ಟೀವಿಯ ಆಶುಕವಿತ್ವದ ಕರೆಗೆ
ಛೇ ಛೇ ಎಂದರು ಜಿ.ಎಸ್.ಎಸ್;
ಅಡಿಗರೊ ತಲೆ ತಲೆ ಚಚ್ಚಿಕೊಂಡರು
ಅಲ್ಲೆ ಮಾಡಿದರು ಅದ ಡಿಸ್‌ಮಿಸ್.
ಕಂಗಾಲಾದರು ಕಂಬಾರ
ನಿಟ್ಟುಸಿಟ್ಟರು ನಿಸ್ಸಾರ
ಕೆಟ್ಟೇ ಎಂದರು ಭಟ್ಟರು ಒಳಗೇ
ಬಂತಲ್ಲಪ್ಪಾ ಗ್ರಹಚಾರ!
ಆದರು ಏನು, ಬಿಡಲಾದೀತೇ?
ಗೋಕಾಕರ ಕವಿದರ್ಬಾರ ?
ಯುಗಾದಿ ಟೀವಿ ಗೋಷ್ಠಿಯ ಬಿಟ್ಟರೆ
ಹೊಸವರ್ಷಕ್ಕೆ ಅಪಚಾರ!
ಹೀಗೆಲ್ಲಾ ಬಲು ತರ್ಕವ ಮಾಡಿ
ಬಯಕೆಯ ಬಾವಿಗೆ ಬುದ್ಧಿಯ ದೂಡಿ
ಕಡೆಗೂ ಭಟ್ಟರು ಮಾಡಿಯೆ ಬಿಟ್ಟರು
ಪದ್ಯವ ಹೊಸೆಯುವ ನಿರ್ಧಾರ,
ನುಂಗಿತು ಹನಿಮಸಿ ಚಿತ್ತಾರ.

* * *

ಕೂತ ಕವಿಗಣವ ಅಣಕಿಸುವಂತೆ
ಸರಸ್ವತಿಯನೇ ಛೇಡಿಸುವಂತೆ
ಬಗೆ ಬಗೆ ವಿಷಯದ ಚೀಟಿಗಳನ್ನು
ತಂದು ಹಿಡಿಯಲು ಕವಿಗಳ ಮುಂದೆ
ಭಟ್ಟರು ಒಂದನು ಎತ್ತಿದರು.
ಕೈ ನಡುಗುತ್ತ ಬಿಚ್ಚಿದರು.
ವಿಘ್ನೇಶ್ವರನಿಗೆ ಮನದಲೆ ನಮಿಸಿ
ನೂರು ಮೋದಕದ ಹರಕೆಯ ಇರಿಸಿ
ಹಣೆಬರಹವನೇ ಓದುವ ಹಾಗೆ
ಕಡೆ ಕಾಳಗವನೆ ಕಾದುವ ಹಾಗೆ
ಓದಿ ಬೆವರಿ ತುಟಿಕಚ್ಚಿದರು,
ದೆವ್ವ ಕಂಡಂತೆ ಬೆಚ್ಚಿದರು.

ವಿಷಯ ಹೀಗಿತ್ತು ಚೀಟಿಯ ಒಳಗೆ
‘ಬೈಟೂ ಕಾಫಿ ಹೊಟೇಲಿನೊಳಗೆ’.
ಏನು ಬರೆದಾರು ಭಟ್ಟರು ಸದ್ಯ,
ಪದ್ಯವಿರಲಿ ದಕ್ಕೀತೇ ಗದ್ಯ ?
ವಿಷಯ ನೋಡಿ ಕವಿ ಗೊಣಗುಟ್ಟಿದರು
ಗೋಕಾಕರ ಮನದಲ್ಲೇ ಕುಟ್ಟಿದರು
ಈ ಕವಿಗೋಷ್ಟಿಗೆ ಸಲಹೆಯ ಮಾಡಿದ
ಅವರನು ವಿನಯದಲೇ ಛೇಡಿಸಿದರು.
“ಎಂಥ ವಿಷಯ ಇದು ಗೋಕಾಕ್ ಹೇಳಿ.
ಕವಿಯ ಹೀಗೆ ಮಾಡುವುದೇ ಗೇಲಿ ?
ಬರೆಯಲಾರೆ ನಾ ಒಂದೂ ಸಾಲು,
ನೀವೆ ಹೊದಿಸಿದರೂ ಭರ್ಜರಿ ಶಾಲು.
ಬೇಯಲು ಬೇಕು ಬದನೇಕಾಯಿಗು
ಅಷ್ಟಿಟ್ಟಾದರು ಪುರುಸೊತ್ತು
ಬೇಡವೆ ಹೇಳಿ ಬರೆಯುವ ಕವಿಗೂ
ಪದಗಳ ನೇಯಲು ತುಸುಹೊತ್ತು?”

“ಬೇಡ” ಎಂದರು ಕವಿ ಗೋಕಾಕ್ !
“ಕವಿ ನೀನಾದರೆ ಬರೆದೇ ಬರೆಯುವೆ,
ಯಾತಕೆ ಈ ಥರ ಹಲ್ ಹಲ್ ಕಿರಿಯುವೆ ?
ಏನಾದರು ಬರಿ, ಎಂತಾದರು ಬರಿ,
ಲಯಪ್ರಾಸಗಳನು ಬಿಡದಿದ್ದರೆ ಸರಿ.
ಢಿಕ್ಕೀ ಹೊಡಿ ನೀ ಕಲ್ಪನೆಗೆ;
ತಾನೆ ತಾನಾಗಿ ಸುರಿವುದು ಕವಿತೆ
ಜಳಜಳ ತೊರೆ ಥರ ಹರಿಯುತ್ತ
ಯೋಚಿಸಲೇನದು ಗೋಕಾಕ್ ವರದಿಯೆ,
ಕಾಲ ಯಾಕೆ ಕವಿತೆಗೆ ವ್ಯರ್ಥ?”

* * *

ಕೂತರು ಭಟ್ಟರು ಆಶುಕವಿತ್ವಕೆ
ವೇದಮಂತ್ರಗಳ ಜಪಿಸುತ್ತ
ಕರೆದರು ಪದಗಳ ಕೈಬೀಸಿ
ಮುಖದಲಿ ಪ್ರೀತಿಯ ನಗೆ ಹಾಸಿ.
ಆದರೆ ಏನಿದು ಬಲು ಚೋದ್ಯ,
ಭಟ್ಟರಿಗೂ ತಿಳಿಯಲಸಾಧ್ಯ!
ಹಿಂದೆಲ್ಲಾ ಮನೆನಾಯಿಯ ಹಾಗೆ
ಬಾಲವ ಆಡಿಸಿ, ಕೆರೆದರೆ ಬಳಿಗೆ
ಓಡಿಬರುತಿದ್ದ ಶಬ್ಧಗಳು,
ಓಟ ಕಿತ್ತವು ಕಳ್ಳರ ಹಾಗೆ
ಭಟ್ಟರು ಪೋಲೀಸ್ ಎನ್ನುವೊಲು.
ಬಿಡುವರೊ ಭಟ್ಟರು ಬಲುಗಟ್ಟಿ
ಹೊರಟರು ಬೇಟೆಗೆ ಬೆನ್ನಟ್ಟಿ!

ಪದಗಳು ಲಯಗಳು ಪ್ರಾಸಗಳೆಲ್ಲಾ
ಓಟಕಿತ್ತವು ಮುಂದುಗಡೆ;
ಭಟ್ಟರೂ ಪಂಚೆಯ ಮೇಲಕೆ ಕಟ್ಟಿ
ಓಡಿದರವುಗಳ ಹಿಂದುಗಡೆ.
ಕನ್ನಡ ಪದಗಳು ಮುಂದುಗಡೆ
ವಿಪ್ರವರೇಣ್ಯ ಹಿಂದುಗಡೆ!
ರಸ್ತೆಯ ಮಧ್ಯೆ ಬರಿಗಾಲಲ್ಲೇ
ಬಸ್ಸನು ತಪ್ಪಿಸಿ ಓಡಿದರು;
ಪುಟ್‌ಪಾತ್ ಹತ್ತಿ ಮರಕ್ಕೆ ಜನಕ್ಕೆ
ಢಿಕ್ಕೀ ಹೊಡೆಯುತ ತೂರಿದರು;

ಸರ್ಕಲ್ ಗಟಾರ, ಗಲ್ಲೀ ಜಲ್ಲೀ
ಓಡಿ ಓಡಿ ಎಲ್ಲೆಂದರೆ ಅಲ್ಲಿ
ಸುಸ್ತಾಗಲು ಭಟ್ಟರ ಎದೆಯಲ್ಲಿ
ಬಡಿಯತೊಡಗಿದವು ಭೇರಿಗಳು!
ಗಟ್ಟಿಪದಗಳೊ ಓಡಿಯೆಬಿಟ್ಟವು
ಕರುಣೆಯೆ ಇಲ್ಲದ ಕ್ರೂರಿಗಳು;
ದುಷ್ಟಪದಗಳೋ ಹಿಡಿದರು ಕಿರುಚಿ
ಭಟ್ಟರ ಮೈ ಕೈ ಎಲ್ಲಾ ಪರಚಿ

ತಪ್ಪಿಸಿಕೊಂಡವು ದ್ರೋಹಿಗಳು.
ಆದರೆ ಭಟ್ಟರು ಹಿಡಿದೇ ಬಿಟ್ಟರು
ಪಿಳ ಪಿಳ ಕಣ್ಣಿನ ಪೀಚುಗಳ,
ಕಾಲೇ ಬಲಿಯದ ಹೀಚುಗಳ;
ಕಷ್ಟಪಟ್ಟರೂ ಹಿಡಿದರು ಕವಿಶ್ರೀ
ಟೈಲ್ ಎಂಡರ್‌ಗಳ ಕ್ಯಾಚುಗಳ!
ಅವನ್ನೆ ಹಿಡಿದು, ಅತ್ತರೆ ಬಡಿದು
ಕೂರಿಸಿ ಏಳಿಸಿ ಕೈಕಾಲ್ ಎಳೆದು
ಮಾಡಿಸಿದರು ಕವಿ ಡ್ರಿಲ್ಲನ್ನು;
ಕೊಟ್ಟೀತೇ ಈ ‘ಠೀವಿಯ’ ಕವಿತೆ
ಯುಗಾದಿ ಹಬ್ಬದ ಥ್ರಿಲ್ಲನ್ನು ?
*****