ಬದಲಾವಣೆ: ಮಾತು ಕೇಳುವುದು ಮತ್ತು ಕೇಳಿಸಿಕೊಳ್ಳುವುದು

ಬದಲಾವಣೆ: ಮಾತು ಕೇಳುವುದು ಮತ್ತು ಕೇಳಿಸಿಕೊಳ್ಳುವುದು

ಮಾತು ಕೇಳುವುದಕ್ಕೂ ಕೇಳಿಸಿಕೊಳ್ಳುವುದಕ್ಕೂ ವ್ಯತ್ಯಾಸವಿದೆ. ಬೇರೆಯವರ ಮಾತನ್ನು ಕೇಳುವುದು ದೌರ್ಬಲ್ಯ, ಕೇಳಿಸಿಕೊಳ್ಳದೆ ಇರುವುದು ಅಪರಾಧ. ಆದರೆ ನಮಗೆಲ್ಲ ಸಾಮಾನ್ಯವಾಗಿ ಬೇರೆಯವರು ನಮ್ಮ ಮಾತು ಕೇಳಬೇಕೆಂಬ ಆಸೆ ಇರುತ್ತದೆಯೇ ಹೊರತು ಕೇಳಿಸಿಕೊಳ್ಳಬೇಕು ಎಂಬ ಇಚ್ಛೆಯಲ್ಲ. ಮಕ್ಕಳು ನನ್ನ ಮಾತು ಕೇಳುವುದಿಲ್ಲ, ನನ್ನ ಹಿಂಬಾಲಕರು ನನ್ನ ಮಾತು ಕೇಳುವುದಿಲ್ಲ, ನಾನು ಹೇಳಿದ್ದೆ ನೀನು ಕೇಳಿದೆಯಾ? ಹೀಗೆಲ್ಲ ಹೇಳುವುದುಂಟಲ್ಲ, ಅದರ ಅರ್ಥ ಏನು? ನನ್ನ ಮಾತು ಕೇಳಬೇಕು ಎಂದರೆ ನನ್ನ ಅಧಿಕಾರವನ್ನು ಒಪ್ಪಿಕೊಂಡು ನಾನು ಹೇಳಿದಂತೆ ನಡೆಯಬೇಕು ಎಂದಷ್ಟೇ ಅಲ್ಲವೇ? ಮಾತು ಕೇಳುವುದರಲ್ಲಿ ಅಧಿಕಾರದ ಅಪೇಕ್ಷೆ ಇದೆ, ಅಧಿಕಾರವನ್ನು ಒಪ್ಪಿಕೊಳ್ಳುವ ಹಂಬಲ ಇದೆ. ಬೇರೆಯವರ ಮಾತು ಕೇಳುವುದು ಎಂದರೆ, ಅವರಿಗೆ ಗೊತ್ತು, ನನಗೆ ಗೊತ್ತಿಲ್ಲ, ಅವರು ಹೇಳಿದಂತೆ ಕೇಳುತ್ತೇನೆ. ಎಂದೇ ಅರ್ಥವಲ್ಲವೇ? ಆದರೆ ಮಾತನ್ನು ಕೇಳಿಸಿಕೊಳ್ಳುವುದೆಂದರೆ ಬೇರೆಯವರ ಮಾತು ನನಗೆ ಇಷ್ಟವಾಗದಿದ್ದರೂ ಕೇಳಿಸಿಕೊಂಡು ಅವರೇನು ಹೇಳುತ್ತಿದ್ದಾರೆ ಎಂದು ಅರ್ಥಮಾಡಿಕೊಳ್ಳುವುದು. ಕೇಳಿಸಿಕೊಳ್ಳುವುದು ಒಂದು ಅನುಭವ. ನಮ್ಮ ಒಳಗಿನ ಬದಲಾವಣೆಗೆ ಕಾರಣವಾಗುವಂಥ ಅನುಭವ.

ಮಾತು ಕೇಳುವುದಕ್ಕೆ ವಿಧೇಯತೆಯಷ್ಟೇ ಸಾಕು. ಆದರೆ ಮಾತನ್ನು ಕೇಳಿಸಿಕೊಳ್ಳುವುದಕ್ಕೆ ಸ್ವಾತಂತ್ರ್ಯ ಬೇಕು. ಕೇಳಿಸಿಕೊಳ್ಳುವುದು ಬಹಳ ಕಷ್ಟದ ಕೆಲಸ. ಏಕೆಂದರೆ ಸಾಮಾನ್ಯವಾಗಿ ನಾವೆಲ್ಲ ಬೇರೆಯವರ ಮಾತನ್ನು ಕೇಳಿಸಿಕೊಳ್ಳುವುದು ಅದನ್ನು ಒಪ್ಪುವುದಕ್ಕೆ ಅಥವ ವಿರೋಧಿಸುವುದಕ್ಕೆ ಮಾತ್ರ. ಒಪ್ಪಿಗೆಯೂ ಇಲ್ಲದೆ, ವಿರೋಧವೂ ಇಲ್ಲದೆ ಬೇರೆಯವರು ನಿಜವಾಗಿ ಏನು ಹೇಳುತ್ತಿದ್ದಾರೆ ಎಂದು ಸುಮ್ಮನೆ ಕೇಳಿಸಿಕೊಳ್ಳುವುದು ಎಷ್ಟು ಕಷ್ಟ ಅಲ್ಲವೇ?

ನಾವು ಕೀಳಿಸಿಕೊಂಡ ಮಾತನ್ನು ಒಪ್ಪುವುದಾಗಲೀ ವಿರೋಧಿಸುವುದಾಗಲೀ ಏಕೆ? ನಮ್ಮ ಸುತ್ತಮುತ್ತ ಇರುವ, ಆಗುತ್ತಿರುವ ಎಲ್ಲದರ ಬಗ್ಗೆ ನಮಗೆ ಆಗಲೇ ಎಂಥದೋ ಒಂದು ಅಭಿಪ್ರಾಯ, ಒಂದು ತೀರ್‍ಮಾನ ಇರುತ್ತದೆ. ಎಲ್ಲವೂ ಹೀಗೆ ಹೀಗೆಯೇ ಆಗಬೇಕು ಎಂಬ ಎಂಥದೋ ಒಂದು ನಂಬಿಕೆ ಇರುತ್ತದೆ. ನಮ್ಮ ಕಿವಿಗೆ ಬಿದ್ದ ಮಾತು ನಮ್ಮ ಅಭಿಪ್ರಾಯ, ತೀರ್‍ಮಾನ, ನಂಬಿಕಗೆ ಅನುಗುಣವಾಗಿದ್ದರೆ ಒಪ್ಪುತ್ತೇವೆ, ಇಲ್ಲದಿದ್ದರೆ ಕೂಡಲೆ ವಿರೋಧಿಸಲು ತೊಡಗುತ್ತೇವೆ. ಒಪ್ಪಿಗೆ ಅಥವ ವಿರೋಧ ಸೂಚಿಸುವ ಆತುರದಲ್ಲಿ ಮಾತನ್ನು ಕೇಳಿಸಿಕೊಳ್ಳುವುದೇ ಇಲ್ಲ!

ವಾಸ್ತವದ ನೆಲೆ, ಭಾವನೆಯ ನೆಲೆ, ಆಲೋಚನೆಯ ನೆಲೆ, ತೀರ್‍ಮಾನದ ನೆಲೆ, ನೀತಿಯ ನೆಲೆ, ಆಧ್ಯಾತ್ಮಿಕ ನೆಲೆ ಹೀಗೆ ಮಾತು ಯಾವ ನಲೆಯಿಂದ ಹೊರಟದ್ದು ಎಂದು ತಿಳಿಯುವುದಕ್ಕೆ ಗಮನಕೊಟ್ಟು ಕೇಳಿಸಿಕೊಳ್ಳುವುದು ಮುಖ್ಯವಾಗುತ್ತದೆ. ಸಂಜೆ ಮನೆಗೆ ಬಂದ ಗಂಡ, ‘ಇದೇನು ಮನೆ ಇಷ್ಟು ಗಲೀಜಾಗಿದೆ ಎಂದಾಗ ಆತ ಕೇವಲ ವಾಸ್ತವದ ನೆಲೆಯಲ್ಲಿ ಸುಮ್ಮನೆ ಹೇಳಿರಬಹುದು. ಗೃಹಿಣಿ ಅದನ್ನು ಹಾಗೆ ಕೇಳಿಸಿಕೊಳ್ಳದೆ ತನ್ನ ಸೋಮಾರಿತನದ ಮೇಲೆ ನೀಡಿದ ತೀರ್‍ಪು ಎಂದು ಭಾವಿಸಿ, ‘ಬೆಳಗಿನಿಂದ ದುಡಿದದ್ದು ನಿಮಗೆ ಲೆಕ್ಕಕ್ಕೇ ಇಲ್ಲ’ ಎಂದು ಪ್ರತ್ಯುತ್ತರ ನೀಡಿದರೆ ಜಗಳ ಶುರು! ಹಾಗೆ ನೋಡಿದರೆ ಎಲ್ಲ ಜಗಳಗಳೂ ನಿಜವಾಗಿ ಸಂಭವಿಸುವ ಮುನ್ನ ನಮ್ಮ ಮನಸ್ಸಿನಲ್ಲಿ ಒಮ್ಮೆ ರಿಹರ್ಸಲ್ ಮಾಡಿಕೊಂಡ ಜಗಳಗಳೇ ಆಗಿರುತ್ತವೆ. ‘ಅವನು ಹಾಗನ್ನುತ್ತಾನೆ. ಅದಕ್ಕೆ ನಾನು ಹೀಗೆ ಹೇಳುತ್ತೇನೆ’ ಎಂದು ಜಗಳಕ್ಕಿಂತ ಬಹಳ ಮೊದಲೇ ಮಾನಸಿಕವಾಗಿ ಸಿದ್ಧವಾಗಿರುತ್ತೇವೆ. ಅವನು ಹಾಗನ್ನದಿದ್ದರೂ ನಾವು ಸಿದ್ದಮಾಡಿಕೊಂಡಿದ್ದ ಉತ್ತರ ಕೊಟ್ಟು ಜಗಳ ಆರಂಭಿಸಿಯೇ ಬಿಡುತ್ತೇವೆ! ಅವನು ಅಂದ ಮಾತನ್ನು ನಾವು ಕೇಳಿಸಿಕೊಳ್ಳುವುದೇ ಇಲ್ಲ.

ಇನ್ನೊಂದು ಸಂಗತಿ ಎಂದರೆ ಮಾತಿನ ಅರ್ಥ ಆಡುವವರ ಜವಾಬ್ದಾರಿ ಎಷ್ಟೋ ಕೇಳಿಸಿಕೊಳ್ಳುವವರದೂ ಅಷ್ಟೇ ಆಗಿರುತ್ತದೆ. ಯಾವುದೇ ಮಾತನ್ನಾಗಲೇ ಕೇಳಿಸಿಕೊಳ್ಳುವವರು ತಮಗೆ ಬೇಕಾದಷ್ಟೇ ಬೇಕಾದ
ರೀತಿಯಲ್ಲಿಯೇ ಕೇಳಿಸಿಕೊಳ್ಳುತ್ತಾರೆ. ಆದ್ದರಿಂದಲೇ ಯಾವುದೇ ಮಾತು ಅಪಾರ್ಥಕ್ಕೆ ಎಡೆಗೊಡುವಂಥ ಮಾತೇ ಆಗಿರುತ್ತದೆ.

ಹೀಗೆ ಆಗುವುದಾದರೂ ಏಕೆ? ನಾನು, ನೀವು ಎಲ್ಲ ಬಳಸುವ ಭಾಷೆ ಕನ್ನಡವೇ ಆದರೂ ಒಂದೊಂದು ಪದಕ್ಕೂ ನಾವು ಒಬ್ಬೊಬ್ಬರೂ ಕೊಟ್ಟಿರುವ ಭಾವಮೌಲ್ಯ ಬೇರೆ ಬೇರೆಯೇ ಆಗಿರುತ್ತದೆ. ಈ ಭಾವಮೌಲ್ಯವಾದರೋ ನಮ್ಮ ಪರಿಸರ, ನಮ್ಮ ಬದುಕಿನ ಅನುಭವ, ನಾವು ಹುಟ್ಟಿ ಬೆಳೆದ ಪರಂಪರೆ, ಇತ್ಯಾದಿಗಳಿಂದ ನಿರ್ಧಾರವಾಗುತ್ತದೆ. ನಾವು ಭಾಷಗೆ ಕೊಡುವ, ಕೊಟ್ಟಿರುವ ಭಾವ-ಅರ್ಥವೇ ಸರಿ, ಉಳಿದವರೂ ಅದನ್ನೇ ಒಪ್ಪಿ ಕ್ರಿಯೆಯಲ್ಲಿ ಆಚರಣೆಗೆ ತರಬೇಕು ಎಂಬ ಹಟವೇ, ‘ನನ್ನ ಮಾತನ್ನು ಎಲ್ಲರೂ ಕೇಳಬೇಕು’ ಎಂಬ ಧಾರ್‍‍ಷ್ಟ್ಯಕ್ಕೆ ಕಾರಣವಾಗುತ್ತದೆ. ಮಾತಿನ ಅರ್ಥ ನಿಗದಿ ಮಾಡುವ ಅಧಿಕಾರ ನನ್ನದು ಮಾತ್ರ ಎಂಬ ಸುಳ್ಳು ನಂಬಿಕಯೇ ನನ್ನ ಮಾತನ್ನೇ ಎಲ್ಲರೂ ಕೇಳಬೇಕು, ಮತ್ತು ಅದರಂತೆ ನಡೆಯಬೇಕು ಎಂಬ ಹಟಕ್ಕೆ ಕಾರಣ. ಈ ಹಟ, ಈ ಧಾರ್‍‍ಷ್ಟ್ಯ ಕೇವಲ ಅಧಿಕಾರಸ್ಥರಲ್ಲಿ, ರಾಜಕೀಯ ನಯಕರಲ್ಲಿ, ಧರ್ಮಗುರುಗಳಲ್ಲಿ ಮಾತ್ರ ಇರುವುದಿಲ್ಲ. ಒಂದೊಂದು ಮನೆಯಲ್ಲೂ ಯಜಮಾನರೆಂದುಕೊಂಡ ಪ್ರತಿಯೊಬ್ಬರಲ್ಲೂ ಇರುತ್ತದೆ. ಇಂಥ ಹಟ, ಇಂಥ ಧಾರ್‍‍ಷ್ಟ್ಯ ಇರುವಾಗ ಕೇಳಿಸಿಕೊಳ್ಳವುದು ಸಾಧ್ಯವೇ ಇಲ್ಲ.

ಮಾತನ್ನು ಕೇಳಿಸಿಕೊಳ್ಳವುದಕ್ಕೆ ನಮ್ಮ ಮನಸ್ಸು ಹಟ, ಧಾರ್‍‍ಷ್ಟ್ಯಗಳಿಲ್ಲದೆ ಸ್ವತಂತ್ರವಾಗಿರಬೇಕು. ನಮ್ಮ ಮನಸ್ಸಿನಲ್ಲಿ, ತಲೆಯಲ್ಲಿ ಇರುವ ಅರ್ಥಕ್ಕೆ ಕೇಳಿದ ಮಾತನ್ನು ಹೊಂದಿಸದೆ, ಒಪದೆ ಮತ್ತು ವಿರೋಧಿಸದೆ ಕೇಳಿಸಿಕೊಳ್ಳುವ ಸಹನೆಯೂ ಶಕ್ತಿಯೂ ಬೇಕು. ಹಾಗಾದಾಗ ಮಾತು ಆಡಿದವರು ಮತ್ತು ಆ ಮಾತನ್ನು ಕೇಳಿಸಿಕೊಂಡ ನಾವು ಇಬ್ಬರೂ ನಮಗೇ ಅರ್ಥವಾಗುತ್ತೇವೆ. ಮಾತು ಕೇಳಿಸಿಕೊಂಡಾಗ ವರ್ತನೆಯ ಸ್ಟಾತಂತ್ರ್ಯ ನಮ್ಮದಾಗಿರುತ್ತದೆ. ಸುಮ್ಮನೆ ಮಾತು ಕೇಳುವುದಾದರೆ ಗುಲಾಮಗಿರಿಯ ವೇದನೆ ಮಾತ್ರ ಇರುತ್ತದೆ. ಮಾತನ್ನು ಕೇಳಿಸಿಕೊಳ್ಳತೊಡಗಿದರೆ ನಾವೂ ಬದಲಾಗತೊಡಗುತ್ತೇವೆ.

ಅದರೆ ನಮ್ಮ ಸ್ವಭಾವದಲ್ಲೇ ಇರುವ ವಿಚಿತ್ರವಂದರೆ ನಮಗೆ ಮಾತನ್ನು ಕೇಳುವ ಸುಲಭದ ದಾರಿ ಬೇಕೇ ಹೊರತು, ಕೇಳಿಸಿಕೊಳ್ಳುವ, ಕೇಳಿಸಿಕೊಂಡು ಅರ್ಥಮಾಡಿಕೊಳ್ಳುವ, ಅರ್ಥಮಾಡಿಕೊಂಡು ಅದಕ್ಕೆ ಅನುಗುಣವಾಗಿ ನಡೆಯುವ ಜವಾಬ್ದಾರಿ ಬೇಡವೆನಿಸುತ್ತದೆ. ಮಹತ್ವದ ನಿರ್ಧಾರ ಕೈಗೊಳ್ಳಬೇಕಾದ ಸಂದರ್ಭ ಬಂದಾಗಲೆಲ್ಲ ‘ನಾನೇನು ಮಾಡಲಿ ಹೇಳಿ’ ಎಂದು ಬಲ್ಲವರೆಂದು ನಾವು ಯಾರನ್ನು ತಿಳಿದಿದ್ದೇವೆಯೋ ಅವರನ್ನು ಕೇಳುತ್ತೇವೆ. ಹೇಳಿದಂತೆ ಕೇಳುವುದು ನೆಮ್ಮದಿಯ ಕೆಲಸ, ನೆಮ್ಮದಿಯ ಬದುಕು ಎಂದು ತಿಳಿಯುತ್ತೇವೆ. ಆಮೇಲೆ ‘ಅಯ್ಯೋ, ನಾನು ಹಾಗೆ ಸುಮ್ಮನೆ ಅವರು ಅಂದಿದ್ದು ಕೇಳಿದೆನಲ್ಲ’ ಎಂದು ಕೊರಗುತ್ತೇವೆ.

ನಾವು ಯಾವುದನ್ನು ಸಂಸ್ಕೃತಿ ಎಂದು ತಿಳಿದಿದ್ದೇವೆಯೋ ಅದು ಮಾತನ್ನು ಕೇಳುವುದಕ್ಕೆ ಕೊಡುವ ಮಹತ್ವವನ್ನು ಮಾತನ್ನು ಕೇಳಿಸಿಕೊಳುವುದಕ್ಕೆ ಕೊಡುವುದಿಲ್ಲವೆಂದೇ ತೋರುತ್ತದೆ. ಮಾತನ್ನು ಕೇಳಿಸಿಕೊಳ್ಳತೊಡಗಿದರೆ ನಮ್ಮೊಳಗೇ ಬದಲಾವಣೆಗಳು ಆಗುತ್ತಿರುವುದು ನಮ್ಮ ಗಮನಕ್ಕೇ ಬರುತ್ತದೆ.

ಈ ವಾರ ಬರೆದಿರುವ ಮಾತುಗಳ ಬೀಜ ದಾರ್ಶನಿಕ ಜಿಕೆಯವರ ನುಡಿಗಳಲ್ಲಿವೆ. ಇವು ನಿಮ್ಮ ಮನಸ್ಸಿನಲ್ಲೂ ಮೊಳಕೆಯಾಗಲಿ ಎಂಬ ಆಸೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮೊದಲಿನ ಹಾಗಲ್ಲ ಈಗ
Next post ರವಿವರ್ಮನ ಹೆಂಗಸರು

ಸಣ್ಣ ಕತೆ

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಎಪ್ರಿಲ್ ಒಂದು

    ಒಮ್ಮೆಲೇ ಅವನಿಗೆ ಮದುವೆಯಾಗಿಬಿಡಬೇಕೆಂಬ ವಿಚಾರ ಬಂತು. ಮದುವೆಯಾಗುವದೆಂದರೆ ಒಂದು ಸಹಜವಾದ ವಿಚಾರವೆಂದು ಕೆಲವರಿಗೆ ಅನಿಸಬಹುದು. ಆದರೆ ಅವನದು ಮಾತ್ರ ಹಾಗಿರಲಿಲ್ಲ. ಎಲ್ಲರೂ ಅವನಿಗೆ ‘ಆಜನ್ಮ ಬ್ರಹ್ಮಚಾರಿ’ ಎಂಬ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…