ಪಾಪಿಯ ಪಾಡು – ೧೬

ಪಾಪಿಯ ಪಾಡು – ೧೬

ಹೀಗೆ ಆರು ವಾರಗಳು ಕಳೆದ ಮೇಲೆ ಒಂದು ದಿನ ಮೇರಿ ಯಸ್ಸನು ಕೋಸೆಟ್ಟಳನ್ನು ನೋಡಲು ಬಂದಾಗ ಅವಳು ಅವನನ್ನು ಕುರಿತು, ” ಈ ದಿನ ಪ್ರಾತಃಕಾಲ ನಮ್ಮ ತಂದೆಯು ನನ್ನನ್ನು ನೋಡಿ, ತನಗೇನೋ ಕೆಲಸವಿರುವುದರಿಂದ ನಾವು ಇಲ್ಲಿಂದ ಹೊರಟು ಹೋಗಬೇಕಾದೀತೆಂತಲೂ, ಅದಕ್ಕಾಗಿ ಎಲ್ಲವನ್ನೂ ಸಿದ್ದ ಪಡಿಸಿಕೊಂಡಿರಬೇಕೆಂತ ಹೇಳಿದನು,’ ಎಂದಳು.

ಮೇರಿಯಸ್ಸನು ಆಪಾದಮಸ್ತಕವೂ ಅದಿರಿ ಅಲ್ಲಾಡಿ ಹೋದನು.

ನಾವು ನಮ್ಮ ಜೀವಿತದ ಅಂತ್ಯದಲ್ಲಿರುವಾಗ, ಸಾಯುವು ದೆಂದರೆ ಹೊರಟು ಹೋಗುವದೆಂದರ್ಥ. ಜೀವಿತದ ಆದಿಯಲ್ಲಿರು ವಾಗ, ಹೊರಟುಹೋಗುವದೆಂದರೆ ಸಾಯುವುದೆಂದರ್ಥ.

ಮೇರಿಯಸ್ಸನು ಎಚ್ಚತನು. ಈ ಆರು ವಾರಗಳೂ ಮೇರಿ ಯಸ್ಸನ್ನು, ನಾವು ಕಂಡಂತೆ, ಜೀವಿತದ ಹೊರ ಅಂಚಿನಲ್ಲಿದ್ದನು. ಈ ‘ ಹೊರಟು ಹೋಗು’ ವದೆಂಬ ಮಾತು ಈಗ ಅವನನ್ನು ಜೀವಿತದ ಒಳಕ್ಕೆ ತಳ್ಳಿತು. ಅವನಿಗೆ ಈಗ ಏನು ಹೇಳಲೂ ತೋರಲಿಲ್ಲ.

ಕೋಸೆಟ್ಟಳು, ‘ನಾವೆಂತಹ ಅವಿವೇಕಿಗಳು ! ಮೇರಿಯಸ್, ನನಗೆ ಒಂದು ಆಲೋಚನೆಯು ಹೊಳೆಯುವುದು,’ ಎಂದಳು. ‘ ಏನು ?’ ‘ಹೊಗಬೇಕಾದರೆ ಹೋಗೋಣ ! ಎಲ್ಲಿಗೆಂಬುದನ್ನು ನಾನು ನಿನಗೆ ತಿಳಿಸುವೆನು. ನಾನಿರುವ ಕಡೆಗೆ ನೀನೂ ಬಂದರೆ ಆಯಿತು.’ ‘ ಏನು ? ನಿನ್ನ ಸಂಗಡ ಬರುವುದೇ ? ನಿನಗೇನು ಹುಚ್ಚೆ ? ಅದಕ್ಕೆ ಎಷ್ಟು ಹಣ ಬೇಕಾಗುವುದು ! ನನ್ನಲ್ಲಿ ಯಾದರೋ ಒಂದು ಕಾಸೂ ಇಲ್ಲ ! ನೀವು ಇಂಗ್ಲೆಂಡಿಗೆ ಹೋಗುವಿರೆಂದೆಯಾ ? ನಾನು ನನ್ನ ಸ್ನೇಹಿತನೊಬ್ಬನಿಗೆ ಹತ್ತು ಲೂಯಿಗಳಿಗಿಂತಲೂ ಹೆಚ್ಚು ಹಣ ವನ್ನು ಕೊಡಬೇಕಾಗಿದೆ. ಅವನು ಯಾರೆಂಬುದು ನಿನಗೆ ತಿಳಿ ಯದು. ನೀನು ನನ್ನನ್ನು ರಾತ್ರಿ ಕಾಲದಲ್ಲಿ ಮಾತ್ರ ನೋಡುತ್ತ, ನನ್ನಲ್ಲಿ ಮೋಹಗೊಂಡಿರುವೆ ; ಹಗಲಲ್ಲಿ ನನ್ನನ್ನು ನೀನು ನೋಡಿದುದೇ ಆದರೆ, ನೀನೇ ನನಗೆ ಒಂದು ಸೌವನ್ನು ಭಿಕ್ಷ ವಿಕ್ಕುತ್ತಿದ್ದೆ, ಇಂಗ್ಲೆಂಡಿಗೆ ಹೋಗುವುದೇ ? ಆಹಾ ! ಹೋಗಲು ರಹದಾರಿಯನ್ನು ಪಡೆಯುವ ಒಗೆ ತಾನೇ ಹೇಗೆ ? ‘

ಎಂದು ಹೇಳಿ, ತಲೆಯ ಮೇಲೆ ತನ್ನ ಎರಡು ತೋಳು ಗಳನ್ನೂ ಇಟ್ಟುಕೊಂಡು, ಬಳಿಯಲ್ಲಿದ್ದ ಮರದ ತೊಗಟೆಗೆ ತನ್ನ ಹಣೆಯನ್ನು ಒರಗಿಸಿ, ನಿಂತುಕೊಂಡನು. ಮರಕ್ಕೆ ಒರಗಿದ್ದ ತನ್ನ ಚರ್ಮವು ಗೋಚುವುದೆಂದಾಗಲಿ, ತನ್ನ ಮೆದುಳಿನಲ್ಲಿ ಒದಗಿದ್ದ ಚಿಂತೆಯಿಂದುಂಟಾದ ದೇಹದಾಹವನ್ನಾಗಲಿ ಅವನು ಗಮನಿಸದೆ, ಸ್ತಬ್ಬನಾಗಿ, ನಿರಾಶೆಯ ಪ್ರತಿಮೆಯೆಂಬಂತೆ ಕೆಳ ಗುರುಳಿ ಬೀಳುವ ಸ್ಥಿತಿಯಲ್ಲಿದ್ದನು.

ಬಹಳ ಹೊತ್ತು ಹೀಗೆಯೇ ಕಳೆಯಿತು. ಇಂತಹ ಮಹಾ ವ್ಯಥೆಯಲ್ಲಿ ಎಂದೆಂದಿಗೂ ಹೀಗೆಯೇ ನಿಂತಿದ್ದರೂ ಅದಕ್ಕೆ ಕೊನೆಯೇ ಇಲ್ಲ. ಕಟ್ಟಕಡೆಗೆ ತಿರುಗಿ ನೋಡಿದನು. ಅವನ ಹಿಂದಣಿಂದ, ಉಸಿರು ಕಟ್ಟಿದ ಶಬ್ದದಂತೆ ಮೃದುವಾದ ಮತ್ತು ವ್ಯಸನಕರವಾದ ಒಂದು ಧ್ವನಿಯು ಕೇಳಿಸಿತು. ಅದು ಕೋಸೆಟ್ಟಳು ಬಿಕ್ಕಿ ಬಿಕ್ಕಿ ಅಳುತ್ತಿದ್ದ ಶಬ್ದ ವು. ಮೇರಿಯಸ್ಸನು ಚಿಂತೆಯಲ್ಲಿ ಮುಳುಗಿರು ವಾಗ, ಸುಮಾರು ಎರಡು ಗಂಟೆಗಳ ಕಾಲ ಅವಳು ಅಳುತ್ತಲೇ ಇದ್ದಳು.

ಅವನು ಅವಳ ಕೈಯನ್ನು ಹಿಡಿದು, ‘ ಕೋಸೆಟ್, ನಾನು ಯಾರಿಗೂ ಪ್ರಮಾಣ ಮಾಡಿ ಮಾತುಕೊಟ್ಟವನಲ್ಲ. ಏತಕ್ಕೆಂದರೆ ಪ್ರಮಾಣವಾಕ್ಯವೆಂದರೆ ನನಗೆ ಭಯವಾಗುವುದು. ನಮ್ಮ ತಂದೆಯು ನನ್ನ ಎದುರಿನಲ್ಲಿಯೇ ಇರುವಂತೆ ನನ್ನ ಮನಸ್ಸಿಗೆ ತೋರುವುದು. ಈಗ ಪರಮ ಪವಿತ್ರವೆಂದು ನಾನು ಭಾವಿ ಸಿರುವ ನನ್ನ ಪ್ರಮಾಣ ವಚನವನ್ನು ನಿನ್ನೊಡನೆ ಹೇಳುವೆನು. ಕೇಳು, ನೀನು ಹೊರಟು ಹೋದರೆ ನಾನು ಸಾಯುವುದೇ ನಿಜ, ಆದರೆ ಜೀವಿಸಿರಬೇಕೆಂದೇ ನನ್ನ ಸಂಕಲ್ಪ,’ ಎಂದನು

ಈ ಸಮಯದಲ್ಲಿ ಕೋಸೆಟ್ಟಳು ಮತ್ತೆ ಅವನ ಕಣ್ಣು ಗಳನ್ನೇ ನೋಡುತ್ತಿದ್ದು, ಅವನನ್ನು ಕುರಿತು, ” ಮೇರಿಯಸ್, ನಿನ್ನ ಭಾವವೇನು ಹೇಳು, ನಿನ್ನ ಮನಸ್ಸಿನಲ್ಲಿ ಏನೋ ಇರುವದು, ಅದನ್ನು ಹೇಳು. ನನೊಡನೆ ಹೇಳು ; ಹೇಳಿದರೆ ನಾನು ಈ ರಾತ್ರಿ ಸುಖವಾಗಿ ನಿದ್ರೆಮಾಡುವೆನು, ‘ ಎಂದಳು.

‘ ನನ್ನ ಅಭಿಪ್ರಾಯವು ಇದು , ದೇವರು ನಮ್ಮಿಬ್ಬರನ್ನೂ ಅಗಲಿಸಲು ಇಷ್ಟಪಡುವನೆಂಬುದು ಅಸಂಭವ. ನೀನು ನಾಡಿದ್ದು ನನ್ನ ನಿರೀಕ್ಷಣೆಯಲ್ಲಿರು. ನಾನೊಂದು ಉಪಾಯವನ್ನು ಮಾಡಲು ಪ್ರಯತ್ನಿಸುವೆನು.’

‘ಹಾಗಾದರೆ ನಾನು ಈಗಿನಿಂದಲೂ ನಿನ್ನನ್ನೇ ಧ್ಯಾನಿಸುತ್ತ ನಿನ್ನ ಪ್ರಯತ್ನದಲ್ಲಿ ನೀನು ಜಯಶಾಲಿಯಾಗುವಂತೆ ಅನುಗ್ರಹಿ ಸೆಂದು ದೇವರನ್ನು ಕುರಿತು ಪ್ರಾರ್ಥಿಸುವೆನು.’

‘ನಾನೂ ಹಾಗೆಯೇ ಮಾಡುವೆನು.’

ಮೇರಿಯಸ್ಸನು ಹೊರಟುಹೋದ ಕೂಡಲೇ ಕೋಸೆಟ್ಟಳ ಕಣ್ಣಿಗೆ ಬೀದಿಯೆಲ್ಲವೂ ಶೂನ್ಯವಾಗಿ ಕಂಡಿತು.

ಮೇರಿಯಸ್ಸನು ತನ್ನ ತಲೆಯನ್ನು ಮರಕ್ಕೆ ಒರಗಿಸಿ ಆಲೋಚಿಸುತ್ತಿರುವ ಸಮಯದಲ್ಲಿ ಅವನ ಮನಸ್ಸಿಗೆ ಒಂದು ಆಲೋಚನೆಯು ಹೊಳೆದಿತ್ತು. ಸಾಸ! ಈ ಆಲೋಚನೆಯು ಅವಿವೇಕವಾದುದೆಂತಲೂ ಅಸಾಧ್ಯವೆಂತಲೂ ಅವನಿಗೇ ತೋರಿತು. ಅವನು ಕೇವಲ ನಿರಾಶನಾಗಿ ಈ ನಿರ್ಧರಮಾಡಿದುದು.

ಇದೇನೆಂದರೆ, ತನ್ನ ತಾತನನ್ನು ಕೇಳುವುದು. ಅದರಂತೆ ಹೋಗಿ ತನ್ನ ವಿವಾಹದ ವಿಚಾರವನ್ನು ಆತನೊಡನೆ ಪ್ರಸ್ಥಾಪಿಸಿದನು. ಆದರೆ ಅವನು ಹೇಳಿಕೊಂಡುದೆಲ್ಲವೂ ವಿಫಲ ವಾಯಿತು.

ತಾತನೂ, ಮೊಮ್ಮಗನೂ ಒಬ್ಬರನ್ನೊಬ್ಬರು ಸಮಂಜಸ ಮಾಡಿ ಒಪ್ಪಿಸಬೇಕೆಂದು ಬಹಳ ಪ್ರಯತ್ನ ಪಟ್ಟರು. ಆದರೆ ಪ್ರತಿ ಯೊಬ್ಬರಿಗೂ ಅತಿಶಯವಾದ ಹೆಮ್ಮೆ ಇದ್ದುದರಿಂದ ಯಾರೊಬ್ಬರೂ ತಮಗಿದ್ದ ಪ್ರೀತಿಯನ್ನು ತೋರಿಸಲು ಅವಕಾಶವಿರಲಿಲ್ಲ. ಮೇರಿ ಯಸ್ಸನು ವಿವಾಹ ಮಾಡಿಕೊಳ್ಳಲು ಆಸ್ಪಣೆಯನ್ನು ಕೇಳಲು, ಖಂಡಿತವಾಗಿಯೂ ಒಸ್ಪದೆ, ಮುದುಕನು ತಿರಸ್ಕರಿಸಿದನು. ಆದರೆ ಮೇಯಸ್ಸನು ಮನೆಯನ್ನು ಬಿಟ್ಟು ಹೊರಟುಹೋದ ಒಡನೆಯೇ ಮುದುಕನಿಗೆ ಪಶ್ಚಾತ್ತಾಪ ಹುಟ್ಟಿ, ಮೇರಿ ಯಸ್ಸನನ್ನು ಹಿಂದಕ್ಕೆ ಕರೆತರಲು ಸೇವಕನನ್ನು ಕಳುಹಿಸಿ ದನು. ಕಾರ್ಯವೂ ಮೀರಿಹೋಗಿತ್ತು. ಮೇರಿಯಸ್ಸನು ತನ್ನ ವಿಳಾಸದ ಸೂಚನೆಯನೂ ಸಹ ಕೊಡದೆ ಮಾಯವಾಗಿದನು.

ಅವನು ಮೊದಲು ತನ್ನ ನಿವಾಸ ಸ್ಥಳಕ್ಕೆ ಹೋಗಿ ಹಿಂದೆ ೇವರ್ಟನು ತನಗೆ ಕೊಟ್ಟಿದ್ದ ಎರಡು ಪಿಸುಗಳನ್ನು ತೆಗೆದು ಕೊಂಡನು. ಅವುಗಳಿಂದ ಏನು ಮಾಡಬೇಕೆಂಬುದನ್ನು ಮಾತ್ರ ಅವನು ಆಲೋಚಿಸಿರಲಿಲ್ಲ. ಅನಂತರ ಕೋಸೆಟ್ಟಳ ಉಪವನಕ್ಕೆ ಹೋದನು. ಅಲ್ಲಿ ಯಾರೂ ಇರಲಿಲ್ಲ. ಮನೆಗೆ ಬೀಗಹಾಕಿತ್ತು. ನಿರಾಶನಾಗಿ ನಿಂತಿರವಲ್ಲಿ, ಅಲ್ಲಿ ಹೋಗುತ್ತಿದ್ದವರು ಯಾರೋ ಕೂಗಿಕೊಂಡ ಶಬ್ದವು ಇವನಿಗೆ ಕೇಳಿಸಿತು. ಯಾವುದೊ ಬೀದಿಯಲ್ಲಿ ಜಗಳವು ನಡೆಯುತ್ತಿರುವದೆಂತಲೂ ಮೇರಿಯಸ್ಸನ ಸ್ನೇಹಿತರು ಅವನ ಸಹಾಯವನ್ನಪೇಕ್ಷಿದರೆಂತಲೂ ಅವರು ಕೂಗಿದರು.

ಆ ದಿನ, ನೆಪೋಲಿಯನ್ ಚಕ್ರವರ್ತಿಯ ಹಳೆಯ ಸೇನಾ ಪತಿಯೊಬ್ಬನು ಮೃತನಾಗಿ ಆತನ ಶವದ ಮೆರವಣಿಗೆಯು ಬೀದಿ ಯಲ್ಲಿ ಹೋಗುತ್ತಿರುವಾಗ ಈ ಯುದ್ಧವು ಪ್ರಾರಂಭವಾಗಿತ್ತು, ಫ್ರಾನ್ಸ್ ದೇಶವು ಮತ್ತೆ ರಾಜನಾಳ್ವಿಕೆಯಲ್ಲಿತ್ತು ಆದರೆ ಬಹು ಮಂದಿ ಪ್ರಜೆಗಳು ಪ್ರಜಾಪ್ರಭತ್ವ ಪಕ್ಷವನ್ನೇ ಅನುಮೋದಿಸು ವವರಾಗಿದ್ದರು. ಈ ಕಾರಣದಿಂದ ಆ ಶವದ ಮೆರವಣಿಗೆಯ ಹಿಂದೆ ಬಹು ಮಂದಿ ಜನರು ಹೋಗುತ್ತಿದ್ದರು. ಏನೋ ಅಪಾಯಕ್ರಿಯೆ ಗಳು ನಡೆಯದಂತೆ ನೋಡಿಕೊಳ್ಳಲು ಸರ್ಕಾರವು ಸಾವಿರಾರು ಮಂದಿ ಸಿಪಾಯಿಗಳನ್ನು ಕರೆಸಿದ್ದರು. ಜಗಳವು ಹೇಗೆ ಪ್ರಾರಂಭವಾಯಿತೆಂಬುದು ಯಾರಿಗೂ ಗೊತ್ತಾಗಲಿಲ್ಲ. ತುಪಾಕಿಯ ಗುಂಡುಗಳು ಹಾರಾಡಿದವು. ಸರ್ಕಾರದ ಸಿಪಾಯಿ ಗಳು ಪ್ರಜಾಪ್ರಭುತ್ವ ಪಕ್ಷದವರ ಕೈಗೆ ಸಿಕ್ಕಿಬಿದ್ದರು. ಇದು ಎರಡು ದಿನಗಳ ವರೆಗೆ ಮಾತ್ರ) ನಡೆದ ಒಂದು ಸಣ್ಣ ಯುದ್ಧವೇ ಆಗಿತ್ತು. ಆದರೂ ಈ ಜಗಳದಲ್ಲಿ ರಕ್ತದ ಹೊಳೆಯು, ಹರಿಯತು. ಈ ಸಮಯದಲ್ಲಿ, ಈ ಕಥೆಯಲ್ಲಿಯ ವ್ಯಕ್ತಿಗಳಿಗೆ ಸಂಬಂಧಪಟ್ಟ ಬಹು ಮುಖ್ಯವಾದ ವಿಷಯಗಳು ನಡೆದವು.

ಮೇರಿಯಸ್ಸನು ತನ್ನ ಸ್ನೇಹಿತರನ್ನು ಆ ಪ್ಯಾರಿಸ್ ನಗರದ ಅತ್ಯಂತ ಜನಸಾಂದ್ರವಾದ ಒಂದು. ಬೀದಿಯಲ್ಲಿ ನೋಡಿದನು, ಅವರು, ಎರಡು ಬೀದಿಗಳು ಸಂಧಿಸುವ ಸ್ಥಳದಲ್ಲಿ ಒ೦ದು ಮದ್ಯದ ಅಂಗಡಿಯಲ್ಲಿ ನಿಂತು, ತಮ್ಮ ರಕ್ಷಣೆಗೊಸ್ಕರ ಸಮ ಕೊನವಾಗಿ ‘ಬ್ಯಾರಿಕೇಡ್ಸ್’ ಎಂಬ ಅಡ್ಡ ಗೋಡೆಗಳನ್ನು ಕಟ್ಟು ತಿದ್ದರು. ಸಮಾರು ಐವತ್ತು ಮಂದಿ ಕೆಲಸಗಾರರು ಇವರಿಗೆ ಸಹಾಯಕರಾಗಿದ್ದರು. ಇವರಲ್ಲಿ ಕೆಲವರು ತುಪಾಕಿಗಳು ಹಿಡಿದಿದ್ದರು. ಗೋಡೆಗಳನ್ನ ಕಟ್ಟಿದುದಾದ ಮೇಲೆ ಅಧಿಕಾರಿಯು ಪ್ರತಿಯೊಬ್ಬರಿಗೂ ಕೆಲವು ಬ೦ದೂಕಿನ ತೋಟಾಗಳನ್ನು ಕೊಟ್ಟು ಅವರವರ ಸ್ಥಾನಗಳನ್ನು ಗೊತ್ತುಮಾಡಿ ನಿಲ್ಲಿಸಿದನು. ಆಗ ಜೀವ ರ್ಟನು ಇವರ ಮಧ್ಯದಲ್ಲಿ ನಿಂತಿರುವನೆಂದು ಯಾರೋ ಗಮನಿಸಿ ನೋಡಿ, ಇವನು ಗೂಢಚಾರನೆಂದು ಅಧಿಕಾರಿಗೆ ತಿಳಿಸಿದರು. ಆ ಕ್ಷಣವೇ ಜೇರ್ವನನ್ನು ಹಿಡಿದರು ಕೈಕಾಲುಗಳಿಗೆ ಬೇಡಿಗಳು ಬಿದ್ದುವು. ಸೊಂಟಕ್ಕೆ ಹಗ್ಗ ಹಾಕಿ ಆ ಅಂಗಡಿಯ ತಳಗಡೆಯ ಒಂದು ದೊಡ್ಡ ಕಂಬಕ್ಕ ಅವನನ್ನು ಬಿಗಿದು ಕಟ್ಟಿದರು. ಆ ಅಧಿಕಾರಿಯು ಅವನನ್ನು ಕುರಿತು, ” ಈ ಅಡ್ಡ ಗೋಡೆಯ ಶತ್ರುಗಳ ವಶವಾಗುವುದಕ್ಕೆ ಹತ್ತು ನಿಮಿಷಗಳ ಮುಂಚಿತವಾಗಿ ನೀನು ಗುಂಡಿನ ಬಾಯಿಗೆ ತುತ್ತಾಗುವೆ,’ ಎಂದನು.

ಮಧ್ಯರಾತ್ರಿಯ ಸಮಯಕ್ಕೆ ಸರ್ಕಾರದ ಸೈನಿಕರು ಈ ಅಡ್ಡಗೋಡೆಯನ್ನು ಮುತ್ತಲು ಆರಂಭಿಸಿದರು. ಉಭಯ ಪಕ್ಷಗಳಲ್ಲಿಯೂ ಅನೇಕರು ಮೃತರಾಗಿಯ ಗಾಯಪಡೆದೂ ಬಿದ್ದರು. ಈ ಅಡ್ಡಗೋಡೆಯು ಶತ್ರುಗಳ ವಶವಾಗುವುದೆಂದು ಕಂಡಬಂದಕೂಡಲೆ, ಮೇರಿಯಸ್ಸನು ಅದರಮೇಲೆ ಒಂದು ಕರಿಯ ಮದ್ದಿನ ಪೀಪಾಯಿಯನ್ನಿಟ್ಟು, ಅದರಮೇಲೆ ಒಂದು ಪಂಜನ್ನು ಆಡಿಸುತ್ತ, ‘ ಹೊರಟು ಹೋಗಿ ; ಇಲ್ಲವಾದರೆ ನಾನು ಈ ಗೋಡೆ ಯನ್ನೇ ಹಾರಿಸಿಬಿಡುತ್ತೇನೆ,’ ಎಂದು ಕೂಗಿಕೊಂಡನು.

ಮುತ್ತುವುದಕ್ಕಾಗಿ ಬಂದಿದ್ದವರು ಸತ್ತವರನ್ನೂ ಗಾಯ ಪಟ್ಟವರನ್ನೂ ಅಲ್ಲಲ್ಲಿಯೇ ಬಿಟ್ಟು ದಿಕ್ಕಾಪಾಲಾಗಿ ಒಂದು ಕ್ಷಣ ಮಾತ್ರದಲ್ಲಿ ಓಡಿಹೋದರು. ರಕ್ಷಣಾರ್ಥವಾಗಿ ಕಟ್ಟಿದ್ದ ಗೋಡೆಯು ಉಳಿಯಿತು.

ಸ್ವಲ್ಪ ಹೊತ್ತಿನ ಮೇಲೆ ಕೋಸೆಟ್ಟಳಿಂದ ಬಂದ ಒಂದು ಕಾಗದವು ಮೇರಿಯಸೃನ ಹಸ್ತಗತವಾಯಿತು. ಅದರಲ್ಲಿ ಹೀಗೆ ಬರೆದಿತ್ತು: – ಪ್ರಿಯಾ ! ಓ! ನಮ್ಮ ತಂದೆಯು ಈಗಲೇ ಇಲ್ಲಿಂದ ಹೊರಡ ಬೇಕೆಂದಿಷ್ಟಪಟ್ಟಿದ್ದಾನೆ. ನಾವು ಈ ದಿನ ರಾತ್ರಿ ರೂ ಡಿ ಎಲ್’ಹೋಂ ಆರಂ ಬೀದಿಯ, ೭ನೆಯ ನಂಬರು ಮನೆಯಲ್ಲಿರು ತ್ತೇವೆ. ಇನ್ನು ಒಂದು ವಾರದೊಳಗಾಗಿ ಇಂಗ್ಲೆಂಡನ್ನು ಸೇರು ವೆವು. ಕೊ ಸೆಟ್, ಜೂನ್ ೨ನೆಯ, ತಾರೀಖು.’

ಇದನ್ನು ನೋಡಿ ಅವನು ತನ್ನ ಜೇಬಿನ ಪುಸ್ತಕದಿಂದ ಒಂದು ಹಾಳೆಯನ್ನು ಹರಿದು ಅದರಲ್ಲಿ, ‘ ನಮ್ಮ ವಿವಾಹವು ಆಗದು. ನಾನು ನನ್ನ ತಾತನನ್ನು ಕೇಳಿದೆನು; ಅವನು ಒಪ್ಪಲಿಲ್ಲ. ನಾನು ಅದೃಷ್ಟಹೀನನು. ನೀನೂ ಹಾಗೆಯೇ ಸರಿ. ನಾನು ನಿಮ್ಮ ಮನೆಗೆ ಆತುರನಾಗಿ ಓಡಿಹೋದೆ. ನೀನು ಅಲ್ಲಿರಲಿಲ್ಲ. ನಾನು ನಿನಗೆ ಕೊಟ್ಟ ವಾಗ್ದಾನವನ್ನು ಬಲ್ಲೆಯಷ್ಟೆ ! ಅದರಂತೆ ನಡೆಯುವೆನು. ನಾನು ಸಾಯುವೆನು. ನಾನು ನಿನ್ನನ್ನು ಮೋಹಿಸಿರುವೆನು. ನೀನು ಈ ಕಾಗದವನ್ನು ಓದುವಾಗ ನನ್ನ ಆತ್ಮವು ನಿನ್ನ ಬಳಿಯಲ್ಲಿದ್ದು ನಿನ್ನನ್ನು ನೋಡಿ ಮುಗುಳಗೆ ನಗುವದು.’

ಎಂದು ಬರೆದು, ಕಾಗದವನ್ನು ಮಡಿಸಿ, ಹಾಗೆಯೇ ಒಂದು ನಿಮಿಷಕಾಲ ಆಲೋಚಿಸಿ, ಮತ್ತೆ ಪುಸ್ತಕವನ್ನು ತೆಗೆದು, ಅದೇ ಸೀಸದ ಕಡ್ಡಿಯಿಂದ ಮೊದಲನೆಯ ಪುಟದಲ್ಲಿ ಈ ಮುಂದಿನ ನಾಲ್ಕು ಪಙ್ಕ್ತಿಗಳನ್ನು ಬರೆದನು : ‘ನನ್ನ ಹೆಸರು ಮೇರಿಯಸ್ ಪಾಂಟ್ ಮರ್ಸಿ, ನನ್ನ ಶವ ವನ್ನು , ಮರಯಿಸ್‌ನಲ್ಲಿ ರೂ ಡೆಸ್ ಫೈಲ್ಸ್ ಡ್ರ ಕಲ್ವೇರ್ ಬೀದಿ ಯಲ್ಲಿ, ೬ ನೇ ನಂಬರು ಮನೆಯಲ್ಲಿರುವ ನನ್ನ ತಾತ, ಮಾನ್ ಸಿಯುರ್ ಜಿಲ್ಲೆ ನಾರ್ಮಂಡ್‌ ಎಂಬಾತನಿಗೆ ತಲಪಿಸಿ,’

ಹೀಗೆ ಬರೆದು, ಕಾಗದವನ್ನು ಕೋಸೆಟ್ಟಳಿಗೆ ಕೊಡುವಂತೆ ಒಬ್ಬ ಆಳಿನ ಕೈಗೆ ಕೊಟ್ಟು ಕಳುಹಿಸಿದನು.
*****
ಮುಂದುವರೆಯುವುದು

ವಿಕ್ಬರ್ ಹ್ಯೂಗೋ ನ “ಲೆ ಮಿಸರಾ ಬಲ್ಸ್‌”
ಜೆ ಲ ಫಾರ್‍ಜ್ ರವರ ಸಂಕ್ಷೇಪ ಪ್ರತಿಯ ಅನುವಾದ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭಗವನ ಸ್ಮರಿಸು
Next post ಬಿದುರೇ ನೀನ್ಯಾರೀಗೊಲಿಯುವಳೇ

ಸಣ್ಣ ಕತೆ

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…