ಯುದ್ಧ ನಿಲ್ಲಲಿ ಬುದ್ಧಿ ಬೆಳೆಯಲಿ
ಬುದ್ಧರಾಗಲಿ ಶಿವಶಿವಾ
ಸದ್ದುಗದ್ದಲ ಸುದ್ದಿ ಹೋಗಲಿ
ಶಾಂತಿ ತುಂಬಲಿ ಪ್ರಿಯಶಿವಾ

ಗಂಡ ಹೆಂಡಿರ ಪ್ರೇಮ ಮಿಲನಕೆ
ನಡುವೆ ಅರ್‍ಚಕ ಯಾತಕೆ
ನಾವು ಆತ್ಮರು ದೇವ ತಂದೆಯು
ನಡುವೆ ಧರ್‍ಮಾ ಯಾತಕೆ

ನಿಲ್ಲು ಧರ್‍ಮವೆ ನಿಲ್ಲು ನಿಲ್ಲು
ನೀನು ಮಾಡುವದೇನಿದೆ
ಇತ್ತ ಭುವನವು ಅತ್ತ ದೇವರು
ನಡುವೆ ಕೆಲಸಾ ಏನಿದೆ

ನದಿಯು ಸಾಗರ ಪರ್‍ವತಾವಳಿ
ಭೂಮಿ ಸುಂದರಗೊಳಿಸಿವೆ
ಧರ್‍ಮ ಸೂತ್ರಾ ಜಾತಿ ಗೋತ್ರಾ
ಇದ್ದ ಭೂಮಿಯ ಕೆಡಿಸಿವೆ

ದೇವರೆಂದರೆ ಯಾರ ದೇವರು
ಅವನ ಹೆಸರಲಿ ಕೊಲೆಗಳೆ
ಧರ್‍ಮವೆಂದರೆ ಯಾರ ಕರ್‍ಮವು
ಘೋರ ರಕ್ತದ ಹೊಳೆಗಳೆ
*****