ನಮ್ಮೆಲ್ಲರ ಬದುಕಿನ ಅತ್ಯಂತ ಹಳೆಯ ನೆನಪುಗಳಿಗೆ ಕೋಟಿ ರೂಪಾಯಿ ಬೆಲೆ!

ಇಂದಿನ ಐಟಿ-ಬಿಟಿ-ಮೊಬೈಲ್-ಇಂಟರ್ನೆಟ್-ಟೀವಿ-ಠೀವಿ ಯುಗದಲ್ಲಿ… ಟೆನ್ಶನ್ನಿನ ತಿಪ್ಪವ್ವ… ರಕ್ತದೊತ್ತಡದ ರಂಗವ್ವ… ಸಕ್ಕರೆ ಕಾಯಿಲೆಯ ಅಕ್ಕರೆಯ ಜೋಕುಮಾರಪ್ಪ… ಇವರೆಲ್ಲ ನಮ್ಮ ಅಂತರಂಗದ ಆತ್ಮೀಯ ಸಂಗಾತಿಗಳಾಗಿ ಬಿಟ್ಟಿದ್ದಾರೆ!

ತಂಪೊತ್ತಿನಲ್ಲಿ ತಣ್ಣಗೆ ನೆನೆಯಬೇಕಾದ ಬೆಳದಿಂಗಳ ನೆನಪುಗಳು ಮಳೆಬಿದ್ದು ಗೂಡು ಸೇರಿ ಬಿಟ್ಟಿವೆ. ಸ್ಯಾಟಲೈಟ್ ಕನೆಕ್ಷನ್ ಸಂಪರ್ಕ ರಾಕ್ಷಸ ಅವತಾರ ತಾಳಿ ಬಂದ ನಂತರ… ಶಾಂತಿಯ ಸೋಬಾನೆ ದೇವತೆ ನಮ್ಮ ಹಳೆಯ ನೆನಪುಗಳೊಂದಿಗೆ ಶಾಶ್ವತವಾಗಿ ಓಡಿಯೇ ಹೋದಳು ಎಂದು ದುಃಖವಾಗುತ್ತದೆ!

ಜಂಗುತಿಂದ ಮುರುಕು ಟ್ಯಾಂಕಿನಲ್ಲಿ ಚಂದ್ರ ಚಕೋರಿ ರಾಜಕುಮಾರಿಯನ್ನು ಕವುದಿಯಲ್ಲಿ ಸುತ್ತಿ ಮುಚ್ಚಿಟ್ಟಂತೆ, ಕೆಲವರು ಹುಚ್ಚರು ತಮ್ಮ ಬದುಕಿನ ಇಂಥ ಪ್ರಾಚೀನ ನೆನಪುಗಳನ್ನು ಬಚ್ಚಿ ಇಟ್ಟಿರುತ್ತಾರೆ! ಅಂತ ಹಾಳುಹಳೇ ತಿರುಕಾರಾಮರಲ್ಲಿ ನಾನೂ ಒಬ್ಬ!

ಹಾಂ… ಬಹುಶಃ ಇಂಥ ಸವಿನೆನಪುಗಳು ಹಳ್ಳಿಯ ಗಂವ್ವಾರನಿಂದ ಹಿಡಿದು ಅಮೇರಿಕಾ ಪ್ರೆಸಿಡೆಂಟ್ ವರೆಗೂ ಒಂದೇ ಥರ ಅಂತ ಚೂರು ಜಂಬದಿಂದ ಹೇಳಲೂ ಬಹುದು!

ನೆನಪುಗಳಿಗೆ ಜಾತಿ ಇಲ್ಲ!
ನೆನಪುಗಳಿಗೆ ಅಂತಸ್ತು ಇಲ್ಲ!

ಹೌದು… ನಾನಿನ್ನೂ ಅಮ್ಮನ ಟೊಂಕದಲ್ಲಿ ಕುಂತು ಹೋಗುತ್ತಿದ್ದ ಮೂರು ವರ್ಷಗಳ ಕುನ್ನಿ ಮರಿ ಆಗಿದ್ದೆ!

ನನಗೆ ಸುಂದರವಾದ ಜರಿ ಟಪ್ಪಿಗೆ ಇತ್ತು. ನಮ್ಮಣ್ಣ ಕೊಟ್ಟ ಮುರುಕು ಹ್ಯಾಟು ಇತ್ತು. ಅಷ್ಟೇ ಅಲ್ಲ ನನ್ನ ಎರಡೂ ಕಿವಿಗಳಲಿ ಬಂಗಾರದ ಎರಡು ಸುಂದರವಾದ ಬೆಲೆಬಾಳುವ ಮುರುವುಗಳೂ ಇದ್ದವು!

ಹಾಂ… ಹಳೆ ಹುಬ್ಬಳ್ಳಿಯ ಸರಸೋತೆಮ್ಮ ಕಟ್ಟಿಮೇಲೆ ಆ ಕಾಕಾ ಆ ದಿನ ನನ್ನ ಹತ್ತಿರ ಬಂದ. ಅವನೇ ನನಗೆ… “ನಾ ನಿನ್ನ ಕಾಕಾ ಅದೇನೀ… ಬಾ…” ಅಂತ ಪ್ರೀತಿಯಿಂದ ತನ್ನ ಪರಿಚಯ ಹೇಳಿ ಎತ್ತಿಕೊಂಡು ತನ್ನ ತೊಡೆಯ ಮೇಲೆ ನನ್ನನ್ನು ಮಲಗಿಸಿ ನಂಬಿಗೆ ಹುಟ್ಟಿಸಿಯೇ ಬಿಟ್ಟ. ಅಲ್ಲದೆ ನನಗೆ…. ತಿನ್ನು…. ತಿನ್ನು…. ಅಂತ ಜುಲಿಮಿ ಮಾಡಿ ವಣಾಚುಮ್ಮರಿ, ಡಾಣಿ ತಿನ್ನಿಸಿದ. ಮೆಲ್ಲನೆ ರಮಿಸುತ್ತ ನನ್ನ ಕಿವಿಯಲ್ಲಿಯ ಎರಡೂ ಬಂಗಾರದ ಮುರುವುಗಳನ್ನು ಬಿಚ್ಚಿಕೊಂಡು ಒಂದು ದೊಡ್ಡ ತಾಮ್ರದ ದುಡ್ಡು ನನ್ನ ಕೈಯಲ್ಲಿಟ್ಟ… ಮನೆಗೆ ಹೋಗು… ಅಂದ!

ನನಗೆ ಖುಷಿಯೋ ಖುಷಿ. ಯಾಕೆಂದರೆ ಆ ಕಾಲದಲ್ಲಿ ಒಂದು ದುಡ್ಡಿಗೆ ಆರುಭಜಿ ಬರುತ್ತಿದ್ದವು!

ನಾನು ಮನೆಗೆ ಹೋಗಿ… ಅವ್ವ ಅಪ್ಪ ಅವರಿಗೆ… “ಕಾಕಾ ದುಡ್ಡು, ಕೊಟ್ಟಾ…” ಅಂತ ಕುಣಿದಾಡುತ್ತ ತೋರಿಸಿದೆ. ನನ್ನ ಅವ್ವ… “ಯಾ ಕಾಕಾ?” ಅಂತ ಕೇಳಿದಳು. ನಾನು… “ಕಾಕಾ… ಆ ಕಟೀ ಮ್ಯಾಲಿನ ಕಾಕಾ…” ಎಂದು ಹೇಳುತ್ತಾ, ನನ್ನ ಕಿವಿಯ ಬಂಗಾರದ ಮುರುವುಗಳನ್ನು ಕಾಕಾ ಬಿಚ್ಚಿಕೊಂಡು ಒಂದು ದುಡ್ಡು ಕೊಟ್ಟದ್ದನ್ನು ಖುಷಿಯಿಂದ ಕುಣಿದು ಹೇಳಿದೆ!

ತಕ್ಷಣವೇ ನನ್ನ ಅವ್ವ ಚಿಟ್ಟನೇ ಚೀರಿದಳು! ನನ್ನ ಅಕ್ಕ ಪಾರಕ್ಕೆ ಅವಳೂ ಚೀರಿದಳು! ನನ್ನ ಅಪ್ಪ ರೂಲ್‍ಕಟಿಗಿ ತೊಗೊಂಡು ಖಡಕ್ ರುದ್ರರಾಗಿ ಕಳ್ಳನನ್ನು ಹಿಡಿಯಲು ಎದ್ದರು! ಮನೆಯ ಹತ್ತಾರು ಜನರು ಕ್ಷಣಾರ್ಧದಲ್ಲಿ ಸುತ್ತಮುತ್ತಲಿನ ಓಣಿಗಳ ಹತ್ತಾರು ದಿಕ್ಕಿನಲ್ಲಿ ನನ್ನನ್ನು ಹೊತ್ತುಕೊಂಡು ಓಡೋಡಿ ಹೋದರು! ಓಣಿಯ ಜನರೆಲ್ಲಾ ಹಿಂಡಿಗೆ ಹಿಂಡೇ ಓಡಾಡಿದರು!

ಆ ನನ್ನ ಪ್ರೀತಿಯ ಕಾಕಾ… ಕೌ… ಅಂತ ಹಾರಿ ಹೋಗಿ ಬಿಟ್ಟಿದ್ದ!

ಇನ್ನೆಲ್ಲಿ ಕಾಕಾ?

ಒಂದು ತಾಮ್ರದ ದುಡ್ಡು ಮಾತ್ರ ನನ್ನ ಕೈಯಲ್ಲಿ ಕಾಕನ ಕರುಣೆ ಕಾಣಿಕೆಯಾಗಿ ಉಳಿಯಿತು!
*****