ಪ್ರಿಯ ಸಖಿ,
ಇಂದು ನಾವು ಬಹಿರಂಗದ ಆಡಂಬರ, ಡಾಂಭಿಕತೆ, ಸೋಗಿನ ಸುಳಿಗೆ ಸಿಲುಕಿ ನಿಜವಾದ ಆತ್ಮಸೌಂದರ್ಯವನ್ನು ಮರೆತುಬಿಟ್ಟದ್ದೇವೆ. ಪಂಡಿತರತ್ನ ಎರ್ತೂರು ಶಾಂತಿರಾಜ ಶಾಸ್ತ್ರಿಯವರು ತಮ್ಮ ಒಂದು ಹಾಡಿನಲ್ಲಿ
ಅರಿಯಲಿಲ್ಲವಲ್ಲ
ಆತ್ಮನ ಮರೆತು ಕೆಟ್ಟರೆಲ್ಲಾ
ಹೊರಗಣ ಸೋಗೆಯ
ತಿಂದೊಳಗಿನ
ರಸದಿರವನರಿಯದಿಹ ಕುರಿಯಂತೆಲ್ಲಾ
ಎಂದಿದ್ದಾರೆ. ಕುರಿ ಸೋಗೆಯನ್ನು ಜಗಿದು ಉಗಿಯುತ್ತದೆ. ಅದಕ್ಕೆ ಆ ಗರಿಯೊಳಗಿನ ರಸದ ಅರಿವು ಇರುವುದೇ ಇಲ್ಲ. ಹಾಗೇ ನಾವು ಆತ್ಮದ ಔನ್ನತ್ಯವನ್ನು ಮರೆತು ಹೊರಗಿನ ಆಡಂಬರಕ್ಕೆ ಮನಸೋತು ಹೋಗಿದ್ದೇವೆ ಎನ್ನುತ್ತಾರೆ.

ನಮ್ಮ ಎಲ್ಲ ಧರ್ಮಗಳೂ ಆತ್ಮೋದ್ಧಾರಕ್ಕೆ ಹೆಚ್ಚಿನ ಮಹತ್ವ ನೀಡಿವೆ. ಬಹಿರಂಗ ಶುದ್ಧಿಗಿಂತಾ ಅಂತರಂಗ ಶುದ್ಧಿಯೇ ಮುಖ್ಯವಾದುದು. ದೇವರಿಗಾಗಿ ಕೋರಿಕೆಗೆ ಗಂಟೆಗಟ್ಟಲೆ ಪೂಜೆ, ಜಪ, ತಪ, ಧ್ಯಾನಗಳನ್ನು ಮಾಡಿಯೂ ಮನಸ್ಸನ್ನು ಕೇಂದ್ರೀಕರಿಸಲಾಗದ ಮೇಲೆ ಅಂತಹಾ ಪೂಜೆ, ಧ್ಯಾನಗಳಿಂದ ಪ್ರಯೋಜನವೇನು? ದೇಹವನ್ನು ನಾನಾ ವಿಧವಾದ ವಸ್ತ್ರ, ಆಭರಣ, ಪ್ರಸಾಧನಗಳಿಂದ ಸಿಂಗರಿಸಿ ಅದನ್ನೇ ನಾವು ಸೌಂದರ್ಯವೆಂದುಕೊಂಡು ಬೀಗುತ್ತೇವೆ. ಆದರೆ ನಿಜವಾದ ಆತ್ಮ ಸೌಂದರ್ಯಕ್ಕೆ ಇಂತಹ ಯಾವುದೇ ಆಡಂಬರವೂ ಬೇಡ.

ಹಾಗಾದರೆ ಸಖೀ ಈ ಆತ್ಮಸೌಂದರ್ಯವೆಂದರೆ ಏನು? ಅದನ್ನು ವೃದ್ಧಿಸಿಕೊಳ್ಳುವುದು ಹೇಗೆ? ನಾವು ಒಳ್ಳೆಯದೆಂದು ನಂಬಿರುವ ತತ್ವಗಳು, ಮೌಲ್ಯಗಳು, ಗುಣಗಳು ಇವುಗಳ ಅಳವಡಿಕೆಯೇ ಆತ್ಮದ ಸಿಂಗಾರದೊಡವೆಗಳು. ಒಳ್ಳೆಯದನ್ನು ಕುರಿತು ಆಲೋಚಿಸುವ, ಒಳ್ಳೆಯದನ್ನು ಮಾಡುವ, ಒಳ್ಳೆಯ ರೀತಿಯಲ್ಲಿ ನಡೆಯುವ ಬದುಕಿಗೆ ಯಾವ ಸೋಗೂ ಬೇಕಿಲ್ಲ. ಇಂದಿನ ಬದುಕಿನ ಅಧೋಗತಿಗೆ ಕಾರಣವೇ ನಾವು. ಆತ್ಮವನ್ನು ನಿರ್ಲಕ್ಷಿಸಿರುವುದು ಬುದ್ಧಿಪ್ರಧಾನವಾದ, ವ್ಯಾವಹಾರಿಕ ಬದುಕೇ ನಮಗಿಂದು ಮಹತ್ವದ್ದಾಗಿರುವುದರಿಂದಲೇ ನಮ್ಮ ಸುತ್ತಲೂ ಅನಾಚಾರ ಹೆಚ್ಚಾಗಿ ಶಾಂತಿ ನೆಮ್ಮದಿಗಳು ಕಾಣೆಯಾಗಿವೆ.

ನಿಜವಾದ ಆತ್ಮಸೌಂದರ್ಯದ ಬಗೆಗೆ ಮನುಜ ತಿಳಿದುಕೊಂಡು ಎಚ್ಚೆತ್ತು ಆಡಂಬರದ ಹಾದಿಯನ್ನು ಬಿಟ್ಟು ಸತ್ಯದ ಹಾದಿಯಲ್ಲಿ ನಡೆಯತೊಡಗಿದಾಗ ನಿಜವಾಗಿ ನಾವು ‘ಆತ್ಮ’ ಹೊಂದಿದವರಾಗುತ್ತೇವೆ. ಇಂತಹ ಶಾಶ್ವತವಾದ ಆತ್ಮ ಸೌಂದರ್ಯವನ್ನು ಪಡೆಯುವೆಡೆಗೆ ಹಂತಹಂತವಾಗಿಯಾದರೂ ಸರಿ ನಾವು ಹೆಜ್ಜೆ ಹಾಕೋಣ. ಅಲ್ಲವೇ ಸಖೀ?
*****