ನಿತ್ಯಜೀವನದ ಸಾಮಾನ್ಯಸಾಗಾಟದ ಬೇಸರಿಕೆಯನ್ನು ಕಳೆಯುವದಕ್ಕೆ ಆಗಾಗ ಹಬ್ಬ-ಹುಣ್ಣಿವೆಗಳೂ, ಉತ್ಸವಾಮೋದಗಳೂ ಬರುತ್ತಿರುತ್ತವೆ. ಆದರೆ ನಿಜವಾಗಿಯೂ ಅವುಗಳಿಂದ ಬೇಸರ ಕಳೆಯವದೆಂದು ನಮಗೆ ತೋರುವದಿಲ್ಲ. ಹಬ್ಬದ ಉಬ್ಬು ಎಲ್ಲರಿಗೂ ಬರಲಾರದು. ಸಾಮಾನ್ಯರಿಗೆ ಹಬ್ಬ ಸಹ ಒಮ್ಮೊಮ್ಮೆ ನಿತ್ಯಜೀವನಕ್ಕಿಂತ ಜಡವಾಗಿ ಪರಿಣಮಿಸುತ್ತಿರುವದುಂಟು. ಅಂಥ ಜೀವನಕ್ಕೆ ಸಾಮಾನ್ಯ ದಿನಗಳೇ ವಿಶೇಷ ದಿನಕ್ಕಿಂತ ಕಡಿಮೆ ಬೇಸರದ ದಿನವಾಗಿ ಪರಿಣಮಿಸುವವು. ನಮಗೆ ನಿತ್ಯಜೀವನವು ಹಬ್ಬವಾಗಿ ಪರಿಣಮಿಸಿ, ನಿತ್ಯನಿತ್ಯವೂ ಬೇಸರ ಕಳೆದು ಹೊಸ ಹುರುವು ಪ್ರಾಪ್ತವಾಗುವದಕ್ಕೆ ಉಪಾಯವೇನು? ಅದನ್ನು ಕೈಗೂಡಿಸಿಕೊಳ್ಳಲು ಸಾಧ್ಯವಿದೆಯೇ?
ಈ ವಿಷಯವನ್ನು ವಿಸ್ತರಿಸುವದು ಇದೀಗ ಅತ್ಯಾವಶ್ಯಕವಾಗಿದೆ” ಎಂದು ಜೀವ ಜಂಗುಳಿಯಿಂದ  ಒಂದು ಪ್ರಾರ್ಥನೆಯು ಹೊರಬಿದ್ದು ಕೇಳಿಸಿಕೊಂಡಿತು.

ಸಂಗನುಶರಣನು ಅವರ ಸಂದೇಹಗಳನ್ನು ಅದಾವ ಬಗೆಯಿಂದ ನಿವಾರಿಸಿದನೆಂದರೆ- ಹಬ್ಬ ಉಬ್ಬಿಗಾಗಿ, ಹೋಳಿಗೆಯ ಊಟಕ್ಕಾಗಿ; ಹರಕುಬಟ್ಟಿಯನ್ನು ತೆಗೆದಿರಿಸಿ ಬೆಲೆಯುಳ್ಳ ಬಟ್ಟಿಯನ್ನು ಧರಿಸುವದಕ್ಕಾಗಿ.

ಹಿರಿಯರ ಹೆಸರಿನಲ್ಲಿಯೋ ದೇವರ  ಹೆಸರಿನಲ್ಲಿಯೋ   ಉಲ್ಲಾಸದಿಂದ ಬೇರೊಂದು ಬಗೆಯಲ್ಲಿ ದಿನಕಳೆಯುವುದು. ನಿತ್ಯದ ರೂಢ ಜೀವನವನ್ನು ಮರೆಯುವದು. ಬೇಸರವನ್ನು ದೂಡಿ ಮುಂದುವರಿಕೆಗೆ ನಡುಕಟ್ಟುವದು. ಇದೇ ಹಬ್ಬದ ರಹಸ್ಯ.

ಬಾಳು ಹಗುರಗೊಳಿಸುವದೇ ಹಬ್ಬದ ಕೆಲಸವಾಗಿರುವಾಗ, ಬಾಳನ್ನು ಬಿಗಿಗೊಳಿಸಿ, ಅದು ಎದ್ದೇಳದಂತೆ ಕಾಲುಕಟ್ಟ ಹಾಕುವಂತಿದ್ದರೆ, ಅದು ಹಬ್ಬವೇ ಆಗಲಾರದು. ಹಬ್ಬವೇ ಆಗದಿದ್ಧರೆ ಅದರಿಂದ ಉಬ್ಬೂ ಬರಲಾರದು. ಉಬ್ಬು ಹಬ್ಬದ ಪ್ರತಿಬಿಂಬ. ಹಬ್ಬ ಉಬ್ಬಿನ ಪ್ರತಿಭೆ,

ಉಬ್ಬು ಹಬ್ಬಕ್ಕೊಮ್ಮೆ ಬರಬೇಕೆಂಬ ಕಟ್ಟಳೆಯೇನೂ ಇಲ್ಲ, ಅದು ನಿತ್ಯವೂ ಬರಬೇಕಾದ ವಸ್ತು. ಅದು ನಿತ್ಯವೂ ಬೇಡಲಾಗದ ವಸ್ತು. ಉಬ್ಬು ಹಬ್ಬದ ಹೋಳಿಗೆಯಲ್ಲಿಲ್ಲ. ಉಬ್ಬು ತೊಡುವ ಜರತಾರಿಯಲಿಲ್ಲ. ಉಬ್ಬಿನ ಠಾವು ಮನದ ಮಂದಿರದಲ್ಲಿದೆ; ಪ್ರಾಣದ ತೃಪ್ತಿಯಲ್ಲಿದೆ; ಭಕ್ತಿಯ ಬಾಕುಳಿಯಲ್ಲಿದೆ.

ಮಾನವನು ವರುಷಕ್ಕೊಮ್ಮೆ ಬರುವ ಉಬ್ಬಿನ ತಾಯಿಯಾದ ಶಿವರಾತ್ರಿ ಹಬ್ಬವನ್ನು ಮಾಡಬೇಕಾದರೆ ಮುಖಕ್ಕೆ ಸೆರಗುಹಾಕುತ್ತಾನೆ. ಆ ಸೆರಗಿನ ಮುಸುಕಿನಲ್ಲಿ ಅಳುವನೋ ನಿದ್ರಿಸುವನೋ ತಿಳಿಯದು. ಆದರೆ ಶರಣನು ಹಾರಯಿಸುವದೇ ಬೇರೆ. ನಿತ್ಯ ನಿತ್ಯವೂ ಹಬ್ಬದ ಉಬ್ಬು ಬರಲೆಂದು ಬಗೆ ತರುವನು. ಅವನಿಗೆ ಬೇಕಾದುದು ನಿಚ್ಚ ಶಿವರಾತ್ರಿ!

ಉಪವಾಸದ ಶಾಂತಿ, ನಿರಾಹಾರದ ಹಗುರುತನ. ಪೂಜಾಸಲಕರಣೆಗಳ ಸನ್ನಾಹದ ಗಡಬಿಡಿ, ಜಾಗರಣೆಯ ಎಚ್ಚರಿಕೆ, ಕತ್ತಲೆಯನ್ನು ಕತ್ತರಿಸುವ ದೀಪೋತ್ಸವದ ಬೆಳಕು, ಮರುದಿನ ಹೊತ್ತು ಹೊರಟರೆ ಉಪವಾಸ ಮುರಿಯುವ ನಂಬಿಗೆ, ಹಸಿವೆ ಹಿಂಗಿಸುವದಕ್ಕೆ ಸವಿಯೂಟ. ಇದೇ ನಿಚ್ಚ ಶಿವ ರಾತ್ರಿಯನ್ನು ಬಯಸುವ ಶರಣನ ದಿನಚರಿ.

ಶರಣನು ನಿದ್ರೆಗೈದರೆ ಜಪ, ಎಚ್ಚರಾಗಿದ್ದರೆ ಶಿವರಾತ್ರಿಯ ಜಾಗರಣೆ, ಅವನಾಡುವ ಒಳುನುಡಿಯ ಸ್ವರ್ಗ, ಅವನುಣ್ಣುವ ಪ್ರಸಾದದೂಟ, ಅವನು ಮಾಡುವ ಕಾಯಕದಾಟ. ವ್ಯಯ ದಾಸೋಹಕ್ಕೆ; ಶಿವನ ಸೇವೆಗೆ. ದಿನದ ಘಟನೆಗಳೆಲ್ಲವೂ ಸಾರ್ಥಕ, ಸಾರ್ಥಕ. ಅವನ ಇಡಿಯ ಬಾಳು ಯೋಗಸಾಧನೆಗೆ ಸುಸಂಧಿ. ಜೀವನವೇ ಅವನಿಗೆ ಯೋಗಕ್ಷೇತ್ರವಾಗಿ ಪರಿಣಮಿಸುತ್ತದೆ, ಮಾತು ಮಂತ್ರ; ಕೃತಿ ತಪಸ್ಸು; ಊಟ ಯಜ್ಞ; ದಾಸೋಹ ಮಹಾದಾನ; ನಿದ್ರೆ ಧ್ಯಾನ ಮುದ್ರೆ; ಮನೆ ಮನೆವಾರ್ತೆ ಶಿವನ ಬಳಗ; ನೆರೆಹೊರೆಯರ ಸಂಬಂಧ ಸಹಜೀವನ; ಅವನ ಮನೆ ಮಹಾಮನೆ. ಅವನ ರೀತಿ-ನೀತಿಗಳೆಲ್ಲ ಬೃಹತ್ ‌ಭಾನುವಿನ ಬೃಹತ್ ನಿಯಮಗಳಿಗೆ ಒಳಪಡುವವು. ಅವನು ತಿಮಿರ ಗರ್ಭದ ಅರ್ಭಕನಾಗಿದ್ದರೂ ನೇಸರನಂತೆ ಬೆಳಕಿನ ಮುದ್ದೆ. ಪಡಿನೆಳಲಿಲ್ಲದ ಮೈಕಟ್ಟು ಅವನಿಗೆ. ಅವನೇ ನಿತ್ಯನಿತ್ಯವೂ ಶಿವರಾತ್ರಿಯನ್ನು ಅನುಭೋಗಿ ಸುವುದಕ್ಕೆ ಬೇಡಿ ಬಂದನನು. ಹಬ್ಬ ಅವನ ಜನ್ಮದ ಗಂಟು. ಉಬ್ಬು ಅವನ ಜೀವನದ ನಂಟು. ಇದೀಗ ಶಿವರಾತ್ರಿ.

ನಿತ್ಯಶಿವರಾತ್ರಿಗೆ   ಅಧಿಕಾರಿಯಾಗುವುದಕ್ಕೆ ದಾರಿಯೇನಾದರೂ ಇದೆಯೆ? ಕ್ಷೇತ್ರದರ್ಶನದಿಂದ  ಸಫಲತೆಯುಂಟಾದೀತೇ? ತೀರ್ಥಸ್ನಾನದಿಂದ ಆ ಕಳೆಯು ಮೈಗೂಡೀತೇ ? ಪ್ರಾರ್ಥನೆಯ ಕೂಗಿನಿಂದ ಅಂಥ ನಿಲವು ಕೈವಶವಾದೀತೇ? ಇಲ್ಲ. ಇವಾವುದರಿ೦ದಲೂ ಸಾಧ್ಯವಿಲ್ಲ.

ಸುತ್ತಿ ಸುತ್ತಿ ಬಂದಡಿಲ್ಲ, ಲಕ್ಷಗಂಗೆಯ ಮಿಂದಡಿಲ್ಲ.
ತುಟ್ಟತುದಿಯ ಮೇರುಗಿರಿಯ ಮೆಟ್ಟಿ ಕೂಗಿದರಿಲ್ಲ,
ನಿತ್ಯ ನೇಮದಿಂದ ತನುವ ಮುಟ್ಟಿಕೊಂಡಡಿಲ್ಲ.
ನಿಚ್ಚಕ್ಕೆ ನಿಚ್ಚನೆನೆವ ಮನವ, ಅಂದಂದಿಗೆ ಅತ್ತಲಿತ್ತ
ಹರಿವ ಮನವ ಚಿತ್ತದಲ್ಲಿ ನಿಲಿಸ ಬಲ್ಲಡೆ
ಬಚ್ಚ ಬರಿಯ ಬೆಳಗು ಗುಹೇಶ್ವರಲಿಂಗವು.

ಮಿಂಚಿನ ಬೆಳಕು ಸುತ್ತಲೂ ಪಸರಿಸುಪದಕ್ಕೆ ಬೇಕಾಗುವ ಒತ್ತುಗುಂಡಿ ಹತ್ತಿರವೇ ಇರುತ್ತದೆ; ಕೈಯಲ್ಲಿಯೇ ಇರುತ್ತದೆ. ಅದನ್ನು ಯುಕ್ತಿಯರಿತು ಪ್ರಯೋಗಿಸುವುದೇ ಜಾಣ್ಮೆ. ಬರಿಯ ಬೆಳಕು ಕಂಗೊಳಿಸದೆ ನಿಚ್ಚಶಿವರಾತ್ರಿಯೆನಿಸುವದೆಂತು? ಮಹಾಪೂಜೆ ಸಾಗಿಸುವದೆ೦ತು? ಎಚ್ಚರಿಕೆಯೇ ಶಿವರಾತ್ರಿಯ ಲಕ್ಷಣ. ನಿದ್ರೆಯ ಈಚೆಗಿನ ಎಚ್ಚರಿಕೆಯಲ್ಲ, ನಿದ್ರೆಗೂ ಆಚೆಗಿರುವ ಎಚ್ಚರಿಕೆ ಬೇಕು. ಆ ಎಚ್ಚರಿಕೆ ನಮ್ಮಲ್ಲಿ ಅಳವಟ್ಟಾಗ ಶಿವರಾತ್ರಿಯ ದೀಪೋತ್ಸವದ ಬೆಳಕಿನ ಬಯಲು ನಮಗೆ ಕಾಣಿಸಿಕೊಳ್ಳುವದು; ನಿತ್ಯವೂ ಕಂಗೊಳಿಸುವದು. ಇಡಿಯ ದಿನದಂತೆ ಇಡಿಯ ಜೀವನವೂ ಪೂಜಾಸಂಭಾರದಲ್ಲಿ ಅರಂಭದಾಗಿ ಮುಗಿಯುವುದು.

ಫಲಕಾರಿಯಾದ ಇನ್ನುಳಿದ ಉಪಾಯಗಳೂ ಉಂಟು. ಪುಣ್ಯಕಾರ್ಯ ಗಳನ್ನು ಮಾಡುವದಾಗಲಿ, ಅನ್ನದಾನ-ವಿದ್ಯಾದಾನಗಳಾಗಲಿ ಈ ದಾರಿಗೆ ತೀವ್ರವಲ್ಲದಿದ್ದರೆ ಮಂದವಾಹನವಾದರೂ ಆಗಬಲ್ಲವು. ಆದರೆ ಮನವಿಲ್ಲದೆ ಎಷ್ಟು ಮಾಡಿದರೂ ವ್ಯರ್ಥವಾಗುವದು; ನಿಜವಿಲ್ಲದೆ ಎಷ್ಟು ನೀಡಿದರೂ  ಅ ಸಾರ್ಥಕ. ಆದರೆ ನೈಜವಾಗಿಯೂ ಯಥಾರ್ಥವಾಗಿಯೂ ಮಾಡಿದ್ದಾಗಲಿ, ನೀಡಿದ್ದಾ ಗಲಿ ವ್ಯರ್ಥವಾಗದೆ, ಸಾರ್ಥಕವೇ ಆಗುವದರಲ್ಲಿ ಸಂಶಯನಿಲ್ಲ. ಮಾಡಿಯೂ ಮಾಡದಂತೆ ವ್ಯರ್ಥವಾದವರ ಪ್ರಕೃತಿ ಒಂದು ಬಗೆಯದಾದರೆ, ಯಧಾರ್ಥವಾಗಿ ಮಾಡಿ ಸಾರ್ಥಕಗೊಂಡವರ ಪ್ರಕೃತಿ ಇನ್ನೊಂದು ಬಗೆಯದು. ಒಬ್ಬರು ಅದಿಪ್ರಕೃತಿಯ ಮಕ್ಕಳು. ಇನ್ನೊಬ್ಬರು ಜೀವಪ್ರಕೃತಿಯ ಮಕ್ಕಳು. ಜೀವ ಪ್ರಕೃತಿಯ ಮಕ್ಕಳೇ ಇಂದಿನ ಕತ್ತಲೆಯ ರಾತ್ರಿಗಳನ್ನು ಶಿವರಾತ್ರಿಗಳನ್ನಾಗಿ
ಮಾರ್ಪಡಿಸಬಲ್ಲರು. ಅವರಿಗೆ ನಿತ್ಯವೂ ಶಿವರಾತ್ರಿಯೇ ಸರಿ.

ಅಟ್ಟಿ ಶಿವೈಕ್ಯಂಗೆ ಹೊತ್ತಾರೆ ಅಮಾವಾಸ್ಯೆ
ಮಟ್ಟಮಧ್ಯಾಹ್ನ ಸಂಕ್ರಾಂತಿ, ಮತ್ತೆ
ಅಸ್ತಮಾನ ಪೌರ್ಣಿಮೆಯಿಂಬುವಿಲ್ಲ.
ಭಕ್ತನ ಮನೆಯಂಗಣನೇ ವಾರಣಾಸಿ ಕಾಣಾ
ರಾಮನಾಧಾ

ನಿಚ್ಚಶಿವರಾತ್ರಿಯನ್ನಾಚರಿಸುವ ಶರಣನಿಗೆ ಗುಡಿ ಯಾವುದು? ಅವನ ಪೂಜೆಯ ವಿಧಾನವೇನು? ಧೂಪ-ದೀಪಾದಿಗಳ ಸಲಕರಣೆ ಎಲ್ಲಿವೆ ?- ಕೇಳಿರಿ.

ಗಗನನೇ ಗುಂಡಿಗೆ, ಆಕಾಶವೇ ಅಗ್ಗವಣಿ.
ಚಂದ್ರಸೂರ್ಯರಿಬ್ಬರು ಪುಷ್ಟ
ಬ್ರಹ್ಮಧೂಪ, ವಿಷ್ಣುದೀಪ, ರುದ್ರನೋಗರ
ಸುಯಿಧಾನ ನೋಡಾ!
ಗುಹೇಶ್ವರ ಲಿಂಗಕ್ಕೆ ಪೂಜೆ ನೋಡಾ.

ಆ ಪೂಜೆ ಮಹಾಪೂಜೆಯೇ ಅಹುದು. ಇಡಿಯ ಆಯುಷ್ಯನೇ ಒಂದು
ರಾತ್ರಿ. ಆಯುಷ್ಯದೊಳಗಣ ಚಲನವಲನಗಳೆಲ್ಲವೂ ಪೂಜೆಯ ಕಾಲಕ್ಕೆ
ನಡೆದ ನ್ಯತ್ಯ-ಕುಣಿತ. ಪೂಜೆಯ ಮಾಟ. ಆಡಿದ ಮಾತುಗಳೆಲ್ಲವೂ ಮಂತ್ರ-
ಸ್ತೋತ್ರ. ಅದೆಷ್ಟು ಪೂಜಿಸಿದರೂ ಕೈಗೆ ಸೋಲಿಲ್ಲ; ಮನಕ್ಕೆ ದಣಿವಿಲ್ಲ.
ಇಡಿಯಾಯುಷ್ಯದ ಮಹಾರಾತ್ರಿಯ ಮುಗಿತಾಯ ಯಾವಾಗ? ದೇವ
ದೇವನ ನೆನೆಹಾದಾಗಳೇ ಉದಯನೆನಿಸುತ್ತಿರುನಾಗ ಅಸ್ತಮಾನದ ಮರಹು
ಆತನನ್ನು ಅದೆಲ್ಲಿಂದ ಆವರಿಸೀತು? ಅದೇನು ಪೂಜೆ! ಅದೇನು ಪ್ರಾರ್ಥನೆ !
ಅದೆಲ್ಲಿಯ ಉತ್ಸಾಹ! ಅದೆಲ್ಲಿಯ ಆವೇಶ ! ಆ ಭಕ್ತಿಯ ಬೆಳಸು ಅದೆಲ್ಲಿಂದ
ಬೆಳೆದು ಬಂತು ? ದೇವನೂ ಕರಗಿದ್ದಾನೆ, ಭಕ್ತನೂ ಕರಗಿದ್ದಾನೆ. ಕೂಡಿ
ದರೆ ಬೆಸಕೆ; ಬಿಡಿಸಲಿಕ್ಕಾಗದ ಬೆರಕೆ.

ಅಡಿ ಕಾಲು ದಣಿಯವು, ನೋಡಿ ಕಣ್ಣು ದಣಿಯವು.
ಮಾಡಿ ಕೈ ದಣಿಯವು, ಹಾಡಿ ನಾಲಗೆ ದಣಿಯದು.
ಇನ್ನೇವೆ ಇನ್ನೇವೆ ? ನಾ ನಿಮ್ಮ ಕೈಯಾರೆ ಪೂಜಿಸಿ
ಮನದಣಿಯಲೊಲ್ಲದು.
ಇನ್ನೇವೆ ಇನ್ನೇವೆ? ಕೂಡಲಸಂಗಮದೇವಯ್ಯ
ಕೇಳಯ್ಯ,
ನಿಮ್ಮುದರವ ಬಗೆದಾನು ಹೋಗುವ ಭರವೆನಗೆ.

ದಣಿಯದ ಉತ್ಸಾಹ, ಸೋಲದ ಉಲ್ಹಾಸ ಭಕ್ತನ ಹೃದಯಾಂತರಾಳ ದಿಂದ ಚಿಮ್ಮುವ ಸೆಲೆಯಾಗಿನೆ. ಅವು ನಿರಂತರದ   ಹೊನಲಾಗಿವೆ; ಹರಿಗಡಿಯದ ಹೊಳೆಯಾಗಿದೆ. ಅವು ವೇದ-ಗುಹೆಯಿಂದ ಉಗಮಿಸಿದ ಹಿಮನದಿ
ಯಲ್ಲ. ಶಾಸ್ತ್ರದ ಸರೋವರದಿಂದ ಹರಿಬಿದ್ದ ಪ್ರವಾಹವಲ್ಲ; ಪುರಾಣದ ತಳಗೆರೆಯಿಂದ ಹರಿಬಿಟ್ಟ ತಿಳಿನೀರಲ್ಲ. ಅವು ಭಕ್ತಿಯ ಗ೦ಗೋತ್ರಿಯಿಂದ ಇಳೆಗಿಳಿದ ಪುಣ್ಯ ಸಲಿಲೆ; ಫನದ ನಿಲಯದ ಭಾಗೀರಧಿ.

ವೇದವೆಂಬುದು ಓದಿನ ಮಾತು.
ಶಾಸ್ತ್ರವೆಂಬುದು ಸಂತೆಯ ಸುದ್ದಿ.
ಪುರಾಣವೆಂಬುದು ಪುಂಡರಗೋಷ್ಟಿ.
ತರ್ಕವೆಂಬುದು ತಗರ ಹಾರಟೆ.
ಭಕ್ತಿಯಿಂಬುದು ತೋರಿಬಂದ ಲಾಭ.
ಗುಹೇಶ್ವರನೆಂಬುದು ಮೀರಿದ ಘನವು.

ಭಕ್ತಿಯೆಂಬುದು ತೋರಿ ಉಂಬ ಲಾಭವಾಗಿರುವದರಿಂದ ಕೊಟ್ಟವನನು ಕೊಂಡಾಡುವುದು ಧರ್ಮ; ಉಪಕಾರವನ್ನು ನೆನೆಯುವುದು ಕರ್ತವ್ಯ. ಇಳ್ನೆಯಾರದು ? ಬೆಳೆ ಎಲ್ಲಿಯದು? ಸುಳಿದು ಬೀಸುನ ಗಾಳಿ ಎತ್ತಣದು ? ಇದು ದೇವನ ದಾನವಲ್ಲನೇ? ಕಾಯ ಯಾರು ಕೊಟ್ಟದ್ದು? ಜೀವಯಾರಿಂದ ದೊರಕಿದ್ದು? ಅವು ಇರುವಾಗಲೇ ಪೂಜೆಗೆ ಸುಮುಹೂರ್ತವಲ್ಲವೇ? ಕಾಯ-ಜೀವಗಳಿರುವಾಗಲೇ ಪೂಜಿಸಿದರೆ ಅವುಗಳ ಸಂರಕ್ಷಣೆಗೆ ಬೇರೊಂದು ದಾನವು
ದೊರಕೊಳ್ಳುತ್ತದೆ. ಎತ್ತು ಯಾರು ಕೊಟ್ಟದಾನ? ಬಿತ್ತು ದಾನ ಮಾಡಿದವರಾರು? ಸುತ್ತಿಹರಿವ ಸಾಗರವೆಲ್ಲವೂ ತಂದೆ-ಶಿವನ ದಾನನೇ ಆಗಿರುವಾಗ ದಾನವಿತ್ತವನ ತುತ್ತಿನಿಂದ ಬದುಕಿ-ಬಾಳಿ ಅನ್ಯರನ್ನು ಹೊಗಳುವವರಿಗೆ ಏನೆನ್ನ
ಬೇಕು? ಎತ್ತಿನ ಮೇಲೆ ಕುಳಿತು ಎತ್ತು ಹುಡುಕುವ ಹದಗೇಡಿಯಂತೆ ದೇವನಿತ್ತ ದಾನಗಳು ಉಣ್ಣಲಿಕ್ಕಿದ್ದರೂ ಅವುಗಳನ್ನು ತೊರೆದು, ಅವನು ಸೂಚಿಸಿರುವ ಕೆಲಸಗಳು ಮಾಡಲಿಕ್ಕಿದ್ಧರೂ ಅವುಗಳನ್ನು ಬಿಟ್ಟುಕೊಟ್ಟು ಅರಣ್ಯಕ್ಕೆ
ತೆರಳಿ ತಪವನ್ನಾಚರಿಸುವವನಿಗೆ ನಿಚ್ಚಶಿವರಾತ್ರಿಯ ಸೊಬಗೆಲ್ಲಿ ಸಿಗಬೇಕು ? ಆತನಿಗೆ ಅದರ ಸಂತೋಷವಿನ್ನೆಲ್ಲಿ ,ಪ್ರಾಸ್ತವಾಗಬೇಕು?

ಅಡವಿಯಿರಣ್ಯದಲ್ಲಿ ಮಡಿದನಕ  ತಪವಿದ್ದು,
ಮಡಿವಾಗ ಮೃಡನ ಮರೆದಡೆ.
ತುಂಬಿದ ಸಕ್ಕರೆಯು ಮಡುವಿನೊಳಗೆ ಹೊಕ್ಕಂತೆ
ರಾಮನಾಧಾ.

ಇಡಿಯ ಜೀವನವೆಲ್ಲ ತಪವಮಾಡಿದರೂ ಮಡಿಯುವಾಗ ಶಿವನ ನೆನಹು ಆಗದಿದ್ದರೆ ಮಾಡಿದ್ದೆಲ್ಲವೂ ಹೊಳೆಯಲ್ಲಿ ಹುಳಿತೊಳೆದಂತೆ. ಅಡಿಗಡಿಗೂ ಮೃಡನ ನೆನಹು ಮಾಡಿಕೊಟ್ಟು, ಮರೆಹನ್ನು ಆಚೆಗೆ ತಳ್ಳುವ ಭಕ್ತಿಯ ದಾರಿಯು ನಿಚ್ಚಶಿವರಾತ್ರಿಯತ್ತ ಕರೆದೊಯ್ಯುತ್ತದೆ. ದಾರಿ ಸರಿಯಾದುದಾದರೂ ಅದಕ್ಕೆ ಕಂಟಕಗಳಿಲ್ಲದೆ ಇಲ್ಲ. ಭಕ್ತಿಯಲ್ಲಿ ಗರ್ವವು ಇರಬಾರದು. ನಡೆ-ನುಡಿಗಳಲ್ಲಿ ತಾಳಮೇಳ ತಪ್ಪಬಾರದು. ಕೊಡದೆ ತ್ಯಾಗಿ ಎನಿಸಿಕೊಳ್ಳುವ ಹವ್ಯಾಸವಾಗಲಿ, ದೃಢತೆ ಇಲ್ಲದ ಭಕ್ತಿಯಾಗಲಿ ಸುಳ್ಳುಸಿಂಗಾರ. ಇವುಗಳಿಂದ ಕಲಂಕಿತವಾದ ಭಕ್ತಿಯು ದೇವನಿಗೆ ಪ್ರಿಯವಾಗಲರಿಯದು.

ಗರ್ವದಿಂದ ಮಾಡುವ ಭಕ್ತಿ ದ್ರವ್ಯದ ಕೇಡು.
ನಡೆಯಿಲ್ಲದ ನುಡಿ ಅರಿವಿಂಗೆ ಹಾನಿ.
ಕೊಡದೆ ತ್ಯಾಗಿ ಎನಿಸಿಕೊಂಬುದು ಮುಡಿಯಿಲ್ಲದ ಶೃಂಗಾರ.
ದೃಡವಿಲ್ಲದ ಭಕ್ತಿ ಅಡಿ ಒಡೆದ ಕುಂಭದಲ್ಲಿ
ಸುಖಜಲವ ತುಂಬಿದಂತೆ,
ಮಾರಯ್ಯ ಪ್ರಿಯ ಅಮಳೇಶ್ವರ ಲಿ೦ಗ ಮುಟ್ಟದ ಭಕ್ತಿ.

ಕಲಂಕಿತವಾದ ಭಕ್ತಿಯು ದ್ರವ್ಯದ ಕೇಡು ಮಾತ್ರ ಮಾಡಿಬಿಡದೆ, ಅರಿವಿನ ಹಾನಿ ಮಾತ್ರ ಮಾಡಿಬಿಡದೆ ಸುಖದ ಹುಚ್ಚು ಹಿಡಿದವನನ್ನು ದುಃಖದ ಮಡುವಿಗೊಯ್ದು ತಳ್ಳುವದು. ಹೂವಿಗೆ ಕೈಚಾಚುವಷ್ಟರಲ್ಲಿ ಮುಳ್ಳುಮೊನೆಯೂರುವುದು. ಜೇನಿಗೆ ಕೈ ತೊಡುಕುವಷ್ಟರಲ್ಲಿ ಹುಳು ಕಚ್ಚುವದು. ಹಾಗೆ ಗಾಸಿಗೊಂಡವನಿಗೆ ವರ್ಷದ ಶಿವರಾತ್ರಿಯೇ  ಅಪರೂಪವಾಗುತ್ತಾರುವಾಗ ನಿಚ್ಚಶಿವರಾತ್ರಿ ಪ್ರಾಪ್ತಿಸುವ ಬಗೆಯೆಂತು ?

ಮಹಾದೇವಿಯಕ್ಕನಂತೆ ತನುವಿನೊಳಗಿದ್ದು ತನುವನ್ನು ಗೆಲ್ಲಬೇಕಾಗಿದೆ. ಮನದೊಳಗಿದ್ದು ಮನವನ್ನು ಗೆಲ್ಲಬೇಕಾಗಿದೆ. ವಿಷಯಗಳಲ್ಲಿದ್ದರೂ ವಿಷಯಗಳನ್ನು ಗೆಲ್ಲಬೇಕಾಗಿದೆ. ಅಂಗಸಂಗನನ್ನು ತೊರೆದು ಭವವನ್ನು ಗೆಲ್ಲಬೇಕಾಗಿದೆ. ಅಂಥ ಗೆಲುವು ಗಳಿಸಿದ್ದರಿಂದಲೇ ಆಕೆಯು ಪರಮಾತ್ಮನ ಹ್ಛದಯ ಕಮಲವನ್ನೇ ಬಗಿದು ಹೊಕ್ಕಳು ! ಆಕೆ ಪಡೆದ ನಿಜಪದವು ಅದೇ ಅಹುದು. ಮರುಳುಗೊಂಡಂತೆ ಮಾಡುವದರಿಂದ ವ್ಯರ್ಥಶ್ರಮ ಮಾತ್ರ. ಮರ್ಮವರಿಯದೆ ಮಾಡುವ ಮಾಟದಿಂದ ಕರ್ಮದ ಬೆಳಸು ಮಾತ್ರ ಸಾಕಷ್ಟು ಬೆಳೆದು ನಿಲ್ಲುತ್ತದೆ. ಆದರೆ ಶರಣರು ಅನುವರಿದು ಮಾಡಿದ ಮಾಟವೆಂದರೆ, ಲಿಂಗ ಜಂಗಮದ ಕೂಟವೇ; ಭವಭಂಗದೋಟವೇ; ಪರಮೇಶ್ವರನ ವಿಸ್ತಾರವಾದ ತೋಟವೇ.

ಅನ್ಯವಿಚಾರದ ಮರೆದು ನಿಮ್ಮ ವಿಚಾರವೆಡೆಗೊಂಡಿತ್ತಾಗಿ
ಪ್ರಾಣದ ನೆಲೆಗಟ್ಟಿತ್ತಯ್ಯಾ.
ದಶವಾಯುಗಳ ಸಂಚು ತಪ್ಪಿತ್ತಯ್ಯ.
ಕರಣಂಗಳ ಲಿಂಗದ ಕಿರಣಂಗಳು ನುಂಗಿದವಯ್ಯಾ.
ಒಳಗೆ ಕರತಳಾಮಳೈಕ್ಯಗೊಂಡೆನಯ್ಯ.
ಹೊರಗನೆಂದರಿಯದೆ, ನೀನೇ ಗತಿಯೆಂದಿರ್ದೆ
ಕೂಡಲಸಂಗಮದೇವಾ.

ಇದೇ ನಿಚ್ಚಶಿವರಾತ್ರಿಯನ್ನು ಆಚರಿಸುವವನ ಪ್ರಕೃತಿಯ ಗುರುತು. ಹಳೆಯ ರೂಡಿಗಳು ಮಾರ್ಪಟ್ಟು ರೂಪಾಂತರ- ಗೊಂಡ ಪ್ರಕೃತಿಯ ಕುರುಹು ಇದೆ. ಮನವು ಅನ್ಯವಿಚಾರಗಳನ್ನು ಮರೆತುದೇ ಅದು ತಿದ್ದುಪಡಿಹೊಂದಿದುದರ ಚಿಹ್ನ. ಕರಣಗಳ ಮೇಲೆ ಲಿಂಗದ ಕಿರಣಗಳು ಮುದ್ರೆಯೊತ್ತಿ ದಶವಾಯುಗಳ ಸಂಚು ತಪ್ಪಿರುವುದನ್ನು ಮರೆದ ಮಾನವನಲ್ಲಿ ಕಾಣಬಲ್ಲೆನೇ ? ಒಳಗೆ ಮಹಾ ಐಕ್ಯಾನುಸಂಧಾನ, ಹೊರಗೆ ನೀನೇ ಗತಿಯೆಂಬ ಅರುಹು. ಆ ಜೀವವೇ ಉತ್ಸಾಹದ ಸೆಲೆ; ಉಲ್ಹಾಸದ ನೆಲೆ; ಅಗಾಧ ಆನಂದದ ಬೆಲೆ.

ಕರಣಗುಣಗಳು ಅಳಿದುಬಿಡದೆ ಒಳಗಿನ ಚಕ್ರಗಳು ಸಹ ತಮ್ಮ ಕಾರ್ಯವನ್ನು ಬೇರೊಂದು ವಿಧಾನದಿಂದ ಸಾಗಿಸತೊಡಗುತ್ತವೆ. ಆಗ ಸ್ಣರ್ಗ ಏತಕ್ಕೆ ಬೇಕು? ನರಕ ಏತಕ್ಕೆ ಬೇಡ? ನರಕವೂ ಸ್ತ್ರರ್ಗವಾಗಿರುವಾಗ, ಮೃತ್ಯು ಲೋಕವೂ ಅಮರಲೋಕವಾಗಿರುವಾಗ.

ಕರಣಾದಿ ಗುಣಂಗಳಳಿದು, ನವಚಕ್ರಂಗಳು
ಭಿನ್ನವಾದ ಬಳಿಕ
ಇನ್ನೇನೋ ಇನ್ನೇನೋ ಸ್ವರ್ಗವಿಲ್ಲ, ನರಕವಿಲ್ಲ,
ಇನ್ನೇನೋ ಇನ್ನೇನೋ ?
ಗುಹೇಶ್ವರ ಲಿಂಗ ವೇಧಿಸಿ ಸುಖಿಯಾದ ಬಳಿಕ
ಇನ್ನೇನೋ ಇನ್ನೇನೋ?

ಕರುಣಾಹೃದಯಿಯಾದ ಜಗನ್ಮಾತೆಯು, ಈ ವರೆಗೆ ಕಟ್ಟಿತೆಗೆದ ದೇವಾಲಯಕ್ಕೆ ಒಂದು ಹೊಂಗಳಸವನ್ನಿಟ್ಟು ಸಿಂಗಾರವನ್ನು ಪೂರ್ತಿಗೊಳಿಸಿದು ಹೇಗೆಂದರೆ- “ಮಣ್ಣಿನ ಮಕ್ಕಳ ಮೈ ಚಿನ್ಮಯವಾಗಬಲ್ಲದು. ಸತ್ವ-ರಜ-ತಮಗಳಿಗೆ ಒತ್ತೆಗೊಟ್ಟ ನಿಮ್ಮ ಅಂತಃಕರಣಗಳನ್ನು ನನಗೊಪ್ಪಿಸಿರಿ. ಅವು ನನ್ನ ಕೈಯ ಉಪಕರಣಗಳಾಗಿ ಮೆರೆಯಲಿ. ಆಗ ನಿಮ್ಮ ಬುದ್ಧಿಯು ಅಜ್ಞಾನವಿನಾಶಿಯಾದ ದೀಪವಾಗುವದು. ನಿಮ್ಮ ಪ್ರಾಣವು ಅಘನಾಶಕವಾದ   ಖಡ್ಗವಾಗುವದು. ನಿಮ್ಮ ಶರೀರವು ನಾನು ನಡೆಸುವ ಸಚಲಯ೦ತ್ರವಾಗಿ ಉಪಯುಕ್ರವಾದ ದಿವ್ಯಕಾರ್ಯಗಳನ್ನು ನಡೆಸಲಣಿಯಾಗುವದು.”

****

ಸಿಂಪಿ ಲಿಂಗಣ್ಣ
Latest posts by ಸಿಂಪಿ ಲಿಂಗಣ್ಣ (see all)