ಭಾರತ ಶ್ರವಣ

ಭಾರತ ಶ್ರವಣ

ವರ್ಷಕಾಲವಾಗಿತ್ತು. ಹಗಲಿರುಳು ಬಿಡದೆ ಸುರಿವ ಮಳೆಯಿಂದ ವೀರಪುರವು ಚಳಿಕಟ್ಟಿ ಹೋಗಿತ್ತು. ಜನರ ಕ್ರಿಯಾಕಲಾಪಗಳು ಉಡುಗಿ ಹೋಗಿದ್ದವು. ಗಟ್ಟದ ಸೀಮೆಯಿಂದ ಜಿನಸಿನ ಗಾಡಿಗಳು ಬರುವುದು ನಿಂತುಹೋದುದರಿಂದ, ವ್ಯಾಪಾರವೆಲ್ಲಾ ಸ್ತಬ್ಧವಾಗಿತ್ತು. ವ್ಯಾಪಾರಕ್ಕೆ ಹೆದ್ದಾರಿಯಾದ ನೇತ್ರಾವತೀ ನದಿಯು ನೆರೆತುಂಬಿ ಸಾಗರೋಪಮಾನವಾಗಿ ಪ್ರವಹಿಸಿ, ವೀರಪುರವನ್ನು ದ್ವೀಪದಂತೆ ಆವರಿಸಿಕೊಂಡಿತ್ತು. ವೀರಪುರದ ವರ್ತಕರೆಲ್ಲರು ಬೇಸಿಗೆಯಲ್ಲಿ ಗಟ್ಟದ ಗೌಡರಿಂದ ದುಡಿದುದನ್ನು ಮಳೆಗಾಲದಲ್ಲಿ ಉಣ್ಣುತ್ತಿದ್ದರು. ಹಾಗೂ ಬೇಸಿಗೆಯಲ್ಲಿ ಮಾಡಿದ ವ್ಯಾಪಾರದ ಮರೆಮೋಸದ ಪ್ರಾಯಶ್ಚಿತ್ತಕ್ಕಾಗಿ ಇನ್ನೇನೂ ಕೃತ್ಯವಿಲ್ಲದುದರಿಂದ, ಪುರಾಣಶ್ರವಣವನ್ನು ಮಾಡುತ್ತಲಿದ್ದರು. ಈ ವರ್ಷ ಅಕ್ಕಿಯ ಧಾರಣೆ ಏರಿದುದರಿಂದ, ವೀರಪುರದ ವರ್ತಕರೂ ವ್ಯವಸಾಯಗಾರರೂ ಪುರಾಣಶ್ರವಣವನ್ನು ಮಹಾಸಂಭ್ರಮದಿಂದ ಮಾಡಬೇಕೆಂದು ಇದ್ದರು. ಜ್ಯೇಷ್ಠ ಶುದ್ಧ ಪಂಚಮಿಯ ದಿನ ಊರುಗರು ಸಭೆಕೂಡಿದರು. ಸಭೆಯಲ್ಲಿ ಧನಿಕರೂ ದರಿದ್ರರೂ ನೆರದಿದ್ದರು. ಶುಭಕಾರ್ಯಕ್ಕೋಸ್ಕರ ಸಭಿಕರು ತಂತಮ್ಮ ಯೋಗ್ಯತಾನುಸಾರವಾಗಿ ವಂತಿಗೆಯನ್ನು ಎಂದಿನಂತೆ ಕೊಡಲು ಉದ್ಯುಯಕ್ತರಾದರು. ಚಿಕ್ಕಪೇಟೆ ಹಿರಿಯಣ್ಣನವರು, ೨೫ ವರಹಗಳನ್ನು ಹರಿವಾಣದಲ್ಲಿ ಸುರಿದುಬಿಟ್ಟರು. ಮೇಲೂರು ಲಕ್ಕಣ್ಣಾಜ್ಲರು ೭೦ ರೂಪಾಯಿ, ನಾಗರಾಜರು ೫ಂ ರೂಪಾಯಿ ಕೊಟ್ಟರು. ಉಳಿದವರಲ್ಲಿ ಕಲವರು “ಶಕ್ತ್ಯಾನುಸಾರವಾಗಿ ಕೂಡುವೆವು” ಎಂದು ವಾಗ್ದಾನ ಮಾಡಿದರು. ಗದ್ದೆ ಮನೆ ನರಸಪಾಂಡಿ ಉಡಿಯಲ್ಲಿದ್ದ ಎರಡು ರೂಪಾಯಿಗಳನ್ನು ಹರಿವಾಣದ ಬಳಿಯಲ್ಲಿಟ್ಟು ನಮಸ್ಕಾರ ಮಾಡಿದನು. ಮಳಲು ಬೆಟ್ಟು ಭೂಪಸೆಟ್ಟಿ ತಲೆಬಟ್ಟೆಯ ಕೊನೆಗೆ ಸುತ್ತಿದ್ದ ಏಳುಚಕ್ರಗಳನ್ನು ಬಿಚ್ಚಿ, ಭಕ್ತಿಪೂರ್ವಕವಾಗಿ ಸಮರ್ಪಿಸಿ, ಪ್ರಸಾದವನ್ನು ಕೈಯಲ್ಲಿ ಕೊಂಡನು. ವಂತಿಗೆಯ ಹಣವು ಸುಮಾರು ೪೦೦ ರೂಪಾಯಿ ಎಂದು ನಿರ್ಣಯವಾದ ಮೇಲೆ ಯಾವ ಗಂಥವನ್ನು ಓದಬೇಕೆಂಬ ಚರ್ಚೆ ನಡೆಯಿತು. ಕೊನೆಗೆ ಕನ್ನಡ ಮಹಾಭಾರತವನ್ನೇ ಓದಿಸಬೇಕೆಂದು ನಿಷ್ಕರ್ಷೆಯಾಯಿತು. ಗ್ರಂಥವನ್ನು ಓದುವುದಕ್ಕೂ ಅರ್ಥವನ್ನು ವಿಸ್ತರಿಸುವುದಕ್ಕೂ ಸಮರ್ಥರನ್ನು ಕರೆತರುವ ವಿಷಯದಲ್ಲಿ ಕೊಂಚ ಮಾತುಗಳು ನಡೆದುವು. ಕಲವರು ಶಿವಳ್ಳಿ ಬ್ರಾಹ್ಮಣರನ್ನು ಆಮಂತ್ರಿಸಬೇಕಂದೂ, ಕೆಲವರು ಗೋಮಾಂತಕ ಬ್ರಾಹ್ಮಣರನ್ನು ಕರೇ ಕಳುಹಿಸಬೇಕೆಂದೂ ವಿವಾದಿಸಿದರು. ಕೊನೆಗೆ ಕಮಲಪುರದ ರಾಮಕೃಷ್ಣ ಭಾಗವತರನ್ನು ಅರ್ಥ ವಿಸ್ತರಣೆಗೂ, ಹೊಲಸೂರು ಜನಾರ್ಧನಯ್ಯನವರನ್ನು ‘ವಾಚಕಕ್ಕೂ’ ತರಬೇಕೆಂದು ಆಳನ್ನು ಅಟ್ಟಿದರು.

ಜ್ಯೇಷ್ಠ ಶುದ್ಧ ಪೂರ್ಣಮಿ ಬುಧವಾರ. ವೀರಪುರದ ವಂಕಟರಮಣಸ್ವಾಮಿಯ ದೇವಸ್ಥಾನವು ಜನಸ್ತೋಮದಿಂದ ಬಾಯ್ಕಟ್ಟಿ ಹೋಗಿತ್ತು. ದೇವಸ್ಥಾನದ ಗೋಪುರದ ಸುತ್ತಲೂ ಹಸುರೆಲೆ ತೋರಣಗಳು ಗಾಳಿಯಲ್ಲಿ ತೂಗುತ್ತಿದ್ದವು. ಹೆಬ್ಬಾಗಿಲ ಮುಂದಿರಿಸಿದ ಬಾಳೆಯ ಕಂಬಗಳು ಗಂಭೀರವಾಗಿ ನಿಂತಿದ್ದುವು. ಇವುಗಳ ತಲೆಯಲ್ಲಿ ಅಲ್ಲಾಡುವ ಪರ್ಣಗುಚ್ಛವು ಜನರನ್ನು ಕರೆವಂತೆ ವಾಯುವಿನಲ್ಲಿ ಕೈಸನ್ನೆ ಮಾಡುತ್ತಿತ್ತು. ಒಳಕ್ಕೆ ಕಾಲಿಡುತ್ತಲೇ ಎರಡೂ ಭಾಗಗಳಲ್ಲಿ ಸರ್ವಜನ ಪರಿಪೂರಿತವಾದ ಪ್ರಸ್ತರ ನಿರ್ಮಿತವಾದ ಚಂದ್ರ ಶಾಲೆಗಳು ವಿರಾಜಮಾನವಾಗಿದ್ದುವು. ಪುರಾಣ ಶ್ರವಣಾರ್ಥಿಗಳು ನಡುವಿನಲ್ಲಿ ಸ್ಥಳವನ್ನು ಬಿಟ್ಟು ಸಾಲ್ಗೊಂಡು ಮಂಡಿಸಿದರು. ಸ್ಥಳವನ್ನು ಬಿಟ್ಟುದರಿಂದ, ಪುರಾಣವನ್ನು ಓದುವ ‘ವಾಚಕರ’ ಮುಖವು ಎರಡೂ ಚಂದ್ರ ಶಾಲೆಗಳಲ್ಲಿ ಕುಳಿತಿದ್ದ ಜನರಿಗೆ ಸ್ಪಷ್ಟವಾಗಿ ಕಂಡುಬರುತ್ತಿತ್ತು. ‘ವಾಚಕರ’ ಮುಂದೆ ವ್ಯಾಸಪೀಠದ ಮೇಲೆ ಭಾರತದ ಓಲೆಯ ಪ್ರತಿಯು ಅಲಂಕೃತವಾಗಿತ್ತು. ಈ ವ್ಯಾಸಪೀಠದ ಸಮೀಪದಲ್ಲಿ ಎರಡು ಕಂಚಿನ ಕಾಲ್ದೀಪಗಳು ಬೆಳಗುತ್ತಿದ್ದವು. ಮಧ್ಯಾಹ್ನಕಾಲವಾದುದರಿಂದ ಇವು ಹಚ್ಚಿರಲಿಲ್ಲ. ಇದರ ಬದಲಾಗಿ ಮತ್ತೊಂದು ಸಣ್ಣ ದೀಪವು ಅಲ್ಲಿಯೇ ಬೆಳಗುತ್ತಿತ್ತು. ಗಂಧ, ದಶಾಂಗ, ಧೂಪ ಮೊದಲಾದುವುಗಳ ಸುವಾಸಿತವಾದ ಧೂಮ್ರವು ದೇವಸ್ಥಾನದ ಸರ್ವಭಾಗಗಳಲ್ಲಿಯೂ ಪರಿಮಳಿಸುತ್ತಿತ್ತು. ‘ವಾಚಕರು’ ಪದ್ಯವನ್ನು ಓದುವ ಗಂಭೀರವಾದ ನಿಸ್ವನವು ಚಂದ್ರಶಾಲೆಯಲ್ಲಿ ಪ್ರತಿಧ್ವನಿಸಿ, ಸಭಾಸದರ ಕರ್ಣಕುಹರವನ್ನು ಪ್ರವೇಶಿಸಿ, ಹೂರಗಿನ ವಾಯುಮಂಡಲದಲ್ಲಿ ವಿಲೀನವಾಗಿ ಹೋಗುತ್ತಲಿತ್ತು. ಕೂಡಲೇ ನೆರದಿದ್ದ ಜನರು ತಮ್ಮ ಎತ್ತಿದ ಕೊರಲುಗಳನ್ನು ಕೊಂಕಿಸಿ, ರಾಮಕೃಷ್ಣಭಾಗವತರ ಮುಖವನ್ನು ದೃಷ್ಟಿಸುತ್ತ ಅವರು, ಅಭಿನಯ ಯುಕ್ತವಾಗಿಯೂ, ವರ್ಣಯುಕ್ತವಾಗಿಯೂ ಹೇಳುವ ವಿಸ್ತಾರವಾದ ಅರ್ಥವನ್ನು ಕಿವಿಗಳಿಂದ ಕುಡಿದು ಸಂತುಷ್ಟರಾಗುತ್ತಿದ್ದರು. ಆಗಾಗ ಚಿಕ್ಕಪೇಟಿ ಹಿರಿಯಣ್ಣ ನವರು ಕೈಯಲ್ಲಿ ನಶ್ಶವನ್ನು ಇಟ್ಟು ಭಾಗವತರಿಗೆ ಅರ್ಪಿಸುತ್ತಿದ್ದರು. ಇವರ ಸಮ್ಮುಖದಲ್ಲಯೇ ಲಕ್ಕಣಾಜ್ಜರು ವಜ್ರದುಂಗುರದ ಬೆರಳಿಂದ ಹಣೆಯನ್ನು ಪದೇ ಪದೇ ಸವರುತ್ತಿದ್ದರು. ಆಜ್ಜರ ಎಡದಲ್ಲಿ ನಾಗರಾಜರು ಗೋಡಗೆ ಒರಗಿ ತಲೆದೂಗುತ್ತಿದ್ದರು. ಚಂದ್ರಶಾಲೆಯ ಮಿಕ್ಕ ಸ್ಥಳವನ್ನು ಭಾಗವತರ ಸ್ವಜಾತಿಯವರೂ ಸ್ನೇಹಿತರೂ ಆಕ್ರಮಿಸಿದ್ದರು. ಹೀಗಾದುದರಿಂದ ವಂತಿಗೆ ಕೊಟ್ಟ ನರಸಪಾಂಡಿ, ಅಣ್ಣಪ್ಪ ಆಳ್ವ, ಭೂಪಸೆಟ್ಟಿ ಮೂದಲಾದವರು ಮತ್ತೊಂದು ಚಂದ್ರಶಾಲೆಯಲ್ಲಿ ಕುಳಿತುಕೊಳ್ಳಬೇಕಾಯಿತು. ಯಾರೊಬ್ಬರೂ ತುಟಿ ಅಲ್ಲಾಡಿಸುತಿದ್ದಿಲ್ಲ; ಎಲ್ಲರೂ ಏಕಾಗ್ರಚಿತ್ತದಿಂದ ಶ್ರವಣ ಮಾಡುತ್ತಿದ್ದರು. ಆದಿ ಪರ್ವದಲ್ಲಿ ಅನೇಕ ಸಂಧಿಗಳನ್ನು ನಾಲ್ಕು ದಿನಗಳ ಹಿಂದೆಯೇ ಓದಿ ಮುಗಿಸಿದ್ದರು. ಈ ದಿನ ಹತ್ತನೆಯ ಸಂಧಿ.

ರಾತ್ರಿ ಏಳು ಗಂಟೆಯಾಯಿತು. ಸಂಧಿಯು ಸಮಾಪವಾಗಲು ಬಂತು. ಆಗ ಜನಾರ್ಧನಯ್ಯನವರು ಈ ಶ್ಲೋಕಾರ್ಧವನ್ನು ಓದಿದರು:-

ಬಳಿಕ ಹರಿಯನು ಮನದಿ ವಂದಿಸಿ
ಕಳುಹಿಸಿ ನೃಪರನು ಸಂತಸದಿ ತಾಂ
ನಿಳಯವನು ಸೇರಿದನು ಧರ್ಮಜ ಭೂಪ ಕೇಳಂಂದಾ||

ಈ ಪದ್ಯಾರ್ಥವನ್ನು ‘ವಾಚಕರು’ ಹಾಡುತ್ತಲೇ, ಅವರ ಕಡೆಯ ಮಾತುಗಳು ಮುಕ್ತಾಯದ ರಾಗತರಂಗಗಳು ಚಂದ್ರಶಾಲೆಯಲ್ಲಿ ತೇಲುತ್ತ ಝೇಂಕರಿಸುವಂತಿದ್ದುವು. ತಟ್ಟನೆ ಎಲ್ಲವೂ ನಿಶ್ಯಬ್ದವಾಯಿತು. ಒಡನೆಯೇ ಆ ಝೇಂಕೃತಿಯ ಪ್ರತಿಧ್ವನಿಯೆಂಬಂತೆ ಮತ್ತೊಂದು ಚಂದ್ರಶಾಲೆಯಿಂದ ಓ! ಓ! ಎಂಬ ಸ್ವರವು ಸ್ಪಷ್ಟವಾಗಿ ಕೇಳಿಸಿತು. ಕೂಡಲೇ ಶ್ರವಣ ಮಾಡಲು ಬಂದ ಪ್ರಭೃತಿಗಳ ದೃಷ್ಟಿಗಳು ಆ ಕಡೆಗೆ ಹಾರಿದುವು; ಪುನಃ ಆಶ್ಚರ್ಯದಿಂದ ‘ವಾಚಕರ’ ಕಡೆಗೂ ಭಾಗವತರ ಕಡೆಗೂ ಚಲಿಸಿದುವು. ಹಿರಿಯಣ್ಣ ಮೊದಲಾದವರು ಸ್ವಲ್ಪ ಸಂಭ್ರಾಂತರಾದಂತೆ ತೋರಿದರು. ಜನಾರ್ಧನಯ್ಯನವರು ಗ್ರಂಥ ಓದುವುದನ್ನು ನಿಲ್ಲಿಸಿ, ಪತ್ರಗಳನ್ನು ಸರಿಗೊಳಿಸಿ, ಪುಸ್ತಕವನ್ನು ಕಟ್ಟಿ, ಕರ್ಪೂರದ ಆರತಿಯನ್ನು ಎತ್ತಿದರು. ಆರತಿಯನ್ನು ಸ್ವೀಕರಿಸುವುದಕ್ಕೆ ಯಾರೂ ಮುಂದೆ ಬರಲಿಲ್ಲ. ಆರತಿಯು ತಾನಾಗಿ ನಂದಿಹೋಯಿತು. ಕಡೆಗೆ ಭಾಗವತರೂ ‘ವಾಚಕ’ರೂ ಮನೆಗೆ ಅಭಿಮುಖರಾಗಿ ಹೊರಟರು. ಮಿಕ್ಕವರು ಮನಸ್ಸಿನಲ್ಲಿ ನೊಂದಂತೆ ಅವರ ಹಿಂದೆಯೇ ಮೆಲ್ಲಮೆಲ್ಲನೆ ಕಾಲ್ತೆಗೆದರು.

ಮಾರನೆಯ ದಿನ ಎಂದಿನಂತೆ ಎಲ್ಲರೂ ನೆರೆದಿದ್ದರು. ಆದರೆ ಪೂರ್ವದ ಉತ್ಸಾಹವೆಲ್ಲಾ ಆರಿಹೋಗಿತ್ತು. ಯಾವ ಕಾರಣದಿಂದ ಉತ್ಸಾಹವು ಕಡಿಮೆಯಾಗಿ ಹೋಗಿತ್ತೋ ಅದು ತಿಳಿಯಲಿಲ್ಲ. ನಾಗರಾಜರ ಮುಖದಲ್ಲಿ ಹುಬ್ಬುಗಂಟು; ಲಕ್ಕಣಾಜ್ಲರ ಮೋರೆಯಲ್ಲಿ ಉದಾಸೀನ ಭಾವ; ಹಿರಿಯಣ್ಣರು ಕಂದು ಮೊಗ, ಆದರೂ ಅವರೆಲ್ಲರೂ ತಮ್ಮೊಳಗೇನೇನೋ ಗುಜುಗುಟ್ಟುತ್ತಿದ್ದರು. ಜನಾರ್ಧನಯ್ಯನವರು ಗ್ರಂಥವನ್ನು ತೆರೆದು ಓದತೊಡಗಿದರು. ಸಭೆಯ ನಿರುತ್ಸಾಹವೇನೋ ಹೋಗಲಿಲ್ಲ. ಸಭಿಕರ ಮನಸ್ಸನ್ನು ರಂಜಿಸುವಂತೆ ಭಾಗವತರು ಕಾವ್ಯಾರ್ಥವನ್ನು ಸರಸವಾಗಿಯೂ, ವಿಸ್ತಾರವಾಗಿಯೂ ವಿಶದೀಕರಿಸಿದರು. ಸ್ತ್ರೀವರ್ಣನೆಯಾದುದರಿಂದ ಭಾಗವತರ ಅರ್ಥಶಕ್ತಿಯು ಇನ್ನೂ ಚಿವಟಿದಂತಾಯಿತು. ಆದರೂ ಆ ಅವಿರಳವಾದ, ಅನರ್ಗಳವಾದ, ಶೃಂಗಾರ ಮಯವಾದ ಸ್ತ್ರೀ ವರ್ಣನೆಯು ಶ್ರಾವಕರ ಉದಾಸೀನ ಹೃದಯಗಳ ಮೇಲೆ ನಿರರ್ಥಕವಾಗಿ ಹೋಯಿತು. ಅಷ್ಟರಲ್ಲಿ ನಾಗರಾಜರು ತಮಗೆ ಮನೆಯಲ್ಲಿ ವಿಶೇಷವಾದ ಕೆಲಸವುಂಟೆಂದು ಹೇಳಿ ಎದ್ದು ನಿಂತರು. ಲಕ್ಕಣಾಜ್ಲರು ಅವರನ್ನು ಬಲಾತ್ಕಾರಪಡಿಸಿ ಅಲ್ಲಿಯೇ ತಡೆಯಿಸಿದರು. ಆದಿಪರ್ವದಲ್ಲಿ ಆ ದಿನ ಓದಲು ಹಿಡಿದ ಅಧ್ಯಾಯವು ೧೦೦ ಪದ್ಯಗಳಿಗಿಂತ ಮೀರದೆ ಇದ್ದುದರಿಂದಲೂ, ಸಭಾಸದರ ಶ್ರವಣೋತ್ಸಾಹವು ಕ್ಷೀಣವಾದುದರಿಂದಲೂ, ಭಾಗವತರು ಆ ದಿನದ ‘ವಾಚಕ’ವನ್ನು ಮುಗಿಸಬೇಕೆಂದು ಜನಾರ್ಧನಯ್ಯನವರಿಗ ಸೂಚಿಸಿದರು. ಜನಾರ್ಧನಯ್ಯನವರು ಕೆಳಗಿನ ಭಾಮಿನಿ ಶ್ಲೋಕವನ್ನು ಕಂಠಾಗ್ರಸ್ವರದಿಂದ ಪೂರೈಸಿದರು:-

ಇಂದುಮುಖಿಯನು ಸಂತವಿಡುತ ಮು
ಕುಂದ ರಥವೇರಿದನು ಪರಮಾ
ನಂದದಲಿ ದ್ವಾರಕೆಯ ಸಾರಿದನರಸ ಕೇಳೆಂದಾ||

ಕೂಡಲೇ ಬಡವರು ಕುಳಿತಿದ್ದ ಚಂದ್ರಶಾಲೆಯಿಂದ ಓ! ಓ! ಎಂಬ ಸ್ವರವು ಪ್ರತಿಧ್ವನಿಸಿತು. ಈ ಸ್ವರವನ್ನು ಕೇಳಿದರೋ, ಇಲ್ಲವೋ, ನಾಗರಾಜರು ಎದ್ದುಹೊರಕ್ಕೆ ನಡೆದುಬಿಟ್ಟರು. ಲಕ್ಕಣಾಜ್ಲರು ವಜ್ರದುಂಗುರವನ್ನು ಸರಿಗೊಳಿಸುತ್ತ ಅವರನ್ನು ಹಿಂಬಾಲಿಸಿದರು. ಹಿರಿಯಣ್ಣನವರು ಏನೋ ಅವಮಾನಗೊಂಡಂತೆ ಮುಖವನ್ನು ತಗ್ಗಿಸಿಬಿಟ್ಟರು. ಅವರ ಬಳಿಗೆ ಗ್ರಂಥಕ್ಕೆ ಎತ್ತಿದ ಆರತಿಯನ್ನು ತಂದರು. ಆದರೆ ಅದರ ಮೇಲೆ ಅವರ ಕೈ ಸುಳಿಯಲಿಲ್ಲ. ನರಸಪಾಂಡಿ ಮಾತ್ರ ಸಂತೋಷಗೊಂಡಂತೆ ಭಾಗವತರ ಬಳಿಯಲ್ಲಿ ಕೈಕಟ್ಟಿ ನಿಂತು, ಕೊನೆಗೆ ವ್ಯಾಸಪೀಠಕ್ಕೆ ಸಾಷ್ಟಾಂಗ ನಮಸ್ಕಾರ ಮಾಡಿ, ಮನೆಗೆ ಹಿಂತೆರಳಿದನು. ಅಣ್ಣಪ್ಪ ಆಳ್ವ ಮತ್ತು ಭೂಪಸೆಟ್ಟಿ ಎಂದಿನಂತೆ ಪ್ರಸಾದ ಸ್ವೀಕರಿಸಿ ಮನೆಗೆ ನಡೆದುಬಿಟ್ಟರು. ಕೊಂಚ ಹೊತ್ತಿನಲ್ಲಿ ರಾಮಕೃಷ್ಣ ಭಾಗವತರೂ ಜನಾರ್ಧನಯ್ಯನವರೂ ಶ್ರಾವಕರ ಅಂದಿನ ಔದಾಸೀನ್ಯವನ್ನು ಕುರಿತು ಚಿಂತಿಸುತ್ತ, ಅದರ ಕಾರಣವನ್ನು ತಮ್ಮೊಳಗೆ ವಿಚಾರಿಸುತ್ತ, ಮನೆಗೆ ಅಭಿಮುಖರಾದರು.

ಶುಕ್ರವಾರ ಮಧ್ಯಾಹ್ನ ಒಂದು ಗಂಟೆಗೆ ನಾಗರಾಜರೂ ಲಕ್ಕಣಾಜ್ಲರೂ ಎಲ್ಲರಿಗಿಂತಲೂ ಮೊದಲೇ ದೇವಸ್ಥಾನದಲ್ಲಿ ಬಂದು ಕೂಡಿದರು. ಒಡನೆ ಹಿರಿಯಣ್ಣನವರು ಬಂದು ಸೇರಿದರು. ಮಿಕ್ಕವರು ಒಬ್ಬೊಬ್ಬರಾಗಿ ಬಂದು ಸೇರಿದರು. ‘ವಾಚಕ’ ನಡೆಯುವ ಚಂದ್ರಶಾಲೆಯಲ್ಲಿ ಏನೋ ಮಾತುಕಥೆ ನಡೆಯುತ್ತಲಿತ್ತು. “ಈ ಹಾಳು ಮಕ್ಕಳನ್ನು ನಾಬಲ್ಲೆ” ಎಂದು ನಾಗರಾಜರು ಹೇಳುವಷ್ಟರಲ್ಲಿ ಭಾಗವತರೂ ‘ವಾಚಕರೂ’ ಚಂದ್ರ ಶಾಲೆಯ ಮೇಲೆ ಕಾಲಿಟ್ಟರು. ಅವರನ್ನು ನಮಸ್ಕರಿಸುವುದಕ್ಕೆ ದೊಡ್ಡವರು ಯಾರೂ ಏಳಲಿಲ್ಲ. ಇಬ್ಬರು ತಮ್ಮ ತಮ್ಮ ಆಸನಗಳನ್ನು ಅಲಂಕರಿಸಿದರು. ಯಾರೂ ಇದ್ದೆಡೆಯಿಂದ ಅಲ್ಲಾಡಲಿಲ್ಲ. ದೀಪವನ್ನು ಯಾರೂ ಹಚ್ಚದೇ ಇದ್ದುದನ್ನು ನೋಡಿ ಜನಾರ್ಧನಯ್ಯ ನವರು ತಾವಾಗಿ ಅದನ್ನು ಹಚ್ಚಿದರು. ಬಳಿಕ ಗ್ರಂಥ ಪುಸ್ತಕಕ್ಕೆ ಕೈ ಮುಗಿದು, ಅಧ್ಯಾಯವನ್ನು ತೆರೆಯುವುದಕ್ಕೆ ತೊಡಗಿದರು. ಅಷ್ಟರಲ್ಲಿ ನಾಗರಾಜರು ಗುಲ್ಲಿಡುವುದನ್ನು ನೋಡಿ, ‘ವಾಚಕಕ್ಕೆ’ ಸಿದ್ಧವಾಯಿತೆಂದು ಜನಾರ್ಧನಯ್ಯನವರು ಮೆಲ್ಲನೆ ಸೂಚಿಸಿದರು.

“ಬೇಡಯ್ಯ ನಿಮ್ಮ ವಾಚಕ! ಕಟ್ಟಿಡಿ!” ಎಂದು ನಾಗರಾಜರು ಒದರಿದರು.
“ಸಂಗತಿ ಏನು?” ಎಂದು ಭಾಗವತರು ಕೇಳಿದರು.
ಜನಾರ್ಧನಯ್ಯನವರು ಗ್ರಂಥವನ್ನು ತೆರೆದರು.
“ಬ್ಯಾಡಾ! ಕಟ್ಟಿ ! ಕಟ್ಟಿ!” ಎಂದು ಪುನಃ ನಾಗರಾಜರು ಒತ್ತಿ ಹೇಳಿದರು.
“ಬಿಡಿ! ಬೇಡಯ್ಯ! ಕಟ್ಟಿ!” ನಮಗೆಲ್ಲ ಗೊತ್ತಿದೆ! ಕಟ್ಟಿ! ಪುಸ್ತಕ ಕಟ್ಟಿ! ಎಂದು ಲಕ್ಕಣಾಜ್ಲರು ಉಂಗುರದ ಬೆರಳನ್ನು ತೋರಿಸುತ್ತ ಗರ್ಜಿಸಿದರು.

ಭಾಗವತರೂ ‘ವಾಚಕರೂ’ ನಮ್ರಭಾವದಿಂದ ಸಿಟ್ಟೇಕೆಂದು ಬೇಡಿದರು.
“…ಮಗ! ಹಣಕ್ಕೋಸ್ಕರ….. ಮಾರಿ ಬಿಡುವರು” ಎಂದು ಯಾರೋ ಬೈದುಬಿಟ್ಟರು.

ರಾಮಕೃಷ್ಣ ಭಾಗವತರೂ, ಜನಾರ್ಧನಯ್ಯನವರೂ ಬಾಯಲ್ಲಿ ಮಾತಿಲ್ಲದವರಾಗಿ, “ಸ್ವಾಮೀ! ಸಿಟ್ಟೇಕೆ! ನಮ್ಮ ಅರ್ಥದಲ್ಲಾಗಲೀ, ವಾಚಕದಲ್ಲಾಗಲೀ, ಏನೊಂದು ದೋಷವಿತ್ತೇ? ಮನ್ನಿಸಬೇಕು ದೇವ್ರು! ನಾವು ಏನು ತಪ್ಪು ಮಾಡಿದೆವು?” ಎಂದರು.

“ನಾವು? ನಾವೆಂದು ಹೇಳಲಿಕ್ಕೆ ನೀನು ದೊಡ್ಡ ಗೌಡ ತಾನೇ? ಕಳ್ಳ! ಇನ್ನೊಬ್ಬರಾದ್ರೆ ಈ ಅವಮಾನಕ್ಕೆ ಮೆಟ್ಟು ತೆಗೆಯುತ್ತಿದ್ರು” ಎಂದು ನಾಗರಾಜರು ತಪ್ಪಿ ಮಾತನಾಡಲು ಹತ್ತಿದರು. ಪುನಃ “ಲಕ್ಕಣಾ! ನನಗೆ ಗೊತ್ತುಂಟು. ನಾಮಾ ಹಾಕುವ ಬ್ರಾಹ್ಮರಿವರು. ಹೆತ್ತ… ಗುರ್ತಿಲ್ಲ ಇವ್ರಿಗೆ” ಎಂದು ಪೂರೈಸಿದರು.

ಒಡನೆ ಜನಾರ್‍ಧನಯ್ಯನ್ವವರು ಹಿರಿಯಣ್ಣನವರ ಬಳಿಗೆ ಬಂದು, “ಸ್ವಾಮಿ! ತಪ್ಪು ಯಾರ ಕೈಯಿಂದಲೂ ನಡೆಯುತ್ತದೆ. ನನ್ನ ಪಾಡೇನು? ನೀವು ವರ್ಗದಾರರು, ನಾವು ಒಕ್ಕಲುಗಳು. ತಾವು ನಡಿಸಿದರೆ ಸರಿ, ನನ್ನಿಂದ ಏನ್ ತಪ್ಪಾಯಿತೆಂದು ಹೇಳಿದ್ರೆ, ಸಭೆಗೆ ಸೆರಗೊಡ್ಡಿ ಬೇಡುತ್ತೇನೆ” ಎಂದರು.

ಹಿರಿಯಣ್ಣ:- “ಸರಿಯಾದ ಮಾತು! ಏನ್ ನಾಗರಾಜಾ? ಇಕ್ಕೊಳ್ಳಿ ಭಾಗವತರೇ ಇಲ್ಲಿ ಕೇಳಿ!” ಇಬ್ಬರೂ ವಂತಿಗೆ ಕೊಟ್ಟವರ ಬಳಿಗೆ ಬಂದರು.

ಹಿರಿಯಣ್ಣ:-“ಈ ವಾಚಕಕ್ಕೆ ಯಾರು ಹೆಚ್ಚು ವಂತಿಗೆಯನ್ನು ಕೊಟ್ಟರೆಂದು ಬಲ್ರೊ?”

ಭಾಗವತರು:- “ನೀವೆಲ್ಲರು ಸ್ವಾಮಿ!”

ಹಿರಿಯಣ್ಣ:- ಓ! ನಾನು ನೂರು ರೂಪಾಯಿ ಕೊಟ್ಟಿದ್ದೇನೆ. ಲಕ್ಕಣಾಜ್ಲರು ಎಪ್ಪತ್ತು, ನಾಗರಾಜರು ಐವತ್ತು, ಹೀಗಿರುವಾಗ ಗ್ರಂಥವನ್ನು ನೀವು ನಮ್ಮ ಹೆಸರೆತ್ತಿ ಹೇಳದೆ ವರ್ಗದಾರರಾದ ನಮಗೆ ಈ ಪರಿ ಅವಮಾನ ಮಾಡಿದ್ದು ನ್ಯಾಯವೇ?”

ಭಾಗವತ:- “ಎಂಥಾ ಅವಮಾನ ದೇವ್ರೆ?”

ನಾಗರಾಜ:- “ಅವಮಾನ? ಏನೆಂದೆ?”

ಹಿರಿಯಣ್ಣ:- “ತಡಿ, ನಾಗರಾಜಾ, ಇಲ್ಲಿ ನೋಡಿ, ಭಾಗವತರೇ! ಮನೆತನದವರು, ‘ಗುತ್ತೇದಾರರು’, ನಾವಿರುವಾಗ, “ಭೂಪಕೇಳೆಂದಾ” ಎಂದು ಭೂಪಸೆಟ್ಟಿಗೆ ಮಾತ್ರ ಅರ್ಥ ಹೇಳಿದ್ದು ನಮಗೆ ಅವಮಾನ ಹೌದೋ, ಅಲ್ಲವೋ, ನೀವೇ ಹೇಳಿ!”

ಇದನ್ನು ಕೇಳುತ್ತಲೇ ಭಾಗವತರಿಗೆ ಗ್ರಾಮಮುಖಂಡರ ಅಸಮಾಧಾನತೆಯ ಕಾರಣವು ಹೊಳೆಯಿತು. ಅವರು ತಮಗೆ ಬಂದ ಮುಗುಳ್ನಗೆಯನ್ನು ತಡೆದುಕೊಂಡರು. ಆದರೆ ಜನಾರ್ಧನಯ್ಯನವರು “ಇದರ ಅರ್ಥ ತಿಳಿಯಲಿಲ್ಲವಲ್ಲಾ!” ಎಂದರು.

ನಾಗರಾಜ:- “ಅರ್ಥ ತಿಳಿಯಲಿಲ್ಲವೇ? ಯಾಕೆ ತಿಳಿಯಲಿಲ್ಲ? ನಿನ್ನೆ ‘ಸಾರಿದ ನರಸ ಕೇಳೆಂದಾ’ ಎಂದು ಹೇಳಿ ನರಸಪಾಂಡಿಗೆ ಭಾರ್ತವನ್ನು ಹೇಳಲಿಲ್ಲವೇ? ಆ ಪರ್ದೇಶಿ ನರಸಪಾಂಡಿ ಕೊಟ್ಟದ್ದು ಎರಡು ರೂಪಾಯಿ. ಬಡ್ಡಿ ಮಗ, ಭೂಪ! ನನ್ನ ಒಕ್ಕಲು! – ಅವ ಕೊಟ್ಟದ್ದು ಏಳು ಚಕ್ರ, ನಮ್ಮ ಎದುರಿಗೆ ಅವರ ಹೆಸರನ್ನು ಎತ್ತಿ ಹೇಳಿದೆಯಲ್ಲಾ?”

ನಾಗರಾಜರ ಆರೋಪದ ವಿವರಣೆ ಮುಗಿಯುವದರೊಳಗಾಗಿ ಭಾಗವತರು ಒಂದು ಉಪಾಯದ ಮಾತನ್ನು ಯೋಚಿಸಿಕೊಂಡರು.

ಚಿತ್ತೈಸಬೇಕು ದೇವರೇ! ಬೇಡಿಕೊಳ್ಳುತ್ತೇನೆ. ಭಾರತ ಗ್ರಂಥ ವಾಚನದಲ್ಲಿ, ದಿನಕ್ಕೆ ಒಬ್ಬೊಬ್ಬರ ಹೆಸರನ್ನು ಹೇಳುವುದು ನಮ್ಮ ಪದ್ಧತಿ. ವಂತಿಗೆಯಲ್ಲಿ ಅಲ್ಪಸಂಖ್ಯೆಯನ್ನು ಕೊಟ್ಟವರ ನಾಮವನ್ನು ನಾವು ಪ್ರಥಮದಲ್ಲಿ ಹೇಳುತ್ತೇವೆ. ಹೀಗೆ, ಮೊನ್ನೆ ಭೂಪನನ್ನೂ, ನಿನ್ನೆ ನರಸಪಾಂಡಿಯನ್ನೂ ಹೊಗಳಿದೆವು. ಕ್ರಮಪ್ರಕಾರವಾಗಿ ನಿಮ್ಮೆಲ್ಲರ ಹೆಸರುಗಳೂ ಭಾರತದಲ್ಲಿ ಬರೋದುಂಟು. ಕೋಪಿಸಿಕೊಳ್ಳಬಾರದು -” ಎಂದರು.

ಹಿರಿಯಣ್ಣನವರೂ ನಾಗರಾಜರೂ ಮರುಮಾತೆತ್ತದೆ ಒಬ್ಬರನ್ನೊಬ್ಬರು ಕ್ಷಣ ಮಾತ್ರ ನೋಡಿದರು. ಸಿಟ್ಟು ಕೆಳಗಿಳಿಯತೊಡಗಿತು. ನಾಗರಾಜರು ಭಾಗವತರ ಕಡೆ ತಿರುಗಿ, ಹುಬ್ಬು ಏರಿಸಿ, “ಹಾ‌ಆಗೋ?” ಎಂದರು. ಹಿರಿಯಣ್ಣನವರು, “ಓ ಇದು ನಮಗೆ ಗೊತ್ತಿದ್ದಿಲ್ಲ. ಆದರೆ ನಿಜವಾಗಿ ಹೇಳುತ್ತಿರೋ, ಅಲ್ಲವೇ- ?” ಎಂದು ಕೇಳಿದರು.

“ಆಹ್ಹಾ! ಸುಳ್ಳು ಯಾಕೆ ಹೇಳಬೇಕು, ಸ್ವಾಮೀ, ನಿಮ್ಮತ್ರ? ಇದೇ ನಮ್ಮ ಸಂಪ್ರದಾಯ” ಎಂದು ಜನಾರ್ಧನಯ್ಯನವರು ತಮ್ಮ ಪರವಾಗಿ ಕೂಡಿಸಿ, ಭಾಗವತರ ಮಾತನ್ನು ಸಮರ್ಥಿಸಿದರು.

“ಸರಿ ಸರಿ, ಹಾಗಾದರೆ ಚಿಂತೆಯಿಲ್ಲ. ಸ್ವಲ್ಪ ಮೋಸ ಆಯಿತು” ಎಂದು ನಾಗರಾಜರು ಅನ್ನುತ್ತಲೇ, ಮಿಕ್ಕವರಿಂದ “ಕೂತುಕೊಳ್ಳಿ, ಎಲ್ಲರೂ ಕೂತುಕೊಳ್ಳಿ!” ಎಂಬ ಮಾತುಗಳು ಹೊರಟವು.
ಎಲ್ಲರೂ ತಂತಮ್ಮ ಸ್ಥಳಗಳಲ್ಲಿ ಕುಳಿತುಕೊಂಡರು. ಉತ್ಸಾಹವು ಮುಂಚಿನಂತೆಯೇ ತುಂಬಲಾರಂಭಿಸಿತು. ‘ವಾಚಕವು’ ಎಂದಿನಂತೆ ಸಾಂಗವಾಗಿ ನಡೆಯಿತು. ಆದರೆ ದಿನಂಪ್ರತಿ ಸಮಾಪ್ತಕಾಲದಲ್ಲಿ ‘ಗದುಗಿನ ವೀರ ನಾರಾಯಣ’ ಎಂದು ಹೇಳುವ ಬದಲಾಗಿ ಜನಾರ್ಧನಯ್ಯನವರು ಬೇರೆ ಪಾಠಾಂತರಗಳನ್ನು ಅಲ್ಲಲ್ಲಿ ಸೇರಿಸಿದರು.

“ಮನದಿ ಕೃಷ್ಣನ ಧ್ಯಾನ ಗೈಯುತ ನಾಗರಾಜ ಕೇಳೆಂದಾ”
“ಪಾಂಡುಕುವರನು ಹೊಕ್ಕನರಮನೆ ಲಕ್ಕಣ್ಣಜ್ಲ ಕೇಳೆಂದಾ?”
“ಅಕುಟಲನು ಸಾರಿದನು ಬಳಿಕೀ ವಿಕಟ ದುರ್‍ಯೋಧನನು ನಿಗಮ್
ಪ್ರಕರ ಮೌಳಿಯ ಮೌಳಿಯತ್ತಲು ಸಾರ್ದು ಮಂಡಿಸಿದ ಹಿರಿಯಣ್ಣ ಕೇಳೆಂದಾ”

ದಿನಕ್ಕೆ ಒಂದೊಂದಾಗಿ ಹೆಸರು ಬರುತ್ತಲೇ, ಕ್ರಮಪ್ರಕಾರವಾಗಿ ಒಬ್ಬೊಬ್ಬರು “ಓ! ಓ!” ಎಂದು ಉತ್ತರ ಕೊಟ್ಟು, ಮನಸ್ಸಿನಲ್ಲಿ ಹಿಡಿಯಲಾರದಷ್ಟು ಆನಂದದಿಂದ ಉಬ್ಬಿದರು.

ಮೇಲೆ ಕೊಟ್ಟವುಗಳು ಯಾವ ಷಟ್ಟದಿಯ ಚರಣಗಳೆಂದು ನನಗೆ ತಿಳಿಯಲಿಲ್ಲ. ಇದನ್ನು ಕುರಿತು ಜನಾರ್ಧನಯ್ಯನವರೊಡನೆ ನಾಲ್ಕು ತಿಂಗಳುಗಳ ಬಳಿಕ ವಿಚಾರಿಸಿದಾಗ, ಅವರು ಛಂದಸ್ಸಿನ ವಿವರ ಹೇಳಲಿಲ್ಲ. ಅದರ ಬದಲಾಗಿ “ಈ ಚರಣಗಳ ಬೆಲೆ ೧೫೦ ರೂಪಾಯಿ. ಇವುಗಳ ಅರ್ಥವನ್ನು ವಿವರಿಸಿದುದಕ್ಕೆ ೨೦೦ ರೂಪಾಯಿ” ಎಂದು ಮೌಲ್ಯ ಪಾರಿತೋಷಕಗಳನ್ನು ಮಾತ್ರ ತಿಳಿಸಿದರು.
*****
(ಸುವಾಸಿನಿ ೧೯೦೦-೩)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಂಡು
Next post ಆತ್ಮಾನುರಾಗ

ಸಣ್ಣ ಕತೆ

 • ರಾಮಿ

  ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

 • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

  ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

 • ಬಾಳ ಚಕ್ರ ನಿಲ್ಲಲಿಲ್ಲ

  ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

 • ವಿಷಚಕ್ರ

  "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

 • ಮನೆ “ಮಗಳು” ಗರ್ಭಿಣಿಯಾದಾಗ

  ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

cheap jordans|wholesale air max|wholesale jordans|wholesale jewelry|wholesale jerseys