ನುಡಿ ಮುನ್ನುಡಿ

ನುಡಿ ಮುನ್ನುಡಿ

ಪುಸ್ತಕದಂಗಡಿಯಲ್ಲಾಗಲಿ, ಗ್ರಂಥಾಲಯದಲ್ಲಾಗಲಿ, ಎಲ್ಲಾದರೂ ಆಗಲಿ, ಪುಸ್ತಕವೊಂದನ್ನು ಕೈಗೆತ್ತಿಕೊಂಡರೆ ಹೆಚ್ಚನವರೂ ಮೊದಲು ಓದುವುದು ಬೆನ್ನುಡಿ. ಈ ಬೆನ್ನುಡಿಯಿಂದ ಪುಸ್ತಕದ ಕುರಿತು ನಮಗೊಂದು ಚಿಕ್ಕ ಮಾಹಿತಿ ದೊರಕುತ್ತದೆ. ಕೆಲವು ಪ್ರಕಾಶಕರು ಬೆನ್ನುಡಿಯ ಕೆಳಗಡೆ ಗ್ರಂಥಕರ್ತವಿನ ಬಗ್ಗೆಯೂ ತುಸು ವಿವರ ನೀಡುತ್ತಾರೆ. ಇವೆರಡೂ ಓದುಗರಿಗೆ ಸಹಾಯಕವಾಗುತ್ತವೆ. ಪುಸ್ತಕವನ್ನು ಓದಲೆಂದು ಕೈಗೆತ್ತಿಕೊಂಡ ಮೇಲೆಯೂ ಓದುಗರು ನೇರವಾಗಿ ವಿಷಯಪ್ರವೇಶ ಮಾಡುವುದು ಅಪರೂಪ. ಹೆಚ್ಚಾಗಿ ಎಲ್ಲಾ ಪುಸ್ತಕಗಳಿಗೂ ಒಂದು ಮುನ್ನುಡಿಯೋ ಪಸ್ತಾವನೆಯೋ ಇರುತ್ತದೆ. ಇದು ಗ್ರಂಥಕರ್ತ ಸ್ವತಃ ಬರೆದುದಿರಬಹುದು, ಆ ಕ್ಷೇತ್ರದಲ್ಲಿ ಹೆಸರು ಮಾಡಿದ ಇನ್ನು ಯಾರೋ ಬರೆದುದೂ ಇರಬಹುದು. ಹೆಚ್ಚಾಗಿ ಮೊದಲ ಒಂದೆರಡು ಕೃತಿಗಳಿಗೆ ನಾವು ಸುಪ್ರಸಿದ್ಧರಿಂದ ಮುನ್ನುಡಿ ಬರೆಸುತ್ತೇವೆ; ನಂತರ ರೆಕ್ಕೆ ಬಲಿತ ಮೇಲೆ, ಒಂದೋ ನಾವೇ ಬರೆಯುತ್ತೇವೆ, ಇಲ್ಲವೇ ಮುನ್ಮುಡಿಯೇ ಬೇಡವೆಂದುಕೊಳ್ಳುತ್ತೇವೆ.

ಬೇರೆಯವರ ಕೈಯಿಂದ ನಾವು ಬರೆಸುವ ಮುನ್ನುಡಿಗಳಿಗೆ ಸ್ಥಿರವಾದ ಮಾದರಿಯೆಂಬುದೇನೂ ಇಲ್ಲ. ಆದರೂ ಕೃತಿಯ ಕುರಿತು ಅವರು ಏನಾದರೂ ಕೆಲವು ಒಳ್ಳೆ ಮಾತುಗಳನ್ನು ಹೇಳಬೇಕೆಂಬ ಆಸೆ ಇರುತ್ತದೆ. ಹೆಚ್ಚಾಗಿ ಕೃತಿ ಮುದ್ರಣಕ್ಕೆ ಹೋಗುವ ತಯಾರಿಯಲ್ಲಿದ್ದಾಗಲೇ ಮುನ್ನುಡಿಕಾರರಿಗೆ ಅದರ ಹಾಳೆಗಳನ್ನು ಈಯುವುದು. ಅವರು ಓದಿ ಮುನ್ನುಡಿ ಬರೆದು ಕೊಡಬೇಕು. ಕೃತಿಯ ಬಗ್ಗೆ ಏನು ಬೇಕಾದರೂ ಹೇಳುವುದಕ್ಕೆ ಅವರಿಗೆ ಸ್ವಾತಂತ್ರ್ಯವಿದೆ. ಹೊಗಳಲೇಬೇಕೆಂದೇನೂ ಇಲ್ಲ. ತೆಗಳಿಕೆಯ ಮಾತನ್ನೂ ಬರೆಯಬಹುದು. ಹಿಂದೆ ಕಾಸರಗೋಡು ಕಡೆಯ ಕುಳವಮ ಬಾಲಕೃಷ್ಣ ಸಂಪಾದಿಸಿದ ಕಥಾಸಂಕಲನವೊಂದಕ್ಕೆ ಶಿವರಾಮ ಕಾರಂತರು ಬರೆದ ಮುನ್ನುಡಿಯನ್ನು ನಾನು ನೋಡಿದ್ದೇನೆ. ಕಾರಂತರು ತಮ್ಮ ಸ್ವಭಾವಕ್ಕೆ ಸರಿಯಾಗಿ ದಟ್ಟಸಿದ ಮಾತಿನಿಂದಲೇ ಬರೆದಿದ್ದರು. ಮುನ್ನುಡಿ ಬೇಡಿದ ಮೇಲೆ ಅದು ಹೇಗಿದ್ದರೂ ಪ್ರಕಟಿಸುವುದು ಮರ್ಯಾದೆ. ಬಾಲಕೃಷ್ಣ ಅವರು ಬಹುಶಃ ಈ ಮರ್ಯಾದೆಯನ್ನು ಕಾಪಾಡಲೆಂದೇ ಕಾರಂತರ ಮುನ್ನುಡಿಯನ್ನು ಪ್ರಕಟಿಸಿರಬೇಕು. ಈ ಕಥಾಸಂಕಲನದ ಕತೆಗಾರರಾದರೂ ಹೆಚ್ಚಿನವರು ಆರಂಭಿಕ ಸಾಹಸಿಗಳು. ಅವರನ್ನು ಪ್ರೋತ್ಸಾಹಿಸುವ ಒಂದೇ ಒಂದು ಮಾತನ್ನೂ ಕಾರಂತರು ಬರೆದಿರಲಿಲ್ಲ. ಬದಲಿಗೆ ಅವರಲ್ಲಿರಬಹುದಾದ ಕತೆಗಾರರನ್ನು ಕೊಲ್ಲುವ ಹಾಗೆ ಬರೆದಿದ್ದರು! ಮುನ್ನುಡಿಯ ಸಂದರ್ಭದಲ್ಲಿ ಕಾರಂತರ ಈ ನಿಷ್ಟುರತೆ ಸ್ವಲ್ಪ ಅತಿಯಾಯಿತೆಂದು ಯಾರಿಗಾದರೂ ಅನಿಸದೆ ಇರದು. ಯಾಕೆಂದರೆ, ಮುನ್ನುಡಿಗೆ ಸಿದ್ಧ ಮಾದರಿಯೆಂಬುದು ಇಲ್ಲವಾದರೂ, ಕೃತಿಯ ಓದಿಗೆ ಸಹಕಾರಿಯಾಗುವ ವಿಶ್ಲಷೇಷಣೆಯನ್ನೋ, ವಿವರಗಳನ್ನೋ ಓದುಗರು ಬಯಸುತ್ತಾರೆ. ಮುನ್ನುಡಿಗಾರರೇ ಬಯ್ದುಬಿಟ್ಟರೆ, ಓದುಗ ಮತ್ತೆ ಯಾಕಾದರೂ ಕೃತಿಯನ್ನು ಓದಬೇಕು? ಆದರೆ ಕಾರಂತರ ಉದಾಹರಣೆಯೊಂದು ಅಪವಾದ. ಮಿಕ್ಕ ಮುನ್ನುಡಿಗಾರರೆಲ್ಲಾ ಒಳಿತಿನ ಮೇಲೇ ಗಮನ ಕೇಂದ್ರೀಕರಿಸುತ್ತಾರೆ. ಅಥವ ಯಾವುದೇ ಕಾರಣಕ್ಕೆ ಕೃತಿಯ ವೈಶಿಷ್ಟ್ಯತೆಯ ಬಗ್ಗೆ ಹೇಳುವುದು ಸಾಧ್ಯವಾಗದಲ್ಲಿ, ಓದುಗರಿಗೆ ಸಾಧಾರಣವಾಗಿ ಸಹಾಯವಾಗುವಂಥ ಸಾಹಿತ್ಯಕ ಮಾತುಗಳನ್ನು ಹೇಳುತ್ತಾರೆ.

ಮುನ್ನುಡಿ ಬರಕೊಡಿ ಎಂದು ಹಿರಿಯ ಸಾಹಿತಿಯೊಬ್ಬರಲ್ಲಿ ಕೇಳುವ ಲೇಖಕರಿಗೆ ಈ ಮುನ್ನುಡಿಯ ಮುಜುಗರ ಅರ್ಥವಾಗುವುದಿಲ್ಲ. ಯಾಕೆಂದರೆ, ಅವರು ತಮ್ಮ ಕೃತಿಗೆ ತೀರ ಹತ್ತಿರವಾಗಿರುತ್ತಾರೆ. ವಿಮರ್ಶಾತ್ಮಕವಾಗಿ ನೋಡುವ ‘ಸುದೂರತೆ’ ಅವರಿಗಿನ್ನೂ ಒದಗಿರುವುದಿಲ್ಲ. ಮುನ್ನುಡಿಗಾರರಿಗಾದರೆ ಇದಕ್ಕೆ ವಿರುದ್ಧವಾದ ಸಮಸ್ಯೆ- ಎಂದರೆ, ಅವರ ‘ಸುದೂರತೆ’ ನಿಜಕ್ಕೂ ಬಹುದೂರತೆಯೇ! ಅಷ್ಟು ಅವಸರದಲ್ಲಿ (ಯಾಕೆಂದರೆ, ಮುನ್ನುಡಿಯ ಸಂದರ್ಭ ಯಾವಾಗಲೂ ತುರ್ತಿನದ್ದು) ಕೃತಿಯ ಕುರಿತಾಗಿ ಭಾವನಾತ್ಮಕ ಸಂಬಂಧ ಬೆಳಸಿಕೊಳ್ಳುವುದು ಅವರಿಗೆ ಅಷ್ಟು ಸುಲಭವಲ್ಲ. ಮುನ್ನುಡಿ ಕೃತಿಯ ವಿಮರ್ಶೆಯೂ ಅಲ್ಲ, ಅದರ ಹೊಗಳಿಕೆಯೂ ಅಲ್ಲ: ಟೀಕಿಸಿದರೆ ಕೆಡುಕು, ಹೊಗಳಿದರೆ ಸ್ವಂತ ಮೌಲ್ಯಗಳಿಗೆ ಅಪಚಾರ-ಇದೇ ಮುನ್ನುಡಿಯ ಸಂದಿಗ್ಧತೆ. ನವ್ಯ ಕಾವ್ಯದ ಪ್ರಾದುರ್ಭಾವದ ಸಂದರ್ಭದಲ್ಲಿ ಗೋಪಾಲಕೃಷ್ಣ ಅಡಿಗರು ಆಗ ತಾನೇ ಬರೆಯಲು ಆರಂಭಿಸುತ್ತಿದ್ದ ಕವಿಗಳಿಗೆಲ್ಲ ಗುರುಸ್ಥಾನದಲ್ಲಿ ಇದ್ದವರು. ಒಂದು ಹತ್ತು ಹದಿನೈದು ಕವಿತೆಗಳನ್ನು ಬರೆದು ಅವುಗಳನ್ನು ಕೂಡಿಸಿ ಅಡಿಗರಿಂದ ಒಂದು ಮುನ್ನುಡಿ ಬರೆಸಿ ಕವನಸಂಕಲನ ತರುವುದು ಅಂದಿನ ಅಭ್ಯಾಸವಾಗಿತ್ತು. ನನ್ನ ಮೊದಲ ಕವನ ಸಂಕಲನ ‘ಮುಖವಾಡಗಳು’ ಕೂಡಾ ಇಂಥದೇ ಒಂದು ಪ್ರಯತ್ನ. ಇದಕ್ಕೆ ಮುನ್ನುಡಿ ಕೇಳಲೆಂದು ನಾನು ಕಾಸರಗೋಡಿನಿಂದ ಸಾಗರಕ್ಕೆ ಹೋಗಿ ಬಂದಿದ್ದೆ-ಆಗ ಅಡಿಗರು ಸಾಗರದ ಕಾಲೇಜಿನ ಪ್ರಿನ್ಸಿಪಾಲರಾಗಿದ್ದರು, ಹಾಗೂ ಅಕ್ಷರಪ್ರಕಾಶನ ಸಾಗರದಲ್ಲಿತ್ತು. ಸರಿ, ಅಡಿಗರು ನಸುನಗುತ್ತ ಒಪ್ಪಿ, ಮುನ್ನುಡಿ ಬರೆದು ಪ್ರೆಸ್ಸಿಗೆ ಕೊಟ್ಟರು, ನನ್ನ ಸಂಕಲನವೂ ಪ್ರಕಟವಾಯಿತು. ಈಗ ನೋಡಿದರೆ, ನಾನು ಅಡಿಗರಿಗೆಂಥ ಮುಜುಗರ ತಂದಿರಬೇಡ! ಅಡಿಗರು ಮೊದಲ ಒಂದೆರಡು ಪ್ಯಾರಾಗಳಲ್ಲಿ ಒಳ್ಳೆಯ ಮಾತುಗಳನ್ನಾಡಿ ನಂತರದ ಪ್ಯಾರಾಗಳಲ್ಲಿ ಸ್ವಲ್ಪ ತಿಳಿಹೇಳಿದ್ದರು. ಆ ಕಾಲದಲ್ಲಿ ಅಡಿಗರು ಇಂಥ ಕವನ ಸಂಕಲನಗಳಿಗೆ ಬರೆದ ಹಲವಾರು ಮುನ್ನುಡಿಗಳನ್ನು ನಾನು ಆಮೇಲೆ ನೋಡಿದ್ದೇನೆ. ಎಲ್ಲಾ ಮುನ್ನುಡಿಗಳದೂ ಇದೇ ಮಾದರಿ! ಇದಕ್ಕೆ ನಾನು ಅಡಿಗರನ್ನು ದೂರಲಾರೆ. ಅವರ ಮೇಲೆ ಆ ದಿನಗಳಲ್ಲಿ ಅಂಥ ಒತ್ತಡಗಳನ್ನು ತಂದವರು ನಾವೇ. ಅವರು ಮುನ್ನುಡಿ ಬರೆಯಲು ನಿರಾಕರಿಸಬಹುದಿತ್ತು, ಅಥವಾ ಕಾರಂತರ ಹಾಗೆ ಬಯ್ದು ಬರೆಯಬಹುದಿತ್ತು. ಅವರು ಅದೆರಡನ್ನೂ ಮಾಡದೆ, ಪ್ರೋತ್ಸಾಹಕರವಾಗಿಯೇ, ಆದರೆ ತಮ್ಮ ಸಾಹಿತ್ಯಮೌಲ್ಯಗಳಿಗೆ ಕುಂದುಬರದಂತೆ ಬರೆದರು. ತಮ್ಮ ಆರಂಭದ ಸಂಕಲನಗಳಲ್ಲಿ ಕುಸಿದರೂ ಅಡಿಗರ ಇಂಥ ಪ್ರೋತ್ಸಾಹದಲ್ಲಿ ಮುಂದೆ ಇದೇ ಕೃಷಿಯಲ್ಲಿ ತೊಡಗಿದ ಅನೇಕ ಕವಿಗಳು, ಸಾಹಿತಿಗಳು ನಮ್ಮ ಮುಂದೆ ಇದ್ದಾರೆ. ಆದ್ದರಿಂದ ಅಡಿಗರ ನಸುನಗೆ ಅರ್ಥಪೂರ್ಣವಾದುದು.

ಈಗ ನಾನೇ ಕೆಲವು ಸಮಕಾಲೀನರ ಕವನಸಂಕಲನ, ಕಥಾಸಂಕಲನಗಳಿಗೆ ಮುನ್ನುಡಿ ಬರೆದಿರುತ್ತ, ಈ ಮುನ್ನುಡಿಯ ಮುಜುಗರ ನನಗೂ ಅನುಭವಜನ್ಯವಾಗಿದೆ. ಯಾವುದೇ ಸಿದ್ಧರೂಪಕ್ಕೂ ಬಲಿಬೀಳದಂತೆ ಇರಲು ನಾನು ಪ್ರಯತ್ನಿಸಿದ್ದೇನೆ. ಆದ್ದರಿಂದ ವಿವಿಧ ರೀತಿಯ ಮುನ್ನುಡಿಗಳನ್ನು ಬರೆದೆ! ಪ್ರತಿಭಾ ನಂದಕುಮಾರರ ಕವನಸಂಕಲನವೊಂದಕ್ಕೆ ಒಂದು ಪತ್ರ ರೀತಿಯ ಮುನ್ನುಡಿ ಬರೆದೆ. ಆಗ ನನಗೆ ಅವರ ಕವಿತೆಗಳ ಕುರಿತಾಗಿ ಒಂದು ವಿಮರ್ಶಾನೋಟವನ್ನು ಬೆಳೆಸಿಕೊಳ್ಳುವುದಕ್ಕೆ ಸಾಧ್ಯವಿರಲಿಲ್ಲವಾದ್ದರಿಂದ ನನ್ನ ಈ ಪತ್ರರೂಪದ ಮುನ್ನುಡಿಯಲ್ಲಿ ಹೆಚ್ಚಾಗಿ ಕಾವ್ಯದ ಕುರಿತಾದ ನನ್ನ ಅಲ್ಪ ಅರಿವೇ ತುಂಬಿರುವುದು. ನನ್ನ ಮೊತ್ತ ಮೊದಲ ಮುನ್ನುಡಿ ಗೆಳೆಯರಾದ ಎಂ. ವ್ಯಾಸರ ‘ಸುಳಿ’ ಎಂಬ ಕಥಾಸಂಕಲನಕ್ಕೆ. ಅವರ ಕತೆಗಳ ವೃತಿಷ್ಟ್ಯತೆಯನ್ನು ನಾನು ಆಗಲೆ ಗುರುತಿಸಿದ್ದರಿಂದಲೂ ದಾಸ್ತೂವ್ಸ್ಕಿಯಂಥ ಮಹಾ ಕತೆಗಾರನ ಭಾವಪೂರ್ಣತೆಯನ್ನು ನಾನವರ ಶೈಲಿಯಲ್ಲಿ ಕಂಡುದರಿಂದಲೂ ಅದನ್ನು ಬರೆಯಲು ನನಗೆ ಕಷ್ಟವಾಗಲಿಲ್ಲ. ಬಹುಶಃ ಆಗ ನಾನೂ ಬರಹಗಾರನಾಗಿ ಅಷ್ಟೇನೂ ಮೈಯೆಚ್ಚರವಿದ್ದವ ಆಗಿರಲಿಲ್ಲ ಎಂಬ ಕಾರಣವೂ ಇರಬಹುದು. ಎಲ್ಲಾ ಸಿದ್ದ ರೂಪಗಳನ್ನೂ ಪ್ರಶ್ನಿಸುತ್ತ ಬಂದಿರುವ ನಾನು ಮುನ್ನುಡಿಗಳನ್ನೂ ನನಗೆ ಆಯಾ ಕಾಲಕ್ಕೆ ತೋಚಿದಂತೆ ಬರೆದುದರಿಂದಲೋ ಏನೋ ಕೆಲವೊಮ್ಮೆ ಕೆಲವರ ಟೀಕೆಗಳಿಗೂ ಒಳಗಾಗಿದ್ದೇನೆ. ಉದಾಹರಣೆಗೆ, ಮಮತಾ ಸಾಗರ ಅವರ ‘ನದೀ ನೀರಿನ ತೇವ’ ಎಂಬ ಕವನ ಸಂಕಲನದಲ್ಲಿ ಹಲವು ಪ್ರಾಯೋಗಿಕ ಕವಿತೆಗಳಿವೆ: ಈ ಕವಿತೆಗಳು ಮುಖ್ಯವಾಗಿ ಫರ್ಡಿನಾಂಡ್ ದ ಸಸ್ಯೂರ್ ಮತ್ತು ಡೆರಿಡಾ ಮುಂತಾದ ರಾಚನಿಕ, ರಾಚನಿಕೋತ್ತರ ಚಿಂತನೆಗಳನ್ನು ಒಳಗೊಂಡಿವೆ. ಈ ಸಂಕಲನಕ್ಕೆ ನಾನು ಬರೆದ ಮುನ್ನುಡಿಯಲ್ಲಿ ಇಂಥ ಚಿಂತನೆಗಳ ವಿಶ್ಲೇಷಣೆಯಿದೆ. ಕನ್ನಡದ ಪತ್ರಿಕೆಯೊಂದು ಮಮತಾ ಅವರ ಕವನ ಸಂಕಲನದ ಪುಸ್ತಕ ವಿಮರ್ಶೆಯನ್ನು ಪ್ರಕಟಿಸಿತು. ಅದರ ಜತೆಗೇ, ನನ್ನ ಲೇಖನ ಒಂದು ಮುನ್ನುಡಿಯಾಗಿ ಓದುಗರಿಗೆ ಸಹಾಯಕವಾಗಿಲ್ಲ, ಇದರಲ್ಲಿ ವೈರುಧ್ಯಗಳಿವೆ, ಹಾಗೂ ಈಗಾಗಲೇ ಕಮ್ಮಿಯಾಗಿರುವ ಕವಿತೆಯ ಓದುಗರನ್ನು ಇನ್ನಷ್ಟು ದೂರೀಕರಿಸುವಂತಿದೆ ಎಂದು ಮುಂತಾಗಿ ಟೀಕಿಸಿ ಇನ್ನೊಂದು ಲೇಖನವನ್ನೂ ಪ್ರಕಟಿಸಿತು. ಮಮತಾ ಅವರ ಈ ಕವಿತೆಗಳೂ ನನ್ನ ಮುನ್ನುಡಿಯೂ ಓದುಗರಿಗೆ ಸುಲಭದಲ್ಲಿ ಅರ್ಥವಾಗದೇ ಇರಬಹುದು ಎನ್ನುವುದನ್ನು ನಾನು ಒಪ್ಪುತ್ತೇನೆ. ನನ್ನ ಮುನ್ನುಡಿಯ ಮೇಲಿನ ಈ ಟೀಕೆಯಿಂದ ನನಗೆ ಅರ್ಥವಾದುದು, ಮುನ್ನುಡಿಯ ಕುರಿತಾಗಿ ನಿರೀಕ್ಷೆಗಳಿರುತ್ತವೆ ಎನ್ನುವುದು.

ನಾನು ಮೆಚ್ಚುವ ಯುವ ಕತೆಗಾರ ಎಂ. ಎಸ್. ಶ್ರೀರಾಮ್ ತಮ್ಮದೊಂದು ಕಥಾಸಂಕಲನಕ್ಕೆ ನನ್ನಿಂದ ಮುನ್ನುಡಿ ಬಯಸಿ ಕೇಳಿದರು. ನಾನು ಎಂದಾದರೂ ನಿಮ್ಮ ಕತೆಗಳ ಬಗ್ಗೆ ಒಂದು ವಿಮರ್ಶಾಲೇಖನ ಬರೆಯಬೇಕೆಂದಿದ್ದೇನೆ, ಆದ್ದರಿಂದ ಮುನ್ನುಡಿಯಿಂದ ನನ್ನನ್ನು ವಿನಾಯಿತಿಗೊಳಿಸಿ ಎಂದು ಉತ್ತರಿಸಿದೆ. ಕೆಲವು ವರ್ಷಗಳ ನಂತರ ಶ್ರೀರಾಮ್ ಅವರ ಕತೆಗಳ ಬಗ್ಗೆ ಸುದೀರ್ಘ ಲೇಖನ ಬರೆದು ‘ಗಾಂಧಿ ಬಜಾರ್’ ಪತ್ರಿಕೆಯಲ್ಲಿ ಪ್ರಕಟಿಸುವುದು ಸಾಧ್ಯವಾಯಿತು. ಆದರೆ ಮುನ್ನುಡಿಯನ್ನೂ ಲೇಖನವನ್ನೂ ಎರಡನ್ನೂ ಬರೆಯುವುದು ನನ್ನಿಂದ ಸಾಧ್ಯವಿರುತ್ತಿರಲಿಲ್ಲವೇ ಎಂದು ಆಮೇಲೆ ನನಗೆ ನಾನೇ ಕೇಳಿಕೊಂಡಿದ್ದೇನೆ. ಮುನ್ನುಡಿಯೆಂದರೆ ‘ತೂಷ್ಣಿಂ ದ್ವಿರಾಚಮ್ಯ’ ಎಂದು ಮಂತ್ರವಿಧಿಯಲ್ಲಿ ಹೇಳುವಂತೆ ಕೆಲವೊಂದು ಮಿತಿಯೊಳಗೆ ನಡೆಯುವ ಸಂಗತಿ. ಲೇಖನ ಬರೆಯಬೇಕೆನ್ನುವವರು ಮುನ್ನುಡಿಯಲ್ಲಿ ದ್ವಿರಾಚಮ್ಯ ಮಾಡಿಕೊಳ್ಳಬಾರದು. ಆದರೂ ಮುನ್ನುಡಿಗಳನ್ನೂ ಕೂಡಾ ಲೇಖನ ಸಂಗ್ರಹದಲ್ಲಿ ಸೇರಿಸಿಕೊಳ್ಳುವ ಸಂಪ್ರದಾಯವೊಂದಿದೆ. ಕಾರಣವೆಂದರೆ, ಮುನ್ನುಡಿಗಳೂ ಲೇಖನಗಳಂತೆಯೇ ಆಯಾ ಕೃತಿಗಳ ಬಗ್ಗೆ ಹೇಳುತ್ತಲೇ ಸಾಹಿತ್ಯಕ್ಕೆ ಒಟ್ಟಾರೆಯಾಗಿ ಸಂದಿಸುತ್ತವೆ ಎನ್ನುವುದು.

ಕೆಲವು ದೊಡ್ಡ ಸಾಹಿತಿಗಳು ಈ ಮುನ್ನುಡಿ ಕೆಲಸಕ್ಕೆ ಇಳಿಯುವುದೇ ಇಲ್ಲ. ಬಹುಶಃ ಅವರನ್ನು ಯಾರು ಕೇಳುವುದೂ ಇಲ್ಲ. ಅವರ ಮಾತಿಗೆ ಬೆಲೆಯಿಲ್ಲವೆಂದಲ್ಲ- ಅವರು ತಮ್ಮ ಬಿಂಬವನ್ನು ಆ ರೀತಿ ರೂಪಿಸಿಕೊಂಡಿರುವುದರಿಂದ. ಶಿವರಾಮ ಕಾರಂತರು ಕೂಡಾ ಮೇಲೆ ಹೇಳಿದ ಉದಾಹರಣೆಯನ್ನು ಬಿಟ್ಟು ಉಳಿದಂತೆ ಯಾರ ಪುಸ್ತಕಗಳಿಗೂ ಮುನ್ನುಡಿ ಬರೆದುದು ನನ್ನ ಗಮನಕ್ಕೆ ಬಂದಿಲ್ಲ. ಹೀಗೆ ಬರೆಯದಿರುವುದು ಈ ಹಿರಿಯ ಸಾಹಿತಿಗಳ ಸಾಚಾತನ ಇರಬಹುದು, ಅಥವಾ ಅವರಿಗೆ ಇದಕ್ಕೆ ವೇಳೆಯಿಲ್ಲದೆ ಇರಬಹುದು, ಎಳೆಯ ಲೇಖಕರಿಗೆ ಅವರ ಕುರಿತಾದ ಭಯಭೀತಿ ಇರಲೂಬಹುದು. ಆದರೆ ಇದಕ್ಕೆ ಅಪವಾದವೆಂದರೆ ಯು. ಆರ್. ಅನಂತಮೂರ್ತಿ. ಅವರಿಗೆ ಕಿರಿಯ ಲೇಖಕರೆಂದರೆ ಆದರ, ಪ್ರೀತಿ. ಅಲ್ಲದೆ, ಮಾತು, ಪ್ರೋತ್ಸಾಹ, ವೇಳೆಯ ವಿಷಯದಲ್ಲಿ ಅವರು ಉದಾರಿ. ಅವರ ಮುನ್ನುಡಿಗಳನ್ನು ಓದುವುದೆಂದರೆ ಅದೊಂದು ಆಪ್ಯಾಯಮಾನವಾದ ಸಂಗತಿಯೇ ಸರಿ. ಅನಂತಮೂರ್ತಿಯವರ ಪ್ರತಿಯೊಂದು ವಾಕ್ಯದಲ್ಲೂ ನಾವು ಕಾಣುವುದು ಅದೇನೋ ವಿಶಿಷ್ಟವಾದ ಹೊಳಹು. ಇದು ಅಸಾಧಾರಾಣವಾದ ಸಾಹಿತ್ಯಪ್ರೀತಿ (ಅರ್ಥಾತ್ ಜೀವನಪ್ರೀತಿ) ಮಾತ್ರದಿಂದಷ್ಟೇ ಸಾಧ್ಯ. ಸಾಹಿತ್ಯವೆಂದರೆ ಬೆರಳೆಣಿಕೆಯ ಕೆಲವೇ ಕವನಗಳೋ ಕಾದಂಬರಿಗಳೋ ಅಲ್ಲವೆನ್ನುವುದು ಅವರಿಗೆ ಗೊತ್ತಿದೆ. ಅದೊಂದು ನಿರಂತರ ಪ್ರವಾಹ-ಹಿಂದಿನಿಂದಲೂ ಇತ್ತು, ಮುಂದೆಯೂ ಇರುತ್ತದೆ. ಅದರಲ್ಲಿ ಹಿರಿಯರು, ಕಿರಿಯರು, ಹೊಸಬರು, ಹಳಬರು ಎಲ್ಲ ಕಾಲದಲ್ಲೂ ಇರುತ್ತಾರೆ. ಯಾರೊಬ್ಬನೂ ಅದರ ಆರಂಭಿವೂ ಅಲ್ಲ, ಅಂತ್ಯವೂ ಅಲ್ಲ. ಆದ್ದರಿಂದ ಸಾಹಿತ್ಯದಷ್ಟೇ ಮುಖ್ಯ ಸಾಹಿತ್ಯಪ್ರೀತಿ ಕೂಡಾ ತಾನಾಯಿತು, ತನ್ನ ಕುಟುಂಬವಾಯಿತು ಎನ್ನುವಂತೆ. ಆದರೆ, ಸಾಹಿತ್ಯವನ್ನು ಇಡಿಯಾಗಿ ಸ್ವೀಕರಿಸಿಕೊಂಡು ಬರೆಯುವವರು ನಮಗೆ ಆತ್ಮೀಯರಾಗುತ್ತಾರೆ. ನಾವು ಮುನ್ನುಡಿ ಕೋರಬೇಕಾದ್ದು ಅಂಥವರಿಂದಲೇ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೭೩
Next post ವಸ್ತುಸ್ಥಿತಿ

ಸಣ್ಣ ಕತೆ

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಎಪ್ರಿಲ್ ಒಂದು

    ಒಮ್ಮೆಲೇ ಅವನಿಗೆ ಮದುವೆಯಾಗಿಬಿಡಬೇಕೆಂಬ ವಿಚಾರ ಬಂತು. ಮದುವೆಯಾಗುವದೆಂದರೆ ಒಂದು ಸಹಜವಾದ ವಿಚಾರವೆಂದು ಕೆಲವರಿಗೆ ಅನಿಸಬಹುದು. ಆದರೆ ಅವನದು ಮಾತ್ರ ಹಾಗಿರಲಿಲ್ಲ. ಎಲ್ಲರೂ ಅವನಿಗೆ ‘ಆಜನ್ಮ ಬ್ರಹ್ಮಚಾರಿ’ ಎಂಬ… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…