ಛಲೋ ಅಂದರ ನಡೀಬೇಕ
ಸಿದ್ಧರಾಮನ ಪೂಜೆಯಾಗ
ನಾನು ಕೂಡ ಹೋಗಬೇಕ ||
ನಾನು ಅಂದರೆ ನಾನೇ ಅಲ್ಲ
ನೀನು ಅಂದರೆ ನೀನೇ ಎಲ್ಲಾ
ಜೀವನ ಉಂಟು ಬೇವು ಬೆಲ್ಲ
ತಮ್ಮಾಽಽಽ !!

ಬೆಳಕಾಗೊವರೆಗೂ
ಕುಣಿಬೇಕ ಸಂತೆಯೊಳ
ಗೊಂದು ಮಾಳಿಗೆ ತರತರದ
ಗೊಂಬಿ| ದೊಂಬಿಯಾಗ
ಮಾರಾಟಮಾಡಬೇಕ ಸಾಗುತದಽಽಽ
ಜೀವನ| ಸಿದ್ಧರಾಮ ಪೂಜೆಯಾಗ
ನಾನು ಕೂಡ ಹೋಗಬೇಕ ನೋಡಬೇಕ
ತಮ್ಮಾಽಽಽ !!

ಜೋಳಿಗೆ ಒಂದು
ನೂರೆಂಟು ಹಸಿವು
ನೀಗಿಸೋಕೆ ಕಾಯಕ
ನರನಾಡಿಗಳಲ್ಲಿ ಕರ್ಮ
ಧರ್ಮದ ಉಸಿರು ಆಡಬೇಕ
ಸಿದ್ಧರಾಮನ ಪೂಜೆಯಾಗ
ನಾನು ಕೂಡ ಹೋಗಬೇಕ
ಹೋಗಿ ಒಪ್ಪಿಸಬೇಕ ತಮ್ಮಽಽಽ !!

ನಿದ್ದಿ ಹೋದ್ರ ಮಾಯದ
ಬಜಾರ ಕಂಡು ಕಾಣದ್ದು
ಬ್ಯಾಸರ ಮಲಗಿದ್ಹಂಗ
ಸಂಸಾರ | ಎಚ್ಚರಾಗಬೇಕ
ಬೆಚ್ಚನೆ ಗೂಡು ಹಚ್ಚ ಹೆಸರಾಗ
ಬೇಕ | ಸಿದ್ದರಾಮ ಪೂಜೆ
ಯಾಗ ನಾನು ಕೂಡ ಹೋಗಬೇಕ |
ನೂರೆಂಟು ಮಕ್ಕಳ ಹಡೀಬೇಕ
ಮುಕ್ತಿಗೆ ಸೋಪಾನ ಹಾಕಬೇಕ |
ತಮ್ಮಽಽಽ ||

ಒಳಗೊಂದು ಹೊರಗೊಂದು
ಮನಿ ಕಟ್ಟಬೇಕ| ಕಟ್ಟಕಡೆಯ
ಇಟ್ಟಿಗೆಗಳ ಇರಿಸಿ ಸಿದ್ದರಾಮನ
ಕರೀಬೇಕ| ನಾನು ಅವನ ಕೂಡ
ಹೋಗಬೇಕ| ಪೂಜೆ ಮಾಡಬೇಕ
ಕೂಡಿ ಹಾಡಬೇಕ ತಮ್ಮಾಽಽಽ ||
*****