ಈ ಪ್ರಪಂಚದಲ್ಲಿ ನಾನು ಕೇವಲ…
ಪ್ರಪಂಚ… ಅಂದರೆ ಏನು ಅಂತ ನಿನಗೆ ಗೊತ್ತಲ್ಲ…
ಕೇವಲ ನಿನ್ನನ್ನು ಮಾತ್ರ ನೀನು ಅಂತ ಕೂಗಬಹುದು.

ನಾವು ಮಾತಾಡಲ್ಲ.
ಆಡಿದರೂ ನಮಗೆ ನಮ್ಮ ಮಾತಿನ ಸಂಬಂಧ ಇರಲ್ಲ.
ನಾವು ಆಡಿದಕ್ಕಿಂತ ಬೇರೆ ಇನ್ನೇನೋ ನಮ್ಮ ಅರ್ಥ ಇರುತ್ತೆ.

ಅದು, ಕೆಲವು ಸಾರಿ,
(ನಾವು ಒಬ್ಬರೇ ಇರುವಾಗ), ನಮಗೆ
ಗೊತ್ತಾಗಿದೆಯಾ ಅಂತ
ಅನುಮಾನ ಬರುವುದುಂಟು, ಹೌದಲ್ಲಾ?

ಆಗ ನಿನ್ನ ಕಣ್ಣಲ್ಲಿ ತೇವ ಇರುತ್ತೆ.
ಆಗ ನಾವು ಸುಮ್ಮನೆ ಆಗುತ್ತೇವೆ.
ಆಗ ನಮಗೆ ಏನೋ ಗೊತ್ತಾಗುತ್ತೆ.
ಆಗ ನಿನ್ನ ರೆಪ್ಪೆಗಳ ಮೇಲೆ ರೆಪ್ಪೆ
ನಿಧಾನವಾಗಿ ನೆಮ್ಮದಿಯಾಗಿ ಊರುತ್ತೆ.
ತುಂಬ.
ನೀನು ನನ್ನ ಹೆಸರು ಹೇಳುತ್ತೀಯೆ.

ನಾನು ನನ್ನ ಹೆಸರಾಗಿ
ಅದು, ಅದೇ ಎಲ್ಲ ಬೇಕಾದ್ದು ಎಲ್ಲ
ಹೇಳಬೇಕಾದ್ದು, ಎಲ್ಲಾ ಆಗಿ
ನನ್ನಿಂದ ನಿನ್ನ ಹೆಸರಾಗಿ ಬರುತ್ತದೆ.
ಓ, ನಾವು ನಾವು ನೀನು ನಾನು ನಾವು ನಾವು.

ಈ ಪ್ರಪಂಚದಲ್ಲಿ ನಿನ್ನನ್ನು ಮಾತ್ರ
‘ನೀನು’ ಅಂತ ಕೂಗಬಹುದು,
ಅದೆಲ್ಲ ನಮಗೆ ಆಗುತ್ತಿರುವಾಗಲೇ
ಕಳೆದೂ ಹೋಗುತ್ತಿರುತ್ತದೆ.
ನಮಗೆ ಅದು ಆಗಲೇ ಗೊತ್ತಾಗಲ್ಲ.
ಗೊತ್ತಿರಲ್ಲ. ಆಮೇಲೆ, ಗೊತ್ತಾದಾಗ
ಗೊತ್ತಾದಾಗ
(ಮಾತೆಂಬುದು ಬರೀ ಸುಳ್ಳು)
ಹೇಗೆ ಎಂದು ನನಗೆ ಗೊತ್ತಿಲ್ಲ
ನಾನು ಬೇರೆ ನೀನು ಬೇರೆ
ಒಬ್ಬೊಬ್ಬರೇ ಆಗಿರುತ್ತೇವೆ,
ಆದರೆ ಈ ಪ್ರಪಂಚದಲ್ಲಿ ನನಗೆ ನೀನು ಮಾತ್ರವೇ
ನೀನು.
*****

ನಾಗಭೂಷಣಸ್ವಾಮಿ ಓ ಎಲ್
Latest posts by ನಾಗಭೂಷಣಸ್ವಾಮಿ ಓ ಎಲ್ (see all)