ಜಗತ್ಪ್ರಸಿದ್ಧ ಚೀನೀ ಕಲೆ ಬೋನ್ಸಾಯ್

ಜಗತ್ಪ್ರಸಿದ್ಧ ಚೀನೀ ಕಲೆ ಬೋನ್ಸಾಯ್

ಭೂಮಿಯ ಆಸರೆ ಸಿಕ್ಕರೆ ಎಕರೆಗಟ್ಟಲೇ ಜಾಗ ಆಕ್ರಮಿಸುವ ಆಲ, ಅರಳಿ ಮರಗಳು ಅತೀ ಕುಬ್ಜವಾಗಿ ಕೇವಲ ಒಂದೂವರೆ ಮೊಳದಷ್ಟು ಉದ್ದ ಬೆಳೆದು ಅಚ್ಚರಿ ಮೂಡಿಸುತ್ತವೆ. ಒಂದು ಸಣ್ಣ ಟ್ರೇನಲ್ಲಿ ಮಿನಿ ಉದ್ಯಾನವನ್ನೂ ಬೆಳೆಸಬಹುದು! ಅರೇ! ಇದೇನಿದು ಏನೇನೋ ಹೇಳುತ್ತಿದೆನಲ್ಲ ಎಂದು ಅಚ್ಚರಿಪಡಬೇಡಿ. ಇವೆಲ್ಲ ಬೋನ್ಸಾಯ್ ಕಲೆಯ ಫಲ. ಹೌದು ನಾನೀಗ ಹೇಳಹೊರಟಿರುವುದು ಸಸ್ಯಶಾಸ್ತ್ರದ ಅದ್ಭುತ ‘ಬೋನ್ಸಾಯ್’ ಬಗೆಗೆ.

‘ಬೋನ್ಸಾಯ್’ ಎಂದರೆ ಜಪಾನಿ ಭಾಷೆಯಲ್ಲಿ ‘ಟ್ರೇನಲ್ಲಿ ಬೆಳೆಸುವುದು’ ಎಂದರ್‍ಥ. ಸಣ್ಣ ಕುಂಡಗಳಲ್ಲಿ ದೊಡ್ಡ ದೊಡ್ಡ ಮರಗಳ ಕುಬ್ಜ ಪ್ರತಿರೂಪಗಳನ್ನು ಬೆಳೆಸುವ ಕಲೆಯೇ ಬೋನ್ಸಾಯ್. ಅಚ್ಚರಿ ಮೂಡಿಸುವ ಸಂಗತಿಯೆಂದರೆ ಈ ಕುಬ್ಜ ಗಿಡಗಳು ದೊಡ್ಡ ಮರಗಳ ಎಲ್ಲ ಪ್ರಮುಖ ಗುಣಲಕ್ಷಣಗಳನ್ನು ಹೊಂದಿರುತ್ತವೆ! ಇಂತಹ ಬೋನ್ಸಾಯ್ ಗಿಡಗಳು ಒಂದು ಶತಮಾನ ಅಥವಾ ಅದಕ್ಕಿಂತ ಹೆಚ್ಚಿನ ವರ್‍ಷಗಳವರೆಗೆ ಬದುಕಬಲ್ಲವು.

ಬೋನ್ಸಾಯ್ ಕಲೆಯ ಉಗಮವಾದದ್ದು ಒಂದು ಸಾವಿರ ವರುಷಗಳ ಹಿಂದೆ ಚೀನಾದಲ್ಲಿ. ಆದರೆ ಈ ಕಲೆಯನ್ನು ಮುಂದುವರೆಸಿಕೊಂಡು ಬಂದದ್ದು ಜಪಾನಿಯರು ಮಾತ್ರ. ಆಗಿನ ಜಪಾನಿನ ರಾಜಮನೆತನದವರು ಬೋನ್ಸಾಯ್ ಬಗೆಗೆ ಅಪಾರ ಆಸಕ್ತಿ ಹೊಂದಿದ್ದರಷ್ಟೇ ಅಲ್ಲದೇ ಅದರ ಬೆಳವಣಿಗೆಗಾಗಿ ಸಾಕಷ್ಟು
ಶ್ರಮಿಸಿದ್ದರು. ಅಮೆರಿಕೆಯ ವೆಸ್ಟ್‌ಕೋಸ್ಟಿನಲ್ಲಿದ್ದ ಅನಿವಾಸಿ ಜಪಾನಿಯರಲ್ಲಿ ಬೋನ್ಸಾಯ್ ಕಲೆ ಜನಪ್ರಿಯವಾಗಿತ್ತು. ಎರಡನೇ ಜಾಗತಿಕ ಯುದ್ಧದ ನಂತರ ಜಪಾನಿನಿಂದ ನಿವೃತ್ತಿ ಹೊಂದಿ ಮರಳುತ್ತಿದ್ದ ಅಧಿಕಾರಿಗಳು ತಮ್ಮೊಂದಿಗೆ ಬೋನ್ಸಾಯ್ ಕಲೆಯ ಬಗೆಗಿನ ಮಾಹಿತಿ ಮತ್ತು ಉತ್ಸಾಹ ಕೊಂಡೊಯ್ದರು. ಆದ್ದರಿಂದಲೇ ಅಮೆರಿಕೆಯಲ್ಲಿ ಈಗ ಬೋನ್ಸಾಯ್ ಮನೆಮಾತಾಗಿದೆ. ಬೋನ್ಸಾಯ್ ಗಿಡಗಳ ಅದ್ಭುತ ಸಂಗ್ರಹವನ್ನು ನ್ಯೂಯಾರ್‍ಕ್ ಪಟ್ಟಣದ ಬ್ರೂಕಲಿನ್ ಸಸ್ಯಶಾಸ್ತ್ರೀಯ ತೋಟ ಮತ್ತು ವೃಕ್ಷಕಾಶಿಯಲ್ಲಿ ಅದ್ಭುತವಾಗಿ ಸಂಗ್ರಹಿಸಲಾಗಿದೆ.

ಬೋನ್ಸಾಯ್ ಕಲೆಗೆ ನಿಸರ್‍ಗವೇ ಸ್ಫೂರ್‍ತಿದಾಯಕವೆಂದು ಹೇಳಬಹುದು. ಹೇಗೆಂದರೆ ಬಾನೆತ್ತರದ ಬೆಟ್ಟಗಳಲ್ಲಿನ ಕಲ್ಲುಬಂಡೆಗಳ ಮೇಲೆ ಬೆಳೆಯುವ ಗಿಡಗಳು ಜೀವನಪರ್‍ಯಂತ ಕುಬ್ಜವಾಗಿಯೇ ಇರುತ್ತವೆ. ನಿಸರ್‍ಗದ ಹವಾಗುಣಕ್ಕೆ ಹೊಂದಿಕೊಂಡು ಹುರಿಯಾಗಿ, ಗಂಟುಗಂಟಾಗಿ ಬೆಳೆದು ಒಂದು ಕಲೆಯಾಗುತ್ತವೆ.

ಬೋನ್ಸಾಯ್ ಬೆಳೆಸುವುದು ಶ್ರೀಮಂತರಿಗಷ್ಟೇ ಸಾಧ್ಯ. ಇದೊಂದು ದುಬಾರಿ ಕಲೆ ಎಂಬ ತಪ್ಪು ತಿಳುವಳಿಕೆ ನಮ್ಮಲ್ಲಿ ಹಲವರಿಗಿದೆ. ಆದರೆ ಇದು ಯಾವುದೇ ವರ್‍ಗದ ಜನರು ಸುಲಭವಾಗಿ ಹೆಚ್ಚು ಖರ್‍ಚಿಲ್ಲದೇ ಮಾಡುವ ಉತ್ತಮೆ ಕಲೆ ಎಂದು ಹೇಳಬಹುದು. ಬೋನ್ಸಾಯ್ ಬಗೆಗಿನ ನಿಮ್ಮ ಉತ್ಸುಕತೆಯನ್ನು ಇನ್ನಷ್ಟು ಪರೀಕ್ಷಿಸದೇ ಅದರ ವಿಧಾನವನ್ನು ಈಗ ವಿವರಿಸುತ್ತೇನೆ. ಅದಕ್ಕೂ ಮೊದಲು ಬೋನ್ಸಾಯ್ ಕಲೆಗೆ ಎಂತಹ ಗಿಡ ಆರಿಸಿಕೊಳ್ಳಬೇಕು ಎಂಬುದನ್ನು ಮೊದಲು ತಿಳಿಯಬೇಕು.

ಬೋನ್ಸಾಯ್ ಗಿಡಗಳ ಕುರಿತು ಜಪಾನಿನಲ್ಲಿ ಸಂಶೋಧನೆ ನಡೆದಿದ್ದು ಉಪ-ಉಷ್ಣವಲಯ ಮತ್ತು ಸಮಶೀತೋಷ್ಣವಲಯದಲ್ಲಿ ಬೆಳೆಯುವ ಗಿಡಗಳು ಬೋನ್ಸಾಯ್‌ಗೆ ಸರಿಹೊಂದಬಲ್ಲವು ಎಂದು ತಿಳಿದುಬಂದಿದೆ. ಬೋನ್ಸಾಯ್ ಆಗಿ ಬೆಳೆಯಬಲ್ಲ ಗಿಡಗಳು ಈ ಮುಂದಿನ ಗುಣಲ್ಷಣಗಳನ್ನು ಹೊಂದಿರಬೇಕು:

೧. ಸಸ್ಯವು ಗಡುಸಾಗಿದ್ದು ತಟ್ಟೆ (ಕಂಟೈನರ್‍) ಯಲ್ಲಿ ಹಲವು ವರ್‍ಷಗಳವರೆಗೆ ಬೆಳೆಯುವಂತಿರಬೇಕು.

೨. ಕಾಂಡವು ನೈಸರ್‍ಗಿಕವಾಗಿ ವಿಶಿಷ್ಟವಾದ ಸ್ವರೂಪ ಹೊಂದಿರಬೇಕು.

೩. ಕವಲುಗಳು ನೈಸರ್‍ಗಿಕವಾಗಿ ಅಲ್ಲದೇ ಕಲಾತ್ಮಕವಾಗಿ ಬೆಳೆಯುವಂತಿರಬೇಕು.

೪. ಗಿಡದ ಬೆಳವಣಿಗೆಯು ತಟ್ಟೆಯ ಆಕಾರದೊಂದಿಗೆ ಹೊಂದಿಕೊಳ್ಳುವಂತಿರಬೇಕು.

ಕಡಿಮೆ ಎತ್ತರದ, ಗಡಸು ಕಾಂಡದ ಮತ್ತು ದಪ್ಪ ಬುಡದ ಗಿಡಗಳು ಬೋನ್ಸಾಯ್ ಕಲೆಗೆ ಬಹುವಾಗಿ ಹೊಂದಿಕೊಳ್ಳುವಂಥವು.

ಸಮಶೀತೋಷ್ಣವಲಯದಲ್ಲಿ ಬೆಳೆಯುವ ಮರಗಳ ಪೈಕಿ ಬೋನ್ಸಾಯ್ ಕಲೆಗೆ ಹೊಂದಿಕೊಳ್ಳುವ ಮರಗಳೆಂದರೆ: ಬ್ರಹ್ಮಾಮ್ಲಿಕ, ಕದಂಬ ಮರ, ಬೂರಗ, ಬಿಳಿ ಬೂರಗ, ಕೊಡೆ ಮರ, ಅರಳಿಗಿಡ, ಬಾಟ್ಲಬ್ರಶ್ ಗಿಡ, ಸೀಮೆ ಅಳಲೆಕಾಯಿ ಮರ, ಆಲದ ಮರ, ಬೇವು, ಕಾಡುಬೇವು, ಹೂವರಸಿ ಮರ, ಜಕರಾಂಡ, ಸಾಸೇಜ ಮರ, ಮುತ್ತುಗದ ಮರ, ಬಸರಿ, ನಂದಿ ವೃಕ್ಷ, ಕಾಜ ಪುಟೆ, ಎಣ್ಣೆ ಮರ, ಪುತ್ರಂಜೀವ, ಇತ್ಯಾದಿ.

ಕಂಟಿ (ಶ್ರಬ್ಸ್) ಗಳ ಪೈಕಿ ಎಂದರೆ – ಹೆಮಿಲಿಯಾ, ಕಾಡು ಕರಿಬೇವು ಇತ್ಯಾದಿ ಮತ್ತು ಬಳ್ಳಿಗಳಲ್ಲಿ ಮಾಡಬೇಲ, ಮಾಧವಿಲತೆ, ಹಂದಿಬಳ್ಳಿ, ಸೂಜಿ ಮಲ್ಲಿಗೆ ಮುಂತಾದವು ಸುಂದರವಾದ ಬೋನ್ಸಾಯ್ ಕಲೆಗೆ ಹೊಂದಿಕೊಳ್ಳಬಲ್ಲವು. ಉಷ್ಣವಲಯದ ಕೋನಿಫರ್‌ಗಳಲ್ಲಿ ಖಾಸಿ ಪಾಯಿನ್ ಮರ ಆಕರ್‍ಷಕವಾಗಿ ಬೋನ್ಸಾಯ್ ಆಗಬಹುದು.

ಬೋನ್ಸಾಯ್ ಕಲೆಗೆ ಬಗ್ಗುವಂತಹ ಗಿಡಗಳನ್ನು ಮೊದಲು ಸಣ್ಣ ತಟ್ಟೆ (ಕಂಟೈನರ್‍) ಯಲ್ಲಿ ಬೆಳೆಸಬೇಕು. ನಾಟಿ ಹಾಕಲು ಸಮಶೀತೋಷ್ಣವಲಯದ ವಾಯುಗುಣದಲ್ಲಿ ಮಾನ್ಸೂನ್ ಋತುವು ಬಹಳ ಒಳ್ಳೆಯದು. ಕಾಡು ಮೇಡಿನಲ್ಲಿ ಬೆಳೆದ ಗಿಡ ಅಥವಾ ನರ್‍ಸರಿಯಲ್ಲಿ ಹಲವು ವರ್‍ಷಗಳವರೆಗೆ ಬೆಳೆಸಿದ ಮೊಳಕೆಯನ್ನು ಜಾಗರೂಕವಾಗಿ ಕೀಳಬೇಕು. ಲೇಯರ್‍ ಮಾಡಿ, ಕಸಿ ಮಾಡಿ ಅಥವಾ ಕುಂಡಾಗಳಲ್ಲಿ ಬೀಜಗಳಿಂದ ಸಸಿ ಬೆಳೆಸಿಯೂ ಬೋನ್ಸಾಯ್‌ಗೆ ಉಪಯೋಗಿಸಬಹುದು.

ತಟ್ಟೆಗಳು (ಕಂಟೈನರ್‍ಸ್)

ತಟ್ಟೆಗಳೆಂದರೆ ಆಳವಲ್ಲದ, ವಿವಿಧಾಕಾರದ ಮತ್ತು ವಿಭಿನ್ನ ಅಳತೆಯ ಕುಂಡಾಗಳು. ಬೋನ್ಸಾಯ್ ಬೆಳೆಸಲು ಆರಿಸಿಕೊಳ್ಳುವ ತಟ್ಟೆಯು ಎಲ್ಲಕ್ಕಿಂತ ಪ್ರಮುಖವಾದುದು. ತಟ್ಟೆಗಳು ಮಣ್ಣಿನಿಂದ ಮಾಡಲ್ಪಟ್ಟಿದ್ದು ಅವುಗಳ ಆಕಾರವು ದುಂಡಗೆ, ಅಂಡಾಕಾರ, ಲಂಬಾತ್ಮಕ, ಚಚ್ಚೌಕ ಹೀಗೆ ಯಾವುದೇ ಆಗಿರಬಹುದು. ತಟ್ಟೆಯ ಆಳ ಮತ್ತು ಗಾತ್ರವು ಅದರಲ್ಲಿ ಬೆಳೆಯುವ ಗಿಡವನ್ನು ಅವಲಂಬಿಸಿದೆ. ಬಸಿತಕ್ಕಾಗಿ ತಟ್ಟೆಯ ತಳದಲ್ಲಿ ಒಂದೆರಡು ರಂಧ್ರ ಹೊಂದಿರುವುದು ಅವಶ್ಯ.

ಮಣ್ಣು

ಬೋನ್ಸಾಯ್‌ಗೆ ಹಾಕುವ ಮಣ್ಣು ನಿರ್‍ಮಲವಾಗಿದ್ದು, ಚೆನ್ನಾಗಿ ಹದವಾರಿಬೇಕು. ಜೇಡಿಗೋಡು ಅಥವಾ ಜೇಡಿ ಮಣ್ಣನ್ನು ಸೋಸಿ ಉಪಯೋಗಿಸಬೇಕು. ಮಣ್ಣು ಉಸುಕು ಉಸುಕಾಗಿರದೇ ಜಿಗುಟಾಗಿರಲೂಬಾರದು. ಅತ್ತ ತೀರ ಆಮ್ಲೀಯವೂ ಆಗಿರದೇ ಇತ್ತ ಕ್ಷೌರೀಯವೂ ಆಗಿರಕೂಡದು. ಚೆನ್ನಾಗಿ ಕೊಳೆತು ಹದವಾಗಿರುವ ಎಲೆಗೊಬ್ಬರವನ್ನು ಅದಕ್ಕೆ ಬೆರೆಸಬೇಕು.

ಮಣ್ಣನ್ನು ಮೊದಲು ಬಿಸಿಲಿನಲ್ಲಿ ಒಣಗಿಸಿ ಮೂರು ಬಗೆಯ ಜಾಲಿಯಿಂದ ಸೋಸಬೇಕು. ದೊಡ್ಡ, ಮಧ್ಯಮ ಮತ್ತು ಅತಿಸಣ್ಣ ಮಣ್ಣನ್ನು ವಿವಿಧ ತಟ್ಟೆಗಳಲ್ಲಿ ಇಡಬೇಕು. ಗಿಡ ನೆಡುವಾಗ ದೊಡ್ಡ ಮಣ್ಣನ್ನು ಕುಂಡಾದ ಬುಡದಲ್ಲಿ ಹಾಕಿ ಮಧ್ಯಮ ಮಣ್ಣನ್ನು ತೆಳುವಾದ ಪದರಿನಂತೆ ಅದರ ಮೇಲೆ ಹರವಿ ಗಿಡ ನೆಡಬೇಕು.

ಗಿಡ ನೆಡುವುದು

ತಟ್ಟೆಯನ್ನು ಮೊದಲು ಟೇಬಲ್ ಅಥವಾ ಸಮತಟ್ಟಾದ ಜಾಗದಲ್ಲಿ ಧಕ್ಕೆಯಾಗದಂತೆ ಇಡಬೇಕು. ತಟ್ಟೆಯ ಬುಡದಲ್ಲಿಯ ತೂತುಗಳನ್ನು ಕುಂಡಾದ ತುಕ್ಕಡಿ ಅಥವಾ ಪ್ಲಾಸ್ಟಿಕ್‌ನಿಂದ ಮುಚ್ಚಬೇಕು. ದೊಡ್ಡ ಮಣ್ಣಿನ ಕಣಗಳನ್ನು ತಟ್ಟೆಯಲ್ಲಿ ಮೊದಲು ಹಾಕಿ ಅದರ ಮೇಲೆ ಸಣ್ಣ ಮಣ್ಣಿನ ಪದರನ್ನು ಹಾಕಬೇಕು. ಆನಂತರ ಗಿಡ ನೆಡಬೇಕು. ಮರದಿಂದ ತಯಾರಾಗಿರುವ ನಯವಾದ ಕೈದಿಮ್ಮಿಸಿ ನಿಂದ ಹಗುರವಾಗಿ ಒತ್ತಬೇಕು. ಮಧ್ಯಮ ಗಾತ್ರದ ಮಣ್ಣನ್ನು ಅದರ ಮೇಲೆ ಹಾಕಿ ಮತ್ತೆ ದಬ್ಬಬೇಕು. ಗಿಡ ನೆಡುವಾಗ ಅದು ತಟ್ಟೆಯ ಮಧ್ಯಭಾಗದಲ್ಲಿರುವಂತೆ ಎಚ್ಚರವಹಿಸಬೇಕು. ಇದಾದ ನಂತರ ನೀರುಣಿಸುವುದನ್ನು ಮರೆಯಬಾರದು.

ಗಿಡದ ಆರೈಕೆ

ಯಾವುದೇ ಗಿಡನವನ್ನು ಬೆಳೆಸಿದ ಮೇಲೆ ಅದನ್ನು ಜೋಪಾನ ಮಾಡುವುದು ಬಹು ಮುಖ್ಯವಾದುದು. ಆ ಸಮಯದಲ್ಲಿ ಗಿಡವು ನೆಲೆಗೊಳ್ಳುವುದಲ್ಲದೇ ಬೇರು ಚಿಗುರಲು ಪ್ರಾರಂಭಿಸುತ್ತದೆ. ತಟ್ಟೆಯನ್ನು ಎರಡು ವಾರಗಳಾದರೂ ತಣ್ಣಗಿನ ಮತ್ತು ನೆರಳಿನ ಸ್ಥಾನಕ್ಕೆ ಬದಲಾಯಿಸುತ್ತಿರಬೇಕು. ಗಿಡವನ್ನು ಒಮ್ಮೆಲೇ ಸೂರ್‍ಯನ ಶಾಕಕ್ಕೆ ತರಬಾರದು. ಮುಂಜಾನೆಯ ಹೊತ್ತಿನ ಬಿಸಿಲಲ್ಲಿ ಎರಡು ಗಂಟೆಯಷ್ಟು ಕಾಲ ಇಡುತ್ತ ಬಂದು ಕ್ರಮೇಣವಾಗಿ ಅದನ್ನು ಪ್ರಖರವಾದ ಸೂರ್‍ಯನ ಶಾಖಕ್ಕೆ ಒಡ್ಡಬೇಕು. ಯಾವುದೇ ಸಂದರ್‍ಭದಲ್ಲಿ ಮಣ್ಣನ್ನು ಪೂರ್‍ತಿಯಾಗಿ ಒಣಗಲು ಬಿಡಬಾರದು. ಬೇಸಿಗೆಯ ದಿನದಲ್ಲಿ ಹೆಚ್ಚಿನ ಶಾಖ ಮತ್ತು ಉಷ್ಣತೆಯಿರುವುದರಿಂದ ಗಿಡವನ್ನು ಮಧ್ಯಾಹ್ನ ಮತ್ತು ಅಪರಾಹ್ನದ ಹೊತ್ತಿನಲ್ಲಿ ಬಿಸಿಲಿನಿಂದ ರಕ್ಷಿಸಬೇಕು. ಹಿಮದಿಂದಲೂ ಕೂಡ ಗಿಡವನ್ನು ಕಾಪಾಡಬೇಕು.

ನೀರುಣಿಸುವುದು

ಬೋನ್ಸಾಯ್ ಸಣ್ಣ ಕಂಟೇನರ್‌ನ ಮಣ್ಣನ್ನೇ ಸಂಪೂರ್‍ಣವಾಗಿ ಅವಲಂಬಿಸಿರುವುದರಿಂದ ನೀರುಣಿಸುವುದು ಅತಿ ಮುಖ್ಯವಾಗಿದೆ. ಇದು ಗಿಡದ ಬೆಳವಣಿಗೆಯ ಮೇಲೆ ಪರಿಣಾಮ ಬೀರುವುದರಿಂದ ಗಿಡವನ್ನು ಯಾವುದೇ ಸಂದರ್‍ಭದಲ್ಲಿ ಒಣಗಲು ಬಿಡಬಾರದು. ಅತಿಯಾಗಿ ನೀರು ಹಾಕಿದರೆ ಬೇರುಗಳು ತಮಗೆ ಅನವಶ್ಯಕವೆನಿಸಿದ ನೀರಿನಿಂದ ಕೊಳೆಯಲು ಪ್ರಾರಂಭಿಸಿ ಕ್ರಿಯೆಯನ್ನು ಮಾಡುವಲ್ಲಿ ವಿಫಲವಾಗುತ್ತವೆ. ಅವಶ್ಯಕತೆಗಿಂತ ಕಡಿಮೆಯಾಗಿ ನೀರುಣಿಸಿದರೆ ಗಿಡದಲ್ಲಿಯ ನೀರಿನ ಪ್ರವಾಹವು ಕಡಿಮೆಯಾಗಿ ಗಿಡ ಬಾಡಲು ಪ್ರಾರಂಭವಾಗಿ ಬೆಳವಣಿಗೆ ಕ್ಷೀಣಿಸುತ್ತದೆ. ಆದ್ದರಿಂದ ಕ್ರಮವರಿತು ಎಷ್ಟು ಬೇಕಷ್ಟು ನೀರುಣಿಸುವುದು ಅವಶ್ಯ. ಸಾಮಾನ್ಯವಾಗಿ ಮಣ್ಣು ಸ್ವಲ್ಪ ಒಣಗಿದಾಗ ನೀರು ಹಾಕಬೇಕು.

ಸಮರುವುದು ಮತ್ತು ಚಿವುಟುವಿಕೆ

ನಾವು ಬೆಳೆಸುವ ಪ್ರತಿಯೊಂದು ಗಿಡಕ್ಕೂ ಸೂಕ್ತವಾದ ಆಕಾರ ಕೊಟ್ಟರಷ್ಟೇ ಅದು ನೋಡಲು ಅಂದವಾಗುವುದು. ಮರವಾಗಲಿ ಪೊದೆಗಿಡವಾಗಲಿ ಸ್ವೇಚ್ಛೆಯಾಗಿ ಬೆಳೆಯಲು ಬಿಡದೇ ಅವುಗಳನ್ನು ಅಂದವಾಗಲು ಅನುಕೂಲವಾಗುವಂತೆ ಅನವಶ್ಯಕವಾದ ಭಾಗಗಳನ್ನು ಸಮರುವುದು (ಪ್ರೂನಿಂಗ್) ಎನ್ನುತ್ತಾರೆ.

ಸಮರುವುದರಿಂದ ಗಿಡಕ್ಕೆ ಚಿಗುರಲು ಉತ್ತೇಜಕವಾಗುತ್ತದೆ. ಆ ಭಾಗದ ಬೆಳವಣಿಗೆಗೆ ಶಕ್ತಿಯ ಉಪಯೋಗವಾಗುತ್ತದೆ. ಬೆಳವಣಿಗೆಗನುಸಾರವಾಗಿ ಸಮರಬೇಕು ಮತ್ತು ಟೊಂಗೆಯು ಚಿಗುರುವಂತೆ ಚಿವುಟಬೇಕು.

ಗಿಡವು ಆಕರ್‍ಷಕವಾಗಿ ಬೆಳೆಯತೊಡಗಿದ್ದರೆ ಚಿವುಟುವುದು ಬೇಕಾಗಿಲ್ಲ. ಒಂದು ವೇಳೆ ಎರಡು ಕಂಕುಳ ಶಾಖೆಗಳು (ಆಕ್ಸಿಸ್) ಎರಡು ಕಡೆಯಲ್ಲಿ ಬೆಳೆಯುತ್ತಿದ್ದರೆ ಒಂದನ್ನು ಚಿವುಟಲೇಬೇಕು. ಕೆಲವು ಗಿಣ್ಣು (ನೋಡ್ಸ್) ಗಳವರೆಗೆ ಸಮರಬೇಕು. ಒಂದು ವೇಳೆ ನಿರ್‍ದಿಷ್ಟ ಋತುವಿನಲ್ಲಿ ಅಥವಾ ವರುಷವಿಡಿ ತ್ವರಿತಗತಿಯಲ್ಲಿ ವರುಷದಲ್ಲಿ ಒಂದಕ್ಕಿಂಥ ಹೆಚ್ಚು ಬಾರಿ ಚಿವುಟಬೇಕು. ಆದರೆ ಸಮರುವುದರಿಂದ ತೆಳುವಾದ ಮತ್ತು ನಿಶಕ್ತವಾದ ಕವಲುಗಳು ಬೆಳೆದರೆ, ಚಿವುಟುವಿಕೆ ಮತ್ತು ಸಮರುವಿಕೆಯನ್ನು ಯಾವುದೇ ಮೆದು ಅಥವಾ ರಸಭರಿತವಾಗಿದ್ದರೆ ಕೈಬೆರಳಲ್ಲಿ ಚಿವುಟಬಹುದು. ದಪ್ಪ ಮತ್ತು ಗಟ್ಟಿಯಾಗಿದ್ದರೆ ಗಿಡ ಕತ್ತಿರಿಯಿಂದ ಸಮರುವಾಗ ಮಣ್ಣು ಅಥವಾ ಬೇರನ್ನು ಧಕ್ಕೆಯಾಗದಂತೆ ಎಚ್ಚರ ವಹಿಸುವುದು ಅತಿ ಮುಖ್ಯವಾಗಿದೆ.

ಕವಲುಗಳನ್ನು ಸರಿಹೊಂದಿಸುವಿಕೆ

ಬೋನ್ಸಾಯ್ ಅಂದವಾಗಿ ಕಾಣಲು ಮತ್ತು ಕವಲುಗಳನ್ನು ಸರಿಹೊಂದಿಸುವುದು ಕಷ್ಟವಾದ ಕೆಲಸವಾಗಿದೆ. ಗಿಡದ ಆಕರ ನಿಮ್ಮ ಅಭಿವ್ಯಕ್ತಿಯನ್ನು ಕಾಣಸಿಗಲು ಇದರಿಂದ ಸಾಧ್ಯವಾಗುತ್ತದೆ. ಎರಡು ಕವಲುಗಳ ಮಧ್ಯೆ ಕತ್ತರಿ ಮಾಡಲು ಕೆಳಗಿನ ಕವಲನ್ನು ಗಟ್ಟಿಯಾಗಿ ವಿಲಂಬಿತಗೊಳಿಸಬೇಕು. ತಂತಿ ಬಿಗಿಹಿಡಿದು ಜಾಗದಲ್ಲಿ ಮರದ ನಾರನ್ನು ಸುತ್ತಲು ಸುತ್ತಿ. ಇಲ್ಲಿ ಕಬ್ಬಿಣದ ತಂತಿಗಿಂತ ತಾಮ್ರದ ತಂತಿ ಉಪಯೋಗಿಸುವುದು ಒಳಿತು. ಏಕೆಂದರೆ ಅದು ಮೆದುವಾಗಿರುವುದು ಹಾಗು ಗಿಡದ ಕಾಂಡವನ್ನು ಘಾಸಿಗೊಳಿಸುವುದಿಲ್ಲ. ಕವಲುಗಳನ್ನು ಹೇಗೆ ಬೇಕೋ ಹಾಗೆ ತಂತಿಯಿಂದ ಬಂಧಿಸಿ ಸೌಂದರ್‍ಯವನ್ನು ಹೆಚ್ಚಿಸಬಹುದು.

ಸ್ಥಳಾಂತರಿಸುವುದು ಅಥವಾ ನಾಟಿ ಹಾಕುವುದು

ತಟ್ಟೆಯಲ್ಲಿನ ಮಣ್ಣು ಪೂರ್‍ತಿ ನಿಷ್ಕಾಸವಾದಾಗ ಅಥವಾ ತಟ್ಟೆಪೂರ್‍ತಿ ಬೇರುಗಳಿಂದ ತುಂಬಿದಾಗ ಬೋನ್ಸಾಯ್‌ನ್ನು ಸ್ಥಳಾಂತರಿಸಬೇಕು. ಗಿಡವು ಬೆಳವಣಿಗೆಯ ಹಂತದಲ್ಲಿದ್ದಾಗ ವರುಷಕ್ಕೊಂದು ಬಾರಿ ಮತ್ತು ಪೂರ್‍ತಿ ಬೆಳೆದಾದ ಮೇಲೆ ಎರಡು ಅಥವಾ ಮೂರು ವರುಷಗಳಲ್ಲಿ ಒಮ್ಮೆಯಂತೆ ಸ್ಥಳಾಂತರಿಸಬೇಕು. ನಾಟಿ ಹಾಕುವಾಗ ಮೊದಲಿನ ಮಣ್ಣನ್ನು ಬದಲಾಯಿಸಬೇಕು. ಶೇ.೬೦ ಕೆಂಪು ಮಣ್ಣು, ಶೇ. ೩೦ ಕಪ್ಪು ಮಣ್ಣು ಮತ್ತು ಶೇ. ೧೦ ರಷ್ಟು ಕೊಳೆತ ಎಲೆಗಳ ಮಿಶ್ರಣ ಬೆರೆಸಿ ತಯಾರಿಸಿದ ಮಣ್ಣನ್ನು ಉಪಯೋಗಿಸಬೇಕು. ಸತ್ತ ಹಾಗು ಸಣ್ಣದಾದ ಬೇರುಗಳ ತುದಿಗಳನ್ನು ಸಮರಬೇಕು. ಗಿಡದ ಸುಂದರತೆಯನ್ನು ಕಾಪಾಡಲು ಅನಾವಶ್ಯಕ ಟೊಂಗೆಗಳನ್ನು ಸಮರಬಹುದು. ಆನಂತರ ಬೋನ್ಸಾಯನ್ನು ತಟ್ಟೆಯಲ್ಲಿ ಈ ಮೊದಲು ತಿಳಿಸಿದಂತೆ ನೆಡಬೇಕು.

ಗೊಬ್ಬರ ಮತ್ತು ಕೃತಕ ಗೊಬ್ಬರದ ಪ್ರಾಮುಖ್ಯತೆ

ಬೋನ್ಸಾಯ್ ಗಿಡವು ತಟ್ಟೆಯ ಮಣ್ಣನ್ನೇ ಅವಲಂಬಿಸಿರುವುದರಿಂದ ಅದಕ್ಕೆ ಗೊಬ್ಬರದ ಅವಶ್ಯಕತೆ ಬಹಳಷ್ಟಿದೆ. ಮೂರು ಅತಿ ಮುಖ್ಯ ಘಟಕಾಂಶಗಳಾದ ಸಾರಜನಕ, ಫಾಸ್ಫೋರಿಕ್ ಆಮ್ಲ ಮತ್ತು ಪೋಟ್ಯಾಶ್‌ಗಳನ್ನು ಕ್ರಮವಾಗಿ ೫೦, ೩೦ ಮತ್ತು ೨೦ ಅನುಪಾತದಲ್ಲಿ ಬೆರೆಸಬೇಕು. ಸಾಸಿವೆ ಹಿಂಡಿ ಬೋನ್ಸಾಯ್‌ಗೆ ಅತ್ಯುತ್ತಮ ಗೊಬ್ಬರ. ಇದನ್ನು ಘನ ಹಾಗೂ ದ್ರವ ಎರಡು ರೂಪದಲ್ಲೂ ಉಪಯೋಗಿಸಬಹುದು. ಆರು ಲೀಟರ್‍ ನೀರಿನಲ್ಲಿ ಒಂದು ಕಿಲೋಗ್ರಾಂ ಸಾಸಿವೆ ಹಿಂಡಿ ಹಾಕಿ ವಿಭಜಿಸಲು ಬಿಡಬೇಕು. ಮೂರು-ನಾಲ್ಕು ವಾರಗಳ ನಂತರ ವಿಭಜಿಸಿದ ಗೊಬ್ಬರದ ಮೇಲಿನ ನೀರಿಗೆ ಪುನಃ ೫ ರಿಂದ ೧೦ ರಷ್ಟು ಪಟ್ಟು ನೀರು ಹಾಕಿ, ಸಾರರಿಕ್ತವನ್ನಾಗಿ ಮಾಡಿ ಅದನ್ನು ಕಾಂಡದ ಬುಡದ ಜಾಗವೊಂದನ್ನು ಬಿಟ್ಟು ಉಳಿದ ಭಾಗದ ಮಣ್ಣಿನಲ್ಲಿ ಹಾಕಬೇಕು. ಪುಡಿ ಮಾಡಿದ ಹಿಂಡಿಯನ್ನು ಮಣ್ಣಿನ ಮೇಲ್ಪದರಿನೊಂದಿಗೆ ಕಾಂಡದ ದೂರದಲ್ಲಿಯ ಮಣ್ಣಿನಲ್ಲಿ ಬೆರೆಸಬೇಕು.

ರೋಗ ಮತ್ತು ಕೀಟಗಳಿಂದ ರಕ್ಷಿಸುವುದು

ರೋಗರುಜಿನ ಹಾಗೂ ಪೀಡೆಗಳು ಇತರೆ ಗಿಡಗಳಂತೆ ಬೋನ್ಸಾಯ್‌ಗೂ ಸಾಮಾನ್ಯ. ಅತಿಯಾಗಿ ನೀರುಣಿಸುವುದರಿಂದ ಬೇರು ಕೊಳೆಯಬಹುದು. ಇದರಿಂದ ಗಿಡದ ಬೆಳವಣಿಗೆಯು ಕುಂಠಿತವಾಗುವುದಲದೇ ಕಾಂಡ ಮತ್ತು ಕವಲುಗಳು ಒಣಗಬಹುದು. ಶಿಲೀಂಧ್ರ ರೋಗವು ಬಂದರೆ ಸಾಧ್ಯವಾದಷ್ಟು ಬೇಗ ಆ ಭಾಗವನ್ನು ಕಿತ್ತೆಸೆಯಬೇಕು. ಕೀಟನಾಶಕ ಮತ್ತು ಶಿಲೀಂದ್ರ ನಾಶಕಗಳನ್ನು ನಿಯಮಿತವಾಗಿ ತುಂತುರಿಸುತ್ತಿರಬೇಕು.

ಹೀಗೆ ಎಚ್ಚರದ ಕ್ರಮಗಳಿಂದ ಬೋನ್ಸಾಯ್ ಬೆಳೆಸಬಹುದು. ಬೋನ್ಸಾಯ್ ಒಂದು ಅಲಂಕೃತ ಗಿಡವಾಗಿ ನಿಮ್ಮ ಮನೆಯ ಶೋಭೆಯನ್ನು ಹೆಚ್ಚಿಸುವುದರಲ್ಲಿ ಮತ್ತು ಅತಿಥಿಗಳಲ್ಲಿ ಅಚ್ಚರಿ ಹುಟ್ಟಿಸುವುದರಲ್ಲಿ ಸಂದೇಹವಿಲ್ಲ.

ಬೋನ್ಸಾಯ್ ಕಲೆ ಜಗತ್ತಿನ ಇತರೆಲ್ಲ ದೇಶಗಳಲ್ಲಿ ಪ್ರಸಿದ್ಧಿಯಾಗಿದೆ. ಆದರೆ ನಮ್ಮ ದೇಶದಲ್ಲಿ ಇದನ್ನು ಬಹಳ ವಿರಳವಾಗಿ ಕಾಣಬಹುದು. ಅಲಂಕಾರದ ಹಿನ್ನೆಲೆಯಲ್ಲಿ ಇಲ್ಲಿಯೂ ಇದನ್ನು ಬೆಳೆಸುವಲ್ಲಿ ಆಸಕ್ತಿ ಹೆಚ್ಚಾಗಬೇಕಾಗಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪೇಳಲಾಪರಿ ಕಿರಿದಾಗಿ, ಬೇಕಲ್ಲಾ ಹಿರಿ ಪ್ರತಿಭೆ?
Next post ಅಲ್ಪ ತೃಪ್ತನಾಗಿರೆ

ಸಣ್ಣ ಕತೆ

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…