ತೇಜಸ್ವಿಯವರ ಕಥಾನಕಗಳ ಹೊಸದಾರಿ

ತೇಜಸ್ವಿಯವರ ಕಥಾನಕಗಳ ಹೊಸದಾರಿ

(ಕೆಲವು ಟಿಪ್ಪಣಿಗಳು)

೧೯೭೩ರಲ್ಲಿ ಹೊರಬಂದ ‘ಅಬಚೂರಿನ ಪೋಸ್ಟಾಫೀಸು’ ಸಂಕಲನಕ್ಕೆ ತೇಜಸ್ವಿ ಬರೆದ ಮೊದಲ ಮಾತು ಅವರ ಕಥಾಸಂಕಲನದ ಕಥೆಗಳಂತೆಯೇ ಮುಖ್ಯವಾದ ಚರ್ಚೆಗೆ ವೇದಿಕೆಯಾಗುವಂತಿದೆ. ‘ಹೊಸದಿಂಗಂತದೆಡೆಗೆ’ ಎಂಬ ಶೀರ್ಷಿಕೆಯಡಿ ಬರೆದ ಮಾತುಗಳಲ್ಲಿ ಪ್ರಜ್ಞಾಪೂರ್‍ವಕವಾಗಿ ಹೊಸ ಸಂವೇದನೆಗಳನ್ನು ಗುರುತಿಸಿಕೊಂಡು, ಅವುಗಳೊಂದಿಗೆ ಬರವಣಿಗೆ ಶುರುಮಾಡಬೇಕೆನ್ನುವ ಆಶಯಗಳನ್ನು ತೇಜಸ್ವಿ ವ್ಯಕ್ತಪಡಿಸಿದ್ದಾರೆ. ಅದರಲ್ಲಿ ಲೇಖಕರಾದ ತಾವು ಮಾತ್ರವಲ್ಲದೆ ಇಡೀ ಕನ್ನಡ ಸಾಹಿತ್ಯವೇ ಏಕೆ ಬದಲಾಗಬೇಕಾದ ಚಾರಿತ್ರಿಕ ಒತ್ತಡ ಅನುಭವಿಸುತ್ತಿದೆಯೆಂದೂ ತಮ್ಮ ಅನ್ನಿಸಿಕೆಗಳನ್ನು ಹೇಳಿದ್ದಾರೆ. ಅದರಲ್ಲಿ ಬಹು ಜನಪ್ರಿಯವಾದುದು ತೇಜಸ್ವಿಯವರು ತಮ್ಮ ಸಾಹಿತ್ಯದ ಬದ್ಧತೆ ಯಾವುದರಿಂದ ಸ್ಪೂರ್ತಿಗೊಂಡಿದೆ ಎನ್ನುವ ಬಗ್ಗೆ ಹೇಳಲಾದ ಮಾತುಗಳು. ಅದೆಂದರೆ, “ಲೋಹಿಯಾರ ತತ್ವಚಿಂತನೆ, ಕುವೆಂಪುರವರ ಕಲಾಸೃಷ್ಟಿ, ಕಾರಂತರ ಜೀವನ ದೃಷ್ಟಿ ಮತ್ತು ಪ್ರಯೋಗಶೀಲತೆ ಈ ಮೂರೇ ನನ್ನ ಈಚಿನ ಸಾಹಿತ್ಯ ರಚನೆಯ ಮೇಲೆ ಗಾಢ ಪರಿಣಾಮವನ್ನುಂಟು ಮಾಡಿರುವುವು” ಎನ್ನುವುದು. ಅವರ ಈ ಆರಂಭಿಕ ಬದ್ದತೆಯ ಮಾತುಗಳು ಕೊನೆಯ ಸಾಲುಗಳಲ್ಲಿ ಇನ್ನಷ್ಟು ಪುಷ್ಟಿ ಗೊಂಡು ಪ್ರಕಟವಾಗಿವೆ”… (ನವ್ಯ) ಸಾಹಿತ್ಯ ಸಂಪ್ರದಾಯ ಅವನತಿ ಹೊಂದಿದೆ. ಅದರಿಂದಲೇ ಈ ಮಾರ್ಗವನ್ನು ತ್ಯಜಿಸುವುದಷ್ಟೇ ಅಲ್ಲದೆ, ಇದರ ಸ್ಪೂರ್ತಿಮೂಲಗಳು, ಅಭಿವ್ಯಕ್ತಿ ಪರಿಕರಗಳು, ಇದರ ಮೌಲ್ಯಗಳು ಎಲ್ಲವನನ್ನೂ ತ್ಯಜಿಸಿ ರಾಜಕೀಯವಾಗಿ, ಸಾಮಾಜಿಕವಾಗಿ, ತಾತ್ವಿಕವಾಗಿ ಸಮಗ್ರವಾಗಿ ಬದಲಾವಣೆ ಯಾಗುವುದರಿಂದ ಮಾತ್ರವೇ ಸಾಹಿತ್ಯ ಬಂದೀತು. ಹೊಸ ಉಪಮಾನಗಳು, ಹೊಸ ಪದಪುಂಜಗಳು, ಹೊಸ ಅಚ್ಚು ಮಾಡುವ ಕ್ರಮ ಇವುಗಳಿಂದಲ್ಲ….”

ತೇಜಸ್ವಿನಿಯವರ ಮಾತುಗಳಲ್ಲಿ ಕೆಲ ಆಂಶಗಳು ಗಮನಾರ್ಹವಾಗಿವೆ. ನವೋದಯದ ಕುವೆಂಪು, ಶಿವರಾಮ ಕಾರಂತರೇ ಯಾಕೆ ನವ್ಯಕಾಲದಲ್ಲಿ ಬರೆಯುತ್ತಿದ್ದ ತೇಜಸ್ವಿಯವರಿಗೆ ಆದರ್ಶಪ್ರಾಯರಾದರು ಎಂಬುದು. ಯಾಕೆ ಅವರ ಸಮಕಾಲೀನ ತತ್ವ ಜೀವನ ಗ್ರಹಿಕೆಗೆ, ಸಾಹಿತ್ಯ ರಚನೆಗೆ ಏನೇನೂ ಸಾಲದೆಂಬಂತೆ ತೇಜಸ್ವಿ ಗ್ರಹಿಸುತ್ತಾರೆ. ಈ ಪ್ರಶ್ನೆಗಳ ಬಾಲ ಹಿಡಿದು ಹೊರಟರೆ ಕುತೂಹಲಕಾರಿ ಅಂಶಗಳು ಹೊಳೆಯುತ್ತವೆ. ಕುವೆಂವು, ಕಾರಂತರು ಬಹುಮುಖೀ ಸ್ವರೂಪದ ವ್ಯಕ್ತಿಗಳನ್ನೂ ಬೆಳೆಸಿಕೊಂಡವರು. ಹಾಗೆಯೇ ಅವುಗಳನ್ನು ತಮ್ಮ ಕೃತಿಯ ಆಚರಣೆಯ ಸಂದರ್ಭದಲ್ಲಿಯೂ ತಂದುಕೊಂಡವರು. ವಿಶೇಷಾರ್ಥಗಳಲ್ಲಿ ಪಠ್ಯ ಪ್ರಕಾರಗಳನ್ನೂ ನೋಡುತ್ತ ನಿಲ್ಲದೆ, ಸಮಾಜ, ಸಂಸ್ಕೃತಿಯ ಪರಿಕರಗಳಿಂದ ವಿಪುಲವಾದ ಸಾಹಿತ್ಯ ರಚನೆಗೆ ತೊಡಗಿದವರು. ಈ ಇಬ್ಬರೂ ‘ಬರಹಗಾರ’ರೆಂದು ಕರೆಸಿಕೊಳ್ಳಲು ಹೆಚ್ಚು ಅರ್ಹರೆನಿಸುತ್ತಾರೆಯೇ ಹೊರತು ಕವಿ, ಕಾದಂಬರಿಕಾರ, ನಾಟಕಕಾರ ಎಂಬ ವಿಶೇಷಣಗಳಿಗೆ ಅಂಟಿಕೊಳ್ಳುವುದರಿಂದಲ್ಲ. ಏಕೆಂದರೆ ಪ್ರಕಾರಗಳ ಬೇಲಿದಾಟಿ ಕಾವ್ಯ, ಕಥೆ, ಕಾದಂಬರಿಗಳೆಲ್ಲದರಲ್ಲಿ ಕಥನಗಳನ್ನು ಕಟ್ಟಲು ಆಸಕ್ತಿವಹಿಸಿದಂತವರು. ಲೋಹಿಯಾ ತೇಜಸ್ವಿಯವರು ಮೆಚ್ಚುವ ವ್ಯಕ್ತಿತ್ವ ಏಕೆಂದರೆ ರಾಜಕೀಯವನ್ನು ಅಪ್ಪಟ ರಾಜಕೀಯಗೊಳಿಸದೆ ಸಾಹಿತ್ಯ, ಸಂಸ್ಕೃತಿ ಕಥನಗಳಿಂದ ಪುನರ್ ಪರಿಶೀಲನೆಗೆ ಒಡ್ಡಬಹುದೆಂದು ತೋರಿಸಿದ್ದು ಲೋಹಿಯಾ. ಆ ಎಲ್ಲಾ ಗುಣಗಳು ಮೇಳವಿಸಿದಂತೆ ಕಾಣುವ ಬಹುಮುಖೀ ಸ್ವರೂಪದ ಹುಡುಕಾಟವೇ ತೇಜಸ್ವಿಯವರ ಸಾಹಿತ್ಯದಾಳದಲ್ಲಿ ಹುದುಗಿರುವ ಗುಣ. ಆದ್ದರಿಂದ ಸಹಜ ಎನ್ನುವಂತೆ ತೇಜಸ್ವಿಯವರ ಕಥನ ಕಟ್ಟುವ ಗುಣ ಈ ಮೂವರನ್ನು ಆದರ್ಶಪ್ರಾಯರೆಂದು ಒಪ್ಪಿಕೊಂಡಿದೆ ಎನ್ನಿಸುತ್ತದೆ.

ಹಾಗೆ ನೋಡಿದರೆ, ತೇಜಸ್ವಿ ಮುಂಗಾಣ್ಕೆಯಿದ್ದ ಲೇಖಕ. ಅವರ ಕೃತಿಗಳಲ್ಲಿ ಅವರ ಕಾಲದ ಉತ್ತರ ಫಟ್ಟದಲ್ಲಿ ಅಂದರೆ ಆಧುನಿಕೋತ್ತರ, ವಸಾಹತೋತ್ತರ ಕಾಲದಲ್ಲಿರುವ ಸಂಗತಿಗಳು ಹೆಚ್ಚು ಜೀವಂತವೂ, ಕ್ರಿಯಾಶೀಲವೂ ಆಗಿರುವುದನ್ನು ಗಮನಿಸಬಹುದು. ಅದರಲ್ಲಿ ಮುಖ್ಯವಾಗಿ ನಾನು ಗುರುತಿಸುವುದು ಕಥಾನಕಗಳನ್ನು ರೂಪಿಸುವತ್ತ ಅವರ ಆಸಕ್ತಿ ತಿರುಗಿದ್ದು. ಕಥಾನಕಗಳನ್ನು ಅರಸುವುದರಿಂದ ಲೇಖಕನಿಗೆ ಕಲೆಯ ಮೂಲ ಗುಣವಾದ ಸಂತೋಷ, ರಂಜನೆಗಳನ್ನು ಕೃತಿಯಲ್ಲಿ ತರುವ ಸಾಧ್ಯತೆ ಮತ್ತು ರೊಮ್ಯಾಂಟಿಕ್ ನೆಲೆಗಳ ಮೂಲಕ ಕೃತಿಯ ಪ್ರಪಂಚವನ್ನು ವಿಸ್ತಾರಗೊಳಿಸುವ ಅವಕಾಶ ಇರುತ್ತದೆ. ಅಂತೆಯೇ ಈ ಗುಣಗಳ ಜೊತೆ ಒಂದು ಅನನ್ಯತೆ ಪ್ರಾಪ್ತಿಯಾಗುವುದು ಅವುಗಳ ಚಿತ್ರವತ್ತಾದ ವಿವರಗಳಿಂದ. ವಿಜ್ಞಾನ, ಸಾಹಿತ್ಯ, ಇತಿಹಾಸ -ಹೀಗೆ ಏನನ್ನೇ ನಿರೂಪಿಸಿದರೂ ಅವುಗಳಲ್ಲಿ ಕಥನದ ಲಯವನ್ನೇ ಅವರ ಗದ್ಯ ಅನುಭವಿಸುತ್ತಿರುತ್ತದೆ. ರಂಜನೆ, ಕುತೂಹಲಗಳನ್ನು ಹುಟ್ಟುಹಾಕುವುದರಿಂದ ಕೃತಿಯ ಓದು ಸರಾಗಗೊಂಡು, ಅದರ ಕಲಾಸೃಷ್ಟಿಯ ಮೂಸೆಯಲ್ಲಿ ಒಂದು ತತ್ವ ರೂಪುಗೊಳ್ಳುವ ಪ್ರಕ್ರಿಯೆ ಅವರ ಬರಹಗಳಲ್ಲಿ ನಡೆಯುತ್ತಿರುತ್ತದೆ.

ತೇಜಸಿಯವರು ಸಾಯುವ ಎಂಟು-ಹತ್ತು ವರ್ಷಗಳ ಮೊದಲು ಅವರ ಕಾದಂಬರಿಗಳಾಗಲಿ, ಕಥೆಗಳಾಗಲಿ ಮುಂಚೂಣಿಯಲ್ಲಿರಲಿಲ್ಲ. ಅವುಗಳ ಜಾಗದಲ್ಲಿದ್ದುದು ದೇಶವಿದೇಶದ ಕಥಗಳು, ಪ್ರಾಣಿ ಪ್ರಪಂಚದ ಕಥೆಗಳು, ಫ್ಲೈಯಿಂಗ್ ಸಾಸರ್‌‍ನಂತಹ ವೈಜ್ಞಾನಿಕ ಬರಹಗಳು ಇತ್ಯಾದಿ. ಇವುಗಳ ಜೊತೆ ಬಂದ ಹೆಸರಿಸಬಲ್ಲ ಗದ್ಯ ಕೃತಿಗಳೆಂದರೆ, ‘ಅಣ್ಣನ ನೆನಪು’, ಮತ್ತು ‘ಪರಿಸರದ ಕಥೆಗಳು.’ ಇವೆಲ್ಲವೂ ಕಥಾನಕಗಳ ಸ್ಪರೂಪದಲ್ಲೇ ಬಿಚ್ಚಿಕೊಂಡಂತವು. ಇವನ್ನು ಕಥನಗಳಾಗಿಯೇ ತೇಜಸ್ವಿ ನಿರೂಪಿಸುತ್ತಾರೆ. ಅವರ ಸಣ್ಣ ಕತೆಗಳಾದ ‘ಅಬಚೂರಿನ ಪೋಸ್ಟಾಫೀಸು,’ ‘ಕುಬಿ ಮತ್ತು ಇಯಾಲ’ ಮುಂತಾದವುಗಳ ವಿನ್ಯಾಸದಲ್ಲಿ ಇರುವ ನಾಟಕೀಯ ಕ್ರೈಸಿಸ್ ಮತ್ತು ಪರಿಣಾಮಗಳು ಸಣ್ಣಕತೆಯ ಚೌಕಟ್ಟು ಮತ್ತು ಸಾಂಕೇತಿಕತೆಯನ್ನು ಸೂಚಿಸಲು ನೆರವಾಗುತ್ತವೆ. ಅವು ಸಾಂಕೃತಿಕ ಸಾಮಾಜಿಕ ನೆಲೆಗಟ್ಟಿನ ಮಾದರಿಗಳತ್ತ, ಓದುಗರನ್ನು ಕರೆದೊಯ್ಯುವುದು ತಾಂತ್ರಿಕವಾಗಿ. ಆದರೆ ತೇಜಸ್ವಿಯವರ ಹೊಸ ಚೌಕಟ್ಟು ಬಿಡಿಸಿಕೊಂಡ ಕಥನಗಳಿಗೆ ಈ ಸಮಸ್ಯೆ ಇಲ್ಲ. ಪಠ್ಯಗಳು ನಿಧಾನವಾಗಿ ಸಂಸ್ಕೃತಿ ಪಠ್ಯಗಳಾಗುತ್ತಿರುವ ಕಾಲದಲ್ಲಿ ತೇಜಸ್ವಿಯವರ ಕಥಾನಕಗಳು ಅತ್ಯುತ್ತಮ ಸಂಸ್ಕೃತಿ ಪಠ್ಯಗಳಾಗುವ ಎಲ್ಲಾ ಅರ್ಹತೆಗಳನ್ನು ಹೊಂದಿದ್ದವು!
* * * *

ಲೋಹಿಯಾ ಕಪ್ಪು ಬಣ್ಣದ ಕೀಳರಿಮೆಯನ್ನು ವಸಾಹತೋತ್ತರ ಕಾಲದ ಪುರಾಣಗಳಲ್ಲಿರುವ ಮಿಥ್‍ಗಳನ್ನೂ ಶೋಧಿಸಿಕೊಂಡಿದ್ದಾರೆ. ತೇಜಸ್ವಿಗೆ ಹೀಗೆ ಗೂಡು ಗೂಡುಗಳಲ್ಲಿ ಪ್ರತ್ಯೇಕವಾಗಿಡದ ತಾತ್ವಿಕ ನಲೆಗಟ್ಟಿನ ಬಗ್ಗೆ ಮೆಚ್ಚುಗೆ ಇದೆ. ಅಲ್ಲದೆ ಬದಲಾಗುತ್ತಿರುವ ಸ್ವಾತಂತ್ರೋತ್ತರದ ಭಾರತದ ನಿರ್ವಸಾಹತೀಕರಣದ ಪ್ರಕ್ರಿಯೆಯ ಬಗ್ಗೆ ಅವರು ಚಿಂತಿಸುತ್ತಾರೆ. ಲೋಹಿಯಾವಾದ ಆಳದಲ್ಲಿ ಕಂಡುಕೊಂಡ ದೇಸಿಯತೆಯ ಕಷ್ಟಗಳು ಮತ್ತು ಆಧುನಿಕತೆಯೊಂದಿಗಿನ ಸಂಘರ್ಷಗಳು ಗಾಂಧೀ ಕಾಲಾನಂತರದ ವಸಾಹತೋತ್ತರ ಸಮಾಜದಲ್ಲಿ ಜ್ವಲಂತ ಇರುವಂತವು. ತೇಜಸ್ವಿ ಹಳ್ಳಿಗೆ ಹೋಗಿ ವ್ಯವಸಾಯಗಾರನಾಗಿ ಬದುಕು ಮಾಡುವೆನೆಂದುಕೊಂಡು ಬಂದಿದ್ದು ನಿರ್ವಸಾಹತೀ ಕರಣದ ಪ್ರಕ್ರಿಯೆಯ ಮೊದಲ ಭಾಗವಾಗಿ. ಅವರಿಗೆ ಹಳ್ಳಿಯ ಪ್ರಪಂಚದಲ್ಲಿ ಉಳಿದಿರುವ ದೇಸಿಯತೆಯ ಪಳೆಯುಳಿಕೆಗಳಾದ ನಂಬಿಕೆಗಳು ಪದ್ಧತಿಗಳು ಎಲ್ಲವನ್ನೂ ಪ್ರತ್ಯಕ್ಷ ಕಾಣಲು ಸಾಧ್ಯವಾಯಿತು. ತೇಜಸ್ವಿಯವರಿಗೆ ಕೊನೆಗೂ ತಾವು ಕಲಿತು ಬಂದ ಇಂಗ್ಲಿಷ್ ಮಾದರಿ ಶಿಕ್ಷಣ ಕಲಿಸಿದ ತಿಳಿವಳಿಕೆಗೂ ತಾವು ನೋಡುತ್ತಿದ್ದ ವಾಸ್ತವ ಜಗತ್ತಿಗು ಒಂದಕ್ಕೊಂದು ತಾಳಮೇಳವಿರದಂತೆ ಭಾಸವಾಗಿದ್ದಂತೆ ತೋರುತ್ತದೆ. ಜಾತಿಪದ್ದತಿಯು ವಿಷಮಿಸುತ್ತಿರುವ, ‘ಕೆಸರೂರು,’ ‘ಮಾಯಾಲೋಕ’ಗಳಲ್ಲಿ ಕಾಣುವಂತೆ, ನಾಶಕ್ಕೆ ಸಿದ್ದವಾಗುತ್ತಿರುವ ಊರುಕೇರಿಗಳು ‘ಗೊಂದಲಪುರ’ದ ವಾಸ್ತವವನ್ನು ತಂದು ಇಡುತ್ತವೆ. ‘ಪರಿಸರದ ಕಥೆ’ಗಳಲ್ಲಿ ಬರುವ ಗೊಲ್ಲರ ಯಂಗ್ಟ ಹಾವು ಹಿಡಿಯುವ ಉದ್ಯೋಗ ಮಾಡಿಕೊಂಡು ಬದುಕು ಸಾಗಿಸುತ್ತಿದ್ದಾನೆ. ಅವನ ಕೈಚಳಕ ನಿಧಾನವಾಗಿ ಮಾಸುತ್ತ, ಬಡತನದತ್ತ ಅವನನ್ನು ದೂಡುತ್ತಿದೆ. ಅದಕ್ಕೆ ಮುಖ್ಯಕಾರಣ ದೇಸಿಯತೆಯ ಮತ್ತು ಆಧುನಿಕ ಬದುಕಿನ ಸಂಘರ್ಷಗಳು. ಮಾರನಂತಹ ಜೀವಿಗಳು ಆದಿ, ಮೂಲ ತಿಳಿಯದೆ ನಿಗೂಢವಾಗಿ ಕಾಡು ಮನುಷ್ಯರ ತರವೇ ಇದ್ದು ಜೀವನ ಸಾಗಿಸುತ್ತಿರುವವರು. ಇವರನ್ನು ಯಾವ ವರ್ಗದಲ್ಲಿಡಬಹುದು? ಕನಿಷ್ಟ ಮನುಷ್ಯತ್ವದ ಲೆಕ್ಕಾಚಾರವೂ ಹತ್ತಿರ ತರಲಾರದಂತೆ ಇರುವ ಇವರು ಯಾರು? ಈ ಪ್ರಶ್ನೆಗಳನ್ನು ತೇಜಸ್ವಿ ಕಥಾನಕಗಳು ಕೇಳಿಕೊಂಡೇ ಮುಂದೆ ಸಾಗುತ್ತವೆ. ‘ಕರ್ವಾಲೋ’ ಕಾದಂಬರಿಯು ಮಂದಣ್ಣ ‘ಹಳ್ಳಿಗಮಾರ’ನಂತಿದ್ದಾ ನೆಯೇ ಹೊರತು, ಯಾವ ಕಾರಣಕ್ಕೂ ‘ಸ್ಯೆನ್ಸ್ ಮೆಟೀರಿಯಲ್’ ಎಂಬಂತೆ ಮೇಲ್ನೋಟಕ್ಕೆ ಕಾಣುವುದಿಲ್ಲ. ಕಾದಂಬರಿಯ ನಿರೂಪಕನಿಗಾಗಲಿ, ಫೋಟೋಗ್ರಾಫರ್ ಪ್ರಭಾಕರನಿಗಾಗಲೀ ಇದೇ ಅನುಮಾನ, ಏಕೆಂದರೆ ಆಧುನಿಕ ಶಿಕ್ಷಣ ಇಂತಹ ದೇಸಿ ಪ್ರತಿಭೆಗಳನ್ನು ಮಾನ್ಯ ಮಾಡುವುದಿಲ್ಲ. ಈ ಬಗೆಯ ಮಿಥ್‍ಗಳಿಂದ ಬಿಡುಗಡೆಯಾಗಲೆಂದೇ ಕರ್ವಾಲೋನಂತಹ ಪಾತ್ರ ಸೃಷ್ಟಿಯಾಗುತ್ತದೆ ಅನ್ನಿಸುತ್ತದೆ.
* * *

ಜೊನಾದನ್ ಕಲ್ಲರ್ ಎಂಬ ಸಂಸ್ಕೃತಿ ವಿಮರ್ಶಕ ತನ್ನ ‘ಥಿಯರಿ’ ಪುಸ್ತಕದಲ್ಲಿ ಬದಲಾದ ಸಾಹಿತ್ಯದ ಪರಿಕಲ್ಪನೆಗಳನ್ನು ಆರಂಭದಲ್ಲಿ ತಮಾಷೆಯಾಗಿ ವಿವರಿಸುತ್ತಾನೆ. ಅದರಂತೆ ಸಾಹಿತ್ಯವನ್ನು ಬೋಧಿಸುವ ಉಪನ್ಯಾಸಕರುಗಳೆಲ್ಲ ಮಿಲ್ಟನ್ ಜೊತೆ ಮಡೊನಾಳನ್ನೂ, ಷೇಕ್ಸ್‍ಪಿಯರ್‌ನೊಂದಿಗೆ ಸೋಪ್ಸ್‍ಗಳನ್ನೂ ಬೆರೆಸಿ ಪಾಠ ಹೇಳಬೇಕಾದ ಒತ್ತಡದಲ್ಲಿದ್ದಾರೆಂದೂ, ಇನ್ನು ಮುಂದೆ ಸಾಹಿತ್ಯಕ್ಕೆ ಸಂಬಂಧಿಸಿದ ಡಿಪಾರ್ಟಮೆಂಟುಗಳೆಲ್ಲ ‘ಸಂಸ್ಕೃತಿ’ ವಿಭಾಗಗಳಾಗಬೇಕಾದ ಅನಿವಾರ್ಯತೆಯಿದೆ ಯೆಂದೂ ಹೇಳುತ್ತಾನೆ. ತೇಜಸ್ವಿ, ಆಧುನಿಕೋತ್ತರ ಪ್ರಕ್ರಿಯೆಗಳನ್ನು ಕಂಡುಕೊಳ್ಳಬಲ್ಲ ಮಹಾನ್ ಆಧುನಿಕರಾಗಿದ್ದರು. ಹಾಗಾಗಿ ಅಭಿಕ್ತಿಯ ಯಾವುದೇ ಸ್ವರೂಪವನ್ನು ಬಳಸಿಕೊಳ್ಳಲು ಅವರು ಹಿಂದೆ ಮುಂದೆ ನೋಡುವುದಿಲ್ಲ. ಜೊತೆಗೆ ಜನ ಸಾಮಾನ್ಯರ ಬದುಕುಗಳಿಂದ ಕೂಡಿದ ಜನಪ್ರಿಯ ಕಥಾನಕಗಳಲ್ಲಿರಬಹುದಾದ ಸಾಂಸ್ಕೃತಿಕ ಅಂಶಗಳು ಬೆಚ್ಚಿ ಬೀಳಿಸುವ ಸತ್ಯ ಹೇಳುತ್ತಿರುತ್ತವೆ. ಇದನ್ನು ತೇಜಸ್ವಿ ಅರಿತಿದ್ದರು. ಸಾಮಾನ್ಯರನ್ನು ದೂರ ಇಟ್ಟು ನೋಡುವ ಮಡಿವಂತ ಆಧುನಿಕ ಶಿಕ್ಷಣ ಪಡೆದ ಗಣ್ಯರಿಗೆ ಕರ್ವಾಲೋನಂತಹ ಸುಶಿಕ್ಷಿತ ವಿಜ್ಞಾನಿ ಮತ್ತು ಮಂದಣ್ಣನಂತಹ ಹಳ್ಳಿಗಾಡಿನ ವಿಜ್ಞಾನಿಗಳ ನಡುವೆ ಅಗಾಧವಾದ ಸಾಂಸ್ಕೃತಿಕ ಕಂದರಗಳಿವೆ ಎಂದು ಅನ್ನಿಸುತ್ತಿರುತ್ತದೆ. ಇದೊಂದು ಮಿಥ್ ಎಂದು ತೇಜಸ್ವಿ ತೋರಿಸಿಕೊಟ್ಟಿದ್ದಾರೆ.
* * *

ಹಾಗೆ ನೋಡಿದರೆ ಕುವೆಂಪು ತಮ್ಮ ಕಥಾನಕಗಳಲ್ಲಿ ತೆರೆದಿಟ್ಟುರುವ ಸಾಮಾನ್ಯರ ಚರಿತ್ರೆಯನ್ನೇ, ಆರಂಭದಲ್ಲಿ ತೇಜಸ್ವಿ ಕುವೆಂಪು ಅವರನ್ನು ದೂರವಿಟ್ಟರೂ, ಅವರ ಪ್ರಜ್ಞೆ ವಾಸ್ತವವಾಗಿ ನಿರ್ವಸಾಹತೀಕರಣಗೊಳ್ಳುವ ಪ್ರಕ್ರಿಯೆಯಲ್ಲಿ ಪಾಳ್ಗೊಳ್ಳುವ ಸಂದರ್ಭದಲ್ಲಿ ಕುವೆಂಪು ಮಾದರಿಗಳನ್ನೇ ನೆಚ್ಚಿಕೊಳ್ಳುವಂತಿದೆ. ಕುವೆಂಪು ‘ಮಲೆನಾಡಿನ ಕಥೆಗಳು’ ಬರೆದಾಗ ಅದು ಪ್ರಬಂಧ ಸಂಕಲನ ಎಂಬ ಹೆಸರಿನಲ್ಲಿ ಪ್ರಕಟವಾಗಿತ್ತು. ಆದರೆ ಅವು ನಿರ್‍ದಿಷ್ಟ ಕಾಲಘಟ್ಟದ ಸಾಂಸ್ಕೃತಿಕ ಬದುಕಿನ ಅನಾವರಣವೇ ಆಗಿದ್ದೀತು. ಅದರಂತೆ, ತೇಜಸ್ವಿ ‘ಪರಿಸರದ ಕಥೆಗಳು’ ಬರೆಯುವ ಹೊತ್ತಿಗೆ ಪರಿಸರದ ಹಾಗೂ ಪರಿಸರದೊಂದಿಗೆ ಬದುಕಿನ ಜೀವಗಳೇ ಒಂದು ಪಲ್ಲಟವನ್ನು ಅನುಭವಿಸಿವೆ. ಇದು ಸಂಕಥನದ ಮಾದರಿಯೇ ಆಗಿ ನಿಲ್ಲುತ್ತದೆ.

ಪೂರ್‍ಣಚಂದ್ರ ತೇಜಸ್ವಿಯವರಲ್ಲೊಂದು ಕ್ವಿಕ್ಸಾಟಿಕ್ ಚೈತನ್ಯ ಇತ್ತು-ಅದು ಅಲೆಮಾರಿತನ; ಗೊತ್ತುಗುರಿಯಿಲ್ಲದೆ, ಬದುಕನ್ನು ಸಾಗಿಸುವ ಹುಚ್ಚು ಮನಸ್ಸಿನ ಹತ್ತುಮುಖಗಳದ್ದೇ ಧೋರಣೆ ಅದು. ಅಲೆಮಾರಿತನ ತೇಜಸ್ವಿಯವರ ಬರವಣಿಗೆಗಳಿಗೆ ವಿಚಿತ್ರ ಶಕ್ತಿ ಕೊಡುತ್ತದೆ. ಜೊತೆಗೆ ಕಥಾನಕಗಳಿಗೆ ಮೂಲ-ದ್ರವ್ಯವನ್ನೂ ಒದಗಿಸುತ್ತಲೇ, ಅಸೀಮ ರಮ್ಯ ಪ್ರಪಂಚದ ಕಲಾಸೃಷ್ಟಿಗೆ ಕಾರಣವಾಗುತ್ತದೆ. ಅವರ ಕಥನಗಳಲ್ಲಿ ಪಯಣ ಸಾಮಾನ್ಯವಾಗಿ ಕೊನೆಮುಟ್ಟದ್ದು. ಅನ್ವೇಷಣೆ ಅವರ ಕ್ರಮವೆಂಬಂತೆ ಕಾಣಿಸಿದರೂ, ಅದು ಅವರ ಕ್ರಮವಲ್ಲ. ಯಾಕೆಂದರೆ ಅನ್ವೇಷಣೆಗೊಂದು ಗೊತ್ತು ಗುರಿಯಿರುತ್ತದೆ. ಆದರೆ ತೇಜಸ್ವಿಯವರಿಗೆ ಅಲೆಮಾರಿತನದ ಹಾದಿಯಲ್ಲಿ ಹೋಗುವುದೇ ಇಷ್ಟ, ಏಕೆಂದರೆ ಆ ದಾರಿಯಲ್ಲಿ ಕಾಣಸಿಗುವ ವಿಸ್ಮಯಗಳು ಅನೂಹ್ಯವೂ, ಅನುಪಮವೂ ಆಗಿರಬಹುದು. ‘ಅಲೆಮಾರಿಯ ಅಂಡಮಾನ್’ ಮತ್ತು ‘ನೈಲ್ ನದಿಯ ಮೂಲ ಹುಡುಕಾಟ’ದ ಕಥನವನ್ನು ನೋಡುವಾಗ ಅದೊಂದು ಮನುಷ್ಯನ ಕೊನೆಯಿರದ, ಅಸೀಮ, ರಮ್ಯ, ಸಾಹಸಗಾಥೆಯಂತೆ ಕಾಣುತ್ತದೆ. (ಅದನ್ನು ‘ಸಾಗ’ (saga) ಎಂದು ಕರೆಯಬಹುದೆನೊ). ತೇಜಸ್ವಿ ಭಾವಾನುವಾದ ಮಾಡಿದ ರಾವೆಸ್‍ನ ‘ದಿ ಲಾಂಗ್‍ವಾಕ್’(ಕನ್ನಡದಲ್ಲಿ ಮಹಾಪಲಾಯನ) ಕಥನವನ್ನೇ ನೋಡಿದರೆ ಮನುಷ್ಯ ಮಾತ್ರದವರು ಸಾಧಿಸಲಾಗದ ಕೃತ್ಯವನ್ನು ಅದು ವಿವರಿಸುತ್ತದೆ. ಸೈಬೀರಿಯಾ ಜೈಲಿನಿಂದ ಸುಮಾರು ೪೦೦೦ ಕಿ.ಮೀ. ಕ್ರಮಿಸಿ, ಭಾರತದ ಪ್ರಾಕೃತಿಕ ಗಡಿಯಾದ ಹಿಮಾಲಯವನ್ನೂ ದಾಟಿ ಭಾರತದೊಳಗೆ ಬರುವ ರೋಚಕ ಕಥನ.

ಸಾಹಸದ ರಮ್ಯತೆಯ ಭಾವವು ವಿಜ್ಞಾನದ ಕುತೂಹಲಕ್ಕೂ ಎಡೆ ಮಾಡಿಕೊಡುತ್ತದೆ. ತೇಜಸ್ವಿಯವರನ್ನು ‘ವೈಜ್ಞಾನಿಕ ಬರಹಗಾರ’ ಎಂದು ಆಗಾಗ ಕೆಲವರು ಹೇಳುತ್ತಿರುತ್ತಾರೆ. ಅವರು ಹೆಚ್ಚು ವಿಜ್ಞಾನಕ್ಕೆ ಸಂಬಂಧಿಸಿದ ಕೃತಿಗಳನ್ನು ಬರೆದಿರುವ ಕಾರಣ ಬಹುಶಃ ಅವರನ್ನು ಹೀಗೆ ಗುರುತಿಸುತ್ತಿರಬಹುದು. ಆದರೆ ತೇಜಸ್ವಿಯ ಕುತೂಹಲಕ್ಕೆ ವಿಜ್ಞಾನದ ಮೇಲ್ಪದರದ ಕಾರ್ಯಕಾರಣ ಸಂಬಂಧದಲ್ಲಿ ಆಸಕ್ತಿಯಿರಲಿಲ್ಲ. ಭೌತ ಪ್ರಪಂಚದಲ್ಲೇ ಅಡಗಿರುವ ಅನಂತತೆಯನ್ನು ಅರಿಯುವ, ಅದನ್ನು ಕುರಿತು ಮಾನವ ನಡೆಸುವ ಹುಡುಕಾಟಗಳ ಬಗ್ಗೆ ಅವರ ಆಸಕ್ತಿಯಿತ್ತು. ಅಂದರೆ ಗಣಿತ ಮೂಲಭೂತವಾಗಿ ಅಂಕಿಗಳ ಲೋಕವಾಗಿ ಕಾಣಿಸುತ್ತದೆ ನಿಜ, ಆದರೆ ಅದು ಬಂದು ನಿಲ್ಲುವುದು ಊಹೆ ಮತ್ತು ಅಪರಿಮಿತವಾದ ‘n th’ ಹಂತಕ್ಕೆ. ಇದರಂತೆಯೇ ಭೌತಶಾಸ್ತ್ರ, ರಸಾಯನಶಾಸ್ತ್ರಗಳೂ ಕೂಡ. ವಿಜ್ಞಾನವು ಹುಡುಕುವ ಅನಂತತೆಯ, ಅನೂಹ್ಯ ಜಗತ್ತಿನ ಬಗ್ಗೆ ತೇಜಸ್ವಿಯವರ ಕುತೂಹಲ ಕೇಂದ್ರೀಕೃತವಾಗುತ್ತದೆ. ಆದ್ದರಿಂದಲೇ ತಮ್ಮ ವಿಜ್ಞಾನದ ಕಥನಗಳನ್ನು ಸಾಹಸಗಾಥೆಯಂತೆ, ರಮ್ಯ ಕುತೂಹಲ ಹುಟ್ಟಿಸುವಂತೆ ಹೇಳುತ್ತಾರೆ. ಲಂಕೇಶ್ ಪತ್ರಿಕೆಯಲ್ಲಿ ಫ್ಲೈಯಿಂಗ್ ಸಾಸರ್‍ಸ್ ಬಗ್ಗೆ ಬರೆಯುತ್ತಿರುವಾಗ ಆ ಕಥನ ರೋಚಕ ಹಂತವನ್ನು ಮುಟ್ಟತೊಡಗಿದಾಗ ಅವರು ಹೇಳುತ್ತಾರೆ, ‘ನಾನೇನು ಕನ್ನಡದ ಜಾಣಜಾಣೆಯರಿಗೆ ಯಾವುದೋ ಫ್ಯಾಂಟಸಿ ಕತೆಗಳನ್ನು ಹೆಳುತ್ತಿದ್ದೇನಾ’ ಎಂದು ನನಗೇ ಅನುಮಾನವಾಗುತ್ತದೆ ಎಂದು. ‘ಮಿಸ್ಸಿಂಗ್ ಲಿಂಕ್’ ಎಂಬ ಮನುಷ್ಯನ ಅದಿಮ ಚರಿತ್ರೆಯನ್ನು ಕುರಿತ ಕಥಾನಕವೂ ಇದಕ್ಕೆ ಹೊರತಲ್ಲ. ಕಥನದ ಕುತೂಹಲ, ಹುಮ್ಮಸ್ಸುಗಳನ್ನು ಹದವಾಗಿ ತಂದುಕೊಡುವ ಕರ್ವಾಲೋ ಕೃತಿಯಲ್ಲಿ ಹಾರುವ ಓತಿ ಸಿಗುವುದೇ ಮುಖ್ಯಗುರಿ ಎಂದು ಎಣಿಸುವ ಸಾಮಾನ್ಯರು ಹತಾಶಗೊಳ್ಳುತ್ತಾರೆ. ಆದರೆ ಕಾದಂಬರಿಯನ್ನು ಕೊನೆಗಾಣಿಸುವುದು ಕರ್ವಾಲೋ ಅವರ ಅರ್ಥಪೂರ್ಣ ಮಾತುಗಳು. “ತಪ್ಪು ಸರಿ ಹೇಗೆ ಹೇಳ್ತೀರಿ, ನಮಗೆ ಈ ಕ್ಷಣ ಇಲ್ಲಿ ಹೀಗನ್ನಿಸುತ್ತದೆ. ಜೀವವಿಕಾಸಕ್ಕೆ ಎಲ್ಲಿದೆ ಕೊನೆ.” ಈ ಮಾತಿನಲ್ಲಿರುವಂತೆ ಬೇರೆ ಬೇರೆ Permutation ಮತ್ತು combinationಗಳಲ್ಲಿ ಸಾಧ್ಯವಾಗಬಹುದಾದ ಕುತೂಹಲದ ಅಂಶಗಳನ್ನು ಕಥನವಾಗಿ ರೂಪಿಸಲು ಯತ್ನಿಸುವುದೇ ತೇಜಸ್ವಿಯವರ ಮಾದರಿ.

ತೇಜಸ್ವಿಯವರ ಗೆಳೆಯರು ಹೇಳುತ್ತಿದ್ದಂತೆ, ತೇಜಸ್ವಿ ಗಂಟಗಟ್ಟಲೆ ಅಲ್ಲಾಡದೆ ಕುಳಿತು ಮೀನು ಹಿಡಿಯುತ್ತಿದ್ದರಂತೆ. ಆಮೇಲೆ ಎಷ್ಟೋ ಬಾರಿ ಅದನ್ನು ನೀರಿನಲ್ಲಿ ಬಿಟ್ಟು ಬಿಡುತ್ತಿದ್ದರಂತೆ. ತೇಜಸ್ವಿ ಬೇಟೆ, ಫಿಶಿಂಗ್ ಎಲ್ಲದರಲ್ಲೂ ಅಲೆಮಾರಿತನದ ಅದಮ್ಯ ಕುತೂಹಲವನ್ನೇ ಒಳಗೊಳ್ಳುತ್ತಾರೆ. ಬೇಟೆಯ ಏಕಾಗ್ರತೆ, ಅನಂತತೆಯಲ್ಲಿ ನಡೆಸುವ ಹುಡುಕಾಟದಂತೆ, ಈ ಧ್ಯಾನದ ಅಂಶ, ಅಲೆಮಾರಿತನದ ಕುತೂಹಲ ಇವೆರೆಡೂ ಇದ್ದುದರಿಂದಲೇ ಜಿಮ್‍ಕಾರ್ಬೆಟ್ ಬೇಟೆಯ ಕಥನಗಳನ್ನು ಕನ್ನಡಕ್ಕೆ ತಂದರು ಅನ್ನಿಸುತ್ತದೆ.

ಫೋಟಾಗ್ರಪಿ, ಕ್ಯಾಮೆರಾಗಳನ್ನು ತೇಜಸ್ವಿ ಬಳಸಿಕೊಳ್ಳುವುದೂ ವಿಶಿಷ್ಟವಾಗಿದೆ. ಅವರು ಸೆರೆಹಿಡಿದ objectಗಳನ್ನು ನೋಡಿದರೆ, ಅವು ‘ಅಮುಖ್ಯ’ವಾದವು ಇಲ್ಲವೇ ಅನಾಮಿಕವಾದುವು. ಹಕ್ಕಿಗಳು, ಕಾಡಿನ ಮರಗಿಡಗಳ ಮೇಲೆ ಅವರು ಖರ್ಚುಮಾಡಿದ ರೀಲುಗಳಿಗೆ ಲೆಕ್ಕವಿಲ್ಲ. ಇಲ್ಲೊಂದು ಆಸಕ್ತಿದಾಯಕ ಅಂಶ ಇದೆ. ಅದೆಂದರೆ, ಅವರ ಸಮಕಾಲೀನ ಸಾಹಿತಿಗಳು ‘ನಾನು’ ಎಂಬ ಕೇಂದ್ರವನ್ನು ಆತ್ಮಶೋಧನೆಗೆ, ಒಳಗುದಿಯನ್ನು ಸಂತೋಷಗಳನ್ನು ಅಳೆಯಲಿಕ್ಕೂ ಬಳಸಿಕೊಂಡರು. ಇವರಿಂದ ಸಿಡಿದಿದ್ದ ತೇಜಸ್ವಿ ಮುಂದೆ ತಮ್ಮ ಸಾಹಿತ್ಯದಲ್ಲಿ ‘ನಾನು’ ಎಂಬ ನಿರೂಪಕನ ಪಾತ್ರ ತರುತ್ತಾರೆ. ಅಲ್ಲಿ ಅವರ ನಾನು ಕೊಂಚಮಟ್ಟಿಗೆ ಆತ್ಮಶೋಧನೆ ಮಾಡಿಕೊಳ್ಳುವಂತೆ ಕಂಡರೂ ಅದು ವೈಯಕ್ತಿಕ ಹಂತ ದಾಟಿ ಸಾಮಾಜಿಕ ಹಂತದಲ್ಲಿರುತ್ತದೆ. ಅಥವಾ ನಾನು ಎನ್ನುವುದು ಫೋಕಸ್ ಆಗುವುದು ವಿಶ್ವ ಚೈತನ್ಯದ ಬೇರೆ ಬೇರೆ ಆಬ್ಜೆಕ್ಟ್‌ಗಳನ್ನು ಅರ್ಥೈಸುವ, ನಿರುಪಿಸುವ ಪಾತ್ರದಲ್ಲಿ ಎಂದು ಹೇಳಬಹುದು.

ತೇಜಸ್ವಿ ನಿರಂತರವಾಗಿ ಪ್ರಯೋಗಶೀಲತೆಯಲ್ಲಿ ತೊಡಗಿ, ತಮ್ಮ ಸೃಜನಶೀಲತೆಯ ಭಾಗವಾಗಿ ಅದನ್ನು ಸ್ವೀಕರಿಸಿದರು. ಬಹುಶಃ ಎಲ್ಲಾ ಸೃಜನಶೀಲ ಲೇಖಕರು ಇರುವ ಪ್ರಪಂಚ ಬಿಟ್ಟು ಹೊಸ ಪ್ರಪಂಚ ಕಾಣಲು ಕಾತುರರಾಗಿರುತ್ತಾರೆ. ಮಾರ್ಕ್ವೆಸ್ ನಿರ್ಭಿಡೆಯಿಂದ ಭೂ ಹುಡುಕುತ್ತಾನೆ. ಈ ಗುಣ ನಿರಂತರವಾಗಿ ಪ್ರವಹಿಸುತ್ತಿರುತ್ತದೆಯೇನೋ. ತಮಗನ್ನಿಸಿದ್ದನ್ನು ಮಾಡುತ್ತಾ ಹೋದ ತೇಜಸ್ವಿ, ಅದರ ಮೂಲಕವೇ ಒಂದು ವೈರುಧ್ಯದ ನೆಲೆಯ ಸಹಜತೆಯನ್ನು ಕಂಡುಕೊಳ್ಳುತ್ತಿದ್ದರು. ಉದಾಹರಣೆಗೆ ನವ್ಯರು ‘ಕಂಟಿನ್ಯುಟಿ’ ಅನ್ನುವುದನ್ನು ಆದಷ್ಟು ತಿರಸ್ಕರಿಸಿದ್ದರೆ, ತೇಜಸ್ವಿ ಆ ಅಂಶವನ್ನು ಕಥಾನಕಗಳ ಮೂಲಕ ಚಾಲ್ತಿಗೆ ತಂದರು. ನಾಟಕಕಾರ ಪ್ರಸನ್ನ ಗುರುತಿಸುವಂತೆ, “ತೇಜಸ್ವಿ ನಗರದಲ್ಲಿದ್ದಷ್ಟು ದಿನ ಕಾಡಿನ ಬಗ್ಗೆ ಬರೆದರು, ಕಾಡು ಸೇರಿದ ದಿನ ಕಂಪ್ಯೂಟರು ಹಾಗೂ ಕ್ಯಾಮರಾ ಹಿಡಿದು ವಿಜ್ಞಾನದ ಹಿಂದೆ ತಿರುಗಿದರು, ರಾಜಕೀಯದಲ್ಲಿ ಆಸಕ್ತರಾಗಿಯೂ ರಾಜಕೀಯದಿಂದ ದೂರ ಉಳಿದರು…” (ಸಂವಾದ ಸಾಹಿತ್ಯ ಪತ್ರಿಕೆಯಲ್ಲಿ) ತೇಜಸ್ವಿ ಹೀಗೆ ಹೊರಳುಗಳಲ್ಲೇ ಹರವು ಕಂಡುಕೊಳ್ಳುವವರು, ಅನೂಹ್ಯದಾದ ಅಮೆಜಾನ್ ನದಿ ಜಾಡಿನಂತೆ ಬದುಕನ್ನು ಹರಿಯ ಬಿಟ್ಟವರು.

ಈ ಟಿಪ್ಪಣಿಗಳನ್ನು ಮುಗಿಸುವ ಹೊತ್ತಿಗೆ ಗುರುತಿಸಬಹುದಾದ ಕೆಲವು ಅಂಶಗಳಿವೆ. ತೇಜಸ್ವಿ ಕಥಾನಕಗಳನ್ನು ಕೊಟ್ಟ ಸಂದರ್ಭ ಸಮಕಾಲೀನ ಚರಿತ್ರೆಯಲ್ಲೂ ಕಥಾನಕಗಳು ಒಂದು ಸಂಚಲನ ಉಂಟುಮಾಡುತ್ತಿದ್ದ ಸಂದರ್ಭ ಸೃಷ್ಟಿಯಾಗುತ್ತಿತ್ತು. ಜನಜೀವನದ ದ್ರವ್ಯಗಳಿಂದ ಸಂಸ್ಕೃತಿಯ ಚರಿತ್ರೆ ನಿರ್ಮಾಣವಾಗುತ್ತಿರುತ್ತದೆ. ವಸಾಹತೋತ್ತರ ಆಫ್ರಿಕನ್ ಸಾಹಿತ್ಯವು ನಿರ್ವಸಾಹತೀಕರಣದ ಅಂಶವಾಗಿ ಹೆಚ್ಚು ಹೆಚ್ಚು ಜಾನಪದ ಸಂಪನ್ಮೂಲಗಳಿಗೆ ಹಿಂದಿರುಗಿ ಚರಿತ್ರೆಯನ್ನು ಪುನರ್ ಕಟ್ಟಬಯಸಿತು. ಹಾಗೆ ನೋಡಿದರೆ ದಲಿತರ ಆತ್ಮಕಥಾನಕಗಳು, ಸ್ತ್ರೀಯರ ಬದುಕಿನ ಕಥನಗಳು ಹೊರಗೆಡಹುವ ಚಾರಿತ್ರಿಕ, ಸಾಂಸ್ಕೃತಿಕ ಅಂಶಗಳು ಬಹುಪಾಲು ಚರಿತ್ರೆಯನ್ನು ಪುನರ್ರೂಪಿಸುವ ನಿಟ್ಟಿನಲ್ಲೇ ಇಂದು ಕಾಣುತ್ತಿವೆ. ಈ ಎಲ್ಲಾ ಹಿನ್ನೆಲೆಯಲ್ಲಿ ತೇಜಸ್ವಿ ಕಥನಗಳಿಗೆ ತೆರೆದುಕೊಂಡಿದ್ದು ಸಮಕಾಲೀನ ಚರಿತ್ರೆಯನ್ನು ಕಂಡುಕೊಳ್ಳುವುದಕ್ಕೆ ಎನ್ನುವ ಕಾರಣ ಒಪ್ಪಿಗೆಯಾಗುವಂತೆ ಕಾಣುತ್ತದೆ. ಅದೂ ಅಲ್ಲದೆ ಕಥನಗಳ ರಮ್ಯ ಕುತೂಹಲ, ರಂಜನೆಯ ಅಂಶಗಳು ಬರಹಗಳನ್ನು ಹೆಚ್ಚು ರೀಚಬಲ್ ಆಗಿ ಮಾಡುತ್ತವೆ ಎನ್ನುವುದೂ ಕಾರಣವಿದ್ದಿರಬಹುದು. ಈ ಗುಣಗಳೇ ಜನರೊಳಗೆ ಇಳಿದು, ಚರಿತ್ರೆಯ ಹೊಸ ಅಧ್ಯಯನ ಆರಂಭವಾಗುವ ಸೂಚನೆಯನ್ನು ಕೊಡುತ್ತಿವೆ ಎಂದೇ ಬಲವಾಗಿ ಅನ್ನಿಸುತ್ತಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತಿಹಾಸ
Next post ಕನಸು-ನನಸು

ಸಣ್ಣ ಕತೆ

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

cheap jordans|wholesale air max|wholesale jordans|wholesale jewelry|wholesale jerseys