ದೇಶಭಾಷೆಗಳನ್ನು ಬೂದಿ ಮಾಡುವ ಬಜೆಟ್ ಭಾಷೆ

ದೇಶಭಾಷೆಗಳನ್ನು ಬೂದಿ ಮಾಡುವ ಬಜೆಟ್ ಭಾಷೆ

ಸಂಸ್ಕೃತಿ ವಿಕಾಸವನ್ನು ಕುರಿತು ೧೯೭೭ರಲ್ಲಿ ಮೊಟ್ಟಮೊದಲ ಬಾರಿಗೆ ಸೈದ್ಧಾಂತಿಕ ಸಂಗತಿಗಳನ್ನು ಮಂಡಿಸಿದ ಮಾನವಶಾಸ್ತ್ರಜ್ಞ ಮಾರ್ಗನ್ ‘ಉಳಿಕೆಯ ವಿಧಾನ’ವೆಂಬ ಒಂದು ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ನೀವು ಬದುಕುತ್ತಿರುವ ಸಮಕಾಲೀನ ಸಂದರ್ಭದಲ್ಲಿ ಪ್ರಾಚೀನ ಪಳೆಯುಳಿಕೆ ಗಳೆಂದು ಹೇಳಬಹುದಾದ ಸಂಸ್ಕೃತಿ ಪ್ರತಿನಿಧಿಗಳು ಬದುಕುತ್ತಿರುತ್ತಾರೆ. ಅವರ ವಾಸಸ್ಥಾನ, ಉಡುಪು, ಆಹಾರ, ಆಚಾರ-ವಿಚಾರಗಳಿಗೆ ಸಮಕಾಲೀನ ಸಂಸ್ಕೃತಿ ಚಲನಶೀಲ ನೆಲೆಗಳಿಗೂ ಅಗಾಧ ಅಂತರವಿರುತ್ತದೆ. ಆದರೆ ಹಿಂದಿನ ಉಳಿಕೆಗಳೊಂದಿಗೆ ಹೋಲಿಸಿಕೊಂಡಾಗಲೇ ಆಧುನಿಕ ಚಲನೆಯ ನೆಲೆಗಳು ಹಾಗೂ ವೇಗ-ವಿಧಾನಗಳು ಸ್ಪಷ್ಟಗೊಳ್ಳುತ್ತವೆ; ನಾನು ಹಾದು ಬಂದಿರುವ ಹಂತವನ್ನು ಈ ‘ಉಳಿಕೆ’ಗಳು ಮನವರಿಕೆ ಮಾಡಿಕೊಡುತ್ತವೆ. ಇದಿಷ್ಟು ಮಾರ್ಗನ್‌ನ ‘ಉಳಿಕೆಯ ವಿಧಾನ’ದ ವಿಚಾರ. ಈ ವಿಷಯವನ್ನು ಪ್ರಸ್ತಾಪಿಸಲು ಕಾರಣವಿದೆ. ಮಾರ್ಚ್ ನಾಲ್ಕರಂದು ಬೆಂಗಳೂರಿನ ಗಂಗೊಂಡನಹಳ್ಳಿ ಮತ್ತು ಅರುಂಧತಿ ನಗರದ ಎರಡು ಸಾವಿರ ಗುಡಿಸಲುಗಳು ಬೆಂಕಿಯಲ್ಲಿ ಬೆಂದು ಹೋದ್ವು. ಜೊತೆಗೆ ನಾಲ್ವರು ಮಕ್ಕಳ ಜೀವವನ್ನು ತಿಂದು ಹಾಕಿದವು. ಹಳ್ಳಿ ಮತ್ತು ನಗರ ಎಂಬ ಪದಗಳನ್ನು ಜೊತೆಗೆ ಸೇರಿಸಿಕೊಂಡು ಈ ಎರಡು ನೆಲೆಗಳು ಇತ್ತ ಹಳ್ಳಿಯೂ ಆಗದ, ಅತ್ತ ನಗರ ಆಗದ ‘ಕೊಳಚೆ ಪ್ರದೇಶ’ಗಳು. ‘ಕೊಳಚೆ’ ಯೆಂಬ ‘ವಿಶೇಷಣ’ವನ್ನು ನೀಗಿಕೊಳ್ಳುವುದಕ್ಕಾಗಿ ಅಂಟಿಕೊಂಡ ಕೃತಕ ಸೂಚಕಗಳಾಗಿ ‘ಹಳ್ಳಿ’ ಮತ್ತು ‘ನಗರ’ ಎಂಬ ಪದಗಳು ಸೇರಿಕೊಂಡಂತೆ ಭಾಸವಾಗುತ್ತದೆ.

ಈ ಕೊಳಚೆ ಪ್ರದೇಶಗಳು ನಗರ ಗರ್ಭದ ಹಳ್ಳಿಗಳು ಎಂದು ಹೇಳುವುದು ಸುಲಭ. ಆದರೆ ಹಳ್ಳಿಯಲ್ಲಿ ಕೊಳಚೆ ಪ್ರದೇಶವೆಂದು ಇರಲು ಸಾಧ್ಯವೆಂಬುದನ್ನು ಅರಿತಾಗ ನಮ್ಮ ಸಂಸ್ಕೃತಿಯ ನಿರ್ಲಕ್ಷಿತ ನೆಲೆಗಳಾದ, ತಿರಸ್ಕೃತ ತಾಣಗಳಾಗಿ ಅವು ಕಾಡಿಸುತ್ತವೆ. ಹಳ್ಳಿಯಲ್ಲಾಗಲಿ ನಗರದಲ್ಲಾಗಲಿ ನಿರ್ಲಕ್ಷಿತ-ತಿರಸ್ಕೃತ-ತಾಣಗಳಾಗಿ ಕಾಣದ ಸಂಕೇತಗಳೆಂದರೆ – ಗುಡಿಸಲುಗಳು. ಆದ್ದರಿಂದ ಸಮಾಜ ಮತ್ತು ಸಂಸ್ಕೃತಿ ಉಳಿಕೆಗಾಗಿ ಈ ಗುಡಿಸಲುಗಳು ನಮ್ಮೆದುರು ನಿಲ್ಲುತ್ತವೆ. ಸಂಸ್ಕೃತಿಯ ಒಂದು ಹಂತವನ್ನು ದಾಟಿ ಬಂದ ಮನೆ-ಮಹಲುಗಳ, ಮನುಷ್ಯರಿಗೆ ಸಮಾನತೆ ಮತ್ತು ಅಸಹಾಯಕತೆಗಳನ್ನು ನೆನಪಿಸುವ, ಮಾನವೀಯತೆಗೆ ಪ್ರಶ್ನೆಯಾಗುವ, ಅಭಿವೃದ್ಧಿಯ ಅಂತರಕ್ಕೆ ವ್ಯಂಗವಾಗುವ ಯಾತನಶಿಬಿರಗಳಾಗಿ ಕಾಣಿಸುತ್ತವೆ. ಊರು ಮತ್ತು ನಗರಗಳ ‘ಉಳಿಕೆ’ಗಳಾದ ಗುಡಿಸಲುಗಳನ್ನು ಪರಿವರ್ತಿಸಿ ಪ್ರಗತಿಗೊಳಿಸಲಾಗದ ನಮ್ಮ ಸಾಮಾಜಿಕ – ಆರ್ಥಿಕ ನೀತಿಗಳು ಅಣಕಗಳಾಗಿ ಮಾತ್ರ ಕಾಣಿಸುತ್ತವೆ. ಆದ್ದರಿಂದಲೇ ಕೊಳಚೆ ಪ್ರದೇಶದ ಎರಡು ಸಾವಿರ ಗುಡಿಸಲುಗಳು ಬೆಂದು ಬವಣೆಯಾಗುತ್ತಿರುವ ಧೂಮ ದೃಶ್ಯವನ್ನು ಸ್ವಲ್ಪ ದೂರದಿಂದ ನೋಡುತ್ತಿದ್ದ ನನಗೆ ಕೂಡಲೇ ನೆನಪಿಗೆ ಬಂದದ್ದು ಕೆಲವೇ ದಿನಗಳ ಹಿಂದ ಮಂಡಿತವಾದ ಕೇಂದ್ರ ಸರ್ಕಾರದ ಮನಮೋಹಕ ಭಂಗಿಯ ಬಜೆಟ್.

ಪಾರ್ಲಿಮೆಂಟ್ ಸಭಾಂಗಣದಲ್ಲಿ ಅರ್ಥ ಸಚಿವ ಮನಮೋಹನ್ ಸಿಂಗ್ ಅವರು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಅಂಕಿ ಅಂಶಗಳ ಅರಣ್ಯದಲ್ಲಿ ನಗೆ ಹನಿಗಳನ್ನು ಚಿಮ್ಮಿಸುತ್ತ ಕಟುವಾಸ್ತವ ಗಳನ್ನು ಮರೆಸುತ್ತಿದ್ದಾರೆ. ಹಿರಿಯ ಮಂತ್ರಿಗಳೆಲ್ಲ ಶಾಲಾ ಬಾಲಕರು ಬೆಂಚಿನ ಮೇಲೆ ಒತ್ತಿ ಕುಳಿತ ದೃಶ್ಯವನ್ನು ನೆನಪಿಸುವ ರೀತಿಯಲ್ಲಿ ಕೂತು ನಗುತ್ತ ತಲೆದೂಗುತ್ತ ತನ್ಮಯರಾಗಿದ್ದಾರೆ. ಕೆಲವು ಸಚಿವರಿಗಂತೂ ಮನಮೋಹನ ಸಿಂಗ್ ಅವರು ಕುರ್ಚಿ ಕಾಪಾಡಿದ ಕುಲದೇವತೆಯಂತೆ ಕಾಣುತ್ತಿದ್ದಾರೆ. ಯಾಕೆಂದರೆ, ಮನಮೋಹನ್ ಸಿಂಗ್ ಅವರು ಷೇರು ಹಗರಣಕ್ಕೆ ಸಂಬಂಧಿಸಿದಂತೆ ರಾಜೀನಾಮೆ ಕೊಟ್ಟರೆ ಅದು ಅಂಗೀಕಾರವಾಗಿದ್ದರೆ (ಛೇ ಇದು ಹೇಗೆ ಸಾಧ್ಯ?)- ಆಗ ಇತರ ಕೆಲವರಾದರೂ ರಾಜೀನಾಮೆ ಕೊಡಬೇಕಾಗಿತ್ತು. ಆದರೆ ‘ಮೌನ ಮುನಿ’ ಪಿ. ವಿ. ನರಸಿಂಹರಾವ್ ಅವರು ‘ಸಚಿವ ಚಾರಿತ್ರ್ಯ’ಕ್ಕೆ ಹೆಸರಾದ ಮಾಧ್ಯಮಗಳಲ್ಲಿ ಮೆಚ್ಚುಗೆ ಪಡೆದಿದ್ದ, ಅನಾಥರಕ್ಷಕ ಬಿರುದಾಂಕಿತ ಮನಮೋಹನ್ ಸಿಂಗ್ ಅವರಿಂದ ರಾಜೀನಾಮೆ ಕೊಡಿಸಿದರು, ಸಿಂಗ್ ಅವರೇ ಸ್ವ‌ಇಚ್ಚೆಯಿಂದ ಕೊಟ್ಟರೊ – ಅಂತು ಅದನ್ನು ಸಾರ್ವಜನಿಕರ ಒತ್ತಾಯದ ಮೇರೆಗೆ ಒಪ್ಪಿಕೊಳ್ಳದೆ’ ತಮಗೆ ತಾವೇ ಉಪಕೃತರಾದಾಗ, ಕೆಲವರ ಕುರ್ಚಿಗಳಂತೂ ಹಾಗೇ ಉಳಿದವು. ಹೀಗೆ ಸರ್ಕಾರಕ್ಕೆ ಸಕ್ಕರೆ ಕೋಟೆ ಕಟ್ಟಿಕೊಡುವ ಮನಮೋಹನಸಿಂಗ್ ‘ಮೌನಮುನಿಯ ಮಾತುಗಾರ’ರಾಗಿ ಬಜೆಟ್ ಮಂಡಿಸುತ್ತಿದ್ದಾಗ ಮೌನಮುನಿಗಳು ನಿಶ್ಚಿಂತೆಯ ನಿಟ್ಟುಸಿರನ್ನು ಯಥಾ ಪ್ರಕಾರ ನಿಧಾನವಾಗಿ ಬಿಡುತ್ತಿದ್ದ ದೃಶ್ಯ, ಬೆಂಗಳೂರಿನಲ್ಲಿ ಬೆಂಕಿಯಾಗಿ ಭಗ್ಗೆಂದಂತೆ ನನಗೆ ಭಾಸವಾಯಿತು. ಭಾವನೆಗಳಿಗೆ ಅವಕಾಶವೇ ಇಲ್ಲದೆ ಬೌದ್ಧಿಕ ಕಸರತ್ತಾಗುವ ಬಜೆಟ್‌ಗಳು ಮತ್ತು ಮೌನಮುನಿಗಳ ಒಳಸಂಚಾಗಿ ಮೂಡುವ ಸಂಖ್ಯಾವೈಭವಗಳು – ಒಂದರೊಳಗೊಂದಾಗಿ ಉರಿ ನಾಲಗೆ ಚಾಚುತ್ತ ಗುಡಿಸಲ ಗರಿಗಳನ್ನು ಬೂದಿಮಾಡಿತೆ? ಗೋರಿ ತೋಡಿ ಗಹಗಹಿಸಿ ನಕ್ಕಿತೆ?

ಗುಡಿಸಲು ಗೋರಿ ಮತ್ತು ಬಜೆಟ್ ಮಂಡನೆ -ಎರಡೂ ಪ್ರತ್ಯೇಕ ಘಟನಗಳೆಂಬುದು ನಿಜ. ಆದರೆ ಇವೆರಡರ ನಡುವೆ ಇರುವ ಆಂತರಿಕ ಸಂಬಂಧವನ್ನು ಸ್ಪಷ್ಟಪಡಿಸಿಕೊಳ್ಳುವುದರಲ್ಲೇ ಆರ್ಥಿಕ ನೀತಿಯ ಗ್ರಹಿಕೆಯೂ ಸೇರಿಕೊಂಡಿದೆ. ಒಂದು ದೇಶದ ಅಥವಾ ರಾಜ್ಯದ ಬಜೆಟ್ ಯಾವ ನೆಲೆಯಿಂದ ತನ್ನ ನಿಲುವುಗಳನ್ನು ರೂಪಿಸಿಕೊಳ್ಳುತ್ತಿದೆಯೆನ್ನುವುದು ಮುಖ್ಯ ಮಾನದಂಡ ವಾಗಬೇಕು. ಈ ಮಾನದಂಡಗಳ ಬಗ್ಗೆ ಮಾತನಾಡುವ ನಾನು ಅರ್ಥಶಾಸ್ತ್ರಜ್ಞ ನಲ್ಲವೆಂಬ ಅರಿವು ನನಗಿದೆ; ಆದರೆ ಅರ್ಥಶಾಸ್ತ್ರವನ್ನು ಅಂಕಿ-ಗಣಿತ ಮಟ್ಟಕ್ಕೆ ಇಳಿಸಬಾರದೆನ್ನುವ ಸಾಮಾನ್ಯ ಜ್ಞಾನ ಅರಿವನ್ನು ಅಪೇಕ್ಷಿಸುವ ಮನುಷ್ಯನಾಗಿ ಈ ಮಾತುಗಳನ್ನು ಆಡುತ್ತಿದ್ದೇನೆ. ಉನ್ನತ ಬೌದ್ದಿಕ ನಲೆಗಳು ಉನ್ನತ ವೆನ್ನಿಸಿಕೊಳ್ಳಲು ಅರ್ಹವಾಗುವುದು ಉನ್ನತಿಯ ನೆಲಮಟ್ಟಿಲನ್ನು ಮರೆಯದೇ ಇದ್ದಾಗ ಎನ್ನುವುದು ನನ್ನ ದೃಢ ನಂಬಿಕೆ. ನೆಲಮಟ್ಟಿಲ ಜೊತೆಗಿನ ಸಂಬಂಧವೇ ಉನ್ನತ ಮೆಟ್ಟಿಲ ಮಾನವೀಯ ಮಿಡಿತವಾಗುತ್ತದೆ. ಇಂಥ ಅಂತರ್ ಸಂಬಂಧವನ್ನು ಅಂತರ್ಗತ ಮಾಡಿಕೊಳ್ಳಲಾಗದ ಸ್ಥಿತಿಯು ಎಷ್ಟೇ ಉನ್ನತವೆಂದು ಪ್ರಚಾರ ಗಿಟ್ಟಿಸಿದರೂ ಅದು ಹುಸಿ ಉನ್ನತಿ ಮಾತ್ರವಾಗಿರುತ್ತದೆ. ಯಾಕೆಂದರೆ ಬಹುಮುಖ ನೆಲೆಯ ಈ ನೆಲದಲ್ಲಿ ಏಕಮುಖ ಉನ್ನತಿಯ ಕಲ್ಪನೆಯೇ ಕೃತಕವಾದದ್ದು: ಕ್ರೂರವಾದದ್ದು.

‘ನರಮೋಹನರಾವ್ ಸಿಂಗ್’ ಅವರ ಬಜೆಟ್ ಇಂಥ ಹುಸಿ ಉನ್ನತಿಯ ವಯ್ಯಾರದಲ್ಲಿ ವಿಜೃಂಭಿಸ ಹೊರಡುವುದು ಈ ದೇಶದ ವ್ಯಂಗ್ಯವಾಗಿದೆ.

ಒಂದು ಬಜೆಟ್ ತನ್ನ ದೇಶದೊಳಗಿನ ಜನರ ನೆಲೆಯಿಂದ ನೋಡುವ ಕಣ್ಣನೋಟವಾಗುವುದಕ್ಕೂ, ವಿದೇಶಿ ನೆಲೆಯಿಂದ ಮೂಡುವ ಕಣ್ಕಟ್ಟು ವಿದ್ಯೆಯಾಗುವದಕ್ಕು ಎಷ್ಟು ಅಂತರವಿದೆಯೆಂಬುದನ್ನು ನಾವು ತಿಳಿಯ ಬೇಕಾಗಿದೆ. ಬೆಂಗಳೂರಲ್ಲಿ ಬಂದೆಹೋದ ಗುಡಿಸಲ ಜೀವಗಳು ನಮ್ಮ ಬಜೆಟ್‌ಗಳ ಆತ್ಮವಾಗದೆ ಹೋದರೆ ವಿದೇಶಿ ವಯ್ಯಾರವೇ ಅನಿವಾರ್ಯ ಚಿಂತನ ವಿಧಾನ ವಾಗುವ ಅಪಾಯವಿದೆ. ಇದರರ್ಥ ವಿದೇಶಿ ಚಿಂತನೆಗಳಿಗೆ ಕದ ಮುಚ್ಚಿ ಕುರುಡಾಗಬೇಕೆಂದಲ್ಲ; ಅದು ಸಾಧುವೂ ಅಲ್ಲ. ಆರೋಗ್ಯಕರ ಚಿಂತನೆಗಳು ಯಾವ ದೇಶದಿಂದ ಬಂದರು ನಮ್ಮ ನೆಲ ನಿರಾಕರಿಸಬೇಕಿಲ್ಲ. ಆದರೆ ನಮ್ಮ ನೆಲದ ಭಾವ-ಬುದ್ಧಿಗಳಿಗೆ ಬೆಂಕಿಯಿಟ್ಟು ವಿದೇಶಿ ದೇವತೆಗಳಿಗೆ ಧೂಪ ಹಾಕಬೇಕಾಗಿಲ್ಲ. ಒತ್ತಡಕ್ಕೆ ಹುಟ್ಟಿದ ಬಜೆಟ್‌ಗಳಿಗೆ ಬೆಡಗಿನ ಬಟ್ಟೆ ತೊಡಿಸಿ ಬಿನ್ನಾಣಗಿತ್ತಿ ಮಾಡಬೇಕಿಲ್ಲ.

ಈ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಬೂದಿಯಾದ ಗುಡಿಸಲು ಮತ್ತು – ಬಜೆಟ್ – ಎರಡನ್ನೂ ಒಟ್ಟಿಗೆ ನೋಡಿದಾಗ, ಆತ್ಮವಂಚನೆ ಅನಾವರಣ ಗೊಳ್ಳುತ್ತದೆ. ಗುಡಿಸಲಲ್ಲಿ ಸುಟ್ಟು ಕರಕಲಾದ ರೂಬಿ (೩) ಇರ್ಫಾನ್ (೪) ನದೀನ್ (೩) ಮುಬಾರಕ್ (೫) ಎಂಬ ಎಳೆಯ ಜೀವಗಳನ್ನು ಬದುಕಿಸಿ ಕೊಳ್ಳಲಾಗದಿದ್ದರೂ, ಬದುಕಬೇಕೆಂದು ಆಶಿಸಲೂ ಆಗದ ಬಜೆಟ್‌ಗಳಿಗೆ ಬೆಲೆಯಿದೆಯೆ ? ವಿದೇಶಿ ಒತ್ತಡಗಳಿಗೆ ಮಣಿದು ಬೆಲೆ ಹೆಚ್ಚಿಸಿಕೊಳ್ಳುವ ಬೆಲೆವೆಣ್ಣಾಗಿ, ಕಕ್ಕಾಬಿಕ್ಕಿ ಮಾಡುವ ಲೆಕ್ಕ ಬುಕ್ಕಾಗಿ ಬರುವ ಬಜೆಟ್ ತನ್ನ ಆತ್ಮವನ್ನು ಒತ್ತೆಯಿಟ್ಟು ಮುಸುಕಿನ ಮಾಯಾಂಗನೆಯಾಗಿ ಬಿಡುತ್ತದೆ. ವಿದೇಶಿಯರಷ್ಟೇ ಅಲ್ಲ, ಸ್ವದೇಶಿ ಉದ್ಯಮಪತಿಗಳೂ ಸೇರಿಕೊಂಡು, ಬಂಡವಾಳದ ಬಲ ತುದಿಯಲ್ಲಿ ನಿಂತು ‘ಮುಸುಕು ತೆಗೆಯೆ ಮಾಯಾಂಗನೆ’ ಎಂದರೆ ನಾವೆಲ್ಲ ರೋಮಾಂಚನಗೊಳ್ಳಲು ಸಾಲಾಗಿ ನಿಲ್ಲಬೇಕೆ? ‘ಭಾಗದ ಲಕ್ಷ್ಮಿ ಬಾರಮ್ಮ’ ಎಂದು ಡಾಲರ್ ಡೋರ್‌ಲಾಕ್ ತೆಗೆಯಬೇಕೆ? ಇಂಥ ಪ್ರಶ್ನೆಗಳ ಹಾದಿಯಲ್ಲೇ ನನಗೆ ಮಂಜುನಾಥ ನೆಂಬ ಬಾಲಕ ಕಾಣಿಸುತ್ತಾನೆ. ಬೆಂಗಳೂರಿನ ಕೊಳಚೆ ಪ್ರದೇಶದಲ್ಲಿದ್ದ ಗುಡಿಸಲುಗಳು ಸುಟ್ಟು ಸಂಕಟ ವಾಗುತ್ತಿದ್ದಾಗ ‘ಬೆಂಕಿಯ ಜ್ವಾಲೆಯನ್ನು ಲೆಕ್ಕಿಸದೆ ತನ್ನ ಸುತ್ತಮುತ್ತ ಇದ್ದ ಮೂರು ಮಕ್ಕಳನ್ನು, ಈ ಎಂಟು ವರ್ಷದ ಬಾಲಕ ರಕ್ಷಿಸಿದ’, ಬಾಲಕನೊಬ್ಬನ ಈ ಧೈರ್ಯ, ಸಾವಿನೆದುರು ಸೆಣಸುವ ಸ್ಥೈರ್‍ಯ, ನಮ್ಮ ಬಜೆಟ್‌ಗೆ ಇಲ್ಲದಿದ್ದಾಗ ಒಳ ಹುಳುಕನ್ನು ಮುಚ್ಚಿಕೊಳ್ಳುವ ಹುಸಿ ವಯ್ಯಾರ ಹೊರ ಹೊಮ್ಮುತ್ತದೆ. ಅದಕ್ಕೆ ಬೇಕಾದ ವೇದಿಕೆಯೂ ಸಿದ್ಧವಾಗುತ್ತದೆ. ಹುಸಿ ವಯ್ಯಾರ, ಹುಸಿ ವೇದಿಕೆಗಳು ಹುಸಿ ಸಂಸ್ಕೃತಿಯ ಒತ್ತಾಸೆಗಳಾಗಿ ಕೆಲಸ ಮಾಡುತ್ತವೆ. ಗುಡಿಸಲು ನಮ್ಮ ಚಲನಶೀಲ ಸಂಸ್ಕೃತಿಯ ವ್ಯಂಗ್ಯವಾಗಿ ಉರಿಯುತ್ತಲೇ ಇರುತ್ತದೆ.

ಆರ್ಥಿಕ ನೀತಿಯ ಸಂದರ್ಭದಲ್ಲಿ ಸಂಸ್ಕೃತಿಯ ಮಾತನ್ನು ಉದ್ದೇಶ ಪೂರ್ವಕವಾಗಿಯೇ ಚರ್ಚೆಗೆ ಎಳೆದಿದ್ದೇನೆ. ವಿದೇಶಿ ಬಂಡವಾಳದ ಆಕರ್ಷಣೆಗಾಗಿ ಒತ್ತು ಕೊಡುತ್ತ ಉದಾರವಾದಿ ಆರ್ಥಿಕ ನೀತಿಯನ್ನು ಪ್ರತಿಪಾದಿಸುತ್ತ ಮುಕ್ತ ಮಾರುಕಟ್ಟೆಯನ್ನು ತೆರೆಯುವ ಬಜೆಟ್‌ಗಳು ಸಂಸ್ಕೃತಿಯನ್ನೂ ಮುಕ್ತ ಮಾರುಕಟ್ಟೆ ಸರಕನ್ನಾಗಿಸುತ್ತವೆ. ದೇಶದಾದ್ಯಂತ ಸರಕು ಸಂಸ್ಕೃತಿಯನ್ನು ಹರಡುತ್ತವೆ. ನನ್ನ ಮಾತಿನ ಸಮರ್ಥನೆಗಾಗಿ ಒಂದು ಉದಾಹರಣೆ ಕೊಡಬಯಸುತ್ತೇನೆ. ಬೆಂಗಳೂರಿಗೆ ವಿದೇಶಿ ಉದ್ಯಮಪತಿಗಳ ಒಂದು ತಂಡ ಬಂದಿತು ಎಂದುಕೊಳ್ಳಿ. ಆಗ ಸಂಸ್ಕೃತಿ ಇಲಾಖೆಗೆ ದೂರವಾಣಿ ಕರೆ ಬರುತ್ತದೆ, ಉದ್ಯಮಪತಿಗಳ ತಂಡ ತಿಂಡಿ ತಿನ್ನುವಾಗಲೊ, ಊಟ ಹೊಡೆಯುವಾಗಲೂ ಒಂದು ನೃತ್ಯವನ್ನೊ, ಜಾನಪದ ಕುಣಿತವನ್ನೊ, ಸಂಗೀತವನ್ನೊ ಏರ್ಪಡಿಸಬೇಕೆಂದು ಹೇಳಲಾಗುತ್ತದೆ. ಕೂಡಲೇ ಸಿಕ್ಕ ಕಲಾವಿದರನ್ನು ಹಿಡಿದು ಸೂಕ್ತ ಸ್ಥಳದಲ್ಲಿ ‘ಸಂಸ್ಕೃತಿಯ ಪ್ರದರ್ಶನ’ವನ್ನು ವ್ಯವಸ್ಥೆಗೊಳಿಸಲಾಗುತ್ತದೆ. ಉದಾರವಾದಿ ಹಾಗೂ ಮುಕ್ತ ಆರ್ಥಿಕ ನೀತಿಯ ಫಲವಾಗಿ ಇಂಥ ಪ್ರದರ್ಶನಗಳು ನಡೆಯುತ್ತಿವೆ. ಇದು ನಮ್ಮ ರಾಜ್ಯಕ್ಕೆ ಮಾತ್ರವಲ್ಲ, ಎಲ್ಲ ರಾಜ್ಯಗಳಿಗೆ ಸಂಬಂಧಿಸಿದ ಸಂಸ್ಕೃತಿಯ ಸಂಕಟ. ಹಿಂದಿನ ಪ್ಯೂಡಲ್‌ಪತಿಗಳ ತೀಟೆ ತೆವಲುಗಳಿಗನುಗುಣವಾಗಿ ನಡೆಯುತ್ತಿದ್ದ ಪ್ರದರ್ಶನಗಳಿಗಿಂತ ಇದು ಹೇಗೆ ಭಿನ್ನ ಎನ್ನುವುದನ್ನು ನಮ್ಮ ಬಜೆಟ್ ಭಾಷೆಯೇ ಹೇಳಬೇಕು. ಬಂಡವಾಳವಾದಿ ಭಾಷೆಗೆ ಸಂಸ್ಕೃತಿಯ ಈ ಸಂಕಟ ಅರ್ಥವಾಗುವುದಾದರೂ ಹೇಗೆ?

ಸರ್ಕಾರದ ರಾಜಕೀಯ ಪರಿಭಾಷೆಯಿಂದಲೇ ಬಜೆಟ್ ಭಾಷೆ ಹುಟ್ಟುತ್ತದೆ. ಈ ಭಾಷೆಯಲ್ಲಿರುವ ಭಾವ ಕೇಂದ್ರ ಯಾವುದೆಂಬ ಅಂಶ ಮುಖ್ಯವಾಗುತ್ತದೆ. ದೇಶವೊಂದರಲ್ಲಿ ಕೃಷಿ, ಕೈಗಾರಿಕೆ ಎಲ್ಲವೂ ಬೆಳೆಯಬೇಕೆಂಬುದು ಎಲ್ಲಕ್ಕೂ ಅದರದೇ ಆದ್ಯತೆಯ ಮೇಲೆ ಅವಕಾಶವಿರಬೇಕೆಂಬುದನ್ನೂ ಒಟ್ಟಿಗೆ ಒಪ್ಪುತ್ತ, ಭಾಷೆಗೊಂದು ಭಾವಕೇಂದ್ರ ಬೇಕು ಎಂದು ಒತ್ತಾಯಿಸುವುದು ನನ್ನ ಮಾತಿನ ಉದ್ದೇಶ. ಇದೇ ‘ನರಮೋಹನರಾವ್ ಸಿಂಗ್ ಅವರು ಇಂದಿರಾ ಗಾಂಧಿಯವರ ಕಾಲದಲ್ಲಿ ಸಮಾಜವಾದಿ ಆರ್ಥಿಕ ನೀತಿಯನ್ನು ನೆತ್ತಿ ಮೇಲಿಟ್ಟು ಮೆರೆಸಿದವರು. ಆಗ, ಒಬ್ಬರು ಆರ್ಥಿಕತಜ್ಞ ಬುದ್ಧಿಜೀವಿಯಾಗಿ, ಇನ್ನೊಬ್ಬರು ವಿದ್ವತ್ ರಾಜಕಾರಣಿಯಾಗಿ ಸಮಾಜವಾದಿ ಭಾಷೆಯನ್ನು ಬಾಯಿಪಾಠ ಮಾಡಿದವರು; ಹೃದಯ ತುಂಬಿ ಬಂದಂತೆ ಮಾತನಾಡಿದರು. ಆದರೆ ಈಗ ಅದಕ್ಕೆ ತೀರಾ ತದ್ವಿರುದ್ಧ ನೆಲೆಯಲ್ಲಿ ನಿಂತಿದ್ದಾರೆ.

ಸೋವಿಯತ್ ಯೂನಿಯನ್ ಛಿದ್ರವಾದ ನಂತರದ ಅಂತಾರಾಷ್ಟ್ರೀಯ ಬೆಳವಣಿಗೆಗಳಿಂದ ಪುನರ್‌ ಚಿಂತನೆಗೆ ಅವಕಾಶ ಒದಗಿದ್ದರೂ ನಿಜಕ್ಕೂ ನಂಬಿದ ಚಿಂತನೆಯ ಮೂಲ ಬೇರುಗಳನ್ನು ಬಿಟ್ಟುಕೊಡುವುದು ಅಗತ್ಯವೆಂದು ನನಗನ್ನಿಸುವುದಿಲ್ಲ. ಪುನರ್‌ ಚಿಂತನೆಯೆನ್ನುವುದು ತಪ್ಪುಗಳನ್ನು ತಿದ್ದಿಕೊಳ್ಳುವ ಒಂದು ಪ್ರಕ್ರಿಯೆಯಾಗಬೇಕೇ ಹೊರತು ಮೂಲಭಾಷೆಯನ್ನು ಬೂದಿ ಮಾಡುವುದಲ್ಲ. ಆದರೆ ನರಮೋಹನರಾವ್ ಸಿಂಗ್ ಅವರಿಗೆ ಹಿಂದೆ ಯಾವುದು ಪ್ರತಿಗಾಮಿಯಾಗಿತ್ತೊ, ಅದು ಈಗ ಪ್ರಗತಿಪರವಾಗಿದೆ. ಆಗ ಸುಧಾರಣೆ ವಿರೋಧಿಯಾಗಿದ್ದ ಆರ್ಥಿಕ ನೀತಿ ಈಗ ಸುಧಾರಣಾವಾದಿಯಾಗಿದೆ. ಸಮಾಜದ ಕಟ್ಟಕಡೆಯ ಮನುಷ್ಯನ ಉನ್ನತಿಯಲ್ಲಿದ್ದ ಸುಧಾರಣೆಯ ಪರಿಕಲ್ಪನೆ ಈಗ ಉದ್ಯಮಪತಿಗಳಿಗೆ ಪಕ್ಷಾಂತರ ಗೊಂಡಿದೆ; ಪ್ರಗತಿಪರತೆ, ಸುಧಾರಣಾವಾದಿ ಮುಂತಾದ ಪದ-ಪರಿಕಲ್ಪನೆಗಳ ಭಾವಾರ್ಥವು ಬದಲಾಗಿದೆ; ಭಾವಾರ್ಥವೂ ಬದಲಾಗಿದೆ; ಇದನ್ನು ಪ್ರತಿನಿಧಿಸುವಂತೆ ಬಜೆಟ್ ಭಾಷೆಯು ರೂಪುಗೊಳ್ಳುತ್ತಿದೆ. ಅಂದರೆ ನಮ್ಮ ದೇಶದ ಬಜೆಟ್‌ಗಳು ವ್ಯಕ್ತಿ, ಪಕ್ಷ ಮತ್ತು ಸರಕಾರಗಳು ಬದಲಾದಾಗ ಮಾತ್ರ ದನಿಯನ್ನು ಬದಲಾಯಿಸಿವುದಿಲ್ಲ; ಅದೇ ವ್ಯಕ್ತಿಗಳು ಅದೇ ಪಕ್ಷದಲ್ಲಿದ್ದು ಭಾಷೆ ತಪ್ಪುತ್ತಿದ್ದಾರೆ; ಭಾಷೆ ಬದಲಾಯಿಸುತ್ತಿದ್ದಾರೆ. ಅಲ್ಪಸ್ವಲ್ಪ ಅನಿವಾರ್ಯತೆಗಳನ್ನು ಒಪ್ಪಿಯೂ, ದೇಶಕ್ಕೆ ಕೊಟ್ಟ ಭಾಷೆಯನ್ನು ಬೂದಿ ಮಾಡಬೇಕಾಗಿಲ್ಲವೆಂದು ನರಮೋಹನರಾವ್ ಸಿಂಗ್ ದ್ವಯರು ದನಿಯೆತ್ತಿ ಹೇಳಬೇಕಾಗಿದೆ. ದೇಶ ಭಾಷೆಗಳನ್ನು ಬೂದಿ ಮಾಡಿ ಬಜೆಟ್ ಭಾಷೆಯನ್ನು ರೂಪಿಸಬೇಕು ಎಂದು ತಿಳಿಸಬೇಕಾಗಿದೆ. ಇಲ್ಲದಿದ್ದರೆ ದೇಶಭಾಷೆಗಳ ಗುಡಿಸಲು ಗೋರಿಯಾಗುತ್ತ ಹೋಗುತ್ತದೆ. ಹೊಗೆ ತುಂಬಿದ ಕಣ್ಣುಗಳಲ್ಲಿ ನಗೆ ಬತ್ತಿಹೋಗುತ್ತದೆ. ದೇಶಭಾಷೆಗಳ ನಾಶದಲ್ಲಿ ಬಹುಮುಖ ಸಂಸ್ಕೃತಿಯ ನೆಲೆ ನಾಶದತ್ತ ಸಾಗುತ್ತದೆ.
*****
೨೦-೩-೧೯೯೪

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೆರಳು
Next post ಲೋಕದ ಮನುಜರ

ಸಣ್ಣ ಕತೆ

 • ಇಬ್ಬರು ಹುಚ್ಚರು

  ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

 • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

  ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

 • ಬಾಗಿಲು ತೆರೆದಿತ್ತು

  ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

 • ಡಿಪೋದೊಳಗಣ ಕಿಚ್ಚು…

  ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

 • ನಿರಾಳ

  ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…