ದಲಿತರ ಭಾಷೆ : ಹಸಿವಿನ ಭಾಷೆ

ದಲಿತರ ಭಾಷೆ : ಹಸಿವಿನ ಭಾಷೆ

(ಕನ್ನಡ ವಿಶ್ವವಿದ್ಯಾಲಯವು ಏರ್ಪಡಿಸಿದ ದಲಿತ ಸಂಸ್ಕೃತಿ ಕುರಿತ ವಿಚಾರ ಸಂಕಿರಣದ ಸಮಾರೋಪ ಭಾಷಣ)

‘ದಲಿತರು, ಭಾಷೆ ಮತ್ತು ಸಮಾಜ’ ಎನ್ನುವ ಈ ವಿಚಾರಸಂಕಿರಣದ ಸಮಾರೋಪ ಭಾಷಣಕ್ಕೆ ಸಂಬಂಧಪಟ್ಟಂತೆ ನನ್ನ ಅನಿಸಿಕೆಗಳನ್ನು ಹಂಚಿಕೊಳ್ಳುವುದಕ್ಕೆ ಮುಂಚೆ ಮೊನ್ನೆ ನಿಧನರಾದ ಗೆಳೆಯ ಸಿಜಿಕೆ ಅವರನ್ನು ಕುರಿತು ಒಂದೆರಡು ಮಾತುಗಳನ್ನ ಹೇಳಲು ನಾನು ಇಷ್ಟಪಡ್ತೇನೆ. ನಿನ್ನೆಯೂ ಅವರನ್ನು ಇಲ್ಲಿ ನೆನೆದಿದ್ದಾರೆ. ಆದರೆ ವೈಯಕ್ತಿಕವಾಗಿ ಇಲ್ಲಿ ನಾನು ಅವರನ್ನು ನೆನೆಯುತ್ತೇನೆ. ಇಂತಹ ಅನೇಕ ಹೋರಾಟಗಳು, ದಲಿತ, ಬಂಡಾಯ ಎಲ್ಲದರಲ್ಲೂ ತೊಡಗಿಸಿಕೊಂಡಿದ್ದಂತಹ ಗೆಳೆಯ ಮತ್ತು ಈ ಸಂಕಿರಣದಲ್ಲಿ ಭಾಗವಹಿಸಬೇಕಿದ್ದ ಗೆಳೆಯ ಇಲ್ಲ ಎನ್ನುವ ಕೊರತೆಯನ್ನು ಜ್ಞಾಪಿಸಿಕೊಳ್ಳುತ್ತ, ಅವರನ್ನು ನೆನೆಯುತ್ತ ನನ್ನ ಮಾತುಗಳನ್ನ ಶುರು ಮಾಡಲು ಇಷ್ಟಪಡುತ್ತೇನೆ. ಈ ವಿಚಾರಸಂಕಿರಣ ಎರಡು ದಿವಸ ನಡೆದಿದೆ. ಸಮಾರೋಪ ಭಾಷಣಕ್ಕೆ ಒಂದು ಅರ್ಧ ಗಂಟೆ ಮುಂಚೆ ನಾನು ಬಂದದ್ದರಿಂದ ಇಲ್ಲಿ ಏನೇನು ನಡೆದಿದೆ ಅನ್ನೋದು ನನಗೆ ಗೊತ್ತಿಲ್ಲ. ಅಥವಾ ಸಮಾರೋಪ ಭಾಷಣ ಮಾಡುವವರು ಎರಡು ದಿವಸ ನಡೆದಿದ್ದನ್ನು ಕ್ರೋಡೀಕರಿಸಬೇಕಾಗಿಲ್ಲ ಎಂದು ನಾನು ಭಾವಿಸಿಕೊಂಡಿದ್ದೇನೆ. ಅದು ನನ್ನ ಮಟ್ಟಿಗೆ ಕೊರತೆ ಅಲ್ಲ ಎಂದೇ ನಾನೇ ಸಮಾಧಾನ ಮಾಡಿಕೊಳ್ಳಬಹುದು. ಇಂತಹದೊಂದು ವಿಚಾರಸಂಕಿರಣದ ಪ್ರಸ್ತುತತೆಯನ್ನು ಕುರಿತು ಬಹುಶಃ ಹೆಚ್ಚು ಭಿನ್ನಾಭಿಪ್ರಾಯಗಳು ಇಲ್ಲವೆಂದು ನಾನು ಭಾವಿಸಿಕೊಂಡಿದ್ದೇನೆ.

‘ದಲಿತರು, ಭಾಷೆ ಮತ್ತು ಸಮಾಜ’ ಎಂಬ ಈ ವಿಚಾರಸಂಕಿರಣವನ್ನು ಕುರಿತಂತೆ ನಾವು ಮಾಡುವ ಆಲೋಚನೆಗಳು ನಾವು ಎಲ್ಲಿ ನಿಂತು ಇದನ್ನು ನೋಡುತ್ತೇವೆ ಎನ್ನುವುದನ್ನು ಅವಲಂಬಿಸಿವೆ. ನಾವು ಯಾವ ಜಾಗದಲ್ಲಿ ನಿಂತು ನೋಡುತ್ತೇವೆನ್ನುವುದು ಮುಖ್ಯ. ನಾನು ಇಲ್ಲಿ ಬಂದು ಕೂತಾಗ ಒಬ್ಬ ಭಾಷಣಕಾರರು ಭಾಷಾಜ್ಞಾನದ ಪ್ರಶ್ನೆಯನ್ನು ಎತ್ತಿದರು. ಈ ಭಾಷಾಜ್ಞಾನದ ಪ್ರಶ್ನೆ ಎಲ್ಲಿಂದ ಬರುತ್ತೆ, ನಾನು ಯಾವ ನೆಲೆಯಿಂದ ನಿಂತು ದಲಿತರ ಭಾಷೆ, ಸಮಾಜ ಇವುಗಳನ್ನ ನೋಡುತ್ತಾ ಇದ್ದೇನೆ ಎನ್ನುವುದೇ ಭಾಷಾಜ್ಞಾನದ ಪ್ರಶ್ನೆ. ದಲಿತರಿಗೂ ಬಹಳ ವ್ಯಾಪಕವಾದ ವ್ಯಾಖ್ಯಾನಗಳಿವೆ. ಅಸ್ಪೃಶ್ಯರಿಂದ ಹಿಡಿದು ಎಲ್ಲ ಜಾತಿಯ ಬಡವರೂ ದಲಿತರೇ ಎನ್ನುವಂತಹ ವ್ಯಾಖ್ಯಾನ ನಮ್ಮಲ್ಲಿ ಬಂದಿದೆ. ಅಂದರೆ ದಲಿತರಲ್ಲಿ ಭಾಷಾಜ್ಞಾನ ಇಲ್ಲ ಅಂತ ನಾವು ತಿಳಿದು ಹೊರಡುವುದು, ನಾವೆಲ್ಲಿ ನಿಂತಿದ್ದೇವೆ ಎನ್ನುವುದನ್ನು ಹೇಳುತ್ತದೇ ಹೊರತು ದಲಿತರಿಗೆ ಭಾಷಾಜ್ಞಾನ ಇಲ್ಲ ಎನ್ನುವುದನ್ನು ಅಲ್ಲವೇ ಅಲ್ಲ. ಹಾಗಾಗಿ ಈ ಭಾಷಾ ಜ್ಞಾನದ ವಿಷಯವನ್ನು ಪ್ರವೇಶ ಮಾಡುವಾಗ ಒಬ್ಬ ಭಾಷಾವಿಜ್ಞಾನಿಯಾಗಿ ಪ್ರವೇಶ ಮಾಡಬಹುದು ಅಥವಾ ಭಾಷಾಶಾಸ್ತ್ರದ ವಿದ್ಯಾರ್ಥಿಯಾಗಿ ಪ್ರವೇಶ ಮಾಡಬಹುದು, ಸಮಾಜ ವಿಜ್ಞಾನದ ವಿದ್ಯಾರ್ಥಿಯಾಗಿ ಪ್ರವೇಶ ಮಾಡಬಹುದು. ಹೋರಾಟಗಾರರ ನೆಲೆಯಿಂದ ಇದನ್ನ ಪ್ರವೇಶ ಮಾಡಬಹುದು. ಹೀಗೆ ನಾವು ಯಾವ ನೆಲೆಯಿಂದ ಪ್ರವೇಶ ಮಾಡುತ್ತೇವೋ ಅದಕ್ಕೆ ಸಂಬಂಧಪಟ್ಟಂತೆ ಅನೇಕ ವಿಷಯಗಳು ಹೊರಗಡೆ ಬರಲು ಸಾಧ್ಯ ಇದೆ ಅಂತ ನನ್ನ ತಿಳುವಳಿಕೆ. ಹಾಗಾಗಿ ಯಾವ ಭಾಷಣಾನೂ ಎಲ್ಲ ವಿಷಯಗಳನ್ನು ಒಳಗೊಂಡಂತಹ ಒಂದು ಪರಿಪೂರ್ಣವಾದ ತಿಳುವಳಿಕೆ ಆಗುವುದು ಬಹಳ ಕಷ್ಟ. ಈ ತರದ ಒಂದು ಸಂಕೀರ್ಣವಾದ ವಿಷಯ ಇದು.

ದಲಿತರು ಭಾಷೆಯನ್ನ ಕಲಿಯಬೇಕು ಎಂದು ಹೇಳುತ್ತಾರೆ. ಭಾಷೆಯನ್ನ ಕಲಿಯುವುದು ಅಂದರೆ ಏನು? ಯಾವುದನ್ನು ಈಗಾಗಲೇ ವ್ಯಾಕರಣಬದ್ಧವಾದುದು ಮತ್ತು ಶಿಷ್ಟವಾದುದು, ಪಂಡಿತರದು ಅಥವಾ ಪ್ರಧಾನ ಸಂಸ್ಕೃತಿಗೆ ಸಂಬಂಧಪಟ್ಟದ್ದು ಅಂತ ಅಂದುಕೊಂಡಿದ್ದೇವೋ ಆ ನೆಲೆಯಲ್ಲಿ ನಿಂತು ನೀವು ದಲಿತರ ಸಮಾಜವನ್ನು ನೋಡಿದರೆ ಆಗ ದಲಿತರ ಭಾಷೆ, ದಲಿತರ ಸಮಾಜ ಕಾಣುವುದು ಬೇರೆ ರೀತಿ. ಹಾಗೆ ನೋಡುವ ಅಗತ್ಯ ಇಲ್ಲ. ಭಾಷೆ ಕೇವಲ ಅಕ್ಷರಗಳ ಸಮೂಹ ಅಲ್ಲ, ಈಗ ಭಾಷಾಶಾಸ್ತ್ರದ ವಿದ್ಯಾರ್ಥಿಯಾಗಿ ನೋಡುವಾಗ ಒಂದು ಪದ ಹಾಗಿತ್ತು, ಒಂದು ಪದ ಹೀಗಿತ್ತು, ಅದರಲ್ಲಿ ಇಷ್ಟು ವ್ಯತ್ಯಾಸ ಆದವು ಇತ್ಯಾದಿಗಳನ್ನು ಹೇಳಬಹುದು. ಅದೇ ಪದವನ್ನು ಒಬ್ಬ ಸಮಾಜಶಾಸ್ತ್ರ ವಿದ್ಯಾರ್ಥಿಯಾದರೆ ಬೇರೆ ರೀತೀಲೇ ವ್ಯಾಖ್ಯಾನ ಮಾಡಬಹುದು. ಒಬ್ಬ ದಲಿತ ಹೋರಾಟಗಾರನ ನೆಲೆಯಲ್ಲಿ ನಿಂತು ಅದೇ ಪದವನ್ನು ಇನ್ನೊಂದು ಅರ್ಥದಲ್ಲಿ ನೋಡುತ್ತಾ ಹೋಗಬಹುದು. ಹಾಗಾಗಿ ಒಂದು ಪದ, ಒಂದು ವಾಕ್ಯವನ್ನು ಯಾರು, ಎಲ್ಲಿ ಹೇಗೆ ನಿಂತು ನೋಡುತ್ತಾರೆ ಎಂಬ ಮೂಲಕ ಅರ್ಥಗಳನ್ನು ಸ್ಪುರಿಸುತ್ತಾ ಹೋಗುತ್ತದೆ. ನನಗೆ ಈ ಸಂದರ್ಭದಲ್ಲಿ ೧೯೩೧ನೇ ಆಗಸ್ಟ್ ೧೪ನೇ ತಾರೀಖು ಗಾಂಧೀಜಿಯವರಿಗೆ ಅಂಬೇಡ್ಕರ್‌ ಅವರು ಹೇಳಿದರು ಅಂತ ಉಲ್ಲೇಖಗೊಂಡಿರುವ ಒಂದು ಮಾತು ನೆನಪಿಗೆ ಬರುತ್ತದೆ. ಗಾಂಧೀಜಿಯವರಿಗೆ ಈ ರೀತಿಯಾಗಿ ಹೇಳ್ತಾರೆ. “ನನಗೆ ಒಂದು ತಾಯ್ನಾಡಿಲ್ಲ ಅಂತ ನಾನು ಹೇಳಲು ಹಿಂಜರಿಯುವುದಿಲ್ಲ. ಯಾಕೆಂದರೆ ನನ್ನನ್ನು ಅತ್ಯಂತ ಕೀಳಾಗಿ ಕಾಣುವ ಈ ನಾಡನ್ನು, ನನ್ನನ್ನೇ ಅತ್ಯಂತ ಕೀಳಾಗಿ ಕಾಣುವ ಈ ಧರ್ಮವನ್ನು ನನ್ನ ನಾಡು, ನನ್ನ ಧರ್ಮ ಅಂತ ಒಪ್ಪಲು ನನಗೆ ಆಗುವುದಿಲ್ಲ ಅಂತ ವಿಷಾದಿಸುತ್ತೇನೆ. ಒಂದು ವೇಳೆ ಈ ಕಾರಣಕ್ಕೆ ನನ್ನನ್ನ ದೇಶದ್ರೋಹಿ ಅಂತ ಕರೆಯುವುದಾದರೆ ಅದಕ್ಕೆ ನನ್ನ ವಿಷಾದ ಇಲ್ಲ. ಯಾಕೆಂದರೆ ನನ್ನನ್ನ ದೇಶದ್ರೋಹಿಯಾಗಿ ಮಾಡಿದ್ದು ಈ ನಾಡು” ಅಂತ ಹೇಳಿದರು. ಇದು ಯಾವ ಭಾಷೆ? ಇದು ನಿಜವಾದ ಅರ್ಥದಲ್ಲಿ ದಲಿತರ ಭಾಷೆ. ಅಂದರೆ ಇದೊಂದು ಆತ್ಮವಿಶ್ವಾಸದಿಂದ ಬಂದ ಭಾಷೆ. ಇದು ಭಾಷಾಶಾಸ್ತ್ರದ ವಿದ್ಯಾರ್ಥಿಯಾಗಿ ನೋಡುವಂತಹದಲ್ಲ, ಅಂದರೆ ಅಂಬೇಡ್ಕರ್‌ ಗಾಂಧಿ ಇಬ್ಬರನ್ನು ಒಟ್ಟಿಗೆ ಇಟ್ಟು ನೋಡಿದಾಗ ಏನು ಅನಿಸಬಹುದು ಅಂತ ಯೋಚನೆ ಮಾಡಿದೆ. ಈ ವಿಚಾರವನ್ನು ನಾನು ಇನ್ನೊಂದು ಕಡೇನೂ ಹೇಳಿದ್ದೇನೆ. ಅಂಬೇಡ್ಕರ್‌ ಅವರು ಫುಲ್‌ಸೂಟ್ ಹಾಕಿಕೊಂಡಿದ್ದಾರೆ. ಗಾಂಧೀಜಿಯವರು ಅರೆಬೆತ್ತಲೆಯಲ್ಲಿದ್ದಾರೆ. ಇವೆರಡು ನನಗೆ ಚಾರಿತ್ರಿಕ ಸತ್ಯಗಳೇನೇ. ಅರೆಬೆತ್ತಲೆ ಜಗತ್ತಿನಿಂದ ಬಂದಂತಹ ಅಂಬೇಡ್ಕರ್ ಮೈತುಂಬ ಬಟ್ಟೆ ಹಾಕೊಂಡಿದ್ದು ಹಾಗೂ ಮೈತುಂಬ ಬಟ್ಟೆ ಹಾಕೊಳ್ಳುವಂತಹ ಸಾಮಾಜಿಕ ವಲಯದಿಂದ ಬಂದಂತಹ ಗಾಂಧೀಜಿಯವರು ಅರೆಬೆತ್ತಲೆಯಾದದ್ದು. ಅಂದರೆ ಅಂಬೇಡ್ಕರ್ ಅವರ ಪೀಸ್ ಸೂಟ್ ಅದು ಬರಿ ಉಡುಪಲ್ಲ, ಆ ಉಡುಪು ಇನ್ನೊಂದು ಭಾಷೆಯನ್ನು ಧ್ವನಿಸುತ್ತಾ ಹೋಗುತ್ತದೆ. ಅದೇ ರೀತಿ ಗಾಂಧೀಜಿಯವರು ಪೂರ್ಣವಾದ ಮೈ ಮುಚ್ಚಿಕೊಳ್ಳುವ ಸಾಧ್ಯತೆಗಳಿದ್ದ ಸಾಮಾಜಿಕ ವಲಯದಿಂದ ಬಂದು ಅರೆಬೆತ್ತಲೆಯಾಗುತ್ತಾ ಹೋಗುತ್ತಾರೆ. ಇವರು ಅರೆಬೆತ್ತಲೆ ಜಗತ್ತಿನಿಂದ ಬಂದು ಪೂರ್ತಿ ಮೈ ಮುಚ್ಚಿಕೊಳ್ಳುವ ಸೂಟ್ ಹಾಕೊಳ್ತಾರೆ. ಯಾವುದು ಸಮಂಜಸ ಯಾವುದು ಅಸಮಂಜಸ ಅನ್ನುವ ಪ್ರಶ್ನೆ ಅಲ್ಲ ಇಲ್ಲಿ. ಯಾವುದನ್ನು ನಾವು ಬಹುಸಂಸ್ಕೃತಿಯ ಭಾರತೀಯ ಸಮಾಜ ಅಂತ ಕರೆಯುತ್ತೇವೊ ಅಂತಹ ಬಹುಸಂಸ್ಕೃತಿಯ ಭಾರತೀಯ ಸಮಾಜದ ಎರಡು ಚಾರಿತ್ರಿಕ ಸತ್ಯಗಳು ಇವು. ಈ ಎರಡು ಚಾರಿತ್ರಿಕ ಸತ್ಯಗಳ ಅನುಸಂಧಾನದಲ್ಲಿಯೇ ಒಂದು ಸಾಮಾಜಿಕ ಚಲನಶೀಲತೆ ಹುಟ್ಟಲು ಸಾಧ್ಯ. ಅಂದರೆ ಇಲ್ಲಿ ಬಟ್ಟೆಗೆ ಒಂದು ಭಾಷೆ ಇದೆ. ಆ ಬಟ್ಟೆ ಒಂದು ಸಮಾಜವನ್ನು ಹೇಳುತ್ತೆ. ಆ ಭಾಷೆ ಭಾಷಾವಿಜ್ಞಾನವನ್ನು ಮೀರಿದ ಭಾಷೆ. ಚರಿತ್ರೆಯನ್ನು ಹೇಳುವಂತಹ ಒಂದು ಭಾಷೆ ಅದು. ಆ ಭಾಷೆಗೆ ಅಕ್ಷರಗಳಿಲ್ಲದೇ ಇರಬಹುದು. ಆದರೆ ಅನುಭವ ಇರುತ್ತದೆ. ಆದ್ದರಿಂದಲೇ ನಾನು ಆಗಲೇ ಹೇಳಿದ ಅಂಬೇಡ್ಕರ್‌ ಅವರ ಮಾತುಗಳು ಕೇವಲ ಅಕ್ಷರ ಆಗಿರುವುದಿಲ್ಲ. ಅದು ಅನುಭವ ಆಗಿರುತ್ತೆ. ಅದು ಚರಿತ್ರೆ ಆಗಿರುತ್ತೆ. ಹೀಗಾಗಿ ದಲಿತರು, ಭಾಷೆ ಮತ್ತು ಸಮಾಜ ಅನ್ನುವುದನ್ನು ನೋಡುತ್ತಿರಬೇಕಾದರೆ ಅದಕ್ಕಿರುವ ವ್ಯಾಪಕತೆ ಬಹಳ ದೊಡ್ಡದು.

ಇನ್ನೊಂದು ಬಹಳ ಮುಖ್ಯವಾದದ್ದು ನೀವು ದಲಿತರ ವ್ಯಾಖ್ಯಾನವನ್ನು ವ್ಯಾಪಕ ನೆಲೆಯಲ್ಲಿ ನೋಡಿದಾಗ ದಲಿತರು ಸಾಂಸ್ಕೃತಿಕವಾಗಿ ಬಹಳ ಶ್ರೀಮಂತರು. ಆದರೆ ಸಾಮಾಜಿಕವಾಗಿ, ಆರ್ಥಿಕವಾಗಿ ಬಹಳ ಬಡವರು. ಅದರ ಜೊತೆಗೆ ದಲಿತರ ಸಾಂಸ್ಕೃತಿಕ ಭಾಷೆ ಬೇರೆ, ಸಾಮಾಜಿಕ ಭಾಷೆ ಬೇರೆ. ನನ್ನ ಅಭಿಪ್ರಾಯದಲ್ಲಿ ಸಾಂಸ್ಕೃತಿಕ ಭಾಷೆಯನ್ನು ಒಬ್ಬ ಭಾಷಾ ವಿಜ್ಞಾನಿ ಪ್ರವೇಶ ಮಾಡಿದಾಗ ಬೇರೆ ರೀತಿಯಲ್ಲಿ ವ್ಯಾಖ್ಯಾನಿಸುತ್ತಾ ಹೋಗುತ್ತಾನೆ. ಅದೇ ಸಂಸ್ಕೃತಿ ಭಾಷೆಯನ್ನು ಸಾಂಸ್ಕೃತಿಕ ವಲಯವನ್ನು ಒಬ್ಬ ಸಂಸ್ಕೃತಿ ಚಿಂತಕ ಬೇರೆ ರೀತಿಯಲ್ಲಿ ಕಂಡುಕೊಳ್ಳುತ್ತಾ ಹೋಗುತ್ತಾನೆ. ಸಾಹಿತ್ಯಕ ವಿಮರ್ಶಕನಂತೂ ಅವರ ಸಾಂಸ್ಕೃತಿಕ ಭಾಷೆಯನ್ನು ಒಂದು ದೊಡ್ಡ ಮ್ಯೂಸಿಯಂನಂತೆ ನೋಡುತ್ತಾನೆ. ಹೀಗೆ ಒಂದು ರೀತಿಯಲ್ಲಿ ಬಹಳ ಶ್ರೀಮಂತ ಅನಿಸಿಕೊಳ್ಳುವ ದಲಿತರ ಸಾಂಸ್ಕೃತಿಕ ಜಗತ್ತನ್ನು ನಾವು ಹೇಗೆ ನೋಡುತ್ತೇವೆ ಅನ್ನುವುದು ಬಹಳ ಮುಖ್ಯ. ಯಾಕೆಂದರೆ ಸಾಂಸ್ಕೃತಿಕವಾಗಿ ಶ್ರೀಮಂತರಾಗಿರುವ ದಲಿತರು ಸಾಮಾಜಿಕವಾಗಿ, ಆರ್ಥಿಕವಾಗಿ ಬಡವರಾಗಿರುವಾಗ ಅನೇಕರಿಗೆ ಅವರ ಸಾಂಸ್ಕೃತಿಕ ಸ್ಥಗಿತ ವಿನ್ಯಾಸಗಳು ಬಹಳ ಸಂತೋಷ ನೀಡುತ್ತಾ ಇರುತ್ತವೆ. ಅಂದರೆ ದಲಿತರಲ್ಲಿ ಎಂತಹ ಆಚರಣೆಗಳಿವೆ, ಅಲ್ಲಿ ಯಾವ ರೀತಿಯ ಹಬ್ಬ ಹರಿದಿನಗಳಿವೆ. ಅವರು ಬಳಸುವ ಭಾಷೆ ಯಾವ ರೀತಿ ಇದೆ, ಅಲ್ಲಿ ಎಂತಹ ನೆಲದ ಸಂಸ್ಕೃತಿ ಇದೆ ಅಂತ ಹೇಳುತ್ತಾ, ಹೇಳುತ್ತಾ ಅದರ ಚಲನಶೀಲತೆಗಿಂತ ಹೆಚ್ಚಾಗಿ ಈಗಾಗಲೇ ಸ್ಥಗಿತಗೊಂಡಿರುವ ದಲಿತರ ಸಂಪ್ರದಾಯಗಳು ಮತ್ತು ದಲಿತರ ಸಾಂಸ್ಕೃತಿಕ ವಿನ್ಯಾಸಗಳನ್ನು ಕುರಿತು ಯಾರು ಬಹಳ ಸಂಭ್ರಮಿಸುತ್ತಿರುತ್ತಾರೋ ಅವರು ಅದೇ ದಲಿತರ ಸಾಮಾಜಿಕ ಭಾಷೆಯನ್ನ ಕುರಿತು ಸಂಭ್ರಮಿಸುವುದಿಲ್ಲ. ಯಾಕೆಂದರೆ ದಲಿತರಿಗೆ ಒಂದು ಸಾಮಾಜಿಕವಾದ ಚಲನಶೀಲವಾಗಿ ಭಾಷೆ ಬರುವಂತಹ ಸಂದರ್ಭದಲ್ಲಿ ಯಾರು ಸಾಂಸ್ಕೃತಿಕವಾಗಿ ಸಂತೋಷಪಟ್ಟಿರುತ್ತಾರೋ ಅವರಿಗೆ ಅಸಂತೋಷ ಆಗುವುದುಂಟು. ಅಂದರೆ ಇವೆರಡರ ನಡುವಿನ ವ್ಯತ್ಯಾಸ ಏನೆಂದರೆ ಈ ತರಹ ಆಚರಣೆಗಳು ಒಟ್ಟು ಸಾಂಸ್ಕೃತಿಕ ವ್ಯತ್ಯಾಸಗಳನ್ನು ದೂರನಿಂತು ಒಂದು ಮ್ಯೂಸಿಯಂ ರೀತಿಯಲ್ಲಿ ನೋಡುವಂತಹ ಜನ ಯಾರಿದ್ದಾರೆ ಅವರು ಸ್ಥಗಿತ ವಿನ್ಯಾಸಗಳಲ್ಲಿ ಸಂತೋಷ ಪಡುತ್ತಾ ಹೋಗುತ್ತಾರೆ. ಎಷ್ಟು ಚೆನ್ನಾಗಿದೆ ಅಂತ ಹೇಳುತ್ತಾ ಹೋಗುತ್ತಾರೆ. ಆದ್ರೆ ಅದೇ ದಲಿತರು ಅವನ್ನು ಮೀರಿದ ಇನ್ನೊಂದು ಭಾಷೆಯನ್ನು ಕಲಿಯುತ್ತಾ ಹೋಗ್ತಾರೆ. ಸಾಮಾಜಿಕವಾಗಿ, ಆರ್ಥಿಕವಾಗಿ ಚಲನಶೀಲರಾಗುತ್ತಾರೆ. ಪ್ರಜಾಪ್ರಭುತ್ವದ ಸಂದರ್‍ಭದ ಒಳಗಡೆ ಬದಲಾವಣೆಗಳು ಅವುಗಳ ಜೊತೆಯಲ್ಲಿ ಹೋಗಲು ಶುರುವಾದಾಗ ಅವರ ಭಾಷೆ ಬದಲಾಗುತ್ತದೆ. ಅವರ ಒಟ್ಟು ಬದುಕಿನ ವಿನ್ಯಾಸಗಳು ಸ್ವಲ್ಪ ಚಲನಶೀಲವಾಗುತ್ತಾ ಹೋಗುತ್ತವೆ. ಅಲ್ಲಿಯವರೆಗೆ ಇದ್ದ ಸಾಮಾಜಿಕ, ಆರ್ಥಿಕ ವ್ಯವಸ್ಥೆಗೆ ಒಂದು ಏಟು ಕೊಡುತ್ತಾರೆ, ಅದಕ್ಕೆ ಮುಖಾಮುಖಿಯಾಗುತ್ತಾರೆ, ಎದುರಾಗುತ್ತಾರೆ. ಆಗ ಯಾರು ಸಾಂಸ್ಕೃತಿಕ ವಿನ್ಯಾಸಗಳನ್ನು ಕುರಿತು ಸಂತೋಷ ಪಟ್ಟಿದ್ದರೋ ಅವರೆಲ್ಲ ಇವರ ಸಾಮಾಜಿಕ ಚಲನಶೀಲತೆಗೆ ಸಂತೋಷ ಪಡುತ್ತಾರೆ ಅನ್ನುವ ನಂಬಿಕೆ ಇರುವುದಿಲ್ಲ. ಇಂತಹದೊಂದು ವಿಪರ್ಯಾಸದ ನಡುವೆ ದಲಿತರ ಬದುಕು ಮತ್ತು ಸಮಾಜ ಮುಂದುವರಿಯುತ್ತಾ ಇದೆ. ಯಾಕಂದರೆ ದಲಿತರನ್ನು ಸಾಂಸ್ಕೃತಿಕವಾಗಿ ನೋಡಿ ಸಂಭ್ರಮಿಸುವವರ ಮನಸ್ಥಿತಿ ಯಾವುದು ಅನ್ನುವುದು ಕೂಡ ಬಹಳ ಮುಖ್ಯ. ಹಾಗಾಗಿ ಎಷ್ಟೋ ಸಂದರ್ಭಗಳಲ್ಲಿ ನಾವು ಸಂಸ್ಕೃತಿಯ ಹೆಸರಿನ ಒಳಗಡೆ ಜಡ ವಿನ್ಯಾಸಗಳನ್ನು ವೈಭವೀಕರಿಸುತ್ತಾ ಹೋಗುತ್ತೇವೆ. ಅವು ಅಧ್ಯಯನ ಯೋಗ್ಯವಾಗಿರುವ ರೂಪಗಳು, ಅಧ್ಯಯನ ಯೋಗ್ಯವಾಗಿರುವ ವಿನ್ಯಾಸಗಳು ಅಂತ ಅಷ್ಟೇ ಗ್ರಹಿಸೋದು ಬೇರೆ. ಅಷ್ಟು ಗ್ರಹಿಸುವುದರ ಮಟ್ಟಿಗೆ ಅದು ಆರೋಗ್ಯಕರವಾದುದು. ಆದರೆ ಅದೇ ಅಂತಿಮವಾದ ಸತ್ಯಗಳು ಅಂತ ನೀವು ಹೇಳುವುದಾದರೆ ದಲಿತರು ಬದಲಾಗಬೇಡಿ ಅಂತ ನೀವು ಇನ್ನೊಂದು ರೀತಿಯಲ್ಲಿ ಹೇಳಿದ ಹಾಗಿರುತ್ತೆ. ಇದೇ ಸತ್ಯ, ಇದು ಬಹಳ ಸೊಗಸಾಗಿದೆ. ಅವರ ಈ ಸಂಸ್ಕೃತಿಯನ್ನು ನೀವು ನಾಶ ಮಾಡಬೇಡಿ ಅಂತಂದ್ರೆ; ತಮಟೆ ಬಡಿಯೋರು ತಮಟೇನೇ ಬಡೀತಾ ಇರಿ, ಚಪ್ಲಿ ಹೊಲಿಯೋರು ಚಪ್ಲಿ ಹೊಲೀತಾ ಇರಿ ಅಂತ. ಸಂಸ್ಕೃತಿಯ ಹೆಸರಿನಲ್ಲಿ ದಲಿತ ದ್ವೀಪಗಳನ್ನು ಸೃಷ್ಟಿ ಮಾಡುವುದು ಕೂಡ ಸಂಸ್ಕೃತಿಯ ಅಧ್ಯಯನ ದೃಷ್ಟಿಯಿಂದ ಹೇಗನ್ನಿಸಬಹುದೋ, ಆದರೆ ಸಾಮಾಜಿಕವಾಗಿ ಬಹಳ ಅಪಾಯಕಾರಿಯಾದುದು. ದಲಿತ ದ್ವೀಪಗಳನ್ನು ದಾಟುವುದರ ಮುಖಾಂತರವಾಗಿಯೇ ಹೊಸದೊಂದು ಶಾಖೆ ನಮ್ಮ ಸಮಾಜದಲ್ಲಿ ಸೃಷ್ಟಿಯಾಗುವುದಕ್ಕೆ ಸಾಧ್ಯ ಇರುತ್ತದೆ. ಅಂದರೆ ಒಂದು ಅಧ್ಯಯನ ಯೋಗ್ಯವಾದುದರ ಬಗ್ಗೆ ಗಮನಿಸೋದು ಬೇರೆ. ಅದರಾಚೆಗೆ ಅವರು ದಾಟಬೇಕೆನ್ನುವ ಆಶಯವನ್ನು ಅಂತರಂಗದಲ್ಲಿ ಅಂತಃಶಕ್ತಿಯಾಗಿ ಇಟ್ಟುಕೊಳ್ಳುವುದು ಬೇರೆ. ಹಾಗಾಗಿ ನನಗೆ ದಲಿತರ ಸಮಾಜದೊಳಗಡೆ ಬಹಳ ಸೃಜನಶೀಲವಾದ ಸಾಂಸ್ಕೃತಿಕವಾದ ವಿವರಗಳು ಮತ್ತು ವಿನ್ಯಾಸಗಳು ಸಾಮಾಜಿಕ ರೂಪಕಗಳಾದಾಗ ಹೆಚ್ಚು ಸೃಜನಶೀಲವಾಗಿ ಕಾಣಿಸುತ್ತವೆ. ದಲಿತರೊಳಗಡೆ ಈ ಸಾಂಸ್ಕೃತಿಕ ವಿವರಗಳು ಮತ್ತು ವಿನ್ಯಾಸಗಳು ಏನಿವೆ ಅವು ಹಾಗೇ ಇರುವುದಿಲ್ಲ. ಸಂಸ್ಕೃತಿಯ ವಿನ್ಯಾಸಗಳಾಗಿರುವುದು ಅಷ್ಟೇ ಅಲ್ಲ, ಈ ಚಲನಶೀಲವಾದಂತಹ ಸಾಮಾಜಿಕ ರೂಪಕಗಳಾಗಿ ಬಳಕೆಯಾಗುತ್ತಾ ಹೋದಾಗ ಅದು ನಿಜವಾಗಿ ನಮ್ಮ ಸಂಸ್ಕೃತಿಯನ್ನೂ ವಿಸ್ತರಿಸುತ್ತ ಹೋಗುತ್ತದೆ ಮತ್ತು ಸಾಹಿತ್ಯ ಇತ್ಯಾದಿಗಳ ಕಲ್ಪನೆಯನ್ನ ವಿಸ್ತರಿಸುತ್ತ ಹೋಗುತ್ತದೆ. ಹಾಗಾಗಿ ದಲಿತರ ಸಂಸ್ಕೃತಿಯ ಈ ವಿವರ ಮತ್ತು ವಿನ್ಯಾಸಗಳು ಸಾಮಾಜಿಕ ರೂಪಕಗಳಾಗಿ ರೂಪಾಂತರ ಅಥವಾ ಪರಿವರ್ತನೆ ಹೊಂದುವಂತಹ ಸೃಷ್ಟಿಶೀಲತೆ ಇದೆಯಲ್ಲ, ಅದು ನಮ್ಮಲ್ಲಿರುವ ಗೆರೆಗಳನ್ನು ಮತ್ತಷ್ಟು ವಿಸ್ತರಿಸುತ್ತಾ ಹೋಗುತ್ತವೆ ಮತ್ತು ಆ ಮೂಲಕ ಈ ದ್ವೀಪಗಳನ್ನು ದಾಟುತ್ತಾ ಹೋಗುತ್ತವೆ.

ಈ ದಲಿತರ ಭಾಷೆಯನ್ನು ಕುರಿತು ಮಾತನಾಡುವಾಗ ನನಗನಿಸುತ್ತದೆ, ದಲಿತರಲ್ಲಿ ಒಂದು ಆಡುವ ಭಾಷೆ ಇದೆ. ಇನ್ನೊಂದು ಹಸಿವಿನ ಭಾಷೆ ಇದೆ. ಆದರೆ ಇವೆರಡನ್ನೂ ಆಳುವ ಭಾಷೆ ಒಂದು ಇರುತ್ತೆ. ನೀವು ಆಳುವ ಭಾಷೆಯ ಜಾಗದಲ್ಲಿ ನಿಂತಾಗ, ದಲಿತರ ಭಾಷೆಯಲ್ಲಿ ವ್ಯಾಕರಣ ಇಲ್ಲ. ಅದು ಶುದ್ಧ ಇಲ್ಲ, ‘ಶ’ಕಾರ ಬರಲ್ಲ, ಅಲ್ಪಪ್ರಾಣ ಇಲ್ಲ, ಮಹಾಪ್ರಾಣ ಇಲ್ಲ, ದಲಿತರಷ್ಟೇ ಅಲ್ಲ ಎಲ್ಲರಿಗೂ ಹೇಳುತ್ತಾ ಹೋಗುತ್ತಾರೆ ಇದನ್ನ. ಅಲ್ಪಪ್ರಾಣ, ಮಹಾ ಪ್ರಾಣಗಳನ್ನ ಹುಡುಕುತ್ತಾ ಹುಡುಕುತ್ತಾ ಭಾಷೆಯ ಪ್ರಾಣಶಕ್ತಿಯನ್ನೇ ಅನೇಕ ಸಂದರ್ಭಗಳಲ್ಲಿ ಹಾಳು ಮಾಡುವವರಿದ್ದಾರೆ. ಅಂದರೆ ಒಂದು ಕೀಳರಿಮೆಯನ್ನು ಉಂಟು ಮಾಡುವುದು, ಅವರ ಪ್ರಾಣಶಕ್ತಿಯನ್ನೇ ನಾಶ ಮಾಡುವುದು ಒಂದು ಕಡೆ ನಡೆಯುತ್ತಾ ಇರುತ್ತದೆ. ಅದು ಆಳುವ ಭಾಷೆಯ ನೆಲೆಯಲ್ಲಿ ನಿಂತು ನೋಡುವಂತಹದ್ದು. ದಲಿತರು ಆಡುವ ಭಾಷೆ ದಲಿತರ ಹಸಿವಿನ ಭಾಷೆ. ಈ ಭಾಷೆಯಲ್ಲಿ ವ್ಯಾಕರಣವನ್ನು ಹುಡುಕಬೇಕಾಗಿಲ್ಲ. ಅದಕ್ಕೆ ಅದರದೇ ಆದ ಸಾಂಸ್ಕೃತಿಕ ನೆಲೆ ಇದೆ. ದಲಿತರ ಹಸಿವಿನ ಭಾಷೆಯನ್ನ ಅರ್ಥ ಮಾಡಿಕೊಂಡರೆ ನಮ್ಮ ಭಾಷಾ ಹೋರಾಟಗಳಿಗೆ ಒಂದು ಹೊಸ ಆಯಾಮ ಬರುತ್ತದೆ. ಈ ಸಂದರ್ಭದಲ್ಲಿ ನಾನು ಇದನ್ನು ಮುಖ್ಯವಾಗಿ ಹೇಳಬೇಕು. ನಮ್ಮ ಭಾಷಾ ಹೋರಾಟಗಳು ಇವತ್ತು ದಲಿತರ ಅಥವಾ ಒಟ್ಟು ಬಡವರ ಹಸಿವಿನ ಭಾಷೆಯನ್ನು ಅರ್ಥಮಾಡಿಕೊಂಡಿಲ್ಲ. ಅವರ ಹಸಿವಿನ ಭಾಷೆಯನ್ನ ಅರ್ಥ ಮಾಡಿಕೊಂಡ ಕೂಡಲೆ ಭಾಷಾ ಹೋರಾಟಗಳು ಸಾಮಾಜಿಕವಾಗುತ್ತವೆ. ಭಾಷಾ ಹೋರಾಟ ಸಾಮಾಜಿಕ ಚಳುವಳಿ ಆಗುತ್ತದೆ ಭಾಷಾ ಚಳುವಳಿ ಸಾಮಾಜಿಕ ಚಳುವಳಿ ಆಗಬೇಕಾದರೆ ಭಾಷಾ ಚಳುವಳಿ ಈ ಹಸಿವಿನ ಭಾಷೆಯನ್ನು ಅರ್ಥಮಾಡಿಕೊಳ್ಳಬೇಕು. ಆದರೆ ವಿಚಿತ್ರ ಏನೆಂದರೆ ಕನ್ನಡದಂತಹ ದೇಶ ಭಾಷೆಗಳನ್ನು ಉಳಿಸಿರೋದು ದಲಿತಾದಿ ದುರ್ಬಲ ವರ್ಗದವರು. ಆದರೆ ಭಾಷಾನೀತಿ ಹೇಗಿರಬೇಕು ಅಂತ ಹೇಳುವವರು ಸಾಮಾನ್ಯವಾಗಿ ಪ್ರಬಲ ವರ್ಗದವರು. ಈ ಒಂದು ವೈರುಧ್ಯದ ನಡುವೆ ನಮ್ಮ ಭಾಷಾ ಚಿಂತನೆಗಳು, ಭಾಷಾ ಚಳುವಳಿಗಳು ಬಹಳ ಸಂಕಟವನ್ನು ಅನುಭವಿಸುತ್ತಿವೆ. ಇವತ್ತು ಎಲ್ಲಿ ಕನ್ನಡ ಉಳಿದಿದೆ ಅಂದ್ರೆ ಹಳ್ಳಿಗಳಲ್ಲಿ ಉಳಿದಿದೆ ಎಂದು ನಾವು ಹೇಳುತ್ತಾ ಇರುತ್ತೇವೆ. ಹಿಂದುಳಿದವರಲ್ಲಿ, ದಲಿತರಲ್ಲಿ, ಬಡವರಲ್ಲಿ ಕನ್ನಡ ಉಳಿದಿದೆ ಎಂಬ ಮಾತನ್ನು ಸಾಮಾನ್ಯವಾಗಿ ನಾವು ಹೇಳುತ್ತಾ ಇರುತ್ತೇವೆ. ಅದು ನಿಜವೂ ಹೌದು. ಅಂದರೆ ಒಂದು ದೇಶಭಾಷೆಯ ವಿವಿಧ ಪ್ರಭೇದಗಳನ್ನು ಒಳಗೊಂಡಂತೆ ಒಟ್ಟು ಆ ಭಾಷೆಯ ಪ್ರಾಣಶಕ್ತಿಯನ್ನು ಉಳಿಸಿರುವವರು ದಲಿತಾದಿ ದುರ್ಬಲ ವರ್ಗದವರು. ಆದರೆ ಭಾಷೆ ಹೇಗಿರಬೇಕು, ಹೇಗೆ ಬಳಸಬೇಕು, ಏನಾಗಬೇಕು, ಶಿಕ್ಷಣದಲ್ಲಿ ಭಾಷೆಯ ನೀತಿ ನಿರೂಪಣೆ ಮಾಡುವವರು ಮತ್ತು ನೀತಿಯನ್ನು ಹೇಳುವವರು ಮತ್ತು ಹೇರುವವರು ಪ್ರಬಲ ವರ್ಗಗಳು. ಇದರ ನಡುವೆ ನಿಜವಾದ ಅರ್ಥದ ಭಾಷಾ ಚಳುವಳಿಯೊಂದು ಕರ್ನಾಟಕದಲ್ಲಿ ಅಂದರೆ ಹಸಿವಿನ ಭಾಷೆಯನ್ನ ಅರ್ಥ ಮಾಡಿಕೊಂಡ ಜನರ ನೆಲೆಯಿಂದ ಭಾಷೆಯನ್ನು ನೋಡುವ ಒಂದು ಚಳುವಳಿ ರೂಪುಗೊಳ್ಳಲು ಇನ್ನೂ ಸಾಧ್ಯವಾಗಿಲ್ಲ. ಇಂತಹದೊಂದು ವಿರೋಧಾಭಾಸದ ನಡುವೆ ನಾವು ನಿಂತಿದ್ದೇವೆ. ಅದರಿಂದ ದಲಿತಾದಿ ದುರ್ಬಲ ವರ್ಗಗಳ ಆಶೋತ್ತರಗಳನ್ನು ಅಂತರ್ಗತ ಮಾಡಿಕೊಂಡ ಒಂದು ಭಾಷಾ ಚಿಂತನೆ ಮತ್ತು ಭಾಷಾ ಹೋರಾಟ ಬಹಳ ಮುಖ್ಯವಾದದ್ದು. ಅದು ಆಗದೇ ಇದ್ದರೆ ಏನಾಗುತ್ತದೆ ಅಂದರೆ ಯಾರು ಹೆಚ್ಚು ಹೀರೋ ಆಗಬೇಕು ಅನ್ನೋದರಲ್ಲಿ ನಮ್ಮ ಸ್ಪರ್ಧೆ ನಡೆಯುತ್ತದೆ. ಇತ್ತೀಚೆಗೆ ನಾವು ಗಮನಿಸುತ್ತಾ ಇದ್ದೇವೆ ಅವರಿಗಿಂತ ನಾನು ದೊಡ್ಡ ಹೀರೋ ಆಗಬೇಕು ಅಂತ ಕನ್ನಡದ ಹೆಸರಿನಲ್ಲಿ ಒಂದು ರೀತಿಯ ಹೀರೋ ರೇಸ್ ನಡೆಯುತ್ತಾ ಇದೆ. ಇದು ಯಾಕೆ ಹೀಗಾಗುತ್ತೆ ಅಂದರೆ ಭಾಷೆ ಮತ್ತು ಬದುಕು ಇವೆರಡನ್ನು ಒಟ್ಟಿಗೆ ಗ್ರಹಿಸುವ ಒಂದು ಸಾಮಾನ್ಯ ಚಿಂತನೆಯನ್ನು ಸಹ ನಮ್ಮಲ್ಲಿ ಅನೇಕರು ತೋರಿಸುತ್ತಾ ಇರೋದಿಲ್ಲ. ಭಾಷೆ ಮತ್ತು ಬದುಕು ಎರಡನ್ನೂ ಒಟ್ಟಿಗೆ ಗ್ರಹಿಸುವ ಒಂದು ಚಳುವಳಿಯ ತಾತ್ವಿಕತೆ ಬರೋಕೆ ಆಗುತ್ತಾ ಇಲ್ಲ. ಹಾಗಾಗಿ ಇಂತಹದೊಂದು ದಲಿತರು, ಭಾಷೆ, ಸಮಾಜವನ್ನು ಕುರಿತು ಚಿಂತನೆ ಮಾಡುವಂತಹ ಸಂದರ್‍ಭದಲ್ಲಿ ನನಗೆ ಅನ್ನಿಸುವುದು, ಕೇವಲ ಭಾಷಾ ವಿಜ್ಞಾನದ ಪ್ರಶ್ನೆ ಅಲ್ಲ ಅದು. ಆಗಲೇ ಹೇಳಿದ ಹಾಗೆ ದಲಿತರ ಸಾಂಸ್ಕೃತಿಕ ಲೋಕವೊಂದು ಸಾಮಾಜಿಕ ರೂಪಕವಾಗುತ್ತಾ ಚಲನಶೀಲತೆಯನ್ನು ತರಬೇಕಾಗಿರುವ ಒಂದು ಮುಖ್ಯವಾದ ಸಂಗತಿಯೂ ಹೌದು. ಹಸಿವಿನ ಭಾಷೆಯನ್ನು ಹೋರಾಟದ ಅಂತಃಶಕ್ತಿಯಾಗಿ ಪಡೆಯಬೇಕಾಗಿರುವ ಒಂದು ಸಂದರ್ಭದ ಚರ್ಚೆ ಇದು. ಅಂತಹ ಚರ್ಚೆಗಳ ಮುಖಾಂತರ ನಮ್ಮ ಭಾಷೆಯ ಚಿಂತನೆ, ಹೋರಾಟದ ಕ್ರಿಯೆ ಇವುಗಳಿಗೆ ಹೊಸ ಆಯಾಮ ಬರುವುದಾದರೆ ಇದು ನಿಜವಾದ ಅರ್ಥದಲ್ಲಿ ಒಂದು ಹೋರಾಟ ಮತ್ತು ಚಿಂತನೆ ಅಥವಾ ಚಿಂತನೆ ಮತ್ತು ಕ್ರಿಯಾಶೀಲತೆ ಎರಡೂ ಆಗುತ್ತದೆ. ಅಂತಹ ಚಲನಶೀಲತೆಗಾಗಿ ಇಂತಹ ಚರ್ಚೆಗಳು ಪೂರಕವಾಗುತ್ತಾ ಹೋಗಲಿ ಎಂದು ಹಾರೈಸಿ ನನ್ನ ಮಾತು ಮುಗಿಸುತ್ತೇನೆ. ನಮಸ್ಕಾರ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೦೨
Next post ಒಗ್ಗಟ್ಟು

ಸಣ್ಣ ಕತೆ

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

cheap jordans|wholesale air max|wholesale jordans|wholesale jewelry|wholesale jerseys