವೈಚಾರಿಕವಲ್ಲದ ಪ್ರಶ್ನೆ ಹುಟ್ಟಿದರೆ ಅದಕ್ಕೆ ವಿಜ್ಞಾನ ಇರಲಿ, ಯಾರೂ ಉತ್ತರ ಕೊಡುವುದು ಕಷ್ಟ. ಅಷ್ಟೇ ಏಕೆ ಮಕ್ಕಳ ಅನೇಕ ಕುತೂಹಲದ ಪ್ರಶ್ನೆಗಳಿಗೆ ದೊಡ್ಡವರಲ್ಲಿ ಉತ್ತರವಿಲ್ಲ.

ಹಾಗೆ, ಇಲ್ಲಿ ಕೆಲವು ವೈಚಾರಿಕ ಪ್ರಶ್ನೆಗಳಿವೆ. ಈ ಪ್ರಶ್ನೆಗಳನ್ನು ಮಗು ಕೇಳುತ್ತಿದೆ, ಅದಕ್ಕೆ ಉತ್ತರವೇನೂ ಬೇಕಿಲ್ಲ. ಅದು ಹೇಳುತ್ತೆ “ತಿಳ್ಕೊತೀನಿ ನಾನೇ….”

ಪ್ರಶ್ನೆ-
ಇರುವೆ ಯಾಕೆ ಅಷ್ಟೊಂದ್ ಸಣ್ಣ
ಆನೆ ಯಾಕೆ ಎತ್ರ ?

ಉತ್ತರ-
ದೇವರ ಮಹಿಮೆ ಏನು ಅಂತ
ನಂಗೂ ನಿಂಗೂ ಗೊತ್ತ

ಪ್ರಶ್ನೆ-
ಬೀಜದ ಒಳಗೆ ಭಾರಿ ಮರವೆ
ಅಡಗಿರುತ್ತೆ ಹ್ಯಾಗಮ್ಮಾ

ಉತ್ತರ-
ಮರಕ್ಕೆ ಗೊತ್ತು ಬೀಜಕ್ಕೆ ಗೊತ್ತು
ನಂಗೇನ್ ಗೊತ್ತ ಹೋಗಣ್ಣ

ಪ್ರಶ್ನೆ-
ಎಲ್ಲಾ ನೀರು ಸಮುದ್ರಕ್ ಬಿದ್ರೂ
ಊರಿಗೆ ಯಾಕದು ನುಗ್ಗಲ್ಲ

ಉತ್ತರ-
ಮಕ್ಕಳು ಸುಮ್ಮೆ ಆಡ್ಕೋಬೇಕು
ತಲೆ ಚಿಟ್‌ಹಿಡಿಸೋದ್ ಸರಿಯಲ್ಲ

ಅದಕ್ಕೇ ಮಗು ಹೇಳುತ್ತೆ “ತಿಳ್ಕೊತೀನಿ ನಾನೇನೇ” ಈ ಸಾಲುಗಳ ಕೆಲವು ಪ್ರಶ್ನೆಗಳಿಗೆ ಮನಸ್ಸು ಮಾಡಿದರೆ ಉತ್ತರ ಕೊಡುವುದೇನೂ ಕಷ್ಟವಲ್ಲ. ಹಾಗೇ ಪುಟ ೫೪ರಲ್ಲಿರುವ “ಹೇಳಿ ಮಿಸ್ ಹೇಳಿ ಮಿಸ್” ಅನ್ನುವ ಮಗುವಿನ ಪ್ರಶ್ನೆಗಳಿಗೂ ಉತ್ತರವಿಲ್ಲ.

ಇಲ್ಲಿ ಇನ್ನೂ ಕೆಲವು ಪ್ರಶ್ನೆಗಳಿವೆ. ಅವಕ್ಕೆ ಉತ್ತರ ಅವೇ ಕೊಟ್ಕೋತಿವೆ.

ಅಮ್ಮ ಅಮ್ಮ ಬೆಕ್ಕು ನಾಯಿ ಯಾಕೆ ಹಾಗಿದೆ.
ನಾಚಿಕೇನೇ ಇಲ್ಲ.
ಬಟ್ಟೆ ಇಲ್ದೇ ಬರೀ ಮೈಯಲ್ಲಿ ಹೊರಕ್‌ ಬರುತ್ವೆ.
ಕಾಚ ಕೂಡ ಇಲ್ಲವಲ್ಲ ಎಲ್ಲ ಕಾಣುತ್ತೆ.
ಹಲ್ಲು ಉಜ್ಜಿ ಸ್ನಾನ ಮಾಡ್ದೆ ಎಲ್ಲ ತಿನ್ನುತ್ವೆ.
ಒಂದರ ಎಂಜಲಿಗಿನ್ನೊಂದು ಜಗಳ ಮಾಡುತ್ತೆ

ತನಗೆ ತಂದೆ ತಾಯಿ ಕಲಿಸಿಕೊಟ್ಟಿರುವ ದಿನಚರಿಯ ಹಿನ್ನೆಲೆಯಲ್ಲಿ ಇಂಥ ಪ್ರಶ್ನೆ ಮಗುವಿಗೆ ಬಂದರೆ ಆಶ್ಚರ್ಯವಿಲ್ಲ. ಆದರೆ ಮಗು ಅದಕ್ಕೆ ಕೊಡುವ ಪರಿಹಾರ ಮಾತ್ರ ನಮಗೆ ನಗು ತರಿಸುವಂಥದು – “ಅಂಗಡಿಯಿಂದ ಬಟ್ಟೆ ತಂದು ಚಡ್ಡಿ ಹೊಲಿಸೋಣ”…. ಇದು ಪರಿಹಾರ!

ಹಣ್ಣು ಮೇಲೇ. ಬೇರು ? ಅಡಿಯಲ್ಲಿ.
ಬಂಗಲೆ ಮೇಲೆ, ಪಾಯ ? ತಳದಲ್ಲಿ.
ಚಿನ್ನ ಮೈಯಲ್ಲಿ. ಅದಿರು ? ನೆಲದಲ್ಲಿ.

ಬೇರು, ಪಾಯ, ಅದಿರು, ಯಾಕೆ ಕಾಣಿಸ್ಕೊಳಲ್ಲ? ದುಡಿಯೋ ಹಿರಿಯರೇ ಹಾಗೆ ಎಂದೂ ಎದುರಿಗೆ ಬರಲ್ಲ. ತುಂಬಾ ದೊಡ್ಡವರು ಅಥವಾ ದೊಡ್ಡವರಿಗೆ ಕೊಡುವ ಉತ್ತರ ಇದು. ಆದರೂ ಮಗುವಿಗೆ ಅರ್ಥ ಆಗುತ್ತೆ. ಇನ್ನೊಂದು ಪ್ರಶ್ನೆ.

ಹುಲ್ಲು ಹೇಗೆ ಹಾಲಾಗುತ್ತೆ?
ಹಕ್ಕಿಗೆ ಉಸಿರು ಕಟ್ಟೋಲ್ವಾ ಪುಟ್ಟ ಮೊಟ್ಟೇಲಿ.
ಮೋಡದ ತುಂಬಾ ನೀರಿದ್ರೂ ಹೇಗೆ ತೇಲುತ್ತೆ.
ರಾತ್ರೋರಾತ್ರಿ ಸೀ ಹಾಲೇಕೆ ಹುಳಿ ಮೊಸರಾಗುತ್ತೆ.

ಈ ಕೆಲವು ಸಾಲುಗಳಲ್ಲಿ ಒಂದೆರಡಕ್ಕಾದ್ರೂ ವಿಜ್ಞಾನದ ಉತ್ತರವಿದೆ. ಉದಾ : ಹಾಲು ಮೊಸರಾಗುವುದು, ಈಸ್ಟ್ ಎಂಬ ಬ್ಯಾಕ್ಟಿರಿಯಾದಿಂದ, ಆದರೆ ಅದೆಲ್ಲಾ ಅರ್ಥವಾಗುವ ವಯಸ್ಸಲ್ಲ ಮಗುವಿನದು. ಅದಕ್ಕೆ ಇಷ್ಟೇ ಉತ್ತರ ಸಾಕು “ದೇವೇ ಇದನ್ನೆಲ್ಲಾ ಮಾಡ್ತಾನೆ”. ಸಾಮಾನ್ಯವಾಗಿ ನಮ್ಮಂಥ ದೊಡ್ಡವರು ಎಷ್ಟೋ ಬಾರಿ ಹೀಗೇ ಅಲ್ಲವೇ ಅಂದುಕೊಳ್ಳುವುದು.

ಪ್ರಕೃತಿಯನ್ನೇ ಆಧಾರವಾಗಿಟ್ಟುಕೊಂಡ ಕೆಲವು ನೀತಿ ಪಾಠಗಳೂ ಇಲ್ಲಿವೆ.

ಇರೋವಾಗ ಕಾಯಿ ಹಣ್ಣು
ನೆರಳು ಕೊಡ್ತಾವೆ.
ಉರುಳಿದ ಮೇಲೂ ಕಿಟಕಿ ಬಾಗಿಲು
ಮೇಜು ಆಗ್ತಾವೆ.

ಜಾತಿ ಗೀತಿ ಎಂಬುದೆಲ್ಲ
ಸುಳ್ಳು, ಕಂದ ಸುಳ್ಳು
ಮೇಲು ಕೀಳು ಎಂಬ ಮಾತು
ವಿಷ ಸವರಿದ ಮುಳ್ಳು

ಮೇಲುನೋಟಕ್ಕೆ ಕಾಣುವಷ್ಟು ಸರಳವಲ್ಲದ, ಜಟಿಲವಾದ “ಜಾತಿ”ಯಂಥ ವಿಷಯದ ಬಗೆಗೂ ನೀತಿಪಾಠವೇನೋ ಚೆನ್ನಾಗಿದೆ. ಆದರೆ “ವಿಷ ಸವರಿದ” ಎಂಬ ‘ರೂಪಕ’ ಮಗುವಿಗೆ ಅರ್ಥ ಆಗುವುದಿಲ್ಲ. ಅರ್ಥ ಆದರೂ ಪ್ರಯೋಜನವಿಲ್ಲ. ಏಕೆಂದರೆ ಮುಂದೆ ಮಗು ಬದುಕಬೇಕಾಗಿರುವ ಈ ಸಮಾಜದಲ್ಲಿ “ವಿಷ ಸವರಿದ” ಮುಳ್ಳುಗಳೇ ಇವೆ. ಇಂತಹ ವಿರೋಧಾಭಾಸದ ನಡುವೆ ಮಗು ಬೆಳೆಯಬೇಕು. ಅದೇ ವಾಸ್ತವ, ಸತ್ಯ.

‘ಅಜ್ಜಿ’ ಬಗ್ಗೆ ಈ ಮಗುವಿಗೆ ತುಂಬಾ ವ್ಯಾಮೋಹ.

ಅಜ್ಜಿ ಅಜ್ಜಿ ಯಾವಾಗ್ಲೂ ನಾನ್
ನಿನ್ ಜೊತೇನೇ ಇರ್‍ತೀನಿ
ನಿನ್ಹಾಗೇನೇ ನಾನೂನು
ಏಕಾದಶೀ ಮಾಡ್ತೀನಿ…. ಅನ್ನುತ್ತದೆ. ಈ ಅಜ್ಜಿ

ಅಜ್ಜೀ ಅಂದ್ರೆ ಅಜ್ಜಿಗ್ ಖುಷಿ
ಪುಟ್ಟಾ! ಅಂತಾಳೆ.
ಗ್ರ್ಯಾನೀ ಅಂದ್ರೆ ಸೌಟನ ಎತ್ಕೊಂಡ್
ಹೊಡಿಯೋಕ್ ಬರ್‍ತಾಳೆ.

ಇಲ್ಲಿಯ ಸುಮಾರು ಪದ್ಯಗಳಲ್ಲಿ ಅಜ್ಜಿ ಇದ್ದಾಳೆ.

ಬಾಳ ಒಳ್ಳೆಯೋರು ನಮ್ಮ ಮಿಸ್ಸು,
ಗೇರ್ ಗೇರ್ ಮಂಗಣ್ಣ

ತುಂಬಾ ಜನಪ್ರಿಯವಾದ ಕವಿತೆಗಳು, ದೃಶ್ಯ ಮಾಧ್ಯಮದಲ್ಲೂ ಯಶಸ್ವಿಯಾದುವು.

ಗಾದೆ ಮಾತಾಗಿಯೇ ಜಾನಪದದ ತುಣುಕುಗಳಾಗಿಯೋ ನಮ್ಮಲ್ಲಿ ಎರಡು ಅಥವಾ ಮೂರು ಸಾಲುಗಳು ಉಳಿದುಕೊಂಡಂತಹ ಪದ್ಯಗಳು ಕೆಲವಾರಿವೆ.

ಉದಾ. :-
೧. ಹುಯ್ಯೋ ಹುಯ್ಯೋ ಮಳೆರಾಯ
ಹೂವಿನ ತೋಟಕೆ ನೀರಿಲ್ಲ
ಬಾರೋ ಬಾರೋ ಮಳೆರಾಯ
ಬಾಳೆಯ ತೋಟಕೆ ನೀರಿಲ್ಲ.

೨. ಗಣೇಶ್ ಬಂದ ಕಾಯ್‌ಕಡುಬು ತಿಂದ
ಚಿಕ್ ಕರೇಲ್ ಬಿದ್ದ ದೊಡ್ಡ ಕೆರೇಲ್ ಎದ್ದ.

೩. ಅಲ್ಲಿ ನೋಡು ಇಲ್ಲಿ ನೋಡು ಸಂಪಂಗಿ ಮರದಲ್ಲಿ ಗುಂಪು ನೋಡು

೪. ಅಚ್ ಅಚ್ಚು ಬೆಲ್ಲದಚ್ಚು….

೫. ಕಣ್ಣಾ ಮುಚ್ಚೆ ಕಾಡೇ ಗೂಡೇ…. ಇತ್ಯಾದಿ.

ಅವುಗಳಲ್ಲಿ ಕೆಲವಕ್ಕೆ ಈ ಸಂಕಲನದಲ್ಲಿ ಪೂರ್ತಿ ರೂಪ ದೊರೆತಿದೆ. ಉದಾ :

ಬಾರೋ ಬಾರೋ ಮಳೆರಾಯಾ…..
……..
……..
ತೋರೋ ತೋರೋ ಮಳೆರಾಯಾ – ಮಳೆರಾಯಾ

ತೆಂಗು ಅಡಿಕೆ ತಣಿದಿಲ್ಲಾ ತಣಿದಿಲ್ಲಾ
ಕರೆಯೋ ಕರೆಯೋ ಮಳೆರಾಯಾ – ಮಳೆರಾಯಾ
ಕಬ್ಬಿನ ಗದ್ದೆ ನೆನೆದಿಲ್ಲಾ – ನೆನೆದಿಲ್ಲಾ
ಸುರಿಯೋ ಸುರಿಯೋ ಮಳೆರಾಯಾ – ಮಳೆರಾಯಾ.
ಸೂರ್‍ಯನ್ ಸ್ನಾನಾನೇ ಆಗಿಲ್ಲಾ – ಆಗಿಲ್ಲ….
……..
ಒಂದು ಎರಡು ಬಾಳೆಲೆ ಹರಡು ಮೂರು ನಾಕು
ಅನ್ನ ಹಾಕು…. ಎಂಬ ಮಗ್ಗಿ ಪದ್ಯವನ್ನನುಸರಿಸಿ ಇಲ್ಲಿ ಎರಡು ಕವಿತೆಗಳಿವೆ.

೧ ಎರಡು ಎರಡು ನಾಕು
ಹಾಕು ಮೈಸೂರ್‌ಪಾಕು
ನಾಕು ನಾಕು ಎಂಟು
ಅಂಟು ಶುಂಠಿ ಗಂಟು.
ಮೂರು ಮೂರು ಆರು
ಕೂರೋದಂದ್ರೆ ಬೋರು
ಆರು ಆರು ಹನ್ನೆರಡು
ಲಾಡು ಬೇಕು ಇನ್ನೆರಡು
ಐದು ಐದು ಹತ್ತು
ಬಾಳೆ ಹಣ್ಣು ಎತ್ತು
ಹತ್ತು ಹತ್ತು ಇಪ್ಪತ್ತು
ರೊಟ್ಟಿ ತುಪ್ಪಕ್ ಬಿತ್ತು

ಇಲ್ಲಿ ಕೆಲವು ತ್ರಿಪದಿಗಳಿವೆ. ತ್ರಿಪದಿ ಎಂದೊಡನೆ ನಮಗೆ ನೆನಪಾಗುವುದು ಸರ್ವಜ್ಞನ ತ್ರಿಪದಿ ಅಥವಾ ಜಾನಪದ ತ್ರಿಪದಿ. ಹೀಗಾಗಿ ಬೇರೆ ತ್ರಿಪದಿಗಳು ಸೊಗಸುವುದಿಲ್ಲ. ಮೇಲಾಗಿ ಮಕ್ಕಳಿಗಾಗಿ ಬರೆಯುವುದರಿಂದ ಹೆಚ್ಚಿನ ಆಳವಿಲ್ಲದೇ ನೀರಸವಾಗಿ ಸೊರಗಿವೆ.

ಮೊಮ್ಮಗನ ಆಡಿಸುತ ಅಮ್ಮಗಳ ಕಂಡನು
ಲಕ್ಷ್ಮೀಪತಿ ಸರಸ್ವತೀ ದೇವಿಯರ – ಜೊತೆಯಲ್ಲಿ
ವಿಷ್ಣು ಶಿವ ಬ್ರಹ್ಮ ಜ್ಯೋತಿಗಳ,

ಜಾನಪದ ಧಾಟಿಯಲ್ಲಿ ಬರೆದ ಒಂದು ತ್ರಿಪದಿಯೂ ಇದೆ.

ಉದಾ.:

ಅಮ್ಮುತಾತ ತನ್ನ ಮೊಮ್ಮಗನ ತೋಳಲ್ಲಿ.
ಸುಮ್ಮನೇ ತೂಗಿ ಹಾಡಿದರೆ ಕಂದಮ್ಮೆ
ಜುಮ್ಮೆನ್ನುವಂತೆ ನಕ್ಕಾನು |

ಸಂಕಲನದ ಕೊನೆಯ ಭಾಗದಲ್ಲಿ – ಗಣಪತಿ ಚಂದ್ರನಿಗೆ ಶಾಪ ಕೊಟ್ಟ ಕತೆ, ಗಣಪತಿ ರಾವಣನ ಕುತಂತ್ರಕ್ಕೆ ಅಡ್ಡಿ ಮಾಡಿದ ಕತೆ, ಷಣ್ಮುಖನ ಜೊತೆ ಸ್ಪರ್ಧೆಯಲ್ಲಿ ಗಣಪತಿ ಗೆದ್ದ ಕತೆ, ಶಿವನು ಗಣಪತಿಯನ್ನು ಪೂಜಿಸಿದ ಕತೆ, ಗಣಪತಿ ಹುಟ್ಟಿದ್ದು ಇತ್ಯಾದಿ ಪುರಾಣ ಪ್ರಸಿದ್ಧ ಕತೆಗಳಿವೆ. ಇದರ ಜೊತೆಗೆ ಪಂಚತಂತ್ರದ ಕತೆಗಳನ್ನು ಹೋಲುವ ಸಿಂಹದ ಅಧ್ಯಕ್ಷ ಭಾಷಣ, ನರಿ ಮನುಷ್ಯನನ್ನು ನಿಂದಿಸಿದ್ದು, ಪ್ರಾಣಿ ಸಮ್ಮೇಳನ – ಇಂಥ ಪದ್ಯಗಳು ಕೆಲವು ಇವೆ. ‘ಧರಣಿ ಮಂಡಲ ಮಧ್ಯದೊಳಗೆ’ ಕತೆ ಹೇಳುವ ‘ಸತ್ಯವೆ ನಮ್ಮ ತಾಯಿ ತಂದೆ’ ಎಂಬ ಹತ್ತೊಂಭತ್ತು ಪುಟಗಳ ಸರಳ ಲಯದಲ್ಲಿ ಬರೆದ ಕಥೆಯಿದೆ.
*****
ಸುರಾನಾ ಕಾಲೇಜಿನಲ್ಲಿ ಏರ್ಪಡಿಸಿದ್ದ ವಿಚಾರಸಂಕಿರಣದಲ್ಲಿ ಮಂಡಿಸಿದ ಪ್ರಬಂಧ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಾಳಿ ಪಟ
Next post ಕೆಂಡದ ಹಾಡು

ಸಣ್ಣ ಕತೆ

 • ತ್ರಿಪಾದ

  ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

 • ಮೃಗಜಲ

  "People are trying to work towards a good quality of life for tomorrow instead of living for today, for many… Read more…

 • ಡಿಪೋದೊಳಗಣ ಕಿಚ್ಚು…

  ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

 • ಅಜ್ಜಿಯ ಪ್ರೇಮ

  ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

 • ಅವರು ನಮ್ಮವರಲ್ಲ

  ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…