ಖಾನಾವಳಿಗಳು

ಖಾನಾವಳಿಗಳು

ಇದೋ ನಿಮಗೆ ಸುಸ್ವಾಗತ. ನೀವು ಈ ಊರಿಗೆ ಹೊಸಬರೇ ಸಾರ್. ನಿಮ್ಮ ಮುಖವೇ ಹೇಳುತ್ತಿದೆ-ನೀವು ಇಲ್ಲಿಯವರಲ್ಲವೆಂದು. ನಿಮ್ಮ ಮೊಗದಲ್ಲಿಯ ವಿಚಿತ್ರ ಕಳೆ ಇಲ್ಲಿಯ ಕಾಣಿಕೆಯಲ್ಲ. ಪ್ರವಾಸದಲ್ಲಿ ಮೊಗ ಬಾಡಿದೆಯಲ್ಲ… ಮುಖಕ್ಕೆಲ್ಲ ಧೂಳು-ಧೂಳು. ಈ ಹೋಲ್ಡಾಲ್ ತಮ್ಮದೇ ಏನು ಸಾರ್… ಎಷ್ಟುಭಾರವಿದೆ… ಏನಾದರೂ ಲಿಕರ್ ಉಂಟಾ… ಛೀ ಥೂ… ತಪ್ಪಾಯಿತು ಸಾರ್. ಇದೊಂದು ಬಾರಿ ಕ್ಷಮಿಸಿಬಿಡಿ… ನೀವು ಏನನ್ನೋ ಚಿಂತಿಸುವಂತಿದೆಯಲ್ಲ…. ಹಾಗೆಲ್ಲ ಮಾಡಬಾರದು ಸಾರ್… ಎಲ್ಲಿಗೆ ಹೋಗಬೇಕೆಂದು ತರ್‍ಕ ಮಾಡುತ್ತಿದ್ದೀರಲ್ಲ. ಈ ಊರಲ್ಲಿ ನೆಂಟರು ಉಂಟಾ… ಈಗಿನ ಕಾಲದಲ್ಲಿ ಎಲ್ಲಿಯ ನೆಂಟಸ್ತಿಕೆ… ಎಲ್ಲ ಬಾಯ್ಮಾತು. ಹೊಟೇಲು ಯಾವುದು ಚೆನ್ನಾಗಿದೆ ಎನ್ನುತ್ತೀರಾ…. ಏನು ಸಾರ್ ಇಂಥ ಊರಲ್ಲಿ ಚೆನ್ನಾದ ಹೊಟೇಲುಗಳಿಲ್ಲವೇ… ಇದೋ ಇಲ್ಲಿಯೇ ಕಾಣುತ್ತಿದೆಯಲ್ಲ… ಆನಂದ ನಿವಾಸ… ಮೂರಂತಸ್ತಿನ ಬಿಲ್ಡಿಂಗು ಸಾರ್. ಅವರೂ ಉಡುಪಿಯವರೇ…. ಸುಗ್ರಾಸ ಭೋಜನ, ಸೂಗಸಾದ ರೂಮು, ಸುಖವಾದ ಗಾಳಿ, ಇಷ್ಟು ಸೂಗಸಾಗಿದೆಯಲ್ಲ-ಹಂಡಿರು ಮಕ್ಕಳ ಜಂಜಾಟದಿಂದ, ಆಫೀಸು ಫೈಲುಗಳ ಧೂಳಿಯಿಂದ, ಮೇಲಧಿಕಾರಿಗಳ ಬೂಟಿನ ಒದಿಕೆಯಿಂದ ನಿತ್ಯದ ಕರ್‍ತವ್ಯದ ಬರಡು ಜೀವನದಿಂದ ಪಾರಾಗಿ ಚೆನ್ನಾದ ಉಸಿರನ್ನು ಎಳೆಯಬಂದ ಆಫೀಸರರು ತಳವೇ ಕಿತ್ತುವದಿಲ್ಲ. ಇನ್ನು ಊರ ಒಳಭಾಗದಲ್ಲಿ ಬೇಕಾದಷ್ಟು ಇವೆ. ಮಾಡ್ರನ್ ಕೆಫೆ, ರಾಮ ಭವನ, ಹನುಮ ನಿವಾಸ, ಭೀಮಸದನ, ಶಾಂತಿನಿಲಯ… ಒಂದೂಂದಕ್ಕೆ ಒಂದೊಂದು ವೈಶಿಷ್ಟ್ಯ. ಹೂಂ ಬೇಗಾ ಹೇಳಿ… ಈ ನಡುರಾತ್ರಿಯಲ್ಲಿ ನೀವು ಅನುಮಾನಿಸುತ್ತ ನಿಲ್ಲಬಾರದು.

ಮೂರು ವರ್ಷಗಳ ಹಿಂದೆ ನಾನು ನೌಕರಿಯ ಭಿಕ್ಷಾಪಾತ್ರೆಯನ್ನು ಎತ್ತಿ ಒಂದು ಮಹಾಪಟ್ಟಣದ ಸ್ಪೇಶನ್ನಿನಲ್ಲಿ ಇಳಿಯುವಾಗ ವಾಚಾಳಿ ಸಹಪ್ರಯಾಣಿಕರು ನುಡಿದ ಮಾತುಗಳಿವು. ಪರಭಾಷೆ, ಅರಿಯದ ಜನ, ತನ್ನವನೆಂದು ಅಪ್ಪಿಕೊಳ್ಳುವ ಪರಿಸರ. ಹಳ್ಳಿಯ ಮುಗ್ದ ವಾತಾವರಣದಲ್ಲಿ ಬೆಳೆದು ಪಟ್ಟಣದ ಕಾಲೇಜುಗಳಲ್ಲಿ ವರ್‍ಷಾನುಗಟ್ಟಲೇ ಇದ್ದರೂ ಹಳ್ಳಿಯ ಮರಹುಂಬನಾಗಿಯೇ ಉಳಿದಂತಹ ವ್ಯಕ್ತಿ ನಾನು. ಸಹಜವಾಗಿಯೇ ನಾಲ್ಕು ಜನರ ಮೇಲೆ ಪ್ರಭಾವ ಬೀರುವ ವ್ಯಕ್ತಿತ್ವವಾಗಲಿ, ವಾಚಾಳಿತನವಾಗಲಿ ಇಲ್ಲದಿರುವ ನಾನು ಈ ಹೊಸ ಜೀವನಕ್ಕೆ ಹೇಗೆ ಒಗ್ಗಿಕೊಳ್ಳಬಹುದು ಎಂದು ಮನದಲ್ಲಿಯೇ ಗುಣಗುಣಿಸುತ್ತಿದ್ದೆ. ಯಾವುದೋ ಸ್ಟೇಶನ್ನು…. ಕರ್‍ನಾಟಕ ಮಹಾರಾಷ್ಟ್ರಗಳ ಗಡಿ… ಅಲ್ಲಿ ಸಿಗುವ ಕನ್ನಡ ದಿನಪತ್ರಿಕೆಯೊಂದನ್ನು ಕೂಂಡೆ. ಒಂದೆರಡು ನಿಮಿಷ ಪುಟದ ಮೇಲೆಲ್ಲ ಕಣ್ಣೋಡಿಸಿದಾಗ-ಮಂತ್ರಿವರ್‍ಯರ ನೀರಸ ಭಾಷಣಗಳು, ವಿವಿಧ ಸಪ್ತಾಹಗಳ ವರದಿಗಳು, ನಮ್ಮ ಪ್ರಾಂತದ ಹೆಸರು ಕರ್ನಾಟಕವೇ ಆಗಬೇಕು ಎಂಬ ಹಳೆಯ ವಿಷಯದ ಮೇಲೆ ಹೊಸಬರೊಬ್ಬರು ಬರೆದ ಓಲೆ, ಪಿಡುಗಿನಂತೆ ಹಬ್ಬಿದ ಸಂಪು, ಪ್ರಸ್ ಕಲಸಗಾರರ ಮೇಲೂ ದಾಳಿಮಾಡಿದ್ದಕ್ಕಾಗಿ ನಾಳಿನ ಸಂಚಿಕೆ ಹೊರಡುವುದಿಲ್ಲ ಎಂದು ಸಂಪಾದಕರು ಬರೆದ ಟಿಪ್ಪಣಿ… ನೋಡಸಿಕ್ಕವು. ನಾಳೆಗೆ ಹೊರಡುವ ಸಂಚಿಕೆ ಇಂದೇಕೆ ಹೊರಟಿತು ಎಂದು ನನ್ನಷ್ಟಕ್ಕೆ ನಾನೇ ನಕ್ಕೆ. ಕೈಯಲ್ಲಿದ್ದ ಪತ್ರಿಕೆಯನ್ನು ತಿರಸ್ಕಾರದಿಂದ ಮುದುಡೆ ಮಾಡಿ ಹಿಡಿದು ಗಾಡಿಯ ನಿನಾದದ ಜೋಗುಳಪದಕ್ಕೆ ತೂಕಡಿಸುತ್ತ ಧ್ಯಾನಮಗ್ನನಾಗಿ ಕುಳಿತೆ…. ನಿಮಿಷ ನಿಮಿಷಗಳೂ ಸರಿದುಹೋದವು. ಭುಜ ಹಿಡಿದು ಆದಾರೋ ಆಲುಗಾಡಿಸಿದರು-ಇದಾರಪ್ಪ ಹೀಗೆ ಎಂದು ಕಣ್ತೆರೆದು ನೋಡಿದಾಗ ಒಳಗಿನ ಬಂಗಾರದ ಚೈನನ್ನು ಬಹಿರಂಗಪಡಿಸುತ್ತಿದ್ದ, ಕಪ್ಪ ಕನ್ನಡಕದ ವ್ಯಕ್ತಿಯೊಂದು ಕಣ್ಣಿಗೆ ಬಿತ್ತು. ‘ಸಾರ್, ಎಕ್ಸ್‍ಕ್ಯೂಸ್ಮಿ ಸಾರ್, ನೀವು ಕನ್ನಡಿಗರೆಂದು ತಿಳಿಯಿತು. ಅದಕ್ಕಾಗಿಯೇ ಪ್ರವಾಸದಲ್ಲಿ ನೀವು ಮಲಗಿದ್ದೀರಿ, (ಕನ್ನಡಿಗರು ಎಂದಾದರೂ ಎಚ್ಚತ್ತಿರುವದೂ ಉಂಟೆ?) ಕೈಯಲ್ಲಿಯ ಪೇಪರು ಕೂಂಚ ಕೊಡುತ್ತೀರಾ… ವಾರಭವಿಷ್ಠ ನೋಡಬೇಕು.’ ಈ ಪೇಪರಿನ ಕೊಡ-ತಕ್ಕೊಳ್ಳವ ವ್ಯವಹಾರದಲ್ಲಿ ನಮ್ಮ ಪ್ರಯಾಣದ ಸಂಬಂಧ ಬೆಳೆದುಬಂತು. ಅವರ ಕಥೆ ಹನುಮನ ಬಾಲದಂತೆ, ರಾಜಕಾರಣಿಗಳ ಭಾಷಣದಂತೆ ಬೆಳೆಯಿತು. ಕ್ಷೇಮ ಸಮಾಚಾರ, ಹವಾಮಾನ ವರದಿಯ ನಂತರ ನನಗೆ ಈ ರೀತಿ ಹೊಸ ಊರಿನ ಬೃಹತ್ ಸ್ವರೂಪವನ್ನು ಮಾಡಿಸಿದರು.

ಅಂತೂ ಸಹಪ್ರಯಾಣಿಕನ ಸೂಚನೆಯಂತೆ ‘ಆನಂದ ನಿವಾಸ’ದೆದುರು ಬಂದು ನಿಂತವು, ನನ್ನ ಹೋಲ್ಡಾಲು ಮತ್ತು ನಾನು ಎನ್ನುವ ಪ್ರಾಣಿ. ಇಲೆಕ್ಟ್ರ್‍ಇಕ್ ಬಲ್ಬಿನ ಬೆಳಕಿನಲ್ಲಿ ಮಿರಮಿರನೆ ಮಿಂಚುತ್ತಿದ್ದ, ಮ್ಯಾನೇಜರ್ ಎಂದು ಎನ್ನಿಸಿಕೊಳ್ಳುವ ವ್ಯಕ್ತಿಯ ಮುಂದೆ ಹಾಜರಾದೆ. ‘ತಮ್ಮದು ಯಾವೂರಾಯ್ತು’ ಎಂದೆನ್ನುವ ನುಡಿ ನನಗೆ ಅಪ್ಯಾಯಮಾನವಾಗಿ ತೋರಿತು. ಯಮಧರ್ಮರಾಯನ ಅಕೌಂಟ್ ಬುಕ್ಕಿನಷ್ಟು ಗಡುತರವಾದ ನೋಟಬುಕ್ಕನ್ನು ಬಹು ತಾಳ್ಮೆಯಿಂದ ನನ್ನ ಮುಂದೆ ಇರಿಸಲಾಯಿತು. ನನ್ನ ಚಹರೆಪಟ್ಟಿಯನ್ನೂ, ನಾಮ-ಅಂಕಿತಗಳನ್ನೂ, ಕುಲ-ಗೋತ್ರಗಳನ್ನೂ, ಹುಟ್ಟಿದ ಸ್ಥಳ, ಬರಬೇಕಾದ ಕಾರಣವನ್ನೂ, ಇರಬಹುದಾದ ದಿನಗಳ ಆಂದಾಜನ್ನೂ (ಭೂಮಿಯ ಮೇಲೆ ಇರಬಹುದಾದ ಆಲ್ಲ) ಸಿ.ಐ.ಡಿ. ಇನ್ಸ್‍ಪೆಕ್ಟರನು ಸಂಗ್ರಹಿಸಿಡುವಂತೆ ಬಹು ಎಚ್ಚರಿಕೆಯಿಂದ ಬರೆದದ್ದೂ ಆಯಿತು. ಸಿಂಗಲ್ ರೂಮಿನಲ್ಲಿ ಒಂದು ಕಾಟು ಇಂದೇ ಮುಂಜಾನೆ ತೆರವಾಗಿದೆಯೆಂದೂ ಆದು ಪೂರ್ತಿ ಒಳ್ಳೆಯ ಸ್ಥಿತಿಯಲ್ಲಿ ಇದೆಯೆಂದೂ, ಆ ರೂಮಿಗೆ ಸಿಂಗಲ್ ರೂಮಿಗಿಂತ ಬಹು ಕಡಿಮೆ ದರವಂದು ಒಂದೇ ಉಸುರಿನಲ್ಲಿ ಉಸುರಲಾಯಿತು. ನನಗೆ ಹಸಿವೂ, ಅದನ್ನು ಒಡ್ಡು ಮುರಿದು ಗಾಸಿಗೊಳಿಸುತ್ತಿರುವ ನಿದ್ರೆಯೂ ಹೆಚ್ಚಿಗೆ ವಿಚಾರ ಮಾಡಗೊಡಲಿಲ್ಲ. ಮಾಣಿಯೊಬ್ಬನು ನನ್ನ ಗಂಟು-ಗದಡಿಗಳನ್ನು ಹೊತ್ತ. ನನ್ನದೆಂದು ತಾತ್ಪೂರ್ತಿಕವಾಗಿ ಒಪ್ಪಿಕೊಂಡ ಕಾಟಿನ ಬುಡದಲ್ಲಿ ಕರುಣೆಯಿಲ್ಲದೆ ಒಗೆದನು. ಊಟದ ಮೊದಲೇ ಊಟದ ಟಿಕೆಟೊಂದನ್ನು ಕೊಂಡು, ಮುಖವನ್ನು ಎರಡು ಮೂರು ಬಾರಿ ತಿಕ್ಕಿ ತೊಳೆದು ಟಾವೆಲ್ಲಿನಿಂದ ಮುಖವನ್ನು ಒರೆಯಿಸಿಕೊಂಡು ಬಂದು ಕುಳಿತೆನು. ಅದೇನು ನಿದ್ರೆಯ ಪ್ರಭಾವವೊ ಪ್ರವಾಸಿಕನ ಬಣ್ಣದ ಮಾತುಗಾರಿಕೆಯ ಮಾಯಾಜಾಲವೊ… ಉಡುಪೀ ಸಾಂಬಾರಿನಲ್ಲಿ ಮುಳುಮುಳುಗಿ ತೇಲಿದೆ. ಇನ್ನು ಸಾಕು ಎಂದು ಬಾಯಲ್ಲ-ಕಣ್ಣು ತಮ್ಮಷ್ಟಕ್ಕೇ ತಾವೇ ಮುಚ್ಚುತ್ತಿರುವಾಗ, ಮಾಣಿಗಳು ಒಬ್ಬರನ್ನೂಬ್ಬರ ಮುಖವನ್ನು ನೋಡಿ ಪಿಸಿಪಿಸಿ ನಕ್ಕಾಗ ಆಂತೂ ಹೋಟೆಲ ರಾಮಾಯಣದ ಪ್ರಥಮ ಆಧ್ಯಾಯವನ್ನೇ ಮುಗಿಸಿ… ತೂಗಾಡುತ್ತಾ ನಡೆದು ಬಂದು ಹಾಸಿಗೆಯ ಮೇಲೆ ಒರಗಿದೆ. ಅಂದು ನಡೆಹೋದ ಘಟನೆಗಳನ್ನು ಮೆಲಕು ಹಾಕುತ್ತ ಇದ್ದಾಗಲೇ ನಿದ್ರಾದೇವಿಯ ವಶದಲ್ಲಿ ವಿರಾಜಮಾನನಾದೆ. ಗುಂಗಾಡುಗಳ ಸುಮಧುರ ಸಂಗೀತಕ್ಕೋ, ತಗಣಿಗಳ ಮುತ್ರಿನ ಸುರಿಮಳೆಗೋ, ಸಹಬಾಂಧವರ ಗೂರಕೆಯ ಗದ್ದಲಕ್ಕೋ, ನನ್ನ ಮಗ್ಗಲು ಕಾಟಿನ ಮೇಲೆ ಪವಡಿಸಿದ ಆಧುನಿಕ ತರುಣನ ಪ್ರೇಮ ಸಲ್ಲಾಪದ ಸ್ವಗತ ಭಾಷಣಕ್ಕೋ, ಗುಜರಾಥೀ ಸೇಠನ ಗುದಾಣದ ಹೊಟ್ಟೆಯ ಭಾರದಿಂದ ನರಳುವ ಪಲ್ಲಂಗಿನ ನರಳುವಿಕೆಗೋ, ಬೇರೆ ರೂಮಿನಲ್ಲಿ ನಡದಿರಬಹುದಾದ ಮಧ್ಯರಾತ್ರಿಯ ಹುಚ್ಚಾಟಗಳಿಗೋ-ಎಚ್ಚರವಾಯಿತು. ಎದ್ದುಕುಳಿತು ಸುತ್ತಲೆಲ್ಲ ದೃಷ್ಟಿ ಬೀರಿದೆ. ಐದಾರು-ಎಂಟು ಹತ್ತು ಸಹಬಾಂಧವರು ಅಸ್ತವ್ಯಸ್ತವಾಗಿ ಬಿದ್ದುಕೊಂಡಿದ್ದರು. ಒಬ್ಬನು ಜೊಲ್ಲು ಸೋರಿಸುತ್ತ ಬಿದ್ದುಕೊಂಡಿದ್ದರೆ-ಇನ್ನೊಬ್ಬ ತನ್ನ ಬೆರಳುಗಳನ್ನು ಎಣಿಸುತ್ತ ಬಿದ್ದುಕೊಂಡಿದ್ದ. ಇವರೆಲ್ಲ ಒಂದು ನಾಡಿನವರಲ್ಲ; ಭಾರತದ ವಿವಿಧ ಸಂಸ್ಕೃತಿಯ ಅಭಿರುಚಿಗಳ ಪ್ರತೀಕವಾಗಿದ್ದರು. ಅಲ್ಲಿ ಹಿರಿಯರ ಮಾತುಗಳಿಗೆ ಮಣಿಯದ ತಾರುಣ್ಯದ ಆರ್ಭಟೆಯೂ ಇತ್ತು. ವೃದ್ಧಾಪ್ಯದ ಅಸಪಾಯಕತೆಯ ಕನಿಕರಾವಸ್ಥಯೂ ಇತ್ತು. ಶ್ರೀಮಂತಿಕೆಯ ಆಟ್ಟಹಾಸವೂ ಇತ್ತು. ಆಧುನಿಕ ಜೀವನದ ಕೊಡುಗೆಯಾದ ನಿರುದ್ಯೋಗದ ದುರ್ಧರ ಪ್ರಸಂಗವೂ ಇತ್ತು. ಹಳ್ಳಿಯ ಸೌಕರ್ಯರಹಿತ ಬಣ್ಣವಿಹೀನ ಕಗ್ಗಾಡಿನಿಂದ ಬಂದು ಪಟ್ಟಣದ ಥಳಕು ಬೆಳಕಿಗೆ ಮರುಳಾದ ಹಳ್ಳಿಯ ಹುಂಬರೂ ಇದ್ದರು. ವಾಸಿಸಿಕೊಂಡಿರಲು ವಸತಿ ಸೌಂಕರ್ಯ ಕಾಣದ ಪಟ್ಟಣದ ನಿರಾಶಾವಾದಿಗಳೂ ಇದ್ದರು. ಇಲ್ಲಿ-ಇವೇ ರೂಮಿನಲ್ಲಿ ನಾಳಿನ ಉಜ್ಜಲತೆಗಾಗಿ ಕನಸಿನ ಸೌಧವನ್ನು ಕಟ್ಟಿದವರೂ ಇದ್ದರು. ಅದು ಸಾಬೂನು ಗುರುಳೆಯಂತೆ ಒಡೆದಾಗ ನಿಟ್ಟುಸಿರು ಬಿಟ್ಟವರೂ ಇದ್ದರು-“ಇದು ಸಂಕ್ಷಿಪ್ತ ವಿಶ್ವ ಕಣಾ” ಎಂದು ಅಂದುಕೊಂಡು ಮತ್ತೊಂದು ಮುಸುಕೆಳೆದೆ. ಎದ್ದಾಗ ಬೆಳಕು ಹರಡಿತ್ತು. ನನ್ನ ಮನದಲ್ಲೂ ಒಂದು ಬೆಳಗು ಹರಿದಿತ್ತು. ಖಾನಾವಳಿಯ ಬಗ್ಗೆ ನನ್ನಲ್ಲಿರುವ ಪೂರ್ವಗ್ರಹಿತ ಭಾವನೆಗಳೆಲ್ಲ ತೊಳೆದುಹೋಗಿದ್ದವು.

‘ಛೀ ಖಾನಾವಳಿಯ ಊಟವೇ’ ಎಂದು ಮೂಗು ಮುರಿಯುವವರೂ ಇದ್ದಾರೆ. ಅದೇಕೆ ನಾನೇ ಎಷ್ಟು ಸಲ ಮುರಿದಿಲ್ಲ? ನಾಲ್ಕು ಜನ ಸುಶಿಕ್ಷಿತರಿಗಾಗಿಯೇ ಮಾಡಿಸಿದ ಬಟ್ಟೆಯನ್ನು ಧರಿಸಿ ತೊಡೆಯ ಮೇಲೆ ತೊಡೆಯನ್ನು ಹೇರಿಕೊಂಡು ಕರವಸ್ತ್ರವನ್ನು ತಮ್ಮ ಪ್ಯಾಂಟಿನ ಮೇಲೆ ಹೊದಿಸಿ ಒಂದೊಂದು ತುತ್ತಿಗೂ ಖಾನಾವಳಿಯ ಊಟವನ್ನು ನಿಂದಿಸುತ್ತಿರುವದು ತೀರ ಸಾಮಾನ್ಯವಾಗಿಬಿಟ್ಟಿದೆ. ಅಥವಾ ಎಲ್ಲಿ ನಾಲ್ಕಾರು ಸುಶಿಕ್ಷಿತರು ಕೈಯಲ್ಲಿ ವೃತ್ತಪತ್ರಿಕೆಯನ್ನು ಹಿಡಿದು-ಊಟ ಮಾಡುತ್ತಿರುವಂತೆಯೇ ತಮ್ಮ ಬುದ್ದಿಮತ್ತೆಯನ್ನು ಪ್ರದರ್ಶನ ಮಾಡುವ ಮಾತನ್ನಾಡುತ್ರಿರುವರೋ ಅದೇ ಖಾನಾವಳಿ. ‘ಈ ಪಲ್ಯೆ ಬಹಳ ಸೋಯಿಯಾಗಿದೆಯಲ್ಲವೇ ಸೆಟ್ಟರೆ’, ‘ನಿಮ್ಮದು ನಳಪಾಕ ಮಹಾಶಯರೇ’, ‘ಸೆಟ್ಟರೇ, ಈ ಚಪಾತಿಯನ್ನು ಎಂದಾದರೂ ನಿಮ್ಮ ನಾಯಿಗೆ ತಿನ್ನಿಸಿದ್ದೀರಾ’, ‘ಸ್ವಾಮಿ, ನಿಮ್ಮ ಹೊಟೀಲಿನ ನೀರೊಂದು ಮಾತ್ರ ಚೆನ್ನಾಗಿದೆ’, ಇಂದು ಒಂದು ದಿನದ ಕತೆಯಲ್ಲ. ದೇವರ ಪೂಬೆ ತಪ್ಪೀತು-ಪಾಪ, ಮ್ಯಾನೇಜರನೆಂಬ ವ್ಯಕ್ತಿಗಾಗಲಿ, ವಯಸ್ಸಿಗೆ ತಕ್ಕ ಬೆಳವಣಿಗೆಯಿಲ್ಲದ ಮಾಣಿಗಾಗಲಿ ದಿನಾಲು ಏರುವ ಪುಷ್ಪಗಳಿವು. ಸಹನೆ ಗುಣ ನೀವು ಕಲಿಯಬೇಕೆ? ನೀವು ಹಾಟೇಲೊಂದು ಏಕೆ ಇಡಬಾರದು? ನೀವು ನಾಚಿಕೆಯನ್ನು ತಲೆಗೆ ಸುತ್ತಬೇಕೇ? ಪಟ್ಟಣದಲ್ಲಿ ಒಂದು ಖಾನಾವಳಿಯನ್ನು ತೆರೆಯಬಾರದು?-ತಮ್ಮ ಮೇಲಧಿಕಾರಿಗಳ ಮುಂದೆ ಬಾಲವನ್ನು ಮುದುಡಿಸಿಕೂಂಡು ಹೇಳಿದ್ದಕ್ಕೆಲ್ಲ ಹೂಂಗುಡುತ್ತ ಹೊಗಳು ಭಟ್ಟಂಗಿಗಳಾಗಿ ಮೈಗಳ್ಳತನವನ್ನು ಬೆಳೆಸಿಕೂಂಡು ತಾವು ತಿನ್ನುವ ಪಗಾರಕ್ಕೆ ಸರಿಯಾದ ಕೆಲಸ ಮಾಡದ ಬೇಜವಾದ್ದಾರಿಯಿಂದ ಸರಕಾರದ ಮೇಲೂ, ಸಮಾಜದ ಅವ್ಯವಸ್ಥೆ ಅನೀತಿಗಳ ಮೇಲೂ ಗದಾಪ್ರಹಾರ ಮಾಡುವ, ಮನೆಯಲ್ಲಿಯ ಆಡಿಗೆಗೆ ಹೆಸರು ಇಡಲೂ ಧೈರ್ಯ ಸಾಲದೆ ಮುಖ ತಗ್ಗಿಸಿಕೊಂಡು ಹೆಣ್ಣುಮಕ್ಕಳು ಕೃಪೆಯಿಂದ ನೀಡಿದಷ್ಟನ್ನು ಊಟ ಮಾಡುವ ನೌಕರಶಾಹಿ ವರ್‍ಗ ತನ್ನ ಬಾಯಿಚಾಪಲ್ಯ ತೀರಿಸಿಕೊಳ್ಳುವ ಸ್ಥಳವೆಂದರೆ ಖಾನಾವಳಿಯಲ್ಲದೆ ಮತ್ತಾವುದು? ಇನ್ನುಳಿದವರು ಹಾಯಸ್ಕೂಲ ಕಾಲೇಜು ವಿದ್ಯಾರ್ಥಿಗಳು. ಅವರು ಟೀಕಿಸದ ವ್ಯಕ್ತಿಗಳಿಲ್ಲ. ಅವರಿಂದ ಸರ್‍ಟಿಫಿಕೇಟ ಪಡೆಯದ ಸಂಸ್ಥೆಗಳಿಲ್ಲ. ಅವರು ಚರ್ಚಿಸದ ವಿಷಯಗಳಿಲ್ಲ. ಆಪ್ಪ, ಮುತ್ತಜ್ಜ ಗಳಿಸಿದ ಆಸ್ತಿಗೆ ಭಾವೀ ವಾರಸುದಾರರಾದ ಅವರು ಅಭ್ಯಾಸ ಮಾಡುವದು ಪಠ್ಯಪುಸ್ತಕಗಳನ್ನಲ್ಲ, ದುಶ್ಚಟಗಳನ್ನು. ಕಾರಂತರ ‘ಮರಳೀ ಮಣ್ಣಿಗೆ’ಯ ನಾರಾಯಣ ಐತಾಳ ಕಾಲೇಜಿಗೆ ಹೋಗಿ ಮಾಡಿದ ಕಲಸವೆಂದರೆ ಖಾನಾವಳಿಯ ಆಡುಗೆಯ ಮೇಲೆ ಹೂಡಿದ ಯುದ್ಧ.

ಇನ್ನು ಆಧುನಿಕ ಜೀವನದ ಅಸ್ಥಿರತೆಯ ರಾಕ್ಷಸನನ್ನು ಎದುರಿಸದ ಹೇಡಿಗಳನೇಕರು ಖಾನಾವಳಿಯ ಶಾಶ್ಚತ ಗಿರಾಕಿಗಳು. ಕೋರ್‍ಟು-ಖಟ್ಲೆಗಳೇ ಜೀವನದ ಸಾರಸರ್‍ವಸವೆಂದು ತಿಳಿದ ಹಳ್ಳಿಯ ಸಾವುಕಾರರೂ ವರ್ಷವೆಲ್ಲ ಪಟ್ಟಣದ ಖಾನಾವಳಿಯಲ್ಲಿ ಉದ್ರಿಯಿಂದ ಊಟಮಾಡಿ ವರ್‍ಷದ ಕೊನೆಗೆ ಗೋದಿ-ಕಡಲೆಗಳನ್ನು ತಂದು ಬಾಕಿ ತೀರಿಸುವ ಹಳ್ಳಿಯ ಜಮೀನುದಾರರೂ ಖಾನಾವಳಿಯ ಭಕ್ತರು. ಇಷ್ಟು ಜನರಿಗೂ ಅನ್ನವನ್ನು ಕಾಲ ಕಾಲಕ್ಕೆ ಹಾಕಿ, ಬಂದಾಗಲೆಲ್ಲ ಮುಗುಳ್ನಗೆಯ ಸ್ವಾಗತ ಬೀರಿ, ಆಹಾರ ಸಮಸ್ಯೆ ಪೆಡಂಭೂತವಾಗಿರುವ ಈ ದಿನಮಾನಗಳಲ್ಲಿ ಯಾವ ಮಯೆಯಿಂದಲೋ ದವಸ-ಧಾನ್ಯಗಳನ್ನು ಕೂಡಿರಿಸಿ ಬಿಸಿಬಿಸಿ ಅನ್ನ-ಸಾರುಗಳನ್ನೂ; ಚಪಾತಿ-ಸಾಂಬಾರುಗಳೆಂಬ ನಾನಾ ವಿಧದ ಭಕ್ಷ್ಯ-ಭೋಜನಗಳನ್ನೂ ನೌಕರಶಾಹಿವರ್ಗಕ್ಕೆ ಸದಾಕಾಲವೂ ಅರ್‍ಪಿಸುತ್ತಿರುವ ಖನಾವಳಿಯವರು ಕಲಿಯುಗದ ಅನ್ನದಾತರು. ಹಿಂದೆ ರಾಜಮಹಾರಾಜರು ಅನ್ನ-ಛತ್ರವನ್ನು ಇರಿಸಿ, ಬಂದ ಪಥಿಕರಿಗೆ ತಣ್ಣೆಳಲನ್ನು ಕೋರುತ್ತಿದ್ದರು. ರಾಜಮಹಾರಾಜರಿಲ್ಲದ ಇಂದಿನ ಯುಗದಲ್ಲಿ-ಇಂದಿನ ಯುಗಧರ್‍ಮಕ್ಕನುಸಾರವಾಗಿ ಖಾನಾವಳಿಯು ಅನ್ನಛತ್ರದ ಕಾರ್ಯವನ್ನೆಸಗುತ್ತಿದೆ. ಇಂಥ ಅನ್ನದಾನ ಮಾಡುತ್ತಿರುವ ಖಾನಾವಳಿಯವರು ಅಭಿನಂದನೆಗೆ ಅರ್ಹರೇ ವಿನಾ ಟೀಕೆಗೆ ಪಾತ್ರರಲ್ಲ. ಅದಕ್ಕಾಗಿಯೇ ಅನ್ನಿಸುತ್ತದೆ ಮಾನವನೊಬ್ಬ ಕೃತಘ್ನ ಪ್ರಾಣಿಯೆಂದು.

ಆಧುನಿಕ ಜಗತ್ತಿನಲ್ಲಿ ಖಾನಾವಳಿ ಸಂಸ್ಥೆ ತನ್ನ ಪ್ರಭಾವ ವಲಯವನ್ನು ವಿಸ್ತರಿಸಿದೆ. ಇದಿಲ್ಲದ ಜಗತ್ತಿನ ಕಲ್ಪನೆಯೇ ನನ್ನೆದೆಯನ್ನು ನಡುಗಿಸುತ್ತದೆ. ರಾಜ್ಯಗಳುರುಳಿ ಹೋಗಲಿ, ಕಾಂಗ್ರೆಸ್ ಪಕ್ಷ ಕೆಳಗುರುಳಿ ಸಮಾಜವಾದಿ ಪಕ್ಷ ಆಧಿಕಾರದ ಗದ್ದುಗೆಯೇರಲಿ, ಶಾಲೆ-ಕಾಲೇಜುಗಳು ದೀರ್‍ಘ ಕಾಲಾವಧಿಯ ವಿಶ್ರಾಮ ತಕ್ಕೊಳ್ಳಲಿ, ಬ್ಯಾಂಕುಗಳು ದೀವಾಳಿಯೇಳಲಿ, ವೃತ್ತಪತ್ರಿಕೆಗಳು ಕೆಲಕಾಲ ಸುದ್ದಿಯ ಗುಡುಗು-ಮಿಂಚುಗಳನ್ನು ಸ್ಥಗಿತಗೊಳಿಸಲಿ, ಆಕಾಶ ಹರಿದು ಬೀಳಲಿ-ಸಮಾಜಚಕ್ರ ಸಾವರಿಸಿಕೊಂಡು ನಡೆದೇ ನಡೆಯುತ್ತದೆ; ಆದರೆ ಒಂದು ಕ್ಷಣದಲ್ಲಿಯೇ ಖಾನಾವಳಿಯಿಲ್ಲದ ಆಧುನಿಕ ಜೀವನ ಗಕ್ಕೆಂದು ನಿಂತುಬಿಡುತ್ತದೆ. ಕಾರ್‍ಮಿಕರು ಖಾಲಿ ಊಟದ ಡಬ್ಬಿಯನ್ನು ನೋಡಿ ಮೂರ್ಛೆ ಬೀಳುತ್ತಾರೆ. ನೌಕರವರ್ಗ ನಿಂತಲ್ಲಿಯೇ ಪ್ರಾಣಬಿಡುತ್ತದೆ. ನಿರಂತರ ಪ್ರವಾಸಿವರ್ಗ ಕೂಳಿಲ್ಲದೆ ನೀರಿಲ್ಲದೆ ಒದ್ದಾಡುತ್ತದೆ. ಹೀಗೆಂದು ಖಾನಾವಳಿಯೆಂದರೆ ಸಮಾಜಚಕ್ರದ ಕೀಲೆಂದೇ ನನ್ನ ಆತ್ಮವಿಶ್ವಾಸ.

ಈ ನನ್ನ ಆತ್ಮವಿಶ್ವಾಸ ಭದ್ರವಾದ ಅನುಭವದ ಗಚ್ಚುಗಾರೆಯ ಮೇಲೆ ಪೀಠಿತವಾಗಿದೆ. ಕಲಿಯುಗದ ಅನ್ನದಾತರು ಎನ್ನುವ ಅಭಿಮಾನ, ಮಿತಿ ಮೀರಿದ ಉತ್ಸಾದೋದ್ರೇಕದ ರಭಸದ ಮಾತಿನ ಓಟವೆಂದು ಯಾರೂ ಭಾವಿಸದಿರಲಿ. ಹಣವನ್ನು ತಕ್ಕೊಂಡು ಅನ್ನ ಮರುವವರನ್ನು ಇಷ್ಟೇಕೆ ತಲೆಯ ಮೇಲೆ ಏರಿಸಿ ಕೂಡಿಸಬೇಕು ಎಂದು ನನ್ನನ್ನು ನಿಂದಿಸಬೇಡಿ. ನೀವು ಕೊಟ್ಟ ಹಣ ನೀವು ಪಡೆಯುವ ಸತ್ಕಾರಕ್ಕೆ ಎಷ್ಟೂ ಅಲ್ಲ. ಆ ಮುಗುಳ್ನಗೆಯ ಸ್ವಾಗತ, ತಣ್ಣನೆಯ ಪಾನೀಯ, ಮಡಿ ಮೈಲಿಗೆಗಳಿಲ್ಲದ ಆ ವಾತಾವರಣ, ಕಾಲಲ್ಲಿಯ ಬೂಟು ಕಾಲಲ್ಲಿಯೇ ಇರಲಿ, ತಲೆಯ ಮೇಲಿನ ಹ್ಯಾಟು ಅಲ್ಲೇ ನಿಂತಿರಲಿ, ಕೈ ತೊಳೆಯಿರಿ ಅಥವಾ ಬಿಡಿರಿ-ಆದು ನಿಮ್ಮ ಅನುಕೂಲ, ಅವಕಾಶಕ್ಕೆ ಬಿಟ್ಟದ್ದು. ನಿಮಗೆ ಬೇಕಾದ್ದದಷ್ಟನ್ನು ಉಂಡು ಉಳಿದುದನ್ನು ತಾಟಿನಲ್ಲಿ ಹಾಯಾಗಿ ಬಿಡಬಹುದು. ಸುಮಾಜದ ಮೇಲೆ, ರಾಜಕಾರಣದ ಮೇಲೆ, ಕೊನಗೆ ಖಾನಾವಳಿಯವರ ಮೇಲೆ ನಿಮ್ಮ ಬ್ರಹ್ಮಾಸ್ತ್ರ ಬಿಡಬಹುದು. ಇಲ್ಲಿ ಸ್ವಛಂದತೆಯ ಛಂದವಿದೆ. ಬೇಜವಾದ್ದಾರಿಯ ಅನುಪಮ ಸೌಭಾಗ್ಯವಿದೆ. ಹುಡುಗಾಟಿಕೆಗೆ ಸ್ವಾಗತವಿದೆ. ಮನ ಬಂದುದನ್ನು ಮಾಡುವ ಅಧಿಕಾರವಿದೆ. ಮೇಲಾಗಿ ನಿಮ್ಮ ಅಧಿಕಾರವನ್ನು ಯಾರೂ ಪ್ರಶ್ನಿಸಲಾರರು. ನೀವೊಬ್ಬ ನಿರಂಕುಶ ಅರಸು.

ಇಷ್ಟಿದ್ದರೂ ಸ್ವಾರ್‍ಥಿಗಳು, ಜನರ ರಕ್ತ ಹೀರುವವರು, ಅನಾರೋಗ್ಯವನ್ನು ಹರಡುವ ಕ್ರಿಮಿಗಳು ಎಂದೆಲ್ಲ ಸಾಮಾನ್ಯ ತಿಳುವಳಿಕೆಯಿದೆ ಖಾನಾವಳಿಯವರ ಬಗ್ಗೆ. ಸ್ಥಾರ್ಥವಿಲ್ಲದ ಒಂದಾದರೂ ಕೆಲಸವನ್ನು ನಾವಿನ್ನೂ ನೋಡಬೇಕಾಗಿದೆ. ಹೂ ಅರಳುತ್ತದೆ ತನ್ನಷ್ಟಕ್ಕೆ ತಾನು. ಹೆಣ್ಣುಮಕ್ಕಳ ಮುಡಿಯನ್ನು, ದೇವರ ಶಿರವನ್ನು ಏರಿ ನಿಲ್ಲುವ ಸ್ವಾರ್‍ಥವೂ ಅದಕ್ಕಿದೆ. ಕವಿ ಹಾಡುತ್ತಾನೆ ‘ಆತ್ಮಸಂತೋಷಾಯ’. ಕವಿಯ ಆಂತರಂಗವನ್ನು ಒಳಹೊಕ್ಕು ನೋಡಿದರೆ ಅಲ್ಲಿ ಪ್ರಸಿದ್ಧಿಯ ಪ್ರತಿಷ್ಟೆಯ ಹಪಹಪಿಯಿದೆ. ಅದೊಂದು `Last infirmity of noble soul’ ತಾಯಿ ಮಗುವನ್ನು ಮುದ್ದಿಸುತ್ತಾಳೆ. ಇನ್ನುಳಿದ ಸಂಬಂಧಿಕರು ತೀರ ಹತ್ತಿರದವರಾದರೂ ಮನದಿಂದ ಮೈಲುಗಟ್ಟಲೆ ದೂರದೂರ. ಅವಳ ಆಪ್ಪುಗೆಯಲ್ಲಿ, ಮುದ್ದಿನ ಪ್ರಯತ್ನದಲ್ಲಿ ತನ್ನದೇ ಆದ ಮಗುವನ್ನು ಕಾದಿರಿಸುವ ಜೋಕೆಯಿದೆ. ಹೀಗಿದ್ದಾಗ ಖಾನಾವಳಿಯಂತಹ ಸಂಸ್ಥೆಯಲ್ಲಿ ಸ್ವಾರ್ಥದ ಲೇಪವನ್ನು ಬಣ್ಣದ ಅತಿಶಯೋಕ್ತಿಯ ಕನ್ನಡಕದಿಂದ ನೋಡುವದು ತಪ್ಪೆಂದೇ ಕಾಣುತ್ತದೆ. ನನಗೆ ಅವಕಾಶವಿದ್ದರೆ ಖಾನಾವಳಿಯ ಬಗ್ಗೆ ಉಂಟಾದ ತಪ್ಪು ಕಲ್ಪನೆಯನ್ನೆಲ್ಲ ಹೊಡೆದೋಡಿಸುಲು ಒಂದು ದೊಡ್ಡ ಚಳವಳಿಯನ್ನೇ ಹೂಡುತ್ತಿದ್ದೆ.

ದೇಶದಲ್ಲಿ ಇಂದು ಎಲ್ಲಿಯಾದರೂ ರಾಷ್ಟ್ರೀಯ ಐಕ್ಯತೆ ಬಂಧು-ಭಾವತ್ವ ಸಹಕಾರಿಭಾವ ಏಕತೆಯ ಆದರ್‍ಶಗಳು ಯಶಸ್ವಿಯಾಗಿದ್ದರೆ ಅದು ಖಾನಾವಳಿಯಲ್ಲಿಯೇ ಎಂದು ಎದೆ ತಟ್ಟಿ ಹೇಳುತ್ತೇನೆ. ಚಹಾ ಹೊಟೆಲುಗಳಲ್ಲಿ ಪ್ರಾರಂಭವಾದ ಈ ಏಕತೆಯ ಬೀಜ ಇಲ್ಲಿ ಖಾನಾವಳಿಯಲ್ಲಿ ಬೆಳೆದು ನಿಂತಿರುತ್ತದೆ. ‘ಸಹನಾವವತು ಸಹನೌಭುನತ್ತು ಸಹವೀರ್‍ಯಂ ಕರವಾವ ಹೈ’ ಎನ್ನುವ ಉಪನಿಷದಮಂತ್ರ ಮಂತ್ರವಾಗಿಯೇ ಉಳಿಯಲಿಲ್ಲ. ಅದು ಇಂದು ಖಾನಾವಳಿಗಳಲ್ಲಿ ಸಿದ್ಧಿಯನ್ನು ಪಡೆದಿದೆ. ಸಂಧ್ಯಾವಂದನೆ, ಲಿಂಗಪೂಜೆ ಮಾಡದೆ ತುತ್ತು ಅನ್ನವನ್ನೂ ಉಣ್ಣದ ಸನಾತನಿಗಳಿಂದ ಕೀಳುವರ್‍ಗವೆಂದು ಕರಯಲ್ಪಡುವ ಜನರ ಭುಜಕ್ಕೆ ಭುಜ ತಿಕ್ಕಿ ಸಹಪಂಕ್ತಿಯಲ್ಲಿ ಉಣ್ಣುತ್ತಿರುವ ದೃಶ್ಯ ರೋಮಾಂಚನಕಾರಿಯಾದುದು. ಈ ಆದರ್ಶಕ್ಕಾದರೂ ಖಾನಾವಳಿಗೆ, ನಿತ್ಯ ನಿನಗೆ ನಮೋ ನಮೋ, ಎನ್ನಬೇಕೆನ್ನಿಸುತ್ತದೆ.

ಆದರೆ ಕೆಲ ಸಂಕುಚಿತ ಸ್ವಭಾವದ ಜನ ಈ ಉದಾತ್ತ ಸಂಸ್ಥೆಯನ್ನು ಸೇರಿ, ಸಂಸ್ಥೆಯನ್ನೇ ನರಕದ ಅಧಃಪತನಕ್ಕೆ ಎಳೆದಿರುವ ವಿಚಾರವನ್ನು ನೆನೆದಾಗಲೊಮ್ಮೆ ಮನಮಿಡುಕುತ್ತದೆ. ‘ಉಡುಪಿ ಬ್ರಾಹ್ಮಣರ ಹೊಟೀಲು’, ‘ವೀರಶೈವ ಲಿಂಗಾಯತ ಖಾನಾವಳಿ’, ‘ಇಸ್ಲಾಮಿಯಾ ಹೊಟೇಲು’, ‘ಮರಾಠಾ ಖಾನಾವಳಿ’ ಹೀಗೆ ಸಂಕುಚಿತ ಮತೀಯ ಹೆಸರನ್ನು ಇಡುವಲ್ಲಿ ನಮ್ಮ ಜನರು ಕ್ಷಮರ್‍ಹಾವಲ್ಲದ ತಪ್ಪನ್ನೇ ಮಾಡಿದ್ದಾರೆ. ‘ವೀರಶೈವ ಲಿಂಗಾಯತ ಖಾನಾವಳಿ’ಯಲ್ಲಿ ಕೇವಲ ವೀರಶೈವರೇ ಊಟ ಮಾಡುತ್ತಾರೆಯೇ? ಗಗನಕ್ಕೇರಿಸುವ ಬಳ್ಳೊಳ್ಳಿಯ ವಾಸನೆ, ಈರುಳ್ಳಿಯ ಕಾಕು, ಬಿಳೇಜೋಳದ ರೊಟ್ಟಿ, ಅಮಿತವಾದ ಉಪ್ಪ-ಕಾರಿನ ಸರಬರಾಯಿ, ಬದನೇಕಾಯಿಯ ಮಸಾಲೆ, ಸೇಂಗಾದ ಕಾರಬೇಳೆ-ಇವುಗಳನ್ನು ಬಾಯಿ ಕೆಟ್ಟ ಅದಾವ ರಸಿಕನು ಅಲ್ಲಗಳೆದಾನು? ಉಡುಪಿ ಬ್ರಾಹ್ಮಣರ ಸಾಂಬಾರು, ಇಂಗಿನ ಮಸಾಲೆ, ಒಂದು ಹಪ್ಪಳ, ಒಂದು ಸಂಡಿಗೆ, ಒಂದು ಉಪೀನಕಾಯಿಯ ಸಡಗರ, ಮಲ್ಲಿಗೆಯರಳಿನಂತೆ ಹೊಳೆಯುವ ಸಣ್ಣಕ್ಕಿಯ ಅನ್ನ, ತುಪ್ಪವೋ, ಡಾಲ್ಡಾವೋ ಎನ್ನಬಹುದಾದ ಘೃತ, ಉಪ್ಪು-ಖಾರ ಇಲ್ಲವೇನೋ ಎನ್ನುವಷ್ಟು ಸಾತ್ವಿಕವಾದ ಬಣ್ಣಬಣ್ಣದ ಪಲ್ಯೆ-ಭಾರತದ ಯಾವ ಮೂಲೆಗೆ ಹೋದರೂ ನಿಮ್ಮನ್ನು ಸ್ವಾಗತಿಸುತ್ತದೆ. ‘ಮರಾಠಾ ಇಸ್ಲಾಮಿಯಾ ಹೊಟೇಲು’ಗಳಿಂದ ಮಾಂಸಾಹಾರಿ ಎಂಬ ಬಿರುದಾಂಕಿತ ವರ್ಗವನನ್ನು ಹಿಂದೆ ಸರಿಸಿ ಮುಂದುವರೆಯುತ್ತಿರುವ ವಿಪ್ರವರ್ಗವನ್ನೂ ಆಮಂತ್ತಿಸುತ್ತವೆ. ನಾವು ತಪ್ಪು ಮಾಡುತ್ತಿರುವದು ಇಲ್ಲಿಯೇ, ನಾವು ತೀರ ಕ್ಷುಲ್ಲಕವಾಗಿರಲೊಲ್ಲವೇಕೆ, ನಮ್ಮ ಮನಸ್ಸು ತೀರ ಸಂಕುಚಿತವಾಗಿರಲೊಲ್ಲದೇಕೆ, ತಾನು, ತನ್ನವರು, ತನ್ನ ಜಾತಿ ಎಂದು ಪಠಿಸುತ್ತಿರುವ ಜಾತ್ಯಂಧರಾದರೂ ನಡೆದೀತು; ಆದರೆ ನಿಮ್ಮ ಹೆಸರು ಮಾತ್ರ ದೊಡ್ಡದಿರಲಿ, ಆಕಾಶವನ್ನೇ ತಲುಪಿ ನಿಂತ ಔನ್ನತ್ಯದ ಭಾಸವಿರಲಿ, ಇಡಿಯ ಬ್ರಹ್ಮಾಂಡವನ್ನೇ ತನ್ನೆರಡು ಕೈಗಳಲ್ಲಿ ಬಿಗಿಯಾಗಿ ಇಟ್ಟುಕೊಳ್ಳಲು ಸಾಹಸಪಟ್ಟ ವಿಶ್ವಾಮಿತ್ರನ ಘೋರ ವ್ಯಕ್ತಿತ್ವದ ಛಾಯೆಯಿರಲಿ ನಿಮ್ಮ ಅಭಿದಾನದಲ್ಲಿ. ‘ವಿಶ್ವಸೇವಾಸಂಸ್ಥೆ’ಯೆಂಬ ಹೆಸರಿನ ಪರದೆಯ ಹಿಂದೆ ನಿಮ್ಮ ಕುಟುಂಬ ಸೇವೆಯನ್ನೇ ಮಾಡುವ ಜಾಣ್ಮೆಯಿರಲಿ.

ಖಾನಾವಳಿಯ ಊಟದಲ್ಲಿ ಏಕತಾನತೆಯಿದೆ, ನೀರಸತೆಯಿದೆ ಎನ್ನುವ ವ್ಯಕ್ತಿಗಳನ್ನು ನಾನು ಖಾನಾವಳಿಗೆ ಆಮಂತ್ರಿಸುತ್ತೇನೆ. ಮನೆಯಲ್ಲಿ ಗೃಹದೇವತೆಯೊಂದಿಗೆ ಮನಸ್ತಾಪವಾಗಿದ್ದರೆ, ಅಡಿಗೆಮನೆಯ ಹೊಗೆಯಿಂದ ಕಣ್ಣು, ಚಿಕ್ಕಮಕ್ಕಳ ರಂಪಾಟದಿಂದ ಕಿವಿ ತುಂಬಿದ್ದರೆ, ಮನೆಯ ಇಕ್ಕಟ್ಟಾದ ಉಸಿರುಗಟ್ಟುವ ವಾತಾವರಣದಲ್ಲಿ ಮನಸ್ಸು ಬೇಜಾರುಗೊಂಡಿದ್ದರೆ, ಗೆಳೆಯನ ಮನೆಗೆ ಊಟಕ್ಕೆ ಹೋಗುತ್ತೇನೆಂದು ಮನೆಯಲ್ಲಿ ಸುಳ್ಳು ಹೇಳಿ ಸಮೀಪದ ಹೊಟೇಲಿಗೆ ಹೋಗಿರಿ. ಅಲ್ಲಿ ಎಂದೂ ಕಂಡು ಕೇಳರಿಯದ ಪಲ್ಯೆಗಳ ರಾಶಿಯೇ ನಿಮ್ಮನ್ನು ಮೂಕವಿಸ್ಮಿತಗೊಳಿಸುತ್ತದೆ. ಒತ್ತಾಯದ ತೊಂದರೆಯನ್ನಂತೂ ಮಾಣಿಯು ಮಾಡುವುದಿಲ್ಲ. ನೀವೇನು ಬೇಡುತ್ತೀರೋ ಅದನ್ನೇ ನಯವಾಗಿ, ನಾಜೂಕಾಗಿ ಮುಖದ ಮೇಲೆ ಯಾವ ಭಾವವನ್ನೂ ತಾರದೆ ನೀಡುವ ರೀತಿಯೇ ತನ್ನ ಹೊಚ್ಚ ಹೊಸತನದಿಂದ ನಿಮ್ಮನ್ನು ತೃಪ್ತಿಗೊಳಿಸುತ್ತದೆ. ನಿಮ್ಮ ನಾಲಗೆಯ ಜಾಡ್ಯಕ್ಕೆ ಪರಮೌಷಧಿಯೆಂದರೆ ಖಾನಾವಳಿಯ ಊಟವೇ.

ಖಾನಾವಳಿಯ ಊಟವನ್ನು ಹಲವಾರು ವರ್ಷಗಳಿಂದಲೂ ಮಾಡುತ್ತಿರುವ ನನಗೆ ಅದರ ಬಗ್ಗೆ ಆಶ್ರಯದಾತರ ಬಗ್ಗೆ ಇರುವ ವಿಶ್ವಾಸವಿದೆ. ಹಳ್ಳಿಯ ವಾತಾವರಣದಿಂದ ಪಟ್ಟಣದ ವಿಶಾಲ ಜಗತ್ತಿಗೆ ಬಂದಾಗ ಇದರ ಪರಿಚಯವಾಯಿತು. ಪರಿಚಯದಿಂದ ಸಹವಾಸವೂ, ಸಹವಾಸದಿಂದ ಸಖ್ಯವೂ ಉಂಟಾದವು. ಇಂದು ಆ ಸಖ್ಯದ ನೆರಳಿನಲ್ಲಿ ಕುಳಿತು ವಿಶ್ರಮಿಸುತ್ತಿದ್ದೇನೆ. ಕಾರ್‍ಯಭಾರದಲ್ಲಿ ನನ್ನನ್ನು ನಾನು ಮರೆತು ರೂಮಿನ ಹಾದಿ ಹಿಡಿದಾಗ ಕಾಲುಗಳು ಎಳೆದುಕೊಂಡು ನನ್ನನ್ನು ಹಾಟೇಲಿಗೆ ಒಯ್ಯುತ್ತವೆ. ದರ್ಶನಮಾತ್ರದಿಂದ ಅರ್ಧ ಹೊಟ್ಟೆ ತುಂಬಿಹೋಗುತ್ತದೆ. ಇದೆಂಥ ಮಾಯೆಯಿದು? ತಟ್ಟೆಯಲ್ಲಿ ಬಡಿಸಿದ್ದ ಚಪಾತಿಗಳಾಗಲಿ, ಅನ್ನವಾಗಲಿ ಕ್ಷಣಾರ್‍ಧದಲ್ಲಿ ಮಾಯವಾಗಿಬಿಡುವುದು ಸೃಷ್ಟಿಯ ವೈಲಕ್ಷಣ್ಯವಲ್ಲದೆ ಮತ್ತಿನ್ನೇನು? ಯಾವುದರಲ್ಲಿಯೂ ಆಸಕ್ತಿಯಿರಬಾರದೆಂದು ನಮ್ಮ ಹಿಂದು ಸಂಪ್ರದಾಯ ಹೇಳುತ್ತ ಬಂದಿದೆ. ಆ ಅನಾಸುಕ್ತಿಯ ಕನಸಿನ ಗಂಟು ನನ್ನ ಮಟ್ಟಿಗಂತೂ ಕೈಯೊಳಗಿನ ದಂಟಾಗಿ ಪರಿಣಮಿಸಿದೆ. ಖಾನಾವಳಿಯ ಮಾಣಿಯು ಹೇಳುವಂತೆ ತೋರುತ್ತದೆ- “ಸ್ವಾಮೀ, ನೀವು ಒಂದು ತರಹ. ಒಂದೊಂದು ಸಲ ಹುಲಿಯ ಹಾಗೆ ತಟ್ಟೆಯ ಮೇಲೆ ಎರಗಿಬಿದ್ದು, ಮೊಗದಲ್ಲಿ ಉತ್ಸಾಹ ತೋರುತ್ತ ಕೂಳುಬಾಕತನವನ್ನು ಪ್ರದರ್‍ಶಿಸುತ್ತೀರಿ. ಇನ್ನೊಮ್ಮೆ ಯಾರೆಡೆಗೂ ನೋಡದೆ, ತಟ್ಟೆಯ ಕಡೆಗೆ ಏಕದೃಷ್ಟಿಯನ್ನು ಬೀರುತ್ತ ಎರಡನೆಯವರ ಅಸ್ತಿತ್ವವನ್ನು ಮರೆತು ನಿಲ್ಲುವ ತಪಸ್ವಿಯ ಏಕನಿಷ್ಠೆಯನ್ನು ತೋರುತ್ತೀರಿ.” ಇದು ನಾನು ಗಳಿಸಿದ ಆಸ್ತಿ; ಈ ಅನಾಸಕ್ತಿಯಿಂದ ಮೋಕ್ಷಪಟ್ಟವನ್ನು ನಾನು ಏರಿದರೂ ಏರಬಹುದು.

ನಾನು ಮನೆಯಲ್ಲಿ ತೋರದ ಧೈರ್‍ಯವನ್ನು ಖಾನಾವಳಿಯಲ್ಲಿ ತೋರಿಸುತ್ತೇನೆ. ಒಮ್ಮೆ ಆರಿದ ಚಪಾತಿಯನ್ನು ಇನ್ನೊಮ್ಮೆ ಬಿಸಿಮಾಡಿ ಹಾಕಿದರು. ಆಗ ನಾನು ಹೇಳಿದೆ. “ಬರ್‍ಪಿನಕ್ಕಿಂತಲೂ ತಣ್ಣಗಿರಲಿ, ಆಯಿಸ್ ಕ್ರೀಮಿನಕ್ಕಿಂತಲು ಆಹ್ಲಾದಕರವಾಗಿರಲಿ, ಚರ್ಮಕ್ಕಿಂತ ಬಿರುಸಾಗಿ ಗಟ್ಟಿಯಾಗಿರಲಿ ನಿಮ್ಮ ಚಪಾತಿ.” ಇನ್ನೊಮ್ಮೆ ಅನ್ನ ಬರಲು ತಡವಾದಾಗ ಸೆಡವಿನಿಂದ ಊಟ ಬಿಟ್ಟು ಮನೆಗೆ ಹೋದ ಕ್ಷಣದಲ್ಲಿಯೇ ನೆರೆಯವರನ್ನು ತಿನ್ನುವಷ್ಟು ಹಸಿವು ಅಗಿ ನನ್ನನ್ನು ಒಡ್ಡಮುರಿದು ಸೋಲಿಸಿತು. ಗಾಣಿಗನ ಮೇಲೆ ಸಿಟ್ಟಾಗಿ ಒಣರೊಟ್ಟಿ ತಿನ್ನುವವರಿರುವಂತೆ ಖಾನಾವಳಿಯವರ ಮೇಲೆ ಸಿಟ್ಟಾಗಿ ಹಸಿವಿನಿಂದ ಮರುಗಿದ್ದೆ.

ಇಂಥ ಖಾನಾವಳಿ ಆಧುನಿಕ ಜಗತ್ತಿನ ಮುಖ್ಯ ಕೀಲವಾಗಿದೆ. ಸ್ವರ್‍ಗದ ತಂಗುಮನೆಗಳು ಭೊಲೋಕದಲ್ಲಿ ಎಲ್ಲಿಯಾದರೂ ಇದ್ದರೆ ಅವು ಖಾನಾವಳಿಗಳೇ. ನಮ್ಮ ಹೊಟ್ಟೆ-ನೆತ್ತಿಗಳ ಕಡೆಗೆ ಗಮನಕೊಟ್ಟು ಹಸಿದ ಹೊಟ್ಟೆಗೆ ತುತ್ತು ಅನ್ನವನ್ನು ಮಿತವಾಗಿ ಆರೋಗ್ಯ ಕೆಡದಂತೆ, ಅಪಚನದ ಪ್ರಶ್ನೆ ಬಹುದೂರ ಉಳಿಯುವಂತೆ ಲಕ್ಷ್ಯ ಪೂರೈಸುತ್ತಿರುವ ಖಾನಾವಳಿಗಳ ಋಣವನ್ನು ಜನ್ಮಜನ್ಮ ಕಳೆದರೂ ತೀರಿಸುವದಾಗುವದಿಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆಸ್ಪತ್ರೆಯಲ್ಲಿ ಹತ್ತೂ ಸಮಸ್ತರು
Next post ಪಿಶಾಚಿ ದೈವಕ್ಕೆ ಹೇಳಿದ್ದು

ಸಣ್ಣ ಕತೆ

 • ಅಜ್ಜಿ-ಮೊಮ್ಮಗ

  ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

 • ವಿರೇಚನೆ

  ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

 • ಉರಿವ ಮಹಡಿಯ ಒಳಗೆ

  ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

 • ಗದ್ದೆ

  ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

 • ಕಳಕೊಂಡವನು

  ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…