ಮಹಾನಗರದ
ಮಧ್ಯದಲ್ಲೊಂದು
ಕಾಂಕ್ರೀಟ್ ಕಾಡು
ಆ ಕಾಡಿನಲ್ಲೊಂದು
ಗಗನ ಚುಂಬಿ ವೃಕ್ಷ –
ಗೃಹ ಸಂಕೀರ್ಣ
ಅದರಲ್ಲಿ
ಬೆಂಕಿ ಪೊಟ್ಟಣಗಳಂತಹ
ಸಾವಿರಾರು ಸಣ್ಣ ಸಣ್ಣ ಮನೆಗಳು.
ಅಂಥದೊಂದು ಗೂಡಿನಲ್ಲಿ
ಟಿ.ವಿ.ಯ ಮುಂದೆ ಕುಳಿತು
ಕಡಲ ತೀರ, ಹಚ್ಚ ಹಸಿರ ಕಾಡು
ಜುಳು ಜುಳು ಹರಿವ ನದಿ
ಪ್ರಶಾಂತತೆಯ ಗ್ರಾಮ ಜೀವನ
ಎಲ್ಲ ನೋಡುತ್ತಾ ಓಡಿತು ಮನ
ಕಡಲ ತೀರದ ತನ್ನೂರಿಗೆ
ಊರೆಲ್ಲ ಸ್ವೇಛೆಯಾಗಿ
ಹಾರಾಡಿ ನಲಿದ
ನಿಜ ನಂದನವನಕ್ಕೆ.
ಸತ್ಯದಿಂದ ದೂರ ಸರಿದು
ಕಿರು ತೆರೆಯ ಮೇಲೆ
ವಿಶ್ವರೂಪ ದರ್ಶನ ಮಾಡುವುದು
ಆಕಸ್ಮಿಕವೋ, ಅನಿವಾರ್‍ಯವೋ
ನಾಗರಿಕತೆಯ ಮೆಟ್ಟಿಲೋ
ಇದಂತೂ ನಮ್ಮ
ವಸ್ತುಸ್ಥಿತಿ.
*****
೨೩-೦೨-೧೯೯೩