ಕನ್ನಡ ಸಾಹಿತ್ಯ : ಸ್ತ್ರೀಸಂವೇದನೆಯ ನೆಲೆಗಳು

ಕನ್ನಡ ಸಾಹಿತ್ಯದಲ್ಲಿ ಸ್ತ್ರೀಸಂವೇದನೆಯ ನೆಲೆಗಳು-ಎನ್ನುವ ವಿಷಯವು ಬಹು ದೊಡ್ಡ ವ್ಯಾಪ್ತಿಯುಳ್ಳದ್ದು. ಈ ವಿಷಯವನ್ನು ಇಡೀ ಕನ್ನಡ ಸಾಹಿತ್ಯಕ್ಕೆ ಅನ್ವಯಿಸಿ ಮಾತನಾಡುವುದು ಈ ಪ್ರಬಂಧದ ವ್ಯಾಪ್ತಿಯನ್ನು ಮೀರಿ ನಿಲ್ಲುತ್ತದೆ. ಹಾಗಾಗಿ ಮಹಿಳೆಯರ ಬರವಣಿಗೆಗಳಲ್ಲಿ ವ್ಯಕ್ತವಾಗಿರುವ ಸ್ತ್ರೀಸಂವೇದನೆಗಳನ್ನು ಕುರಿತು ಮಾತನಾಡುವ ಚೌಕಟ್ಟು ಹಾಕಿಕೊಂಡಿದ್ದೇನೆ. ಅದರಲ್ಲೂ ತಿರುಮಲಾಂಬ ಆವರಿಂದ ಹಿಡಿದು ವೈದೇಹಿಯವರ ತನಕ ಈ ನಿಟ್ಟಿನಲ್ಲಿಯೂ ಚರ್ಚೆಗಳು ನಡೆದಿದ್ದು ಅನಂತರದ ಬರಹಗಳನ್ನು ನೋಡಬೇಕಾದ ಅಗತ್ಯವನ್ನು ಇಲ್ಲಿ ಕಾಣುವ ಪ್ರಯತ್ನ ಮಾಡಿದ್ದೇನೆ. ಸ್ತ್ರೀಸಂವೇದನೆಯ ನೆಲೆಗಳು ಮುಟ್ಟುತ್ತಿರುವ ಹಾದಿಗಳನ್ನು ಗುರುತಿಸುವ ಪುಟ್ಟ ಪ್ರಯತ್ತ ಇದು ಎನ್ನಬಹದು. ಹಾಗೆಯೇ ಇಲ್ಲಿ ವಿಶ್ಲೇಷಣೆಗೆ ಹೆಚ್ಚು ಗಮನಹರಿಸಿ ಉದಾಹರಣೆಗಳನ್ನು ಕ್ವಚಿತ್ತಾಗಿ ಬಳಸಿ ಕೊಳ್ಳಲಾಗಿದೆ. ಸದ್ಯದ ವರ್ತಮಾನದಲ್ಲಿ ಬರೆಯತ್ತಿರುವ ಸ್ತ್ರೀಲೇಖಕಿಯರ ಬರವಣಿಗೆಗಳ ಬಗ್ಗೆಯೇ ನಾನು ಹೆಚ್ಚು ಕುತೂಹಲಿ ಎಂದರೆ ತಪ್ಪಾಗಲಾರದು.

ಸ್ತ್ರೀವಾದದ ಹಿನ್ನೆಲೆಯಲ್ಲಿ ಇಂದು ವ್ಯಾಪಕವಾಗಿ ಸ್ತ್ರೀಪರ ದೃಷ್ಟಿಕೋನವೊಂದು ಬೆಳೆಯುತ್ತಿರುವ ಪರಿಣಾಮವಾಗಿ ಹೆಣ್ಣು ಪಾತ್ರಗಳ ವಿವೇಚನೆ ಮಾಡುವ, ಮತ್ತು ಆ ಮೂಲಕ ಚರಿತ್ರೆಯನ್ನು ಪುನರ್ಪರಿಶೀಲಿಸುವ ಪ್ರಯತ್ನಗಳು ನಡೆಯುತ್ತ ಬಂದಿದ್ದು ಸಾಹಿತ್ಯದ ಓದಿಗೆ ಒಂದು ಸ್ತ್ರೀವಾದಿ ಶಿಸ್ತಿನ ಆಯಾಮ ಒದಗಿಸಿಕೊಡುತ್ತದೆ. ಸಾಹಿತ್ಯದ ಬಹುಮುಖೀ ಓದುಗಳಿಗೆ ಇದು ನಮ್ಮನ್ನು ಪರಿಚಯಿಸುವುದಾದರು ಸಾಕಷ್ಟು ಬಿಕ್ಕಟ್ಟುಗಳಿಗು ದಾರಿಮಾಡಿಕೊಟ್ಟಿದೆ. ಹೆಣ್ಣೆಂಬ ಜೀವಿಯ ಅಸ್ತಿತ್ವಕ್ಕೆ ಮಹತ್ವಕೊಟ್ಟು ಅವಳ ಜಗತ್ತನ್ನು ಪೂರ್ವಗ್ರಹ ಇಲ್ಲದೆ ಉದಾರವಾಗಿ ನೋಡುವ ಪ್ರಯತ್ನಗಳ ದಿಸೆಯಲ್ಲೇ ಸರಳೀಕರಣದ (Reductionist) ಓದಿಗೆ ನಮ್ಮನ್ನು ಒಯ್ಯುವ ಅಪಾಯಗಳನ್ನು ತಂದೊಡ್ಡುತ್ತಿದೆ.

ಈ ಆಪಾಯಗಳಲ್ಲಿ ಮೊದಲನೆಯದು ಸ್ತ್ರೀಅಸ್ಮಿತೆಯ ಏಕಶಿಲಾ (monolith) ರೂಪದ ಗ್ರಹಿಕೆ. ಬಹುಮುಖೀ ವ್ಯಕ್ತಿತ್ವಗಳ ಸಾಧ್ಯತೆಯನ್ನು ಅಳಿಸಿಹಾಕುವಂತದ್ದು. ಉದಾಹರಣೆಗೆ ಜಾತೀಯತೆಯಿಂದ ಕೂಡಿದ ನಮ್ಮ ಸಮಾಜದಲ್ಲಿ ಬ್ರಾಹಣಸ್ತ್ರೀಯ ಅನುಭವಗಳು ದಲಿತಸ್ತ್ರೀಯ ಅನುಭವಗಳು ಭಿನ್ನವಾಗಿರಲು ಸಾಧ್ಯ. ಇದಲ್ಲದೆ ಜಾತಿಯೊಳಗೆ ಇರುವ ಉಪಜಾತಿ, ಮೇಲ್ವರ್ಗ, ಕೆಳವರ್ಗ, ಸಂಸ್ಕೃತಿ, ಬುಡಕಟ್ಟು ಸಂಸ್ಕೃತಿ- ಹೀಗೆ ಹಲವಾರು ವೈವಿಧ್ಯಗಳು ತುಂಬಿರುವ ಸಮಾಜದಲ್ಲಿ ಬದುಕುತ್ತಿರುವ ಮಹಿಳೆಯರ ಅನುಭವಗಳು ಏಕರೂಪವಾಗಿರುವುದಿಲ್ಲ.

ಎರಡನೆಯದಾಗಿ ಪುರುಷ ಸಮಾಜದ ಲೋಪದೋಷಗಳ ಹಿನ್ನೆಲೆಯಲ್ಲಿ ಸ್ತ್ರೀಸಂವೇದಿಯಾದ ಪ್ರತಿಭಟನೆ ಹೊಮ್ಮುವ ಸಾಧ್ಯತೆಯಲ್ಲೂ ಸಾಮ್ಯತೆ ಇಲ್ಲ. ಸ್ತ್ರೀಯರ ಹೋರಾಟಗಳಲ್ಲಿ ಭಿನ್ನಸ್ತರಗಳಿವೆ; ಮುಖ್ಯವಾಗಿ ಅವು ಹೋರಾಟಗಳಾಗಿ ನಿರೂಪಿಸಲ್ಪಡುವುದು ಜಾತಿ, ವರ್ಗ, ಸಂಸ್ಕೃತಿ ನಿಶ್ಚಿತತೆಗಳಿಂದ.

ಮೂರನೆಯದಾಗಿ, ಸ್ತ್ರೀಪರ ಪುರುಷ ದೃಷ್ಠಿಕೋನವು ಅತಿಯಾದ ಲಾಲನೆಯಿಂದ ಕೆಲವೊಮ್ಮೆ ನಾರ್ಸಿಸಿಸ್ ವೈಕಲ್ಯಕ್ಕೂ ಒಳಗಾಗಬಹುದು.

ನಾಲ್ಕನೆಯದಾಗಿ ಪ್ರತಿಭಟನೆಯ ನೆಲೆಯಲ್ಲಿಯೇ ಹುಟ್ಟುವ ಸ್ತ್ರೀಸಂವೇದಿ ನಿಲುವುಗಳು ಸಾಹಿತ್ಯದ ಸಾಧ್ಯತೆಗಳನ್ನು ಮಿತಿಗೊಳಿಸಿ ವಾಚ್ಯತೆಯಲ್ಲಿಯೇ ನಿಲ್ಲುವ ಸಾಧ್ಯತೆ ಇದೆ.

ಸ್ತ್ರೀಯರ ಬರವಣಿಗೆಗಳು ಈ ಎಲ್ಲಾ ಅಪಾಯಕಾರಿ ಹಂತಗಳನ್ನು ಎದುರಿಸುತ್ತಲೇ ಬಂದಿದ್ದು, ಈಗ ಬರೆಯುತ್ತಿರುವ ಅನೇಕ ಬರಹಗಾರ್ತಿಯರು ಈ ಸವಾಲುಗಳನ್ನು ಎದುರಿಸಿ ನಿಂತಿದ್ದಾರೆ. ಕ್ರಿಯಾಶೀಲವಾಗಿ ಅಭಿವ್ಯಕ್ತಿಸಿ ಸಂವೇದನೆಗಳನ್ನು ರೂಪಿಸಿಕೊಂಡ ಈ ಬರಹಗಾರ್ತಿಯರಲ್ಲಿ ಬಹುತ್ವದೆಡೆಗೆ ತುಡಿಯುವ ಕಾತುರ ಇರುವುದು ಕಾಣತೊಡಗಿದೆ. ಇದೊಂದು ಆಶಾದಾಯಕ ಸೂಚನೆ ಮತ್ತು ಸಾಹಿತ್ಯದ ಮಟ್ಟಿಗೆ ಒಂದು ಹೊಸ ಮಜಲು ಎನ್ನುವಂತಿದೆ.

(ಅ)
ಸ್ತ್ರೀಸಂವೇದನೆಯ ನೆಲೆಗಳನ್ನು ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಗುರುತಿಸುವಾಗ ಸಹಜನೆಲೆಗೆ ಎಂದೂ ಪ್ರಜ್ಞಾಪೂರ್ವಕ ನೆಲೆ ಎಂದೂ ವಿಶಾಲಾರ್ಥದಲ್ಲಿ ವಿಂಗಡಿಸಿಕೊಳ್ಳಬಹುದು. ಸ್ತ್ರೀಸಂವೇದನೆಗಳೆನ್ನುವುದು ಬದುಕಿನ ಸಹಜ ಅನುಭವಗಳಾಗಿ ಬಂದಾಗ ಸಹಜ ನೆಲೆಯವು ಎನ್ನಬಹುದೇನೋ. ಸ್ತ್ರಿಸಂವೇದನೆ ಎನ್ನುವುದು ಸ್ತ್ರೀವಾದ ಹುಟ್ಟಿದ ನಂತರದ ಪರಿಕಲ್ಪನೆಯೇನೋ ಅಲ್ಲ. ಇದಕ್ಕಾಗಿ ಮೌಖಿಕ ಪರಂಪರೆಯ ಕಡೆ ನೋಡಬೇಕು. ಅಲ್ಲಿನ ಬುಹುಮುಖತ್ವ, ಕ್ರಿಯಾಶೀಲತೆ – ಎಲ್ಲವು ಮೇಲೆ ಎದ್ದು ಕಾಣುವುದಿಲ್ಲ. ಬಾಯಿಂದ ಬಾಯಿಗೆ ಹರಿದಾಡುವಾಗ ಅಲ್ಲಿಪುನರ್ರಚನೆಗಳೂ, ಹಲವು ರೀತಿಯ ವಿನ್ಯಾಸಗಳೂ ಸಾಧ್ಯವಿದೆ. ಲಯದಲ್ಲಿ ಹಾಗು ಕಾಕು ಆಥವಾ ಸ್ವರವನ್ನು ಹಿಂಜುವುದರಲ್ಲಿ ಇವು ಹೊಳೆಯಿಸುತ್ತವೆ. ಫೋಕಸ್ ಆಗುವ ರೀತಿಗಳೂ ಭಿನ್ನವಾಗಿತ್ತವೆ. ಮೌಖಿಕ ಸಂಪ್ರದಾಯವು ಆನುಭವ ಕಥನಗಳನ್ನು ರೂಪಿಸಿಕೊಳ್ಳುವ ರೀತಿಯಲ್ಲಿದ್ದು, ಹಾಡು, ಕತೆ, ಒಗಟುಗಳ ಮೂಲಕ ಅವನ್ನು ಕಟ್ಟಿಕೊಡುವ ಸಾಮರ್ಥ್ಯ ಹೊಂದಿದಂತವು. ಈ ಒಡೆದು ಕಟ್ಟುವ ಕ್ರಿಯಾಶೀಲತೆಗಳು ಮಹಿಳೆಯರ ದನಿಗಳಲ್ಲೇ ಹೆಚ್ಚಾಗಿ ಕಾಣುತ್ತದೆ. ಮಹಿಳೆಯರ ಜಾನಪದ ಅಭಿವ್ಯಕ್ತಿಯು ಸಹಜಾನುಭವಗಳಿಗೆ ಹತ್ತಿರವಿದೆ. ಅಲ್ಲದೆ ಸಾಮಾಜಿಕ ರಚನೆಗಳ ಒಳವಿನ್ಯಾಸಗಳನ್ನು ತೋರುವಂತಿವೆ. ಇಲ್ಲಿ Spaceಗಳಿರುವುದನ್ನು ಗಮನಿಸಬಹುದು. ಉದಾಹರಣೆಗೆ ಸಿರಿಯಜ್ಜಿ ಹಾಡುವ ಹಾಡುಗಳಲ್ಲಿ ಇಂತಹ ವಿನ್ಯಾಸಗಳನ್ನು ಗುರುತಿಸಬಹುದಾಗಿ ಅದೊಂದು ಸೃಜನಶೀಲ ಕಟ್ಟುವಿಕೆಯಾಗಿದೆ. ಸಮುದಾಯದ ಅನುಭವಗಳನ್ನು ನಿರೂಪಿಸುವಾಗ ಅದನ್ನು ಸ್ಪಷ್ಟವಾಗಿಯೇ ಗುರುತಿಸುವಂತಿದೆ.

ಜಾನಪದವನ್ನು ವಿಶೇಷವಾಗಿ ಅಭ್ಯಾಸ ಮಾಡಿದ ಎ. ಕೆ. ರಾಮಾನುಜನ್ ಅವರು ತಮ್ಮ ಅಧ್ಯಯನದಲ್ಲಿ ಇಂಥಹ ಸೃಜನಶೀಲ Spaceಗಳಿರುವುದನ್ನು ಗುರುತಿಸಿದ್ದಾರೆ. ಸ್ತ್ರೀನಿರೂಪಣೆಯಲ್ಲಿರುವ ಕತೆ, ಕಾವ್ಯಗಳಲ್ಲಿ ಕಾಣುವ ವಿಶಿಷ್ಠ ದನಿ, ರೂಪಕಗಳು, ರಚನೆಗಳು ಇವು ಸ್ತ್ರೀವೈಶಿಷ್ಟತೆಯನ್ನು ಹೇಳುತ್ತವೆ :
“Symbols for from being universal donot even mean the same thing as you move from genre to genre. So the gender of the gender. If one may speak of such and surely the gender of the teller, the listener, and the enterpreter becomes important interpretation. A woman’s really constructed life forms, her meaning- universe, is different from man’s is such tales .. The spaces is woman- centred stories marked by alternations of domestic and public space is which action takes place .” – (A. K. Ramanujam : Folktales from India)

ಇನ್ನೊಬ್ಬ ಚಿಂತಕ ಆಶಿಶ್‍ನಂದಿ ಗುರುತಿಸುವಂತೆ, ಭಾರತದಲ್ಲಿ ಸ್ಪರ್ಧಾತ್ಮಕತೆ, ಆಕ್ರಮಶೀಲತೆ, ಬಲ, ಕ್ರಿಯಾಶೀಲತೆ ಇವುಗಳು ಸ್ಪಷ್ಟವಾಗಿ ಪುರುಷಾತ್ಮಕವಲ್ಲ. ಹಾಗೆ ನೋಡಿದರೆ ಭಾರತೀಯ ಜಾನಪದಗಳಲ್ಲಿ ಈ ಗುಣಗಳು ಅಷ್ಟೇಮಟ್ಟಿಗೆ ಸ್ತ್ರೀಸಂಬಂಧಿಯಾಗಿವೆ. ಜಾನಪದ ಸೀತೆ ರಾವಣನ ಚಿತ್ರ ಬಿಡಿಸುವುದು, ದುರ್ಯೋಧನನಿಗೆ ದ್ರೌಪದಿ ಜೂಜಿನಲ್ಲಿ ಸವಾಲೆಸೆಯುವುದು ಇವು ಶಕ್ತ ಹಾಗೂ, ಸಹಜ ವ್ಯಕ್ತಿತ್ವಗಳನ್ನು ಅನಾವರಣಗೊಳಿಸುವಂತೆ, ‘ಮಲೆಗಳಲ್ಲಿಮದುಮಗಳು’ ಕಾದಂಬರಿಯಲ್ಲಿನ ಚಿನ್ನಮರಿ, ಪೀಂಚಲು, ‘ಬನದಕರಡಿ’ ಯಂತಹ ಅವ್ವಂದಿರು (ಲಂಕೇಶ್ : ‘ಅವ್ವ’), ತನ್ನನ್ನು ಕಂಡರೆ ‘ಯಮದೂತರು ಓಡೋಯ್ತರ- ಎನ್ನುವ ಸಾಕವ್ವ ಹೀಗೆ ಹಲವಾರು ಮಹಿಳೆಯರು ಸಹಜ ಗುಣಗಳಿಂದ ಕೂಡಿ ಪ್ರಕೃತಿಗೆ ಹತ್ತಿರವಿದ್ದಾರೆ.

ಇನ್ನು ಲಿಖತ ಸಾಹಿತ್ಯರಚನೆಯಲ್ಲಿ ಹೆಣ್ಣುಬರವಣಿಗೆ ಎನ್ನುವುದು ತೆರೆದುಕೊಂಡಿದ್ದೇ ೧೨ ನೇ ಶತಮಾನದಲ್ಲಿ. ಅಲ್ಲೂ ಚಳವಳಿಯ ಬೆಂಬಲ ಇದ್ದುದರಿಂದ ಸ್ತ್ರೀಯರ ಅಭಿವ್ಯಕ್ತಿ ಪ್ರಕಟವಾಗಿದೆ. ಅಕ್ಕಮಹಾದೇವಿ ಮತ್ತಿತರ ವಚನಕಾರ್ತಿಯರನ್ನು ಇಲ್ಲಿ ನಾವು ಗುರುತಿಸುತ್ತೇವೆಯಾದರೂ ಅದು ಲಿಂಗಸಮಾನತೆಯ ದೃಷ್ಟಿಯಿಂದ ಔಪಚಾರಿಕವಾಗಿ ಈ ಕೆಲಸ ನಡೆದಿದೆ ಎನ್ನಿಸುತ್ತದೆ. ಏಕೆಂದರೆ ಅಕ್ಕಮಹಾದೇವಿಯನ್ನು ಬಿಟ್ಟರೆ ಬೇರೆ ವಚನಕಾರ್ತಿಯರನ್ನು ಸ್ಥೂಲವಾಗಿ ಅಭ್ಯಾಸ ಮಾಡಲಾಗುತ್ತದೆಯೇ ವಿನಾ ಅವರ ಸಾಹಿತ್ಯ ಚರ್ಚೆಯಾಗಿದ್ದು ಕಡಿಮೆ ಎಂದೇ ಹೇಳಬೇಕು. ಆಕ್ಕಮಹಾದೇವಿಯೂ ಒಂದು ಹಂತದಲ್ಲಿ ಪುರುಷ ಪ್ರದಾನ ನೆಲೆಯಿಂದ ಪ್ರಶ್ನಿಸಲ್ಪಟ್ಟವಳೇ ಆಗಿದ್ದಾಳೆ- ಹಾಗಾಗಿ ಆಕೆಗೆ ‘ಹೆಂಗೂಸಲ್ಲ’ ಎಂದು ಹೇಳಿಕೊಳ್ಳುವ ಅನಿವಾರ್ಯತೆ ಉಂಟಾಗಿರಬಹುದು. ಮೌಖಿಕ ಪರಂಪರೆಗೆ ಹತ್ತಿರವಿದ್ದ ಅಕ್ಕನ ಅಭಿವ್ಯಕ್ತಿ ಮಾರ್ಗಗಳು ಮತ್ತೆ ಮುಂದುವರಿದಂತೆ ಕಾಣುವುದಿಲ್ಲ.

ಕನ್ನಡ ಸಾಹಿತ್ಯವನ್ನು ಪಕ್ಷಿನೋಟದಿಂದ ನೋಡುವಾಗ ಮಹಿಳೆಯರ ಬರವಣಿಗೆಗೆ ಒಂದು ದೊಡ್ಡಚರಿತ್ರೆಯಿಲ್ಲ ಎಂಬುದು ನಮ್ಮ ಅರಿವಿಗೆ ಬರುವಂತೆಯೇ ಇದ್ದರೂ ಅದು ಪಕ್ಷಪಾತ, ಪೂರ್ವಾಗ್ರಹಗಳಿಂದ ಕೂಡಿದ್ದಾಗಿದೆ. ಇರುವ ಸಾಹಿತ್ಯದಲ್ಲಿನ ಮಹಿಳೆಯರು typesಗಳಾಗಿ ತೋರುತ್ತಾರೆ. ಅಂದರೆ ಕೆಲವು ಗುಣಗಳಿಂದ ಸ್ಥಿರೀಕರಿಸಲ್ಪಟ್ಟವರು. ಹತ್ತನೆಯ ಶತಮಾನದಿಂದ ಇತ್ತೀಚಿನ ಜನಪ್ರಿಯ ಸಾಹಿತ್ಯದವರೆಗು ಈ ಚಿತ್ರಣವನ್ನೇ ಕಟ್ಟಿಕೊಡಲಾಗಿದೆ. ಚಾಗಭೋಗಳನ್ನು ಮೌಲ್ಯಗಳಾಗಿ ಒಪ್ಪಿಕೊಂಡಿದ್ದ ಕಾಲದಲ್ಲಿ ಬದುಕಿದ್ದ ಅತ್ತಿಮಬ್ಬೆಯನ್ನು ‘ದಾನ ಚಿಂತಾಮಣಿ’ಯಾಗಿ ಚಿತ್ರಿಸಲ್ಪಡುತ್ತಾಳೆ. ಇದು ಅವಳ ವ್ಯಕ್ತಿತ್ವದ ಧನಾತ್ಮಕ ಅಂಶವೆಂಬಂತೆ ಕಂಡರೂ ಜೈನರಲ್ಲಿ ಸ್ತ್ರೀಯರಿಗೆ ಮೋಕ್ಷ ಇಲ್ಲದ ಕಾರಣ ತನ್ನನ್ನು ತಾನು ದಾನಧರ್ಮಗಳಲ್ಲಿ ತೊಡಗಿಸಿಕೊಂಡು ಸ್ರೀಜನ್ಮ ಕಳೆದುಕೊಂಡು, ಆ ಪುಣ್ಯದಿಂದ ಗಂಡಸಾಗಿ ಹುಟ್ಟುವ ಅನಿವಾರ್ಯತೆಯನ್ನು ಅವಳು ತೋರಿಸಿದಂತಾಗುತ್ತದೆ. ತಮ್ಮ ಸರದಿಗಾಗಿ ಕಾಯುವ ರಾಣಿಯರು ಗಂಡನನ್ನು ಕಾಣಲು, ಕೂಡಲು (ವಡ್ಡಾರಾಧನೆ) ಹಾದರ ಮಾಡಿದ್ದಕ್ಕಾಗಿ ಹುಳಬಿದ್ದು ಸಾಯುವ ಅಮೃತಮತಿ (ಯಶೋಧರಚರಿತ್ರೆ) ಇವರೆಲ್ಲರು ಪುರುಷ ಸಮಾಜದ ನಿರೀಕ್ಷೆಗನುಗುಣವಾಗಿ ರೂಪಿಸಲ್ಪಟ್ಟಂತಹ ಮಾದರಿಗಳೇ ಆಗಿದ್ದಾರೆ. ‘ಹದಿಬದೆಯ ಧರ್ಮ’ ಭೋಧಿಸುವ ಹೊನ್ನಮ್ಮ, ಆನಕೃ ಕಾದಂಬರಿಯ ಗೃಹಲಕ್ಷ್ಮಿಯರು ಮತ್ತು ವೇಶ್ಯೆಯರು, ಸಂಸ್ಕಾರದ ಚಂದ್ರಿ, ಬೆಳ್ಳಿಯರು ಸ್ಥಿರೀಕರಣದ ಪಾತ್ರಗಳೇ ಆಗಿ ‘ಸತೀ – ಸೂಳೆ’ಯರ ಮಾದರಿಗಳನ್ನು ತೋರಿಸುವಂತಿದ್ದಾರೆ.

ಈ ರೀತಿಯ ಸಾಹಿತ್ಯವನ್ನು, ಸಂಸ್ಕೃತಿಯನ್ನು ಅನುಸಂಧಾನ ಮಾಡಿಕೊಳ್ಳುವಾಗ ಅವುಗಳನ್ನು ಪುನರ್ರಚನೆ ಮಾಡಿಕೊಳ್ಳುವ ತುರ್ತು ಈ ಶತಮಾನದ ಬರಹಗಾರ್ತಿಯರಿಗೆ ಉಂಟಾಯಿತು. ಈ ಘಟ್ಟದಿಂದ ಬಹುಶಃ ಪ್ರಜ್ಞಾಪೂರ್ವಕ ಸಂವೇದನೆಗಳನ್ನು ಗುರುತಿಸಬಹುದು.

ಪುನಾರಚನೆಯ ಸಂದರ್ಭದಲ್ಲಿ ಮೊದಲು ತಮ್ಮ ಸ್ಥಿತಿಯ ಗುರುತಿಸುವಿಕೆ ಮತ್ತು ನಂತರದಲ್ಲಿ ಅವನ್ನು ಸುಧಾರಿಸುವ ಸುಧಾರಣಾವಾದಿ ಪರಿಹಾರಗಳನ್ನು ಕಂಡುಕೊಳ್ಳುವಿಕೆ- ಇವು ಮೊದಲ ಹಂತದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ತಿರುಮಲಾಂಬ ಅವರಿಂದ ಹಿಡಿದು ಕೊಡಗಿನ ಗೌರಮ್ಮನವರ ತನಕ ಈ ಸಂವೇದನೆಗಳಿವೆ. ಅವರ ಕಾಲದಲ್ಲಿ ಪ್ರಚಲಿತವಿದ್ದ ಚಳವಳಿಗಳು, ಸುಧಾರಣಾ ನೀತಿಗಳು, ವಸಾಹತುಶಾಹಿ ತಂದುಕೊಟ್ಟ ಇಂಗ್ಲಿಷ್ ವಿದ್ಯಾಭ್ಯಾಸದ ಅರಿವು ಎಲ್ಲವೂ ಹಿನ್ನೆಲೆಯಲ್ಲಿ ಇದೆ. ಮುಂದೆ ಇದು ಸ್ಪಷ್ಟ ಬಂಡಾಯದ ಸ್ವರೂಪದಲ್ಲಿಯೇ ಕಾಣಿಸಿಕೊಳ್ಳಲಾರಂಭಿಸಿತು. ಇದಕ್ಕೆ ಬಹುಮಟ್ಟಿಗೆ ಸ್ತ್ರೀವಾದದ ಅರಿವು ಕಾರಣವಾಗಿದ್ದಿರಬಹುದು.

ಬಂಡಾಯದ ಧಾಟಿಯಲ್ಲಿದ್ದ ಸಂವೇದನೆಗಳು ಮುಖ್ಯವಾಗಿ ಗ್ರಹಿಸುವುದು ಸಮಾಜವು ಸ್ತ್ರೀಯನ್ನು ದುರ್ಬಲಲಿಂಗಿಯೆಂದು ನೋಡುವ ಅಂಶವನ್ನು ವ್ಯವಸ್ಥೆಯ ಲೋಪಗಳು, ಕ್ರೌರ್ಯಗಳು-ಈ ಎಲ್ಲವೂ ಅಧಿಕಾರ ಕೇಂದ್ರಗಳಾದ ಪುರುಷನೆಲೆಯಲ್ಲಿ ಹುಟ್ಟುತ್ತವೆ ಎಂದು ನಂಬಲಾಗುತ್ತದೆ. ಸ್ತ್ರೀವಾದ ಎನ್ನುವುದೇ ಮೂಲತಃ ರಾಜಕೀಯ ಚಳವಳಿ. ಅಧಿಕಾರಗಳನ್ನು ಪುನಾರಚನೆ ಮಾಡಬೇಕು ಮತ್ತು ಆ ಮೂಲಕ ಸಮಾನತೆಯನ್ನು ಸಾಧಿಸಬೇಕು ಎನ್ನುವ ಆಶಯವುಳ್ಳದ್ದಾಗಿತ್ತು ಸ್ತ್ರೀವಾದ. ಇರುವ ವ್ಯವಸ್ಥೆಯನ್ನು ವಿರೋಧಿಸುವ ಮತ್ತು ಅದರಲ್ಲೇ ಪಾಲುಕೇಳುವ dialectical ಆಶಯದ ಸ್ವರೂಪಗಳೂ ಅಲ್ಲಿದ್ದವು. ಇದರಿಂದ ಪ್ರೇರೇಪಿತಗೊಂಡ ಬರಹಗಾತಿಯರಿಗೆ ಲೈಂಗಿಕ ರಾಜಕಾರಣದ ಅರಿವು ಇದೆ. ಆದ್ದರಿಂದ ಅವರಲ್ಲಿ ಬಂಡಾಯದ ಸಂವೇದನೆಗಳು ಚುರುಕುಗೊಂಡಿವೆ. ಲೇಖಕಿಯರ ಪ್ರಜ್ಞಾಪೂರ್ವಕ ಸಂವೇದನೆಗಳು ರೂಪುಗೊಳ್ಳುತ್ತ ಹೋದಂತೆ, ಅವರು ಅಭಿವ್ಯಕ್ತಿಯಾಗಿ ಹಲವಾರು ಮಾರ್ಗೋಪಾಯಗಳನ್ನು ಹುಡುಕಿಕೊಳ್ಳಲಾರಂಭಿಸಿದ್ದರು. ಅವುಗಳಲ್ಲಿ ಮುಖ್ಯವಾಗಿ (ಅ) ಮಿಥ್‍ಗಳನ್ನು ಒಡೆದು ಕಟ್ಟಬೇಕಾದ ಅನಿವಾರ್ಯತೆ, (ಆ) ಕಾಮವನ್ನು ಸಮಾಜ ನಿರ್ದೇಶಿಸುವ ರೀತಿಗಳಿಂದ ಭಿನ್ನವಾಗಿ ವಿವೇಚಿಸುವುದು, (ಇ) ಅಪ್ಪ, ಆಮ್ಮ ಇಂತಹ ಬಿಂಬ ((icon)ಗಳಿಂದ, ಹಾಗೂ ತಾಯ್ತನದಂತಹ ಜೈವಿಕರಚನೆಗಳನ್ನು ಮುಕ್ತವಾಗಿ ನೋಡುವುದಲ್ಲದೆ, ಅವುಗಳನ್ನು ಸಂದೇಹಿಸುವುದು, (ಈ) ಸ್ವಲ್ಪಮಟ್ಟಿಗೆ ಸಾಹಿತ್ಯವನ್ನು ಕ್ರಿಯಾವಾದಕ್ಕೆ (activism)ಹತ್ತಿರ ಕೊಂಡೊಯ್ಯುವುದು ಇತ್ಯಾದಿ.

ಮೊದಲನೆಯದಾಗಿ ಮಿಥ್‍ಗಳನ್ನು ಎದುರಿಸುವ ದೃಷ್ಟಿಕೋನ ಅಪ್ರಧಾನವಾಗಿದ್ದ ಸ್ತ್ರೀಪಾತ್ರಗಳನ್ನು ಹೆಕ್ಕುವುದು, ಪುರಾಣ ಪ್ರಸಿದ್ದವಾದ ಸ್ತ್ರೀವ್ಯಕ್ತಿತ್ವಗಳನ್ನು ಮಾನವೀಯ ನೆಲೆಯಲ್ಲಿ ನೋಡುವ ಪ್ರಯತ್ನ, ಇತ್ಯಾದಿ ಅಂಶಗಳು ಇಲ್ಲಿ ಗಮನಾರ್ಹವಾಗುತ್ತದೆ. ಸೀತೆ, ದ್ರೌಪದಿ, ದಮಯಂತಿ, ಮಾಧವಿ-ಈ ಪಾತ್ರಗಳನ್ನು ಪುನರ್ ಕಟ್ಟಿಕೊಳ್ಳುವಿಕೆಯು ಸಂಭವಿಸಿದ್ದು ಈ ಹಂತದಲ್ಲಿಯೇ. ಎಚ್.ವಿ. ಸಾವಿತ್ರಮ್ಮನವರ ‘ದಮಯಂತಿ’, ಅನುಪಮಾ ಅವರ ‘ಮಾಧವಿ’ ಕಾದಂಬರಿಗಳು ಈ ನಿಟ್ಟಿನಲ್ಲಿವೆಯಾಗಿ ಅವನ್ನು ಇಲ್ಲಿ ಉದಾಹರಿಸಬಹುದು. ಕಾಮದ ಪರಿಕಲ್ಪನೆಯೂ ಸಹ ನಮಗೆ ಸಮಾಜದಿಂದಲೇ ನಿರ್ದೇಶಿತವಾಗುತ್ತದೆ. ಅದು ಸಹಜ ಗುಣವಾಗಿದ್ದರೂ ಸಹ ಅದು ಪುರುಷನಿಗೆ ಸ್ತ್ರೀಗೆ ಬೇರೆಬೇರೆಯಾಗಿ ಒದಗುತ್ತದೆ. ಮಹಿಳಾ ಬರವಣಿಗೆಗಳಲ್ಲಿ ಕಾಮವನ್ನು ಮಿಥ್ ಎಂದು ಭಾವಿಸಿ ಅದನ್ನು ಒಡೆದು ಕಟ್ಟಿಕೊಳ್ಳುವ ವಿನ್ಯಾಸ ಇದೆ. ಕಾಮವನ್ನು ಸಹಜ ದೇಹವಾಂಛೆಯಂತೆ ನೋಡುವುದು ಒಂದು ರೀತಿಯದಾದರೆ, ಇನ್ನೊಂದು ಪುರುಷ ದೃಷ್ಟಿಕೋನದಲ್ಲಿ ಭೋಗವೇ ಪ್ರಧಾನವಾಗಿ ಹೆಣ್ಣಿನ ಶೋಷಣೆಯ ಮೂಲವಾಗಿರುವ ಕಾಮವನ್ನು ಎಚ್ಚರಿಕೆಯಿಂದ ಪರಿಶೀಲಿಸುವುದು.

ದೇಹದ ನಿರ್ಬಂಧಗಳು ಸಮಾಜದಿಂದ ವಿಧಿಸಲ್ಪಡುತ್ತವೆ. ಸಮಾಜವು ಪುರುಷ ಕೇಂದ್ರವಾಗಿದ್ದು ಲೈಂಗಿಕತೆಯನ್ನು ನಿರ್ಧರಿಸುವುದು ಅದರ ಕ್ಕೆಯಲ್ಲಿರುವುದರಿಂದ ಪುರುಷರಿಗೆ ಸಹಜವಾದ ಕಾಮವನ್ನು ನಿರಾಕರಿಸುತ್ತದೆ. ಇದನ್ನು ಅನೇಕ ಬರಹಗಾರ್ತಿಯರು ಪ್ರತಿರೋಧದ ನೆಲೆಯಲ್ಲಿ ಗ್ರಹಿಸುತ್ತಾರೆ. ಬಂಧಕ್ಕೆ ವಿರೋಧವಾಗಿ ಮುಕ್ತತೆಯನ್ನು ಬಿಂಬಿಸುವಲ್ಲಿ ಸ್ವಲ್ಪಮಟ್ಟಿನ ಪ್ರತಿರೋಧವನ್ನು ಕಾಣಬಹುದು. ಇದೊಂದು ಪ್ರತಿಭಟನೆಯ ಕ್ರಮವೂ ಆಗಿದೆ. ಹಾಗಾಗಿ ನಮ್ಮ ಆನೇಕ ಕವಯಿತ್ರಿಯರಿಗೆ ಅಕ್ಕಮಹಾದೇವಿ ನಿರ್ವಸ್ತ್ರಳಾಗಿರುವುದು ಪ್ರತಿಭಟನೆಯ ದ್ಯೋತಕ ಹಾಗೂ ಸ್ವಾತಂತ್ರದ ರೂಪಕವೂ ಹೌದು. ಹಾಗೆಯೇ ಅಮೃತಮತಿ ತನ್ನಿಚ್ಛೆಯಂತೆ ಕಾಮವನ್ನು ಪಡೆಯುವ ಸ್ವತಂತ್ರ ಮನೋಭಾವವುಳ್ಳವಳಾಗಿ ಅವಳೂ ಹಲವಾರು ಬರಹಗಾರ್ತಿಯರಿಗೆ ರೂಪಕವಾಗಿದ್ದಾಳೆ.

ಅದೇ ದೇಹವು ಪುರುಷನ ಆಕ್ರಮಣಕ್ಕೆ, ಭೋಗಕ್ಕೆ ತುತ್ತಾದಾಗ ಪ್ರತಿರೋಧವು ಆಕ್ರೋಶದ ನೆಲೆಯಲ್ಲಿ ವ್ಯಕ್ತವಾಗುತ್ತದೆ. ಸ. ಉಷಾ ಆವರ ‘ಈ ನೆಲದ ಹಾಡು’ ಕವಿತೆಯ ಸಾಲುಗಳು ಹೀಗೆ ಬರುತ್ತವೆ :

ನನ್ನ ತಾಯೆಂದು ಬಾಯೆಂದು
ಕೂಡ ಕರೆದು ಮೊಲಹಾಲ ಹೀರಿ ಬೆಳೆದ
ಕೃಷ್ಣ ಸಂತಾನವೇ, ಕಾಣಲಿಲ್ಲ ನಿಮಗೆ
ಮೊಲೆತೊಡೆಗಳ ಹೊರತಾಗಿ ಇನ್ನೊಂದು
ನಸುಗೆಂಪು ಆಸೆಗಳ ಹೊತ್ತ ಹೃದಯವುಂಟೆಂದು.

ಪ್ರತಿಭಾನಂದಕುಮಾರ್, ಮಲ್ಲಿಕಾ ಘಂಟಿ, ಶಶಿಕಲಾ ವೀರಯ್ಯಸ್ವಾಮಿ, ಗೀತಾನಾಗಭೂಷಣ ಇನ್ನೂ ಹಲವಾರು ಲೇಖಕಿಯರಲ್ಲಿ ಈ ರೀತಿಯ ಪ್ರತಿಭಟನೆಯ ದನಿಗಳಿವೆ. ವೀಣಾಶಾಂತೇಶ್ವರರ ಕತೆಗಳಲ್ಲೂ ಕೆಲಮಟ್ಟಗೆ ಈ ಅಂಶ ಕಾಣಬಹುದು. ಆದರೆ ಕವಿತೆಗಳಲ್ಲಿ ಈ ಅಂಶ ಇನ್ನೂ ಹೆಚ್ಚು ಸ್ಪಷ್ಟವಾಗಿ ಕಾಣುತ್ತದೆ.

ಈ ಪ್ರಜ್ಞಾಪೂರ್ವಕ ನೆಲೆಯಲ್ಲಿ ಗಮನಿಸಬಹುದಾದ ರೀತಿಯೆಂದರೆ ಅಪ್ಪ – ಆಮ್ಮಂದಿರಂತಹ ಬಿಂಬಗಳನ್ನು ಅಧಿಕಾರ ಕೇಂದ್ರಗಳಾಗಿ ನೋಡುವುದು ಇವನ್ನು ಕೆಡವಿ ಕಟ್ಟುವ ಹಂತದಲ್ಲಿ ಆತ್ಮನಿರೀಕ್ಷೆಯೂ ಸ್ವಲ್ಪಮಟ್ಟಿಗೆ ಇದೆ. ಹಲವಾರು ಬರಹಗಾರ್ತಿಯರು (ಅದರಲ್ಲೂ ಕವಿಯತ್ರಿಯರು ಎದುರುಗೊಳ್ಳುವ ಅಮ್ಮನ ಬಿಂಬವು ಸಾಂಪ್ರದಾಯಿಕ ಪುರುಷ ಸಮಾಜವನ್ನೇ ಹೋಲುತ್ತದೆ. ಸ. ಉಷಾ ಕವಿತೆಯ ಸಾಲುಗಳನ್ನು ನೋಡಬೇಕು :

ನಿನ್ನಮ್ಮ ಅವಳಮ್ಮ ಅವಳಮ್ಮ
ಲಾಗಾಯ್ತಿನಿಂದ ಊದಿದ ಪುಂಗಿ ನೀನೂ
ಓದಬೇಡ | ಈಗ ತಾನೇ ಹೆಡೆಯಾಡಿಸುತ್ತಿದ್ದೇನೆ
ಯಾರನ್ನಾದರೂ ಕಚ್ಚಿ ವಿಷವಿಳಿಸಿಕೊಳ್ಳುತ್ತೇನೆ
ನನಗೆ ದಾರಿ ಬಿಡು…..

ಈ ಬಗೆಯ ಆಕ್ರೋಶ ಮತ್ತು ಲೈಂಗಿಕ ಆಸೆಗಳ ಅಭಿವ್ಯಕ್ತಿ ಗಮನಾರ್ಹವಾಗಿದೆ. ಸೀರೆಯನ್ನು ಬಂಧನದ ಸಂಕೇತವಾಗಿ ನೋಡಿ ತಿರಸ್ಕರಿಸುವುದನ್ನೂ ಇದೇ ಬಗೆಯ ಅಭಿವ್ಯಕ್ತಿಯ ಗುಂಪಿಗೆ ಸೇರಿಸಬಹುದು.

ಸ್ತ್ರೀಜೈವಿಕ ರಚನೆಗಳಿಗೆ ಮೆತ್ತಿರುವ ಸೌಂದರ್ಯದ ಕಲ್ಪನೆಯನ್ನು ಮಿಥ್ ಎಂದು ಭಾವಿಸುವ ಸಂವೇದನೆಗಳೂ ಇಲ್ಲಿ ರೂಪುಗೊಳ್ಳುತ್ತವೆ. ಪ್ರತಿಭಾ ಕಾವ್ಯ ನೇಮಿಚಂದ್ರರ ಕಥೆಗಳಲ್ಲಿ ಕೆಲವು ಅಂಶಗಳನ್ನು ಗಮನಿಸಿದಾಗ ಸೌಂದರ್ಯದ ಮಿಥ್ ಅನ್ನು ಒಡೆಯುವ ಪ್ರಕ್ರಿಯೆಯಲ್ಲಿ ಬರಹಗಳಿರುವುದು ತಿಳಿಯುತ್ತದೆ. ತಾಯ್ತನದಂತಹ ಅನುಭವಗಳು ಮಧುರ ಅನುಭೂತಿಯನ್ನು ಒದಗಿಸುತ್ತಲೇ ಇರುವಂತಹುದಲ್ಲ ಎಂಬ ಭಾವನೆಯು ಸಹ ಪ್ರತಿಭಟನೆಯ ಮಾದರಿಯೇ. ಅದೊಂದು ರೀತಿ ಮಿಥ್‍ಗಳನ್ನು ಬಿಡಿಸಿಕೊಳ್ಳುವ ರೀತಿ. ಇವು ಎಲ್ಲವು ಪ್ರಜ್ಞಾಪೂರ್ವಕ ಸಂವೇದನೆಗಳಾಗಿಯೇ ಒದಗಿವೆ ಎನ್ನುವುದಿಲ್ಲಿ ಮುಖ್ಯ ಅಂಶ.

(ಆ)
ಇದರ ಜೊತೆ ಜೊತೆಗೆ ನಾಟಕೀಯವಾಗಿ ಕಾಣುವ ಸಂಗತಿಯೆಂದರೆ ಅನೇಕ ಬರಹಗಾರ್ತಿಯರು ತಮ್ಮನ್ನು ಸ್ತ್ರೀವಾದದ ಉಗ್ರಬಂಡಾಯ ಸ್ವರೂಪಗಳ ಅಸ್ಮಿತೆಯಲ್ಲಿ ಗುರುತಿಸಿಕೊಳ್ಳಲು ನಿರಾಕರಿಸಿದ್ದು. ಸ್ತ್ರೀಅಸ್ಮಿತೆಯೆನ್ನುವುದನ್ನು ವಾಚ್ಯವಾಗಿ ನೋಡಲು ಬಯಸದೇ ಇರುವ ಹಲವಾರು ಲೇಖಕಿಯರು ತಮ್ಮನ್ನು ತಾವು ‘ಸ್ತ್ರೀತ್ವದ’ ವಿಶಿಷ್ಟತೆಯಲ್ಲಿ ಗುರುತಿಸಿಕೊಳ್ಳುತ್ತಾರೆ. ಇದೂ ಕೂಡ ಪ್ರಜ್ಞಾಪೂರ್ವಕ ನಲೆಯೇ ಆಗಿದೆ. ಏಕೆಂದರೆ, ಸ್ತ್ರೀ ಎನ್ನುವ ಅರಿವು ಬೆನ್ನಿಗಿದ್ದು ವ್ಯಕ್ತಿವಿಶಿಷ್ಟತೆಯಲ್ಲಿ ಅದನ್ನು ನಿಜಗೊಳಿಸಿಕೊಳ್ಳುವ ಹಂಬಲ ಇಲ್ಲಿದೆ.

ಬಂಡಾಯ ಧಾಟಿಯ ಮನೋಧರ್ಮವು ಲೌಕಿಕ ಅಧಿಕಾರಗಳ ಮರುಹಂಚಿಕೆಯನ್ನು ಮಾಡಿಕೊಳ್ಳಬಯಸಿದರೆ, ಮಾನವತಾ ದೃಷ್ಟಿಕೋನದ ಸ್ತ್ರಿವಾದವು ಮಾನಸಿಕ ಅರಿವಿನಿಂದ ವಿಶಿಷ್ಟತೆಯನ್ನು ಪಡೆದುಕೊಳ್ಳಬಯಸುತ್ತದೆ. ಇದರ ಪ್ರಕಾರ ಸಾಮಾಜಿಕ ಕ್ರಿಯೆಗಳು ವ್ಯಕ್ತಿಯಲ್ಲಿ ಹುಟ್ಟುವುದರಿಂದ, ವ್ಯಕ್ತಿ ಸ್ವಯಂಪೂರ್ಣನಾಗುತ್ತಾನೆ. ಲೂಯಿ ಇರಿಗಾರೆ ಹೇಳುವ ‘ Ecriture feminine’ ಕಲ್ಪನೆಗು ವೈದೇಹಿಯವರ ‘ಅರ್ಧಗರ್ವದ ಗೌರಿ’ಯ ಕಲ್ಪನೆಗು ತಾಳೆಯಾಗುತ್ತದೆ. ಸ್ತ್ರೀವಿಶಿಷ್ಟತೆಯನ್ನು ಪರಿಭಾವಿಸಿ ಹೆಣ್ತನದ ಘನತೆ, ಹಿರಿಮೆಯಲ್ಲಿ ಅಸ್ಮಿತೆಯನ್ನು ಕಂಡುಕೊಳ್ಳುವ ಮಾದರಿಯು ಇಲ್ಲಿ ಇರುವುದರಿಂದ ಹೆಚ್ಚುಹೆಚ್ಚು ಮಾನವೀಯವಾದ ಸ್ತ್ರಿಪಾತ್ರಗಳನ್ನು ಇಲ್ಲಿ ಕಾಣುತ್ತೇವೆ. ಸ್ತ್ರೀಯರ ಲೋಕವೇ ವಿಶಿಷ್ಟವಾಗಿ ಅನಾವರಣಗೊಳ್ಳುವುದರಿಂದ ಇಲ್ಲಿಮಹತ್ತರ ಅನುಭವಗಳೇನೂ ಇರಬೇಕೆಂದಿಲ್ಲ. ಅವು ದೊಡ್ಡದಾಗಿರಲಿ, ಚಿಕ್ಕದಾಗಿರಲಿ ಅವನ್ನ ಸ್ತ್ರೀಕಂಡುಕೊಂಡ ರೀತಿಯಲ್ಲಿ ಅಭಿವ್ಯಕ್ತಗೊಳಿಸುವುದು ಮುಖ್ಯವಾಯಿತು. ಸ್ತ್ರೀಯರ ಏಕಾಂತ ಲೋಕವು ಆಪ್ತವಾಗಿ ತೆರೆದುಕೊಳ್ಳುತ್ತ ಹೋದಂತೆ, ಅವರದೇ ಆದ ಜಾಗ, ಜಗತ್ತುಗಳ ಇರುವು ಕೂಡ ತೆರೆದುಕೊಂಡಿತು. ‘ಹೆಣ್ಣಿನ ಚೀಲವನ್ನು ತೆಗೆದು ನೋಡಬಾರದು’ ಎಂದು ಹೇಳುವ ಮೂಲಕವೇ ಸ್ತ್ರೀ ಖಾಸಗಿತನದ ಲೋಕವೊಂದು ಇದೆ ಎಂದು ತಿಳಿಯುವಂತೆ ಮಾಡುವುದನ್ನು ಇಲ್ಲಿ ಕಾಣಬಹುದು.

ವೈದೇಹಿಯವರ ಕಥನಗಳಲ್ಲಿ ಕಾಣುವ ಸ್ತ್ರೀಲೋಕ ತನ್ನ ವ್ಯಕ್ತಿವಿಶಿಷ್ಟತೆಗಳಿಂದಲೇ ಆಪ್ತವಾಗುವ ಧಾಟಿಯಲ್ಲಿ ನಿರೂಪಿತವಾಗಿವೆ. ಪುರುಷ ಪ್ರಧಾನ ಸಮಾಜವನ್ನು ಎದುರಿಸುವಾಗ ತನ್ನತನವನ್ನು ಕಾಪಿಟ್ಟು, ಪೋಷಿಸಿಕೊಳ್ಳುವ ಹೆಣ್ಣುಗಳು ವೈದೇಹಿಯವರ ಕಥನಗಳಲ್ಲಿದ್ದಾರೆ. ಅದರ ಮೂಲಕ ವೈದೇಹಿಯವರ ಪ್ರಬಂಧವೊಂದರಲ್ಲಿ ಕಾಣುವ ಅಜ್ಜಯ್ಯನ ‘ಈಸಿಛೇರು’ ಕಂಬದ ಹಿಂದಿನಿಂದ ನಿಂತು ನೋಡುವ ಕಣ್ಣುಗಳಿಗೆ ಕಾಣುವ ರೀತಿ ಅಧಿಕಾರ ಸ್ವರೂಪದ್ದಾಗಿ ಕಾಣುತ್ತದೆ. ಅದರ ಮೂಲಕ ಅಧಿಕಾರ ಕೇಂದ್ರದ ಅರಿವು ನಿರೂಪಿಸಲಾಗುತ್ತದೆ. ವೈದೇಹಿಯವರ ಇನ್ನೊಂದು ಪ್ರಬಂಧದಲ್ಲಿ ಸ್ತ್ರೀಯರ ವಯ್ಯಾರ, ಒನಪುಗಳನ್ನು ಯಕ್ಷಗಾನದ ಸ್ತ್ರೀಪಾತ್ರಧಾರಿಯೊಬ್ಬ ತೋರಿಸುವಾಗ ಅದನ್ನು ಅನುಮಾನಿಸುವ ಅರಿವು ಇದೆ. ಆದರೆ ಅದೂ ಸಹ ಅಬ್ಬರದಿಂದ ನಿರೂಪಿಸಲ್ಪಟ್ಟಿಲ್ಲ. ‘ಸೌಗಂಧಿಯ ಸ್ವಗತಗಳು’ ಕಥೆಯ ನಾಯಕಿಗೆ ತನ್ನತನದ ಅರಿವು ಸ್ಪಷ್ಟವಾಗಿದೆಯಾದರೂ ಅವಳು ಹೋರಾಟಗಾರ್ತಿಯಾಗಿ ಬರುವುದಿಲ್ಲ. ದೇಹವಾಂಛೆಯ ಬಗ್ಗೆ ತಿಳಿಸುವ ಮಹಿಳಾ
ಪಾತ್ರಗಳು ಆಕ್ರೋಶದ ದನಿಯಲ್ಲಿ ಮಾತನಾಡುವುದಿಲ್ಲ ಎನ್ನುವುದೇ ಈ ನೆಲೆಯ ವಿಶಿಷ್ಟತೆಯಾಗುತ್ತದೆ. ಹೆರಿಗೆ, ಮುಟ್ಟು, ಕಾಮ, ಪ್ರೇಮಗಳು ಸಹಜತೆಯ ನೆಲೆಯಲ್ಲಿ ಒಪ್ಪಿತವಾಗುತ್ತವೆ ಮತ್ತು ತಮ್ಮದೇ ಆದ ಸ್ತ್ರೀಲೋಕವನ್ನು ತೆರೆದಿಡುತ್ತವೆ.

ಸ್ತ್ರೀಸಂವೇದನೆಯೆನ್ನುವುದು ಪುರುಷನಿಗೆ ಸಮಾನಾಂತರವಾಗಿ ಸವಾಲುಗಳನ್ನು ರೂಪಿಸುವುದಿಲ್ಲ. ಅದು ನಿತ್ಯದ ಆನುಭವಗಳಿಂದಲೇ ಆಗಿದೆ. ಇವನ್ನು ಬರಹದ ಮೂಲದ್ರವ್ಯವಾಗಿ ಬಳಸಿಕೊಳ್ಳಲಾಗಿದೆ. ಎ. ಕೆ. ರಾಮಾನುಜನ್‍ರ ನುಡಿಗಟ್ಟು ಬಳಸಿ ಹೇಳುವುದಾದರೆ, ‘ಅನುದಿನದ ಅಂತರಗಂಗೆ’ ಪ್ರತಿಭಾ ನಂದಕುಮಾರ್ ಇದನ್ನು ತಮ್ಮ ಕಾವ್ಯದಲ್ಲಿ ಬಳಸಿಕೊಂಡಿರುವುದಲ್ಲದೆ, ಅಡುಗೆಯ ಪರಿಕರಗಳನ್ನೇ ಬಳಸಿ ಶಕ್ತಿಶಾಲಿಯಾದ ಅಭಿವ್ಯಕ್ತಿ ರೂಪಕಗಳನ್ನು ಸೃಷ್ಟಿಸುತ್ತಾರೆ. ಅವರಂತೆಯೇ ಅನೇಕ ಲೇಖಕಿಯರು ಎಗ್ಗಿಲ್ಲದೆ, ತಮ್ಮ ಅನುಭವಗಳನ್ನು ದಾಖಲಿಸಲು ಬಯಸುತ್ತಾರೆ. ಅನುಭವವು ಅಡುಗೆಮನೆಯದ್ದೇ ಆದರೂ, ಅದರ ಶೋಧನೆಯ ದಿಕ್ಕು, ದೆಸೆಗಳೆಲ್ಲ ಗಂಭೀರವಾದವು. ಸುನಂದಾ ಪ್ರಕಾಶಕಡಮೆಯವರ ಕತೆಯೊಂದರ ಹೆಸರೇ, ‘ಕಿಚಣ್ ಪ್ಯಾರಡೈಸ್’ ಎಂದಾಗಿದೆ. ಅಲ್ಲಿ ದೊಡ್ಡ ದೊಡ್ಡ ಅನುಭವಗಳನ್ನು ಮೀಟುವುದು ಅಡುಗೆಯ ಪರಿಕರಗಳೇ. ಅನುಭವಗಳೆಂದರೆ ಹಿಮಾಲಯ ಹುಡುಕಿಕೊಂಡು ಹೋಗಿ ಅದನ್ನು ಹತ್ತುವುದಲ್ಲ; ಅವು ನಮ್ಮ ಸುತ್ತಲೇ ಸಿಗುವಂತವು ಅವುಗಳ ಸತತ ಸಾತತ್ಯದಿಂದ ಆಗುವಿಕೆ, ವಿಶಿಷ್ಟತೆ ಸಾಧ್ಯ ಎಂಬ ನೆಲೆ ಇದಾಗಿದೆ.

ಈ ನಂತರದ್ದು :
ಚಳವಳಿಯ ಹುರುಪು ಆವಿಯಾಗುತ್ತ ಬಂದಂತೆ ಇನ್ನೊಂದು ಹಂತದ ಸಂವೇದನೆಗಳು ನೆಲಗಾಣತೊಡಗಿವೆ. ಅವುಗಳನ್ನು ಹೀಗೆ ಗುರ್ತಿಸಿಕೊಳ್ಳಬಹುದು : (ಅ) ಕಥಾನಕಗಳ ವಿಪುಲ ಸೃಷ್ಟಿ, (ಆ) ಬಹುಮುಖಿತ್ವದ ಶೋಧ, (ಇ) ಭಾಷೆಯ ಪರಿಷ್ಕಾರ, (ಈ) ಸಾಹಿತ್ಯದ spaceಗಳನ್ನು ವೃದ್ಧಿಸಿಕೊಳ್ಳುವುದು – ಇದನ್ನು ಸೃಜನಶೀಲ ನೆಲೆ ಎನ್ನಬಹುದು.

ಮೊದಲನೆಯದಾಗಿ ಕಥಾನಕಗಳು ಮಹಿಳಾ ಬರಹಗಾರ್ತಿಯರಿಂದ ಬರುತ್ತಿವೆ. ಇದರಲ್ಲಿ ಹಲವಾರು ಜನ ಹವ್ಯಾಸಿ ಲೇಖಕಿಯರೂ ಇದ್ದಾರೆ. ಬರಹವನ್ನು ವೃತ್ತಿಪರತೆಯಿಂದ ಸ್ವೀಕರಿಸಿ ಬರೆಯುತ್ತಿರುವವರೂ ಇದ್ದಾರೆ. ಈ ರೀತಿಯ ಬರವಣಿಗೆಗಳು ಈ ಎರಡು ಗುಂಪಿನಿಂದ ಬರುತ್ತಿವೆ. ಜಾನ್ (genre)ಗಳನ್ನು ವೈವಿಧ್ಯಾಮಯ ರೀತಿಯಲ್ಲಿ ಒಡೆದುಕಟ್ಟುವ ಕೌಶಲವನ್ನು ನಾವಿಂದು ಕಾಣುತ್ತಿದ್ದೇವೆ. ಒಂದು ಕಾಲದಲ್ಲಿ ಕಾವ್ಯವು ಮಹಿಳಾ ಅಭಿವ್ಯಕ್ತಿಯ ಸುವರ್ಣ ಮಾಧ್ಯಮವಾಗಿರುವುದನ್ನು ನೋಡಬಹುದು. ಸ್ವಂತ ಅನುಭವಗಳನ್ನು ದಾಖಲು ಮಾಡುತ್ತಲೇ ಅದನ್ನು ಕಾವ್ಯಭಾಷೆಯಲ್ಲಿ (ಮುಖ್ಯವಾಗಿ ಸಾಂಕೇತಿಕ ಭಾಷೆಯಲ್ಲಿ) ಮುಚ್ಚಿಡುವ ವ್ಯಕ್ತಿಕೇಂದ್ರಿತ ನೆಲೆಯದಾಗಿತ್ತು. ಆದರೆ ಈಗಿನ ರಚನೆಗಳನ್ನು ನೋಡಿದಾಗ ಕಥಾನಕಗಳನ್ನು ರೂಪಿಸುವುದು ಒಂದು ತೆರೆದುಕೊಳ್ಳುವ ರೀತಿಯನ್ನು ಇನ್ನೂ ಹೆಚ್ಚು ಸ್ಪಷ್ಟಗೊಳಿಸುತ್ತಿದೆ ಎನ್ನಿಸುತ್ತದೆ. ಅವುಗಳಲ್ಲಿ ವೈಜ್ಞಾನಿಕ ಬರಹಗಳು, ಮಹಿಳಾ ವಿಜ್ಞಾನಿಗಳ ಆತ್ಮಕಥೆ, ಜೀವನ ಚರಿತ್ರೆ, ಪ್ರವಾಸ, ಅನುಭವ ಕಥನ, ವೈದ್ಯಕೀಯ ಬರಹಗಳಲ್ಲಿ ಕಥಾನಕದ ಸೃಜನಶೀಲ ನೆಲೆಗಳು ಅರಳುತ್ತಿವೆ. ನೇಮಿಚಂದ್ರ, ದು. ಸರಸ್ವತಿ, ಪಾರ್ವತಮ್ಮ ತಮಹಾಲಿಂಗಶೆಟ್ಟಿ, ಎಚ್. ನಾಗವೇಣಿ, ಸವಿತಾನಾಗಭೂಷಣ, ಗಿರಿಜಮ್ಮ, ವಿಜಯಲಕ್ಷ್ಮಿ ಬಾಳೇಕುಂದ್ರಿ, ಲೀಲಾವತಿ ದೇವದಾಸ್ – ಹೀಗೆ ಹತ್ತುಹಲವು ಲೇಖಕಿಯರೇ ಇಲ್ಲಿದ್ದಾರೆ.

ಭಾರತದ ಕಥಾನಕಗಳನ್ನು ಸಂಪಾದಿಸಿ ಪ್ರಕಟಿಸಿರುವ ಶ್ರೀಮತಿ ಸೂಸಿತಾರು, ಕೆ.ಲಲಿತಾ, ತೇಜಸ್ವಿನೀ ನಿರಂಜನ ಮುಂತಾದವರು ಕಥಾನಕಗಳ ಮೂಲಕವೇ ಸ್ತ್ರೀಯರ ಚರಿತ್ರೆಯನ್ನು ಕಟ್ಟಿಕೊಡಬಹುದಾದ ಸುಳಿವುಗಳನ್ನು ನೀಡುತ್ತಿದ್ದಾರೆ. ವಿಮರ್ಶೆಯೂ ಈ ದಿಕ್ಕಿನಲ್ಲಿ ಕ್ರಿಯಾಶೀಲವಾಗಿದ್ದು, ಕಥಾನಕಗಳಿಂದಲೇ ಒಂದು ವಿಮರ್ಶೆಯ ಹಂದರ ನಿರ್ಮಿಸಿಕೊಳ್ಳುತ್ತಲಿದೆ. ಜಾನಪದ ಸಿರಿಯಂತಹ ಕಥಾನಕಗಳು ಎಚ್.
ನಾಗವೇಣಿಯವರಲ್ಲಿ ಪುನರ್ನಿರ್ಮಾಣಗೊಳ್ಳುತ್ತಿರುವ ಸಂದರ್ಭದಲ್ಲಿ, ಜಾನಪದ ಪರಂಪರೆಯ ಆಕರಗಳ ಕಥಾನಕಗಳ ಸೃಷ್ಟಿಯೂ ಸಾಧ್ಯ ಎಂದು ಕಾಣುತ್ತಿದೆ.

ಎರಡನೆಯದಾಗಿ, ಬಹುಮುಖಿತ್ವದ ಶೋಧದಲ್ಲಿ spaceಗಳನ್ನು ಕಂಡುಕೊಳ್ಳುತ್ತಿರುವುದು ಇಂದಿನ ಸ್ತ್ರೀಸಂವೇದನೆಯಲ್ಲಿ ಕಾಣುತ್ತಿದೆ. ಈ ಮೊದಲು ಪ್ರಸ್ತಾಪಿಸಿದಂತೆ ಹೆಣ್ಣು ಎನ್ನುವುದನ್ನು ಜೈವಿಕ ಬದ್ಧತೆಯಿಂದ ಏಕಮುಖವಾಗಿ ಗ್ರಹಿಸಲಾಗದು. ಸ್ತ್ರೀತ್ವದ ಅನುಭವಗಳು ಸಾಮಾಜಿಕ ಪಾತಳಿಯಿಂದ ಹುಟ್ಟುವ ಜಾತಿ, ವರ್ಗ, ಸಂಸ್ಕೃತಿಗಳಿಂದ ನಿರೂಪಿಸಲ್ಪಡುತ್ತವೆ. ಅವು ಎಲ್ಲ ಸ್ತ್ರೀಯರಿಗು ಒಂದೇ ಆಗಿರುವುದಿಲ್ಲ. ಒಂದೇ ಪ್ರದೇಶಕ್ಕೆ ಸೇರಿದ ವೈದೇಹಿ ಮತ್ತು ಎಜ್.ನಾಗವೇಣಿಯವರ ಗ್ರಹಿಕೆಗಳು ಸಾಂಸ್ಕೃತಿಕ ನಿಶ್ಚಿತತೆಗಳಿಂದ ಭಿನ್ನವಾಗಿ ಕಾಣುತ್ತವೆ. ಮಧ್ಯಮವರ್ಗದ ಸುಶಿಕ್ಷಿತ ಪ್ರಜ್ಞೆಯು ಟಿಸಿಲಾಗಿ ಬರುತ್ತಿದ್ದ ಸ್ತ್ರೀಸಂವೇದನೆಗಳು ಇಂದು ಗೀತಾ ನಾಗಭೂಷಣ, ಬಿ.ಟಿ.ಜಾಹ್ನವಿ, ದು.ಸರಸ್ವತಿಯಂತಹ ಲೇಖಕಿಯರಿಂದ ಬಹುಮುಖಿತ್ವದ ನೆಲೆಗಳನ್ನು ವಿಸ್ತರಿಸಿಕೊಳ್ಳುವಂತಿದೆ. ಸುಮಂಗಲಾ ಅವರ ಕಥಾನಕಗಳು ವರ್ಗನಿಶ್ಚಿತತೆಯನ್ನು ಸೂಚಿಸುತ್ತಿದ್ದರೆ (ಅವರ ಕಥಗಳಲ್ಲಿ ಬರುವ ಮನೆಗೆಲಸದ ಹೆಣ್ಣುಗಳು), ಸವಿತಾ ನಾಗಭೂಷಣರ ‘ಸ್ತ್ರೀಲೋಕ’ವು ಸ್ತ್ರೀಯರದೆಲ್ಲ ಒಂದೇ ಲೋಕ ಅಲ್ಲ, ಜೈವಿಕತೆಯೂ ಅಲ್ಲಿ ಸಮಾನ ಅಂಶವಲ್ಲ ಎಂದು ತೋರಿಸುತ್ತದೆ. ಧರ್ಮವೆನ್ನುವ ನಿಶ್ಚಿತತೆಯನ್ನು ಸಾರಾ ಆಬುಬಕರ್, ಬಾನುಮುಷ್ತಾಕ್ ತರದ ಲೇಖಕಿಯರು ಪರಿಷ್ಕರಣೆಯ ನೆಲೆಯಲ್ಲಿ ಗ್ರಹಿಸುತ್ತಾರೆ. ಪ್ರತಿರೋಧಕ ನೆಲೆಗಳಿಂದ ಹೊರಟು ಜೀವಮುಖಿಯಾಗಿಸುವ ಕಥಾನಕಗಳನ್ನು ಅವರು ನಿರೂಪಿಸುತ್ತಾರೆ. ಸಾರಾ ಅವರ ‘ಮುಸಿಂ ಹುಡುಗಿ ಶಾಲೆ ಕಲಿತದ್ದು’, ‘ಚಂದ್ರಗಿರಿಯ ತೀರದಲ್ಲಿ’ ಕನ್ನಡದಲ್ಲಿ ಮುಸ್ಲಿಂ ಸ್ತ್ರೀಸಂವೇದನೆಯ ಹೊಸ ಮಗ್ಗುಲನ್ನು ತೆರೆದು ತೋರಿಸಿದವು. ಅವು ನಿಶ್ಚಿತತೆಗಳನ್ನು ನಿರೂಪಿಸುತ್ತಲೇ, ಬಹುಮುಖಿಯಾದ ಸಂವೇದನೆಗಳನ್ನು ರೂಪಿಸಿಕೊಂಡಿದ್ದು, ಕಥಾನಕಗಳಾಗಿ ಯಶಸ್ವಿಯಾಗಲು ಕಾರಣವಾಯಿತು.

ಹಾಗೆ ನೋಡಿದರೆ ಬರಹಗಾರರ ಭಾಷೆಯೂ ಒಂದು ನಿಶ್ಚಿತತೆಗಳ ಮೂಲಕವೇ ನಮಗೆ ಒದಗಿ ಬರುವಂತದ್ದು. ಜಾತಿ, ವರ್ಗ, ವರ್ಣ ವೈವಿಧ್ಯಗಳು ಸೃಷ್ಟಿಸುವ ಸಾಂಸ್ಕೃತಿಕ ಹಿನ್ನೆಲೆ ಭಾಷಗಿದ್ದೇ ಇರುತ್ತದೆ. ಅನುಭವ ಕಥಾನಕಗಳಲ್ಲಿ ಹೊಮ್ಮುವ ವಿವರಗಳು, ಚಿತ್ರಗಳು ಸಾಂಸ್ಕೃತಿಕ ನಿಶ್ಚಿತತೆಯನ್ನು ಬಿಟ್ಟುಬಿಡಲು ಸಾಧ್ಯವಿಲ್ಲ. ಹಾಗಾಗಿ ಕಾರಂತರ ಕಾದಂಬರಿಗಳಲ್ಲಿ ಕಾಣುವ ತುಳುನಾಡಿನ ವಿವರಗಳು ಎಚ್. ನಾಗವೇಣಿಯವರಲ್ಲಿ ವಿಭಿನ್ನವಾಗಿ ಪ್ರಕಟಗೊಳ್ಳಬಹುದಾದ ಸಾಧ್ಯತೆಗಳನ್ನು ಗಮನಿಸಬೇಕು.

ಚಳವಳಿಗಳ ಬೆಂಬಲದ ನುಡಿಗಳಿಂದ ಹೊರಬಂದು, ಅನುಭವಗಳಿಂದ ಬಿಚ್ಚಿಕೊಳ್ಳುತ್ತಿರುವ ಇಂದಿನ ಮಹಿಳಾ ಸಂವೇದನೆಯ ಸ್ವರೂಪವು, ಸಾಹಿತ್ಯದಲ್ಲಿ spaceಗಳನ್ನು ಸೃಷ್ಟಿಸಿಕೊಳ್ಳುತ್ತಿದೆ. ಅಂದರೆ, ಒಂದು ಓದಿಗೆ ಮುಗಿದು ಹೋಗುವಂತಿರದೆ, ಅದನ್ನು ಮತ್ತೆ ಮತ್ತೆ ಓದಿಸಿಕೊಳ್ಳುವ ಸಾಧ್ಯತೆಗಳನ್ನು ಸಾಹಿತ್ಯದಲ್ಲಿ ಸೃಷ್ಟಿಸುವುದು. ಇದು ಹೆಚ್ಚು ಸಂಕೀರ್ಣವೂ, ಕ್ರಿಯಾಶೀಲವೂ ಆದ ಸವಾಲು. ಇದನ್ನು ಬಹುಪಾಲು ಬರಹಗಾರ್ತಿಯರ ಬರಹಗಳಲ್ಲಿ ಕಾಣುತ್ತಿರುವುದು ಒಂದು ಒಳ್ಳೆಯ ಸೂಚನೆಯೇ ಆಗಿದೆ.

ಕೊನೆಯಲ್ಲಿ ಹೇಳುವುದಾದರೆ, ಮೇಲೆ ಹೇಳಿದ ಎಲ್ಲಾ ಅಂಶಗಳ ಕಾರಣಗಳಿಂದ ಸೃಜನಶೀಲ ನೆಲೆಗಳಿಂದ ಮಹಿಳಾ ಸಂವೇದನೆಗಳು ರೂಪುಗೊಳ್ಳುತ್ತಿರುವ ಸೂಚನೆ ಸಿಗುತ್ತಿದೆ. ಇದರಿಂದ ಇನ್ನಷ್ಟು ಹೆಚ್ಚು ನಿರೀಕ್ಷೆಗಳು ಮಹಿಳಾ ಸಂವೇದನೆಗಳಿಂದ ರೂಪುಗೊಳ್ಳುವ ಸಾಹಿತ್ಯದ ಮೇಲಿವೆ.

(ಬೆಂ.ವಿ.ವಿ. ಕನ್ನಡ ಆಧ್ಯಾಪಕರ ಕಾರ್ಯಾಗರದಲ್ಲಿ ಮಂಡಿಸಿದ ಪ್ರಬಂಧ.)
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಮ್ಮೂರ ಕೇರಿ
Next post ನಮ್ಮೂರ ಅಜ್ಜ

ಸಣ್ಣ ಕತೆ

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…