ಚಂದನವ ಬೆಳೆದೊಡೆ…

ಚಂದನವ ಬೆಳೆದೊಡೆ…

`ಶ್ರೀಗಂಧ ಬೆಳೆದು ಧನಿಕರಾಗಿ, ನಾವು ಶ್ರೀಗಂಧದ ಗಿಡಗಳನ್ನು ಮಾರಾಟ ಮಾಡುತ್ತೇವೆ, ತಕ್ಷಣ ಸಂಪರ್ಕಿಸಿ – ಚಂದನ ನರ್ಸರಿ: ದೂರವಾಣಿ ೬೭೮೩೬೪೧’ ಎಂಬ ಪ್ರಕಟಣೆಯನ್ನು ಸ್ಥಳೀಯ ಪತ್ರಿಕೆಯೊಂದರಲ್ಲಿ ಓದಿ ಶೇಷಪ್ಪ ಗೌಡರು ಧಿಗ್ಗನೆದ್ದು ಕೂತರು. `ಸ್ವಾಮಿ, ವೆಂಕಟ್ರಮಣಾ, ನಂಗೂ ಒಳ್ಳೆ ಕಾಲ ಬಂದಕಂಡುಟ್ಟಲ್ಲಪ್ಪಾ’…. ಎಂದು ಗೋಡೆಯ ಮೇಲಿದ್ದ ತಿರುಪತಿ ತಿಮ್ಮಪ್ಪನ ಪಟಕ್ಕೆ ಕೈ ಮುಗಿದರು.

ಶೇಷಪ್ಪ ಗೌಡರಿಗೆ ಮೊದಲು ಭತ್ತದ ಗದ್ದೆಯಿತ್ತು. ವರ್ಷದಲ್ಲಿ ಎರಡು ಬೆಳೆ ತೆಗೆಯುತ್ತಿದ್ದರು. ಆಮೇಲೆ ಗದ್ದೆಯಲ್ಲಿ ಸೌತೆ ಮತ್ತು ಬಚ್ಚಂಗಾಯಿ ಬೆಳೆದು ಹೇಗೋ ಜೀವನ ಸಾಗಿಸುತ್ತಿದ್ದರು.

ಆಗ ಬಂತಲ್ಲಾ ಬೀಡಿ ಬ್ರಾಂಚುಗಳು. ಊರ ಹೆಂಗಸರೆಲ್ಲಾ ಮನೆಯಲ್ಲೇ ಕೂತು ಬೀಡಿ ಕಟ್ಟಿಕೊಂಡು, ಮನೆಕೆಲಸವನ್ನೂ ಸುಧಾರಿಸಿಕೊಂಡು ಒಳ್ಳೊಳ್ಳೆಯ ಸೀರೆ, ಮ್ಯಾಚಿಂಗ್ ಬ್ಲೌಸ್, ಬಳೆ ಮತ್ತು ಚಪ್ಪಲಿ ತೆಗೆದುಕೊಳ್ಳತೊಡಗಿದರು. ಮುಖಕ್ಕೆ ಪೌಡರ್‍, ಕಣ್ಣಿಗೆ ಕಾಡಿಗೆ, ತುಟಿಗೆ ಕೆಂಪು ಹಚ್ಚತೊಡಗಿದರು. ಊರ ಕೃಷಿಕರ ಪತ್ತಿನ ಸಹಕಾರ ಸಂಘದಲ್ಲಿ ಉಳಿತಾಯಖಾತೆ ಬ್ಯಾಂಕು ಅಕೌಂಟ್ ಓಪನ್ನು ಮಾಡಿ ಹಣವನ್ನು, ಬೋನಸ್ಸನ್ನು ತುಂಬತೊಡಗಿದರು.

ಅವರ ಜೀವನಮಟ್ಟ ಏರಿತು. ಶೇಷಪ್ಪ ಗೌಡರ ಭತ್ತದ ಗದ್ದೆಗಳಿಗೆ ಕೂಲಿಗಳು ಸಿಗದೇ ಹೋಯ್ತು. ಒಂದು ವರ್ಷ ಗೌಡರು ಗದ್ದೆಯನ್ನು ಹಡ್ಲುಬಿಟ್ಟರು. ಊಟಕ್ಕೇ ಕಷ್ಟ ಎಂದು ಕಂಡು ಬಂದುದರಿಂದ ಮರುವರ್ಷ ತಾವೇ ಎತ್ತು ಹೂಡಿ, ಬೀಜಬಿತ್ತಿ ಹೆಂಡತಿ ಮಕ್ಕಳನ್ನು ಮತ್ತು ಪಕ್ಕದ ಮನೆಯವರನ್ನು ಸೇರಿಸಿ ಬೇಸಾಯ ಮಾಡಿದರು. ಆ ವರ್ಷ ಕಾಡುಹಂದಿಗಳು ರಾತ್ರೆ, ಮಂಗಗಳು ಹಗಲು, ಬಂಬುಚ್ಚಿಗಳು ತೆನೆ ಕೂಡುವಾಗ ದಾಳಿಯಿಟ್ಟು ಭತ್ತದ ಬೆಳೆ ಕೈಕೊಟ್ಟಿತು.

ಗೌಡರು ತಿರುಪತಿ ತಮ್ಮಪ್ಪನ ಪಟನೋಡಿ `ವೆಂಕಟ್ರಮಣ ಕೈ ಬುಟ್ಟನಾ’ ಎಂದು ನಿಡುಸುಯ್ದರು. ಪರಿಸ್ಥಿತಿ ಎಷ್ಟು ವಿಕೋಪಕ್ಕೆ ಹೋಯಿತೆಂದರೆ ಸಂಜೆ ಹೊತ್ತು ಅವರು ಕೆಂಪುಬೋರ್ಡಿನ ಕಡೆಗೆ ಹೋಗುವುದೂ ನಿಂತುಹೋಯಿತು. ಪಕ್ಕದ ಮನೆಯ ಸಣ್ಣಪ್ಪ ಗೌಡ್ರು `ಹಿಂಗಾರೆ ಹೆಂಗೆ ಬಾವಾ, ಸುಮ್ಮನೆ ಕೂತಿದ್ದರೆ ಹುಟ್ಟಿಸಿದ ದೇವ್ರೆ ಹುಲ್ಲು ಮೇಯ್ಸಿಬುಟ್ಟದೆಗಡ, ನಾ ನೋಡಿ, ಭತ್ತ ಕೈ ಕೊಟ್ಟದ್ದಕ್ಕೆ ಅಡಿಕೆ ಹಾಕಿತ್ಲೇನಾ? ಈಗ ನೋಡಿ ಬಂಗಾರದಂಥಾ ರೇಟು. ನೀವು ಅದರೆನೆ ಮಾಡಿ’ ಎಂದರು.

ಶೇಷಪ್ಪ ಗೌಡರಲ್ಲಿ ಉಳಿತಾಯದ ಹಣವೇನಿರಲಿಲ್ಲ. ಅವರು ಆಕಾಶ ನೋಡಿದಾಗ ಸಣ್ಣಪ್ಪ ಗೌಡರು `ನೀವೆಂಥದು ಬಾವಾ? ಕೃಷಿಕರ ಪತ್ತಿನ ಸಹಕಾರಿ ಸಂಘ ಇರ್‍ದು ಯಾರಿಗೇಂತ ನೆನ್ಸಿದಿರಿ? ನಾ ಈಗ ಅದರ ಮೆಂಬರು. ನೀವೂನೂ ಮೆಂಬರಾಗಿಬುಡಿ. ಆಸ್ತೀನ ಒಂದು ಭಾಗ ಅಡವು ಇಸಿದು ಸಾಲ ತಕಣೊಕಲ್ಲಾ, ಜಾಮೀನಿಗೆ ಹೆಬ್ಬೆಟ್ಟು ಒತ್ತಿಕೆ ನಾನೇ ಒಳೆ ಅಲ್ಲಾ?” ಎಂದು ಧೈರ್ಯ ತುಂಬಿದರು.

ಸಣ್ಣಪ್ಪ ಗೌಡರು ಹೆಬ್ಬೆಟ್ಟು ರುಜು ಒತ್ತಿದ್ದಕ್ಕೆ ಶೇಷಪ್ಪ ಗೌಡರಿಗೆ ಐವತ್ತು ಸಾವಿರ ಸಾಲ ಸಿಕ್ಕಿತು. `ಭತ್ತದ ಸಹವಾಸಾನೇ ಬೇಡ’ ಎಂದು ಶೇಷಪ್ಪ ಗೌಡರು ಗದ್ದೆಗಳಲ್ಲಿ ಗುಂಡಿತೋಡಿ ಅಡಿಕೆ ಸಸಿ ನೆಟ್ಟರು. `ಬರ್‍ಲಿ ಮಂಗಗನು, ಹಂದಿಗನು. ಏನು ಮಾಡ್ವೇಂತ ನೋಡಿಯೇ ಬುಟ್ನೆ’ ಎಂದು ಯುದ್ಧ ಸನ್ನದ್ಧರಂತೆ ತೊಡೆ ತಟ್ಟಿಕೊಂಡರು. ಕೆಂಪು ಬೋರ್ಡು ಗಡಂಗಿಗೆ ಹೋಗಲಾಗುವುದಿಲ್ಲ ಎಂಬ ಚಿಂತೆ ಬಿಟ್ಟರೆ ನೆಮ್ಮದಿಯಾಗಿಯೇ ಇದ್ದರು. ಪಕ್ಕದ ಮನೆ ಸಣ್ಣಪ್ಪಗೌಡರು ತಾವು ಆಗಾಗ ಇಳಿಸುತ್ತಿದ್ದ ಭಟ್ಟಿ ಮಾಲಿನಲ್ಲಿ ಶೇಷಪ್ಪ ಗೌಡರಿಗೂ ಸ್ವಲ್ಪ ಪಾಲು ಕೊಡುತ್ತಿದ್ದರಿಂದ ಅದೊಂದು ದೊಡ್ಡ ಚಿಂತೆಯಾಗಿ ಶೇಷಪ್ಪ ಗೌಡರನ್ನು ಕಾಡಲಿಲ್ಲ.

ಅಡಿಕೆ ಸಸಿಗಳು ಬೆಳೆದು ಫಲಕೊಟ್ಟವು. ಅಡಿಕೆಗೆ ಕೇಜಿಗೆ ೨೧೦ ಹೋದಾಗ ಶೇಷಪ್ಪ ಗೌಡರು ಮುಟ್ಟಿದ್ದೆಲ್ಲಾ ಚಿನ್ನವಾಗತೊಡಗಿತು. ಒಂದಷ್ಟು ಕೊಟ್ಟು ಮಗನನ್ನು ಸರಕಾರಿ ಹುದ್ದೆಗೆ ಸೇರಿಸಿದರು. ಒಂದಷ್ಟು ಚಿನ್ನ ಹಾಕಿ ಮಗಳನ್ನು ಮುಂಡಾಸಿನವನಿಗೆ ಕೊಟ್ಟು ಮದುವೆ ಮಾಡಿಸಿದರು. ತಿರುಪತಿ ತಿಮ್ಮಪ್ಪನ ಪಟನೋಡಿ `ನಂಗೆ ಗೊತ್ತಿತ್ತ್, ನೀ ಕೈ ಬುಡಿಕಿಲೇಂತ’ ಎಂದು ಮೀಸೆಯಡಿಯಲ್ಲಿ ನಕ್ಕರು. ಕೃಷಿಕರ ಸಹಕಾರಿ ಪತ್ತಿನ ಸಂಘದ ಸಾಲ ತೀರಿಸಿ ಉಳಿತಾಯ ಖಾತೆಯಲ್ಲಿ ಸ್ವಲ್ಪ ನಗದು ಜಮಾ ಮಾಡಿಟ್ಟರು.

ಅಷ್ಟು ಹೊತ್ತಿಗೆ ಬಂತಲ್ಲಾ, ಜಾಗತೀಕರಣ? ಅಡಿಕೆ ಬೆಳೆಯುವ ಯಾವ್ಯಾವುದೋ ದೇಶಗಳಿಂದ ಇವರ ಊರಿಗೂ ಅಡಿಕೆ ಬರತೊಡಗಿ ಅಡಿಕೆಯ ರೇಟು ಜರ್‍ರನೆ ಪಾತಾಳಕ್ಕೆ ಇಳಿಯತೊಡಗಿತು. ಏನು ಮಾಡಿದರೂ ಅದು ಮೇಲಕ್ಕೇರಲೇ ಇಲ್ಲ. ಸರ್ಕಾರ ಬೆಂಬಲ ಬೆಲೆ ಕೊಡುತ್ತದೆಂದು ಆಸೆ ಹುಟ್ಟಿಸಿದ್ದೇ ಬಂತು. ಅಗತ್ಯಕ್ಕೆ ಇರಲೆಂದು ಗುಡ್ಡದಲ್ಲಿ ಹಾಕಿದ್ದ ರಬ್ಬರು ಗಿಡಗಳಿಂದಲೂ ಪ್ರಯೋಜನವೇನಾಗಲಿಲ್ಲ. ಮಲೇಶಿಯಾದಿಂದ ರಬ್ರು ಬರತೊಡಗಿ, ಶೇಷಪ್ಪಗೌಡರ ರಬ್ಬರು ಶೀಟುಗಳನ್ನು ಕೇಳುವವರೇ ಇಲ್ಲವೆಂದಾಯಿತು. ಗೌಡರು ತಿರುಪತಿ ತಮ್ಮಪ್ಪನ ಪಟ ನೋಡಿದರು. `ಮತ್ತೆ ಕೈ ಕೊಟ್ಟನಾ? ಮೇಲೆ ತಕೋಂಡೋಗಿ ದಬಾಲ್ಲಂತ ಮತ್ತೆ ಕೆಳ್ಗೆ ಹಾಕುದೇ ನಿನ್ನ ಅಭ್ಯಾಸ’ ಎಂದು ನಿಡುಸುಯ್ದರು.

ಹಾಗೆ ಗೌಡರು ಆಕಾಶ ನೋಡತೊಗಿದಾಗ ಪತ್ರಿಕೆಯಲ್ಲಿ ಆ ಪ್ರಕಟಣೆ ಕಂಡದ್ದು. ಧಿಗ್ಗನೆದ್ದು ಕೂತದ್ದು. ೬೭೮೩೬೪೧ಕ್ಕೆ ಫೋನು ಮಾಡಿ ಚಂದನದ ರೇಟು ಕೇಳಿದ್ದು, ಗುಡ್ಡದ ಅಷ್ಟೂ ರಬ್ಬರು ಗಿಡಗಳನ್ನು ಕಡಿದು ಬೇರೆ ಗುಂಡಿ ತೆಗೆದು ಚಂದನದ ಸಸಿಗಳನ್ನು ನೆಟ್ಟದ್ದು, ಮನೆಗೆ ಬಂದು ತಿರುಪತಿ ತಿಮ್ಮಪ್ಪನ ನೋಡಿ `ಇನ್ನು ನೀ ಹೆಂಗೆ ಕೈಕೊಟ್ಟಿಯಾ ನೋಡ್ನೆ. ಗಂಧದ ಮರಗ ಬೆಳದು ಬರ್‍ಲಿ. ನಮ್ಮೂರ್‌ಲ್ಲಿ ನಿನ್ನ ಹೆಸ್ರುಲಿ ಒಂದು ಹೈಸ್ಕೂಲು ಕಟ್ಟಸಿನೆ. ಅದಾಗಿ ನಾ ಸೀದಾ ತಿರುಪತಿಗೇ ಬಂದು ನಿನ್ನ ಕಂಡನೆ’ ಎಂದದ್ದು.

ಶೇಷಪ್ಪ ಗೌಡರು ದಿನಾ ಬೆಳಗೆದ್ದು ಗುಡ್ಡದಲ್ಲಿ ಹಾಕಿದ್ದ ಅಷ್ಟೂ ಶ್ರೀಗಂಧದ ಸಸಿಗಳನ್ನು ಮುಟ್ಟಿ ನೋಡಿ ಮಾತಾಡಿಸೋರು. `ಲಾಯಕ್ ಬೆಳೆದಿಯಾನಾ? ಬೆಳಿಯದೆ – ಏನ್? ಬುಡಕ್ಕೆ ಎಂತೆಲ್ಲಾ ಹಾಕಲೇಂತ ನೋಡು: ತಿನ್ನು, ತಿನ್ನು, ಲಾಯಕ್ ತಿನ್ನು. ತೋರಾಗಿ ಬೆಳ್ಳೋಕು’ ಎನ್ನುತ್ತಿದ್ದರು. ಚೆನ್ನಾಗಿ ಬೆಳೆಯದ ಸಸಿಗಳಿಗೆ `ನೋಡು ಮಗಾ. ಈ ಪ್ರಾಯಲಿ ಕೊಟ್ಟದ್ದೆಲ್ಲಾ ತಿನ್ನೊಕು. ಅದು ಬೇಡ, ಇದು ಬೇಡ ಅಂತ ಹಟ ಮಾಡಿಕಾಗದು. ತಿನ್ನದೆ ನಿಂಗೆ ಲಾಚಾರು ಕಾಯಿಲೆ ಬಂದುಟು, ಸರಿ ತಿಂದವನ ನೋಡ್ರೆ ಕಾಯಿಲೆನೂ ಓಡಿ ಹೋದೆ’ ಎಂದು ಸಂತೈಸುತ್ತಿದ್ದರು.

ಗಿಡಗಳು ಬೆಳೆದು ಮರವಾಗತೊಡಗಿದವು. ಗೌಡರ ತಲೆಕೂದಲುಗಳೆಲ್ಲಾ ಬೆಳ್ಳಗಾಗಿದ್ದವು. `ಸದ್ಯ ಉದುರಿಹೋಗಿ ಮಂಡೆ ಬೋಳಾಗದ ಹಾಗೆ ನೀ ನೋಡ್ಕಂಡಲ್ಲಾ? ಅದೇ ನೀ ನಂಗೆ ಮಾಡಿದ ಉಪಕಾರ. ದೈಗ ಮರ ಆಗಲಿ, ಊರಿಗೊಂದು ಹೈಸ್ಕೂಲು ಮಾಡಿ ನಿನ್ನ ನೋಡೀಕೆ ಬಂದು ಈ ಬೆಳ್ಳಿ ಕೂದೋಲನ ನಿಂಗೆ ಅರ್ಪಿಸಿ ಬಾದು’ ಎಂದು ತಿರುಪತಿ ತಿಮ್ಮಪ್ಪನ ಪಟ ನೋಡಿ ಆಗಾಗ ಹೇಳುತ್ತಿದ್ದರು.

ಒಂದು ದಿನ ಬೆಳಿಗ್ಗೆ ಎಂದಿನಂತೆ ಶೇಷಪ್ಪಗೌಡರು ಶ್ರೀಗಂಧದ ತೋಟಕ್ಕೆ ಹೋಗಿ ಒಂದು ಸುತ್ತು ಹಾಕಿದರು. ಮಧ್ಯದಲ್ಲಿ ನಾಲ್ಕು ಗಂಧದ ಮರಗಳು ಕಾಣುತ್ತಿಲ್ಲ. ಅವುಗಳ ಸೊಪ್ಪು ಮತ್ತು ಉಳಿದ ಭಾಗಗಳು ಅಲ್ಲೇ ಇದೆ. ಕಾಂಡವನ್ನು ಯಾರೋ ಎಗರಿಸಿದ್ದಾರೆ. `ವೆಂಕಟ್ರಮಣಾ ಇದೊಳ್ಳೆ ಗ್ರಾಚಾರಾ ಆತಲ್ಲಾ? ನಾ ಉರಿಗೊಂದು ಹೈಸ್ಕೂಲು ಕಟ್ಟಿಸಿ ನಿನ್ನಕ್ಕಲೆ ಬಂದು ಮುಡಿ ಕೊಡಕೂಂತ ನೆನ್ಸಿಕೊಂಡ್ರೆ ಹಿಂಗ್ಯಾರು ಮಾಡ್ದ? ಇರ್ಲಿ ಮಾಡ್ನೆ ಅವುಕೆ’ ಎಂದುಕೊಂಡು ಮೂರು ಸೆಲ್ಲಿನ ಟಾರ್ಚು ಹಿಡಕೊಂಡು ಶ್ರೀಗಂಧ ತೋಟದ ಬಳಿ ಪಾರ ಕಾದರು.

ಮಧ್ಯರಾತ್ರೆ ಕಳೆದಾಗ ಲೈಟಿನ ಬೆಳಕು ಕಾಣಿಇಕೊಂಡು ಕೆಲವು ಆಕೃತಿಗಳು ತೋಟದ ಮಧ್ಯಕ್ಕೆ ಬಂದವು. `ಕಳ್ಳ ನನ್ಮಕ್ಳೇ. ಕಾಣಿಸಿನೆ ನಿಮಗೆ ಗತಿ’ ಎಂದು ಶೇಷಪ್ಪ ಗೌಡರು ದೊಣ್ಣೆ ಹಿಡಿದು ಮುನ್ನುಗ್ಗಿದರು. ಬಂದಿದ್ದ ಆಕೃತಿಗಳು ಮುಖಮೂತಿ ನೋಡದೆ ಗೌಡರನ್ನು ಚಚ್ಚಿದವು. ಗೌಡರು ಮೂರ್ಚೆತಪ್ಪಿ ಬಿದ್ದರು. ಅವರು ಎದ್ದಾಗ ಬೆಳ್ಳಂಬೆಳಗಾಗಿತ್ತು. ಮೈಕೈಯಿಡೀ ನೋಯುತ್ತಿತ್ತು. ಮತ್ತೆ ನಾಲ್ಕು ಶ್ರೀಗಂಧದ ಮರಗಳು ಕಣ್ಮರೆಯಾಗಿದ್ದವು!

ಗೌಡರು ಮನೆಗೆ ಬಂದವರು ತಿರುಪತಿ ತಿಮ್ಮಪ್ಪನ ಪಟ ನೋಡಿದರು. `ನಗಾಡ್ಬಡ ನಂಗಿನ್ನು ಏನೂ ಬೇಡ. ಊರಿಗೊಂದು ಹೈಸ್ಕೂಲು ಮತ್ತು ನಿಮಗೆ ಈ ಮುಡಿ ಕೊಟ್ಟರೆ ಮುಗ್ತು. ನಿನ್ನ ಕಣ್ಣೆದುರೇ ಇದೆಲ್ಲಾ ನಡಕಾಂಡಯಿದ್ದರೆ ನೀ ಸುಮ್ಮನೆ ಕುದ್ದಳಲ್ಲಾ?’ ಎಂದು ಗೊಣಗಿಕೊಂಡರು. ಏನೂ ಮಾಡಲು ತೋಚದೆ ನೇರ ಎದ್ದು ಪೋಲೀಸು ಸ್ಟೇಶನ್ನಿಗೆ ನಡೆದರು.

`ನೋಡಿ ಗೌಡ್ರೆ, ನಮ್ಮೊದು ಸಣ್ಣ ಪೋಲೀಸು ಸ್ಟೇಶನ್ನು. ಬೇಕಾದಷ್ಟು ಪೀಸಿಗ ಇಲ್ಲೆ. ಆದರೆ ನಿಮ್ಮ ಜೂವಕ್ಕೆ ತೊಂದರೆ ಉಟ್ಟ ಅಂತ ಹೇಳ್ತಾ ಒಳರಿ. ಹಂಗಾಗಿ ಎರ್‍ಡು ಜನ ಪೀಸಿಗಳ ರಾತ್ರಿಕಾಯಕೆ ಕಳ್ಸಿನೆ. ಈ ರಾತ್ರೆ ಮಾತ್ರ. ಮತ್ತೆ ನೀವು ಫಾರೆಸ್ಟ್ರ್‌ನ ಕಂಡು ಅವರೊಟ್ಟಿಗೆ ಮಾತಾಡಿ. ಗಂಧದ ಮರಗಳ ಗವರ್‍ನ್‌ಮೆಂಟ್‌ಗೆ ಮಾರೋಕಾದೆ’. ಎಂದದಕ್ಕೆ ಶೇಷಪ್ಪ ಗೌಡರು ತಲೆಯಾಡಿಸಿದರು.

ಸಂಜೆ ಇಬ್ಬರು ಪೋಲೀಸರು ಶೇಷಪ್ಪ ಗೌಡರ ಮನೆಗೆ ಬಂದರು. ಭರ್ಜರಿ ರೊಟ್ಟಿ, ಕೋಳಿಸಾರು ಮತ್ತು ಭಟ್ಟಿ ಸಾರಾಯಿ ಏರಿಸಿಕೊಂಡರು. ಗೌಡರು ಕೊಟ್ಟ ನೂರರ ನೋಟುಗಳನ್ನು ಜೇಬಿಗೆ ತುರಿಕಿಕೊಂಡರು. ಒಬ್ಬ ಪೋಲೀಸ್ ತೊದುಲುತ್ತಾ `ನೋಡಿ ಗೌಡ್ರೆ, ನನ್ನ ಸರ್ವಿಸ್‌ಲೇ ಇಂಥ ಕೇಸು ಬಾತ್ಲೆ. ಆ ಕಳ್ಳ ನನ್ಮಕ್ಳ್‌ನ ಹಿಡಿದ ಹಾಕಿ ರಾಷ್ಟ್ರಪತಿ ಪದಕ ಪಡ್ದಬುಟ್ಟವೆ. ನೀವು ಪಾಪ ನಿನ್ನೆ ತಿಂದೊದ ಸಾಕ್. ರೆಸ್ಟು ತಕೊಣಿ’ ಎಂದ. ಇನ್ನೊಬ್ಬ `ಅದು ಏನೂಂತ ಗೇನ ಮಾಡ್ಯಳ ಆ ತಂತ್ರಿ ನಾಯಿಮಕ್ಳ, ಅವಕೆ ಒಂದು ಗತಿ ಕಾಣ್ಸುವೆ. ಇನ್ನು ಮುಂದೆ ಅವು ಇತ್ತ ತಲೆಹಾಕಿ ಮಲ್ಗದಾಂಗೆ ಮಾಡವೆ’ ಎಂದು ಗೌಡರಿಗೆ ಭರವಸೆ ನೀಡಿದ.

ಬೆಳಗ್ಗೆ ಎದ್ದು ಶೇಷಪ್ಪ ಗೌಡರು ಶ್ರೀಗಂಧದ ತೋಟದತ್ತ ನಡೆದರು. ಪೋಲೀಸರಿಬ್ಬರೂ ಕಾಣಿಸುತ್ತಿಲ್ಲ. ಡ್ಯೂಟಿ ಮುಗಿಸಿ ಪೋಲೀಸು ಸ್ಟೇಶನ್ನಿಗೆ ಹೋಗಿರಬೇಕೆಂದು ಶ್ರೀಗಂಧದ ಮರಗಳನ್ನು ಎಣಿಸುತ್ತಾ ಬಂದರು. ಮತ್ತೆ ನಾಲ್ಕು ಕಾಣೆಯಾಗಿವೆ! ಪೋಲೀಸರು ಡ್ಯೂಟಿಯೇ ಮಾಡಲಿಲ್ವೆ? ಅಥವಾ ಪೋಲೀಸರು ನನ್ನ ಹಾಗೆ ನಾಲ್ಕು ತಿಂದು ಓಡಿಹೋದರೇ ಎಂದು ತೀರ್ಮಾನ ಮಾಡಲಾಗದೆ ಗೌಡರು ಉಟ್ಟಬಟ್ಟೆಯಲ್ಲೇ ಸ್ಟೇಶನ್ನಿಗೆ ನಡೆದರು. ಎಸ್ಸೈಯವರು ಇರಲಿಲ್ಲ. ಪೋಲೀಸು ರೈಟರಲ್ಲಿ ನಡೆದ ಸಂಗತಿಯನ್ನು ನಿವೇದಿಸಿದರು. `ನೋಡಿ ಗೌಡ್ರೆ ನಿನ್ನೆ ಇಬ್ಬರ ಪಾರಕೆ ಕಳ್ಸಿದೇ ಜಾಸ್ತಿ. ಇನ್ನು ಹಂಗೆ ಆದ್ಲೆ ನೀವು ಬೆಳ್ದದರ ನೀವ್‌ಗೆ ಕಾಪಾಡಿಕೆ ಆದ್ಲೆಂತಾದ್ರೆ ಯಾರಿಗ್ಯಾರೂ ಮಾರಿಬುಡಿ. ಗಂಧದ ಮರಾಂತ ಹೇಳ್ತಾ ಒಳರಿ. ಹಾಂಗದ ಮೇಲೆ ನೀವು ಫಾರೆಸ್ಟ್ ಡಿಪಾರ್ಟುಮೆಂಟ್‌ನವರೇ ನೋಡೋಕಷ್ಟೇ’, ಎಂದು ಪೋಲೀಸು ರೈಟರು ಶೇಷಪ್ಪ ಗೌಡರನ್ನು ಸಾಗಹಾಕಿದರು.

ಮನೆಯಲ್ಲಿರುವ ತಿರುಪತಿ ತಿಮ್ಮಪ್ಪನ ಪಟವನ್ನು ನೆನೆಯುತ್ತಾ ಶೇಷಪ್ಪ ಗೌಡರು ಫಾರೆಸ್ಟು ಡಿಪಾರ್ಟ್‌‌ಮೆಂಟಿಗೆ ಬಂದರು. ಪುಣ್ಯಕ್ಕೆ ಫಾರೆಸ್ಟೆರು ಆಫೀಸಲ್ಲೇ ಇದ್ದರು. ಶೇಷಪ್ಪ ಗೌಡರ ಪರಿಚಯವೂ ಅವರಿಗಿತ್ತು. `ಏನು ಗೌಡ್ರೆ! ಇಷ್ಟು ಬೊಳ್ಪಿಗೆ ಬಂದು ಬುಟ್ಟಳರಿ? ಊರುಲೊಂದು ಹೊಸ ಹೈಸ್ಕೂಲು ಮಾಡಕೂಂತ ಹೊರಟಳರಿಗಡ? ದೇವ್ರು ಮೆಚ್ಚುವ ಕೆಲ್ಸ. ಎಲ್ಲೊವೂ ವಿದ್ಯೆವಂತರಾಕು ಮತ್ತು ವಿಚಾರವಂತರಾಕು. ಆಗ ದೇಶನೂ ಬದಲಾದೆ ಏನ ಹೇಳ್ರೆ ನೀವು?’ ಎಂದುದಕ್ಕೆ ಗೌಡರು ಸಮ್ಮತಿ ಸೂಚಕವಾಗಿ ತಲೆಯಾಡಿಸಿದರು.

“ಅದ್ಕೆಂತಲೇ ಸ್ವಾಮಿ ನಾ ಒಂದ್ನಾಲ್ಕ್ ಶ್ರೀಗಂಧದ ದೈಗಳ ಸಾಕಿದ. ಆದ್ರೆ ಈಗ ನೋಡಿ, ದಿನಕ್ಕೆ ನಾಲ್ಕರಂಗೆ ಯಾರೋ ಕದ್ದಕಂಡ್ ಹೋಕೋಣೊಳ. ಪೋಲಿಸ್‌ನೊವಕೆ ಕಳ್ಳಂಗಳ ಹಿಡಿಯಕಾತ್ಲೆ. ಹಂಗ್ಯಾಗಿ ಆ ಗಂಧದ ಮರಗಳ ಫಾರೆಸ್ಟು ಡಿಪಾರ್ಟುಮೆಂಟ್‌ಗೆ ಮಾರೀಂತ ಪೋಲೀಸು ಎಸ್ಸೈಯವು ಹೇಳ್ದ. ಹಂಗೆ ನಾ ನಿಮ್ಮ ಕಾಂಬಕೇಂತ ಖಂದೆ” ಎಂದರು.

ಫಾರೆಸ್ಟರು `ಅದ್ ಸರಿ. ಈ ಊರೂಲಿ ಶ್ರೀಗಂಧ ಬೆಳ್ದು ಮಾರುವವರ್‍ಲಿ ನೀವೇ ಸುರೂನೊವೂ ನೋಡಿ. ನಾ ಮೇಲಾಫೀಸರಿಗೆ ಇಂದೇ ಪೋನು ಮಾಡಿ ವಿಷಯ ತಿಳ್ಸಿನೆ. ಎರ್‍ಡು ದಿನ ಕೊಡಿ ಟೈಮು. ನಾವೇ ಬಂದ್ ಮರ ತುಂಡುಮಾಡಿ, ಇಲ್ಲಿಗೆ ತಕೊಂಡು ಬಂದವೆ. ವೇಲ್ಯುವೇಶನ್ನು ಮಾಡ್ವೆ. ನೀವು ಏನೂ ತಲೆಬಿಸಿ ಮಾಡ್ಬೊಡಿ’ ಎಂದು ಗೌಡರನ್ನು ಸಾಗಹಾಕಿದರು.

ಅಂದು ಗುರುವಾರ. ಎರಡು ದಿನವೆಂದರೆ ಶನಿವಾರವಾಗುತ್ತದೆ. ಇನ್ನೆರಡು ದಿನ ಶ್ರೀಗಂಧದ ಮರ ಕಳ್ಳತನವಾಗದಂತೆ ಏನಪ್ಪಾ ಮಾಡುವುದು ಎಂದು ಶೇಷಪ್ಪ ಗೌಡರು ಯೋಚಿಸಿ ಯೋಚಿಸಿ ಕೊನೆಗೆ ಪಕ್ಕದ ಮನೆಯ ನೆಂಟ ಸಣ್ಣಪ್ಪ ಗೌಡರಿಗೆ ವಿಷಯ ತಿಳಿಸಿದರು. `ನೀವೆಂತ ಬಾವಾ? ನನ್ನೊಟ್ಟಿಗೆ ಬೆಡಿ ಇರ್‍ದು ಮತ್ತೆ ಎಂತಕ್ಕೆ? ನೀವು ಪೋಲೀಸು ಸ್ಟೇಶನ್ನಿಗೆ ಹೋವಬದ್ಲು ನಂಗೆ ವಿಷಯ ತಿಳ್ಸುತ್ತಿದ್ದರೆ ಆ ಕಳ್ಳಂಗಳ ಉಸ್ಕುಡಮ್ಮು ಬಂದ್ ಮಾಡಿ ಬುಡ್ತಿದ್ದೆ. ನೀವು ಮಂಡೆ ಬೆಚ್ಚ ಬುಡಿ. ಇಂದು ರಾತ್ರೆ ಪಾರಕ್ಕೆ ನಿಮ್ಮೊಟ್ಟಿಗೆ ನಾ ಮತ್ತು ತೋಟದ ಕೆಲ್ಸದವ ಹೊನ್ನಪ್ಪ ಬಂದವೆ’ ಎಂದು ಧೈರ್ಯ ತುಂಬಿದರು.

ಮೂವರೂ ರಾತ್ರಿ ಕಾವಲು ಕಾದರು. ಮಧ್ಯರಾತ್ರೆ ಲೈಟು ಬೆಳಕಿನೊಡನೆ ಕೆಲವು ಆಕೃತಿಗಳು ಬರುತ್ತಿರುವುದು ಕಾಣಿಸಿದಾಗ ಸಣ್ಣಪ್ಪ ಗೌಡರು `ಕಳ್ಳ ನನ್ಮಕ್ಳಾ, ನೀವಗೆ ಗತಿ ಕಾಣ್ಸಿನೆ ಎಂದು ಬೊಬ್ಬಿಟ್ಟು ಗುಂಡು ಹಾರಿಸಿಯೇ ಬಿಟ್ಟರು. ಆಕೃತಿಗಳು ನೆಗೆದು ಬಿದ್ದು ಓಡಿಹೋದವು. `ಇನ್ನು ಅವುಬಾಕೆ ಉಪಾಯನೇ ಇಲ್ಲೆ. ಮೆನಗೆ ಹೋಗಿ ಬೆಚ್ಚ ಮಲ್ಗಮಾ’ ಎಂದು ಸಣ್ಣಪ್ಪಗೌಡರು ಹೇಳಿದ ಮೇಲೆ ಎಲ್ಲರೂ ವಾಪಾಸಾದರು.

ಮತ್ತೆ ಮರ ಕಳ್ಳತನವಾಗಲಿಲ್ಲ. ಶನಿವಾರ ನಾಲ್ಕು ಲಾರಿಗಳಲ್ಲಿ ಬಂದ ಜನರು ಶ್ರೀಗಂಧದ ಮರಗಳನ್ನು ಕಡಿದು ಲಾರಿಗಳಲ್ಲಿ ತುಂಬತೊಡಗಿದರು. `ಫಾರೆಸ್ಟ್ರು ಇಂದು ರಜೇಲ್ಲೊಳಾ. ನೀವು ಸೋಮವಾರ ಆಫೀಸುಗೆ ಬಂದರೆ ಈ ಮರಗಳಿಗೆ ರೇಟು ಹಿಡ್ದ್ ಚೆಕ್ಕು ಕೊಟ್ಟವೆ. ಅದರ ನೀವು ನಿಮ್ಮ ಪತ್ತಿನ ಸಹಕಾರಿ ಸಂಘಕ್ಕೆ ಕೊಟ್ಟರೆ ದುಡ್ಡು ಸಿಕ್ಕಿದೆ. ಲಕ್ಷಗಟ್ಲೆ! ದೊಡ್ಡ ಸಾವ್ಕಾರರಾಗಿ ಬುಟ್ರಲ್ಲಾ ಗೌಡ್ರೇ?’ ಎಂದು ಮೇಸ್ತ್ರಿ ಹೇಳಿದ. ಮನೆಗೆ ಬಂದ ಶೇಷಪ್ಪ ಗೌಡರು ತಿರುಪತಿ ತಿಮ್ಮಪ್ಪನ ಪಟನೋಡಿ `ವೆಂಕಟ್ರಮಣಾ, ಊರಿಗೆ ನಿನ್ನ ಹೆಸ್ರ್‌ಲಿ ಹೈಸ್ಕೂಲು ಮಾಡಮಾ. ನಿಂಗೆ ನನ್ನ ಮುಡಿ ಕೊಡ್ವ ದಿನ ಹಕ್ಕಲೆ ಬಂದ್‌ಕಂಡ್‌ ಉಟ್ಟು. ನಾ ಏನೇ ಬೊಯ್ಯಲಿ. ನೀ ದೊಡ್ಡವ’ ಎಂದು ಕೈಮುಗಿದರು.

ಸೋಮವಾರ ಬೆಳಿಗ್ಗೆ ಸ್ನಾನ ಮಾಡಿ. ತಿರುಪತಿ ತಿಮ್ಮಪ್ಪನ ಪಟಕ್ಕೆ ಕೈಮುಗಿದು, ಶ್ರೀಗಂಧದ ಮೂರು ಉದ್ದನಾಮಗಳನ್ನು ಹಣೆಯಲ್ಲಿ ಎಳೆದು ಗೌಡರು ಫಾರೆಸ್ಟು ಆಫೀಸ್‌ಗೆ ನಡೆದರು. ಅವರನ್ನು ನೋಡಿ ಫಾರೆಸ್ಟರು `ನೀವು ಬಂದೊದು ಒಳ್ಳದಾತು ಗೌಡ್ರೇ. ನಾ ಮೇಲಾಫೀಸರಿಗೆ ತಿಳ್ಸ್ಯಳೆ. ಬುಧವಾರ ಖುದ್ದು ಡೀ ಎಫ್‌ ಓ ನಿಮ್ಮ ತೋಟಕ್ಕೆ ಬಂದ್ ಮರಕ್ಕೆ ವೇಲ್ಯುವೇಶನ್ನು ಮಾಡ್ವೆಗಡ. ಅದಾದ ಮೇಲೆ ನಮ್ಮ ಡಿಪಾರ್ಟುಮೆಂಟ್‌ನವು ಬಂದ್ ಮರಗಳ ಕಡ್ದು ತಂದವೆ’ ಎಂದರು.

ಶೇಷಪ್ಪ ಗೌಡರು ಮಾತು ಕಳಕೊಂಡು ಕಕ್ಕಾಬಿಕ್ಕಿಯಾಗಿ ಫಾರೆಸ್ಟರನ್ನೇ ನೋಡುತ್ತಾ ನಿಂತುಬಿಟ್ಟರು!.

*****

 

ಕೀಲಿಕರಣ : ಕಿಶೋರ್‍ ಚಂದ್ರ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅವರು
Next post ಹುಟ್ಟಗರತಿಯ ಕಾಣಲಿಲ್ಲಾ

ಸಣ್ಣ ಕತೆ

 • ಕರಿ ನಾಗರಗಳು

  ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

 • ಅಮ್ಮ

  ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

 • ಅಪರೂಪದ ಬಾಂಧವ್ಯ

  ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

 • ವ್ಯವಸ್ಥೆ

  ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

 • ಪಾಠ

  ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…