ಜನವರಿ ಅಥವಾ ಮೇ ತಿಂಗಳಿನ ಮಧ್ಯಭಾಗದಲ್ಲಿ
ಆತ ನಮ್ಮ ಸಾರಾಯಿ ಗಡಂಗಿಗೆ ವೆಂಡರ್ ಆಗಿ ಬಂದ.
ಅಷ್ಟೊತ್ತಿಗಾಗಲೇ ಛೋಟ ಡಾನ್‌ಗಳೆನ್ನಿಸಿಕೊಂಡವರ
ತಲೆ ತೆಗೆದು ಬಂದಿದ್ದ.
ಅವನ ಮುಖದ ಮೇಲೆ ನೊಣಗಳು ಹಾಯುತ್ತಿರಲಿಲ್ಲ;
ಆದರೆ ಹೂಎಲೆ ತೊಟ್ಟುಗಳು ತೇಲಿತೇಲಿ ಬೀಳುತ್ತಿದ್ದವು.
ಅವನು ನಾಪತ್ತೆಯಾದ ಆ ದಿನಗಳ ಬಗ್ಗೆ ಖಚಿತವಾಗಿ ಹೇಳಲಾಗದು.
ಅವನು ತಿರುಗಿ ಬಂದಾಗ ದಿಕ್ಕಿಲ್ಲದ, ನಿರ್ಗತಿಕ ಮನುಷ್ಯನಂತೆ
ದಟ್ಟ ದಾಡಿ ಬೆಳೆಸಿಕೊಂಡಿದ್ದ, ಕುಂಟುತ್ತಿದ್ದ.
ದೈಹಿಕವಾಗಿ, ಮಾನಸಿಕವಾಗಿ ವಿರೋಚಿತ
ಸೋಲು ಕಂಡಿದ್ದನೆಂದೇ ಹೇಳಬಹುದು.
ಸಾರಾಯಿ ಗಡಂಗು ತೆರೆಯುತ್ತೇನೆಂದೋಗಿ
ಬಾರ್ ಮಾಲೀಕನಿಂದ ಭೀಕರ ಹಲ್ಲೆಗೊಳಗಾದ,
ಸತ್ತು ಹೋಗಿದ್ದನಾದರೂ ಬದುಕುಳಿದಿದ್ದ.
ಈ ಸಲ ಕಾಣೆಯಾದವನು ಬಹಳ ಬೇಗ ತನ್ನ ಕಡೆಯ ದಿನವನ್ನು
ಆತುರಾತುರವಾಗಿ ಪ್ರಕಟಿಸಿಬಿಟ್ಟಿದ್ದ.
ಕೆಲಸದ ಆಮಿಷ ಒಡ್ಡಿ, ಪರಸ್ಥಳವೊಂದಕ್ಕೆ ಕರೆದೊಯ್ದ ಹಳೆದ್ವೇಷಿಗಳು
ಅವನ ಪಾದಗಳನ್ನು ಕತ್ತರಿಸಿ, ನೇಣು ಹಾಕಿದ್ದರು.
ಹೀಗೆ ಭೀಕರ ಕಗ್ಗೊಲೆಯಲ್ಲಿ ಒಂದು ದಿನ ಅಂತ್ಯಗೊಂಡಿದ್ದ;
ಅವನು ಇದ್ದನೆಂಬುದಕ್ಕೆ ನನ್ನ ಬಳಿ ಯಾವುದೇ ಪುರಾವೆ ಇಲ್ಲ.
*****