ಪ್ರಪಠ್ಯ ನೇಯುವ ಜಾಲ

ಪ್ರಪಠ್ಯ ನೇಯುವ ಜಾಲ

ಕೆಲವೊಮ್ಮೆ ಕವಿತೆ, ಕತೆ, ಕಾದಂಬರಿ ಅಥವಾ ಪ್ರಬಂಧಗಳಂಥ ‘ಪಠ್ಯ’ಗಳಲ್ಲಿನ ಶಬ್ದಗಳನ್ನೋ ಸಂದರ್ಭ ಸೂಚನೆಗಳನ್ನೋ ಅರ್ಥಮಾಡಿಕೊಳ್ಳಬೇಕಾದರೆ ನಮಗೆ ಅಡಿಟಿಪ್ಪಣಿಗಳ ಅಥವಾ ಕೊನೆಟಿಪ್ಪಣಿಗಳ ಸಹಾಯ ಬೇಕಾಗುತ್ತದೆ; ಆಯಾಪುಟಗಳ ಅಡಿಯಲ್ಲೇ ಮುದ್ರಿತವಾದುವು ಅಡಿಟಿಪ್ಪಣಿಗಳು, ಪಠ್ಯದ ಕೊನೆಗೆ ಮುದ್ರಿತವಾದುವು ಕೊನಟಿಪ್ಪಣಿಗಳು. ಈ ಟಿಪ್ಪಣಿಗಳಲ್ಲಿ ಅಗತ್ಯಕ್ಕೆ ಅನುಸಾರವಾಗಿ ಶಬ್ದಾರ್ಥ ಅಥವಾ ಸಂದರ್ಭ ಸೂಚನೆಗಳಿರುತ್ತವೆ; ತಾತ್ಕಾಲಿಕ ಅಗತ್ಯಕ್ಕಿಂತ ಹೆಚ್ಚನ ವಿವರಗಳನ್ನೂ ಆಸಕ್ತ ಓದುಗರ ಮುಂದಿನ ಅಭ್ಯಾಸಕ್ಕಾಗಿ ಇಂಥ ಟಿಪ್ಪಣಿಗಳಲ್ಲಿ ನೀಡಬಹುದು. ಆದರೆ ಟಿಪ್ಪಣಿಗಳಿಗೆ ಟಿಪ್ಪಣಿಗಳನ್ನು ನೀಡುವ ಸಂಪ್ರದಾಯ ಮಾತ್ರ ಇಲ್ಲ! ಒಂದು ವೇಳೆ ಹಾಗೆ ನೀಡುತ್ತ ಹೋದರೆ ಏನಾಗಬಹುದು? ಓದುವುದಕ್ಕೆ ತೊಡಕಾಗಬಹುದು. ಆದರೆ ಈ ಟಿಪ್ಪಣಿಗಳನ್ನೆಲ್ಲ ಓದಲು ನಾವು ಓದುಗರನ್ನೇನೂ ನಿರ್ಬಂಧಿಸುವುದಿಲ್ಲ, ಓದುವುದು ಬಿಡುವುದು ಅವರವರ ಆಯ್ಕೆ ಎಂದು ಬೇಕಾದರೆ ಹೇಳಬಹುದು. ಆದರೂ ಮುದ್ರಿತ ಪುಸ್ತಕಗಳಲ್ಲಿ ಟಿಪ್ಪಣಿಗಳಿಗೆ ಟಿಪ್ಪಣಿ ಕೊಡುತ್ತ ಹೋಗುವುದು ಮುದ್ರಣದ ದೃಷ್ಪಿಯಿಂದಲೂ ತೊಡಕಿನ ವಿಷಯವೇ.

ಕಂಪ್ಯೂಟರಿನಲ್ಲಿ ನಾವು ಪಠ್ಯಗಳನ್ನು ನಿರ್ಮಿಸುವಾಗಲೂ ಅಡಿಟಿಪ್ಪಣಿ ಹಾಗೂ ಕೊನೆಟಿಪ್ಪಣಿಗಳನ್ನು ಕೊಡುವ ಅನುಕೂಲತೆಯಿದೆ; ಮಾತ್ರವಲ್ಲ, ಇಲ್ಲಿ ಟಿಪ್ಪಣಿಗಳಿಗೆ ಟಿಪ್ಪಣಿ ಕೊಡುವುದೂ ಸಾಧ್ಯ! ನೀವು ಕಂಪ್ಯೂಟರ್ ಉಪಯೋಗಿಸುವಾಗ, ಕೆಲವೊಂದು ಪಠ್ಯಗಳ ಜಾಗಗಳಲ್ಲಿ ಕರ್ಸರ್‌ನ ಸಾಧಾರಣ ಚಿಹ್ನೆ ಹಸ್ತದ ಚಿಹ್ನೆಯಾಗಿ ಮಾರ್ಪಡುವುದನ್ನು ಗಮನಿಸಿರಬಹುದು. ಅಲ್ಲಿ ಕ್ಲಿಕ್ ಮಾಡಿದರೆ ಅದು ನಿಮ್ಮನ್ನು ಅದೇ ಪಠ್ಯದ ಇನ್ನೊಂದು ಸಂಬಂಧಿತ ಜಾಗಕ್ಕೋ ಅಥವಾ ನೀವು ಓದುತ್ತಿರುವುದಕ್ಕೆ ಸಹಾಯಕವಾಗುವಂತೆ ಇನ್ನಷ್ಟು ವಿವರಗಳನ್ನು ನೀಡುವ ಬೇರೊಂದು ತಾಣಕ್ಕೋ ಕರೆದೊಯ್ಯಬಹುದು. ಇದೀಗ ಮುಖ್ಯವಾಗಿ ಅಂತರ್ಜಾಲದ ಹಲವು ಪಠ್ಯಗಳಲ್ಲಿ ಬಳಕೆಯಾಗುತ್ತಿರುವ ಒಂದು ಅನುಕೂಲತೆ; ವಿಕಿಪೀಡಿಯಾದಂಥ ಮಾಹಿತಿ ಕೇಂದ್ರಗಳಿಗೆ ಅಥವಾ ಅಮೆಝಾನ್‌ನಂಥ ಅಂತರಿಕ್ಷದ ಅಂಗಡಿಗಳಿಗೆ ಭೇಟಿ ನೀಡುತ್ತಿರುವವರಿಗೆಲ್ಲ ಗೊತ್ತಿರುವ ಸಂಗತಿ. ಹೀಗೆ ಪಠ್ಯಗಳನ್ನು ಪಠ್ಯಗಳಿಗೆ ಜೋಡಿಸುವುದಕ್ಕೆ ಟಿಪ್ಪಣಿ ಎನ್ನುವುದಿಲ್ಲ, ಸಂಪರ್ಕ (linkage) ಎನ್ನುತ್ತಾರೆ; ಹಾಗೂ ಇಂಥ ಅನೇಕ ಸಂಪರ್ಕಗಳಿರುವ ಪಠ್ಯಕ್ಕೆ ಪ್ರಪಠ್ಯ (hypertext) ಎಂದು ಹೆಸರು. ಪ್ರಪಠ್ಯದಲ್ಲಿ ನಾವು ಅದರ ಕೊಣಿಕೆಗಳ ಬಲದ ಮೇಲೆ ಒಂದೆಡೆಯಿಂದ ಇನ್ನೊಂದೆಡೆಗೆ, ಅಲ್ಲಿಂದ ಮತ್ತೊಂದೆಡೆಗೆ ಸರಿಯುತ್ತ ‘ವಾಚನ ಸಂಚಾರ’ ನಡೆಸಬಹುದು, ಮೂಲ ಪಠ್ಯಕ್ಕೆ ಮರಳಬಹುದು, ಮತ್ತೆ ಅಲ್ಲಿಂದ ದೂರ ಹೋಗಬಹುದು.

ಪಠ್ಯ ಮತ್ತು ಪ್ರಪಠ್ಯಗಳಿಗಿರುವ ವ್ಯತ್ಯಾಸವೇನು? ಪ್ರಪಠ್ಯವೊಂದರ ಜಾಡು ಹಿಡಿದು ನಾವು ಮಾಡಿದ ಸಂಚಾರವೆಲ್ಲ ನಮ್ಮ ಮೂಲ ಪಠ್ಯದ ಓದೇ ಎಂದು ತಿಳಿದುಕೊಳ್ಳಬೇಕೇ? ಹೀಗೆ ಕಂಪ್ಯೂಟರ್ ಹಾಗೂ ಅಂತರ್ಜಾಲ (internet) ಬಂದ ಮೇಲೆ ಪಠ್ಯ ಮತ್ತು ಓದು ಎಂಬ ಈ ಎರಡೂ ವಿಷಯಗಳ ಕುರಿತಾದ ನಮ್ಮ ತಿಳುವಳಿಕೆಯೇ ಪಶ್ನೆಗೊಳಗಾಗುತ್ತಿರುವುದು ಗಮನಾರ್ಹ. ಕಾಗದವೊಂದರಲ್ಲಿ ಬರೆದ ಅಥವಾ ಮುದ್ರಿತವಾದ ಕತೆ ಕವಿತೆ ಲೇಖನ ಮುಂತಾದವನ್ನು ಸಾಧಾರಣವಾಗಿ ನಾವು ಪಠ್ಯವೆಂದು ಕರೆಯುತ್ತೇವೆ. ಯಾವುದನ್ನು ಓದಬಹುದೋ ಅದು ಪಠ್ಯ. (ಶಾಲಾ ಕಾಲೇಜುಗಳಲ್ಲಿ ಅಭ್ಯಾಸಕ್ಕೆ, ಎಂದರೆ ಪರೀಕ್ಷೆಯ ದೃಷ್ಟಿಯಿಂದ ಓದುವುದಕ್ಕೆ ನಿಯುಕ್ತವಾದ ಸಾಹಿತ್ಯ ಭಾಗಗಳಿಗೂ ಪಠ್ಯವೆಂದು ಕರೆಯುತ್ತಾರೆ; ಆದರೆ ನಾನಿಲ್ಲಿ ಈ ಪದವನ್ನು ಅದರ ಸಾಧಾರಣ ಅರ್ಥದಲ್ಲಿ ಉಪಯೋಗಿಸುತ್ತಿದ್ದೇನೆ.) ಇಂಗ್ಲಿಷ್‌ನಲ್ಲಿ ಇದಕ್ಕೆ ಟೆಕ್‌ಸ್ಟ್ (text) ಎಂದು ಹೆಸರು. ಟೆಕ್‌ಸ್ಟ್ ಎಂಬ ಪದ ಲ್ಯಾಟಿನ್ ಭಾಷೆಯ ಟೆಕ್ಸೆರೆ (texere) ಎಂಬ ಕ್ರಿಯಾಪದದಿಂದ ಬಂದುದು: ಟೆಕ್ಸೆರೆ ಎಂದರೆ ನೇಯುವುದು. ಇಂಗ್ಲಿಷ್‌ನ ಟೆಕ್‌ಸ್ಟೈಲ್ (textile) ಅರ್ಥಾತ್ ಬಟ್ಟೆ ಎಂಬ ಪದಕ್ಯೂ ಇದುವೇ ಮೂಲ. ಈ ಮೂಲಾರ್ಥವನ್ನು ಗ್ರಹಿಸಿಕೊಂಡರೆ ಟೆಕ್‌ಸ್ಟ್ ಯಾತಕ್ಕೆ ಹಾಗೆ ಕರೆಯಲ್ಲಡುತ್ತದೆ ಎನ್ನುವುದು ಗೊತ್ತಾಗುತ್ತದೆ: ಟೆಕ್‌ಸ್ಟ್ ಕೂಡಾ ಒಂದು ರೀತಿಯಲ್ಲಿ ನೆಯ್ಗೆಯೇ.

ಟೆಕ್‌ಸ್ಟಿಗೆ ಒಂದು ರೀತಿಯ ಬಂಧವಿರುತ್ತದೆ, ಹೆಣಿಗೆಯಿರುತ್ತದೆ, ಹಾಗೂ ಅದನ್ನು ಅರ್ಥಮಾಡುವುದೆಂದರೆ ಮಾನಸಿಕವಾಗಿ ಅದನ್ನು ಬಿಚ್ಚಿನೋಡಿದಂತೆಯೇ! ಹೀಗೆಂದು ರಚನಾವಾದಿಗಳು ಹೇಳಬಹುದು. ಬದಲಿಗೆ ಸಂಪ್ರದಾಯವಾದಿಗಳು ಲೇಖಕನ ಜೀವನ ಚರಿತ್ರೆ, ಪ್ರತಿಪದಾರ್ಥ, ತಾತ್ಪರ್ಯ, ಅಲಂಕಾರ ಮುಂತಾದವುಗಳ ಮೂಲಕ ಪಠ್ಯವನ್ನು ತಿಳಿದುಕೊಳ್ಳಬೇಕಾಗುತ್ತದೆ ಎನ್ನಬಹುದು. ವಾಸ್ತವವಾದಿಗಳು ಪಠ್ಯದ ಮೂಲಕ ನಾವೇನು ಮಾಡಬಹುದು ಎಂದುಕೊಳ್ಳುವುದೇ ಅದರ ಅರ್ಥ ಎನ್ನಬಹುದು. ಕಟ್ಟಾವಾದಿಗಳು ತಮ್ಮ ವಾದಗಳನ್ನಲ್ಲದೆ ಇತರ ವಾದಗಳನ್ನು ತಿರಸ್ಕರಿಸುವ ಮೂಲಕ ನಿರಾಕರಣ ವಾದಿಗಳಾಗುತ್ತಾರೆ; ಈ ಎಲ್ಲ ವಾದಗಳಿಂದಲೂ ತಮಗೆ ಬೇಕಾದ್ದನ್ನು ತೆಗೆದುಕೊಳ್ಳುವ ಸ್ವೀಕರಣವಾದಿಗಳೂ ಇದ್ದಾರೆ. ಈ ಎಲ್ಲ ವಾದಗಳಿಗೆ ಸಮನಾದ ಒಂದು ಅಂಶವೆಂದರೆ ಪಠ್ಯವನ್ನು ಒಂದು ಮೂಲ ನೆಲೆಯಲ್ಲಿ ಅರ್ಥಮಾಡಿಕೊಳ್ಳುವುದು; ಎಂದರೆ ಪಠ್ಯದ ಕುರಿತಾದ ಆದಷ್ಟೂ ವಿವರಗಳನ್ನು ತಿಳಿದುಕೊಳ್ಳುವುದು. ಇಲ್ಲಿ ‘ಆದಷ್ಟೂ’ ಎಂದರೆ ಎಷ್ಟು ಎಂದು ಕೇಳಬಹುದು; ಈ ಪ್ರಶ್ನೆಗೆ ಸರ್ವಸಮ್ಮತವಾದ ಉತ್ತರವಿಲ್ಲ. ಪ್ರಪಠ್ಯ ಅಥವಾ ಹೈಪರ್ಟೆಕ್ಸ್ಟ್‍ನ ಪ್ರವೇಶವಾಗುವುದು ಇಲ್ಲೇ.

ಈಚೆಗೆ ಐದಾರು ವರ್ಷಗಳ ಹಿಂದೆ ನಾನು ಹೈದರಾಬಾದಿನ ಸೆಂಟ್ರಲ್ ಇನ್ಸ್ಪಿಟ್ಯೂಟ್ ಆಫ್ ಇಂಗ್ಲಿಷ್ ಎಂಡ್ ಫಾರಿನ್ ಲಾಂಗ್ಲೇಜಸ್ನಲ್ಲಿ (ನಾನು ಕೆಲಸ ಮಾಡುತ್ತಿದ್ದ ಸಂಸ್ಥೆ) ಟಿ. ಎಸ್. ಎಲಿಯಟ್ನ ‘ದ ವೇಸ್ಟ್ ಲ್ಯಾಂಡ್’ ಕವಿತೆಯ ಬಗ್ಗೆ ಮಾತಾಡುವ ಸಂದರ್ಭ ಒದಗಿ ಬಂತು. ನಾನು ಆರಿಸಿಕೊಂಡ ವಿಷಯ ‘ಪ್ರಪಠ್ಯವಾಗಿ ದ ವೇಸ್ಟ್ ಲ್ಯಾಂಡ್’ (The Waste Land as Hypertext). ನಾನು ಈ ಭಾಷಣ ಕೊಡುವ ಕಾಲಕ್ಕೆ ವೇಸ್ಟ್ ಲ್ಯಾಂಡ್ ಪ್ರಪಠ್ಯ ಅಂತರ್ಜಾಲದಲ್ಲಿ ಇರಲಿಲ್ಲ. ವೇಸ್ಟ್ ಲ್ಯಾಂಡ್ ಪ್ರಪಠ್ಯ ಕೇವಲ ನನ್ನ ಯೋಚನೆಯ ಮುನ್ನೋಟವಷ್ಟೆ ಆಗಿತ್ತು. ಆದರೆ ಒಂದೆರಡು ವರ್ಷಗಳ ನಂತರ ನಾನು ಅಮೇರಿಕೆಗೆ ಹೋದಾಗ ಅಲ್ಲಿ ಕುತೂಹಲದಿಂದ ಅಂತರ್ಜಾಲವನ್ನು ತಡಕಾಡಿದರೆ ವೇಸ್ಟ್ ಲ್ಯಾಂಡಿನ ಪ್ರಪಠ್ಯ ಸಿದ್ಧವಾಗಿ ಕೂತಿತ್ತು) ಯಾಕೆಂದರೆ ಪ್ರಪಠ್ಯವಾಗುವುದಕ್ಕೆ ವೇಸ್ಟ್ ಲ್ಯಾಂಡ್ ಅತ್ಯಂತ ಅರ್ಹವಾದ ಕವಿತೆ. ಎಲಿಯಟ್ ಬರೆಯುವ ಕಾಲಕ್ಕೆ (೧೯೨೨) ಇನ್ನೂ ಕಂಪ್ಯೂಟರ್ ಯುಗ ಆರಂಭವಾಗದೆ ಇದ್ದರೂ ಕವಿತೆ ಅಂತರ್‌ಪಠ್ಯಗಳಿಂದಲೂ ಗುಪ್ತಪಠ್ಯ-ಗಳಿಂದಲೂ ಪೂರ್ತಿ ತುಂಬಿ ಹೊರ ಸಹಾಯವಿಲ್ಲದೆ ಅರ್ಥಮಾಡುವಂತಿಲ್ಲ. ಇದರಲ್ಲಿ ಇತಿಹಾಸವಿದೆ, ಐತಿಹ್ಯವಿದೆ, ಪುರಾಮಾನವ ಶಾಸ್ತ್ರವಿದೆ, ತತ್ವಜ್ಞಾನವಿದೆ, ಉಪನಿಷತ್ ವಾಕ್ಯವಿದೆ, ಬೇರೆ ಕವಿಗಳಿಂದ ಉದ್ಧರಿಸಿದಂಥ ಮಾತುಗಳಿವೆ. ಕವಿತೆ ಇಂಗ್ಲಿಷ್‌ನಲ್ಲಿದ್ದರೂ ಗ್ರೀಕ್, ಲ್ಯಾಟಿನ್, ಜರ್ಮನ್, ಫ್ರೆಂಚ್ ಮುಂತಾದ ಭಾಷೆಗಳೂ ಹಾಸುಹೊಕ್ಕಾಗಿ ಬರುತ್ತವೆ. ಎಲಿಯಟ್ ತಾನೇ ಆಗಿ ಕವಿತೆಗೆ ಸುಮಾರು ಎಪತ್ತಕ್ಕೂ ಮಿಕ್ಕಿದ ಕೊನೆ ಟಿಪ್ಪಣಿಗಳನ್ನು ಕೊಟ್ಟಿದ್ದಾನೆ. ನಂತರ ಅನೇಕರು ಅನೇಕ ಬಗೆಯ ಟಿಪ್ಪಣಿಗಳನ್ನು ಮತ್ತು ವಿಮರ್ಶೆಗಳನ್ನು ಬರೆಯುತ್ತಲೂ ಬಂದಿದ್ದಾರೆ. ಹೀಗೆ ಕಂಪ್ಯೂಟರ್ ಯುಗಕ್ಕೆ ಮೊದಲೇ ಪ್ರಪಠ್ಯ ಲಕ್ಷಣಗಳನ್ನು ಸೂಚಿಸಿದ ಕವಿತೆ ವೇಸ್ಟ್ ಲ್ಯಾಂಡ್ ಎಂಬುದರಲ್ಲಿ ಸಂದೇಹವಿಲ್ಲ. (ಕನ್ನಡಕ್ಕೆ ಈ ಕವಿತೆಯನ್ನು ವೇಣುಗೋಪಾಲ ಕಾಸರಗೋಡು ಹಾಗೂ ಶ್ರೀಶ ದೇವಪೂಜಿತ್ತಾಯರು ಜತೆಯಾಗಿ ಮತ್ತು ಎನ್. ಎಸ್. ಲಕ್ಶ್ಮೀನಾರಾಯಣ ಭಟ್ಟರು ಒಬ್ಬರೇ ಆಗಿ ಟಿಪ್ಪಣಿ ಸಮೇತ ಅನುವಾದಿಸಿದ್ದಾರೆ.)

ವೇಸ್ಟ್ ಲ್ಯಾಂಡಿನಂತೆಯೇ ಕ್ಲಿಷ್ಟವಾಗಿದ್ದು ಪ್ರಪಠ್ಯವನ್ನು ಬಯಸುವ ಇತರ ಅದೆಷ್ಟೋ ಕೃತಿಗಳಿವೆ: ಪೌಂಡ್‌ನ ಕಾಂಟೋಸ್, ಜಾಯ್ಸ್‌ನ ಯೂಲಿಸಿಸ್ ಮತ್ತು ಫಿನ್ನೆಗನ್ಸ್ ವೇಕ್, ಬೆಕೆಟ್‌ನ ವೈಟಿಂಗ್ ಫಾರ್ ಗೊದೋ ಮುಂತಾದುವು. ಕಾನ್ರಾಡ್‌ನ ನೋಸ್ಟ್ರೋಮೋ ಎಂಬ ಕಾದಂಬರಿಯನ್ನು ಪ್ರಪಠ್ಯದ ಟಿಪ್ಪಣಿಗಳ ಸಮೇತ ಅಂತರ್ಜಾಲದಲ್ಲಿ ನೋಡಿದ್ದೇನೆ. ಕನ್ನಡದ ಹಳೆ ಹೊಸ ಕೃತಿಗಳನ್ನೂ ಪ್ರಪಠ್ಯೀಕರಿಸುವುದು ಸಾಧ್ಯ. ಉದಾಹರಣೆಗೆ, ಅನಂತಮೂರ್ತಿಯವರ ‘ಸಂಸ್ಕಾರ’ ಪ್ರಪಠ್ಯಕ್ಕೆ ಅರ್ಹವಾದ ಕೃತಿ. ಇದರ ಬಗ್ಗೆ ಈಗಾಗಲೇ ಬಂದಿರುವ ವಿಮರ್ಶೆಗಳನ್ನೇ ಅಂತರ್ಜಾಲದಲ್ಲಿ ಹಾಕಿದರೂ ಸಾಕು. ‘ಸಂಸ್ಕಾರ’ದ ಕುರಿತಾದ ಲೇಖನಗಳ ಮೊದಲ ಸಂಗ್ರಹ ಕಾಸರಗೋಡಿನ ನವ್ಯಸಾಹಿತ್ಯ ಸಂಘದಿಂದ ಬಂತೆನ್ನುವ ವಿಚಾರ ಇಂದು ಹಲವರಿಗೆ ಗೊತ್ತಿಲ್ಲ. ಈ ಕಾದಂಬರಿಯನ್ನು ಯಾವಾಗ ಹೇಗೆ ರೂಪಕ್ಕೆ ಬಂತೆನ್ನುವ ಕುರಿತಾಗಿ ಅನಂತಮೂರ್ತಿಯವರೇ ಬರೆದಂಥ ಕಿರು ಲೇಖನವೊಂದು ಅಂತರ್ಜಾಲದಲ್ಲಿ ಈಗಾಗಲೇ ಇದೆ. ಪ್ರಾಣೇಶಾಚಾರ್ಯರ ‘ಪತನ’ಕ್ಕೂ ಬೈಬಲಿನ ಐತಿಹ್ಯಕ್ಕೂ ಇರುವ ಸಂಬಂಧ ವಿಮರ್ಶಕರ ಗಮನಕ್ಕೆ ಬಂದಿರಲೂ ಸಾಕು: ಈವ್ ಜ್ಞಾನವೃಕ್ಷದ ಹಣ್ಣು ತಿನ್ನಲು ಆದಮನನ್ನು ಪ್ರೇರೇಪಿಸುವುದಕ್ಕೂ ಚಂದ್ರಿ ಆಚಾರ್ಯರಿಗೆ ಬಾಳೆಹಣ್ಣು ತಿನ್ನಿಸುವುದಕ್ಕೂ ಇರುವ ಸಾಮ್ಯವನ್ನು ಅಲ್ಲಗಳೆಯಲಾಗುವುದಿಲ್ಲ. ಈ ಎರಡೂ ಸಂದರ್ಭಗಳಲ್ಲಿ ತಿನ್ನುವಿಕೆಗೂ ಲೈಂಗಿಕತೆಗೂ ಸಂಬಂಧವಿದೆ; ಅದೇ ರೀತಿ ಜ್ಞಾನೋದಯಕ್ಕೆ ಕೂಡಾ. ಆಚಾರ್ಯರಾದರೆ ತಾನು ಯಾರು, ಏನು ಮಾಡುತ್ತಿದ್ದೇನೆ ಮುಂತಾದ ಅಸ್ತಿತ್ವವಾದೀ ಆತ್ಮಾವಲೋಕನಕ್ಕೆ ತೊಡಗುತ್ತಾರೆ: ಇಲ್ಲಿ ಸಾರ್ತೃವಿನ ‘ಅಸ್ತಿತ್ವವಾದವೆಂದರೆ ಅದೊಂದು ಮಾನವತಾವಾದ’ ಎಂಬ ಲೇಖನದಿಂದ ಅನಂತಮೂರ್ತಿಯವರು ಪ್ರಭಾವಿತರಾಗಿರುವುದು ಸಾಧ್ಯ. ವಿ. ಎಸ್. ನೈಪಾಲರು ಆಚಾರ್ಯ ಪಾತ್ರವನ್ನು ಪೂರ್ತಿ ಬೆಳೆಯದ ವ್ಯಕ್ತಿತ್ವವೆಂದು ಕರೆದುದು ಹೊಸದೊಂದು ಆಯಾಮವನ್ನು ಒದಗಿಸುತ್ತದೆ. ‘ಸಂಸ್ಕಾರ’ ಕಾದಂಬರಿ ಅನಂತಮೂರ್ತಿಯವರ ಕೃತಿಜೀವನದಲ್ಲಿ ಒಂದು ಬದಲಾವಣೆಯ ಘಟ್ಟವೂ ಹೌದು: ಆವರೆಗಿನ ವ್ಯಕ್ತಿನಿಷ್ಠ ಬರಹಗಳಿಗೂ ಮುಂದಿನ ಸಮೂಹದೃಷ್ಟಿಯ ಬರಹಗಳಿಗೂ ‘ಸಂಸ್ಕಾರ’ ಒಂದು ಕೊಂಡಿ. ಆಚಾರ್ಯರು ಅಸ್ತಿತ್ವವಾದಿ ವಿಚಾರಗಳನ್ನು ಹೊಂದಿದ್ದರೂ, ಒಟ್ಟಾರೆ ಕಾದಂಬರಿ ಇವನ್ನು ಮೀರಿ ಸಮಾಜಮುಖಿಯಾಗಿ ಹೊರಳಿರುವುದು ಇದರ ಗುರುತು. ಈ ಕಾರಣಕ್ಕೆ ಕೆ. ವಿ. ಸುಬ್ಬಣ್ಣ ‘ಸಂಸ್ಕಾರ’, ‘ಭಾರತೀಪುರ’ ಮತ್ತು ‘ಅವಸ್ಥೆ’ ಕೃತಿಗಳನ್ನು ತ್ರಿವಳಿಗಳಾಗಿ ಗುರುತಿಸುವ ಲೇಖನ ಅರ್ಥಪೂರ್ಣ. ಏ. ಕೆ. ರಾಮಾನುಜನರ ‘ಸಂಸ್ಕಾರ’ ಇಂಗ್ಲಿಷ್ ಭಾಷಾಂತರದ ಸೂಕ್ಷ್ಮ ಅವಲೋಕನವೂ ಅಗತ್ಯ. ಹಾಗೂ ಕಾದಂಬರಿಯನ್ನು ಸಿನೆಮಾ ಮಾಡಿದಾಗ ಓತ್ತುಕೊಟ್ಟ ಅಂಶಗಳೇನು, ಕೊನೆಯನ್ನು ಯಾಕೆ ಬದಲಾಯಿಸಲಾಯಿತು ಎಂಬ ಪಶ್ನೆಗಳಿವೆ. ಇಂಥ ಹಲವಾರು ದೃಷ್ಟಿಕೋನಗಳ ಓದು ಪಠ್ಯವನ್ನು ಪ್ರಪಠ್ಯವಾಗಿ ವಿಸ್ತರಿಸುವುದು ಸಹಜವೇ.

ಪ್ರಪಠ್ಯದ ನಂತರ ಪಠ್ಯದ ಸ್ಥಾನವೇನು ಎಂಬ ಪಶ್ನೆ ತಾನಾಗಿಯೇ ಏಳುತ್ತದೆ. ಯಾವುದೇ ಕವಿತೆ ಅಥವಾ ಕಾದಂಬರಿಯ ಬಗ್ಗೆ ವಿವರಗಳು, ಉಪವಿವರಗಳು, ವಿಮರ್ಶೆಗಳು ಬೆಳೆಯುತ್ತಾ ಹೋದಂತೆ ಮೂಲದ ಆಸ್ವಾದನೆ ಸಾಧ್ಯವಾಗುತ್ತದೆಯೇ? ಮೂಲದ ಕಲ್ಪನೆಯೇ ನಾಶವಾಗುವುದಿಲ್ಲವೇ? ‘ದ ವೇಸ್ಟ್ ಲ್ಯಾಂಡ್’ ಪುಸ್ತಕರೂಪದಲ್ಲಿ ಪ್ರಕಟವಾಗುವ ಮೊದಲು ‘ಡಯಲ್’ ಹಾಗೂ ‘ಕ್ರೈಟೀರಿಯನ್’ ಎಂಬ ಎರಡು ಪತ್ರಿಕೆಗಳಲ್ಲಿ ಬಂದಿತ್ತು; ಆಗ ಮಾತ್ರ ಅದಕ್ಕೆ ಅಡಿಟಿಪ್ಪಣಿಗಳೇನೂ ಇರಲಿಲ್ಲ. ಪುಸ್ತಕರೂಪದಲ್ಲಿ ತರಲು ಪ್ರಕಾಶಕರು ಆಸಕ್ತಿ ತೋರಿದಾಗ ಗಾತ್ರ ಹಿಗ್ಗಿಸುವ ಒಂದು ಕಾರಣಕ್ಕಾಗಿ ಎಲಿಯಟ್ ಅಡಿಟಿಪ್ಪಣಿಗಳನ್ನು ಪ್ರಪಥಮವಾಗಿ ನೀಡಿದ್ದು. ಕವಿತೆಗಿಂತ ಈ ಟಿಪ್ಪಣಿಗಳೇ ಓದುಗರಿಗೆ ಹೆಚ್ಚು ಸ್ವಾರಸ್ಯಕರವೆಂದು ಅನಿಸತೊಡಗಿದ್ದನ್ನು ಗಮನಿಸಿದ ಕವಿ ಟಿಪ್ಪಣಿಗಳನ್ನು ಕೊಟ್ಟುದಕ್ಕಾಗಿ ಪಶ್ಚಾತ್ತಾಪಿಸಿದ್ದೂ ಇದೆ. ಇದು ಕತೆಗಿಂತ ಉಪಕತೆಯೇ ಜಾಸ್ತಿ ಜನಪ್ರಿಯವಾಗುವಂಥ ಪ್ರಸಂಗ! ಪ್ರಪಠ್ಯ ಇದಕ್ಕೆ ನೇರವಾಗಿ ದಾರಿಮಾಡುತ್ತದೆ ಎನ್ನುವುದು ಆತಂಕದ ವಿಷಯ. ಮಾತ್ರವಲ್ಲ, ಅಂತರ್ಜಾಲದಲ್ಲಿ ಇನ್ನೂ ಒಂದು ಅಪಾಯವಿದೆ: ಅದೆಂದರೆ ಕಂಪ್ಯೂಟರ್ ಡಿಸೋರಿಯೆಂಟೇಶನ್ ಅರ್ಥಾತ್ ದಾರಿತಪ್ಪುವಿಕೆ ಎಂಬ ರೋಗ. ಯಾವುದೋ ಒಂದು ವಿವರಕ್ಕಾಗಿ ಹುಡುಕಲು ಮೊದಲುಮಾಡುತ್ತೇವೆ; ಆಗ ಯಾವುದೋ ಇನ್ನೊಂದು ವಿವರ ಹೆಚ್ಚು ಆಕರ್ಷಕ ಅನಿಸಿ ಅದನ್ನು ಪ್ರವೇಶಿಸುತ್ತೇವೆ; ಅಲ್ಲಿಂದ ಇದೇ ರೀತಿಯ ಮತ್ತೊಂದು. ಅಂತರ್ಜಾಲವನ್ನು ಆಗಾಗ ತಡಕಾಡುವವರಿಗೆಲ್ಲ ಇದು ಸ್ವಾನುಭವ. ನಮ್ಮ ಸಾಹಿತ್ಯದ ಓದಿನಲ್ಲೂ ಹೀಗಾದರೆ?

ಪಠ್ಯ ಮತ್ತು ಓದು ಎಂಬ ಈ ಎರಡೂ ಪರಸ್ಪರ ಅವಲಂಬಿತ ಕಲ್ಪನೆಗಳು ಇಂದು ಕಂಪ್ಕೂಟರಿನಿಂದಾಗಿ ಜಿಜ್ಞಾಸೆಗೆ ಗುರಿಯಾಗಿವೆ ಎನ್ನುವುದರಲ್ಲಿ ಸಂಶಯವಿಲ್ಲ. ಮುಂದಿನ ಓದುಗ ಈ ಹೊಸ ಪರಿಸ್ಥಿತಿಗೆ ಹೊಂದಿಕೊಳ್ಳಲು ಕಲಿತುಕೊಳ್ಳ ಬೇಕಾಗುತ್ತದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇಡು ಭಕ್ತಿ, ನಡೆ ಮುಂದೆ
Next post ಜೋಗಿಣಿ ಹಕ್ಕಿ ತಾವು ಹುಡುಕುತ್ತಾ…..

ಸಣ್ಣ ಕತೆ

 • ಜಡ

  ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

 • ವಿರೇಚನೆ

  ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

 • ಕೊಳಲು ಉಳಿದಿದೆ

  ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

 • ತ್ರಿಪಾದ

  ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

 • ಸಾವಿಗೊಂದು ಸ್ಮಾರಕ

  ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

cheap jordans|wholesale air max|wholesale jordans|wholesale jewelry|wholesale jerseys