Home / ಕವನ / ಕವಿತೆ / ಕೋಣ ಮತ್ತು ನಾವು

ಕೋಣ ಮತ್ತು ನಾವು

ಏಕೆ ಜನುವ ಕೊಟ್ಟೆಯಮ್ಮಾ !
ಗಂಡಾಗಿ
ಜನರ ದೇವರಿಗೆ ತಲೆ ಕೆಡಿಸಿಕೊಳ್ಳಲಿಕೆ.

ನಾನು ಹುಟ್ಟಿದ ಕೂಡಲೆ
ಮಾರಿದೇವಿಯ ಒಳಿತು ಕೋರಿ
ಹರಕೆ ಕಟ್ಟಿ, ಕಾಲು ತೊಳೆದು ಬಿಟ್ಟರು
ಸಾಕಿದ್ದಕ್ಕೆ ಸುಂಕವಾಗಿ ಪ್ರಾಣ ಕೇಳುವ ಜನರು.

ನಾನು ಕೋಣ! ಉಬ್ಬಿ ಹೋದೆ
ದುಡಿಸಿ ದಣಿಸದೆ
ತಿಂದು ತಿರುಗಾಡಿಕೊಂಡು ಬೆಳೆಯಲು ಬಿಟ್ಟಿದ್ದಕ್ಕೆ;
ಗೊತ್ತಾಗಲಿಲ್ಲ ಆಗ ಇದರ ಹಿಂದಿನ ಹಿಕ್ಮತ್ತು.

ಮತ್ತನಾದೆ
ಸಿಕ್ಕ ಸಿಕ್ಕ ಕಡೆಗೆ ನುಗ್ಗಿ
ಸಿಕ್ಕ ಸಿಕ್ಕದ್ದು ಮೇದು
ಸಿಕ್ಕ ಸಿಕ್ಕಂಗೆ ಅಡ್ಡಾಡುತ್ತ
ಸಿಕ್ಕ ಸಿಕ್ಕಲ್ಲಿ ಮಲಗಿ ಎದ್ದು
ಸಿಕ್ಕ ಸಿಕ್ಕಂಗೆ ಕೊಬ್ಬಿ ಬೆಳೆದೆ.

ಕಂಬದಂತ ಕಾಲು
ಹಳೇ ರುಬ್ಬು ಗುಂಡಿನಂತ ತಲೆ
ಉಕ್ಕಿನಂತ ಕೋಡು
ಬೆಂಕಿ ಉಂಡೆಯಂತ ಕಣ್ಣು

ಹೊಗೆ ಕಾರುವ ಹೊಳ್ಳೆ
ಕರ್ರಗೆ ಮಿರ ಮಿರ ಮಿಂಚುವ
ಸಣ್ಣ ಗುಡ್ಡದಂತ ದೇಹ
ನಡೆದಾಡುತಿದ್ದ ನೆಲ ನಡುಗುತಿತ್ತು
ಅಂತಕನ ಕೋಣದಂತೆ.

ಊರೊಳಗೆ ನುಗ್ಗಿದರೆ
ಸಾವನ್ನು ಕಂಡಂತೆ
ಓಡಿ ಹೋಗಿ
ಮಕ್ಕಳು ಮರಿ ಬಾಚಿಕೊಂಡು
ಬಯಲಲ್ಲಿ ಕಟ್ಟಿದ್ದ ದನ ಕರು ಕಣ್ಣಿ ಹರಿದು
ಬಾಗಿಲು ಹಾಕಿ ಕೊಳ್ಳುವರು;
ಕನಸಲ್ಲಿ ಕಂಡರೂ ಬೆಚ್ಚಿ ಬೀಳುವರು.

ನನ್ನ ದೇಹ, ಭಾವದಿ
ಮಾರಿದೇವಿ ಪರಿಭಾವಿಸಿ
ಕೇಡಿನ ಭೀತಿಯಲ್ಲಿ
ತಿರುಗಿ ಬೀಳರು
ಸಹಿಸಿ ನಡೆವರು.

ಅಂತ್ಯವಿಲ್ಲದದು ಯಾವುದಿದೆ ಈ ಲೋಕದಲಿ
ನನಗೂ ಬಂತು;
ಜಾತ್ರೆಯು ಗೊತ್ತಾಯಿತು
ಹುಡುಕಿಸಿ ತಂದರು ನನ್ನನ್ನು ಬಿಡದೆ
ಸುತ್ತಿಸಿದರು ಏಳೂರ ಮನೆ, ಮನೆಯನ್ನು.

ಪೂಜೆಯ ಮಾಡಿಸಿ
ಸುಲಭದಿ ಕಡಿಯಲು
ಪಟ್ಟೆ ಶಿರಕೆ ಎಣ್ಣೆ ಹೊಯ್ಯಿಸಿ
ಕೊಡತಿಯಲಿ ಗುದ್ದುತ್ತಿದ್ದರೆ
ಗುದ್ದು ಗುದ್ದಿಗೂ ಎದ್ದದ್ದು ಬೀಳುತಿತ್ತು ಜೀವ.

ಪಾಷಂಡಿಗಳು
ಕತ್ತರಿಸಿ ಎಸೆಯಲೊಲ್ಲರು!
ತೀರಿ ಹೋಗುತ್ತಿತ್ತಲ್ಲ! ಎಲ್ಲಾ!
ಎಚಿದೊರಲುತಿತ್ತು; ತರಹರಿಸುತಿತ್ತು ಜೀವ.

ಇವರವರೇ ಕೆಲವರು ಮಹಾನುಭಾವರು
ಹಿಂಸೆ ಬೇಡವೆಂದು ಸಾರಿ ಸಾರಿ ಹೇಳಿದರು
ಎಂದಿಗೂ ಕೇಳಿಲ್ಲ; ಕೇಳುವುದಿಲ್ಲ!
ಒಳ್ಳೆಯದನ್ನು ಹೇಳಿದ ಯಾರನ್ನೂ
ಸುಖವಾಗಿ ಸಾಯಲು ಬಿಟ್ಟಿಲ್ಲ
ನ್ಯಾಯವು ಇವರಿಗೆ ಒಂದಲ್ಲ; ಹೊಂದುವುದಿಲ್ಲ
ಜೀವ ಚಕ್ರದ ದುರ್ಬಳಕೆ ನಿಂತಿಲ್ಲ.

ಮೂಢ ನಂಬಿಕೆಯ
ಹೊಸ, ಹೊಸ ಬಟ್ಟೆಯುಟ್ಟುಕೊಂಡು
ಬಂಧು, ಬಳಗ ಕೂಡಿಕೊಂಡು
ಅಸಹಜ ಮಿಂಚನು ತುಂಬಿಕೊಂಡು
ವಿಧ, ವಿಧ ವಾದ್ಯಗಳ ಮೇಳದಲಿ
ಹಾಡುತ್ತ, ಕೂಗುತ್ತ, ಕುಣಿಯುತ್ತ,
ಉನ್ಮಾದ ಸೂಸುತ್ತ,
ಮೌರೆವಣಿಗೆಯಲಿ ಸಾಗಿದರು.

ಉತ್ತೇಜಿತ ಉತ್ಸವ ಗುಡಿಯನು ಸಾರಿತ್ತು
ಪೂಜೆಯು ಮೊದಲಾಯಿತು
ಸ್ಮಶಾನ ಮೌನವು ಕವಿಯಿತು
ಆರತಿಯಾಗಿ ಅಪ್ಪಣೆ ಹೊರಬಿತ್ತು
ಬಿದ್ದವು ತಲೆಗಳು ಸಾಲು, ಸಾಲಾಗಿ
ನನ್ನಿಂದ ಶುರುವಾಗಿ
ಕುರಿ, ಕೋಳಿ ತರುವಾಯ.

ನೋಡಿದರೆ…!
ಒಬ್ಬರ ತಲೆಯೂ ತಗ್ಗಿರಲಿಲ್ಲ
ಪಶ್ಚಾತ್ತಾಪದ ಒಂದು ಕ್ಷೀಣ ಶಬ್ಧವೂ ಕೇಳಿ ಬರಲಿಲ್ಲ.

ಸೃಷ್ಟಿಯಲಿ ಶ್ರೇಷ್ಠರೆನ್ನುವರು
ವಿಚಾರಿಸರು
ನಂಬಿಕಯಲಿ ಯಾವುದನ್ನೂ!!
ಸ್ವಹಿತವಾದಿಗಳು ಏನು ಮಾಡಲು ಹೇಸರು
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...