ಪ್ರಚೋದನೆ – ಅತ್ಯಾಚಾರ ಮತ್ತು ಕಾನೂನು ಕ್ರಮ

ಪ್ರಚೋದನೆ – ಅತ್ಯಾಚಾರ ಮತ್ತು ಕಾನೂನು ಕ್ರಮ

ಅವ್ವಾ… ದಾನವ್ವಾ..
ನಿನ್ನ ಕಥೆ ಹೇಳಿ ಕಣ್ಣೀರಿಡಲು ರುಡಾಲಿಗಳನ್ನು
ಹುಡುಕಬೇಕಷ್ಟೇ ಮಗಳೇ,
ಕ್ರೂರ ಮೃಗಗಳ ಸಾಕುವ ಕಾಡು
ಈ ನಾಡಿನ ಬೆಂಗಾಡಿನ ಬರ್‍ಭರತೆಯ ಕಥೆ ಕೇಳಿ
ಕಣ್ಣೀರಿಡುತ್ತಿದೆಯಂತೆ ಮಗಳೇ..
ಆಗಷ್ಟೆ ಎದ್ದ ಮೊಗ್ಗಿನ ಪಕಳೆಗಳು
ನಾಯಿಗಳ ಕೋರೆಹಲ್ಲುಗಳಿಗೆ ರಕ್ತ ಒಸರುವ ಮಾಂಸವಾದುವೇ?
ಬೆಂಕಿ ಹೊಯ್ದ ಹಾದಿಯ ತುಂಬೆಲ್ಲಾ ಮಲ್ಲಿಗೆ
ಕಂಡೀತೇ?
ಊರದಾರಿಯ ಗುಂಟ ಕೆಂಡದ ನಡಿಗೆ
ಹೆಣ್ಣಿಗಾಗಿಯೇ ಹಾಸಿರುವರಂತೆ
ಬೆಂದಷ್ಟು ಕೋಮಲ ಪಾದಗಳು
ಬಸಿದು ನೆಕ್ಕುವರಂತೆ ಜಗದ ಗದ್ದುಗೆ ಹಿಡಿದ
ಗಂಡೆಂಬ ಪಾಪಾತ್ಮ ಪುಂಡರು

ಎರಡು ವಾರಗಳ ಹಿಂದೆ ಸ್ತ್ರೀ ಜಗತ್ತು ಮತ್ತೆ ಬೆಚ್ಚಿ ಬೀಳುವಂತೆ ಇನ್ನೊಂದು ಅತ್ಯಾಚಾರ ಮತ್ತು ಕೊಲೆ ನಡೆದುಹೋಯಿತು. ವಿಜಾಪುರದ ದಾನೇಶ್ವರಿ ಎಂಬ ಒಂಬತ್ತನೇ ತರಗತಿಯ ವಿದ್ಯಾರ್‍ಥಿನಿ ತನ್ನ ಶಾಲೆಯ ಹೋಗುವ ದಾರಿಯಲ್ಲಿ ಅಪಹರಿಸಲ್ಪಟ್ಟು ಅತ್ಯಾಚಾರಕ್ಕೆ ಒಳಗಾಗಿ ಅಷ್ಟೇ ಅಲ್ಲ ವಿಕೃತವಾಗಿ ದುರುಳರ ಅಟ್ಟಹಾಸಕ್ಕೆ ನರಳಿ ಕೊಲೆಯಾಗಿ ಹೋದಳು. ಇಂತಹ ದೌರ್‍ಜನ್ಯಗಳು ಲೆಕ್ಕಕ್ಕೆ ಸಿಗದಂತೆ ಹೆಚ್ಚುತ್ತಲೇ ಇರುವುದು ಇನ್ನೊಂದು ದುರಂತ.

ಹೆಣ್ಣನ್ನು ಕಾಮದ ದೃಷ್ಟಿಯಿಂದಲೇ ಕಾಣುವ ಕಾಮುಕ ಕಣ್ಣುಗಳಿಗೆ ಅದು ಮಗುವೋ ಮುದುಕಿಯೋ ಯಾವುದಾದರೂ ತಿಳಿಯಲಾಗದ ಮೃಗತ್ವವಿದೆ. ಮೃಗಗಳಿಗೂ ಹೀನವಾದ ಪೈಶಾಚಿಕ ಮನೋವೃತ್ತಿಯಿದೆ. ಮೃಗಗಳಾದರೂ ಕಾಲ ಸಮಯದ ಪರಿಜ್ಞಾನದೊಂದಿಗೆ ಫಲಿತ ಹೆಣ್ಣು ಮೃಗವನ್ನೆ ಕೂಡುತ್ತವೆ. ಆದರೆ ಈ ಮಾನವ ಜಗತ್ತು ಆ ಪಶು ಜಗತ್ತಿಗಿಂತ ಕೀಳಾಗಿ ವಿಕೃತವಾಗಿ ಬದಲಾಗುತ್ತಿದೆ. ಆಧುನಿಕತೆಯ ಆಡಂಬರದಲ್ಲಿ ಯಾಂತ್ರಿಕತೆಯಲ್ಲಿ ಪುರುಷ ಪ್ರಧಾನ ವ್ಯವಸ್ಥೆಯ ಸಾಮಾಜೀಕರಣದ ನೆಲೆಯಲ್ಲಿ ಮೌಲ್ಯಗಳು ಶಿತಲೀಕರಣಗೊಳ್ಳುತ್ತಲೇ ಇದೆ. ಧರ್‍ಮ ರಾಜಕಾರಣ, ಲಿಂಗ ರಾಜಕಾರಣ ಸೃಷ್ಟಿಸುತ್ತಿರುವ ಹಲವಾರು ಸಾಮಾಜಿಕ ಅಶಾಂತಿಗಳಿಗೆ ಮುಗ್ಧ ಜೀವಗಳು ಬಲಿಯಾಗುತ್ತಿವೆ. ಇದೇ ತಿಂಗಳಲ್ಲಿ ಕರ್‍ನಾಟಕದ ಎರಡು ಬೇರೆಬೇರೆ ಜಿಲ್ಲೆಗಳಲ್ಲಿ ಎರಡು ಕೊಲೆಗಳು ನಡೆದುಹೋದವು. ಜಾತಿ ಧರ್‍ಮದ ಹೆಸರಿನಲ್ಲಿ ಉತ್ತರ ಕನ್ನಡದ ಪರೇಶ ಮೇಸ್ತ ಎಂಬ ಬಡ ಹದಿಹರೆಯದ ಹುಡುಗನ ಕೊಲೆ, ಹೆಣ್ಣು ಎಂದೊಡನೇ ಕೆರಳುವ ಗಂಡು ಪ್ರಾಣಿಯ ಕಾಮೋನ್ಮತ್ತತೆಗೆ ಬಲಿಯಾದ ವಿಜಯಪುರದ ಅಪ್ರಾಪ್ತ ಬಾಲೆ. ಎರಡು ಘಟನೆಗಳಲ್ಲೂ ನೊಂದ ಕುಟುಂಬದ ಆರ್‍ತನಾದ ಅದರೊಂದಿಗೆ ಆ ಘಟನೆಗಳು ಸಭ್ಯ ನಾಗರಿಕರಲ್ಲಿ ಮೂಡಿಸಿದ ಭಯ ಬಹುಶಃ ಮರೆಯುವಂತಹುದಲ್ಲ.

ಮನುಷ್ಯತ್ವ ಮಾರಿಕೊಳ್ಳುತ್ತ ಅಪರಾಧಿಗಳನ್ನು ರಕ್ಷಿಸುವ ಕಾನೂನು ವ್ಯವಸ್ಥೆಯಲ್ಲಿ ಏನು ಮಾಡಿದರೂ ನಡೆಯುವುದು ಎಂಬ ಮನೋಭಾವ ಬಲಗೊಳ್ಳುತ್ತಿರುವುದು ಈ ಘಟನೆಗಳು ಮರುಕಳಿಸಲು ಕಾರಣವೂ ಆಗಿರಬಹುದು. ಮನುಷ್ಯತ್ವದ ಕುರಿತು ಹೆಚ್ಚು ಹೆಚ್ಚು ಚರ್‍ಚೆ ಸಂವಾದ, ದಯೆ ಕಾರುಣ್ಯದ ವಿಚಾರಗಳು ಕ್ಷೀಣಿಸುತ್ತ ಸಮೂಹ ಮಾಧ್ಯಮಗಳು ಉತ್ಪ್ರೇಕ್ಷಿಸುವ ಕೊಲೆ ಅತ್ಯಾಚಾರದ ದೃಶ್ಯಗಳು ಇವುಗಳಿಗೆ ಪ್ರಚೋದನೆ ನೀಡುತ್ತಿರುವುದಂತೂ ಸತ್ಯ.

ಇದಕ್ಕೆ ಆಧುನಿಕ ತಂತ್ರಜ್ಞಾನದ ಕೊಡುಗೆ ಅಪಾರವೆಂದೇ ಬಗೆಯಲಾಗಿದೆ. ದೃಶ್ಯಮಾಧ್ಯಮಗಳ ಅಭಿವೃದ್ಧಿ ಇಂದು ಇಂತಹ ಅಪರಾಧಿ ಮನೋಭಾವವನ್ನು ತರುಣರಲ್ಲಿ ಪುರುಷರಲ್ಲಿ ಮೂಡಿಸುತ್ತಿದೆ. ಸಿನೇಮಾ, ಟಿ.ವ್ಹಿಗಳಲ್ಲಿ ಪ್ರಸಾರವಾಗುವ ಉದ್ರೇಕಿಸುವ ಅಶ್ಲೀಲ ದೃಶ್ಯಗಳು, ಆಧುನಿಕ ಜೀವನ ಶೈಲಿ, ಮುಕ್ತ ಲೈಂಗಿಕತೆಯ ವಿಚಾರಗಳು ಅಂತರ್‍ಜಾಲದಲ್ಲಿ ಪುಕ್ಕಟೆಯಾಗಿ ವೀಕ್ಷಿಸಬಹುದಾದ ಅಶ್ಲೀಲ ವಿಡಿಯೋಗಳು ಅಮಲೇರಿದ ಕಣ್ಣುಗಳಲ್ಲಿ ನೈತಿಕತೆಯನ್ನು ಕುರುಡಾಗಿಸಿ ವಿಕೃತಿಯನ್ನು ಮೆರೆಸುತ್ತವೆ. ಆದರೆ ಇದಕ್ಕೆ ಬಲಿಯಾಗುವುದು ಮಾತ್ರ ಮುಗ್ಧ, ಹೆಣ್ಣು ಜೀವಗಳು. ಸ್ತ್ರೀ ದೈಹಿಕ ಅಬಲತೆ ಸೌಂದರ್‍ಯಕ್ಕಿಂತ ಹೆಚ್ಚಾಗಿ ಗಂಡು ಪ್ರಾಣಿಯನ್ನು ಪ್ರಚೋದಿಸುವುದೋ ಏನೋ? ಬೆಕ್ಕಿಗೆ ಆಟ ಇಲಿಗೆ ಪ್ರಾಣ ಸಂಕಟ ಎಂಬಂತೆ ಹೆಣ್ಣನ್ನು ಬರ್‍ಭರವಾಗಿ ನಡೆಸಿಕೊಂಡು ಕೊಲೆಗೈಯುವ ಕಿರಾತಕ ಬುದ್ದಿ ಬಹುಶಃ ಪುರುಷನ ಸ್ವತ್ತು ಮಾತ್ರ. ಇಂತಹ ನೀಚ ಕೃತ್ಯವನ್ನು ಮಾಡುವ ಹೆಣ್ಣುಗಳು ವಿರಳದಲ್ಲಿ ಅತಿ ವಿರಳ. ಒಂದೊಮ್ಮೆ ಅಂತಹ ಕೃತ್ಯ ಸ್ತ್ರೀ ಮಾಡಿದ್ದೇ ಹೌದಾದಲ್ಲಿ ಅದರ ವಿರುದ್ಧದ ಹೋರಾಟ ಅದರ ವಿಕೋಪತೆ ಯಾವ ಮಟ್ಟದ್ದಾಗಿರುತ್ತದೆ ಎಂಬುದನ್ನು ಊಹಿಸಲು ಆಗದು. ಹೆಣ್ಣು ತನ್ನ ಸಮಾನತೆಗೆ ತನ್ನ ಸುಭದ್ರತೆಗೆ ಹೋರಾಡುವುದನ್ನು ಆ ಕುರಿತು ಬರೆಯುವುದನ್ನು ವಿರೋಧಿಸುವ ಪುರುಷ ಜಗತ್ತು ತನ್ನತನವನ್ನು ಸಮರ್‍ಥಿಸಿಕೊಳ್ಳುತ್ತ ಮೃದು ಜೀವಗಳನ್ನು ಹೊಸಕಿ ಹಾಕುತ್ತಲೇ ಇರುವುದು. ಇದಕ್ಕೆ ಕೊನೆಯಿಲ್ಲದಂತೆ ಇಂತಹ ಘಟನೆಗಳು ಮರುಕಳಿಸುತ್ತಲೇ ಇರುವುದು.

ಅತ್ಯಾಚಾರ ಮನಃಶಾಸ್ತ್ರದ ಪ್ರಕಾರ ಅದೊಂದು ಭಿನ್ನ ಮನಃಸ್ಥಿತಿಯ ಮಾನಸಿಕ ವಿಚಲತೆಯ ದ್ಯೋತಕ. ಅತ್ಯಾಚಾರಿ ಅಸಮ ಅಸಂತುಲತೆಯ ಮಾನಸಿಕ ಚಿತ್ತವೃತ್ತಿಯ ಹಿನ್ನೆಲೆಯುಳ್ಳವನಾಗುತ್ತಾನೆ. ಅದೊಂದು ಸಂಕೀರ್‍ಣಮಾನಸಿಕ ಸ್ಥಿತಿ. ಆ ಕ್ಷಣಕ್ಕೆ ಆತನಲ್ಲಿ ಮೂಡುವ ವಿಕೃತಿ ಹಾಗೂ ಅದನ್ನು ಬಣ್ಣಿಸುವ ಪದಗಳಿಲ್ಲ. ಅದೊಂದು ಚಟವೆಂಬಂತೆ ಆತನಲ್ಲಿ ಬೇರೂರುವ ಸಾಧ್ಯತೆಯೂ ಇದೆ. ಸಾಮಾಜಿಕ ಸ್ವಾಸ್ಥ್ಯವನ್ನು ಕದಡುವ ಇಂತಹ ಘಟನೆಗಳು ಅಪರಾಧಿಗಳಿಗೆ ಯಾವ ಕರುಣೆಯನ್ನು ತೋರಿಸದ ಕ್ರೂರ ಶಿಕ್ಷೆ ಮಾತ್ರ ಯೋಗ್ಯವೆನ್ನಿಸುತ್ತದೆ. ಆದರೆ ಅಂತಹ ಸಾಧ್ಯತೆಗಳು ಭಾರತದಲ್ಲಿಲ್ಲ. ಯಾಕೆಂದರೆ ಕಾನೂನು ವ್ಯವಸ್ಥೆಯ ಲೋಪ ಎದ್ದು ಕಾಣುತ್ತದೆ. ವಕೀಲನಾದವನ ಜಾಣ್ಮೆಯ ಮೇಲೆ ಕೇಸುಗಳು ನಿಂತಿರುತ್ತವೆ. ಬೇಲಿಯೇ ಎದ್ದು ಹೊಲ ಮೇಯುವ ಪರಿಸ್ಥಿತಿ ನಮ್ಮಲ್ಲಿದೆ. ಹಾಗಾಗೇ ನಾವು ಮುಂದುವರೆದ ದೇಶಗಳಿಗಿಂತ ಸುಮಾರು ನೂರು ವರ್‍ಷಗಳಷ್ಟು ಹಿಂದೆ ಬಿದ್ದಿದ್ದೇವೆ.

ಸಾಂಸ್ಕೃತಿಕ ಹಿರಿಮೆಯುಳ್ಳ ಸಂಪ್ರದಾಯಸ್ಥ ಭಾರತದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಈ ಘಟನೆಗಳಿಗೆ ಕಾರಣಗಳನ್ನು ಪುರುಷ ಪ್ರಧಾನತೆಯನ್ನು ಎತ್ತಿ ಹಿಡಿಯುವ ನಮ್ಮ ಮೂಲಭೂತವಾದಿಗಳು ಯೋಚಿಸಬೇಕಾದ ಅಗತ್ತವಿದೆಯಲ್ಲವೇ? ಅಮೇರಿಕಾದಂತಹ ಅತೀ ಮುಂದುವರೆದ ದೇಶಗಳಲ್ಲಿ ವಿರಳವಾಗಿರುವ ಈ ಘಟನೆಗಳು ನಮ್ಮಲ್ಲಿ ಮಾತ್ರ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಇದಕ್ಕೆಲ್ಲಾ ಕಟ್ಟುನಿಟ್ಟಾದ ಕ್ರಮಗಳು ಎಂದು ಜಾರಿಯಾಗುವುದೋ ಅಂದಿಗೆ ಮಾತ್ರ ಹೆಣ್ಣು ನಿರಾಳವಾಗಿ ಉಸಿರಾಡುವಂತಾಗಬಹುದು. ‘ಎಲ್ಲಿ ಸ್ತ್ರೀ ಪೂಜಿಸಲ್ಪಡುತ್ತಾಳೋ ಅಲ್ಲಿ ದೇವರು ವಾಸಿಸುತ್ತಾನೆ’ ಎಂಬ ಪುರಾಣ ಬದನೆಕಾಯಿ ಬರಿಯ ಭಾಷಣ ಗೋಷ್ಠಿಗಳ ಒಣಪದ ಗುಚ್ಛವಾಗಿ ಬಳಕೆಯಾಗುವುದ ಬಿಟ್ಟರೆ ನಿತ್ಯ ಸ್ತ್ರೀ ದೌರ್‍ಜನ್ಯ ಭಾರತದ ಗೋಳಾಗಿದೆ. ಬರಿಯ ಗೊಡ್ಡು ಸನಾತನತೆಯನ್ನು ಬಿಂಬಿಸುವ ಸ್ತ್ರೀ ಹಾಗೂ ದುರ್‍ಬಲ ವರ್‍ಗವನ್ನು ದಮನಿಸುವ ಕ್ರಮದ ಆಚರಣೆಯ ವಿರುದ್ಧ ಸಿಡಿದೇಳಬೇಕಾದ ಅನಿವಾರ್‍ಯತೆ ಇಂದಿನ ಪ್ರಸ್ತುತತೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆಗ-ಈಗ
Next post ಯುದ್ಧ ನಿಲ್ಲಲಿ ಬುದ್ಧಿ ಬೆಳೆಯಲಿ

ಸಣ್ಣ ಕತೆ

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…