ಹರಿಹರಪ್ರಿಯರ ಸಾಹಿತ್ಯ: ಒಂದು ವಿಶ್ಲೇಷಣೆ

ಹರಿಹರಪ್ರಿಯರ ಸಾಹಿತ್ಯ: ಒಂದು ವಿಶ್ಲೇಷಣೆ

“ಒಂದು ಕತೆ ನೆನಪಾಗುತ್ತದೆ. ಚಪ್ಪಲಿ ತಯಾರು ಮಾಡುವ ಒಂದು ಕಂಪನಿಗೆ ಇಬ್ಬರು ಪ್ರತಿಭಾವಂತ ಯುವಕರು ಕೆಲಸಕ್ಕೆ ಸೇರಿಕೊಂಡರು. ಸೇರಿಕೊಂಡ ದಿನವೇ ಈ ಇಬ್ಬರನ್ನೂ ಎರಡು ಊರುಗಳಿಗೆ ಕಂಪೆನಿಯವರು ಯೋಗ್ಯತೆಯ ಪರೀಕ್ಷೆಗೆ ಕಳಿಸಿಕೊಟ್ಟರು. ಆ ಎರಡೂ ಊರಿನಲ್ಲಿ ಚಪ್ಪಲಿ ಹಾಕುವವರೇ ಗತಿ ಇರಲಿಲ್ಲ. ಅದರಿಂದ ನೊಂದ ಒಬ್ಬ ಯುವಕ, ಆ ಊರಿನವರಿಗೆ ಚಪ್ಪಲಿಗಳ ಅಗತ್ಯವಿಲ್ಲ ಎಂದು ಕಂಪೆನಿಗೆ ಸಂದೇಶ ಕಳಿಸಿ, ಕೆಲಸ ಬಿಟ್ಟ. ಇನ್ನೊಬ್ಬ ಯುವಕ ಆ ಊರಿನ ಸಂಖ್ಯೆ ಹಿಡಿದು ಇಷ್ಟು ಜೊತೆಗಳ ಚಪ್ಪಲಿ ಅಗತ್ಯವೆಂದು ಆದೇಶ ಕಳಿಸಿ, ಸ್ಥಾನ ಗಿಟ್ಟಿಸಿದ.”

-ಇದು ಹರಿಹರಪ್ರಿಯ ಅವರು ತಮ್ಮ ‘ಕಾಳಜಿ’ ಕೃತಿಯ ‘ಇಂದಿನ ಸಾಹಿತ್ಯದ ಗೊತ್ತುಗುರಿ’ ಎಂಬ ಲೇಖನದ ಮೊದಲಲ್ಲಿ ಹೇಳಿದ ಪ್ರಸಂಗ. ಅವರು ಸಾಹಿತ್ಯ ಕ್ಷೇತ್ರದಲ್ಲಿ ಇವೆಯೆಂದು ಭಾವಿಸಿದ ವಿವಿಧ ‘ಸನ್ನಿ’ಗಳ ಬಗ್ಗೆ ಬರೆಯುವುದಕ್ಕೆ ಮುಂಚೆ ಈ ಪುಟ್ಟ ಪ್ರಸಂಗವನ್ನು ಹೇಳಿ ಅನಂತರ ಸಂವೇದನಾ ಸನ್ನಿ, ಸಿದ್ದಾಂತ ಸನ್ನಿ, ಬಂಡವಾಳ ಸನ್ನಿ, ಪ್ರಚಾರ ಸನ್ನಿ, ರಾಜಕೀಯ ಸನ್ನಿ – ಎಂಬ ಬಹುಸನ್ನಿಗಳ ಬಗ್ಗೆ ತಮ್ಮದೇ ಆದ ಸರಳ ವಿವರಣೆ ಕೊಡುತ್ತಾರೆ. ಅದರ ಚರ್ಚೆ ನನ್ನ ಉದ್ದೇಶವಲ್ಲ. ಮೇಲಿನ ಪ್ರಸಂಗವನ್ನು ಅವರು ಅನ್ವಯಿಸಿಕೊಳ್ಳುವ ವಿಧಾನದಲ್ಲಿ ಸಾಹಿತ್ಯ ಕ್ಷೇತ್ರದ ಬಗೆಗಿನ ಒಂದು ಪ್ರತಿಕ್ರಿಯೆಯಿದ್ದು ಇದೇ ಪ್ರಸಂಗವು ವಾಸ್ತವ ಸ್ಥಿತಿಯೊಂದಕ್ಕೆ ಸ್ಪಂದಿಸಿದ ಎರಡು ರೀತಿಗಳನ್ನೂ ಹೇಳುತ್ತದೆಯೆನ್ನುವುದು ನನ್ನ ಅಭಿಪ್ರಾಯ. ಚಪ್ಪಲಿಯಿಲ್ಲದ ವಸ್ತುಸ್ಥಿತಿಯೊಂದು ಮುಗ್ದ ಯುವಕನೊಬ್ಬನ ಕೆಲಸ ಕಳೆದರೆ, ಜಾಣ ಯುವಕನಿಗೆ ಉದ್ಯೋಗ ಭದ್ರತೆಯ ಸಾಧನವೂ ಆಗುತ್ತದೆ. ಅದೇ ಪ್ರಜೆಗಳು ಎರಡು ಕಾರಣಗಳ ಮೂಲವಾಗುತ್ತ ತಮ್ಮಾರಕ್ಕೆ ತಾವು ದಾರುಣವಾಗಿಯೇ ಬದುಕುತ್ತಾರೆ. ಇಡೀ ಪ್ರಸಂಗ ನಮ್ಮ ಸಾಹಿತ್ಯ ಕ್ಷೇತ್ರದ ಜಾಣ ಮತ್ತು ಮುಗ್ಧ ಮುಖಗಳ ಜೊತೆಗೆ ದಾರುಣ ವಸ್ತುಸ್ಥಿತಿಯನ್ನು ಸೂಚಿಸಲು ಸಾಧ್ಯ. ಹರಿಹರಪ್ರಿಯರ ಅಸಹನೆ ಇರುವುದು ಜಾಣ ಲಾಭಕೋರರ ವಿಷಯದಲ್ಲಿ ಮತ್ತು ಆತಂಕ ಇರುವುದು ಬರಿಗಾಲ ಬದುಕಿನ ವಿಷಯದಲ್ಲಿ.

ಅಸಹನೆ ಮತ್ತು ಆತಂಕಗಳ ನಡುವೆ ಇರುವ ಸೂಕ್ಷ್ಮಗೆರೆಯನ್ನು ಕಂಡುಕೊಳ್ಳುವ ಸಂವೇದನಾಶೀಲತೆ ಇದ್ದಾಗ ಆತಂಕ ಮೌಲ್ಯವಾಗುತ್ತ ಅಸಹನೆ ಹಿನ್ನೆಲೆಗೆ ಸರಿಯುತ್ತದೆ. ಸಂಕಟ ಉರಿಯುತ್ತ ಸಿಟ್ಟು ಆರತೊಡಗುತ್ತದೆ. ಹರಿಹರಪ್ರಿಯ ಅವರ ಬರವಣಿಗೆಯುದ್ದಕ್ಕೂ ಅಸಹನೆ – ಆತಂಕ ಮತ್ತು ಸಿಟ್ಟು-ಸಂಕಟಗಳ ನಡುವೆ ತುಯ್ದಾಡುತ್ತ ಆರೋಗ್ಯಕರ ನೆಲೆಗೆ ಹಾರೈಸುವ ತಳಮಳವಿದೆ. ಎಲ್ಲಿ ಆತಂಕ ಮತ್ತು ಸಂಕಟಗಳು ಮುಖ್ಯವಾಗುತ್ತವೊ ಅಲ್ಲಿ ಲೇಖಕನೊಬ್ಬ ಗೆಲ್ಲುತ್ತಾನೆ; ಅಸಹನೆ ಮತ್ತು ಸಿಟ್ಟು ಮಾತ್ರ ಮುಖ್ಯವಾದವನು ಸೊರಗುತ್ತಾನೆ. ಆತಂಕವಿಲ್ಲದ ಅಸಹನೆ, ಸಂಕಟವಿಲ್ಲದ ಸಿಟ್ಟು ಅಪ್ರಸ್ತುತವಾಗುವ ಅಪಾಯವಿರುತ್ತದೆ. ಹರಿಹರಪ್ರಿಯ ಅವರ ಬರವಣಿಗೆಯ ಪ್ರಸ್ತುತತೆ ಇರುವುದು, ಅಸಹನೆಯಿಂದ ಆತಂಕಕ್ಕೆ, ಶುಷ್ಕ ಸಿಟ್ಟಿನಿಂದ ಸಂಕಟಕ್ಕೆ ಹೊರಳುತ್ತಿರುವ ಹಾದಿಯಲ್ಲಿ. ಆ ಹಾದಿಯ ಅನ್ವೇಷಣೆಯಿಂದಲೋ ಎಂಬಂತೆ ಹರಿಹರ ಪ್ರಿಯ ಅವರು ಮೊದಲಿಂದ ತಮಗಿದ್ದ ವಿಶ್ವವಿದ್ಯಾಲಯಗಳ ಅಕಡೆಮಿಕ್ ವಿದ್ವಾಂಸರ ಬಗೆಗಿನ ಸಿಟ್ಟಿಗೆ ಸಿದ್ದಾಂತದ ನೆಲೆ ಒದಗಿಸಲು ಪ್ರಯತ್ನಿಸುತ್ತಾರೆ. ಸಮಕಾಲೀನ ಸಂದರ್ಭಕ್ಕೂ ಇತಿಹಾಸಕ್ಕೂ ಸಂಬಂಧ ಕಲ್ಪಿಸುತ್ತಾರೆ. ನನ್ನ ಮಾತಿನ ಸಮರ್ಥನೆಗಾಗಿ ಇವರ ‘ಬಂಡಾಯ ಮನೋಧರ್ಮ’ ಕೃತಿಯ ‘ಇಂದಿನ ಸಾಹಿತ್ಯ: ಮುಂದಿನ ಹೆಜ್ಜೆ’ ಲೇಖನದ ಈ ಭಾಗವನ್ನು ಪರಿಶೀಲಿಸಬಹುದು:

‘ರಾಜರು ಹೇಗೆ ಅರಸುತನ ತಮ್ಮ ವಂಶದ ಹಕ್ಕು ಎಂದರೆ, ಬ್ರಾಹ್ಮಣರು ಜ್ಞಾನ ತಮ್ಮ ಜನ್ಮಸಿದ್ಧ ಹಕ್ಕು ಅಂದರೆ, ಶ್ರೀಮಂತರು ಹಣ ತಮ್ಮ ತಲತಲಾಂತರದ ಸೊತ್ತು ಎಂದು ಘೋಷಿಸಿದರೆ ಹಾಗೆಯೇ ಅಕಾಡೆಮಿಕ್ ಸಾಹಿತಿಗಳು ಸಾಹಿತ್ಯ ವಿಚಾರ ಸಂಕಿರಣ, ಪರಿಷತ್ತು, ಸಮ್ಮೇಳನ, ಅಕಾಡೆಮಿ ಬಹುಮಾನ- ಸಮಸ್ತವೂ ತಮ್ಮ ಗುತ್ತಿಗೆ ಎಂದು ತೀರ್ಮಾನಿಸಿ ಕೊಂಡರು.

‘ಸಂಸ್ಕೃತದ ಬದಲಿಗೆ ಇಂಗ್ಲಿಷು ತಲೆ ಎತ್ತಿದಂತೆ ಮಠಗಳ ಬದಲಿಗೆ ಕಾಲೇಜು ವಿಶ್ವವಿದ್ಯಾಲಯಗಳು ಹುಟ್ಟಿಕೊಂಡವು. ರಾಜರ ಬದಲಿಗೆ ಶ್ರೀಮಂತರು ಅವತರಿಸಿದರು. ಆಸ್ಥಾನ ಕವಿಗಳ ಬದಲಿಗೆ ನವೀನ ಅಕಾಡೆಮಿಕ್ ಸಾಹಿತಿಗಳು ಜನ್ಮವೆತ್ತಿದರು.’

-ಮೇಲಿನ ಮಾತುಗಳು ನಮ್ಮ ಸಮಕಾಲೀನ ಸಂದರ್ಭದ ವ್ಯಾಖ್ಯಾನವಾಗಿರುವಂತೆ ಚರಿತ್ರೆಯ ವ್ಯಾಖ್ಯಾನವೂ ಆಗುತ್ತವೆ. ಚರಿತ್ರೆಯಲ್ಲಿ ಅನಾರೋಗ್ಯಕರ ಅಂಶಗಳು ಆವರಿಸಿಕೊಂಡು ಉಸಿರುಗಟ್ಟಿಸಿದ್ದಲ್ಲದೆ, ಅದೇ ಅಂಶಗಳು ಬೇರೆ ರೂಪದಲ್ಲಿ ಈಗಲೂ ಅವತರಿಸುತ್ತಿರುವ ‘ಆತಂಕ’ವನ್ನು ಮೇಲಿನ ಮಾತುಗಳಲ್ಲಿ ಕಾಣಲು ಸಾಧ್ಯವಿದೆ. ವಿಶ್ವವಿದ್ಯಾಲಯದ ವಲಯದಿಂದ ವಂಚಿತವಾದ ಅರಿವಿನಿಂದ ಹುಟ್ಟಿದ ಈ ಆತಂಕ ವೈಯುಕ್ತಿಕವೂ ಹೌದು; ಸಾರ್ವತ್ರಿಕವೂ ಹೌದು. ಕೇವಲ ವೈಯಕ್ತಿಕ ಮಟ್ಟದಲ್ಲಿ ನಿಂತಾಗ ‘ಅಸಹನೆ’ ಯಾಗಬಹುದಾದದ್ದು ಸಾರ್ವತ್ರಿಕ ನೆಲೆಯನ್ನು ದಕ್ಕಿಸಿಕೊಂಡಾಗ ‘ಆತಂಕ’ವಾಗುತ್ತದೆ. ಆತಂಕವಾಗುತ್ತಿರುವ / ಹರಿಹರಪ್ರಿಯರು ಅಭಿವ್ಯಕ್ತಗೊಳ್ಳುತ್ತಿರುವ ವಿಧಾನಕ್ಕೆ ಇದೊಂದು ಮಾದರಿಯಾಗಿದೆ.

ಹಾಗಾದರೆ ಇಲ್ಲಿ ಕೆಲಸ ಮಾಡಿರುವ ಹರಿಹರಪ್ರಿಯ ಅವರ ವೈಚಾರಿಕ ನೆಲೆ ಯಾವುದು ? ದಿ|| ದೇವರಾಜ ಅರಸು ಅವರನ್ನು ಕುರಿತ ಇವರ ಅಭಿಪ್ರಾಯದಲ್ಲಿ ಇದಕ್ಕೆ ಉತ್ತರವಿದೆಯೆನ್ನಿಸುತ್ತದೆ. ಸಾಹಿತ್ಯ ಚರ್ಚೆಗೆ ದೇವರಾಜ ಅರಸರ ಬಗೆಗಿನ ಅಭಿಪ್ರಾಯಕ್ಕೂ ಯಾವ ಸಂಬಂಧವೆಂದು ಮೇಲ್ನೋಟಕ್ಕೆ ಅನ್ನಿಸಬಹುದಾದರೂ ಹರಿಹರಪ್ರಿಯರು ಅಪರೂಪಕ್ಕೆ ಮೆಚ್ಚುವ ಅರಸರ ಆಲೋಚನಾ ವಿಧಾನದಲ್ಲಿ ಉತ್ತರವಿದೆಯೆಂದು ನನಗಂತೂ ಸ್ಪಷ್ಟವಾಗಿದೆ. ದೇವರಾಜ ಅರಸರ ಬಗ್ಗೆ ಈ ಲೇಖಕರು ಹೀಗೆ ಬರೆಯುತ್ತಾರೆ :

‘ಮೈಸೂರಿನ ಅರಸು ವಂಶಕ್ಕೆ ಬಹು ದೂರದ ಸಂಬಂಧಿಯಾದ ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿ ಬರುವವರೆಗೆ ದನಿ ಇಲ್ಲದ ಶೂದ್ರ-ದಲಿತ ವರ್ಗಗಳಿಗೆ ಉಸಿರಾಡಲು ಅವಕಾಶವಾಗಿರಲಿಲ್ಲ. ಹಾವನೂರ, ಆನಂತರ ವೆಂಕಟಸ್ವಾಮಿ, ಇದೀಗ ಚಿನ್ನಪ್ಪರೆಡ್ಡಿ ಆಯೋಗದ ವರದಿಗಳು ಇನ್ನೂ ಉಳಿದಿರುವ ವರ್ಣಭೇದದ ಲಾವಾರಸಗಳು ಎಂಬುದನ್ನು ಯಾರೂ ಮರೆಯುವಂತಿಲ್ಲ.’
(‘ಬಂಡಾಯ ಮನೋಧರ್ಮ’ ಕೃತಿಯ ‘ಮಾರ್ಕ್ಸ್’ ಲೋಹಿಯಾ, ಅಂಬೇಡ್ಕರ್ ಹಿನ್ನೆಲೆಯಲ್ಲಿ ಬಂಡಾಯ ಮನೋಧರ್ಮ’ ಲೇಖನದಿಂದ)

ಅರಸು ಅವರು ವಂಚಿತ ಜನಾಂಗಗಳಿಗೆ ದನಿ ಕೊಡುವ, ನೆಲೆ ಒದಗಿಸುವ ಕೆಲಸ ಮಾಡಿದ ಅಪರೂಪದ ಮುಖ್ಯಮಂತ್ರಿಯೆಂಬ ಅಭಿಪ್ರಾಯವನ್ನು ನಾನು ಸಂಪೂರ್ಣ ಒಪ್ಪತ್ತೇನೆ. ಶಕ್ತಿ ರಾಜಕಾರಣದ (Power politics) ಕೇಂದ್ರದಲ್ಲಿದ್ದ ಅರಸರು ಅಧಿಕಾರದ ನೆಲೆಯಿಂದ ಸಮಸ್ಯೆಗಳನ್ನು ನೋಡುವುದರಿಂದ, ಸಾಮಾಜಿಕವಾಗಿ ವಂಚಿತರಾದವರಿಗೆ ಸ್ಥಾನಮಾನ ಕಲ್ಪಿಸುವುದರ ಮೂಲಕ ಬದಲಾವಣೆ ತರುವ ಪ್ರಯತ್ನ ಮಾಡುತ್ತಾರೆ. ಅಧಿಕಾರದ ಹೊರಗಿನ ಹೋರಾಟದ ನೆಲೆಯಿಂದ ಅಧಿಕಾರವನ್ನೂ ಸಮಸ್ಯೆಗಳನ್ನೂ ನೋಡುವ ಕ್ರಮಕ್ಕೂ ಅಧಿಕಾರದ ನೆಲೆಯಲ್ಲೇ ನಿಂತು ನೋಡುವ ಕ್ರಮಕ್ಕೂ ಅಂತರವಿದೆ. ಅರಸರ ಆಲೋಚನಾ ವಿಧಾನದಲ್ಲಿದ್ದ ಬದಲಾವಣೆಯ ಕೇಂದ್ರ ಶಕ್ತಿರಾಜಕಾರಣದಲ್ಲಿದ್ದಂತೆಯೇ ಹರಿಹರ ಪ್ರಿಯರ ಬದಲಾವಣೆಯ ಕೇಂದ್ರ ಸಾಂಸ್ಕೃತಿಕ ಶಕ್ತಿರಾಜಕಾರಣದ ಒಡಲಲ್ಲಿ ಹುಟ್ಟಿದೆ. ಹೀಗಾಗಿ ಇವರ ವಿರೋಧ ವಿಶ್ವವಿದ್ಯಾಲಯದ ವಿದ್ವತ್ತಿಗಲ್ಲ ; ವಿಶ್ವವಿದ್ಯಾಲಯದ ವಿದ್ವಾಂಸರ ಶಕ್ತಿ ರಾಜಕಾರಣಕ್ಕೆ ಮತ್ತು ಅದರ ಕೇಂದ್ರದಿಂದ ದೂರವುಳಿದ ಕಾರಣಕ್ಕೆ. ಇದು ತಪ್ಪು ಎನ್ನುವುದು ನನ್ನ ಅಭಿಪ್ರಾಯವಲ್ಲ. ಸಮಸ್ಯೆಯ ಸಂಪೂರ್ಣ ಪರಿಶೀಲನೆಗೆ ಬದಲು ಶಕ್ತಿರಾಜಕೀಯ ಮತ್ತು ಸ್ಥಾನಮಾನಗಳ ನೆಲೆಯಿಂದ ನೋಡುವ ಒಂದು ಮಾದರಿಯನ್ನು ನಾನಿಲ್ಲಿ ಗುರುತಿಸುತ್ತಿದ್ದೇನೆ. ಅಕಡೆಮಿಕ್ ಸಾಹಿತಿಗಳ ಸ್ವಾಮ್ಯವನ್ನು ವಿರೋಧಿಸುತ್ತಾರೆ ಎಂಬುದಕ್ಕೆ ಅವರ ಬರಹಗಳೇ ಸಾಕ್ಷಿಯಾಗಿವೆ. ಅವರ ಬರಹಗಳನ್ನು ಓದುತ್ತಾ ಹೋದಂತೆ ವಿದ್ವತ್ತಿನ ಹೂರಣ ಒಳಗೆ ಸೇರುತ್ತದೆ. ಅಪಾರ ಅಧ್ಯಯನಗಳ ಫಲಿತಗಳು ಕಣ್ಣೆದುರು ನಿಲ್ಲುತ್ತವೆ. ಆದರೆ ಹರಿಹರಪ್ರಿಯರ ಬರಹಗಳ ಸ್ವರೂಪದಲ್ಲಿರುವ ಒಂದು ವಿಶೇಷವೆಂದರೆ -ಅಕಡೆಮಿಕ್ ಶಿಸ್ತಿನೊಳಕ್ಕೆ ಚಡಪಡಿಸುವ ನಾನ್-ಅಕಾಡೆಮಿಕ್ ನೆಲೆಗಳನ್ನೂ ಒಳಗೊಂಡು ಒಂದು ವಿನ್ಯಾಸವನ್ನು ಹುಟ್ಟಿಸುವ ತೀವ್ರ ಪ್ರಯತ್ನ. ನಾನ್ ಅಕಡೆಮಿಕ್ ನೆಲೆಯಿಂದ ಬಿಡುಬೀಸಾಗಿ ಬರೆಯತೊಡಗಿದಾಗ ಸಹಜವಾಗಿ ಕಾಣುವ ಬರವಣಿಗೆಗೆ ಅಕಡೆಮಿಕ್ ಚೌಕಟ್ಟು ಲಭ್ಯವಾಗುತ್ತ ಹೋದಂತೆ ಏನೋ ಏರುಪೇರಾದ ತಳಮಳದ ಎಳೆಯೊಂದು ಒಳಗೇ ಒದ್ದಾಡುತ್ತಿರುವಂತೆ ಅನ್ನಿಸುತ್ತದೆ. ಅಕಡೆಮಿಕ್ ಅಧ್ಯಯನ ಶೀಲತೆ ಮತ್ತು ನಾನ್ ಅಕಡೆಮಿಕ್ ತೀವ್ರತೆಗಳು ಒಟ್ಟಿಗೆ ಸೇರುತ್ತಿರುವ ಅನುಭವದಲ್ಲಿ ಅಕ್ಷರಗಳು ಆಲೋಚನೆಗಳಾಗುತ್ತ ಹೊಸ ಬಂಧಕ್ಕಾಗಿ ಹಾತೊರೆಯುತ್ತವೆ. ಅಭಿಪ್ರಾಯಗಳು ಈ ಸ್ವರೂಪದ ಭಾಗವಾಗುತ್ತವೆ.

ಈ ವಿಚಿತ್ರ ವಿನ್ಯಾಸದ ಹುಟ್ಟಿಗೆ ಒದಗುತ್ತಿರುವ ವಿಶಿಷ್ಟ ವೇದನೆಯು ಕೇವಲ ವೈಯುಕ್ತಿಕವಲ್ಲವೆನ್ನುವುದು ಗಮನಾರ್ಹ ಸಂಗತಿ. ಸಾಂಸ್ಕೃತಿಕ ಕ್ಷೇತ್ರವನ್ನು ಪ್ರವೇಶಿಸುವ ನಾನ್ ಅಕಡೆಮಿಕ್ ಪ್ರತಿಭೆಗಳು ವಂಚಿತವಾದ ಅರಿವಿನಿಂದ ವೇದನೆಗೆ ಒಳಗಾಗುವ ಸನ್ನಿವೇಶವೊಂದರ ಸಾರ್ವತ್ರಿಕ ನೆಲೆಗಳನ್ನೂ ಇಲ್ಲಿ ಗಮನಿಸಬೇಕು. ಆದರೆ ಇಂಥ ತಳಮಳದ ತೆಕ್ಕೆಯಿಂದ ತಪ್ಪಿಸಿಕೊಳ್ಳುವ ತೀವ್ರತೆಯಲ್ಲಿ ಲೇಖಕನ ಪ್ರಬುದ್ಧತೆ ಅಭಿವ್ಯಕ್ತವಾಗುತ್ತದೆ. ಯಾರಾದರೂ ಒಪ್ಪಲಿಬಿಡಲಿ ಹೊಸ ಒಳನೋಟಗಳ ಒಡನಾಟ ಸಾಧ್ಯವಾಗುತ್ತದೆ. ಹರಿಹರ ಪ್ರಿಯರು ಅಕಡೆಮಿಕ್ ಅಥವಾ ನಾನ್ ಅಕಡೆಮಿಕ್ – ಯಾವುದನ್ನೂ ಲೆಕ್ಕಿಸದೆ ‘ಸಾಹಿತ್ಯ ಎಂದರೆ ಪುಸ್ತಕ ಎನ್ನುವ ಅರ್ಥ ಎಲ್ಲಿದೆಯೊ ಕಾಣೆ’ ಎಂದು ಉದ್ಗರಿಸುತ್ತ ‘ತಮಗಿಂತ, ತಮ್ಮ ಬದುಕಿಗಿಂತ ಸುತ್ತಲ ಪ್ರಜಾ ಜೀವನಕ್ಕಿಂತ ಬರಹ ಮಹತ್ವದ್ದೂ ಶಾಶ್ವತವಾದದ್ದೂ ಎಂಬ ಕಲ್ಪನೆಯುಳ್ಳ ‘ಸೃಜನಶೀಲ ಹುಚ್ಚು’ ಹೇಗೆ ಸರಿಯಲ್ಲವೆಂದು ಪ್ರತಿಪಾದಿಸುವಾಗ (ಬಂಡಾಯ ಮನೋಧರ್ಮ’ದ ‘ಇಂದಿನ ಸಾಹಿತ್ಯ : ಮುಂದಿನ ಹೆಜ್ಜೆ’ ಲೇಖನದಲ್ಲಿ ದೃಢತೆ ಹಾಗೂ ವೈಚಾರಿಕ ಪ್ರಬುದ್ಧತೆ ಕಾಣಿಸುತ್ತದೆ- ಕೊರಗನ್ನು ಕೆಂಡವಾಗಿ ಕೆರಳಿಸುವ ವಿಧಾನಕ್ಕೆ ಬದಲು ಕೊಡವಿಕೊಂಡು ನಿಂತ ಕಣೋಟ ಲಭ್ಯವಾಗುತ್ತದೆ. ಇಂಥದೊಂದು ದಿಕ್ಕನ್ನು ದಕ್ಕಿಸಿಕೊಳ್ಳುವ ದುಡಿತ ಮತ್ತು ತುಡಿತಗಳು ಇವರ ಬರವಣಿಗೆ ಪ್ರಧಾನ ಗುಣಲಕ್ಷಣವೊಂದನ್ನು ನಿರ್ದೇಶಿಸುತ್ತವೆ. ಸ್ಥಾನಮಾನ ವಂಚಿತವಾದ ಭಾವನೆಯ ಬೆಂಕಿಯೊಂದು ಒಳಗನ್ನು ಸುಡುತ್ತಿರುವಂತೆಯೇ ಹುಟ್ಟುವ ವಿಚಾರ ಮತ್ತು ಅಭಿವ್ಯಕ್ತಿ ವಿಧಾನಗಳ ಒಂದು ಪ್ರಮುಖ ಮಾದರಿಯನ್ನು ಉದ್ದಕ್ಕೂ ಕಾಣಲು ಸಾಧ್ಯವಾಗುವ ಬರವಣಿಗೆಯನ್ನು ಹರಿಹರಪ್ರಿಯರು ಕೊಟ್ಟಿದ್ದಾರೆ. ಈ ಪ್ರಮುಖ ಮಾದರಿಯು ಕೆಲವೊಮ್ಮೆ ನೇರ ಅಭಿಪ್ರಾಯಗಳಲ್ಲಿ, ಕೆಲವೊಮ್ಮೆ ಪ್ರತಿಕ್ರಿಯೆಯ ರೂಪದಲ್ಲಿ, ಮತ್ತೊಮ್ಮೆ ಸಿಟ್ಟು ಬಂಧದಲ್ಲಿ ಕಾಣಿಸಿಕೊಳ್ಳುವ ಬಹುಮುಖಿಯಾಗಿದೆ. ಆದರೆ ಅದೇ ಸಂದರ್ಭದಲ್ಲಿ ಜನಮುಖಿಯಾಗಿರುವುದು ಒಂದು ವಿಶೇಷ. ಮತ್ತೊಂದು ಮಾತನ್ನೂ ಇಲ್ಲಿ ಹೇಳಬೇಕು. ಅವಕಾಶ ವಂಚಿತ ಮನಸ್ಥಿತಿಯ ಹತ್ತಾರು ಮುಖಗಳನ್ನು ಕಾಣಿಸುವ ಹರಿಹರಪ್ರಿಯರ ಬರವಣಿಗೆಯಲ್ಲಿ ಮುಖಗಳಿವೆ, ಮುಖವಾಡಗಳಿಲ್ಲ; ಏರಿಳಿತಗಳಿವೆ, ಹಿಂಜರಿತಗಳಿಲ್ಲ. ಹೇಳಬೇಕಾದ್ದನ್ನು ಯಾವುದೇ ಹಿಂಜರಿತವಿಲ್ಲದೆ ಹೇಳುತ್ತಾರೆ. ಅದಕ್ಕೆ ಪೂರಕ ಸಾಮಗ್ರಿಯನ್ನು ಒದಗಿಸುತ್ತಾರೆ; ಸಮರ್ಥನೆಯ ಧಾಟಿಯಲ್ಲಿ ಮಂಡಿಸುತ್ತಾರೆ. ಆದರೆ ಇದಿಷ್ಟೇ ಅವರ ಬರವಣಿಗೆಯಲ್ಲ.

ಹರಿಹರಪ್ರಿಯ ನಮ್ಮ ನಡುವೆ ಬರೆಯುತ್ತಿರುವ ಪ್ರತಿಭಾವಂತ ಗದ್ಯ ಲೇಖಕರು ಎಂದು ಹೇಳುವುದು ಕ್ಲೀಷೆಯ ಮಾತಾದೀತು. ಹಾಗೆ ನೋಡಿದರೆ ಪ್ರತಿಭೆಯನ್ನು ದೃಢವಾಗಿ ಪ್ರಕಟಿಸುತ್ತಲೇ ಪ್ರತಿಭೆಯ ಮೇಲೆ ಎರಗುವ ಅನ್ಯಶಕ್ತಿಸ್ಥಾನಗಳ ದಾಳಿಯನ್ನು ಎದುರಿಸುವ ಅರಿವಿನಿಂದ ಅಭಿವ್ಯಕ್ತಿಸುವ ಗಟ್ಟಿತನ ಇವರದು. ನನ್ನ ಈ ಮಾತಿಗೆ ಸಮರ್ಥನೆಯಾಗಿ ಇವರ ‘ಬದುಕಗೊಡದ ಜನ’ ಕಾದಂಬರಿಯನ್ನು ನೋಡಬಹುದು. ತೀರಾ ನೇರವಾಗಿ, ಸರಳವಾಗಿ ಕಾಣುವ ‘ಬದುಕ ಗೊಡದಜನ’ ಎಂಬ ಶೀರ್ಷಿಕೆಯು ಹರಿಹರಪ್ರಿಯರ ಭಾವನೆ ಮತ್ತು ಬುದ್ದಿಗಳಲ್ಲಿ ಬೆರೆತ ಒಂದು ವಿಧಿವಿಧಾನದಂತೆ ನನಗೆ ಕಾಣಿಸುತ್ತದೆ. ಈ ಕಾದಂಬರಿಯಲ್ಲಿ ಬಡ ಬ್ರಾಹ್ಮಣ ಯುವಕ ನೊಬ್ಬನ ಪ್ರಾಮಾಣಿಕ ಚಡಪಡಿಕೆ ಮತ್ತು ಪ್ರತಿಭಟನೆಯ ನೆಲೆಗಳನ್ನು ಶೋಧಿಸುವ ಪ್ರಯತ್ನವಿದೆ. ಇಲ್ಲಿ ನಮ್ಮ ಸಾಮಾಜಿಕ ಆರ್ಥಿಕ ಸಂದರ್ಭಗಳ ಸಮಗ್ರ ಶೋಧವಿದೆಯೆಂದಾಗಲಿ, ಇದು ಹರಿಹರಪ್ರಿಯರ ಬರವಣಿಗೆಯ ಪ್ರಬುದ್ಧ ಉದಾಹರಣೆಯೆಂದಾಗಲಿ ಹೇಳಲಾಗದು. ಪ್ರತಿಭಟನೆ ಯೆನ್ನುವುದನ್ನು ಕೆಳಜಾತಿ-ವರ್ಗಗಳ ನೆಲೆಯಿಂದ ಕಾಣುವ, ಅಭಿವ್ಯಕ್ತಿಸುವ ವಾತಾವರಣದ ನಡುವೆ ಬ್ರಾಹ್ಮಣ ಯುವಕನನ್ನು ಕೇಂದ್ರವಾಗಿಟ್ಟುಕೊಂಡು ಅದೇ ಆಶಯಗಳನ್ನು ಹೇಳ ಹೊರಡುವಾಗ ಯಾವುದಾದರೂ ವೈಚಾರಿಕ ಏರಿಳಿತಗಳನ್ನು ಗುರುತಿಸಬಹುದು; ಆದರೆ ವೈಚಾರಿಕ ಹಿಂಜರಿಕೆಯನ್ನು ಗುರುತಿಸಲಾಗದು; ಇದೇ ಹರಿಹರಪ್ರಿಯರ ಬರವಣಿಗೆಯ ಒಂದು ವಿಧಾನ. ಬದುಕಗೊಡದ ಜನರ ನಡುವಿನ ಹುಡುಗನಾಗಿ ತಮ್ಮನ್ನು ಕಂಡುಕೊಳ್ಳುವ ಈ ಲೇಖಕರು ಅನ್ಯ ಸ್ಥಾನಗಳ ಪ್ರತಿಭಟನೆಯ ಮೂಲಕ ತನ್ನ ಸ್ಥಾನವನ್ನು ಗುರುತಿಸಿಕೊಳ್ಳುವ ಸಮಸ್ಯೆಯನ್ನು ಎದುರಿಸುತ್ತಿರುವಂತಿದೆ. ಅನುಭವ ಪ್ರಾಮಾಣ್ಯದ ದೃಷ್ಟಿಯಿಂದ ಬ್ರಾಹ್ಮಣಯುವಕನನ್ನು ನಾಯಕ ನನ್ನಾಗಿ ಮಾಡಿದ ಈ ಕೃತಿಯಲ್ಲಿ ಬ್ರಾಹ್ಮಣ ಪರ ಆಶಯಗಳಿಲ್ಲವೆಂಬುದು ಲೇಖಕರ ಬಗೆಗಿನ ವ್ಯಾಖ್ಯಾನವೂ ಆಗುತ್ತದೆ. ಹೀಗಾಗಿ ‘ಬದುಕಗೊಡದ ಜನ’ ಶೀರ್ಷಿಕೆಯು ಹರಿಹರ ಪ್ರಿಯರ ಚಿಂತನ ಕ್ರಮದ ನೆಲೆಗಳನ್ನು ಧ್ವನಿಸುವ ಸಂಕೇತವೂ ಬರವಣಿಗೆಯ ಚಿಂತನ ಕೇಂದ್ರಗಳನ್ನು ಕಾಣುವ ದಿಕ್ಕೂಚಿಯೂ ಆಗುತ್ತದೆ.

ಇಲ್ಲೀವರೆಗೆ ನಾನು ಹೇಳಿದ್ದು ಹರಿಹರ ಪ್ರಿಯರ ಬರವಣಿಗೆಯ ಒಟ್ಟು ಸ್ವರೂಪವನ್ನು ಕುರಿತು. ಇವರು ಬರೆದಿರುವ ಬಹು ಸಂಖ್ಯಾಕೃತಿಗಳ ಒಳ ಹೊರಗನ್ನು ನೋಡುತ್ತ ಹೋದಂತೆ ವೈವಿಧ್ಯಮಯ ವಸ್ತು ಪ್ರಪಂಚ ಎದುರಿಗೆ ನಿಲ್ಲುತ್ತದೆ. ವಿವಿಧ ಸಂದರ್ಭಗಳ ಒತ್ತಡದಲ್ಲಿ ಪತ್ರಿಕಾ ಬರಹಗಳ ರಚನೆ ಮಾಡಿದ್ದಲ್ಲದೆ ಸ್ವತಂತ್ರವಾಗಿ ಬರೆಯಬೇಕೆನ್ನಿಸಿ ರಚಿಸಿದ ಬರಹಗಳೂ ಈ ಅಗಾಧ ‘ಪುಸ್ತಕ ಮನೆ’ಯಲ್ಲಿ ಸೇರಿಕೊಂಡಿವೆ. ಎಲ್ಲ ಕೃತಿ-ಆಕೃತಿಗಳ ನಡುವೆ ಸಾಮಾನ್ಯ ಎಳೆಯೊಂದನ್ನು ಗುರುತಿಸಲು ಸಾಧ್ಯವೆನ್ನುವುದು ಇಲ್ಲಿ ಗಮನಿಸಬೇಕಾದ ಅಂಶ. ವಿವಿಧ ಪ್ರಕಾರಗಳಲ್ಲಿ ಒಟ್ಟಿಗೆ ಕೆಲಸ ಮಾಡಿರುವ ಈ ಲೇಖಕರಿಗೆ ಐಡೆಂಟಿಟಿ ಸಮಸ್ಯೆ ಎದುರಾಗಿ ಕಾಡಿಸಿರುವಂತಿದೆ. ಈ ದಿಕ್ಕಿನಲ್ಲಿ ನಡೆಸುವ ಹುಡುಕಾಟವನ್ನು ಎಲ್ಲ ಕೃತಿಗಳಲ್ಲೂ ಕಾಣಬಹುದಾಗಿದೆ. ಇದಕ್ಕಿಂತ ಮುಖ್ಯವಾದ ಸಂಗತಿಯೆಂದರೆ ಇವರ ಕೃತಿಗಳ ಹಿಂದೆ ಕೆಲಸ ಮಾಡುವ ಪರಂಪರೆ ಮತ್ತು ಸಮಕಾಲೀನ ಸಂದರ್ಭದ ಸಂಬಂಧ, ಪರಂಪರೆಯನ್ನು ಕಟ್ಟಿಕೊಡುವ ಉಮೇದಿನ ಜೊತೆಗೆ ನಮ್ಮ ಸಂದರ್ಭದಲ್ಲಿ ಅದಕ್ಕಿರುವ ಪ್ರಸ್ತುತತೆಯನ್ನು ಹುಡುಕುವ ವಿಧಾನವೊಂದು ಇವರ ಪುಸ್ತಕಗಳಲ್ಲಿ ಆಕೃತಿ ಪಡೆದಿದೆ; ಯಾವುದೇ ಪ್ರಕಾರದಲ್ಲಿ ಕೆಲಸ ಮಾಡಿದರೂ ಈ ಅಂಶ ಸಾಮಾನ್ಯವಾಗಿ ಎದ್ದು ಕಾಣುತ್ತದೆ.

ಈ ಅಧ್ಯಯನದ ಅನುಕೂಲಕ್ಕೆಂದು – ಅಗತ್ಯವೆನ್ನಿಸಿದರೆ ಇವರ ಸಾಹಿತ್ಯವನ್ನು ಹೀಗೆ ವಿಂಗಡಿಸಬಹುದು:
೧) ಕುವೆಂಪು ಸಂಬಂಧಿ ಸಾಹಿತ್ಯ
೨) ವ್ಯಕ್ತಿತ್ವ ದರ್ಶನದ ರಚನೆಗಳು
೩) ಕಾದಂಬರಿ (ಒಂದು ಕೃತಿ)
೪) ವಯಸ್ಕರ ಮಕ್ಕಳ ಹನಿಗತೆಗಳು (ಒಂದು ಕೃತಿ)
೫) ಭಾಷಾಂತರ
೬) ವರದಿ – ವಿಶ್ಲೇಷಣೆ
೭) ವಿಚಾರ – ವಿಮರ್ಶೆ

ಮೊದಲೇ ಹೇಳಿದಂತೆ ಈ ವಿಭಾಗೀಕರಣವು ಅಧ್ಯಯನದ ಅನುಕೂಲಕ್ಕೆ ಮಾತ್ರ. ಒಳಹೊಕ್ಕು ನೋಡಿದರೆ ನಾನು ಈಗಾಗಲೇ ಪ್ರಸ್ತಾಪಿಸಿದ ಸಾಮಾನ್ಯ ಎಳೆ ಸಿಗುತ್ತದೆ. ಕುವೆಂಪು ಅವರ ಬಗ್ಗೆ ಇವರು ಮಾಡಿದ ಕೆಲಸವನ್ನೇ ನೋಡೋಣ: ಇವರು ಕುವೆಂಪು, ಕುವೆಂಪು ಪತ್ರಗಳು, ಕುವೆಂಪು ರಾಮಾಯಣ ಬರಹಗಾರರ ಪ್ರತಿಕ್ರಿಯೆ – ಇವುಗಳಲ್ಲದೆ- ‘ಕುವೆಂಪು ಒಲವು ನಿಲುವು’ ಎಂಬ ಒಂದು ದೊಡ್ಡ ಕೃತಿಯನ್ನೂ ಕೊಟ್ಟಿದ್ದಾರೆ. ಕುವೆಂಪು ಅವರನ್ನು ಅವರದೇ ಆದ ವಿಚಾರಗಳ ಮೂಲಕ ನಮ್ಮೆದುರು ನಿಲ್ಲಿಸುವ ಈ ಕೃತಿ ಅಪಾರ ಅಧ್ಯಯನ ಶೀಲತೆಯ ಫಲವಾಗಿ ಮೂಡಿದೆ. ಕುವೆಂಪು ಸಾಹಿತ್ಯದ ಮೂಲಕ ಸಾಹಿತ್ಯಕ ಕ್ರಿಯಾಶೀಲತೆಯನ್ನು ತೋರ ತೊಡಗಿದ ಹರಿಹರಪ್ರಿಯರು ಸಹಜವಾಗಿಯೇ ಕುವೆಂಪು ವಿಚಾರಧಾರೆಯಿಂದ ಪ್ರೇರಿತರಾಗಿದ್ದಾರೆ. ಆದರೆ ಪ್ರಭಾವ ವಲಯದ ಜಡ ಜಾಗದಲ್ಲಿ ಕೂತುಬಿಡುವ ಜಾಯಮಾನ ಇವರದಲ್ಲವಾದ್ದರಿಂದ ಬೇರೆ ರೀತಿಯ ಸಾಂಸ್ಕೃತಿಕ ಕ್ರಿಯೆಗೆ ತೊಡಗಿ ತಮ್ಮ ಛಾಪು ಮೂಡಿಸುವ ದೃಢ ಪ್ರಯತ್ನ ಮಾಡಿದ್ದಾರೆ. ಇವರ ಎಲ್ಲ ಕೃತಿಗಳನ್ನೂ ಓದುತ್ತ ಹೋದಂತೆ ಚಿಂತನೆಯನ್ನು ಒಂದು ಚಲನಶೀಲ ಪ್ರತಿಕ್ರಿಯೆಯನ್ನಾಗಿ ಪರಿಭಾವಿಸುವ ಕ್ರಮವೊಂದು, ಕ್ರಮವಾಗಿ ಬೆಳೆಯುತ್ತ ಬಂದಿರುವುದನ್ನು ಕಾಣಬಹುದು. ಭಾಷಾಂತರದ ಆಯ್ಕೆಯಾಗಬಹುದು, ಮಕ್ಕಳ ಕತೆಯಾಗಬಹುದು, ಪ್ರತಿಕ್ರಿಯಾತ್ಮಕ ರಚನೆಗಳಾಗಬಹುದು – ಎಲ್ಲ ಕಡೆ ಕಾಣುವ ಚಲನಶೀಲ
ಗುಣವೇ ಮುಖ್ಯ ಚೈತನ್ಯವಾಗಿದೆ. ಭಾಷಾಂತರ ಮಾಡಿದ ‘ಜಾಬಾಲಿ’ ‘ತೇಜೋರೇಖೆ’ಗಳಂತಹ ಪುಸ್ತಕಗಳನ್ನೇ ನೋಡಿ. ‘ಜಾಬಾಲಿ’ಯ ವಸ್ತುವೇ ಚಲನಶೀಲವಾದದ್ದು, ‘ತೇಜೋರೇಖೆ’ಗಳ ಆಕಾರವೇ ವಿಚಾರಶೀಲವಾದದ್ದು. ‘ತೇಜೋರೇಖೆಗಳು’ – “ಗದ್ಯಕವಿತೆಗಳಲ್ಲ: ಪದ್ಯಕವಿತೆಗಳಂತು ಅಲ್ಲವೇ ಅಲ್ಲ. ವಿಷಯವನ್ನು ವಿಷದ ಪಡಿಸುವ ಭಾವಗಳು ಮಾತ್ರವೇ ಆಗಿವೆ”ಯೆಂಬ ಮೂಲ ಲೇಖಕರ (ಸಂಜೀವದೇವ್) ಮಾತುಗಳು ವಿಶಿಷ್ಟ ಆಕಾರದ ಕಡೆಗೆ ಗಮನ ಸೆಳೆಯುತ್ತವೆ. ವಿಶಿಷ್ಟವಾದುದನ್ನು ಮಾಡುವ, ವಿಶಿಷ್ಟವಾಗುವ, ಹಂಬಲ-ಹರಿಹರಪ್ರಿಯರಿಂದ ಇಂಥ ಭಾಷಾಂತರಗಳನ್ನು ಮಾಡಿಸುತ್ತದೆ. ಹೊಸ ಹುಡುಕಾಟಕ್ಕೆ ತೊಡಗಿಸುತ್ತದೆ; ಚಡಪಡಿಕೆಯಿಂದ ತುಡಿಯುವ ಪ್ರತಿಭೆಯನ್ನು ಕಾಣಿಸುತ್ತದೆ. ಹೀಗಾಗಿ ಕುವೆಂಪು ಹಾಗೂ ಅನುವಾದಗಳನ್ನು ಹೊರತುಪಡಿಸಿ ಹರಿಹರಪ್ರಿಯರು ತಮ್ಮ ಸ್ಥಾನ ಕಂಡುಕೊಳ್ಳುವ ಕೃತಿ ರಚನೆಗಳಿಗೆ ಕೈ ಹಾಕುತ್ತಾರೆ. ‘ತಿಳಿಯ ಹೇಳುವೆ ಕೃಷ್ಣ ಕತೆಯನು’ ಎಂಬ ಕತೆಗಳನ್ನು ಮಕ್ಕಳ ಕತೆಗಳೆಂದು ಮಾತ್ರ ಸೂಚಿಸದೆ ‘ವಯಸ್ಕರ ಮಕ್ಕಳ ಹನಿ ಕತೆಗಳು’ ಎಂದು ನಿರ್ದೇಶಿಸುತ್ತಾರೆ. ಈ ಕತೆಗಳಲ್ಲಿರುವ ವಯಸ್ಕರು ಮಕ್ಕಳಿಂದ ಪ್ರಶ್ನೆಗಳನ್ನು ಎದುರಿಸುತ್ತ ಉತ್ತರ ಕಂಡುಕೊಳ್ಳುವ ಕ್ರಿಯೆಯು ಒಂದು ವಿಶೇಷ ಮಾದರಿಯಾಗಿದೆ. ಸಿದ್ದನಿರ್ದೆಶನದಂತೆ ರೂಪ ಕಾಣುವ ಈ ಕತೆಗಳಲ್ಲಿ ಮಕ್ಕಳೇ ಇತ್ಯಾತ್ಮಕ ಪ್ರತಿಕ್ರಿಯೆಗಳನ್ನು ಪ್ರಕಟಿಸುತ್ತಾರೆ. ಈ ಮಾದರಿಗಾಗಿ ಉಳಿದ ವಿವರಣೆಗಳು ಒಳ ಸೇರುತ್ತವೆ. ಇಲ್ಲಿ ಹಿರಿಯರಿಂದ ಮಕ್ಕಳು ತಿಳುವಳಿಕೆ ಪಡೆಯುವ ವಿಧಾನಕ್ಕೆ ಬದಲು ಮಕ್ಕಳ ಪ್ರತಿಕ್ರಿಯೆಗಳಿಂದ ಹಿರಿಯರೂ ತಿಳುವಳಿಕೆ ಪಡೆಯುವ ಮಾದರಿಯನ್ನು ಅಳವಡಿಸಲಾಗಿದೆ. ಹೀಗಾಗಿ ಈ ಕತೆಗಳು ಏಕಕಾಲಕ್ಕೆ ಮಕ್ಕಳವೂ ಹೌದು ವಯಸ್ಕರವೂ ಹೌದು. ಇದೇ ಹರಿಹರ ಪ್ರಿಯರ ಪ್ರಯೋಗಶೀಲ ಮಾದರಿ.

ಈ ಸಂದರ್ಭದಲ್ಲಿ ‘ಸಾಂಸ್ಕೃತಿಕ ದಾಖಲೆಗಳು’ ಪುಸ್ತಕವನ್ನೂ ಜ್ಞಾಪಿಸಿಕೊಳ್ಳಬಹುದು. ಇದರಲ್ಲಿ ಅನೇಕ ಸಾಂಸ್ಕೃತಿಕ ವರದಿಗಳಿವೆ. ಆದರೆ ವಿಶ್ಲೇಷಣೆಯ ಎಳೆಯನ್ನೂ ಒಳಗೊಳ್ಳುವುದರಿಂದ ಶುಷ್ಕ ವರದಿಗಳಾಗುವ ಅಪಾಯದಿಂದ ಪಾರಾಗಿವೆ. ದಾಖಲೆಯನ್ನು ಸ್ಥಾಪಿಸುವ ಶಕ್ತಿ ಬಹುಪಾಲು ವಿಶ್ಲೇಷಣಾತ್ಮಕ ವರದಿಗಳಿಗೆ ಇಲ್ಲ. ಆದರೆ ‘ಪರ್ವ’ವನ್ನು ಕುರಿತ ಸಮಾರಂಭ ಮತ್ತು ‘ಅಖಿಲ ಭಾರತ ಕನ್ನಡ ನಾಟಕೋತ್ಸವ’ಗಳ ವರದಿಗಳು ಕೇವಲ ವರದಿಗಳಾಗದೆ, ವಿಸ್ತಾರಗೊಳ್ಳುತ್ತವೆ. ವರದಿ ಮತ್ತು ವಿಶ್ಲೇಷಣೆಗಳ ಸಂಬಂಧವನ್ನು ನಾನಿಲ್ಲಿ ಪ್ರಸ್ತಾಪಿಸುತ್ತಿರುವುದಕ್ಕೂ ಹರಿಹರಪ್ರಿಯರ ಒಟ್ಟು ಸಾಹಿತ್ಯದಲ್ಲಿ ಸಂಬಂಧವಿದೆ. ಅವರ ಕೃತಿಗಳಲ್ಲಿನ ಅನೇಕ ರಚನೆಗಳು ಪತ್ರಿಕೆಗಳಿಗಾಗಿ ಬರೆಯಲ್ಪಟ್ಟಿವೆ. ಸಮಕಾಲೀನ ಇತಿಹಾಸ, ಸಾಹಿತ್ಯವು ಜೀವನವು, ಉಪಾದೇಯ -ಹೀಗೆ ಪುಸ್ತಕ ಪಟ್ಟಿಯನ್ನೂ ಕೊಡಬಹುದು. ಪತ್ರಿಕೆಗಳಿಗೆ ಬರೆಯುವಾಗ ಎದುರಾಗುವ ಸಮಸ್ಯೆಗಳ ಸುಳಿ ಇವರ ಬರಹಗಳಲ್ಲೂ ಇದೆ. ನಿರ್ದಿಷ್ಟ ಕಾಲಾವಧಿ, ಪುಟ ಮಿತಿಗಳ ನಡುವೆ ಅನ್ನಿಸಿದ್ದನ್ನು ಅನ್ನಿಸಿದ ಹಾಗೆಯೇ ಇಡಬಹುದಾದರೂ ಅಭಿವ್ಯಕ್ತಿ ವಿಧಾನವೊಂದನ್ನು ಪೂರ್ಣ ಪಡೆಯುವ ದಿಕ್ಕಿನಲ್ಲಿ ಹತ್ತಾರು ಅಡೆತಡೆಗಳಿರುತ್ತವೆ. ಪತ್ರಿಕೆ, ಓದುಗ ಮತ್ತು ವಸ್ತುಗಳೊಂದಾಗಿ ಆಕಾರ ಪಡೆಯುವ ಪ್ರಕ್ರಿಯೆಗೆ ಪ್ರಬುದ್ಧತೆ ಲಭ್ಯವಾದರೆ ವರದಿಯು ವಿಶ್ಲೇಷಣೆಯಾಗುತ್ತದೆ; ವಿಶ್ಲೇಷಣೆಯು ವಿಶಿಷ್ಟ ಆಕೃತಿ ಪಡೆಯುತ್ತದೆ. ಸಿದ್ದ ಆಕೃತಿಯನ್ನು ಮೀರುವ ಅಂಕಣ ಬರಹಗಳು ಅಪರೂಪವಾಗುತ್ತಿರುವ ಈ ಸಂದರ್ಭದಲ್ಲಿ ಹರಿಹರಪ್ರಿಯರು ಅಂಕಣದಲ್ಲೂ ‘ಹರಿಹರಪ್ರಿಯ ಪಟ್ಟು’ಗಳನ್ನು ಬಿಟ್ಟಿಲ್ಲ ಎನ್ನುವುದು ಸಮಾಧಾನದ ಸಂಗತಿಯಾದರೂ ವರದಿ ಮತ್ತು ವಿಶ್ಲೇಷಣೆಗಳ ನಡುವೆ ತುಯ್ದಾಡುವ ವಿಘಟಿತ ನೆಲೆಯನ್ನು ಸಂಪೂರ್ಣ ಮೀರಲು ಸಾಧ್ಯವಾಗಿಲ್ಲ. ಆದರೆ ಒಟ್ಟಾರೆಯಾಗಿ ಒಂದು ನಿರ್ದಿಷ್ಟ ಆಶಯಕ್ಕೆ ಆಕೃತಿ ಕೊಡುವ ಉಮೇದು ಕಂಡು ಬರುತ್ತದೆ. ಬೇಕಾದವರನ್ನು ಹೊಗಳಿ ಅಟ್ಟಕ್ಕೇರಿಸಲು, ಬೇಡವಾದವರನ್ನು ತೆಗಳಿ ತಂಗಳು ಮಾಡಲು ಹವಣಿಸುವ ಹಸಿತನವು ಹರಿಹರಪ್ರಿಯರ ಪತ್ರಿಕಾ ಬರಹಗಳಲ್ಲಿ ಇಲ್ಲ. ವಿಚಾರ ವಿರೋಧ ವಿದೆಯಾದರೂ ವ್ಯಕ್ತಿ ಭಂಜಕ ಪ್ರವೃತ್ತಿಗಾಗಿ ಪತ್ರಿಕೆಗಳನ್ನು ಬಳಸಿಕೊಂಡಿಲ್ಲ (ಅರ್ಥಾತ್ ಅಂಕಣಗಳನ್ನು ಬಳಸಿಲ್ಲ) ಎಂಬುದು ಅವರ ಸಾಂಸ್ಕೃತಿಕ ಜವಾಬ್ದಾರಿಯ ಸಂಕೇತವಾಗಿದೆ. ‘ಉಪಾದೇಯ’ದ ಅವರ ರಚನೆಗಳನ್ನು ನೋಡಿದರೆ ಸಾಕು. ವ್ಯಕ್ತಿ, ಪಂಥ ಇತ್ಯಾದಿಗಳನ್ನು ಮುಖ್ಯ ಮಾನದಂಡ ಮಾಡಿಕೊಳ್ಳದೆ, ಹಿರಿಯ – ಕಿರಿಯ ಲೇಖಕರೆನ್ನದೆ ತಮಗೆ ಇಷ್ಟವೆನಿಸಿದ ಕೃತಿಗಳ ಬಗ್ಗೆ ಬರೆದ ಬರಹಗಳು ಇದರಲ್ಲಿ ಸಂಕಲಿತವಾಗಿವೆ. ಕನ್ನಡ ಓದುಗನೊಬ್ಬನಿಗೆ ತೆರೆದ ಬಾಗಿಲುಗಳಾಗುವ ಈ ರಚನೆಗಳು ಒಟ್ಟಾರೆಯಾಗಿ ಒಂದು ಜವಾಬ್ದಾರಿಯನ್ನು ನಿರ್ವಹಿಸುತ್ತವೆ; ಇದಕ್ಕಿಂತ ಹೆಚ್ಚು ವ್ಯಾಪ್ತಿಯನ್ನು ಪಡೆದ ರಚನೆಗಳು ‘ಸಾಹಿತ್ಯವು ಜೀವನವು’ ಕೃತಿಯಲ್ಲಿ ಸಂಕಲಿತವಾಗಿವೆ. ಕಡೆಂಗೋಡ್ಲು ಶಂಕರ ಭಟ್ಟರ ಕಾವ್ಯ, ಚದುರಂಗರ ಕಾದಂಬರಿಗಳು, ಸು.ರಂ. ಎಕ್ಕುಂಡಿಯವರ ಕಾವ್ಯ – ಈ ಲೇಖನಗಳು ವರದಿ ವಿಶ್ಲೇಷಣೆಯ ವಿಧಾನವನ್ನೂ ಮೀರಿದ ವಿಮರ್ಶೆಗಳಾಗಿವೆ. ಇವು ಅಂಕಣ ಬರಹಗಳೋ ಅಲ್ಲವೋ ನನಗೆ ಗೊತ್ತಿಲ್ಲ. ಆದರೆ ಈ ಲೇಖನಗಳಿರುವ ಕೃತಿಯಲ್ಲಿ ಕೆಲವು ಅಂಕಣ ಬರಹಗಳೂ ಇದ್ದು ಅವುಗಳಿಗೆ ಹೋಲಿಸಿದಾಗ ಈ ಬರಹಗಳು ಖಂಡಿತ ಬೇರೊಂದು ಮಾದರಿಯಾಗಿ ನಿಲ್ಲುತ್ತವೆ. ‘ಸಮಕಾಲೀನ ಇತಿಹಾಸ ಕೃತಿಯ ಹೆಸರೇ ವಿವಿಧ ಬರಹಗಳ ಹಿಂದಿನ ಒತ್ತಾಸೆಯನ್ನು ಹೇಳುತ್ತದೆ. ಹರಿಹರ ಪ್ರಿಯರಿಗೆ ಪರಂಪರೆಯನ್ನು ಕಂಡುಕೊಳ್ಳುವುದೆಂದರೆ ಚರಿತ್ರೆಯನ್ನು ಕಟ್ಟಿಕೊಳ್ಳುವುದು, ಕಟ್ಟಿಕೊಡುವುದು, ಕಂಡುಕೊಳ್ಳುವುದು ಎಂದೇ ಅರ್ಥ. ಚರಿತ್ರೆಯೆಂದರೆ ರಾಜ ಮಹಾರಾಜರ ಜೀವನವಾಗಬೇಕಿಲ್ಲ. ನಾವು ಹುಟ್ಟುವುದಕ್ಕೆ ಮುಂಚೆ ಹಾಗೂ ಹುಟ್ಟಿದ ಮೇಲೆ ನಮ್ಮ ಹಿಂದೆ ಮತ್ತು ನಮ್ಮ ಒಳಗೆ ಸದಾ ಚಲನೆಗೊಳ್ಳುವುದು ಚರಿತ್ರೆಯೇ. ಈ ತಿಳುವಳಿಕೆಯಿಂದ ಹರಿಹರಪ್ರಿಯರ ರಚನೆಗಳಿಗೆ ಚಾರಿತ್ರಿಕ ಒತ್ತಾಸೆಯೊಂದು ಲಭ್ಯವಾಗುತ್ತದೆ. ಈ ಒತ್ತಾಸೆಯ ಒಳ ಸೆಳೆತಗಳು ಸಮಕಾಲೀನ ಸಂದರ್ಭದಲ್ಲಿ ಇರುವುದರಿಂದ ಅವರಿಗೆ ‘ಸಮಕಾಲೀನ ಇತಿಹಾಸ’ ಮುಖ್ಯವಾಗುತ್ತದೆ. ಅವರು ತಮ್ಮ ಬರಹಗಳ ಮೂಲಕ ಪರಿಚಯಿಸುವ ವ್ಯಕ್ತಿತ್ವಗಳ ವೈವಿಧ್ಯ ಮತ್ತು ಸಾಹಿತ್ಯ ಕೃತಿಗಳ ಆಯ್ಕೆಯ ಹರಹುಗಳನ್ನು ಗಮನಿಸಿದ ಯಾರಿಗಾದರೂ ಪರಂಪರೆ ಮತ್ತು ಚರಿತ್ರೆಯ ಜನ ಸಂಬಂಧಗಳ ಸಮಕಾಲೀನ ಒತ್ತಾಸೆ ವ್ಯಕ್ತವಾಗುತ್ತದೆ. ಅನುವಾದಿಸಿದ ‘ಅಂತಾರಾಷ್ಟ್ರೀಯ ವ್ಯಕ್ತಿತ್ವಗಳು’ ಸ್ವತಂತ್ರ ಕೃತಿಗಳಾದ ‘ದೇಸೀಯರು’ ‘ಕನ್ನಡದ ಹೇಮಾ ಹೇಮಿಗಳು’ – ಇವೇ ಮುಂತಾದ ಕೃತಿಗಳಲ್ಲಿ ಕಟ್ಟಿಕೊಡುವ ‘ವ್ಯಕ್ತಿತ್ವಗಳು’ ಅಪರೂಪವಾದವು. ಈ ಕೃತಿಗಳಲ್ಲದೆ ಇತರೆ ಕೃತಿಗಳಲ್ಲೂ ವ್ಯಕ್ತಿತ್ವ ದರ್ಶನದ ಉಮೇದು ಇದೆ. ಇದು ಕೃತಿ ವಿಶ್ಲೇಷಣೆಯ ಮೂಲಕ ಆಗಬಹುದು; ನೇರ ವ್ಯಕ್ತಿತ್ವ ವಿಶ್ಲೇಷಣೆಯಾಗಬಹುದು. ಒಟ್ಟಿನಲ್ಲಿ ಪರಂಪರೆ, ಚರಿತ್ರೆ ಮತ್ತು ವ್ಯಕ್ತಿತ್ವಗಳು ಮುಪ್ಪರಿಗೊಳ್ಳುವ ವಿಚಾರ ವಿಧಾನಗಳನ್ನು ಹರಿಹರ ಪ್ರಿಯರ ವಿಶೇಷತೆ ಎಂದು ಗುರುತಿಸಬಹುದು. ಈ ದಿಕ್ಕಿನಲ್ಲಿ ಅವರು ವ್ಯಕ್ತಪಡಿಸುವ ಕೆಲವು ಅಭಿಪ್ರಾಯಗಳು ಕಚ್ಚಾ ಎನಿಸಬಹುದು. ಆದರೆ ಅವು ಅಚ್ಚುಕಟ್ಟಾದ ಕಟ್ಟಾ ಅಭಿಪ್ರಾಯಗಳಾಗಿರುತ್ತವೆ. ಕೆಲವೊಮ್ಮೆ ಪ್ರಶ್ನೆಗಳಿಗಾಗಿ ಕೆಣಕುತ್ತವೆ. ಈ ಪ್ರಶ್ನೆಗಳೂ ಪರಿಶೋಧಕಕ್ಕೆ ಪೂರಕವಾಗುವುದೂ ಉಂಟು. ಅವರ ‘ಬಂಡಾಯ ಮನೋಧರ್ಮ’ ಕೃತಿಯ ಒಂದೆರಡು ಪ್ರಶ್ನೆಗಳನ್ನು ಇಲ್ಲಿ ನೋಡಬಹುದು :

‘ಅನಂತಮೂರ್ತಿ, ತೇಜಸ್ವಿ, ಲಂಕೇಶ್ – ಒಂದು ತತ್ವ, ಚಳುವಳಿಗೆ ಬದ್ಧವಾಗಿರುವಾಗಲೇ ಜನ – ದೂರವಾದ ಕೃತಿ ಕೇಂದ್ರಿತ ಬರವಣಿಗೆ ನಡೆಸಿದ್ದು ಸೂಕ್ತವೆ ?’

‘ಪ್ರಸ್ತುತ ಸಂದರ್ಭದಲ್ಲಿ ಅಸ್ತಿತ್ವ ಕಳಚಿಕೊಂಡಿರುವ ಶಂಕರ, ರಾಮಾನುಜ, ಮಧ್ವ, ಗಾಂಧಿ, ಎಂ.ಎನ್. ರಾಯ್, ಲೋಹಿಯಾ ವಾದ ಗಳನ್ನು ಸಂರಕ್ಷಿಸುವ ಹಟ ಯಾಕೆ ?’

-ಇಂಥ ಪ್ರಶ್ನೆಗಳಿಗೆ ಉತ್ತರ ಹುಡುಕುವ ಶೋಧನಾತ್ಮಕತೆ ವಿಸ್ತಾರಗೊಂಡರೆ ಹೊಸ ಒಳ ನೋಟಗಳೇ ಹುಟ್ಟುತ್ತವೆ. ಹೀಗೆ ಹೊಸ ಒಳನೋಟಗಳಿಗೆ ಒತ್ತಾಸೆ ಕೊಡುವ ಪ್ರಶ್ನೆಗಳು ಒಂದು ಕಡೆಗಾದರೆ, ಉತ್ತರವೂ ಆಗುವ ಪ್ರಮುಖ ಸಾಮಾಜಿಕ ಪ್ರಶ್ನೆಗಳು ಇನ್ನೊಂದು ಕಡೆಗಿವೆ. ‘ಅನುಪಮಾ ನಿರಂಜನ ಕಥಾ ಪ್ರಪಂಚ’ದ ಬಗ್ಗೆ ಬರೆಯುತ್ತ ಇಪ್ಪತ್ತಾರು ವಸಂತಗಳು ಎಂಬ ಕತೆಯ ವಸ್ತು ಮತ್ತು ಆಶಯಗಳನ್ನು ವಿಶ್ಲೇಷಿಸುವ ಕ್ರಮವನ್ನು ಇಲ್ಲಿ ಗಮನಿಸಬಹುದು. ವಿದೇಶಿ ವ್ಯಕ್ತಿಯೊಬ್ಬ ಭಾರತ ಸಂಜಾತೆ ಲೀಲಾವತಿಯನ್ನು ಪ್ರೇಮಿಸಿ ಮದುವೆಯ ಪ್ರಸ್ತಾಪ ಮಾಡಿದಾಗ ಆಕೆ ತಾಯಿನಾಡಿನ ನೆಪ ಹೇಳಿ ನಿರಾಕರಿಸುತ್ತಾಳೆ. ಕತೆಯ ಈ ಎಳೆಯನ್ನು ಜಗ್ಗುತ್ತ ಹರಿಹರಪ್ರಿಯ ಪ್ರಶ್ನಿಸುತ್ತಾರೆ: ‘ದೇಶದ ಅಂತರ ಮಾತ್ರ ಕೆಲಸ ಮಾಡಿದೆ, ಧರ್ಮಗಳ ಭಾವುಕತೆ ಕೆಲಸ ಮಾಡಿಲ್ಲ ಎಂದು ತಿಳಿಯಲು ಸಾಧ್ಯವೆ?’. ಸಾಧ್ಯವಿಲ್ಲ ಎನಿಸುವುದೇ ಕತೆಯನ್ನು ಪರಿಶೀಲಿಸಿದವರ ಉತ್ತರವಾಗುತ್ತದೆ. ಮತ್ತೊಂದು ಕತೆಯಲ್ಲಿ ಮುಸ್ಲಿಂ ಹುಡುಗನೊಬ್ಬ ರುಂಡವನ್ನು ಕತ್ತರಿಸುವ ಪ್ರಸಂಗಗಳನ್ನು ಉದಾಹರಿಸಿ ಈ ಪ್ರಶ್ನೆಯನ್ನು ಮುಂದಿಡುತ್ತಾರೆ :

‘ಮುಸ್ಲಿಂ ಹುಡುಗನಿಂದ ಆದ ಅಥವಾ ಲೇಖಕಿ ಮಾಡಿಸಿದ ಕೊಲೆ ಹಿಂದೂ ಪಾತ್ರಗಳಿಂದ ಸಾಧ್ಯವಿಲ್ಲ ಎಂದೆ? ಕಥೆಯ ಆವರಣ, ಒತ್ತಾಸೆ, ಪ್ರೇರಣೆಗಳು ಪರಸ್ಪರ ಸಂದರ್ಭಗಳಲ್ಲಿ ಕೆಲಸ ಮಾಡಿರಬಹುದೆಂದು ಸಮಾಧಾನಗೊಳ್ಳಲು ಸಾಧ್ಯವೆ?’

– ಇಲ್ಲಿ ‘ಲೇಖಕಿ ಮಾಡಿಸಿದ ಕೊಲೆ’ ಎಂಬ ಮಾತನ್ನೂ ಗಮನಿಸಬೇಕು. ಈ ಪ್ರಶ್ನೆ ಕೇವಲ ಸಾಹಿತ್ಯ ಕೃತಿಯೊಂದರ ಒಳ ವಿವರಗಳಿಗೆ ಸಂಬಂಧಿಸುವುದಿಲ್ಲ. ಸಾಮಾಜಿಕ, ಸಾಂಸ್ಕೃತಿಕ ಪ್ರಶ್ನೆಯೂ ಆಗುತ್ತದೆ. ನಮ್ಮ ಸಂದರ್ಭವನ್ನು ಒರೆಗೆ ಹಚ್ಚುತ್ತದೆ.

ಹರಿಹರಪ್ರಿಯರು ಅತ್ಯಂತ ಪ್ರಸ್ತುತವಾದ ಕೆಲವು ಅಭಿಪ್ರಾಯಗಳನ್ನು ಹೊಂದಿದ್ದಾರೆ ಎಂಬುದಕ್ಕೆ ಉದಾಹರಣೆಗಳಿವೆ : ಪ್ರಗತಿಶೀಲ ಸಾಹಿತ್ಯವನ್ನು ಅವಗಣನೆಗೆ ಗುರಿ ಮಾಡಿದ ನಮ್ಮ ವಿಮರ್ಶೆಯ ವಿಪರ್ಯಾಸ ಈಗ ಅನೇಕರಿಗೆ ಮನವರಿಕೆಯಾಗಿದೆಯೆಂದು ನಂಬಿದ್ದೇನೆ. ಇಂಥ ಪ್ರಗತಿಶೀಲರ ಬಗ್ಗೆ ಆರೋಗ್ಯಕರ ಅಭಿಪ್ರಾಯ ಕೊಡುತ್ತಲೇ ‘ನವೋದಯಕ್ಕಿಂತ ವಿಸ್ತಾರ ಬದುಕನ್ನು ಕಾಣಿಸಿದ್ದು, ಪ್ರಗತಿಶೀಲ ಅಂಶಗಳನ್ನು ತಮ್ಮ ಬರವಣಿಗೆಯ ತೆಕ್ಕೆಗೆ ತೆಗೆದುಕೊಳ್ಳುವಂತೆ ನವೋದಯದವರನ್ನು ಪ್ರಭಾವಿಸಿದ್ದು’ ಪ್ರಮುಖಾಂಶವೆಂದು ಅಭಿಪ್ರಾಯ ಪಡುವ ಇವರು ‘ಬಂಡಾಯ ಸಂಘಟನೆಯ ಕಚ್ಚಾ ಉದ್ದೇಶಗಳು ಪ್ರಗತಿಶೀಲರ ಪ್ರಯತ್ನ ಹಾಗೂ ಸೋಲಿನ ಬೇಲಿಯ ಮೇಲೆ ಅರಳಿವೆ?’ ಎಂದು ಅಭಿಪ್ರಾಯಪಡುತ್ತಾರೆ. (ಎರಡೂ ಹೇಳಿಕೆಗಳು ‘ಬಂಡಾಯ ಮನೋಧರ್ಮ’ ಕೃತಿಯಲ್ಲಿವೆ) ಮುಂದೆ ತಮ್ಮ ತಾತ್ವಿಕ ನಿಲುವೊಂದನ್ನು ಮಂಡಿಸುತ್ತಾರೆ. ‘ಕೇವಲ ಪ್ರತಿಭೆ, ಬುದ್ದಿವಂತಿಕೆಗಳನ್ನು ಬಂಡವಾಳ ಮಾಡಿಕೊಂಡವರ ಒಲವು ನಿಲುವು ಎಂದೂ ಸ್ವಾರ್ಥ ಮೂಲವಾದುದು, ಚಲನರಹಿತವಾದುದು, ಜೀವ ವಿರೋಧಿ ನೆಲೆಯದ್ದು’ -ಹರಿಹರಪ್ರಿಯರು ಹತ್ತಿರವಾಗುವುದು ಇಂಥ ತಾತ್ವಿಕ ಎಳೆಗಳಿಂದ. ಬದುಕಿನ ಬಗೆಗೆ ಇರುವ ಅಪಾರ ಪ್ರೀತಿಯಿಂದ, ಇಂಥ ಕಾರಣಗಳಿಗಾಗಿ ಅವರು ನಿಷ್ಠುರ ಅಭಿಪ್ರಾಯಗಳನ್ನು ಕೊಡಲು ಹಿಂಜರಿಯುವುದಿಲ್ಲ. ತಮ್ಮ ಹಿಂದಿನ ಕೃತಿಯೊಂದರಲ್ಲಿ ‘ಪುರೋಹಿತಶಾಹಿ ವಕಾಲತ್ತುದಾರರಾದ ಡಿ.ವಿ.ಜಿ.’ ಎಂದು ಕರೆಯುವ ಹರಿಹರಪ್ರಿಯರು ಇದೇ ಅಂಶವನ್ನು ಸಾಧಾರಣವಾಗಿ ಮಂಡಿಸುವ ಲೇಖನವನ್ನು ಈಗ ಪ್ರಕಟಿಸುತ್ತಿರುವ ‘ಪರ್ಯಾಯ ಸಂಸ್ಕೃತಿ’ ಕೃತಿಯಲ್ಲಿ ಸೇರಿಸಿದ್ದಾರೆ. ಇದರಿಂದ ತಮ್ಮ ಅಭಿಪ್ರಾಯಗಳು ಪ್ರಾಸಂಗಿಕವಲ್ಲ, ಚಿಂತನೆಯ ಫಲಗಳು ಎಂಬ ದೃಢತೆ ತನಗೆ ತಾನೇ ವ್ಯಕ್ತವಾಗುತ್ತದೆ. ಅದೇ ರೀತಿ ಒಂದು ಕಡೆ ಬರೆಯುತ್ತ ಬ್ರಾಹ್ಮಣ ಬ್ರಾಹ್ಮಣೇತರರ ತಿಕ್ಕಾಟ ಹೀಗೆ ಬೆಳೆದು ನಿಂತಾಗ ಪ್ರತ್ಯಕ್ಷ ದೇವತೆಯಾದ ರಾಜ ಆಗತಾನೆ ಕಣ್ಣುಬಿಟ್ಟ (೧೯೧೮) ಸರ್ ಲೆಸ್ಲಿಮಿಲ್ಲರ್ ಆಯೋಗ ರಚನೆ ಮಾಡಿ ತನಿಖೆಗೆ ಆದೇಶ ನೀಡಿದೆ’ ಎನ್ನುತ್ತಾರೆ. ಅದೇ ಉಸಿರಿನಲ್ಲಿ ಸರ್. ಎಂ. ವಿಶ್ವೇಶ್ವರಯ್ಯನವರನ್ನು ಶ್ರೇಷ್ಠತೆಯ ಪ್ರತಿಪಾದಕ’ ಎಂದು ವ್ಯಂಗ್ಯವಾಡುತ್ತಾರೆ. (ಮಾರ್ಕ್ಸ್, ಲೋಹಿಯಾ, ಅಂಬೇಡ್ಕರ್ ಹಿನ್ನೆಲೆಯಲ್ಲಿ ಬಂಡಾಯ ಮನೋಧರ್ಮ -ಲೇಖನ) ‘ಪ್ರತ್ಯಕ್ಷ ದೇವತೆಯಾದ ರಾಜ ಆಗ ತಾನೆ ಕಣ್ಣು ಬಿಟ್ಟ’ ಎಂಬ ಮಾತು, ‘ಶ್ರೇಷ್ಠತೆಯ ಪ್ರತಿಪಾದಕ’ ಎಂಬ ವಿಶೇಷಣಗಳು ಧ್ವನಿವ್ಯಾಪ್ತಿಯನ್ನು ಪಡೆಯುವುದು ಇಲ್ಲಿನ ವಿಶೇಷ. ಅಂದರೆ ನಾನು ಹೇಳಬೇಕೆಂದಿರುವುದು ಇಷ್ಟು : ಹರಿಹರಪ್ರಿಯರು ಅಭಿಪ್ರಾಯ ಕೊಡುವಾಗ ಅದು ಅವರಿಗೆ ಅನ್ನಿಸಿದ ಅಂತರಂಗವಾಗಿರುತ್ತದೆ: ಅಪ್ರಾಮಾಣಿಕ ವಾಗಿರುವುದಿಲ್ಲ.

ಇಲ್ಲೀವರೆಗೆ ಅಭಿಪ್ರಾಯ ಮತ್ತು ಪ್ರಶ್ನೆಗಳ ಹಂತದಲ್ಲಿ ಪರಂಪರೆಯ ಜೊತೆಗೆ ಪರ್ಯಾಯದ ಪರಿಶೋಧದಲ್ಲಿದ್ದ ಹರಿಹರಪ್ರಿಯ ‘ಪರ್ಯಾಯ ಸಂಸ್ಕೃತಿಯ ಪ್ರತಿಪಾದನೆಯ ಹಂತವನ್ನು ತಲುಪಿದ್ದಾರೆ. ಅವರ ಬದುಕು ಮತ್ತು ಬರಹದ ದೃಷ್ಟಿಯಿಂದ ಇದೊಂದು ಮುಖ್ಯ ಹಂತ. ಈ ಹಂತದಲ್ಲಿ ನಿಂತು ಅವರು ತಮಗೆ ಅತ್ಯಂತ ಪ್ರಿಯರಾಗಿದ್ದ ಕುವೆಂಪು ಅವರ ವೈರುಧ್ಯಗಳನ್ನೂ ಗುರುತಿಸುವುದು ಆರೋಗ್ಯಕರವಾದದ್ದೇ ಆಗಿದೆ. (ನೋಡಿ : ಕುವೆಂಪು ವೈಚಾರಿಕ ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳು – “ಪರ್ಯಾಯ ಸಂಸ್ಕೃತಿ” ಕೃತಿಯ ಲೇಖನ) ಆದರೆ ಇದೇ ಸಂದರ್ಭದಲ್ಲಿ ನನಗೆ ಈ ಲೇಖಕರು ಹಿಂದೆ ಮಾಸ್ತಿಯವರ ಬಗ್ಗೆ ಬರೆದ ‘ಮಾಸ್ತಿ ಮತ್ತು ಸುಧಾರಣೆ’ ಎಂಬ ಲೇಖನ (‘ಕಾಳಜಿ’ ಕೃತಿಯಲ್ಲಿ ನೆನಪಿಗೆ ಬಂದು, ಮಾಸ್ತಿಯವರ ವೈರುಧ್ಯಗಳನ್ನೂ ಗುರುತಿಸುವ ಅಗತ್ಯವನ್ನು ಹೇಳಬೇಕೆನ್ನಿಸುತ್ತದೆ. ಎಲ್ಲರಿಗೂ ಯಜ್ಞೋಪವೀತ ಹಾಕಿಸುವುದರಲ್ಲಿ ಸಮಾನತೆಯನ್ನು ಸುಧಾರಣೆಯನ್ನು ಕಾಣುವ ಮಾಸ್ತಿಯವರ ಪರಿಷ್ಕರಣವಾದಿ ನೆಲೆಗಳ ಬಗ್ಗೆ ಕೂಡ ಚರ್ಚೆಯಾಗಬೇಕಾಗಿದೆ. ಇದು ನಾನು ವಾದಕ್ಕಾಗಿ ಹೇಳುತ್ತಿರುವ ಮಾತಲ್ಲವೆಂದು ಪ್ರತ್ಯೇಕವಾಗಿ ತೊಡಗುವ ಹರಿಹರಪ್ರಿಯರಿಗೆ ಇದೆಲ್ಲವೂ ಸಾಧ್ಯವಾಗಬೇಕು ಮತ್ತು ಸಾಧ್ಯವಾದೀತು ಎಂಬ ನೆಲೆಯಲ್ಲಿ ಈ ಮಾತುಗಳನ್ನು ಹೇಳುತ್ತಿದ್ದೇನೆ. ಯಾಕೆಂದರೆ ‘ಪರ್ಯಾಯ ಸಂಸ್ಕೃತಿ’ ಕೃತಿಯಲ್ಲಿ ಇವರು ಖಚಿತ ನೆಲೆಗಳಿಗೆ ತಲುಪುತ್ತಿದ್ದಾರೆ. ಉದಾಹರಣೆಗೆ ಭಾರತೀಯ ಸಂಸ್ಕೃತಿಯನ್ನು ಕುರಿತ ಇವರ ಪ್ರತಿಕ್ರಿಯೆಯನ್ನು ನೋಡಿ :

“ವಲಸೆ ಬಂದ ಹಾಗೂ ಜಾನಪದ ಸಂಸ್ಕೃತಿಗಳು ಇರಲಿ, ವೈದಿಕ ಸಂಸ್ಕೃತಿಗೆ ಪ್ರತಿಕ್ರಿಯಾತ್ಮಕವಾಗಿ ಸಮಾನಂತರ ಕ್ರಾಂತಿಯುಂಟು ಮಾಡಿದ, ಚಾರ್ವಾಕ, ಜೈನ, ಬೌದ್ಧ, ವೀರಶೈವ ಸಂಸ್ಕೃತಿಗಳನ್ನು ನಾನಾ ವಿಧದಲ್ಲಿ ನಾಶ ಮಾಡುವ ಪ್ರಯತ್ನ ಇಂದಿನವರೆಗೂ ನಡೆದು ಬಂದಿರುವುದನ್ನು ನಾವು ಕಾಣಬಹುದು. ಆ ನಾಶದ ಪ್ರಯತ್ನ ಹಾಗೂ ಪ್ರತೀಕವೇ ಭಾರತೀಯ ಸಂಸ್ಕೃತಿ.”

– ಈ ಪ್ರತಿಕ್ರಿಯೆಯ ಪ್ರತಿಪಾದನೆಗಾಗಿ ಹೆಚ್ಚು ವಿವರಗಳನ್ನು ಒದಗಿಸುವುದಿಲ್ಲವಾದರೂ ತೀವ್ರತೆಯೇನೂ ಕಡಿಮೆಯಾಗುವುದಿಲ್ಲ. ಮುಂದುವರೆದು ಈ ಲೇಖಕರು ಹೇಳುತ್ತಾರೆ : ‘ಒಂದು ಗಳಿಗೆಯೂ ಮನುಷ್ಯರಾಗಿ ಬದುಕಲು, ಮುಖವಾಡ ಕಳಚಿ ನಿಲ್ಲದ ಈ ನಮ್ಮ ಜನರನ್ನು ಕಂಡಾಗಲೆಲ್ಲ ಹೇಸಿಗೆಯಾಗುತ್ತದೆ. ಆದರೆ ಬಂಡೆಯ ಕೆಳಗೇ ಚಿಗುರು ಒಡೆಯುವಂತೆ, ಈ ಭಯಾನಕ ಹೇಸಿಗೆಯ ಪರಿವರ್ತನೆಗಾಗಿ ಮಾನವೀಯತೆ ಒಡಮೂಡಬೇಕಾಗಿದೆ. ಪರ್ಯಾಯ ಸಂಸ್ಕೃತಿ ಈ ಮೂಲಕ ಜನ್ಮ ತಳೆಯಬೇಕಾಗಿದೆ.’

ಹರಿಹರಪ್ರಿಯರ ಪರ್ಯಾಯ ಸಂಸ್ಕೃತಿ ಪರಿಕಲ್ಪನೆಯಲ್ಲಿ ಪರಿವರ್ತನಶೀಲತೆ ಮತ್ತು ಮಾನವೀಯತೆಗಳೇ ಮುಖ್ಯ ಮೌಲ್ಯವಾಗಿರುವುದನ್ನು ನಾವಿಲ್ಲಿ ಕಾಣಬಹುದು. ಇದು ಸರಿದಿಕ್ಕಿನ ಚಿಂತನೆಯಾಗಿದೆ. ಇವರ ಪರ್ಯಾಯ ಸಂಸ್ಕೃತಿ ವಿಚಾರಧಾರೆಯಲ್ಲಿ ಜಾತಿ ಮತ್ತು ವರ್ಗ ವಿನಾಶದ ನೆಲೆಗಳಿವೆ. ಅವರೇ ಇದನ್ನು ಹೀಗೆ ಹೇಳುತ್ತಾರೆ : ‘ಈಗ ನಮ್ಮ ಮುಂದೆ ಪರ್ಯಾಯ ಸಂಸ್ಕೃತಿಗೆ ಎದುರಾಗಿ ಇರುವುದು ಎರಡು ಸಮಸ್ಯೆಗಳು; ಮೊದಲು ವರ್ಣಭೇದವನ್ನು ತೊಡೆದುಹಾಕುವುದು. ಆ ಮೂಲಕ ಇರುವ ಕೀಳರಿಮೆ ಹಾಗೂ ಮೇಲರಿಮೆಗಳನ್ನು ಕಳಚಿ ಹಾಕಿ, ಮಾನವ ಸಮಾಜದ ನೆಲೆಗೆ ಇಬ್ಬರನ್ನೂ ಒಟ್ಟಾಗಿ ಕರೆದೊಯ್ಯಬೇಕಾಗಿದೆ. ಅನಂತರದ್ದು ವರ್ಗ ವಿಭೇದ, ಎಲ್ಲ ಜಾತಿ ಕುಲ ಮತಗಳಲ್ಲಿಯೂ ತುಂಬಿರುವ ಈ ಬಡವ-ಶ್ರೀಮಂತರೆಂಬ ಕೋಟೆಗಳನ್ನು ಕೆಡವಿ, ಬದುಕಿಗೆ ಅವಶ್ಯಕವೆನಿಸುವ ಸಮಾನತೆಯ ಮನೆಗಳನ್ನು ಕಟ್ಟಿಕೊಡಬೇಕಾಗಿದೆ.’

ಈ ಅಪೇಕ್ಷೆಯಲ್ಲಿ ಅಡಗಿರುವ ಆಯಾಮಗಳು ಅನೇಕ. ಪರ್ಯಾಯ ಸಂಸ್ಕೃತಿಗೆ ಇರುವ ಸಾಮಾಜಿಕ ಮತ್ತು ಕ್ರಿಯಾತ್ಮಕ ರಾಜಕಾರಣದ ಆಯಾಮಗಳನ್ನು ಇವರ ಅಭಿಪ್ರಾಯ ಒಳಗೊಳ್ಳುತ್ತದೆ. ಸಮಾಜ, ಸಂಸ್ಕೃತಿ ಮತ್ತು ರಾಜಕಾರಣದ ಕ್ರಿಯಾತ್ಮಕ ಸಂಬಂಧದ ಸೆಳೆತಗಳು ಪರ್ಯಾಯ ಸಂಸ್ಕೃತಿಯ ಆಶಯವಾಗಬೇಕಾದ್ದು ಅಗತ್ಯವೇ ಆಗಿದೆ. ಸಾಮಾಜಿಕ ಆಯಾಮಕ್ಕೆ ಪೂರಕವೆನ್ನುವಂತೆ ಡಿ.ವಿ.ಜಿ.ಯವರ ‘ಪುರೋಹಿತಶಾಹಿ’ ನೆಲೆಗಳ ಪರಿಶೀಲನೆಯೂ ನಡೆದಿದೆ. ಅಷ್ಟೇ ಅಲ್ಲ, ‘ದಲಿತ ಸಂವೇದಿ ಕೀರ್ತನಕಾರ ಕನಕದಾಸ’ ಎಂಬ ಲೇಖನವೂ ಹರಿಹರಪ್ರಿಯರ ಆಲೋಚನಾ ವಿಧಾನಕ್ಕೆ ಪೂರಕವಾಗುತ್ತದೆ. ಕನಕದಾಸರನ್ನು ‘೧೬ ನೇ ಶತಮಾನದ ಫೀನಿಕ್ಸ್’ ಎಂದು ಕರೆಯುವ ಇವರು ಅಭಿಪ್ರಾಯ ಸಮರ್ಥನೆಯ ಸಾಮಗ್ರಿಯನ್ನೂ ಕೊಡುತ್ತಾರೆ. ‘ಕರ್ನಾಟಕದ ಸಾಮಾಜಿಕ ಚಳುವಳಿಗಳು’ ಲೇಖನದಲ್ಲಿ ಪ್ರಸ್ತಾಪಿಸುವ ಗಾಂಧೀಜಿಯವರ ಬಗೆಗಿನ ಕೆಲವು ನಕಾರಾತ್ಮಕ ಅಭಿಪ್ರಾಯಗಳು ಮತ್ತು ಬಸವಣ್ಣಾದಿ ಶಿವಶರಣರ ಬಗೆಗಿನ ಅತಿ ಪ್ರಶಂಸೆ ಚರ್ಚಾರ್ಹವಾಗಿದ್ದರೂ ಒಟ್ಟಾರೆ ಆಶಯ ಆರೋಗ್ಯಕರವಾಗಿದೆ. ಮೊದಲಿನಿಂದಲೂ ಚರಿತ್ರೆಯನ್ನು ಕಟ್ಟಿಕೊಳ್ಳುವ ಕಾಳಜಿಯನ್ನು ಪ್ರತಿಪಾದಿಸುವ, ಆ ದಿಕ್ಕಿನಲ್ಲಿ ಬರೆಯುವ ಈ ಲೇಖಕರು ಚರಿತ್ರೆಯ ಬಗ್ಗೆ ವ್ಯಕ್ತಪಡಿಸುವ ವ್ಯಾಖ್ಯಾನವು ‘ಪರ್ಯಾಯ ಸಂಸ್ಕೃತಿ’ಗೆ ಪೂರಕವಾಗಿಯೇ ಇದೆ.

“ಈವರೆಗೂ ಚರಿತ್ರೆ ಸೃಷ್ಟಿಸುತ್ತ ಬಂದವರು, ಆಳುವವರ ಮೇಲು ವರ್ಗದ ಮತ್ತು ಮಧ್ಯಮ ವರ್ಗದ ಒತ್ತಾಸೆಯ ಸ್ಥಿತಿಯನ್ನು ದಾಖಲಿಸುತ್ತ ಬಂದಿದ್ದಾರೆಯೇ ಹೊರತು ಮನುಷ್ಯ ಸಮಾಜದ ಹಿನ್ನೆಲೆಯಲ್ಲಿ ನೋಡದೆ ಹೋದುದರಿಂದ, ರಾಜವಂಶಾವಳಿಯ ಯುಗ ಪುರಾಣದ ಅಂಕಿ ಅಂಶಗಳಾಗಿ ಕೂತು ಬಿಟ್ಟಿದೆ. ಇನ್ನಾದರೂ ಚರಿತ್ರೆಯನ್ನು ಆಯಾ ಕಾಲದ ಸಾಮಾಜಿಕ ನೆಲೆಯಲ್ಲಿ ಪುನರ್ ನಿರ್ಮಿಸಬೇಕಾಗಿದೆ. ಅದಕ್ಕೆ ಬೇಕಾದ ಪರಿಕರಗಳನ್ನು ಬಚ್ಚಿಟ್ಟು ಹಾಳು ಮಾಡಿದ್ದರೂ ಅಳಿದುಳಿದ ಸಾಹಿತ್ಯಾದಿ ಪರಿಕರಗಳಿಂದ ಹಾಗೂ ಸಮಕಾಲೀನ ನೆಲೆಯಿಂದ ಅರೆಬರೆ ಚಿತ್ರವನ್ನು ಕಟ್ಟಿಕೊಡುವ ಪ್ರಯತ್ನ ನಡೆಸಬೇಕಾಗಿದೆ.”

– ಇಂಥ ಪ್ರಯತ್ನಗಳು ನಡೆದೇ ಇಲ್ಲವೆಂದು ಹೇಳಲಾಗದು. ಆದರೆ ಹರಿಹರ ಪ್ರಿಯರು ಪರ್ಯಾಯ ಸಂಸ್ಕೃತಿಯ ಆಶಯವನ್ನು ಚರಿತ್ರೆಯ ಪುನರ್ ಸಂಯೋಜನೆಯಲ್ಲೂ ಕಾಣುತ್ತಾರೆಂಬುದಕ್ಕೆ ಈ ಮಾತುಗಳನ್ನು ಉಲ್ಲೇಖಿಸಲಾಗಿದೆ.

‘ಸ್ವಾತಂತ್ರ್ಯಪೂರ್ವ ಕಥಾ ಸಾಹಿತ್ಯದಲ್ಲಿ ಜನಪರ ದೃಷ್ಟಿಯನ್ನು ಹುಡುಕುವ ಪ್ರಯತ್ನವಾಗಲಿ, ಆಧುನಿಕ ಸಾಹಿತ್ಯದಲ್ಲಿ ಧರ್ಮದ ಪರಿಕಲ್ಪನೆಯನ್ನು ಪರಿಶೀಲಿಸುವ ವಿಧಾನವಾಗಲಿ ‘ಜೈನ ಧರ್ಮ : ಜೈನೇತರ ದೃಷ್ಟಿಯಲ್ಲಿ’ ಎಂಬ ನೋಟವಾಗಲಿ, ಹರಿಹರ ಪ್ರಿಯರ ಸಾಹಿತ್ಯಕ-ಸಾಂಸ್ಕೃತಿಕ ಒತ್ತಾಸೆಯ ಮಾದರಿಗಳೇ ಆಗಿವೆ. ಹಾಗೆ ನೋಡಿದರೆ ‘ಪರ್ಯಾಯ ಸಂಸ್ಕೃತಿ’ ಕೃತಿಯ ಎಲ್ಲ ಲೇಖನಗಳ ಆಶಯಗಳಲ್ಲಿ ಒಂದು ಅಂತರ್ ಸಂಬಂಧವಿದೆ.

ಹೀಗೆ ಬರೆಯುತ್ತಾ ಹೋಗಬಹುದು. ಆದರೆ ಕಡೆಗೆ ಏಳುವ ಪ್ರಶ್ನೆ : ಅಸಾಧಾರಣ ಅಧ್ಯಯನಶೀಲತೆ, ಆರೋಗ್ಯಕರ ಆಶಯಗಳಿಂದ ಇಷ್ಟೆಲ್ಲ ಬರೆದ ಹರಿಹರಪ್ರಿಯ ಎಲ್ಲಿ ನಿಲ್ಲುತ್ತಾರೆ? ಅವರ ಯಾವ ಲೇಖನ, ಯಾವ ಕೃತಿ ಅತ್ಯಂತ ಅಮೂಲ್ಯವಾದುದು ? ಉತ್ತರ ಹುಡುಕುವಾಗ ಎದುರಾಗುವ ತೊಡಕೇ ಹರಿಹರಪ್ರಿಯರ ಸಾಹಿತ್ಯ ವ್ಯಕ್ತಿತ್ವ. ಅದೆಷ್ಟು ಲೇಖಕರ ಬಗ್ಗೆ ಬರೆದಿದ್ದಾರೆ! ಅದೆಷ್ಟು ಕೃತಿಗಳ ಬಗ್ಗೆ ಬರೆದಿದ್ದಾರೆ! ಅದೆಷ್ಟು ವಿಷಯಗಳನ್ನು ಪ್ರತಿಪಾದಿಸುತ್ತಾರೆ! ಹೀಗೆ ಅಚ್ಚರಿ ಪಡುವ ಕೆಲಸ ಮಾಡಿರುವ ಇವರ ಕೃತಿಗಳನ್ನು ಪುನರ್ ಸಂಯೋಜಿಸಿದರೆ ಮುಖ್ಯವಾದ ಮೂರ್‍ನಾಲ್ಕು ಮಾದರಿಗಳನ್ನು ಕಾಣಬಹುದು. ಪರಂಪರೆ ಪರಿಶೋಧದಲ್ಲಿ ಚರ್ಚಿತವಾದ ಪ್ರಮುಖ ವ್ಯಕ್ತಿತ್ವ ಸಮಕಾಲೀನ ಸಂದರ್ಭದ ಕೃತಿಗಳು- ವ್ಯಕ್ತಿತ್ವಗಳು, ಸಾಮಾಜಿಕ ಚಾರಿತ್ರಿಕ ಒತ್ತಾಸೆಯ ರಚನೆಗಳು – ಹೀಗೆ, ಅಥವಾ ಬೇರೆಯವರು ಬೇರೆ ರೀತಿಯಲ್ಲಿ ಪುನರ್ ಸಂಯೋಜಿಸಲು ಸಾಧ್ಯವಾಗಬಹುದು. ಇವರ ಬಹುಪಾಲು ಕೃತಿಗಳಲ್ಲಿ ನಿರ್ದಿಷ್ಟ ಕ್ರಮದ ಲೇಖನಗಳ ಸಂಯೋಜನೆ ಸಾಧ್ಯವಾಗದೆ, ಎಲ್ಲ ರೀತಿಯ ಬರಹಗಳನ್ನೂ ಒಂದೇ ಪುಸ್ತಕ ಬಂಧದಲ್ಲಿ ಅಳವಡಿಸಿದ ತೊಡಕು ಸಹ ಚರ್ಚೆಯ ದಾರಿಗೆ ಅಡ್ಡವಾಗುತ್ತದೆ. ಕೆಲವು ಪುಸ್ತಕಗಳಲ್ಲಿ ಕ್ರಮಬದ್ದ ವಿಭಾಗೀಕರಣವಿದ್ದರೂ ವಸ್ತು ವೈವಿಧ್ಯತೆಯ ಒಳಸುಳಿಯಲ್ಲಿ ಸಿಕ್ಕು ನಿರ್ದಿಷ್ಟ ದಿಕ್ಕು ಲಭ್ಯವಾಗದೆ ಹೋಗಿದೆ. ಆದರೂ ಇತ್ತೀಚಿನ ಕೃತಿಗಳ ಸಂಯೋಜನೆಯಲ್ಲಿ ನಿರ್ದಿಷ್ಟ ಕ್ರಮದ ಎಚ್ಚರ ಕಂಡು ಬರುತ್ತಿರುವುದರಿಂದ ಹರಿಹರಪ್ರಿಯರೂ ನಿಚ್ಚಳವಾಗುತ್ತಿದ್ದಾರೆ. ಕೃತಿ ಸಂಯೋಜನೆಯಲ್ಲಿ ಇಣಕುವ ತೊಡಕೊಂದೇ ಇಲ್ಲಿವರೆಗೆ ನಿಚ್ಚಳವಾಗದಿರಲು ಕಾರಣವೆಂಬ ವಾದವನ್ನೇನೂ ನಾನು ಮಂಡಿಸುತ್ತಿಲ್ಲ, ಈ ತೊಡಕು ಹರಿಹರಪ್ರಿಯರ ಒಟ್ಟು ಸಾಹಿತ್ಯ ವ್ಯಕ್ತಿತ್ವದ ಭಾಗವಾಗಿದ್ದು, ಈಗ ಬಿಡುಗಡೆಗೊಳ್ಳುತ್ತಿರುವ ಪ್ರಕ್ರಿಯೆ ಪ್ರಾರಂಭವಾಗಿದೆ. ಈ ಪ್ರಾರಂಭದ ಹಂತದಲ್ಲಿ ನಿಂತು ನೋಡಿದಾಗ ಇವರ ಬಿಡಿ ಲೇಖನ, ಬಿಡಿ ಕೃತಿಗಳು ಕುಬ್ಜವಾಗಿ ಒಟ್ಟಾರೆ ಕೆಲಸ ಎದ್ದು ಕಾಣುತ್ತದೆ. ಪರ್ಯಾಯ ನೆಲೆಯನ್ನು ಹುಡುಕುತ್ತ ಒಂದು ಹಂತಕ್ಕೆ ಬಂದಿರುವ ಹರಿಹರಪ್ರಿಯರ ಒಟ್ಟು ಕೆಲಸದಲ್ಲಿ ಪರಂಪರೆಯ ಪುನರ್ ನಿರ್ಮಿತಿ, ಚರಿತ್ರೆಯ ತಿಳುವಳಿಕೆ ಮತ್ತು ವ್ಯಕ್ತಿತ್ವ ಕಾಣ್ಕೆಗಳು ಮೂರು ಮುಖ್ಯ ಕೃತಿಗಳಾಗಿವೆ. ಈ ‘ಕೃತಿ’ ಗಳಿಗೆ ಪುಟ ಬಂಧವಿಲ್ಲ. ಲೇಖನ ನಿಯಂತ್ರಣವಿಲ್ಲ: ಪುಸ್ತಕದ ಕಟ್ಟುಪಾಡಿಲ್ಲ. ಇವು ನಿರಂತರ ತುಡಿತಗಳು. ಇವೇ ಇವರ ಕೊಡುಗೆಗಳು.

ಕೊಡುಗೆಗಳ ಕಟ್ಟನ್ನು ಹೊಟ್ಟೆಯೊಳಗಿಟ್ಟುಕೊಂಡೇ ಹೊಸ ಹುಟ್ಟು ಸಾಧ್ಯವಾಗಬೇಕು. ಈ ಸಾಧ್ಯತೆಯ ಶೋಧ ಹರಿಹರಪ್ರಿಯರಲ್ಲಿ ಪ್ರಾರಂಭವಾಗಿದೆ. ‘ಪರ್ಯಾಯ ಸಂಸ್ಕೃತಿ’ ಪುಸ್ತಕವು ಇದಕ್ಕೊಂದು ಪೂರಕ ಸಾಕ್ಷಿಯಾಗಿದೆ.

(೧೯೯೩ ರಲ್ಲಿ ಪ್ರಕಟವಾದ ಹರಿಹರ ಪ್ರಿಯರ ‘ಪರ್ಯಾಯ ಸಂಸ್ಕೃತಿ’ ಕೃತಿಗೆ ಬರೆದ ಹಿನ್ನುಡಿ ರೂಪದ ಲೇಖನ)
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೭೦
Next post ಬೆಲೆ

ಸಣ್ಣ ಕತೆ

 • ನಿರೀಕ್ಷೆ

  ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

 • ಒಲವೆ ನಮ್ಮ ಬದುಕು

  "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

 • ಗೃಹವ್ಯವಸ್ಥೆ

  ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

 • ಅವಳೇ ಅವಳು

  ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

 • ಪ್ರಥಮ ದರ್ಶನದ ಪ್ರೇಮ

  ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

cheap jordans|wholesale air max|wholesale jordans|wholesale jewelry|wholesale jerseys