ಚಿತ್ರ: ಪಿಕ್ಸಾಬೇ
ಚಿತ್ರ: ಪಿಕ್ಸಾಬೇ

“ಸತ್ಯವನ್ನೇ ಹೇಳುತ್ತೇನೆ. ಸತ್ಯವನ್ನಲ್ಲದೆ ಬೇರೇನೂ ಹೇಳುವುದಿಲ್ಲ” ಹೇಳಿಕೊಟ್ಟಂತೆ ನಾಲಗೆ ನುಡಿಯುತ್ತಿತ್ತು. ತಗ್ಗಿಸಿದ ತಲೆ ಮೇಲೆತ್ತಿರಲಿಲ್ಲ. ಭವಬಂಧನವ ಕಳಚಿದ ನಿರ್ಲಿಪ್ತತೆ ಅಲ್ಲಿತ್ತು. ಏನೋ ಕೇಳುತ್ತಿದ್ದಾರೆ. ಏನೋ ಉತ್ತರಿಸುತ್ತಿದ್ದಾಳೆ. ಎಲ್ಲೋ ಮನಸ್ಸು, ಎಲ್ಲೋ ಜ್ಞಾನ.

“ಆ ಕೊಲೇ ನೀವೇ ಮಾಡಿದ್ದಾ?”

ಹೌದೆನ್ನುವಂತೆ ಗೋಣಾಡಿಸಿದಳು.

‘ಯಾಕೆ?’ ಎನ್ನುವ ಪ್ರಶ್ನೆಗೆ ತಡಬಡಾಯಿಸಿದಳು.

“ಯಾಕೆ ಅವನನ್ನು ಕೊಂದ್ರಿ?” ಮತ್ತೆ ಪ್ರಶ್ನೆ.

ಯಾಕೆ? ಯಾಕೆ ಅಂತ ಹೇಳಲಿ. ತಾನೇ ಹೆತ್ತ ಮಗನನ್ನು, ತಾನೇ ಸಾಕಿ ಬೆಳೆಸಿದ ಮಗನನ್ನು ಯಾಕೆ ಕೊಂದೆ? ನಾನು ಯಾಕೆ ಕೊಂದೆ? ಏನಂತ ಹೇಳಲಿ ಈ ಕೋರ್ಟಿನಲ್ಲಿ? ಇಲ್ಲಾ, ಹೇಳಲಾರೆ. ಅದಕ್ಕೆ ಕಾರಣ ಏನು ಅನ್ನುವ ಸತ್ಯ ಯಾರಿಗೂ ಗೊತ್ತಾಗಬಾರದು, ಗೊತ್ತಾಗಬಾರದು.

“ಅವನನ್ನ ನೋಡ್ಕೋಳೋದಕ್ಕೆ ನನ್ ಕೈಲಿ ಆಗ್ತ ಇರಲಿಲ್ಲ. ನಾನು ಸತ್ತ ಮೇಲೆ ಅವನ ಗತಿ ಏನು ಅಂತ ನಾನು ಬದುಕಿರುವಾಗಲೇ ಅವನನ್ನು ಕೊಂದು ಬಿಟ್ಟೆ. ನಾನು ಪಾಪಿ, ನಾನು ಬದುಕಿರಬಾರದು. ನಂಗೆ ಮರಣದಂಡನೆ ಕೊಟ್ಟು ಬಿಡಿ.” ಹೇಳ್ತ ಹೇಳ್ತ ಬಿಕ್ಕಿ ಬಿಕ್ಕಿ ಅಳಲಾರಂಭಿಸಿದಳು. ವಿಚಾರಣೆ ಮುಂದಕ್ಕೆ ಹೋಯಿತು.

“ನಮಸ್ಕಾರ” ಹೆಣ್ಣು ಮಗಳೊಬ್ಬಳು ತನ್ನ ಭೇಟಿಗಾಗಿ ಬಂದು ತನಗೆ ನಮಸ್ಕರಿಸಿದಾಗ ಅಚ್ಚರಿಗೊಂಡಳು.

“ನಾನು ಲಾಯರ್. ನಿನ್ನೆ ನಿಮ್ಮ ಕೇಸಿನ ವಿಚಾರಣೆ ನೋಡ್ಡೆ. ಆ ವಿಷಯ ಮಾತಾಡೋಕೆ ಬಂದಿದ್ದೀನಿ.”

“ಮಾತಾಡೋಕೆ ಏನಿದೆ” ಎಂಬಂತೆ ನೋಡಿದಳು. ಆ ನೋಟವನ್ನು ಅರ್ಥ ಮಾಡಿಕೊಂಡಳು ಲಾಯರ್. ನಿಧಾನವಾಗಿ ಒಂದೊಂದೇ ಪದವನ್ನು ತೂಗಿ ಆಡತೊಡಗಿದಳು. “ನೀವು ಕೋರ್ಟಿನಲ್ಲಿ ಹೇಳಿದ್ದೆಲ್ಲ ಸುಳ್ಳು ಅಂತ ನಂಗೊತ್ತು. ಇಪ್ಪತ್ತೈದು ವರ್ಷ ಸಾಕಿದ ಮಗನನ್ನ ಇನ್ನು ಮುಂದೆ ಸಾಕಲು ಸಾಧ್ಯವಿಲ್ಲ ಅನ್ನೊ ಕಾರಣಕ್ಕೆ
ಯಾವ ಹೆತ್ತ ಕರುಳೂ ಕತ್ತು ಹಿಸುಕೋಕೆ ಒಪ್ಪೊಲ್ಲ. ನಿಮಗಿನ್ನೂ ವಯಸ್ಸಿದೆ. ಗಟ್ಟಿ ಮುಟ್ಟಾಗಿದ್ದೀರಿ. ಇನ್ನೂ ಎಷ್ಟೋ ವರ್ಷ ಮಗನನ್ನು ಸಾಕೋ ಸಾಮರ್ಥ್ಯ ಹೊಂದಿದ್ದೀರಿ. ನನಗನ್ನಿಸುತ್ತೆ ಕೊಲೆಗೆ ಬೇರೇನೋ ಕಾರಣವಿದೆ ಅಂತ”. ಎಲ್ಲವನ್ನೂ ಕೇಳಿಸಿಕೊಳ್ಳುತ್ತಿದ್ದವಳು ಕೊನೆಯ ವಾಕ್ಯ ಕೇಳಿ ಬೆಚ್ಚಿದಳು. ತಟ್ಟನೆ,

“ಇಲ್ಲ, ಬೇರೆ ಯಾವುದೇ ಕಾರಣ ಇಲ್ಲ. ನಂಗೆ ಸಾಕಾಗಿ ಹೋಗಿತ್ತು. ಉರುಳಿನಂತೆ ಕಟ್ಟಿಕೊಂಡಿರೋ ಅವನನ್ನು, ಯಾರಿಗೂ ಹೊರೆಯಾಗಿಸದಂತೆ, ಹೆತ್ತ ಕರುಳಿನ ಸಂಕಟದ ಬೆಂಕಿ ಆರಿಸಿಕೊಳ್ಳೋದಕ್ಕೆ ನಾನೇ ಕೈಯಾರೆ ಕೊಂದುಬಿಟ್ಟೆ. ಇಪ್ಪತ್ತೈದು ವರ್ಷದಿಂದ ಸಣ್ಣ ಮಗುವನ್ನು ನೋಡಿಕೊಳ್ಳುವಂತೆ ನೋಡಿಕೊಂಡಿದ್ದೇನೆ. ಬುದ್ಧಿ ಬೆಳೆಯದೆ ಇರೋ ಆ ಭೀಮನಂತಿರೋ ಅವನನ್ನು ಸಂಭಾಳಿಸೋ ಚೈತನ್ಯ ನಂಗೆ ಉಳಿದಿರಲಿಲ್ಲ. ರೋಸಿ ಹೋಗಿ ಕೊಂದು ಬಿಟ್ಟೆ ಅಷ್ಟೆ. ಇದೇ ಕಾರಣ, ಮತ್ತೇನೂ ಇಲ್ಲ” ಬಡಬಡನೆ ಹೇಳುವಾಗ ಅವಳ ಮಾತುಗಳಲ್ಲಿ ಆತಂಕವಿತ್ತು. ಏನನ್ನೋ ಬಚ್ಚಿಡುವ ಯತ್ನ ಲಾಯರ್ ಸೂಕ್ಷ್ಮದೃಷ್ಟಿಗೆ ಗೋಚರಿಸಿತ್ತು. ಈವತ್ತೇ ಎಲ್ಲವನ್ನು ಪ್ರಶ್ನಿಸುವುದು ಬೇಡವೆಂದು ಸುಮ್ಮನಾಗಿ ಬಿಟ್ಟಳು.

“ಸರಿ, ನಾ ಬರ್ತೀನಮ್ಮ.”

‘ಅಮ್ಮ’ ಪದ ಕಿವಿಗೆ ಬಿದ್ದೊಡನೆ ಗಕ್ಕನೇ ತಲೆ ಎತ್ತಿ ಲಾಯರನ್ನೆ ದಿಟ್ಟಿಸಿದಳು. ಇಂಥ ಮಗಳೊಬ್ಬಳು ನನಗಿದ್ದಿದ್ದರೆ… ವ್ಯಥೆ ಒತ್ತಿಕೊಂಡು ಬಂತು. ಇದ್ದೊಬ್ಬ ಮಗನಿಗೆ ಸೊಸೆ ಬರುವ ಅದೃಷ್ಟವೂ ಇಲ್ಲವಾಗಿತ್ತು. ನೋವಿನಿಂದ ಮುಖ ಕಿವುಚಿದಳು. ಲಾಯರ್ ಹೋಗುತ್ತಿರುವುದನ್ನೆ ನೋಡುತ್ತ ನಿಂತಳು.

ಒಂದೆರಡು ದಿನ ಕಳೆದು ಮತ್ತೆ ಲಾಯರ್ ಅವಳನ್ನು ನೋಡಲು ಬಂದಾಗ ಅಸಹನೆಯಿಂದ ವ್ಯಗ್ರಳಾದಳು.

“ಪದೇ ಪದೇ ಈ ರೀತಿ ಬಂದು ಯಾಕೆ ನಂಗೆ ತೊಂದ್ರೆ ಕೊಡ್ತೀರಾ. ನೇಣುಗಂಬ ಏರೋಕೆ ದಿನಗಳನು ಎಣಿಸ್ತಾ ಇರೋಳು ನಾನು. ನನ್ನಿಂದ ನಿಮ್ಗೇನು ಆಗಬೇಕಾಗಿದೆ?”

“ದಯವಿಟು ಕ್ಷಮ್ಸಿ ನನ್ನ. ನಿಮ್ಮನ್ನ ನೇಣುಗಂಬದಿಂದ ಬಿಡಿಸಬೇಕು ಅಂತಾನೇ ಈ ರಿಸ್ಕ್ ತಗೋತಿದೀನಿ. ನಮ್ಮ ಕಾನೂನು ಏನು ಹೇಳುತ್ತೆ ಗೊತ್ತಾ? ಹತ್ತು
ಅಪರಾಧಿಗಳಿಗೆ ಶಿಕ್ಷೆ ಆಗದೆ ಇದ್ರೂ ಚಿಂತೆ ಇಲ್ಲ. ಆದರೆ ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು ಅಂತ. ನೀವು ನಿರಪರಾಧಿ ಅಂತ ನನ್ನ ಮನಸ್ಸು ಹೇಳ್ತ ಇದೆ. ಒಂದು ವೇಳೆ ಅಪರಾಧ ಮಾಡಿದ್ರೂ ಅದಕ್ಕೇನೊ ಬಲವಾದ ಕಾರಣ ಇದ್ದೇ ಇದೆ. ಆ ಕಾರಣ ಏನು ಅಂತ ತಿಳ್ಕೊಂಡು ನಿಮ್ಮನ್ನ ರಕ್ಷಿಸಬೇಕು ಅಂತ ನಾ ನಿರ್ಧಾರ ಮಾಡಿದ್ದೀನಿ” ದೃಢವಾಗಿ, ನೇರವಾಗಿ ನುಡಿದಳು.

“ನಿಂಗ್ಯಾಕಮ್ಮ ಇಂಥ ಹುಚ್ಚು. ಅಪರಾಧಿ ನಾನೇ ಅಂತ ಹೇಳ್ಕೋತ ಇರುವಾಗ, ನೀ ರಕ್ಷಿಸುತ್ತೀನಿ ಅಂತ ಇದ್ದೀಯಲ್ಲಾ? ನಿಂಗೆ ತಲೆ ಕೆಟ್ಟಿದೆಯಾ? ಅಷ್ಟಕ್ಕೂ ನಾನೇನು ನಿನ್ನ ನನ್ನ ಪರ ವಾದ ಮಾಡು ಅಂತ ಕೇಳ್ಕೊಂಡಿಲ್ಲ. ಮತ್ಯಾಕೆ ನಿಂಗೆ ಈ ಕೇಸಿನ ಮೇಲೆ ಆಸಕ್ತಿ?”

“ಕಾರಣ ಇದೆ ಅಮ್ಮ. ಕೆಲವು ವರ್ಷಗಳ ಕೆಳಗೆ ನನ್ನಮ್ಮ ತಾನು ಮಾಡದೆ ಇರೋ ಕೊಲೆಗೆ ಜೈಲಿಗೆ ಹೋದಳು. ನಿರಪರಾಧಿಯಾದರೂ ಈ ಪ್ರಪಂಚದಲ್ಲಿ ನನ್ನನ್ನು ಒಂಟಿಯಾಗಿ ಬಿಟ್ಟು ಗಲ್ಲಿಗೇರಿದಳು. ಅವತ್ತೆ… ಅವತ್ತೇ ನಿರ್ಧಾರ ಮಾಡಿಬಿಟ್ಟೆ. ನನ್ನ ಅಮ್ಮನ ಪರಿಸ್ಥಿತಿ ಮತ್ಯಾರಿಗೂ ಬರಬಾರದು, ಅಂಥ ಹೆಂಗಸರಿಗೆ ನಾನು ಸಹಾಯ ಮಾಡಬೇಕು ಅಂತ. ಬಹಳ ಕಷ್ಟಪಟ್ಟು ಲಾ ಓದಿದೆ. ನ್ಯಾಯದ ಪರ ವಾದ ಮಾಡು ಅಂತ ನನ್ನ ಯಾರೂ ಕೇಳಿಕೊಳ್ಳದೆ ಹೋದರೂ ನಾನಾಗೇ ಹೋರಾಡ್ತೀನಿ. ಈಗ್ಲೂ ಕೂಡ ಹಾಗೆ ಬಂದಿದ್ದೀನಿ.” ದೀರ್ಘವಾಗಿ ನುಡಿದವಳನ್ನೆ ಬೆರಗಿನಿಂದ ನೋಡಿದಳು. ಈ ಮುದ್ದು ಮುಖದ ಹಿಂದೆ ಇಷ್ಟೆಲ್ಲ ದುರಂತ ತುಂಬಿದೆಯೇ? ಕ್ಷಣ ಪರಿತಾಪ ಪಟ್ಟಳು. ತತ್ ಕ್ಷಣವೇ ಸೆಟೆದು ನಿಂತು,

“ಅಲ್ಲಮ್ಮ, ನೀನು ನಿರಪರಾಧಿಗಳಿಗೆ ಸಹಾಯ ಮಾಡ್ತೀನಿ ಅಂದೆ, ಸರಿ. ಆದ್ರೆ ನಾನು ಅಪರಾಧಿ, ನನ್ನ ಮಗನನ್ನು ನಾನೇ ಕೊಂದಿದ್ದೀನಿ, ಮಾಡಿದ ತಪ್ಪಿಗೆ
ಶಿಕ್ಷೆಯಾಗಲೇಬೇಕು ಅಲ್ವೇ?” ಕೇಳಿದಳು.

“ನಿಜಾ, ನೀವು ಅಪರಾಧ ಮಾಡಿದ್ದೀರಿ, ಆದರೆ ನಿಮ್ಮನಸ್ಸು ನೋಡಿದರೆ ಕೊಲೆಪಾತಕಿ ತರ ಕಾಣಲ್ಲ. ವಾತ್ಸಲ್ಯಮೂರ್ತಿಯಾಗಿ ಕಾಣೋ ನೀವು ಯಾಕೆ ಕೊಲೆ ಮಾಡಿದ್ರಿ?
ಬುದ್ಧಿನೇ ತಿಳೀದಿರೋ ಮಗನ್ನ ಕೊಂದಿದೀರಾ ಅಂದ್ರೆ ಅದರ ಹಿನ್ನೆಲೆ ಏನೋ ಇರಬೇಕು. ಹೇಳಿ, ಅದೇನು ಅಂತ. ಯಾವುದೇ ಪಾಯಿಂಟ್ ನಿಮ್ಮನಸ್ಸು ಈ ಕಂಬಿಗಳಿಂದೀಚೆಗೆ ತರೋದಿಕ್ಕೆ ನಂಗೆ ಸಹಾಯ ಮಾಡಬಹುದು. ಪ್ಲೀಸ್ ಹೇಳಿ ಅಮ್ಮ. ಸತ್ಯ ಏನು ಅಂತ ಹೇಳಿ” ಬಲವಂತಿಸಿದಳು.

“ಬೇಡ ಬೇಡ ಮಗೂ, ಆ ಕಾರಣ ಯಾರಿಗೋ ಗೊತ್ತಾಗಬಾರದು. ನಂಗೆ ಬಿಡುಗಡೆಯಾಗಬೇಕು ಅನ್ನೋ ಆಸೆ ಖಂಡಿತಾ ಇಲ್ಲ. ದಯವಿಟ್ಟು ನನ್ನ ಬಲವಂತ
ಮಾಡಬೇಡ, ಹೊರಟುಹೋಗು ಎಂದವಳೇ ಬೆನ್ನು ತಿರುಗಿಸಿ ಬಿಟ್ಟಳು. ಆಗವಳ ಕಣ್ಣಲ್ಲಿ ದಳದಳನೇ ಕಣ್ಣೀರು ಸುರಿಯುತ್ತಿತ್ತು. ತನ್ನನ್ನು ‘ಅಮ್ಮ’ ಎಂದು ಕರೆಯುತ್ತಿರುವ ಆ ಹೆಣ್ಣು ಮಗುವಿನೊಡನೆ ಕಠಿಣವಾಗಿ ಮಾತನಾಡಬೇಕಾದ ತನ್ನ ಮನಃಸ್ಥಿತಿಗೆ ಖೇದಗೊಂಡಳು.

“ನಿಮ್ಮ ಮನಸ್ಸು ಸರಿ ಇಲ್ಲ, ನಾ ಬರ್ತೀನಿ” ಎಂದು ಹೊರಟವಳನ್ನೆ ತಿರುಗಿ ನೋಡುವ ಧೈರ್ಯ ಸಾಲದೆ ಕಲ್ಲಿನಂತೆ ನಿಂತೇ ಇದ್ದಳು.

ವಾರ ಕಳೆದರೂ ಲಾಯರ್ ಬರದಿದ್ದಾಗ ನಿಶ್ಚಿಂತಳಾದಳು. ಮತ್ತೆ ಆಕೆ ಬರಲಾರಳೇನೋ ಎಂದುಕೊಂಡಾಗ ಮನ ನಿರಾಶೆಯಿಂದ ಕೊಂಚ ನರಳಿತು. ಆಕೆ ತನ್ನನ್ನು
‘ಅಮ್ಮ’ ಎನ್ನುವಾಗ ಈ ಮನಸ್ಸು ಅದೆಷ್ಟು ಸಂಭ್ರಮಿಸುತ್ತಿತ್ತು. ಈ ಮಗು ತನ್ನ ಮಗಳಾಗಿದ್ದಿದ್ದರೇ…. ಕಲ್ಪಿಸಿಯೇ ಸುಖಿಸುತ್ತಿದ್ದೆ. ಆಕೆಯನ್ನು ಕಾಣಬೇಕೆಂಬ ತವಕ ಹೆಚ್ಚಾಯಿತು ತಾನು ಅಂದು ಅಷ್ಟೊಂದು ಒರಟಾಗಿ ‘ಹೊರಟು ಹೋಗು’ ಎಂದಿದ್ದೆ. ಪಾಪ, ಆ ಹೆಣ್ಣು ಮಗುವಿನ ಮನಸ್ಸು ಅದೆಷ್ಟು ನೊಂದಿತೊ, ತನ್ನ ತಾಯಿಯನ್ನು ನನ್ನಲ್ಲಿ ಕಾಣಲು ಯತ್ನಿಸಿದ್ದಳು. ಕೊಂಚವೂ ಮರುಕ ತೋರದೆ ಒಳಿತನ್ನು ಬಯಸಿದ ಹೂ ಮನವನ್ನುನೋಯಿಸಿದೆನಲ್ಲ! ಪಶ್ಚಾತ್ತಾಪ ಪಟ್ಟಳು. ಆಕೆ ಬಾರದಿದ್ದುದೇ ಒಳಿತಾಯಿತು. ತನ್ನ ಮೃದು ಮಾತುಗಳಿಂದ ಎಲ್ಲಿ ತನ್ನ ಮನದೊಳಗಡಗಿರುವ ಸತ್ಯವನ್ನು ಬಯಲಿಗೆಳೆಯುವಳೊ ಎಂಬ ದಿಗಿಲು. ಅವಳ ಮಾತಿನ ಚತುರತೆಗೆ ಸೋತು ಎಲ್ಲಿ ತಾನು ಎಲ್ಲವನ್ನು ಹೇಳಿಬಿಡುವೆನೋ ಎಂಬ ಆತಂಕ ಇದೀಗ ದೂರಾಗಿತ್ತು. ಜೈಲಿನಲ್ಲಿ ಕುಳಿತೇ ದಿನಗಳನ್ನು ಎಣಿಸತೊಡಗಿದಳು.

ತನಗೆ ಜಾಮೀನಿನ ಮೇಲೆ ಬಿಡುಗಡೆಯಾಗುತ್ತಿದೆ ಎಂದರೆ ನಂಬದಾದಳು. ತಾನೇ ಕೊಲೆಪಾತಕಿ ಎಂದರೂ ಈ ನ್ಯಾಯಾಲಯ ತನ್ನನ್ನು ಬಿಡುವುದೇ? ತನಗೇಕೆ ಜಾಮೀನು?
ತಾನು ಜೈಲಿನಲ್ಲಿಯೆ ಇರುವೆ ಎಂದು ಪ್ರತಿಭಟಿಸಿದಳು. “ನೋಡಿ, ನಿಮ್ಮ ಮನಃಸ್ಥಿತಿ ಸರಿ ಇಲ್ಲ ಅಂತ ನಿಮ್ಮ ಲಾಯರ್ ಜಾಮೀನು ಕೊಡಿಸಿದ್ದಾರೆ. ನೀವು ಈಗ ಹೋಗಿ. ಕೋರ್ಟಿನಲ್ಲಿ ಅದೇನು ಹೇಳುವಿರೋ ಹೇಳುವಿರಂತೆ” ಎಂದು ಬಲವಂತದಿಂದ ಹೊರಕಳಿಸಿದ್ದರು.

ಹೊರಬಂದವಳೇ ಲಾಯರನ್ನು ನೋಡಿ ಸ್ತಬ್ಧಳಾದಳು. ಹತ್ತಿರ ಬಂದ ಲಾಯರ್ ಆಕೆಯ ಭುಜದ ಸುತ್ತಲೂ ಕೈಹಾಕಿ ‘ನಡೆಯಿರಿ’ ಎಂದು ಮುನ್ನೆಡೆಸಿದಳು.

“ವಸುಧಾ, ನಿಂಗ್ಯಾಕಮ್ಮ ನನ್ನ ಮೇಲೆ ಇಷ್ಟೊಂದು ಕರುಣೆ? ಹೆತ್ತ ಮಗನನ್ನೇ ಕಳ್ಕೊಂಡಿರೋ ಕೊಲೆಪಾತಕಿ ಅಂತ ಗೊತ್ತಿದ್ದೂ ನೀನ್ಯಾಕೆ ನನ್ನ ಉಳಿಸೋಕೆ ನೋಡ್ತ
ಇದ್ದೀಯಾ? ತಾಯಿ ಅನ್ನೋ ಪದಕ್ಕೆ ಕಳಂಕ ತರೋ ಕೆಟ್ಟ ಹೆಂಗಸು ನಾನು, ಪ್ರಪಂಚದಲ್ಲಿ ಎಲ್ಲಿಯಾದರೂ ನೋಡಿದ್ದೀಯಾ ರಕ್ಷಿಸಬೇಕಾದ ತಾಯಿ, ತನ್ನ ಪ್ರಾಣವನ್ನೇ ಒತ್ತೆಯಿಟ್ಟು ಕಂದನ್ನ ಈ ಭೂಮಿಗೆ ತಂದು ಲಾಲನೆ ಪಾಲನೆ ಮಾಡಿ ದೊಡ್ಡವನಾಗಿ ಮಾಡಿ, ಸಾಕಿದ, ತುತ್ತು ತಿನ್ನಿಸಿದ ಇದೇ ಕೈಗಳಿಂದ ಹೆತ್ತ ಮಗನುಸಿರು ನಿಲ್ಲಿಸಿದಂಥ, ಇಂಥ ಪಾಪಿಯನ್ನು ನೋಡಿದ್ದೀಯಾ? ನನ್ನ ಯಾಕೆ ಜೈಲಿನಿಂದ ಬಿಡಿಸಿಕೊಂಡು ಬಂದೆ? ನಾನು ಅಲ್ಲಿಯೇ ನೊಂದು ಬೆಂದು ಸಾಯಬೇಕಿತ್ತು.” ಬಿಕ್ಕಿಳಿಸಿ ಅಳಲಾರಂಭಿಸಿದಳು.

‘ಅಮ್ಮ, ಪ್ರಪಂಚದಲ್ಲಿ ಸಿಗಲಾರದಂಥ ತಾಯಿ ನೀವಮ್ಮ. ಹೆತ್ತ ಮಗು ಬುದ್ಧಿಹೀನ ಅಂತ ಗೊತ್ತಿದ್ದು ಬೆಳೆಸಿದ್ರಿ. ಬೆಳೆದ ದೇಹಕ್ಕೆ ಬುದ್ಧಿ ತಿಳಿಯದೆ ಹೋದರೂ ದೇಹದ ಹಸಿವಿಗೆ ಊಟ ನೀಡುವಂತೆ, ಕಾಮದ ಹಸಿವಿಗೂ ಊಟ ಕೊಡೋಕೆ ಪ್ರಯತ್ನಿಸಿದ ತಾಯಿ ನೀವು. ಬುದ್ಧಿ ಬೆಳೆಯದ ಮಗನ ಯೌವನದ ಆಸೆಗಳಿಗೆ ಸ್ಪಂದಿಸಿ ಅವನಿಗೊಂದು ಜತೆ ಹುಡುಕಿ ಕೊಡೋಕೆ ಸಿದ್ಧವಾದ್ರಿ. ಅದು ಸಿಗದೆ ಹೋದಾಗ ಹಣಕ್ಕೆ ದೇಹ ಮಾರಿಕೊಳ್ಳೋ ಹೆಣ್ಣಿನ ಬಳಿಯೇ ಮಗನನ್ನು ಕರೆದೊಯ್ದು ಅವನ ಕಾಮನೆ ತಣಿಸಿದ್ರಿ. ಬುದ್ಧಿಹೀನ ಮಗನನ್ನು ಪಡೆದ್ರೂ ಅವನಿಗಾಗಿ ನಿಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ರಿ. ಅಂಥ ದೇವತೆ ನೀವು.”

‘ಹಾಂ’ ಎಂದು ದಂಗಾಗಿ ನಿಂತುಬಿಟ್ಟಳು.

ಲಾಯರ್ ಹೇಳುತ್ತಿದ್ದರೆ ನಂಬದವಳಂತೆ ನೋಡಿದಳು. ಅವಳ ದೃಷ್ಟಿ, ಕೇಳುತ್ತಿದ್ದ ಪ್ರಶ್ನೆ ಅರ್ಥವಾಗಿ, ಅವಳ ತೊಡೆಯ ಮೇಲೆ ತನ್ನ ತಲೆ ಇರಿಸಿ,

“ಅಮ್ಮಾ, ಇದೆಲ್ಲ ನಂಗೆ ಹೇಗೆ ಗೊತ್ತಾಯ್ತು ಅಂತ ಆಶ್ಚರ್ಯನಾ? ನಾನು ಲಾಯರ್. ಹೇಗೆ ಸುದ್ದಿಗಳನ್ನು ಸಂಗ್ರಹಿಸಿಕೊಳ್ಳಬೇಕು ಅನ್ನೋದು ಚೆನ್ನಾಗಿ ಕಲಿತಿದ್ದೇನೆ.
ಇನ್ನಾದರೂ ನಂಗೆ ಏನು ನಡೀತು ಅಂತ ಹೇಳ್ತೀರಾ?” ತಾನು ಲಾಯರ್ ಎನ್ನುವುದನ್ನು ಮರೆತು ತನ್ನ ತೊಡೆ ಮೇಲೆ ತಲೆ ಇರಿಸಿದ್ದನ್ನು, ಅವಳ ಆತ್ಮೀಯತೆ, ತನ್ನ ಪರವಾಗಿರುವ ಕಾಳಜಿ ಎಲ್ಲವೂ ಅವಳ ಮನಸ್ಸಿನ ನಿರ್ಧಾರವನ್ನು ಸಡಿಲಿಸಿದವು. ಆಕೆಯ ಕೆನ್ನೆ ಸವರುತ್ತ ಮಾತೃತ್ವದ ಸವಿಯನ್ನು ಅನುಭವಿಸಿದಳು. ಆಕೆ ಮಗುವಾದಳು. ಈಕೆ ತಾಯಿಯಾದಳು. ಎಲ್ಲವನ್ನು ಹೇಳತೊಡಗಿದಳು.

ಮದುವೆಯಾಗಿ ಎಷ್ಟೋ ವರ್ಷಗಳ ಅನಂತರ ಬಯಸಿ ಬಯಸಿ ಪಡೆದ ಮಗು ಎಲ್ಲ ಮಕ್ಕಳಂತಲ್ಲ ಎಂದು ಅರಿವಾಗುವುದರೊಳಗಾಗಿ ಪತಿ ಈ ಪ್ರಪಂಚವನ್ನೇ
ಬಿಟ್ಟಾಗಿತ್ತು. ಬದುಕಿನ ಏಕೈಕ ಆಸರೆಯನ್ನು ಜತನದಿಂದ ಕಾಪಾಡತೊಡಗಿದಳು. ಅದು ಬುದ್ದಿಮಾಂದ್ಯವಾದರೂ ತಾ ಹೆತ್ತ ಮಗುವಲ್ಲವೇ, ಯಾವ ಕುಂದೂ ಎಣಿಸದೆ ಬೆಳೆಸಲಾರಂಭಿಸಿದಳು. ಪತಿಯ ಪೆನ್ಷನ್ ಹಣ, ಸ್ವಂತ ಗೂಡು ಇವರಿಬ್ಬರಿಗೆ ಸಾಕಾಗಿತ್ತು. ಮಗು ದೊಡ್ಡದಾಗುವ ತನಕ ಯಾವ ಸಮಸ್ಯೆಯೂ ಕಾಡಲಿಲ್ಲ. ಹರೆಯ ಕಾಲಿಡತೊಡಗಿದಂತೆ ದೇಹ ಏನನ್ನೋ ಬಯಸ್ತಿದೆಯೇನೋ ಅನ್ನುವ ಭ್ರಮೆ ಅಮ್ಮನನ್ನು ಕಾಡತೊಡಗಿತು. ಸರಿಯಾಗಿದ್ದಿದ್ದರೆ ಈ ವೇಳೆಗೆ ಮಗನ ಮದುವೆ ಮಾಡಿ ಮೊಮ್ಮಕ್ಕಳನ್ನು ಕಾಣಬೇಕಿತ್ತು. ಪಾಪ, ಮಗನೂ ಮನುಷ್ಯನಲ್ಲವೇ. ಎದೆ ಅಂತಃ ಕರಣದಿಂದ ಮಿಡಿಯಲಾರಂಭಿಸಿತು. ತುಂಬು ಹರೆಯದ ಮಗ ಹೆಂಗಸರನ್ನು ಕಂಡ ಕೂಡಲೇ ಅವರನ್ನು ಸಮೀಪಿಸಿ ಸ್ಪರ್ಶಿಸಲು ಹಾತೊರೆಯುವುದು, ಆ ಹೆಣ್ಣುಗಳು ಮಗುವಿನಂತೆ ಇವನನ್ನು ಟ್ರೀಟ್ ಮಾಡುವುದನ್ನು ಕಂಡಾಗಲೆಲ್ಲ ಮನಸ್ಸು ಮಗನಿಗೊಂದು ಮದುವೆ ಮಾಡಬೇಕೆಂದು ನಿರ್ಧರಿಸುತ್ತಿತ್ತು. ಆದರೆ ಹೆಣ್ಣು ಕೊಡುವವಯಾರು? ಯಾವ ಹೆಣ್ಣು ತಾನೇ ಇಂಥವನನ್ನು ಒಪ್ಪಿ ಮದುವೆಯಾದಾಳು? ಆದರೂ ಪ್ರಯತ್ನ ಬಿಡದೆ ಮುಂದುವರಿಸಿದಳು. ಆದರೆ ಅವಳಾಸೆ ಆಸೆಯಾಗಿಯೇ ಉಳಿಯಿತು.

ಹರೆಯದ ಬಯಕೆಗಳಿಂದ ತಟ್ಟಾಡುವ ಮಗನನ್ನು ಕಂಡಾಗಲೆಲ್ಲ ಪ್ರಕೃತಿ ಸಹಜವಾದ ಆಸೆಗಳಿಂದಲೂ ಮಗ ವಂಚಿತನಾಗಬೇಕಾಯಿತಲ್ಲ ಎಂದು ಮರುಗಿದಳು. ಯಾವುದೋ ಸಿನಿಮಾ ನೋಡಿ ಪ್ರೇರಿತಳಾದಳು. ಮಗನ ಸ್ಥಿತಿಗೊಂದು ಪರಿಹಾರ ಕಲ್ಪಿಸುವ ದಾರಿ ಗೋಚರಿಸಿಯೇ ಬಿಟ್ಟಿತು. ಕತ್ತಲಾದೊಡನೆ ಮಗನನ್ನು ಕರೆದೊಯ್ದು ನಿತ್ಯಸುಮಂಗಲಿಯ ಮನೆಯ ದಾರಿ ಹಿಡಿದಳು. ಅವಳು ಕೇಳಿದಷ್ಟು ಹಣ ನೀಡಿ ಅವಳೊಂದಿಗೆ ಮಗನನ್ನು ಒಳ ಕಳುಹಿಸಿ ಕೊಟ್ಟಳು.

ಅಂದು ನೆಮ್ಮದಿಯಿಂದ ನಿದ್ರಿಸಿದಳು. ಒಂದೆರಡು ಬಾರಿ ಈ ರೀತಿ ನಡೆದಿತ್ತೇನೋ. ಇದು ಹೀಗೇ ಸಾಗಲಿ ಎಂದೇನೋ ತಾಯಿ ಹೃದಯ ಬಯಸಿತ್ತು. ಆದರೆ ಹಣ
ಪಡೆದುಕೊಂಡಾಕೆ ಇನ್ನು ಮುಂದೆ ಇಲ್ಲಿಗೆ ಕರೆತರಬಾರದೆಂದು ನಿರ್ಬಂಧಿಸಿದಳು. ಹಣಕ್ಕಾಗಿಯೇ ದೇಹ ಮಾರಿಕೊಂಡರೂ ಇಂಥವನೊಂದಿಗೆ ಮಲಗಲು ಅಸಹ್ಯವಾಗುತ್ತದೆ ಎಂದು ಖಡಾಖಂಡಿತವಾಗಿ ನುಡಿದುಬಿಟ್ಟಳು.

ರುಚಿ ಕಂಡ ಬೆಕ್ಕು ಸುಮ್ಮನಿದ್ದೀತೇ, ಪಡೆದ ಸುಖ ಮೆಲುಕು ಹಾಕುತ್ತ ಅದಕ್ಕಾಗಿ ಹಾತೊರೆಯತೊಡಗಿತು. ಬುದ್ಧಿ ತಿಳಿಯದ ದೇಹಕ್ಕೆ ಯಾರನ್ನೂ ಗುರುತಿಸುವ ಶಕ್ತಿ ಇಲ್ಲವಾಗಿತ್ತು. ಮನೆಗೆ ಬರುವ ಯಾವ ಹೆಣ್ಣನ್ನಾದರೂ ಬಯಕೆಯಿಂದ ಅಪ್ಪಿಕೊಳ್ಳಲು ಹೋಗುತ್ತಿದ್ದ. ಮಗನನ್ನು ಹಿಡಿದಿಟ್ಟುಕೊಳ್ಳುವಲ್ಲಿ ಸೋತು ಹೋಗುತ್ತಿದ್ದಳು. ಎಲ್ಲೆಂದರಲ್ಲಿ ಓಡಿಯಾಡುತ್ತಿದ್ದ ಮಗ ಈಗ ರೂಮೊಳಗೆ ಬಂದಿ. ಯಾರೂ ಅವನ ಕಣ್ಣಿಗೆ ಬೀಳದಂತಿರಲು ಸಾಹಸ ಪಡುತ್ತಿದ್ದಳು. ಕಿಟಕಿಯಲ್ಲಿಯೇ ನೋಡಿ ಕಿರುಚುತ್ತಿದ್ದ. ಊಟ, ತಿಂಡಿಕೊಟ್ಟರೆ ಎತ್ತಿ ಎಸೆಯುತ್ತಿದ್ದ. ಮಗನ ಈ ಪರಿಸ್ಥಿತಿಗೆ ನೊಂದು ಬಸವಳಿದು ಹೋದಳು. ಇದಕ್ಕೇನು ಪರಿಹಾರ, ಇದಕ್ಕೇನು ಪರಿಹಾರ ಎಂದು ಗೋಳಿಡುವಂತಾಗಿತ್ತು. ಕೊನೆಗೊಮ್ಮೆ ಅವನಂಥವರೇ ಇರುವ ಶಾಲೆಯೊಂದರಲ್ಲಿ ಬಿಟ್ಟುಬಿಡುವುದೆಂದು ನಿರ್ಧರಿಸಿ ಎಲ್ಲವನ್ನೂ ಸಿದ್ಧಗೊಳಿಸಿದಳು.

ಕೊನೆಯ ರಾತ್ರಿ ಎಂದು ಮುದ್ದು ಮಗನನ್ನು ತಾನೇ ಕೈಯಾರೆ ಉಣಿಸಲು ತುತ್ತು ಬಾಯಿಗಿಡಲು ಹೋದರೆ ತಟ್ಟೆಯನ್ನೇ ಎತ್ತಿ ಎಸೆದು, ಕೋಪದಿಂದಲೋ,
ಆವೇಶದಿಂದಲೋ ಬುಸುಗುಡುತ್ತ, ಹೆತ್ತೂಡಲ ಭೇದವರಿಯದೆ ಜನ್ಮ ಕೊಟ್ಟಾಕೆಯನ್ನೆ ಅಪ್ಪಿ ಮುಲುಗೊಡತೊಡಗಿದ. ಆಘಾತಗೊಂಡ ಆಕೆ ಮಗನ ದೈತ್ಯ ಶಕ್ತಿಯ ಮುಂದೆ ಸೋಲತೊಡಗಿದಳು. ಎಲ್ಲಿತ್ತೋ ಆವೇಶ, ಜಾಡಿಸಿ ಒದ್ದು, ಅವನನ್ನು ಕೆಳಗೆ ಬೀಳಿಸಿ, ಮಗ ಆಡಲೆಂದು ತಂದಿಟ್ಟಿದ್ದ ಕ್ರಿಕೆಟ್ ಬ್ಯಾಟನ್ನು ಎತ್ತಿ ಎತ್ತಿ ಬೀಸಿ ಹೊಡೆದಳು. ಏಟು ತಿಂದು ಕುಯ್ ಗುಡುತ್ತ ಅಳಲಾರಂಭಿಸಿದವನನ್ನೇ ತಿರಸ್ಕಾರದಿಂದ ನೋಡುತ್ತ, “ನೀನು ಬದುಕಿರಬಾರದು, ತಾಯಿಗೂ ಬೇರೆ ಹೆಣ್ಣಿಗೂ ವ್ಯತ್ಯಾಸ ತಿಳಿಯದ ನೀನು ಅಪಾಯಕಾರಿ, ನೀನಿನ್ನು ಬದುಕಿ ಏನು ಸಾಧಿಸಬೇಕಾಗಿದೆ, ಸಾಯಿ, ಸಾಯಿ” ಎಂದು ಹುಚ್ಚು ಹಿಡಿದವಳಂತೆ ಅವನ ಕತ್ತು ಹಿಸುಕಿದಳು. ವೇದನೆಯಿಂದ ಒದ್ದಾಡುತ್ತಿದ್ದ ಮಗನತ್ತ ಕ್ರೂರವಾಗಿ ನೋಡುತ್ತ ಮಗನ ಚಲನೆ ನಿಶ್ಚಲವಾಗುವ ತನಕ ಕುತ್ತಿಗೆ ಅಮುಕಿ ಹಿಡಿದಳು.

ನಿರ್ಭಾವದಿಂದ ಎಲ್ಲವನ್ನು ಹೇಳುತ್ತಿದ್ದರೆ ಕಲ್ಲಾಗಿ ಕೇಳಿಸಿಕೊಳ್ಳುತಿದ್ದಳು ಲಾಯರ್ ವಸುಧಾ.

“ಇದೇ ಕಾರಣ ನಾನು ಮಗನನ್ನು ಕೊಲ್ಲಲು, ಮಗ ತಾಯಿಯನ್ನೇ ತನ್ನ ಬಯಕೆ ತೀರಿಸಿಕೊಳ್ಳಲು ಅಪ್ಪಿಕೊಂಡ ಎಂದು ಕೋರ್ಟಿನಲ್ಲಿ ನುಡಿಯಲೇ? ಇಂಥ
ಬುದ್ಧಿಮಾಂದ್ಯರೆಲ್ಲ ಹೀಗೆಯೇ ಇರಬಹುದೆಂಬ ಸಂಶಯ ಎಲ್ಲಿರಿಗೂ ಉಂಟುಮಾಡಿಸಲೇ? ಹೇಳು ವಸುಧಾ. ಯಾವ ಬಾಯಿಂದ ಮಾನ ಉಳಿಸಿಕೊಳ್ಳಲು
ಮಗನನ್ನು ಕೊಂದೆ ಅಂತ ಹೇಳಲಿ? ಹೀಗೆ ಹೇಳಿ ‘ಎಲ್ಲರ ಮುಂದೂ ಸತ್ತು ಸ್ವರ್ಗದಲ್ಲಿರೋ ಆ ಅಮಾಯಕ ಮಗನ ಗೌರವ ಕಳೆಯಲೇ? ಹೇಳು ವಸುಧಾ ಹೇಳು.’
ಕಣ್ಣೀರು ತಡೆಯಿಲ್ಲದಂತೆ ಸುರಿಯುತ್ತಿತ್ತು.

“ಬೇಡ ಅಮ್ಮ ಬೇಡ, ಈ ಕಥೆ ಯಾರಿಗೂ ಗೊತ್ತಾಗುವುದು ಬೇಡ. ಇದು ನಮ್ಮಿಬ್ಬರ ನಡುವೆಯೇ ಸತ್ತುತೋಗಲಿ. ಬೇರೆ ಏನಾದ್ರೂ ಉಪಾಯ ಹುಡುಕ್ತೀನಿ. ಅವನ ಸಾವು ಕೊಲೆ ಅಲ್ಲ ಅಂತ ನಿರೂಪಿಸುತ್ತೇನೆ. ನೀವೀಗ ನಿಮ್ಮ ವಾದ ಬದಲಿಸಬೇಕು. ಮಗನ ಸಾವಿನಿಂದ ಶಾಕ್ ಉಂಟಾಗಿ, ತಾನಿನ್ನು ಬದುಕಬೇಕೆಂಬ ಆಸೆ ಇಲ್ಲದೆ
ಹಾಗೆ ನುಡಿದೆ ಎಂದು ಕೋರ್ಟಿನಲ್ಲಿ ಹೇಳಿಬಿಡಿ. ಮುಂದೆ ಎಲ್ಲವನ್ನು ನಾನು ನೋಡಿಕೊಳ್ಳುತ್ತೇನೆ. ನೀವೀಗ ಒಂಟಿಯಲ್ಲ, ನಿಮ್ಮ ಜತೆ ನಾನಿದ್ದೇನೆ.
ಕಳೆದುಹೋಗಿರೋ ತಾಯಿ ನನಗೆ ಸಿಕ್ಕಿದ್ದಾಳೆ. ಮತ್ತೆ ಅವಳನ್ನು ಕಳೆದುಕೊಳ್ಳಲಾರೆ” ಎಂದೆಲ್ಲ ವಸುಧಾ ಹೇಳುತ್ತಿದ್ದರೆ ವಾತ್ಸಲ್ಯದ ಬುಗ್ಗೆ ಎದ್ದು ಆ ಸಿಂಚನದಿಂದ ತೊಯ್ದು ಹೋದಳು.
*****