ಚಿತ್ರದುರ್ಗ ಜಿಲ್ಲೆಯ ಅವಿಸ್ಮರಣೀಯ ಸಾಹಿತ್ಯ ಸಿರಿ

ಚಿತ್ರದುರ್ಗ ಜಿಲ್ಲೆಯ ಅವಿಸ್ಮರಣೀಯ ಸಾಹಿತ್ಯ ಸಿರಿ

ಚಿತ್ರದುರ್ಗ ಜಿಲ್ಲೆಯ ಸಾಹಿತ್ಯ, ಸಾಹಿತಿಗಳು ಕರ್ನಾಟಕದ ಎಲ್ಲೆಡೆ ಇರುವ ಕನ್ನಡಿಗರನ್ನು ಮುಟ್ಟಿದ್ದಾರೆ. ಇಂಥವರನ್ನು ಒಂದು ಜಿಲ್ಲೆಗೆ ಸೀಮಿತಗೊಳಿಸುವುದು ಎಷ್ಟು ಸರಿ ಎಂಬ ಸಂಕೋಚ ಕಾಡಿದರೂ ಅವರು ನಮ್ಮ ಜಿಲ್ಲೆಯಲ್ಲಿ ಹುಟ್ಟಿ ಬೆಳೆದು ಬರೆದವರೆಂಬ ಅಭಿಮಾನವನ್ನೆಲ್ಲ ಮುಖ್ಯವಾಗಿಟ್ಟುಕೊಂಡು ನನ್ನ ಸೀಮಿತ ಓದಿನಲ್ಲಿ ನಾನು ಕಂಡವರ ಓದಿದವರ ಬಗ್ಗೆ ನನ್ನ ಅನಿಸಿಕೆಗಳನ್ನು ನಿಮ್ಮ ಮುಂಡಿಡಲು ಯತ್ನಿಸಿದ್ದೇನೆ.

ಹೊಸಗನ್ನಡದ ಅರುಣೋದಯ ಕಾಲಕ್ಕೆ ಅಗ್ರಮಾನ್ಯ ವಿದ್ವಾಂಸರೆನಿಸಿದ ವೆಂಕಣ್ಣಯ್ಯ, ತ.ಸು. ಶಾಮರಾಯರು ಕಾದಂಬರಿಕಾರ ತ.ರಾ. ಸುಬ್ಬರಾಯರು ಒಂದೇ ಮನೆತನದಿಂದ ಬಂದವರು. ಕುವೆಂಪು ಅವರಂಥ ಸರ್ವಶ್ರೇಷ್ಟ ಬರಹಗಾರರಿಗೆ ಹಾಗೂ ಇನ್ನಿತರ ವಿದ್ವಾಂಸರಿಗೆ ಮಾರ್ಗದರ್ಶಕರಾಗಿ ತಮ್ಮ ವಿದ್ವತ್ತನ್ನು ಧಾರೆ ಎರೆದ ತಳುಕಿನ ವೆಂಕಣ್ಣಯ್ಯ ಬರೆದದ್ದು ಕಡಿಮೆಯಾದರೂ ಅವೆಲ್ಲಾ ವಿದ್ವತ್ ಪೂರ್ಣ ಲೇಖನಗಳು ಅಂತೆಯೇ ಇವರ ಸಹೋದರ ತ.ಸು.ಶಾಮರಾಯರು ಸಹ ಅಧ್ಯಾಪಕರಾಗಿ ಹಲವು ವಿದ್ವಾಂಸರ ಸಾಹಿತ್ಯ ಸೃಷ್ಟಿಗೆ ನೀರೆರೆದು ಪೋಷಿಸಿದವರು, ಸ್ವತಃ ಹಲವಾರು ಕೃತಿಗಳನ್ನು ಬರೆದವರು ಕನ್ನಡದಲ್ಲಿ ಜನಪ್ರಿಯ ಸಾಹಿತ್ಯ ಚರಿತ್ರೆ, ಕುಮಾರವ್ಯಾಸ ಕವಿಯ ಭೀಷ್ಮಪರ್‍ವ ಮುಂತಾದ ಕೃತಿಗಳನ್ನು ಸಂಪಾದಿಸಿದ್ದಾರೆ.

ಅಂತೆಯೇ ಬೆಳಗೆರೆ ಮನೆತನದಲ್ಲಿನ ಕೆಲವರನ್ನು ಸ್ಮರಿಸಬಹುದಾಗಿದೆ. ಚಂದ್ರಶೇಖರ ಶಾಸ್ತ್ರಿಗಳು ಆಶುಕವಿಗಳಾಗಿ ಆಗಿನ ಕಾಲದ ಜನರಿಗೆ ಮೋಡಿ ಮಾಡಿದವರು. ಹಲವರ ಪಾಲಿಗೆ ಅವರು ಅವಧೂತರಂತೆ ಪ್ರಭಾವ ಬೀರಿದವರು. ಬೆಳಗೆರೆ ಚಂದ್ರಶೇಖರ ಶಾಸ್ತ್ರಿಗಳ ಮಕ್ಕಳೇ ಕೃಷ್ಣಶಾಸ್ರಿಗಳು. ಬೆಳೆಗೆರೆ ಜಾನಕಮ್ಮ, ಬೆಳೆಗೆರೆ ಪಾರ್ವತಮ್ಮ ಮತ್ತು ಬೆಳಗೆರೆ ಕೃಷ್ಣ ಶಾಸ್ತ್ರಿಗಳು ಗ್ರಾಮೀಣ ಜನರೊಡನೆ ತಮ್ಮ ಬದುಕನ್ನು ಸವೆಸುತ್ತಾ ಕವನ, ನಾಟಕಗಳನ್ನು ಬರೆಯುತ್ತಾ ವಿದ್ವಾಂಸರ, ಪ್ರಖ್ಯಾತ ಸಾಹಿತಿಗಳ ಒಡನಾಟವಿಟ್ಟುಕೊಂಡಿದ್ದು ಗ್ರಾಮದಲ್ಲೇ ಆದರ್ಶ ಶಿಕ್ಷಕರೆಂದು ರಾಷ್ಟ್ರ ಮತ್ತು ರಾಜ್ಯಪ್ರಶಸ್ತಿಗಳನ್ನು ಪಡೆದ ಸರಳಜೀವಿ. ಅವರು ಬರೆದ ಹಳ್ಳಿ ಚಿತ್ರ, ಹಳ್ಳಿಮೇಷ್ಟ್ರು ನಾಟಕಗಳು ಅತ್ಯಂತ ಜನಪ್ರಿಯತೆ ಗಳಿಸಿ ಹಲವು ಪ್ರಯೋಗಗಳನ್ನು ಕಂಡಿವೆ. ಇತ್ತೀಚಿನ ಕೃತಿ ‘ಯೇಗ್ದಾಗ್ ಯೆಲ್ಲಾ ಐತೆ’ ಕೂಡ ಗಮನಾರ್ಹ. ಶಾಸ್ತ್ರಿಗಳು ತಮ್ಮ ಕೃತಿಗಳಷ್ಟೇ ಜನಪ್ರಿಯ ವ್ಯಕ್ತಿ.

ತ.ರಾ.ಸು ಸಾಧನೆ: ಮತ್ತೆತಳುಕಿನ ಮನೆತನದತ್ತ ದೃಷ್ಟಿ ಹಾಯಿಸಿದರೆ ಕಣ್ತುಂಬುವ ವ್ಯಕ್ತಿ ತ.ರಾ.ಸು. ಚಿತ್ರದುರ್ಗ ಜನತೆ ತಮ್ಮ ದುರ್ಗದ ಇತಿಹಾಸ ಕೋಟೆ ಕೊತ್ತಲುಗಳು ಬುರುಜು ಬತೆರಿಗಳು ವೀರಪಾಳೆಯಗಾರರೆಂದರೆ ತಮ್ಮ ದೇಶದ ಒಂದು ಅಂಗವೆಂದೇ ಭಾವಿಸಿದವರು. ದುರ್ಗದವರ ಇಂತಹ ಭಾವನೆಗಳನ್ನು ಬಂಡವಾಳವನ್ನಾಗಿ ಮಾಡಿಕೊಂಡು ಚಿತ್ರದುರ್ಗ ಇತಿಹಾಸವನ್ನೇ ವಸ್ತುವನಾಗಿಸಿಕೊಂಡು ಬರೆದ ತ.ರಾ.ಸು. ದುರ್ಗದ ಚರಿತ್ರೆಯನ್ನು ಕರ್ನಾಟಕದ ಮೂಲೆಮೂಲೆಗೂ ತಲುಪಿಸಿದ ದೈತ್ಯ ಸಾಹಿತಿ. ಹೊಟ್ಟೆಪಾಡಿಗಾಗಿ ಬರೆಯಬೇಕಾದ ಅನಿವಾರ್ಯ ಕಾಡುತ್ತಿದ್ದರಿಂದ ಬಹಳಷ್ಟು ಬರೆದಿದ್ದರಿಂದ ಹಲವು ಕೃತ್ತಿಗಳು ಜಾಳುಜಾಳಾಗಿವೆ. ಆದರೆ ತ.ರಾ.ಸು. ತಮ್ಮ ಐತಿಹಾಸಿಕ ಕೃತಿಗಳಿಂದ ತಮ್ಮ ಬರಹಗಳ ದೌರ್ಬಲ್ಯಗಳನ್ನೆಲ್ಲಾ ಮೆಟ್ಟಿ ನಿಲ್ಲುತ್ತಾರೆ. ಅವರ ಐತಿಹಾಸಿಕ ಕೃತಿಗಳಿಗೆ ಅಂತಹ ಶಕ್ತಿ ಇದೆ. ಕಂಬನಿಯ ಕುಯಿಲು, ರಕ್ತರಾತ್ರಿ, ತಿರುಗುಬಾಣವಾಗಿರಬಹುದು, ನೃಪತುಂಗ ಶಿಲ್ಪಶ್ರೀ ಸಿಡಿಲಮೊಗ್ಗುವಿನಂತಹ ಐತಿಹಾಸಿಕ ಕೃತಿಗಳೇ ಆಗಿರಬಹುದು. ಅವರಿಗೆ ಸಾಹಿತ್ಯ ಕ್ಷೇತ್ರದಲ್ಲಿ ಮಹತ್ವದ ಸ್ಥಾನವನ್ನು ಪ್ರಶಸ್ತಿ ಪಾರಿತೋಷಕಗಳನ್ನು ತಂದುಕೊಟ್ಟಿವೆ. ಅವರು ಅಸ್ತಮಿಸುವ ಮುನ್ನ ಬರೆದ ಬೃಹತ್ ಕಾದಂಬರಿ ದುರ್ಗಾಸ್ತಮಾನ ಮತ್ತದೇ ದುರ್ಗದ ಇತಿಹಾಸವನ್ನೆಲ್ಲ ತೆರೆದಿಡುವ ಅಪರೂಪದ ಕೃತಿ. ಈ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳಿಸಿದ ತ.ರಾ.ಸು. ಅವರು ಬರೆದ ಹಲವಾರು ಸಾಮಾಜಿಕ ಕಾದಂಬರಿಗಳು ಚಲನಚಿತ್ರಗಳಾಗಿಯೂ ಜನಪ್ರಿಯತೆ ತಂದುಕೊಟ್ಟಿವೆ.

ಗಂಡು ಬರಹದ ತ.ರಾ.ಸು. ಅವರಿಂದ ಮುಂದೆ ಸರಿದರೆ ಮತ್ತೆರಡು ಹೆಸರುಗಳು ಓದುಗರ ಕಣ್ಮನ ಸೆಳೆಯುವಂಥಹದು. ಬಿ.ವಿ. ವೈಕುಂಠರಾಜು ಖ್ಯಾತ ಪತ್ರಕರ್ತರಾದಂತೆಯೇ ಸೃಜನಶೀಲ ಬರಹಗಾರರು ಕೂಡ.

ಜನಪ್ರಿಯ ಹೆಸರು : ಜಿಲ್ಲೆಯ ಕಾದಂಬರಿಕಾರರ ದೃಷ್ಟಿಯಿಂದ ಅತ್ಯಂತ ಜನಪ್ರಿಯ ಹೆಸರು ಬಿ.ಎಲ್. ವೇಣು, ಕಥೆಗಾರರಾಗಿ ಹಾಗೂ ಕಾದಂಬರಿಕಾರರಾಗಿ ಚಲನಚಿತ್ರ ಸಂಭಾಷಣಕಾರರಾಗಿ ಏಕಕಾಲದಲ್ಲಿ ಸಾಹಿತ್ಯ ಮತ್ತು ಸಿನಿಮಾಗಳಲ್ಲಿ ಖ್ಯಾತಿ ಗಳಿಸಿದವರು, ವೇಣು ಬರೆದ ‘ಬೆತ್ತಲೆ ಸೇವೆ’, ‘ಲಿಂಗವೆಟ್ಟು ಪ್ರಸಂಗ’ ದಂತಹ ಕಥೆಗಳು ಪ್ರಜಾಮತ ರಾಜ್ಯಮಟ್ಟದ ಕಥಾಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿದಂತೆ, ಸುಧಾ ರಾಜ್ಯಮಟ್ಟದ ಕಾದಂಬರಿ ಸ್ಪರ್ಧೆಯಲ್ಲಿ ‘ಅತಂತ್ರರು’ ಪ್ರಥಮ ಬಹುಮಾನವನ್ನು ಗಳಿಸಿದೆ. ‘ಮಹಾನದಿ’ ಕಾದಂಬರಿಗೆ ಪ್ರತಿಷ್ಠಿತ ಅ.ನ.ಕೃ ಪ್ರಶಸ್ತಿ ಪಡೆದ ವೇಣು, ೨೦೦೦ದಲ್ಲಿ ನಡೆದ ದೀಪಾವಳಿ ಕಥಾಸ್ಪರ್ಧೆಯಲ್ಲಿ ಸುಡುಗಾಡು ಸಿದ್ದನ ಪ್ರಸಂಗ ಎಂಬ ಕಥೆಗೆ ಪ್ರಥಮ ಬಹುಮಾನ ಪಡೆದಿದ್ದಾರೆ. ವೈಚಾರಿಕ ಹಿನ್ನೆಲೆಯಲ್ಲಿಯೇ ಬರೆವ ವೇಣು, ದಲಿತವರ್ಗ, ಅನಕ್ಷರತೆ, ಬಡವರ, ಮಧ್ಯಮ ವರ್ಗದ ಜೀವನ ಕ್ರಮ ಶೋಷಿತರ ವ್ಯಥೆಯನ್ನೇ ತಮ್ಮ ಕಾದಂಬರಿಯ ವಸ್ತುಗಳನ್ನಾಗಿಸಿಕೊಳ್ಳುತ್ತಾರೆ. ಒಂದೇ ವಸ್ತುವಿನ ಮೇಲೆ ಪದೇ ಪದೇ ಬರೆದರೂ ಅದು ದುರ್ಬಲವೆನಿಸದಂತೆ ನೀರಸವಾಗದಂತೆ ಬರೆಯಬಲ್ಲರು. ಅವರ ಕಾದಂಬರಿಯು ಜೀವನಕ್ಕೆ ಹತ್ತಿರವೆನಿಸುತ್ತವೆ. ಆದರೆ ವೇಣು ಚಲನಚಿತ್ರಕ್ಕೆ ಬರೆಯತೊಡಗಿದ ಪ್ರಭಾವವೆಂಬಂತೆ ಅವರ ಅನೇಕ ಕೃತಿಗಳು ಸಿನಿಮೀಯವಾಗಿ ಬಿಡುತ್ತವೆ ಎನ್ನುವ ಖ್ಯಾತ ವಿಮರ್ಶಕ ಡಾ. ಕೃಷ್ಣಮೂರ್ತಿ ಹನೂರು, ವೇಣು ಅನೇಕ ಸಾಮಾಜಿಕ ಕಾದಂಬರಿಗಳ ನಡುವೆ ಐತಿಹಾಸಿಕ ಕೃತಿಗಳನ್ನೂ ರಚಿಸಿದ್ದು ತ.ರಾ.ಸು. ಪರಂಪರೆಯನ್ನು ಮುಂದುವರೆಸಿದ್ದಾರೆ. ತ.ರಾ.ಸು. ಅವರನ್ನು ಬಿಟ್ಟರೆ ಚಿತ್ರದುರ್ಗದಿಂದ ಕೇಳಿಬರುವ ಜನಪ್ರಿಯ ಹೆಸರು ವೇಣು ಅವರದು ಎಂದು ಅಭಿಪ್ರಾಯಪಡುತ್ತಾರೆ. ವೇಣು ಅವರ ಅನೇಕ ಕಾದಂಬರಿಗಳು ಚಲನಚಿತ್ರಗಳಾಗಿ ಶತದಿನ ಕಂಡಿವೆ. ೫೩ ಹೆಚ್ಚು ಚಿತ್ರಗಳಿಗೆ ಸಂಭಾಷಣೆ ರಚಿಸಿರುವ ವೇಣು, ‘ಅಪರಂಜಿ’ ಚಲನಚಿತ್ರದ ಸಂಭಾಷಣೆಗೆಂದೇ ರಾಜ್ಯಪ್ರಶಸ್ತಿ ಪಡೆದಿದ್ದಾರೆ. ೨೫ಕ್ಕೂ ಹೆಚ್ಚು ಕಾದಂಬರಿಗಳು, ೫ ಕಥಾಸಂಕಲನಗಳು, ೩ ನಾಟಕಗಳನ್ನು ರಚಿಸಿರುವ ವೇಣು ‘ಹೆಬ್ಬುಲಿ ಹಿರೇಮದಕರಿನಾಯಕ’ನ ಬಗ್ಗೆ ಕಾದಂಬರಿ ಬರೆದು ಮುಗಿಸಿದ್ದಾರೆ.

ಕಥೆಗಾರರಾಗಿ ಟಿ.ಆರ್.ರಾಧಾಕೃಷ್ಣ ಗಮನ ಸೆಳೆದಿದ್ದಾರೆ .

ಪ್ರಬುದ್ದ ಹಾಸ್ಯ ಲೇಖಕ ಅ.ರಾ.ಸೇ., ಸಾಮಾಜಿಕ ಸಮಸ್ಯೆಗಳ ವಿಡಂಬನೆ ಗಂಭೀರ ಹಾಸ್ಯಗಳಿಗೆ ಮತ್ತೊಂದು ಹೆಸರು ಅ.ರಾ.ಸೇ. ಅವರ ಅಧ್ಯಯನ ಅನುಭವ ಅದನ್ನು ಅಭಿವ್ಯಕ್ತಿಸುವ ರೀತಿ ಅನನ್ಯ. ಹಾಸ್ಯ ವಿಪರೀತ ಗಂಭೀರವಾಗಿದ್ದರಿಂದಲೋ ಏನು ಅ.ರಾ.ಸೆ. ಜನಸಾಮಾನ್ಯರನ್ನು ತಲುಪಲಿಲ್ಲ. ಜಿ.ಪಿ. ಬಸವರಾಜು, ಹರಿಯಬ್ಬೆ ಪ್ರೇಂಕುಮಾರ ಅವರೂ ಸಾಹಿತ್ಯ ಕ್ಷೇತ್ರದಲ್ಲಿ ಕೆಲಸ ಮಾಡಿದವರು. ಯಳನಾಡು ಆಂಜನಪ್ಪನವರು ನಿರ್ಭೀತ ಬರಹಗಾರರು ‘ವೇಣು’ ಎಂಬ ಸಂಕಲನದಿಂದ ಪ್ರಸಿದ್ದರು. ಅಂಜನಪ್ಪನವರ ಭಾಷೆಯಲ್ಲಿ ಗ್ರಾಮೀಣ ಸೊಗಡಿದೆ. ಕಣಜನಹಳ್ಳಿ ನಾಗರಾಜ ಕೂಡ ಉತ್ತಮ ಕವಿ. ಮತ್ತೊಂದು ಗ್ರಾಮೀಣ ಪ್ರತಿಭೆ ತಿಪ್ಪಣ್ಣ ಮರಿಕುಂಟೆ. ಅನೇಕ ಮನಮುಟ್ಟುವ ಕಥೆಗಳನ್ನು ಬರೆದಿರುವ ತಿಪ್ಪಣ್ಣ ‘ಸುತ್ತು’ ಕಾದಂಬರಿಯಲ್ಲಿ ಗೆಲವೂ ಸಾಧಿಸಲಾಗಿಲ್ಲ. ಹಿರಿಯರಲ್ಲಿ ಒಬ್ಬರಾದ ಇತಿಹಾಸ ತಜ್ಞ ಹರತಿ ವೀರನಾಯಕರು ‘ದುರ್ಗದ ಧವಳ ಕೀರ್ತಿ’ ಇತ್ಯಾದಿ ಐತಿಹಾಸಿಕ ಕಾದಂಬರಿಗಳನ್ನು ಬರೆದರು. ಡಾ. ಸಿ.ಆರ್.ಪಾರ್ಥಸಾರಥಿ ತಮ್ಮ ಕಥೆಗಳಲ್ಲಿ ದಟ್ಟವಾದ ವೈದ್ಯಕೀಯ ಅನುಭವಗಳನ್ನು ನೀಡುವಲ್ಲಿ ಆಕರ್ಷಕವಾಗಿ ಕಥೆ ಹೆಣೆಯುವಲ್ಲಿ ಮತ್ತೊಬ್ಬ ಸಾಮರ್‍ಥ ಕಥೆಗಾರ. ಎನ್.ಎಸ್.ಚಿದಂಬರರಾವ್ ಅವರು ೩೦೦ ಕ್ಕೂ ಹೆಚ್ಚು ಕಥೆಗಳನ್ನು ನಾಲ್ಕು ಕಥಾ ಸಂಕಲವನ್ನು ಪ್ರಕಟಿಸಿರುವ ಅತ್ಯಂತ ಜನಪ್ರಿಯ ಕಥೆಗಾರರು. ದಲಿತ ಬರಹಗಾರರಲ್ಲಿ ಮುಖ್ಯ ಹೆಸರು ಎಸ್.ಆರ್. ಗುರುನಾಥ. ‘ಒಡಂಬಡಿಕೆ’ ಎಂಬ ಸಂಕಲನವನ್ನು ಪ್ರಕಟಿಸಿರುವ ಗುರುನಾಥ ದಲಿತರ ನೋವಿನ ಬಗ್ಗೆ ಕಣ್ಣಿಗೆ ಕಟ್ಟುವಂತೆ ಹೇಳಬಲ್ಲರು. ಇವರು ಕವಿ ಕೂಡಾ ಅಂತೆಯೆ ಟಿ.ಎಸ್. ರಾಜೇಂದ್ರಪ್ರಸಾದ, ಡಾ. ಲೋಕೇಶ ಅಗಸನಕಟ್ಟೆ, ಚಂದ್ರಶೇಖರ ತಾಳಾ, ಬಾಗೂರು ನಾಗರಾಜಪ್ಪ, ನಟರಾಜ ಬೂದಾಳ, ಹರಿಯಬ್ಬೆ ರಂಗಸ್ವಾಮಿ, ತಾರಣಿ ಶುಭದಾಯಿನಿ, ಪವಿತ್ರ ಪ್ರಿಯಾಭಾಷಿಣಿ, ಸಿ.ಬಿ. ಶೈಲಾ, ವಾಸಂತಿ ಪ್ರಭಾಕರ ನಾಯಕ, ಕೆ ಶರಿಫಾ, ಕೆ.ಆರ್. ಸಂಧ್ಯಾರೆಡ್ಡಿ, ಸ ಉಷಾ ನಮ್ಮಲ್ಲಿನ ಹೆಮ್ಮೆಯ ಕವಿಗಳು. ಚಂದ್ರಶೇಖರ ತಾಳ್ಯ ಬಂಡಾಯ ಮನೋಧರ್ಮದ ಕವಿ, ಅಂತೆಯೇ ಸಂಧ್ಯಾರೆಡ್ಡಿ ಮಾನವೀಯ ನೆಲೆಯಲ್ಲಿ ನಿಂತು ಚಿಂತಿಸುವ ಅಗಸನಕಟ್ಟೆಯವರ ಕಥಾಸಂಕಲನಗಳು ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿವೆ. ಡಾ. ಬಿ.ಎಂ. ಶರಭೇಂದ್ರಯ್ಯ ವಸ್ತುನಿಷ್ಟ ವಿಮರ್ಶಕರು. ಇವರು ‘ಕೆಂಡದ ಮಳೆ’ ವಿಮರ್ಶಾಗ್ರಂಥದಿಂದ ಗಮನ ಸೆಳೆದಿದ್ದಾರೆ.

ಲೇಖಕಿಯರು : ನಮ್ಮಲ್ಲಿನ ಲೇಖಕಿಯರಲ್ಲಿ ಇಂದಿಗೂ ಪ್ರಸ್ಥಾಪಿಸಬೇಕಾದ ಪ್ರಮುಖ ಹೆಸರು ಅನುಸೂಯ ರಾಮರೆಡ್ಡಿ ಅವರದು. ಸುಮಾರು ೧೭ ಕಾದಂಬರಿ, ಅನೇಕ ಸಣ್ಣ ಕಥೆಗಳನ್ನು ಬರೆದಿರುವ ಇವರು ಸ್ತ್ರೀಪರ ನಿಲುವಿನ ಲೇಖಕಿ. ಬಿ. ಕುಸುಮ ಕೂಡ ಕಾದಂಬರಿ ಬರೆಯಬಲ್ಲರು. ಲೇಖನ ಬರವಣಿಗೆ ಕೃತಿ ಪ್ರಕಟಣೆಯಲ್ಲಿ ಪ್ರಮುಖರೆಂದರೆ ಎಸ್.ಬಿ. ರಂಗನಾಥ, ಕೆ. ವೆಂಕಣಾಚಾರ್, ಡಾ. ನಾ. ಲೋಕೇಶ ಒಡೆಯರ್, ಡಾ. ರಾಜಶೇಖರ ಹನುಮಲಿ, ರಾಜ ಸಿರಿಗೆರೆ ರಾ. ವೆಂಕಟೇಶ ಶೆಟ್ಟಿ ಹಂಚಿನಮನಿ ವೀರಭದ್ರಪ್ಪಬೇದ್ರೆ, ಎಸ್. ಮಂಜುನಾಥ್, ಮೊಳಕಾಲ್ಮೂರು ಶ್ರೀನಿವಾಸಮೂರ್ತಿ, ನಾ. ಕಾಳೇಶ್ವರರಾವ್ ಇತ್ಯಾದಿ ಹಾಸ್ಯ ಸಾಹಿತಿ ಬಿ.ತಿಪ್ಪೆರುದ್ರಪ್ಪ ಪ್ರಸಿದ್ದರು.

ಮತ್ತೊಂದು ಹೇಳಲೇಬೇಕಾದ ಮಾತೆಂದರೆ, ಇಲ್ಲಿನ ಮಠಾಧೀಶರು ಕೂಡ ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರದುರ್ಗ ಮಠದ ಶ್ರೀ ಶಿವಮೂರ್ತಿ ಮುರುಘ ರಾಜೇಂದ್ರ ಶರಣರು ರೂಪಕಗಳ ರಾಜ ಎಂದೇ ಪ್ರಸಿದ್ದಿ. ಅನೇಕ ವೈಚಾರಿಕ ಬರಹಗಳ ಸಂಕಲನಗಳನ್ನು ಹೊರತಂದಿದ್ದಾರೆ. ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಮಹಾಸ್ವಾಮಿಗಳು ಕೂಡ ವೈಚಾರಿಕ ನೆಲೆಯಲ್ಲಿ ನಿಂತು ನಿರ್ಭೀತಿಯಿಂದ ಬರೆದ ಸಮರ್ಥರು. ಮರೆಯದ ಜೀವ ಮಲಾಡಿಹಳ್ಳಿ ಶ್ರೀ ರಾಘವೇಂದ್ರ ಗುರೂಜಿಗಳು ಕೂಡ ‘ತಿರುಕ’ ಎಂಬ ಹೆಸರಿನಲ್ಲಿ ಬರೆದ ಖ್ಯಾತನಾಮರು.

ಈ ಲೇಖನದಲ್ಲಿ ನನ್ನ ಬಗ್ಗೆ ನಾನೇ ಹೇಳಿಕೊಳ್ಳುವಂಥ ಅನಿವಾರ್ಯತೆಗೆ ಪಕ್ಕಾಗಿದ್ದೇನೆ. ಕಾರಣ ಹಲವರು ನನ್ನನ್ನು ನನ್ನ ಬರಹಗಳನ್ನು ಕಂಡಂತೆ ವಿರ್ಮಶಕರು ಗುರುತಿಸಿರುವ ಮಾತುಗಳಲ್ಲಿ ಸಂಕೋಚದಿಂದ ಬರೆದುಕೊಂಡಿದ್ದೇನೆ. ಆಕಸ್ಮಾತ್ ಕೆಲವರ ಹೆಸರು ಬಿಟ್ಟು ಹೋಗಿದ್ದರೆ ಮರೆವಿನ ಅಭಾವವೇ ಹೊರತು ಉದ್ದೇಶಪೂರ್ವಕವಲ್ಲ. ನನ್ನ ಜಿಲ್ಲೆಯ ಎಲ್ಲಾ ಬರಹಗಾರರ ಬಗ್ಗೆ ನನಗೆ ತುಂಬು ಅಭಿಮಾನವಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಈ ಪ್ರಪಂಚದಲ್ಲಿ ನಾನು, ಕೇವಲ
Next post ಯಕ್ಷಗಾನ

ಸಣ್ಣ ಕತೆ

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…