ಇವಳು ಬರುತ್ತಾಳೆ, ಬೆಳಕಿನ ತಂಬಿಗೆ ತುಂಬಿ ತರುತ್ತಾಳೆ,
ಹನಿಹನಿ ಹನಿಸಿ ಹಳ್ಳಹರಿಸಿ ನನ್ನ ಕುದಿಮನವನದರಲ್ಲಿ ತೇಲಿಸುತ್ತಾಳೆ
ಎಳೆಹುಲ್ಲ ಮೆತ್ತೆ ತೊಡೆಯ ಮೇಲೆ ಹೂಗೈಯಿಂದ ತಟ್ಟಿ
ತೊಟ್ಟಿಲ ತೂಗಿ ನನ್ನ ತಲೆಯ ಚಕ್ರಭ್ರಮಣವ ನಿಲ್ಲಿಸುತ್ತಾಳೆ,
ಮಬ್ಬುಗತ್ತಲಲ್ಲಿ ಬೆಂಕಿ ಹೊತ್ತಿಸಿ ಮೈಬೆಚ್ಚಗಿಡುತ್ತಾಳೆ
ನೆಲವನೆಲ್ಲ ನೀಲಿನೀರಲದ್ದಿ ಎರಕಹೊಯ್ದು
ತೊಲೆಕಂಬವಿಲ್ಲದ ಗೋಡೆಬೇಲಿಯಿಲ್ಲದ ಮನೆಯಲ್ಲಿ
ಹೂಹರವಿ ಸಿಂಗರಿಸುತ್ತಾಳೆ
ಕಾಯಕಾಯ ಬೆಸೆದು ಹಣ್ಣಾಗಿಸಿ ರಸವೀಂಟಿಸುತ್ತಾಳೆ
ನಾಡಿ ನಾಡಿಯಲ್ಲಿ ಜೇನ ತೊರೆ ಹರಿಸಿ
ಕಾಯಕಲ್ಪ ತೊಡಿಸುತ್ತಾಳೆ.
ತಾಯಿಯೋ ಪ್ರೇಯಸಿಯೋ ಎಂಬ ಭ್ರಮೆ ಬರಿಸುತ್ತಾಳೆ
ಬೇರಿಂದ ಚಿಗುರಿನವರೆಗೆ ಗೆಜ್ಜೆ ಪೋಣಿಸಿ
ಮೈಯರಳಿಸಿ ರವಷ್ಟೂ ರೋಮವೂ ಮಲಗಗೊಡದೆ
ಹೊಸನಾದ ಗೂಢಗಳಿಗೆ ಕಿವಿದೆರೆಸುತ್ತಾಳೆ
ಕೆಂಡ ಕೆದರಿ ಹೊವರಳಿಸುತ್ತಾಳೆ
ಬೂದಿಯಲ್ಲಿ ಬಂಡಾಯವ ಬಡಿದೆಬ್ಬಿಸಿ
ಜೀವವೂದಿ ಕಾವೇರಿಸುತ್ತಾಳೆ
ಇವಳು ಬರುವುದು ಸುಳುವು ಹತ್ತದೇ ಗೊತ್ತಾಗುತ್ತದೆ
ಇವಳ ಬರುವು ಉಳಿದು ಚಿರವಾಗದೆ
ಮತ್ತೆ ಹೊತ್ತು ಹೋಗುತ್ತದೆ ಹೇಗೋ
*****