ಅಧ್ಯಯನ ವಿಷಯ

ಅಧ್ಯಯನ ವಿಷಯ

ಯಾವ ಅಧ್ಯಯನ ವಿಷಯ ಉತ್ತಮ? ಈ ಪಶ್ನೆ ನಮ್ಮ ಹಲವು ವಿದ್ಯಾರ್ಥಿಗಳನ್ನು ಒಂದಲ್ಲ ಒಂದು ಹಂತದಲ್ಲಿ ಕಾಡುತ್ತಿರುತ್ತದೆ. ನಿಜ, ಸಮಾಜದ ಮನ್ನಣೆಗೆ ಪಾತ್ರವಾಗಿರುವ ಹಾಗೂ ಔದ್ಯೋಗಿಕ ದೃಷ್ಟಿಯಿಂದ ಸುರಕ್ಷಿತವಾಗಿರುವ ವೈದ್ಯಕೀಯ, ಎಂಜಿನಿಯರಿಂಗ್, ಐಟಿ, ಮ್ಯಾನೇಜ್ಮೆಂಟ್ ಮುಂತಾದ ಕೆಲವೊಂದು ವಿಭಾಗಗಳು ಎಲ್ಲರನ್ನೂ ಆಕರ್ಷಿಸಬಹುದು. ಆದರೆ ಅವು ಎಲ್ಲರಿಗೂ ಸಾಧ್ಯವಾಗಲಾರದು. ಮಾತ್ರವಲ್ಲ ಎಲ್ಲರೂ ಯಾಕೆ ಸರ್ವಮಾನ್ಯವಾದ ವಿಷಯಗಳನ್ನೇ ಕಲಿಯಬೇಕು? ಒಂದು ಸಮಾಜವೆಂದರೆ ಅದಕ್ಕೆ ಏನೆಲ್ಲ ಬೇಕು ಏನೆಲ್ಲ ಬೇಡ! ಬಹುಳತ್ವದ ಮೇಲೆಯೇ ಸಮಾಜ ಮತ್ತು ನಾಗರಿಕತೆಗಳು ನಿಂತಿರುವುದು. ಆದ್ದರಿಂದ ವಿದ್ಯಾರ್ಥಿಗಳ ಆಯ್ಕೆ ಅವರವರ ಅನುಕೂಲತೆ ಮತ್ತು ಒಲವುಗಳ ಮೇಲೆ ಅವಲಂಬಿಸಿರಬೇಕು. ಈ ಒಲವು ಕೂಡಾ ಹೇಗೆ ಉಂಟಾಗುತ್ತದೆ ಎನ್ನುವುದು ಕುತೂಹಲಕರ ಸಂಗತಿ. ಬೀದಿಯಲ್ಲಿ ಆಡುತ್ತಿರುವ ಮಗುವನ್ನು ಕೇಳಿದರೆ ಅದು ಎಂಜಿನ್ ಡ್ರೈವರ್ ಆಗುತ್ತೇನೆ ಎನ್ನಬಹುದು. ಯಾಕೆಂದರೆ ಅದಕ್ಕೆ ಗೊತ್ತಿರುವ ಸಂಗತಿಗಳಲ್ಲಿ ಆಕರ್ಷಕವಾಗಿರುವುದು ಅದೊಂದೇ. ಶಾಲೆ ಕಾಲೇಜುಗಳಿಗೆ ಬಂದ ವಿದ್ಯಾರ್ಥಿಗಳು ಹೆಚ್ಚಾಗಿ ತಮ್ಮ ಆದರ್ಶ ಅಧ್ಯಾಪಕರ ಪ್ರಭಾವಕ್ಕೊಳಗಾಗುತ್ತಾರೆ. ನನ್ನದೇ ಉದಾಹರಣೆಯನ್ನು ತೆಗೆದುಕೊಂಡರೆ, ನಾನು ಡಿಗ್ರಿ ಓದಬೇಕು ಎನ್ನುವ ಕಾಲದಲ್ಲಿ ನನಗಿದ್ದುದು ಲೆಕ್ಕದಲ್ಲಿ ಬಿ. ಎಸ್ಸಿ., ಅರ್ಥಶಾಸ್ತ್ರದಲ್ಲಿ ಬಿ. ಎ. ಮತ್ತು ಆಗತಾನೇ ಆರಂಭವಾಗಬೇಕಿದ್ದ ಇಂಗ್ಲಿಷ್ ಬಿ. ಎ. ಇವುಗಳಲ್ಲಿ ನನ್ನ ಆಯ್ಕೆ ಇಂಗ್ಲಿಷ್ ಬಿ. ಎ. ಆಯಿತು. ಅದಕ್ಕೆ ಕಾರಣ ಮಧುಕರ ರಾವ್ ಎಂಬ ನನ್ನ ಅಚ್ಚುಮೆಚ್ಚಿನ ಇಂಗ್ಲಿಷ್ ಪ್ರೊಫೆಸರರೊಬ್ಬರು. ಅವರಂತೆ ಆಗಬೇಕೆಂಬ ಒಂದೇ ಒಂದು ಇರಾದೆಯಲ್ಲದೆ ನನಗೆ ಇನ್ನೇನೂ ಇರಲಿಲ್ಲ. ಅಂಥ ಪ್ರೊಫೆಸರರು ಅರ್ಥ-ಶಾಸ್ತ್ರ ಕಲಿಸುತ್ತಿದ್ದರೆ ಬಹುಶಃ ನಾನು ಅರ್ಥಶಾಸ್ತ್ರವನ್ನು ತೆಗೆದುಕೊಳ್ಳುತ್ತಿದ್ದೆ ಎಂದು ಕಾಣುತ್ತದೆ.

ಅಷ್ಟರಲ್ಲೆ ನನ್ನ ಮೊದಲಿನ ಸಹವಿದ್ಯಾರ್ಥಿಗಳು ಗಣಿತ, ಸಂಖ್ಯಾಶಾಸ್ತ್ರ, ವಿಜ್ಞಾನ ಇತ್ಯಾದಿ ಗಹನ ವಿಷಯಗಳನ್ನು ಅದೇ ಕಾಲೇಜಿನಲ್ಲೋ ಪಕ್ಕದೂರಿನ ಕಾಲೇಜಿನಲ್ಲೋ ತೆಗೆದುಕೊಂಡಿದ್ದರು. ಇವರನ್ನು ಕಂಡಾಗ ನನಗೆ ಕಲವೊಮ್ಮೆ ಕೀಳರಿಮೆ ಉಂಟಾಗುತ್ತಿದ್ದುದು ನಿಜ. ಕೇವಲ ಭಾಷೆಯೊಂದನ್ನು ಓದಿ ನಾನು ಜೀವನದಲ್ಲಿ ಸಾಧಿಸುವುದೇನಿದೆ ಎಂಬ ಚಿಂತೆಯ ಎಳೆ ಮನಸ್ಸಿನಲ್ಲಿತ್ತು. ನಾನು ಓದುತ್ತಿದ್ದ ಕಾಲದಲ್ಲಿ ಉದ್ಯೋಗಾವಕಾಶಗಳು ತೀರಾ ಕಡಿಮೆ. ಆದರೂ ಇಂಗ್ಲಿಷ್ ಆರಿಸಿಕೊಂಡ ಮೇಲೆ ಆ ಭಾಷೆ, ಅದರ ಸಾಹಿತ್ಯ, ರಾಜಕೀಯ ಚರಿತ್ರೆ, ಮತ್ತು ಸಂಸ್ಕೃತಿಗಳಲ್ಲಿ ಆಸಕ್ತಿ ವಹಿಸಿದೆ. ನಂತರ ಅದರಲ್ಲಿ ಎಂ. ಎ. ಕೂಡಾ ಮಾಡಿಕೊಂಡು ಅಧ್ಯಾಪಕನಾದ್ದಾಯಿತು. ಆದರೆ ನನ್ನ ಪಠಣ ಅಲ್ಲಿಗೇ ನಿಲ್ಲಲಿಲ್ಲ. ಮುಂದೆ ಯಾರಿಗೂ ಬೇಡದ ಭಾಷಾ ವಿಜ್ಞಾನವನ್ನೂ ಓದಿದೆ; ಅದರಲ್ಲೇ ಪಿ‌ಎಚ್. ಡಿ. ಕೂಡಾ ಮಾಡಿದೆ.

ಇದೆಲ್ಲ ಯಾಕೆ ಹೇಳುತ್ತಿದ್ದೇನೆಂದರೆ, ನೀವು ಆರಿಸಿಕೊಳ್ಳುವ ವಿಷಯ ಮುಖ್ಯವಲ್ಲವೇ ಅಲ್ಲ! ಅದರಲ್ಲಿ ಆಸಕ್ತಿಯಿರುವುದು ಮುಖ್ಯ. ಅದೇ ರೀತಿ ಅದನ್ನು ಅದರ ತುತ್ತ ತುದಿಯವರೆಗೆ ಕೊಂಡೊಯ್ಯುವ ಹಟ ಮತ್ತು ಅನುಕೂಲತೆ. ಅರ್ಥಾತ್ ಅದರಲ್ಲಿನ ಅಧ್ಯಯನವನ್ನು ನಿರಂತರವಾಗಿ ಮಾಡುತ್ತಿರುವುದು. ಅಧ್ಯಯನದ ಅಂತ್ಯ ಪಿ‌ಎಚ್. ಡಿ. ಎಂಬ ಭಾವನೆ ಕೆಲವರಲ್ಲಿದೆ. ಅದು ಸರಿಯಲ್ಲ. ಅಧ್ಯಯನ ಮೊದಲಾಗುವುದೇ ಪಿ‌ಎಚ್. ಡಿ. ಆದ ನಂತರ! ನಿಜಕ್ಕೂ ಅಧ್ಯಯನಕ್ಕೆ ಅಂತ್ಯವೆಂಬುದೇ ಇಲ್ಲ. ಅದು ನಿರಂತರವಾಗಿ ನಡೆಸಿಕೊಂಡುಹೋಗುವ ಕ್ರಿಯೆ. ಈ ನಿರಂತರತೆಗೆ ಕೆಲವು ದೇಶಗಳಲ್ಲಿ ತುಂಬಾ ಮನ್ನಣೆಯಿದೆ. ಉದಾಹರಣೆಗೆ ಅಮೇರಿಕದಲ್ಲಿ ಯಾವಾಗಲೂ ನೀವೇನು ಮಾಡುತ್ತಿದ್ದೀರಿ ಎನ್ನುವುದೇ ಮುಖ್ಯ ಪ್ರಶ್ನೆ. ಅಲ್ಲಿ ನೀವು ನಿಮ್ಮ ಒನ್-ಟೈಮ್ (ಒಂದು ಸಲದ) ಸಾಧನೆಯ ಮೇಲೆ ಕುಳಿತುಕೊಳ್ಳುವಂತಿಲ್ಲ. ಈ ಕುರಿತು ನಾನು ಕೇಳಿದ ಒಂದು ಜೋಕು ಇಲ್ಲಿ ಪ್ರಸ್ತುತ. ಸಾಪೇಕ್ಷ ಸಿದ್ಧಾಂತ ಪ್ರಸಿದ್ಧಿಯ ಐನ್‌ಸ್ಟೈನ್‌ ಒಮ್ಮೆ ಅಮೇರಿಕನ್ ವಿಶ್ವವಿದ್ಯಾಲಯವೊಂದರಲ್ಲಿ ಭೌತಶಾಸ್ತ್ರದ ಪ್ರೊಫೆಸರ್ ಹುದ್ದೆಗೆ ಅರ್ಜಿ ಹಾಕುತ್ತಾನೆ. ಆತನ ಅರ್ಜಿ ಪರಿಶೀಲನಾ ಸಮಿತಿಯ ಮುಂದೆ ಬರುತ್ತದೆ. ಅಲ್ಲಿ ಐನ್‌ಸ್ಟೈನ್‌ನ ಮಿತ್ರಸದಸ್ಯರೊಬ್ಬರು ಐನ್‌ಸ್ಟೈನ್ ತಮ್ಮ ವಿಭಾಗಕ್ಕೆ ಅರ್ಜಿಹಾಕಿದ್ದೇ ದೊಡ್ಡ ಭಾಗ್ಯ ಎಂಬಂತೆ ಮಾತಾಡುತ್ತಾರೆ. ಯಾಕೆ ಹಾಗೆನ್ನುತ್ತೀರಿ ಎಂದು ವಿಭಾಗದ ಮುಖ್ಯಸ್ಥರು ಕೇಳುತ್ತಾರೆ. ಅದಕ್ಕೆ ಐನ್‌ಸ್ಟೈನ್‌ನ ಮಿತ್ರರು, ಗೊತ್ತಿಲ್ಲವೇ ಐನ್‌ಸ್ಟೈನ್ ಅಂದರೆ ಸಾಪೇಕ್ಷ ಸಿದ್ಧಾಂತ ಕಂಡುಹಿಡಿದಾತ ಎಂದು ಉತ್ತರಿಸುತ್ತಾರೆ. ಆಗ ಮುಖ್ಯಸ್ಥರು, ಅದೆಲ್ಲ ಸರಿ, ಆ ನಂತರ ಐನ್‌ಸ್ಟೈನ್‌ ಏನು ಮಾಡಿದ್ದಾನೆ ಎಂದು ಕೇಳುತ್ತಾರೆ! ಇದೊಂದು ತಮಾಷೆ ಆದರೆ ಇದು ಅಮೇರಿಕದ ಶೈಕ್ಷಣಿಕ ಮೌಲ್ಯವೊಂದನ್ನು ಸರಿಯಾಗಿ ಎತ್ತಿ ತೋರಿಸುತ್ತದೆ.

ಜುಗಾರಿಗೆ ಸಂಬಂಧಿಸಿ ಒಂದು ಮಾತಿದೆ: ಹೆಚ್ಚು ಕಾಲ ಯಾರು ಆಡಬಲ್ಲರೋ ಅವರೇ ಕೊನೆಗೂ ಗೆಲ್ಲವವರು, ಎಂದು. ಯಾಕೆಂದರೆ ಹೆಚ್ಚಿನ ಮಂದಿಯೂ ಒಂದೆರಡು ಬಾರಿ ಸೋತರೆ ಆಟದಿಂದ ಹಿಂಜರಿಯುವವರೇ ಆಗಿರುತ್ತಾರೆ, ಅಥವಾ ಮುಂದೆ ಆಡುವುದಕ್ಕೆ ಅವರ ಬಳಿ ಹಣ ಇಲ್ಲದೆಯೂ ಇರಬಹುದು. ವಿದ್ಯಾಭ್ಯಾಸಕ್ಕೆ ಸಂಬಂಧಿಸಿಯೂ ಈ ಮಾತು ಸರಿ. ಹೆಚ್ಚುಕಾಲ ಒಂದು ವಿಷಯವನ್ನು ಯಾರು ಅಧ್ಯಯನ ಮಾಡಬಲ್ಲರೋ ಅವರೇ ಆ ರಂಗದಲ್ಲಿ ಉಳಿಯುವವರು-ಇದಕ್ಕೆ ಮನೋನಿರ್ಧಾರವೂ ಬೇಕು, ಅನುಕೂಲತೆಯೂ ಬೇಕು. ಇಲ್ಲಿ ನೀವು ಜೀವವಿಜ್ಞಾನ ಓದುತ್ತೀರೋ ಇತಿಹಾಸ ಓದುತ್ತೀರೋ ಎನ್ನುವುದು ಮುಖ್ಯವಲ್ಲ. ಪರಿಣತರನ್ನು ಎಲ್ಲಾ ಕಡೆ ಮಾನ್ಯ ಮಾಡುತ್ತಾರೆ. ದುರದೃಷ್ಟವಶಾತ್ ನಮ್ಮ ದೇಶದಲ್ಲಿ ಮನೋನಿರ್ಧಾರ ಇದ್ದರೂ ಅನುಕೂಲತೆ ಇರುವುದಿಲ್ಲ; ಅನುಕೂಲತೆ ಇರುವವರಿಗೆ ಮನೋನಿರ್ಧಾರ ಇರುವುದಿಲ್ಲ.

ವಿದ್ಯಾರ್ಥಿಗಳಿಗೆ ಮಾತ್ರವೇ ಅಲ್ಲ, ಅಧ್ಯಾಪಕರಿಗೆ ಕೂಡಾ ಹಲವು ಸಲ ಸರಿಯಾದ ಮಾಹಿತಿಯೇ ಗೊತ್ತಿರುವುದಿಲ್ಲ. ಶಾಲಾಪಠ್ಯಗಳಲ್ಲಿ ಭೂಗೋಳ, ಖಗೋಳ, ವಿಜ್ಞಾನ, ಸಾಹಿತ್ಯ, ಕಲೆ ಮುಂತಾದ ವಿಷಯಗಳಿಗೆ ಸಂಬಂಧಿಸಿದ ಪಾಠಗಳಿದ್ದರೂ ಅವು ಮುಂದೆ ಉನ್ನತ ವಿದ್ಯಾಭ್ಯಾಸಕಾಲದಲ್ಲಿ ಅಭ್ಯಾಸಯೋಗ್ಯ ವಿಷಯಗಳೆನ್ನುವುದರ ಬಗ್ಗೆ ವಿದ್ಯಾರ್ಥಿಗಳಿಗಂತೂ ತಿಳಿದಿರುವುದು ಅಪರೂಪ. ಅಧ್ಯಾಪಕರಾದರೂ ಈ ವಿಷಯಗಳ ಬಗ್ಗೆ ಎಷ್ಟು ಆಸಕ್ತಿ ತೋರಿಸುತ್ತಾರೋ ತಿಳಿಯದು. ಅವರಿಗೂ ಮಾಹಿತಿ ಕೊರತೆಯಿರಬಹುದು. ಇಂಥ ಮಾಹಿತಿ ಕೊರತೆ ಬಾಧಿಸುವುದು ಮುಖ್ಯವಾಗಿ ಗ್ರಾಮಾಂತರದ ಶಾಲೆಗಳನ್ನು-ಅದೂ ಮೊದಲ ತಲೆಮಾರಿನ ವಿದ್ಯಾರ್ಥಿಗಳನ್ನು, ಹಾಗೂ ಇದೇ ಹಿನ್ನೆಲೆಯ ಅಧ್ಯಾಪಕರನ್ನು. ಶಾಲೆಗಳಿಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಯೊಂದು ಇದೆಯಾದರೂ, ಇದರ ಅಧಿಕಾರಿಗಳು ತಮ್ಮ ಸುಪರ್ದಿನ ಶಾಲೆಗಳಲ್ಲಿ ವಿದ್ಯಾರ್ಥಿಗಳಲ್ಲಿ ಮತ್ತು ಅಧ್ಯಾಪಕರಲ್ಲಿ ಶಿಕ್ಷಣಾಸಕ್ತಿ ಹುಟ್ಟಿಸುವಂಥ ಯಾವ ಕಾರ್ಯಕ್ರಮಗಳನ್ನೂ ಏರ್ಪಡಿಸುವುದಿಲ್ಲ. ಇದರ ಅರ್ಥವೆಂದರೆ ಬಹುಶಃ ಅವರಿಗಿದರಲ್ಲಿ ಆಸಕ್ತಿಯಿಲ್ಲ; ಅಥವಾ ಇಂಥ ಸಾಧ್ಯತೆಯೊಂದು ಇದೆಯೆಂಬ ಅರಿವು ಕೂಡಾ ಇಲ್ಲ. ಪ್ರತಿಯೊಂದು ಶೈಕ್ಷಣಿಕ ಸಂಸ್ಥೆಯಲ್ಲೂ ಅದರ ಮಟ್ಟಕ್ಕೆ ಸಮನಾದ ಮಾಹಿತಿ ಮತ್ತು ಸಲಹಾ ಕೇಂದ್ರವೊಂದರ ಅಗತ್ಯವಿದೆ.

ಕೆಲವು ಶಾಲೆಗಳಲ್ಲಿ ಮಕ್ಕಳನ್ನು ಶೈಕ್ಷಣಿಕ ಪ್ರವಾಸಕ್ಕೆ ಕರೆದುಕೊಂಡು ಹೋಗುವ ಕಾರ್ಯಕ್ರವಿದೆ. ಇದು ಒಳ್ಳೆಯದೇ. ಆದರೆ ಮಕ್ಕಳು ಮೃಗಾಲಯ, ವಸ್ತು ಸಂಗ್ರಹಾಲಯ, ಶಹರ, ನಿಸರ್ಗ ಪರಿಸರಗಳನ್ನು ನೋಡುವಂತೆಯೇ ಒಂದು ಕಾಲೇಜನ್ನೋ ವಿಶ್ವವಿದ್ಯಾಲಯವನ್ನೋ ನೋಡುವ ಅವಕಾಶವೂ ಇದ್ದರೆ ಒಳ್ಳೆಯದಲ್ಲವೇ? ಅಲ್ಲಿನ ಅಧ್ಯಾಪಕರ ಭೇಟಿ, ಅವರ ಜತೆ ಮಾತುಕತೆ, ಪ್ರಶ್ನೋತ್ತರ ಇಂಥ ಕಾರ್ಯಕ್ರಮಗಳಿದ್ದರೆ ವಿದ್ಯಾರ್ಥಿಗಳ ಮನೋವಿಕಸನಕ್ಕೆ ದಾರಿಯಾಗುತ್ತದೆ. ಶಾಲಾಧ್ಯಾಪಕರಿಗೂ ಇಂಥ ಸಂಪರ್ಕ ಅಗತ್ಯವೇ. ಇನ್ನು ಈ ಕಾಲೇಜು, ವಿಶ್ವವಿದ್ಯಾಲಯಗಳು ಕೂಡಾ ತಾವು ಉನ್ನತಮಟ್ಟದವರು ಎಂಬ ಶ್ರೀಮದ್ಗಾಂಭೀರ್ಯವನ್ನು ತೋರದೆ, ಕೆಳಹಂತದ ಶಿಕ್ಷಣಸಂಸ್ಥೆಗಳ ಜತೆ ಅರ್ಥಪೂರ್ಣ ಸಂಬಂಧ ಇಟ್ಟುಕೊಳ್ಳುವುದು ಎಲ್ಲ ರೀತಿಯಿಂದಲೂ ಒಳ್ಳೆಯದು. ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರೂ ತಮ್ಮ ಪರಿಸರದ ಶಾಲೆ ಕಾಲೇಜುಗಳಿಗೆ ಹೋಗಿ ತಮ್ಮ ವಿಷಯಗಳ ಬಗ್ಗೆ ಕೆಲವು ತರಗತಿಗಳಲ್ಲಿ ಮಾದರಿ ಪಾಠ ನೀಡುವುದು ಚೆನ್ನಾಗಿರುತ್ತದೆ. ಆದರೆ ಪಾಳೇಗಾರಿ ವ್ಯವಸ್ಥೆಗೆ ಇನ್ನೂ ಅಂಟಿಕೊಂಡಿರುವ ನಮ್ಮ ಸಮಾಜದಲ್ಲಿ ವಿಶ್ವವಿದ್ಯಾಲಯಗಳೆಂದರೆ ಶಾಲಾಧ್ಯಾಪಕರು ಭಯಪಡುತ್ತಾರೆ; ಅದೇ ರೀತಿ ವಿಶ್ವವಿದ್ಯಾಲಯಗಳ ಅಧ್ಯಾಪಕರಿಗೆ ಶಾಲೆಗಳೆಂದರೆ ತೃಣಸಮಾನ. ಶಾಲೆ ಕಾಲೇಜು ವಿಶ್ವವಿದ್ಯಾಲಯಗಳ ಈ ಮಾನಸಿಕ ಅಂತರವನ್ನು ತೊಡೆದುಹಾಕುವುದು ಅತ್ಯಗತ್ಯ.

ಶಾಲೆ ಕಾಲೇಜುಗಳಿಗೆ ಆಗಾಗ್ಗೆ ಇತರ ರಂಗಗಳಿಂದಲೂ ಪರಿಣತರನ್ನು ಉದ್ಯೋಗಿಗಳನ್ನು ಕರೆಸಿ ವಿದ್ಯಾರ್ಥಿಗಳ ಜತೆ ಮಾತುಕತೆಗೆ ಆಸ್ಪದವೀಯುವುದು ಅಗತ್ಯ. ಉದಾಹರಣೆಗೆ, ಒಬ್ಬ ಡಾಕ್ಟರನ್ನು ಕರೆಸುವುದು, ಅವರಿಂದ ಯಾವುದಾದರೂ ರೋಗದ ಕುರಿತಾಗಿ ಒಂದು ಭಾಷಣ ಮಾಡಿಸುವುದು, ರೋಗಪರೀಕ್ಷೆ ಹೇಗೆ ಮಾಡಲಾಗುತ್ತದೆ, ಯಾವ ಕಾಯಿಲೆಗೆ ಏನು ಲಕ್ಷಣಗಳು ಎಂಬುದನ್ನು ಅವರಿಂದ ತಿಳಿದುಕೊಳ್ಳುವುದು ಇತ್ಯಾದಿ. ಒಬ್ಬ ವಕೀಲರನ್ನು ಕರೆಸುವುದು, ಅವರಿಂದ ಕೋರ್ಟು ಕೇಸುಗಳ ಕುರಿತು ಭಾಷಣ ಮಾಡಿಸುವುದು. ಪೊಲೀಸ್ ಇನ್‌ಸ್ಪೆಕ್ಟರನ್ನ ಕರೆಸಿ ಅವರಿಂದಲೂ ಈ ಪೊಲೀಸ್ ಇಲಾಖೆಯೆಂದರೆ ಏನು ಎಂಬುದರ ಬಗ್ಗೆ ಮಾಹಿತಿ ಕೊಡಿಸುವುದು. ಪತ್ರಿಕಾಸಂಪಾದಕರನ್ನು ಆಹ್ವಾನಿಸಿ ಅವರಿಂದ ಪತ್ರಿಕೆಗಳು ಹೇಗೆ ತಯಾರಾಗುತ್ತವೆ. ಎನ್ನುವುದರ ಕುರಿತು ಮಕ್ಕಳಿಗೆ ಬೋಧಿಸುವುದು. ಈ ‘ಅತಿಥಿ ಅಧ್ಯಾಪಕ’ರ ಜತೆ ವಿದ್ಯಾರ್ಥಿಗಳಿಗೆ ಮಾತುಕತೆಗೆ, ಪ್ರಶ್ನೋತ್ತರಕ್ಕೆ ಅವಕಾಶ ಯಾವಾಗಲೂ ಇರಬೇಕು. ಇವೆಲ್ಲವೂ ಎಲ್ಲ ಶಾಲೆಗಳಲ್ಲೂ ಮಾಡಬಹುದಾದ, ಮಾಡಲೇಬೇಕಾದ ಕಾರ್ಯಕ್ರಮಗಳು.

ನನ್ನದೇ ಅನುಭವ ಮತ್ತೆ ಹೇಳುವುದಾದರೆ, ಭಾಷಾವಿಜ್ಞಾನ ಅಥವಾ ಲಿಂಗ್ವಿಸ್ಟಿಕ್ಸ್ ಎಂಬ ಒಂದು ಜ್ಞಾನಶಾಖೆಯಿದೆಯೆಂದು ನನಗೆ ಇಂಗ್ಲಿಷ್ ಎಂ.ಎ. ಮಾಡುತ್ತಿರುವಾಗಲೂ ಗೊತ್ತಿರಲಿಲ್ಲ. ಎಂ.ಎ. ಅಂಗವಾಗಿ ನಾನು ಹಳೆ ಮತ್ತು ಮಧ್ಯಕಾಲೀನ ಇಂಗ್ಲಿಷನ್ನು ಅಷ್ಟಿಷ್ಟು ಅಭ್ಯಾಸಮಾಡಬೇಕಾಗಿತ್ತು. ಆದರೆ ನನ್ನ ಅಧ್ಯಾಪಕರು ಯಾರೂ ಈ ಲಿಂಗ್ವಿಸ್ಟಿಕ್ಸ್ ಎಂಬ ಶಿಸ್ತಿನ ಕುರಿತು ಮಾತಾಡಿದ್ದಿಲ್ಲ. ಆಗ ಈ ಶಿಸ್ತು ಇನ್ನೂ ಪ್ರಚಾರದಲ್ಲಿಲ್ಲದುದು (ಅದು ಈಗಲೂ ಪ್ರಚಾರದಲ್ಲಿಲ್ಲ!) ಇದಕ್ಕೆ ಕಾರಣವಾಗಿರಬಹುದು. ಇದಕ್ಕಿಂತಲೂ ಮುಖ್ಯವಾಗಿ ನನಗನಿಸುವುದು ವಿದ್ಯಾರ್ಥಿಗಳ ಜತೆ ಇಂಥ ಮಾಹಿತಿ ಹಂಚಿಕೊಳ್ಳಬೇಕು, ಅವರಲ್ಲಿರುವ ಆಸಕ್ತಿಗಳನ್ನು ಗಮನಿಸಿ ಅವರಿಗೆ ಮಾರ್ಗದರ್ಶನ ಮಾಡಬೇಕು ಎಂಬ ಉಮೇದೇ ಅಧ್ಯಾಪಕರಲ್ಲಿ ಇಲ್ಲದುದು. ಒಮ್ಮೆ ನಾನು ತಿರುವನಂತಪುರದಿಂದ ನನ್ನ ಊರಾದ ಕಾಸರಗೋಡಿಗೆ ಉಗಿಬಂಡಿಯಲ್ಲಿ ಬರುತ್ತಿರುವಾಗ ರಾಜಪುರೋಹಿತ ಎಂಬವರು ಒಂದು ನಿಲ್ದಾಣದಲ್ಲಿ ಸಿಕ್ಕಿದರು. ಅವರನ್ನು ಪರಿಚಯಮಾಡಿಕೊಂಡಾಗ ಅವರ ವಿಷಯ ಭಾಷಾವಿಜ್ಞಾನ ಎಂದು ತಿಳಿಯಿತು. “ಭಾಷಾವಿಜ್ಞಾನ? ಹಾಗಂದರೇನು?” ಎಂದು ನಾನವರನ್ನು ಹೀಗೆ ನನಗೆ ಮೊತ್ತಮೊದಲು ಈಯೊಂದು ಶಿಸ್ತಿನ ಬಗ್ಗೆ ತಿಳಿದುದು ರಾಜಪುರೋಹಿತರಿಂದ. ಹಲವು ವರ್ಷಗಳ ನಂತರ ನಾನು ಉನ್ನತ ವಿದ್ಯಾಭ್ಯಾಸವನ್ನು ಇದೇ ವಿಭಾಗದಲ್ಲಿ ಮಾಡಿ ಇದನ್ನೇ ಬಹಳ ವರ್ಷಗಳ ಕಾಲ ಕಲಿಸುವವನಿದ್ದೇನೆಂದು ಆಗ ಊಹಿಸುವುದೂ ಸಾಧ್ಯವಿರಲಿಲ್ಲ. ಯಾಕೆಂದರೆ, ರಾಜಪುರೋಹಿತರು ಅದರ ಬಗ್ಗೆ ಹೇಳಿದರೂ ನನಗದರಲ್ಲಿ ಆಸಕ್ತಿ ಹುಟ್ಟುವುದಕ್ಕೆ ಅದು ಸಾಕಾಗಿರಲಿಲ್ಲ. ನನಗೆ ಭಾಷಾವಿಜ್ಞಾನದಲ್ಲಿ ಆಸಕ್ತಿ ಹುಟ್ಟಿದ್ದು ಮುಂದೆ ನಾನು ಹೈದರಾಬಾದಿಗೆ ಬಂದ ಮೇಲೆ-ಅದೂ ಪ್ರೊಫೆಸರ್ ಎಂ. ವಿ. ನಾಡಕರ್ಣಿಯವರ ಉತ್ಸಾಹಪೂರ್ಣ ಪಾಠಗಳಿಂದಾಗಿ. ಅಲ್ಲೇ ನನಗೆ ನೋಮ್ ಚಾಮ್‌ಸ್ಕಿಯ ರೂಪಾಂತರ ವ್ಯಾಕರಣದ ಪರಿಚಯವೂ ಆದ್ದು. ಮುಂದೆ ರಾಜೀವ ತಾರಾನಾಥರು ನಮ್ಮಲ್ಲಿಗೆ ಪ್ರಾಧ್ಯಾಪಕರಾಗಿ ಬಂದ ಮೇಲೆ ನನ್ನ ಈ ಭಾಷಾವಿಜ್ಞಾನದ ಆಸಕ್ತಿಯನ್ನು ನೋಡಿ ಏನ್ರೀ ಎಲ್ಲಾ ಬಿಟ್ಟು ‘ಅಲ್ಪಡು’ (ಕರ್ಮಣಿ ಪ್ರಯೋಗ) ಓದುತ್ತಿದ್ದೀರಲ್ಲರೀ ಎಂದು ತಮಾಷೆ ಮಾಡುತ್ತಿದ್ದರು. ಆದರೆ ಭಾಷಾವಿಜ್ಞಾನವೆಂದರೆ ಅಲ್ಪಡು ಅಲ್ಲ-ಅದರ ಮೂಲಕವೂ ನಾವು ಗಹನವಾದ ವೈಚಾರಿಕ ಲೋಕವನ್ನು ಪ್ರವೇಶಿಸಬಹುದು. ನನ್ನ ಮಟ್ಟಿಗಾದರೆ, ನಾನೀ ಹೊಸ ಆಸಕ್ತಿ ಬೆಳೆಸಿಕೊಂಡರೂ ನನ್ನ ಮೊದಲಿನ ಆಸಕ್ತಿಯಾದ ಸಾಹಿತ್ಯವನ್ನು ಎಂದೂ ಬಿಟ್ಟದ್ದಿಲ್ಲ. ಈ ಎರಡೂ ವಿಷಯಗಳು ನನಗೆ ಲೋಕವನ್ನು ನೋಡುವುದಕ್ಕೆ, ತುಸುವಾದರೂ ಅರ್ಥಮಾಡಿಕೊಳ್ಳುವುದಕ್ಕೆ ಸಹಾಯಮಾಡಿವೆ. ಇದು ಯಾಕೆ ಹೇಳಿದೆನೆಂದರೆ, ನಾವು ಒಂದೇ ವಿಷಯಕ್ಕೆ ಕಟ್ಪುಬೀಳಬೇಕೆಂದೇನೂ ಇಲ್ಲ. ಮುಂದೆ ಸಾಗಿದಂತೆ ಹೊಸ ಹೊಸ ವಿಷಯಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳುವುದು ಸಾಧ್ಯ. ಮಾತ್ರವಲ್ಲ, ಎಲ್ಲಾ ವಿಷಯಗಳೂ ಒಂದಲ್ಲ ಒಂದು ಕಡೆ ಗಡಿದಾಟಿರುತ್ತವೆ ಎನ್ನುವುದೂ ಗೊತ್ತಾಗುತ್ತದೆ. ಈ ಗಡಿಗಳಾದರೆ ನಾವು ನಮ್ಮ ಅಧ್ಯಯನ ಸೌಲಭ್ಯಕ್ಕೋಸ್ಕರ ಮಾಡಿಕೊಂಡದ್ದಲ್ಲದೆ ಇದರಲ್ಲಿ ‘ಸ್ವಾಭಾವಿಕ’ವಾದ್ದು ಏನೂ ಇಲ್ಲ.

ಎಲ್ಲಾ ಜ್ಞಾನಶಾಖೆಗಳೂ ಸರಿಸಮಾನ ಹಾಗೂ ಲೋಕಕ್ಕೆ ಪ್ರವೇಶ ಗಿಟ್ಟಿಸುವ ಬೇರೆ ಬೇರೆ ಕಿಂಡಿಗಳೆಂದು ತಿಳಿಯಬೇಕು. ಹಾಗೂ ಎಲ್ಲಾ ಜ್ಞಾನಶಾಖೆಗಳಲ್ಲೂ ನಾವು ಸೃಜನಾತ್ಮಕವಾಗಿ ಕೈಗೊಳ್ಳಬಹುದಾದ್ದು ಸಾಕಷ್ಟು ಇದೆ. ಒಮ್ಮೆ ನನಗೆ ಚಾರ್ಟರ್ಡ್ ಎಕೌಂಟೆಂಟ್ ಒಬ್ಬರು ಹೇಳಿದರು: ಚಾರ್ಟರ್ಡ್ ಎಕೌಂಟೆನ್ಸಿಯಲ್ಲಿ ಕೂಡಾ ಸೃಜನಶೀಲತೆಯ ತೃಪ್ತಿಯಿದೆ, ಎಂಬುದಾಗಿ. ನನಗೀ ಹಣಕಾಸಿನ ಕೂಡಿಸುವಿಕೆ ಕಳೆಯುವಿಕೆಯ ಬಗ್ಗೆ ಏನೂ ಗೊತ್ತಿಲ್ಲ. ಆದರೂ ಈ ಸಿ‌ಎ ಹೇಳಿದ ಮಾತಿನಲ್ಲಿ ನನಗೆ ನಂಬಿಕೆಯಿದೆ. ಅದೇ ರೀತಿ ಕೋರ್ಟು ಕೇಸುಗಳನ್ನು ನಿಭಾಯಿಸುವ ವಕಾಲತು ವೃತ್ತಿಯಲ್ಲಿಯೂ ಸೃಜನಶೀಲತೆಯಿದೆಯೆಂದು ನಂಬಿದ್ದೇನೆ. ಅಧ್ಯಾಪಕ ವೃತ್ತಿಯಲ್ಲಂತೂ ಪ್ರತಿಯೊಂದು ಕ್ಲಾಸು ಕೂಡಾ ಒಂದು ಹೊಸ ಸಂಗತಿ. ಅಧ್ಯಾಪಕರು ಅಧ್ಯಯನಶೀಲರೂ ಉತ್ಸಾಹಿಗಳೂ ಆಗಿರುವವರೆಗೆ ಪಾಠ ಬೇಸರ ತರಿಸುವ ಪ್ರಸಂಗವೇ ಇಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಾತು ಕವಿತೆಯಾಗುವುದು
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೩೮

ಸಣ್ಣ ಕತೆ

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

cheap jordans|wholesale air max|wholesale jordans|wholesale jewelry|wholesale jerseys