ಕನ್ನಡ : ಆದ್ಯತೆಗಳ ಪಲ್ಲಟ

ಕನ್ನಡ : ಆದ್ಯತೆಗಳ ಪಲ್ಲಟ

ಕರ್ನಾಟಕದ ಏಕೀಕರಣವಾಗಿ ಐವತ್ತು ವರ್ಷಗಳು ತುಂಬಿವೆ. ‘ಸುವರ್ಣ ಕರ್ನಾಟಕದ ಅಧಿಕೃತ ಆಚರಣೆಯನ್ನು ಕರ್ನಾಟಕ ಸರ್ಕಾರವು ‘ತಾಂತ್ರಿಕವಾಗಿ ಪೂರೈಸಿದೆ. ಈ ಐವತ್ತು ವರ್ಷಗಳಲ್ಲಿ ನಮ್ಮ ನಾಡು-ನುಡಿಯ ಚಿಂತನೆ ಮತ್ತು ಕ್ರಿಯಾಶೀಲತೆಗಳನ್ನು ಕುರಿತು ಆತ್ಮಾವಲೋಕನಕ್ಕೆ ಎಲ್ಲ ಕಾಲವೂ ಸಕಾಲವೇ. ಆದರೆ ‘ಸುವರ್ಣ ಕರ್ನಾಟಕ’ವೆಂಬ ಆಚರಣೆ ಮತ್ತು ಕಾಲಘಟ್ಟವು ‘ಸಕಾಲ’ದ ಶಕ್ತಿಯನ್ನು ಹೆಚ್ಚಿಸುತ್ತದೆ! ‘ಸುವರ್ಣ’ದ ಕಲ್ಪನೆಯಲ್ಲಿ ಬೀಗುತ್ತಲೇ ಕನ್ನಡಪರ ಸಾಧನೆಯ ‘ಬಡತನ’ದ ಬಗ್ಗೆಯೇ ಹೆಚ್ಚು ಮಾತಾಡುತ್ತಿರುವ ಇಂದಿನ ಸಂದರ್ಭವನ್ನು ‘ಸಕಾಲ’ವೆನ್ನದಿರಲು ಹೇಗೆ ಸಾಧ್ಯ? ಒಂದು ಕಡೆ ಬಂಗಾರದ (ಸುವರ್ಣ) ಕಲ್ಪನೆ, ಇನ್ನೊಂದು ಕಡೆ ಬಡತನದ ಕಲ್ಪನೆ – ಈ ವೈರುಧ್ಯಗಳ ವಾಸ್ತವವನ್ನು ಅರ್ಥ ಮಾಡಿಕೊಳ್ಳುತ್ತ, ಅರ್ಥ ಮಾಡಿಸುತ್ತ ಬಂದಿದ್ದರೆ, ಬಹುಶಃ ಈ ಐವತ್ತು ವರ್ಷಗಳಲ್ಲಿ ಕನ್ನಡ ಕುರಿತ ಹಳಹಳಿಕೆ ಕಡಿಮೆಯಾಗಿ ನಿಜ ಕಳಕಳಿ ಹೆಚ್ಚಾಗುತ್ತಿತ್ತೇನೋ! ಆದರೇನು ಮಾಡುವುದು ? ವಾಸ್ತವಕ್ಕಿಂತ ವೈಭವವೇ ಹೆಚ್ಚು ಜನಪ್ರಿಯ!

ಕರ್ನಾಟಕ ಏಕೀಕರಣಕ್ಕೆ ಮುಂಚೆ ಕನ್ನಡ ಭಾಷೆಯ ಬಳಕೆಯಲ್ಲಿದ್ದ ಪ್ರದೇಶಗಳು ಸುಮಾರು ಇಪ್ಪತ್ತು ಆಡಳಿತ ಘಟಕಗಳಲ್ಲಿ ಹಂಚಿಹೋಗಿದ್ದವೆಂದು ಚರಿತ್ರೆಕಾರರು ಗುರುತಿಸಿದ್ದಾರೆ. ಹೀಗೆ ವಿವಿಧ ಆಡಳಿತ ಘಟಕಗಳಲ್ಲಿ ಸೇರಿದ ‘ಕನ್ನಡ’ವು ಆಯಾ ಪ್ರದೇಶದ ವಿವಿಧ ಪ್ರಭಾವಗಳಿಗೆ ಒಳಗಾಗಿ ಪದಸಂಪತ್ತು ಮತ್ತು ಉಚ್ಚಾರಗಳಲ್ಲಿ ವೈವಿಧ್ಯತೆಯನ್ನು ಪಡೆಯಿತು. ಇದರ ಫಲವಾಗಿ ಒಂದೇ ಮಾದರಿಯ ಕನ್ನಡದ ಬದಲು ವಿವಿಧ ಮಾದರಿಗಳ ಕನ್ನಡ ಅಥವಾ ‘ಕನ್ನಡಂಗಳು’ ಬಳಕೆಯಾದವು. ಹೀಗೆ ಕನ್ನಡ ಬಳಕೆಯು ಸಾಂದ್ರವಾಗಿದ್ದ ಪ್ರದೇಶಗಳನ್ನು ಭೌಗೋಳಿಕವಾಗಿ ಒಗ್ಗೂಡಿಸುವ ಹಂಬಲದಿಂದ ಏಕೀಕರಣದ ಕಲ್ಪನೆ ಹುಟ್ಟಿತೆಂದು ಭಾವಿಸಬಹುದಾಗಿದೆ. ೨೦-೭-೧೮೯೦ರಲ್ಲಿ ಪ್ರಾರಂಭವಾದ ಕರ್ನಾಟಕ ವಿದ್ಯಾವರ್ಧಕ ಸಂಘದ (ಧಾರವಾಡ) ‘ವಾಗ್ಯೂಷಣ’ ಪತ್ರಿಕೆಯಲ್ಲಿ ಶ್ರೀ ಆಲೂರು ವೆಂಕಟರಾಯರು ‘ಕರ್ನಾಟಕವು ಒಂದಾಗದಿದ್ದರೆ ಕರ್ನಾಟಕಸ್ಥರ ಏಳಿಗೆಯು ಎಂದೆಂದಿಗೂ ಸಾಧ್ಯವಿಲ್ಲ’ (೧೯೦೭) ಎಂದು ಪ್ರತಿಪಾದಿಸಿದರು.

೧೯೧೭ರ ಜನವರಿ ೭ರಂದು ಕರ್ನಾಟಕ ವಿದ್ಯಾವರ್ಧಕ ಸಂಘವು’ ಬ್ರಿಟಿಷರ ಅಧಿಕಾರಕ್ಕೆ ಒಳಪಟ್ಟ ಕನ್ನಡದ ಪ್ರದೇಶಗಳನ್ನು ಒಗ್ಗೂಡಿಸಿ ಒಂದು ರಾಜಕೀಯ ಘಟಕವನ್ನಾಗಿಸಿ, ಅದನ್ನು ಕರ್ನಾಟಕವೆಂದು ಕರೆಯಬೇಕು’ ಎಂಬ ಗೊತ್ತುವಳಿಯನ್ನು ಸ್ವೀಕರಿಸಿತು. ೧೯೧೫ ರಲ್ಲಿ ಸ್ಥಾಪನೆಯಾದ ಕನ್ನಡ ಸಾಹಿತ್ಯ ಪರಿಷತ್ತು ಕರ್ನಾಟಕ ಏಕೀಕರಣಕ್ಕೆ ಒತ್ತಾಯ ಮಾಡುತ್ತಲೇ ಇತ್ತು. ಕರ್ನಾಟಕದ ಸೋಷಿಲಿಸ್ಟರು ಮತ್ತು ಕಮ್ಯುನಿಸ್ಟರು ಏಕೀಕರಣದ ಪ್ರಬಲ ಪ್ರತಿಪಾದಕರಾಗಿದ್ದರು. ೧೯೨೮ರಲ್ಲಿ ರಚಿತವಾದ ಮೋತಿಲಾಲ್ ನೆಹರು ನೇತೃತ್ವದ ‘ರಾಜ್ಯಘಟನಾ ಸಮಿತಿ’ಯು ಕರ್ನಾಟಕ ಪ್ರಾಂತ್ಯ ರಚನೆಗೆ ಒಲವು ವ್ಯಕ್ತಪಡಿಸಿದ್ದರೂ ೧೯೫೬ರವರೆಗೆ ಆಸೆ ಕೈಗೂಡಲಿಲ್ಲ. ೧೯೫೩ರಲ್ಲಿ ರಚನೆಯಾದ ಫಜಲ್ ಆಲಿ ಆಯೋಗದ ವರದಿಯನ್ನಾಧರಿಸಿ ೧೯೫೬ರ ನವೆಂಬರ್ ಒಂದರಂದು ‘ವಿಶಾಲ ಮೈಸೂರು’ ಅಸ್ತಿತ್ವಕ್ಕೆ ಬಂದಿತು. ೧೯೭೨ರ ನವೆಂಬರ್ ಒಂದರಂದು ಶ್ರೀ ದೇವರಾಜ ಅರಸು ನೇತೃತ್ವದ ಸರ್ಕಾರವು ವಿಶಾಲ ಮೈಸೂರು ರಾಜ್ಯಕ್ಕೆ ‘ಕರ್ನಾಟಕ’ ಎಂದು ನಾಮಕರಣ ಮಾಡಿತು.

ಕನ್ನಡವೇ ಪ್ರಧಾನ ಭಾಷೆಯಾಗಿ ಬಳಕೆಯಲ್ಲಿರುವ ತಮಿಳುನಾಡಿನ ತಾಳವಾಡಿ ಫಿರ್ಕಾ, ಕೇರಳದಲ್ಲಿರುವ ಕಾಸರಗೋಡು, ಹೊಸದುರ್ಗ, ಆಂಧ್ರದ ಆದೋನಿ, ಮಡಕಶಿರಾ ಮುಂತಾದ ಪ್ರದೇಶಗಳು, ಮಹಾರಾಷ್ಟ್ರದ ಅಕ್ಕಲಕೋಟೆ, ಸೊಲ್ಲಾಪುರ ಮುಂತಾದವು ಕರ್ನಾಟಕದ ಭಾಗವಾಗಿಲ್ಲವೆಂಬ ಬೇಸರ ಇದ್ದೇ ಇದೆ. ಕನ್ನಡ ಪ್ರಧಾನ ಪ್ರದೇಶಗಳು ಕರ್ನಾಟಕಕ್ಕೆ ಸೇರಬೇಕಾದ್ದು ನ್ಯಾಯವೇ ಆಗಿದೆ. ಅದೇ ಸಂದರ್ಭದಲ್ಲಿ ಏಕೀಕರಣದ ಆಶಯವನ್ನು ಒಳಗೊಂಡಂತೆ ಮತ್ತಷ್ಟು ಮುನ್ನೋಟದ ಕ್ರಿಯೆ ಮುಖ್ಯವೆಂಬುದನ್ನು ನಾವು ಮರೆಯಬಾರದು.

ಕರ್ನಾಟಕ ಏಕೀಕರಣದ ಕೇಂದ್ರ ಪ್ರಜ್ಞೆಯೆಂದರೆ – ಭಾಷೆ ಮತ್ತು ಭೂಗೋಳ. ಇದು ಅಂದಿನ ಚಾರಿತ್ರಿಕ ಅಗತ್ಯ. ಆದರೆ ಇಂದಿಗೆ ಅದೊಂದೇ ಆದರ್ಶವಲ್ಲ. ಭೂಗೋಳ ಪ್ರಜ್ಞೆಯೇ ಅಂತಿಮವಲ್ಲ. ಇದರರ್ಥ- ಕರ್ನಾಟಕಕ್ಕೆ ನ್ಯಾಯವಾಗಿ ಸೇರಬೇಕಾದ ಪ್ರದೇಶಗಳ ಸೇರ್ಪಡೆಗೆ ಒತ್ತಾಯ ಮಾಡಬಾರದೆಂದಲ್ಲ. ‘ಭೂಗೋಳ’ವನ್ನು ಅರ್ಥರಹಿತವಾಗಿ ಬಿಂಬಿಸಿ, ಕರ್ನಾಟಕದ ವಿಸ್ತೀರ್ಣವನ್ನು ತಪ್ಪಾಗಿ ಗ್ರಹಿಸಿ, ಕನ್ನಡಿಗರಲ್ಲಿ ‘ಸಾಮ್ರಾಜ್ಯಶಾಹಿ ಪ್ರಜ್ಞೆ’ಯನ್ನು ಮೂಡಿಸುವ ಬದಲು ಪ್ರಜಾಪ್ರಭುತ್ವ ಪ್ರಜ್ಞೆಯನ್ನು ಜಾಗೃತಗೊಳಿಸುವುದು ಇಂದು ಅಗತ್ಯವಾಗಿದೆ. ನನ್ನ ಈ ಮಾತನ್ನು ಮುಂದಿನಂತೆ ವಿಸ್ತರಿಸಬಯಸುತ್ತೇನೆ: ಕನ್ನಡನಾಡು ಎಷ್ಟು ದೊಡ್ಡದಾಗಿತ್ತು ಗೊತ್ತೆ – ಎಂದು ವಿಸ್ಮಯ ಹುಟ್ಟಿಸುತ್ತ ಅದರ ವಿಸ್ತೀರ್ಣವನ್ನು ಹೇಳಿ ಹೆಮ್ಮೆಪಡುವ ಪ್ರವೃತ್ತಿಯೊಂದು ನಮ್ಮಲ್ಲಿ ಚಾಲ್ತಿಯಲ್ಲಿದೆ. ಉದಾಹರಣೆಗೆ- ‘ಕಾವೇರಿಯಿಂದಮಾ ಗೋದಾವರಿವರೆಮಿರ್ದ ನಾಡು’ ಕನ್ನಡನಾಡು ಎಂದು ಹೇಳುವುದು, ಕನ್ನಡನಾಡು ಉತ್ತರ ಭಾರತಕ್ಕೂ ವ್ಯಾಪಿಸಿತ್ತೆಂದು ಹಿಗ್ಗುವುದು, ಈಗ ಇರುವ ‘ಕನ್ನಡ ಸಾಮ್ರಾಜ್ಯ’ ಚಿಕ್ಕದಾಗಿದೆ ಎಂದು ಕುಗ್ಗವುದು – ಈ ಅಂಶಗಳೆಲ್ಲ ಸಮಕಾಲೀನ ‘ಭೂಗೋಳ ಪ್ರಜ್ಞೆ’ಯ ಭಾಗವಾಗಿವೆ. ಇಲ್ಲಿ ಒಂದು ಮುಖ್ಯ ಪ್ರಶ್ನೆಯನ್ನು ನಾವು ಉತ್ತರಿಸಿಕೊಳ್ಳಬೇಕಾಗಿದೆ.

ಹಿಂದೆ ವಿವಿಧ ರಾಜರ ಕಾಲದಲ್ಲಿ ವಿಸ್ತಾರಗೊಂಡಿದ್ದ ಸಾಮಾಜ್ಯಗಳು ‘ಕನ್ನಡ ಸಾಮಾಜ್ಯಗಳೊ’ ಅಥವಾ ಕನ್ನಡ ಬಲ್ಲ ‘ರಾಜರ ಸಾಮ್ರಾಜ್ಯಗಳೊ?” ಅಚ್ಚ ಕನ್ನಡ ವಂಶವೆಂದು ಹೆಸರಾದ ‘ಕದಂಬರು ಒಂದು ಹಂತದಲ್ಲಿ ನರ್ಮದಾ ನದಿಯವರೆಗೆ ಸಾಮ್ರಾಜ್ಯವನ್ನು ವಿಸ್ತರಿಸಿದ್ದರು. ಹಾಗೆಂದು ಕನ್ನಡನಾಡು ನರ್ಮದಾ ನದಿಯವರೆಗೆ ಇತ್ತು ಎಂದು ಹೇಳಲಾದೀತೆ ? ಬಾದಾಮಿ ಚಾಲುಕ್ಯರ ಕಾಲದಲ್ಲಿ ಅಜಂತ, ಎಲ್ಲೋರ, ನಾಸಿಕ್ ಮುಂತಾದವು; ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಪಂಡರಾಪುರ, ಓರಂಗಲ್ಲು, ದೇವಗಿರಿ ಮುಂತಾದವು; ರಾಷ್ಟ್ರಕೂಟರ ಆಳ್ವಿಕೆಯಲ್ಲಿ ನಾಸಿಕ್, ಅಜಂತ, ಎಲ್ಲೋರ ಇತ್ಯಾದಿ, ಹೊಯ್ಸಳ ಸಾಮ್ರಾಜ್ಯದಲ್ಲಿ ಕಂಚಿ, ಕಣ್ಣಾನೂರು ಮುಂತಾದವು ಸೇರಿದ್ದವು. ಹಾಗೆಂದ ಕೂಡಲೇ ಇವೆಲ್ಲ ಕನ್ನಡ ಪ್ರದೇಶಗಳೆ ? ಕನ್ನಡ ನಾಡು ಅಷ್ಟೊಂದು ವಿಸ್ತಾರವಾಗಿತ್ತೆಂದು ತೀರ್ಮಾನಿಸಬಹುದೆ ? ಅಥವಾ ಆಯಾ ರಾಜರ ಕಾಲದ ರಾಜಕೀಯ ಸಾಮ್ರಾಜ್ಯಗಳೆಂದು ಕರೆಯವುದು ಸರಿಯಾದುದೆ? ಉತ್ತಮ ಉತ್ತರವೆಂದರೆ – ವಿಜಯನಗರ ಸಾಮ್ರಾಜ್ಯ. ವಿಜಯನಗರ ಸಾಮ್ರಾಜ್ಯ ಮತ್ತು ಕೃಷ್ಣದೇವರಾಯನನ್ನು ಕರ್ನಾಟಕದವರು ನಮ್ಮದು ಮತ್ತು ನಮ್ಮವನೆಂದು ತಿಳಿದಂತೆ ಆಂಧ್ರದವರೂ ತಿಳಿದಿದ್ದಾರೆ. ಅಷ್ಟೇ ಅಲ್ಲ. ಕೃಷ್ಣದೇವರಾಯನ ಹೆಸರಿನಲ್ಲಿ ಒಂದು ವಿಶ್ವವಿದ್ಯಾಲಯವನ್ನೇ ಸ್ಥಾಪಿಸಿದ್ದಾರೆ. ಹಾಗಾದರೆ ವಿಜಯನಗರ ಸಾಮ್ರಾಜ್ಯ ಕೇವಲ ಕನ್ನಡಿಗರದೆ ? ಕೇವಲ ತೆಲುಗರದೆ ? ಕೃಷ್ಣದೇವರಾಯ ಕನ್ನಡಿಗರಿಗೆ ಮಾತ್ರ ಸೇರಿದವನೆ ? ಹಾಗೆಂದಾದರೆ ತೆಲುಗರು ತಮ್ಮವನೆಂದು ಯಾಕೆ ಭಾವಿಸಿದ್ದಾರೆ ? ವಾಸ್ತವ ಸಂಗತಿಯೆಂದರೆ ವಿಜಯನಗರ ಸಾಮ್ರಾಜ್ಯದ ಆಡಳಿತದಲ್ಲಿ ತೆಲುಗು ಮತ್ತು ಕನ್ನಡ ಎರಡು ಭಾಷೆಗಳೂ ಇದ್ದವು. ಒಂದು ಮೂಲದ ಪ್ರಕಾರ ತೆಲುಗು ಮೊದಲ ಭಾಷೆ: ಕನ್ನಡ ಎರಡನೇ ಭಾಷೆ. ಮೊದಲನೆಯದೊ, ಎರಡನೆಯದೋ, ಒಟ್ಟಿನಲ್ಲಿ ಅದು ದ್ವಿಭಾಷಿಕ ಸಾಮ್ರಾಜ್ಯ. ಕೇವಲ ಕನ್ನಡ ಸಾಮ್ರಾಜ್ಯವಲ್ಲ. ಆದ್ದರಿಂದ ಕನ್ನಡ ಬಲ್ಲ ರಾಜರು ಆಳುತ್ತಿದ್ದ ಪ್ರದೇಶಗಳನ್ನು ಇಡಿಯಾಗಿ ಕನ್ನಡ ಸಾಮ್ರಾಜ್ಯಗಳೆಂದು ಕರೆಯಲು ಸಾಧ್ಯವಿಲ್ಲ. ಅವು ರಾಜರ ಸಾಮ್ರಾಜ್ಯಗಳೇ ಹೊರತು ಭಾಷೆಯ ಸಾಮ್ರಾಜ್ಯಗಳಲ್ಲ. ರಾಜಕೀಯ ಭೂಗೋಳವನ್ನು ಭಾಷಾ ಭೂಗೋಳವೆಂದು ಭಾವಿಸುವುದು ಸರಿಯಲ್ಲ. ಆದರೂ ಕನ್ನಡಿಗರಿಗೆ ಈ ಬಗ್ಗೆ ಸೂಕ್ತ ಮಾಹಿತಿ ನೀಡದೆ ಭೂಗೋಳ ಭ್ರಮೆಯಲ್ಲಿ ಬೀಗುವಂತೆ ಮಾಡುವ ಪ್ರವೃತ್ತಿಯೊಂದು ನಮ್ಮಲ್ಲಿ ಮುಂದುವರಿಯುತ್ತಲೇ ಇದೆ. ರಾಜಕೀಯ ಭೂಗೋಳವನ್ನು ಗತವೈಭವದ ಭಾಗವಾಗಿಸಿ ಭಾಷಾ ಪ್ರೇಮವನ್ನು ಪ್ರತಿಪಾದಿಸಲಾಗುತ್ತಿದೆ. ಎಲ್ಲರೂ ಈ ಪ್ರತಿಪಾದನೆಯ ಪಾಲುದಾರರಲ್ಲವಾದರೂ ಇದೊಂದು ಜನಪ್ರಿಯ ಮಾದರಿಯಾಗಿದೆಯೆನ್ನುವುದಂತೂ ನಿಜ. ಇನ್ನಾದರೂ ನಾವು ಸ್ಪಷ್ಟಪಡಿಸಬೇಕು: ರಾಜರ ಸಾಮ್ರಾಜ್ಯಗಳೆಲ್ಲ ಭಾಷೆಯ ಸಾಮ್ರಾಜ್ಯಗಳಲ್ಲ. ಅಂದಿನ ರಾಜಕೀಯ ಭೂಗೋಳವು ಭಾಷಾ ಭೂಗೋಳವಲ್ಲ. ನಮಗಿಂದು ಬೇಕಾದ್ದು ಭೂಗೋಳಪ್ರಜ್ಞೆಯನ್ನು ಮೀರಿದ ಸಾಮಾಜಿಕ ಪ್ರಜ್ಞೆ: ರಾಜಕೀಯ ಪ್ರಜ್ಞೆ, ಆಗ ಭೂಗೋಳ ಪ್ರಜ್ಞೆಗೂ ಅರ್ಥಪೂರ್ಣ ಆಯಾಮ ಲಭ್ಯವಾಗುತ್ತದೆ.

ಭಾಷಾ ಚಿಂತನೆಗೆ ಸಾಮಾಜಿಕ- ರಾಜಕೀಯ ಪ್ರಜ್ಞೆಯ ಹಿನ್ನೆಲೆ ಒದಗಿದಾಗ ಮೂಡುವ

ತಾತ್ವಿಕ ಹೊಳಹುಗಳ ವಿಸ್ತಾರ ಮಹತ್ವಪೂರ್ಣವಾದುದು. ನಮ್ಮ ಸಮಾಜದ ಸಂರಚನೆಯ ಸ್ವರೂಪ ಮತ್ತು ಭಾಷೆಯ ಸಂಬಂಧವನ್ನು ಅರ್ಥೈಸಿಕೊಳ್ಳುವ ಮೂಲಕ ಭಾಷಾಪ್ರಜ್ಞೆ ಮತ್ತು ಸಾಮಾಜಿಕ ಪ್ರಜ್ಞೆಗಳ ಸಾವಯವತೆಯನ್ನು ಸಾಧಿಸುವುದು ಅಗತ್ಯ. ಆಗ ಮಾತ್ರ ನಮ್ಮ ಸಮಾಜದ ಎಲ್ಲ ಜನವರ್ಗಗಳು – ವಿಶೇಷವಾಗಿ – ತುಳಿತಕ್ಕೊಳಗಾದ ಸಮುದಾಯಗಳು, ಭಾಷಾಭಿಮಾನದ ಭಾಗವಾಗುತ್ತವೆ. ಈ ದೃಷ್ಟಿಯಿಂದ ನೋಡಿದಾಗ, ನಮ್ಮ ಭಾಷಾ ಚಿಂತನೆ ಮತ್ತು ಕ್ರಿಯೆಗಳು ಎಷ್ಟರಮಟ್ಟಿಗೆ ಶೋಷಿತ ಸಮುದಾಯಗಳನ್ನು ಒಳಗೊಂಡಿವೆಯೆಂಬ ಪ್ರಶ್ನೆಗೆ ಉತ್ತೇಜಕ ಉತ್ತರ ದೊರೆಯುವುದಿಲ್ಲ. ಸಾಮಾಜಿಕ ಚಳವಳಿ ಮತ್ತು ಭಾಷಾ ಚಳವಳಿಗಳ ನಡುವೆ ಸಂಬಂಧವೇರ್ಪಟ್ಟಾಗ ನಮ್ಮ ಚಿಂತನಾ ಕ್ರಮಕ್ಕೆ ಲಭ್ಯವಾಗುವ ಆಯಾಮ ಅನನ್ಯವಾದುದು. ಕರ್ನಾಟಕದಲ್ಲಿ ಇದು ಸಾಧ್ಯವಾಗಿದೆಯೆ ? ಸಾಧ್ಯವಾಗಿಲ್ಲವಾದರೆ ಏನು ಕಾರಣ? ಇಂತಹ ಪ್ರಶ್ನೆಗಳ ಮೂಲಕ ಆತ್ಮಾವಲೋಕನದ ಅಗತ್ಯವಿದೆಯೆಂದು ನಾನು ಭಾವಿಸುತ್ತೇನೆ. ತಮಿಳುನಾಡಿನ ದ್ರಾವಿಡ ಚಳವಳಿ ಮತ್ತು ಭಾಷಾ ಚಳವಳಿ ಬೇರೆಯಾಗಿರಲಿಲ್ಲ. ಕೇರಳದ ಸಮೂಹ ಚಳವಳಿಗಳು ಮತ್ತು ಭಾಷಾ ಚಳವಳಿಗಳು ಪ್ರತ್ಯೇಕವಾಗಿರಲಿಲ್ಲ. ಕರ್ನಾಟಕದಲ್ಲಿ ಮಾತ್ರ ಪ್ರತ್ಯೇಕ ಭಾಷಾ ಚಳವಳಿ ಮತ್ತು ಸಾಮಾಜಿಕ ಚಳವಳಿಗಳು ಅಂತರ್ ಸಂಬಂಧ ಬೆಳೆಸುವ ವಾತಾವರಣ ನಿರ್ಮಾಣವಾಗಬೇಕು. ಸಾಮಾಜಿಕ ಚಳವಳಿಗಳಿಗೆ ಭಾಷಾ ಪ್ರಜ್ಞೆ ಮತ್ತು ಭಾಷಾ ಚಳವಳಿಗೆ ಸಾಮಾಜಿಕ ಪ್ರಜ್ಞೆ ಪರಸ್ಪರ ಪೂರಕವಾಗಬೇಕು.

ಇನ್ನು, ರಾಜಕೀಯ ಪ್ರಜ್ಞೆಯೆಂದರೆ, ಕೇಂದ್ರ ಸರ್ಕಾರದ ಜೊತೆ ಚೌಕಾಶಿ ಮಾಡುವ ಪ್ರಜ್ಞೆಯಲ್ಲ. ಮೇಲು ಕೀಳಿಲ್ಲದ ರಾಜಕೀಯ ಸೈದ್ಧಾಂತಿಕತೆಯ ವಿವೇಕ ನಮಗಿದ್ದರೆ, ಅದು ಭಾಷಾ ಪ್ರಜ್ಞೆಯಲ್ಲಿ ಕೆಲಸ ಮಾಡುವ ಕ್ರಮವೇ ವಿಭಿನ್ನ, ಸಮಾನತೆಯ ಆಶಯವನ್ನುಳ್ಳ ರಾಜಕೀಯ ಪ್ರಜ್ಞೆ ಮತ್ತು ಭಾಷಾ ಪ್ರಜ್ಞೆಗಳು ನಮ್ಮ ಚಿಂತನೆ ಹಾಗೂ ಹೋರಾಟಕ್ಕೆ ದೂರ ದೃಷ್ಟಿಯ ದೃಢತೆಯನ್ನು ತಂದುಕೊಡುತ್ತವೆ.

ರಾಜಕೀಯ ಪಕ್ಷ ಮತ್ತು ರಾಜಕೀಯ ಪ್ರಜ್ಞೆ – ಎರಡೂ ಒಂದೇ ಅಲ್ಲ. ರಾಜಕೀಯ ಪಕ್ಷಗಳಿಗೆ ಅಗತ್ಯವಾಗಿ ಪ್ರಜ್ಞೆ ಇರಬೇಕು. ಆದರೆ ರಾಜಕೀಯ ಪ್ರಜ್ಞೆಯೆನ್ನುವುದು ರಾಜಕೀಯ ಪಕ್ಷವೇ ಆಗಬೇಕಿಲ್ಲ. ರಾಜಕೀಯ ವಿವೇಕವಾಗಿದ್ದರೆ ಸಾಕು. ಕನ್ನಡ ಪ್ರಜ್ಞೆಗೆ ಇಂದು ಬೇಕಾದ್ದು ಸಾಮಾಜಿಕ ಮತ್ತು ರಾಜಕೀಯ ವಿವೇಕ.

ಕನ್ನಡಕ್ಕೆ ಅಗಾಧ ಸಾಂಸ್ಕೃತಿಕ ಶಕ್ತಿಯಿದೆ. ಆದರೆ ಅಗತ್ಯ ಪ್ರಮಾಣದ ಸಾಮಾಜಿಕ ಶಕ್ತಿ ಮತ್ತು ರಾಜಕೀಯ ಶಕ್ತಿಯ ಕೊರತೆಯಿದೆ. ಈ ಕೊರತೆಯನ್ನು ತುಂಬಿಕೊಳ್ಳುವ ಕ್ರಿಯೆಯಲ್ಲಿ ಕನ್ನಡ ಪರಿಕಲ್ಪನೆಯ ಪ್ರಬುದ್ಧತೆ ಅಡಗಿದೆ.

ಈ ದಿಕ್ಕಿನಲ್ಲಿ ನಾವೆಷ್ಟು ಕೆಲಸ ಮಾಡುತ್ತಿದ್ದೇವೆ? ನಮ್ಮ ಜನರಿಗೆ ನಾವು ಸರಿಯಾದ ಮಾಹಿತಿ ಕೊಡುತ್ತಿದ್ದೇವೆಯೆ? ಈ ಪ್ರಶ್ನೆಗಳು ಮುಖ್ಯ. ಸುಮ್ಮಸುಮ್ಮನೆ ಕನ್ನಡಿಗರನ್ನು ನಿರಭಿಮಾನಿಗಳೆಂದು ದೂಷಿಸುವ ದೊಡ್ಡಸ್ತಿಕೆಯನ್ನು ಮೆರೆಯುವ ಬದಲು ಕನ್ನಡಪರ ಚಿಂತನೆಯಲ್ಲಿರುವ ಕೊರತೆಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವುದು ಮತ್ತಷ್ಟು ಮುಖ್ಯ. ಈಗ ನೋಡಿ; ‘ಕನ್ನಡದ ರಕ್ಷಣೆಗೆ ಪ್ರಾಧಿಕಾರಗಳೂ ಸಮಿತಿಗಳೂ ಬೇಕೆ, ಇದು ಕನ್ನಡದ ಸ್ಥಿತಿ; ಅವಮಾನ’- ಎಂದೆಲ್ಲ ಅಭಿಮಾನದ ಪಾಠ ಹೇಳುವ ಪ್ರವೃತ್ತಿ ವಲಯವೊಂದು ನಮ್ಮಲ್ಲಿದೆ. ಇಂತಹ ಮಾತುಗಳನ್ನು ಕೇಳಿ ಕೇಳಿ ಕರ್ನಾಟಕದಲ್ಲಿ ಮಾತ್ರವೇ ಇಂತಹ ಹೀನಾಯ ಸ್ಥಿತಿ. ಬೇರೆ ರಾಜ್ಯಗಳಲ್ಲಿ ಎಲ್ಲವೂ ಸುಸ್ಥಿತಿ ಎಂಬ ಅಭಿಪ್ರಾಯ ಜನಪ್ರಿಯವಾಗಿಬಿಟ್ಟಿದೆ. ಆದರೆ ವಸ್ತುಸ್ಥಿತಿಯೇ ಬೇರೆಯಿದೆ. ತಮಿಳುನಾಡಿನಲ್ಲಿ ತಮಿಳಿನ ಅಭಿವೃದ್ದಿಗಾಗಿ ‘ತಮಿಳು ಅಭಿವೃದ್ದಿ ವಿಭಾಗ’ವನ್ನು ಸ್ಥಾಪಿಸಲಾಗಿದೆ. ಈ ವಿಭಾಗದಿಂದ ನಾನು ಖುದ್ದು ತಿಳಿದುಕೊಂಡ ಮಾಹಿತಿಯ ಪ್ರಕಾರ – ತಮಿಳುನಾಡು ಸರ್ಕಾರದ ಸಚಿವಾಲಯದಲ್ಲಿ ಈಗಲೂ ಶೇ. ೩೦ ರಿಂದ ೩೫ರಷ್ಟು ಇಂಗ್ಲಿಷ್ ವಿಜೃಂಭಿಸುತ್ತಿದೆ. ಅದರ ನಿಯಂತ್ರಣ ಮತ್ತು ತಮಿಳು ಅನುಷ್ಠಾನಕ್ಕಾಗಿ ‘ತಮಿಳು ಅಭಿವೃದ್ಧಿ ವಿಭಾಗ’ ಪ್ರಯತ್ನಿಸುತ್ತಿದೆ. ಆದರೆ ಸಚಿವಾಲಯದ ಹೊರತಾಗಿ ಇತರ ಕಡೆ ತಮಿಳು ವ್ಯಾಪಿಸಿಕೊಂಡಿದೆ. ಕೇರಳ ಸರ್ಕಾರ ಮತ್ತು ಆಂಧ್ರ ಪ್ರದೇಶ ಸರ್ಕಾರಗಳೂ ತಂತಮ್ಮ ರಾಜ್ಯ ಭಾಷೆಗಳ ಅಭಿವೃದ್ಧಿ ಮತ್ತು ಅನುಷ್ಠಾನಕ್ಕಾಗಿ ವಿಭಾಗಗಳನ್ನೂ ಸಮಿತಿಗಳನ್ನೂ ರಚಿಸಿಕೊಂಡಿವೆ. ಮೂರ್ನಾಲ್ಕು ವರ್ಷಗಳ ಹಿಂದೆ ಕೇರಳ ಸರ್ಕಾರವು ಸುತ್ತೋಲೆಯೊಂದನ್ನು ಹೊರಡಿಸಿ ‘ಕಡೇ ಪಕ್ಷ ಕಂದಾಯ, ಶಿಕ್ಷಣ ಮತ್ತು ಸಹಕಾರ ಇಲಾಖೆಗಳಲ್ಲಿ ಪೂರ್ಣ ಮಲೆಯಾಳಂ ಬಳಸಬೇಕು’ ಎಂದು ಆದೇಶಿಸಿತು. ಇದರರ್ಥ ಏನು ? ಅಲ್ಲಿಯೂ ಆಡಳಿತ ಭಾಷೆಯಾಗಿ ಮಲೆಯಾಳಂ ಅನುಷ್ಠಾನವು ಪೂರ್ಣ ಪ್ರಮಾಣದಲ್ಲಿ ಆಗಿಲ್ಲ. ಆಂಧ್ರ ಪ್ರದೇಶದಲ್ಲೂ ಬಹಳ ವ್ಯತ್ಯಾಸವೇನಿಲ್ಲ. ಆಂಧ್ರ ಪ್ರದೇಶದ ಹದಿಮೂರು ಜಿಲ್ಲೆಗಳಲ್ಲಿ ತೆಲುಗಿನ ಜೊತೆಗೆ ಉರ್ದುವನ್ನು ಎರಡನೇ ಆಡಳಿತ ಭಾಷೆ ಎಂದು ಘೋಷಿಸಲಾಗಿದೆ. ಕೇರಳವು ಕಾಸರಗೋಡನ್ನು ಅಲ್ಪಸಂಖ್ಯಾತರ ಪ್ರದೇಶ’ ಎಂದು ಅಧಿಕೃತವಾಗಿ ಘೋಷಿಸಿದೆ. ಕರ್ನಾಟಕದಲ್ಲಿ ಇಂತಹ ಸನ್ನಿವೇಶ ಸೃಷ್ಟಿಯಾಗಿಲ್ಲ. ಆದರೂ ಕೆಲವೊಮ್ಮೆ ಅಲ್ಪಸಂಖ್ಯಾತರೇ ಕನ್ನಡಕ್ಕೆ ಅಡ್ಡಿಯೇನೊ ಎಂಬಂತೆ ವರ್ತಿಸಲಾಗುತ್ತಿದೆ. ಅಂತಹ ಅಭಿಪ್ರಾಯವನ್ನು ಬಿತ್ತಲಾಗುತ್ತಿದೆ.

೩೧-೩-೨೦೦೪ರಲ್ಲಿ ಕರ್ನಾಟಕ ಸರ್ಕಾರವು ಒಂದು ಆದೇಶವನ್ನು ಹೊರಡಿಸಿ ಸರ್ಕಾರದ ಪ್ರಮುಖ ಆದೇಶ ಅಥವಾ ಸುತ್ತೋಲೆಗಳನ್ನು ಅಲ್ಪಸಂಖ್ಯಾತರ ಭಾಷೆಯಲ್ಲಿ ಒದಗಿಸಲು ಅವಕಾಶ ಕಲ್ಪಿಸಿತು. ಇದು ಈ ರೀತಿಯ ಮೊದಲ ಆದೇಶವೇನೂ ಅಲ್ಲ. ಈ ಮೊದಲು ೫ -೧೧-೧೯೬೬, ೨೪ -೧೧-೧೯೮೨, ೧೬-೧೧-೧೯೯೦, ೨೦-೫-೧೯೯೯ ಮತ್ತು ೩೦-೭-೨೦೦೧ ರಲ್ಲೂ- ಒಟ್ಟು ಐದು ಸಾರಿ ಈ ರೀತಿಯ ಆದೇಶವನ್ನು ಹೊರಡಿಸಲಾಗಿತ್ತು. ಆಗ ಆಗದೆ ಇರುವ ಧಕ್ಕೆ ೩೧-೩-೨೦೦೪ರ ಆದೇಶದಿಂದ ಆಗುತ್ತದೆಯೆಂದು ಅಬ್ಬರ ಮಾಡಿದ ಕೆಲವರು ಈ ಆದೇಶವನ್ನು ಹಿಂದಕ್ಕೆ ಪಡೆಯುವಂತೆ ಮಾಡಿ ತೃಪ್ತಿಪಟ್ಟುಕೊಂಡರು. ಆದರೆ ಮೊದಲ ಐದು ಆದೇಶಗಳು ಅಸ್ತಿತ್ವದಲ್ಲೇ ಇವೆ! ಕನ್ನಡಕ್ಕೆ ಕಂಟಕವಾಗದಂತೆ ಉಳಿದಿವೆ! ಹಾಗಾದರೆ ೩೧-೩-೨೦೦೪ರ ಆದೇಶವನ್ನು ವಿರೋಧಿಸಿದವರ ಮನೋಧರ್ಮ ಯಾವುದಾಗಿತ್ತು ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ. ಮುಂದುವರೆದು ಇನ್ನೊಂದು ಮಾಹಿತಿಯನ್ನು ಕೊಡುವುದಾದರೆ, ಕರ್ನಾಟಕ ಸರ್ಕಾರವು ೧೯೯೯ರಲ್ಲಿ ೨೮,

೨೦೦೦ದಲ್ಲಿ ೧೧, ೨೦೦೧ರಲ್ಲಿ ೧೦, ೨೦೦೨ರಲ್ಲಿ ೨ ಮತ್ತು ೨೦೦೩ರಲ್ಲಿ ೩ ಉರ್ದು ಆದೇಶಗಳನ್ನೂ ಅನುಕ್ರಮವಾಗಿ ೨೮,೧೧,೧೦,೦ ಮತ್ತು ೦ ಆದೇಶಗಳನ್ನು ಮರಾಠಿಯಲ್ಲೂ ಹೊರಡಿಸಿತ್ತು. ಅಂದರೆ ೩೧-೩-೨೦೦೪ರ ಆದೇಶಕ್ಕೆ ಮುಂಚಿನ ಐದು ವರ್ಷಗಳಲ್ಲಿ ಉರ್ದುವಿನ ೫೪ ಆದೇಶಗಳು ಮತ್ತು ಮರಾಠಿಯ ೪೯ ಆದೇಶಗಳು ಮಾತ್ರ ಬಂದಿದ್ದವು. ಅದೇ ಮಹಾರಾಷ್ಟ್ರದಲ್ಲಿ ೨೦೦೦ ದಿಂದ ೨೦೦೪ರೊಳಗೆ ೧೭೦೯ ಅಧಿನಿಯಮ ಗಳು ೬೦೯ ಆದೇಶಗಳೂ ಕನ್ನಡದಲ್ಲಿ ಬಂದಿದ್ದವು.

ಅಲ್ಪಸಂಖ್ಯಾತರ ಭಾಷೆಗಳಿಗೆ ಸಂವಿಧಾನಾತ್ಮಕವಾಗಿ ಇರುವ ರಕ್ಷಣೆಯನ್ನು ಪೂರೈಸುವ ಸಲುವಾಗಿ ರಾಜ್ಯ ಸರ್ಕಾರಗಳು ಅಲ್ಪಸಂಖ್ಯಾತರ ಭಾಷೆಗಳಲ್ಲಿ ಪ್ರಮುಖ ಆದೇಶಗಳನ್ನು ಪ್ರಕಟಿಸುವ ಬಗ್ಗೆ ಆದೇಶ ಹೊರಡಿಸುತ್ತವೆ. ಅಲ್ಪಸಂಖ್ಯಾತರು ಕೇಳಿದಾಗ ಅವರ ಭಾಷೆಯಲ್ಲಿ ಆದೇಶದ ಪ್ರತಿಗಳನ್ನು ಒದಗಿಸುತ್ತವೆ. (ತಮಿಳುನಾಡಿನ ಧರ್ಮಪುರಿಯಲ್ಲಿ ಕನ್ನಡದಲ್ಲಿ ಆದೇಶ ಗಳನ್ನು ಒದಗಿಸುವ ಅವಕಾಶವಿದೆ). ಇಂತಹ ಕ್ರಮದಿಂದ ಆಯಾ ರಾಜ್ಯಭಾಷೆಗಳಿಗೆ ಧಕ್ಕೆ ಬರುತ್ತದೆಯೆಂದಾದರೆ ಮಹಾರಾಷ್ಟ್ರ, ಆಂಧ್ರ, ಕೇರಳ, ತಮಿಳುನಾಡುಗಳಲ್ಲಿ ಕನ್ನಡಕ್ಕಿರುವ ‘ಶೋಚನೀಯ ಸ್ಥಿತಿ’ ಇಲ್ಲ ಎಂದು ಇಂಥವರು ಹೇಳಲು ಇರುವ ಆಧಾರವಾದರೂ ಏನು ? ಆ ರಾಜ್ಯಗಳಲ್ಲಿ ಅಲ್ಪಸಂಖ್ಯಾತರಿಗೆ ಎಲ್ಲ ರೀತಿಯ ಸಂವಿಧಾನಾತ್ಮಕ ಭಾಷಾ ಸೌಲಭ್ಯಗಳನ್ನೂ ಒದಗಿಸಲಾಗಿದೆಯಲ್ಲ! ಆದರೆ ಸಾಮಾಜಿಕ ಮತ್ತು ಭಾಷಾ ಚಳವಳಿಗಳು ಒಂದಾಗಿ ಕ್ರಿಯಾಶೀಲವಾದ ಕಾರಣದಿಂದ ಅಲ್ಲಿನ ಅಲ್ಪಸಂಖ್ಯಾತರು ದೈನಂದಿನ ವ್ಯವಹಾರದಲ್ಲಿ ಸರಾಗವಾಗಿ ರಾಜ್ಯ ಭಾಷೆಯನ್ನು ಬಳಸುವಂತಾಗಿದೆ. ಕರ್ನಾಟಕದಲ್ಲಿ ಆಗಬೇಕಾದ್ದು ಇದೇ ಹೊರತು ‘ತಾಂತ್ರಿಕ’ ಆದೇಶಗಳನ್ನು ನಕಾರಾತ್ಮಕವಾಗಿ ವೈಭವೀಕರಿಸಿ ಕನ್ನಡಿಗರನ್ನು ಉದ್ರೇಕಿಸುವುದಲ್ಲ. ಹಾಗೆ ನೋಡಿದರೆ, ಕರ್ನಾಟಕದ ಖಾಯಂವಾಸಿಗಳಾದ ಭಾಷಾ ಅಲ್ಪಸಂಖ್ಯಾತರೂ ಕನ್ನಡಿಗರೇ ಆಗಿರುತ್ತಾರೆ. ತಂತಮ್ಮ ಮಾತೃಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿಕೊಂಡೇ ದೈನಂದಿನ ಬಳಕೆಯಲ್ಲಿ ಕನ್ನಡಬದ್ದರಾಗುವುದು, ಅಲ್ಪಸಂಖ್ಯಾತರ ನೀತಿ ಮತ್ತು ಅಲ್ಪಸಂಖ್ಯಾತರ ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ಪ್ರೀತಿಯಿಂದ ನೋಡುವುದು ಕನ್ನಡಿಗರ ನೀತಿಯಾದಾಗ ಸಮಸ್ಯೆ ಇರುವುದಿಲ್ಲ. ಇಲ್ಲದ ಸಮಸ್ಯೆಗಳನ್ನು ಸೃಷ್ಟಿಸುವುದು, ತಪ್ಪು ಮಾಹಿತಿ ನೀಡುವುದು, ಆದ್ಯತೆಗಳನ್ನು ಪಲ್ಲಟಗೊಳಿಸುವುದು ಯಾಕೆ ? ಇದರಿಂದ ಲಾಭ ಯಾರಿಗೆ ? ಕನ್ನಡಕ್ಕೂ ಅಲ್ಲ. ಕನ್ನಡಿಗರಿಗೂ ಅಲ್ಲ.

ತಪ್ಪು ಮಾಹಿತಿ ಮತ್ತು ಆದ್ಯತೆಗಳ ಪಲ್ಲಟಕ್ಕೆ ಮತ್ತೊಂದು ಮುಖ್ಯ ನಿದರ್ಶನವೆಂದರೆ – ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ನೀಡಿಕೆಯ ವಿಷಯ. ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಸಿಕ್ಕಿದರೆ ನಾವು ಸಂತೋಷ ಪಡೋಣ. ಈ ನೆಪದಲ್ಲಿ ಭಾವುಕ ವಲಯಕ್ಕೆ ಸಂಭ್ರಮ ಮತ್ತು ವಿದ್ವತ್ ವಲಯಕ್ಕೆ ಉಪಯೋಗ ಆಗುವುದಾದರೆ ನಾವ್ಯಾಕೆ ಬೇಡವೆನ್ನೋಣ? ಆದರೆ, ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನಬೇಕೆಂದು ಕೇಳುವ ಭರದಲ್ಲಿ ಕನ್ನಡಿಗರಿಗೆ ತಪ್ಪು ಮಾಹಿತಿ ನೀಡುವುದು ಮತ್ತು ಆದ್ಯತೆಗಳನ್ನು ಪಲ್ಲಟಗೊಳಿಸುವುದು

ಸರಿಯೆ ? ೨೬-೫-೨೦೦೫ರಂದು ಪತ್ರಿಕೆಗಳಲ್ಲಿ ಕೆಲವು ವಿದ್ವಾಂಸರ ಹೇಳಿಕೆ ಪ್ರಕಟವಾಯಿತು. ಈ ವಿದ್ವಾಂಸರು ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಬೇಕೆಂಬ ಬೇಡಿಕೆಗೆ ಸಮರ್ಥನೆಯ ಅಧಿಕೃತ ದಾಖಲೆಯನ್ನು ಸಿದ್ದಪಡಿಸಿದವರು. ಇವರ ಪತ್ರಿಕಾ ಹೇಳಿಕೆಯ ಪ್ರಕಾರ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಸಿಕ್ಕಿದರೆ ಇಪ್ಪತ್ತು ಕೋಟಿ ರೂಪಾಯಿಗಳ ಅನುದಾನ, ದೇಶವಿದೇಶಗಳಲ್ಲಿ ಅಧ್ಯಯನ ಪೀಠ, ಈ ಭಾಷೆಗೆ ಎರಡು ಅಂತರರಾಷ್ಟ್ರೀಯ ಪ್ರಶಸ್ತಿ, ಯುನೆಸ್ಕೊ ನೆರವಿನ ಸಾಧ್ಯತೆ- ಈ ಸೌಲಭ್ಯಗಳು ಲಭ್ಯವಾಗುತ್ತವೆ. ಕನ್ನಡಪರ ಅಧಿಕೃತ ದಾಖಲೆ ಸಿದ್ಧವಾದ ಮತ್ತು ಈ ಹೇಳಿಕೆ ಬಂದ ದಿನದೊಳಗೆ ಕೇಂದ್ರ ಸರ್ಕಾರದಿಂದ ಶಾಸ್ತ್ರೀಯ ಭಾಷೆಯ ಬಗ್ಗೆ ಎರಡು ಸುತ್ತೋಲೆಗಳು ಬಂದಿದ್ದವು. ೧೨-೧೦-೨೦೦೪ರಂದು ಹೊರಡಿಸಿದ್ದ ಸುತ್ತೋಲೆಯಲ್ಲಿ ಶಾಸ್ತ್ರೀಯ ಭಾಷಾ ಸ್ಥಾನಮಾನಕ್ಕೆ ಮೂರು ಮಾನದಂಡಗಳನ್ನು ಸೂಚಿಸಲಾಗಿತ್ತು. (ಈ ಪ್ರಕಾರವೇ ತಮಿಳಿಗೆ ಶಾಸ್ತ್ರೀಯ ಭಾಷೆ ಸ್ಥಾನಕೊಡಲಾಯಿತು). ಈ ಮೂರು ಮಾನದಂಡಗಳು ಹೀಗಿವೆ. ೧. ಒಂದು ಸಾವಿರ ವರ್ಷಗಳಿಗೂ ಮೀರಿದ ಪ್ರಾಚೀನತೆ ಇರಬೇಕು. ೨. ವಿವಿಧ ಪೀಳಿಗೆಗಳಿಗೆ ವ್ಯಾಪಿಸಿದ ಪರಂಪರೆಯಿರಬೇಕು. ೩. ಸಾಹಿತ್ಯ ಪರಂಪರೆಯು ಒರಿಜಿನಲ್ ಆಗಿರಬೇಕು. ಬೇರೆ ಭಾಷಾ ಸಮೂಹದಿಂದ ತೆಗೆದುಕೊಂಡಿರಬಾರದು. ಈ ಸುತ್ತೋಲೆಯ ನಂತರ ೧-೧೧- ೨೦೦೪ರಂದು ಮತ್ತೊಂದು ಸುತ್ತೋಲೆ ಹೊರಟಿತು. ಅದರಲ್ಲಿ ಹಿಂದಿನ ಮೂರು ಮಾನದಂಡಗಳನ್ನು ಹಾಗೆಯೇ ಉಳಿಸಿಕೊಂಡು ನಾಲ್ಕನೆಯ ಮಾನದಂಡವೊಂದನ್ನು ಸೇರಿಸಲಾಯಿತು. ಅದು ಹೀಗಿದೆ: ‘ಶಾಸ್ತ್ರೀಯ ಭಾಷೆ ಮತ್ತು ಸಾಹಿತ್ಯವು ಈಗಿನ ರೂಪಕ್ಕಿಂತ ವಿಭಿನ್ನವಾಗಿರಬಹುದು, ಅನಂತರದ ಆಕೃತಿಗಳಿಂದ ಅಥವಾ ಅದರ ಉಪ ಉತ್ಪನ್ನಗಳಿಂದ ಪ್ರತ್ಯೇಕವಾಗಿರಬಹುದು ಅಥವಾ ಸಾತತ್ಯ ದೂರವಾಗಿರಬಹುದು. ಉದಾಹರಣೆಗೆ, ಲ್ಯಾಟಿನ್ ವರ್ಸಸ್ ರೋಮನ್, ಸಂಸ್ಕೃತ – ಪಾಲಿ ವರ್ಸಸ್ ಪ್ರಾಕೃತ ಮತ್ತು ಆಧುನಿಕ ಇಂಡೋಆರ್ಯನ್’, ಹೀಗೆ ಒಂದು ಹೊಸ ಮಾನದಂಡವನ್ನು ಸೇರಿಸಲಾಯಿತು ಮತ್ತು ಮುಂದುವರೆದು ಶಾಸ್ತ್ರೀಯ ಭಾಷೆಗೆ ಸಿಗುವ ಸೌಲಭ್ಯಗಳನ್ನು ತಿಳಿಸಲಾಯಿತು. ಅವು ಹೀಗಿವೆ: ೧. ಭಾರತೀಯ ಶಾಸ್ತ್ರೀಯ ಭಾಷೆಗಳಲ್ಲಿ ಪರಿಣತರಾದ ಇಬ್ಬರು ವಿದ್ವಾಂಸರಿಗೆ ಅಂತರರಾಷ್ಟ್ರೀಯ ಪ್ರಶಸ್ತಿ; ೨. ಶಾಸ್ತ್ರೀಯ ಭಾಷೆಗಳಿಗಾಗಿ ಒಂದು ಅಧ್ಯಯನ ಕೇಂದ್ರ ಸ್ಥಾಪನೆ; ೩. ಕಡೇ ಪಕ್ಷ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಶಾಸ್ತ್ರೀಯ ಭಾಷೆಗಳ ಪೀಠಸ್ಥಾಪನೆಗೆ ಮನವಿ.

ಈಗ ಹೋಲಿಸಿ ನೋಡಿ, ೨೬-೫-೨೦೦೫ರಂದು ಪತ್ರಿಕೆಗಳಲ್ಲಿ ಪ್ರಕಟವಾದ ವಿದ್ವಾಂಸರ ಹೇಳಿಕೆಯಲ್ಲಿರುವ ಅಂಶಗಳಿಗೂ ೧-೧೧-೨೦೦೪ರ ಸುತ್ತೋಲೆಯಲ್ಲಿರುವ “ಸೌಲಭ್ಯದ ಅಂಶಗಳಿಗೂ” ಇರುವ ವ್ಯತ್ಯಾಸ ತಾನಾಗಿಯೇ ಗೊತ್ತಾಗುತ್ತದೆ. ಕೇಂದ್ರ ಸರ್ಕಾರವು ೨೦ ಕೋಟಿ ರೂಪಾಯಿಗಳ ಅನುದಾನದ ವಿಷಯವನ್ನು ಹೇಳಿಯೇ ಇಲ್ಲ. ಯಾವುದೇ ಶಾಶ್ವತ ಅನುದಾನದ ಪ್ರಸ್ತಾಪವಿಲ್ಲ. ಪ್ರತಿ ಭಾಷೆಗೆ ಅಂತರರಾಷ್ಟ್ರೀಯ ಪ್ರಶಸ್ತಿ ಕೊಡುವ ಪ್ರಸ್ತಾಪವಿಲ್ಲ. ಎಲ್ಲ ಶಾಸ್ತ್ರೀಯ ಭಾಷೆಗಳಿಗೂ ಸೇರಿ ಎರಡು ಅಂತರರಾಷ್ಟ್ರೀಯ ಪ್ರಶಸ್ತಿ ಕೊಡಲಾಗುತ್ತದೆ. ಸುತ್ತೋಲೆಯಲ್ಲಿರುವ ಸೌಲಭ್ಯಗಳ ಪಟ್ಟಿಗೆ ಹೊರತಾಗಿ ಶಾಸ್ತ್ರೀಯ ಭಾಷೆಯ ಸ್ಥಾನಮಾನದ ಕಾರಣಕ್ಕಾಗಿ ಕೇಂದ್ರ ಸರ್ಕಾರದ ವಿವಿಧ ಅವಕಾಶಗಳಡಿಯಲ್ಲಿ ಸೌಲಭ್ಯಗಳನ್ನು ಪಡೆಯಲು ಸಾಧ್ಯ. ಯೋಜನೆಗಳನ್ನು ರೂಪಿಸಿ, ಸಲ್ಲಿಸಿ, ಅನುದಾನ ಪಡೆಯಲು ಯಾವಾಗಲೂ ಅವಕಾಶವಿರುತ್ತದೆ. ಆದರೆ ಕನ್ನಡಿಗರಿಗೆ ತಪ್ಪು ಮಾಹಿತಿ ನೀಡಬೇಕಾದರೂ ಯಾಕೆ ?

ಕೇಂದ್ರ ಸರ್ಕಾರವು ‘ಶಾಸ್ತ್ರೀಯ ಭಾಷೆ’ ಎಂದು ವಿಶೇಷ ಭಾಷಾವಲಯವನ್ನು ರೂಪಿಸಿದ್ದು, ತಮಿಳಿಗೆ ಈ ಸ್ಥಾನಮಾನವನ್ನು ಕೊಡಮಾಡಿದ್ದು ಅಪ್ಪಟ ಅಧಿಕಾರ ಕೇಂದ್ರಿತ ರಾಜಕೀಯ. ಇಂತಹ ಕ್ಷುಲ್ಲಕ ರಾಜಕೀಯವನ್ನು ವಿರೋಧಿಸಿ ಎಲ್ಲ ಭಾರತೀಯ ಭಾಷೆಗಳಿಗೂ ಸಮಾನ ಸ್ಥಾನ ಕೊಡಬೇಕಾದ್ದು ಕೇಂದ್ರ ಸರ್ಕಾರದ ಕರ್ತವ್ಯ ಎಂದು ಹೋರಾಟ ಕಟ್ಟಬೇಕು. ಆದರೆ ಹಾಗಾಗುತ್ತಿಲ್ಲ. ಹೋಗಲಿ ಬಿಡಿ: ಶಾಸ್ತ್ರೀಯ ಭಾಷೆಯ ಸ್ಥಾನಮಾನವು ಕನ್ನಡದ ಮೊದಲ ಆದ್ಯತೆಯೆ ಎಂದು ಕೇಳಿಕೊಳ್ಳಿ. ಅಲ್ಲ ಎಂದರೆ ಅಭಿಮಾನ ಶೂನ್ಯರು ಎಂದುಬಿಡುತ್ತಾರೆ. ಕೆಲವರು. ‘ಹೌದು’ ಎಂದರೆ ಅಸತ್ಯವನ್ನು ಹೇಳಿದಂತಲ್ಲವೆ ಎನ್ನುತ್ತದೆ ಒಳಗಿನ ವಾಸ್ತವ. ಹಾಗಾದರೆ ಯಾವುದು ಸರಿ ?

ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಸಿಕ್ಕಬೇಕು ಎಂಬಂಶವನ್ನು ಇಂದು ಕನ್ನಡದ, ಕನ್ನಡಿಗರ ಮೊದಲ ಆದ್ಯತೆ ಎಂಬಂತೆ ಬಿಂಬಿಸಲಾಗುತ್ತಿದೆ. ಕನ್ನಡ ವಿಷಯವೆಂದರೆ ಶಾಸ್ತ್ರೀಯ ಭಾಷೆಯ ವಿಷಯ ಮಾತ್ರವೇನೋ ಎಂಬ ಭಾವನೆಯನ್ನು ಬಿತ್ತಲಾಗುತ್ತಿದೆ. ನಾನು ಮೊದಲೇ ಹೇಳಿದಂತೆ ಶಾಸ್ತ್ರೀಯ ಭಾಷೆಯ ಸ್ಥಾನಮಾನವು ಕನ್ನಡಕ್ಕೆ ಸಿಗಲಿ ಎನ್ನುತ್ತಲೇ ನನ್ನ ಮೊದಲ ಆದ್ಯತೆ ಕನ್ನಡ ಬಲ್ಲವರಿಗೆ ಮಾತ್ರ ಕರ್ನಾಟಕದಲ್ಲಿ ಉದ್ಯೋಗ- ಎಂಬ ನೀತಿ ನಿರೂಪಣೆ ಮತ್ತು ಅನುಷ್ಠಾನ, ಕನ್ನಡವನ್ನು ಕೇವಲ ಅಭಿಮಾನದ ಪ್ರಶ್ನೆಯನ್ನಾಗಿ ನೋಡಿದರೆ ಸಾಲದು, ಅನ್ನದ ಪ್ರಶ್ನೆಯನ್ನಾಗಿ ಪರಿಗಣಿಸಬೇಕು – ಈ ಆದ್ಯತೆಯ ಮೇಲೆ ಕನ್ನಡ ಪರ ಚಿಂತನೆ ಮತ್ತು ಕ್ರಿಯೆಯನ್ನು ಕಟ್ಟಬೇಕು. ಕನ್ನಡಿಗರ ಬದುಕನ್ನು ಉಳಿಸಿ ಬೆಳೆಸುವ ಮೂಲಕ ಕನ್ನಡದ ಉಳಿವಿಗೆ ಒತ್ತಾಸೆಯಾಗಬೇಕು. ಈ ಮಾತನ್ನು ನಾನು ಅನೇಕ ವರ್ಷಗಳಿಂದ ಹೇಳುತ್ತಿದ್ದೇನೆ. ಉದ್ಯೋಗ, ಶಿಕ್ಷಣ ಮತ್ತು ಆಡಳಿತ – ಈ ಮೂರು ವಿಭಾಗಗಳು ಕ್ರಮವಾಗಿ ಕನ್ನಡ ಕೇಂದ್ರಿತವಾಗಬೇಕೆಂಬುದನ್ನು ತಾತ್ವಿಕವಾಗಿ ಪ್ರತಿಪಾದಿಸುತ್ತ ಬಂದಿದ್ದೇನೆ. ಅರ್ಹ ಕನ್ನಡಿಗರಿಗೆ ಸಾಮಾಜಿಕ ಮೀಸಲಾತಿಯನ್ನೂ ಒಳಗೊಂಡಂತೆ ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದ ಉದ್ಯೋಗಗಳಲ್ಲಿ ಆದ್ಯತೆ ದೊರೆಯ ಬೇಕು. ಕನ್ನಡ ಕಲಿಯದೆ ಇಲ್ಲಿ ಯಾರೂ ಶಿಕ್ಷಣವನ್ನು ಪೂರೈಸಲು ಅವಕಾಶವಿರಬಾರದು. ಆಡಳಿತದಲ್ಲಿ ಸಂಪೂರ್ಣ ಕನ್ನಡ ಜಾರಿಯಾಗಬೇಕು; ಕನ್ನಡದಲ್ಲಿ ಆಡಳಿತ ನಡೆಸಲು ಪೂರಕವಾಗುವಂತೆ ಕನ್ನಡ ತಂತ್ರಜ್ಞಾನವನ್ನು ಸಜ್ಜುಗೊಳಿಸಬೇಕು. ಈ ಆದ್ಯತೆಗಳನ್ನು ಒಳಗೊಂಡ ಚಿಂತನೆ ಮತ್ತು ಹೋರಾಟ ಇಂದಿನ ಆದ್ಯತೆ ಎಂದು ನನ್ನ ಭಾವನೆ. ಅನಂತರ ಶಾಸ್ತ್ರೀಯ ಸ್ಥಾನಮಾನದ ವಿಷಯ. ಶಾಸ್ತ್ರೀಯ ಸ್ಥಾನಮಾನವೇ ಮೊದಲ ಆದ್ಯತೆಯೆಂಬಂತೆ ಬಿಂಬಿಸುವುದು ಬೇಡ ಎನ್ನುವುದಷ್ಟೇ ನನ್ನ ಕಳಕಳಿ. ಈ ಮಾತುಗಳನ್ನು ನಾನು ೨೫-೧೧-೨೦೦೭ರಂದು ಮೈಸೂರಿನ ವಿಚಾರ ಸಂಕಿರಣವೊಂದರ ಉದ್ಘಾಟನಾ ಭಾಷಣದಲ್ಲಿ ಹೇಳಿದೆ. ಈ ಭಾಷಣದ ಪತ್ರಿಕಾ ವರದಿಯನ್ನು ಓದಿಯೋ, ಸಂಕಿರಣಕ್ಕೆ ಬಂದವರಿಂದ ಕೇಳಿಯೋ ಒಂದಿಬ್ಬರು

ವಿದ್ವಾಂಸರು ಟೀಕಿಸಿದರು. ಒಬ್ಬ ಹಿರಿಯ ವಿದ್ವಾಂಸರು ನನ್ನನ್ನು ಇತಿಹಾಸ ಸಂಸ್ಕೃತಿ ಗೊತ್ತಿಲ್ಲದವರು’ ಎಂದು ಕರೆದರು. ಮತ್ತೊಬ್ಬರು ನನ್ನ ಅಭಿಪ್ರಾಯ ‘ಕನ್ನಡ ಸ್ವಾಭಿಮಾನದ ಬಾಯಿಗೆ ಮಣ್ಣು ಹಾಕಿದಂತೆ’ ಎಂದರು. ಇನ್ನು ಕೆಲವರು ಮಾರನೇ ದಿನದಿಂದಲೇ ಶಾಸ್ತ್ರೀಯ ಭಾಷಾ ಸ್ಥಾನಮಾನದ ಬಗ್ಗೆ ದೊಡ್ಡದಾಗಿ ಒತ್ತಾಯಿಸಿದರು. ಇದು ಅವರೆಲ್ಲರ ಹಕ್ಕು. ಆದರೆ ಶತಮಾನಗಳ ಕನ್ನಡದ ವಿವೇಕ ಎಲ್ಲೋ ಒಂದು ಕಡೆ ಜೀವಂತವಾಗಿ, ಜಾಗೃತವಾಗಿ ಸರಿ-ತಪ್ಪುಗಳ ತೀರ್ಮಾನ ಮಾಡುತ್ತದೆಯೆಂದು ನಾನು ಭಾವಿಸುತ್ತೇನೆ. ಆದ್ಯತೆಯಲ್ಲಿ ಮೊದಲನೆಯದಲ್ಲ ಎನ್ನುವುದನ್ನೂ ಉಗ್ರ ಪ್ರತಿಕ್ರಿಯೆ ತೋರಿಸುವವರ ವಿವೇಕವನ್ನೂ ಈ ತೀರ್ಮಾನ ತೂಗಿ ನೋಡುತ್ತದೆ. ಅಂದಿನ ನನ್ನ ಭಾಷಣದ ಕೊನೆಯ ವಾಕ್ಯ ಹೀಗಿತ್ತು: ‘ಉಪವಾಸವಿರುವ ಕನ್ನಡಿಗರ ಪರವಾಗಿ ಉಪವಾಸ ಸತ್ಯಾಗ್ರಹ ಮಾಡಿದರೆ ಮೊದಲ ಸಾಲಿನಲ್ಲೇ ನಾನಿರುತ್ತೇನೆ, ಈ ಕೆಲಸಕ್ಕೆ ಕೈ ಹಾಕೋಣ’ – ಈಗಲೂ ನನ್ನದು ಇದೇ ಮಾತು.

ಇಲ್ಲಿ, ಮತ್ತೊಂದು ವಿಷಯವನ್ನು ಹೇಳಬೇಕು; ನಾನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿದ್ದಾಗ ಇಂಜಿನಿಯರಿಂಗ್, ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳ ಮೊದಲನೇ ವರ್ಷ ಕನ್ನಡವನ್ನು ಒಂದು ಪಠ್ಯವಾಗಿ ಕಲಿಯುವ ವ್ಯವಸ್ಥೆ ಮಾಡಿಸಿದೆ. ಪರೀಕ್ಷೆಗೆ ಕಡ್ಡಾಯ ಮಾಡಲು ವಿಶ್ವವಿದ್ಯಾಲಯದವರು ತಾತ್ವಿಕವಾಗಿ ಒಪ್ಪಿದ್ದರು. ಆದರೆ ಅನಂತರ ಪರೀಕ್ಷೆಗೆ ಕಡ್ಡಾಯ ಮಾಡಲಿಲ್ಲ. ಈ ಬಗ್ಗೆ ಪತ್ರಿಕಾ ವರದಿಗಳು ಬಂದವು. ಆದರೆ ಕನ್ನಡಪರ ಪ್ರತಿಷ್ಠಿತ ವಲಯವು ಈ ಬಗ್ಗೆ ಚಕಾರ ಎತ್ತಲಿಲ್ಲ. ರಾಜ್ಯಭಾಷೆಯನ್ನು ತಾಂತ್ರಿಕ ವೈದ್ಯಕೀಯ ಕಾಲೇಜುಗಳಲ್ಲಿ ಕಲಿಸುವ ವ್ಯವಸ್ಥೆಯನ್ನು ಇಡೀ ದೇಶದಲ್ಲೇ ಮೊಟ್ಟಮೊದಲು ಅಳವಡಿಸಿದ ರಾಜ್ಯ ಕರ್ನಾಟಕ, ಕನ್ನಡವನ್ನು ಈ ಕೋರ್ಸುಗಳಲ್ಲಿ ಪರೀಕ್ಷೆಗೆ ಕಡ್ಡಾಯ ಮಾಡಿದರೆ, ನೂರಾರು ಕನ್ನಡ ಎಂ.ಎ. ಪದವೀಧರರಿಗೆ ಖಾಯಂ ಕೆಲಸ ಸಿಗುತ್ತಿತ್ತು. ಕನ್ನಡ ಎಂ.ಎ. ಓದಿ ಬೀದಿಗೆ ಬಿದ್ದಿರುವ ನೂರಾರು ಜನಕ್ಕೆ ಬದುಕು ಸಿಕ್ಕುತ್ತಿತ್ತು. ಕನ್ನಡ ತಮ್ಮ ಕೈ ಹಿಡಿಯಿತು ಎಂಬ ಭರವಸೆಯ ಬೆಳಕು ಮೂಡುತ್ತಿತ್ತು. ಜೊತೆಗೆ ಅನ್ಯ ಭಾಷಿಕ ವಿದ್ಯಾರ್ಥಿಗಳೂ ಕನ್ನಡ ಕಲಿತಂತೆ ಆಗುತ್ತಿತ್ತು. ಇದಾವುದೂ ಕನ್ನಡದ ಕೆಲಸವಲ್ಲವೆ? ಈ ಬಗ್ಗೆ ಒತ್ತಾಯ ಹೇರದೆ ಹೋದವರ ಕನ್ನಡ ಪ್ರೀತಿಗೆ ಪಕ್ಷಪಾತವಿದೆಯೆಂದು ಭಾವಿಸಬಹುದೆ ?

ಕನ್ನಡಕ್ಕೆ, ಕನ್ನಡಿಗರಿಗೆ, ಬದುಕಿನ ಆಸರೆಯಾಗುವುದು ಆದ್ಯತೆಯ ವಿಷಯವಾಗಬೇಕೆಂದು ನಂಬಿದ ನಾನು ನೋವು ಮತ್ತು ನಿರಾಶೆಯಿಂದ ಈಗ ಮೌನದ ಮೊರೆ ಹೋಗಲೆ ಎಂದು ಕೇಳಿಕೊಳ್ಳುತ್ತಿದ್ದೇನೆ. ಆದರೆ, ಕನ್ನಡದ ಜನಸಾಮಾನ್ಯರಿಗೆ ನನ್ನಂಥವರನ್ನು ಮೌನಕ್ಕೆ ತಳ್ಳುವಷ್ಟು ಪ್ರತಿಷ್ಠೆಯ ಪೊರೆ ಕಟ್ಟಿಲ್ಲ ಎಂಬ ನಂಬಿಕೆ ನನ್ನದಾಗಿದೆ.

(ಜನವರಿ ೨೦೦೮) ‘ಹೊಸತು’ ವಿಶೇಷ ಸಂಚಿಕೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಟೀವಿ (T.V.) ಆಶು ಕವಿತ್ವ- ೧೯೮೯
Next post ಕಾಸು-ಕೂಸು

ಸಣ್ಣ ಕತೆ

 • ದೇವರು ಮತ್ತು ಅಪಘಾತ

  ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

 • ವ್ಯವಸ್ಥೆ

  ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

 • ಒಲವೆ ನಮ್ಮ ಬದುಕು

  "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

 • ತ್ರಿಪಾದ

  ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

 • ಹಳ್ಳಿ…

  ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

cheap jordans|wholesale air max|wholesale jordans|wholesale jewelry|wholesale jerseys