ಅಧ್ಯಯನ, ಅಭಿವೃದ್ಧಿ ಮತ್ತು ಹಸಿವಿನ ಭಾಷೆ (ಕನ್ನಡ ವಿಶ್ವವಿದ್ಯಾಲಯದ ಘಟಿಕೋತ್ಸವ ಭಾಷಣ)

ಅಧ್ಯಯನ, ಅಭಿವೃದ್ಧಿ ಮತ್ತು ಹಸಿವಿನ ಭಾಷೆ (ಕನ್ನಡ ವಿಶ್ವವಿದ್ಯಾಲಯದ ಘಟಿಕೋತ್ಸವ ಭಾಷಣ)

ಕನ್ನಡ ವಿಶ್ವವಿದ್ಯಾಲಯದ ೧೭ನೇ ನುಡಿಹಬ್ಬದಲ್ಲಿ ಪ್ರತಿಷ್ಠಿತ ನಾಡೋಜ ಪದವಿ, ಡಿ.ಲಿಟ್., ಪಿಎಚ್.ಡಿ., ಎಂ.ಫಿಲ್. ಪದವಿಗಳನ್ನು ನೀಡಿ ನುಡಿಹಬ್ಬವನ್ನು ಅರ್ಥಪೂರ್ಣವಾಗಿಸಲು ಬಂದಿರುವ ಕರ್ನಾಟಕ ರಾಜ್ಯದ ರಾಜ್ಯಪಾಲರೂ ಕನ್ನಡ ವಿಶ್ವವಿದ್ಯಾಲಯದ ಕುಲಾಧಿಪತಿಗಳೂ ಆದ ಘನತೆವೆತ್ತ ಸನ್ಮಾನ್ಯ ರಾಮೇಶ್ವರ ಠಾಕೂರ್ ಅವರೆ, ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಸಚಿವರೂ, ಕನ್ನಡ ವಿಶ್ವವಿದ್ಯಾಲಯದ ಸಮ ಕುಲಾಧಿಪತಿಗಳೂ ಆದ ಸನ್ಮಾನ್ಯ ಶ್ರೀ ಅರವಿಂದ ಲಿಂಬಾವಳಿ ಅವರೆ, ಕನ್ನಡ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ ಪುರಸ್ಕೃತರಾದ ಪ್ರೊ. ಎಲ್. ಬಸವರಾಜು ಅವರೆ, ಪ್ರೊ. ಯು.ಆರ್. ಅನಂತಮೂರ್ತಿ ಅವರೆ, ಶ್ರೀ ಯಡ್ರಾಮನಹಳ್ಳಿ ದೊಡ್ಡ ಭರಮಪ್ಪ ಅವರೆ, ಪ್ರೊ. ಕಮಲಾ ಹಂಪನಾ ಅವರೆ, ಪ್ರೊ. ಶ್ರೀನಿವಾಸ ಹಾವನೂರ ಅವರೆ, ವಿವಿಧ ಪದವಿಗಳನ್ನು ಪಡೆಯಲಿರುವ ಸಂಶೋಧಕರೆ, ಕನ್ನಡ ವಿಶ್ವವಿದ್ಯಾಲಯದ ಅಧ್ಯಾಪಕ ಬಳಗದವರೆ, ಆಡಳಿತ ಸಿಬ್ಬಂದಿವರ್ಗದವರೆ, ಮಾಧ್ಯಮದ ಮಿತ್ರರೆ, ಆಹ್ವಾನಿತರೆ, ಸಮಸ್ತ ಬಂಧುಗಳೆ, ಕನ್ನಡ ವಿಶ್ವವಿದ್ಯಾಲಯದ ಘಟಿಕೋತ್ಸವ ಭಾಷಣ ಮಾಡುವ ಗೌರವವನ್ನು ನನಗೆ ಕೊಟ್ಟಿದ್ದಕ್ಕೆ ಕುಲಪತಿಗಳಾದ ಡಾ. ಮುರಿಗೆಪ್ಪನವರಾದಿಯಾಗಿ ಸಂಬಂಧಪಟ್ಟ ಸಮಸ್ತರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಅಂತೆಯೇ ‘ನಾಡೋಜ’ ಗೌರವಕ್ಕೆ ಪಾತ್ರರಾದ ಎಲ್ಲರಿಗೂ ಅಭಿನಂದನೆಗಳನ್ನು ಅರ್ಪಿಸುತ್ತೇನೆ.

ಇಂದು ನಮ್ಮ ಶಿಕ್ಷಣದ ಸ್ವರೂಪ ಮತ್ತು ಆದ್ಯತೆಗಳು ಬದಲಾಗುತ್ತಿವೆ. ಶಿಕ್ಷಣವಷ್ಟೇ ಅಲ್ಲ, ಬದುಕಿನ ಆದ್ಯತೆಗಳು ಬದಲಾಗುತ್ತ, ಮೌಲ್ಯಗಳು ಶಿಥಿಲಗೊಳ್ಳುತ್ತ, ಆದರ್ಶದ ಮಾದರಿಗಳು ಪಲ್ಲಟಗೊಳ್ಳುತ್ತಿವೆ. ನನಗನ್ನಿಸಿದಂತೆ ಇಂತಹ ಪಲ್ಲಟಗಳ ಮೂಲ ಕಾರಣ-ರಾಜಕೀಯ ವ್ಯವಸ್ಥೆಯು ಅಳವಡಿಸಿಕೊಳ್ಳುವ ಮತ್ತು ಅನುಷ್ಠಾನಗೊಳಿಸುವ ಸಾಮಾಜಿಕ-ಆರ್ಥಿಕ ನೀತಿ. ನಮ್ಮ ದೇಶದಲ್ಲಿ ಮಿಶ್ರ ಆರ್ಥಿಕ ನೀತಿಯು ಅನುಷ್ಠಾನದಲ್ಲಿದ್ದ ಸಮಾಜದ ಸ್ವರೂಪಕ್ಕೂ ಮುಕ್ತ ಆರ್ಥಿಕ ನೀತಿಯು ಮುಂಚೂಣಿಗೆ ಬಂದಿರುವ ಇಂದಿನ ಸಮಾಜದ ಸ್ವರೂಪಕ್ಕೂ ವ್ಯತ್ಯಾಸವಾಗಿರುವುದನ್ನು ಯಾರಾದರೂ ಗುರುತಿಸಬಹುದು. ಕೈಗಾರಿಕೀಕರಣದ ಸಂದರ್ಭದಲ್ಲೂ ಇಂತಹ ವ್ಯತ್ಯಾಸಗಳು ಸಂಭವಿಸಿದ್ದವು. ಆದರೆ ಆ ವ್ಯತ್ಯಾಸಗಳು ವಿಕಾಸಮುಖಿಯಾಗಿದ್ದವು. ಗ್ರಾಮೀಣ ಆರ್ಥಿಕತೆಯಲ್ಲಿ ತಳಮಳವನ್ನುಂಟು ಮಾಡಿದರೂ ಕೈಗಾರಿಕೀಕರಣವು ಸಾಮೂಹಿಕ ಉತ್ಪಾದನೆಗೆ ಮನುಷ್ಯರನ್ನು ಒಗ್ಗಿಸುವ ಮೂಲಕ ಜಾತಿಮೂಲ ಮನಸ್ಥಿತಿಯನ್ನು ಅಲುಗಾಡಿಸಿತು. ಕುಲಮೂಲ ಪದ್ಧತಿಯ ಆರ್ಥಿಕತೆಯನ್ನು ತಕ್ಕಮಟ್ಟಿಗಾದರೂ ಬದಲಾಯಿಸಿತು. ಆ ಮೂಲಕ ಜಾತಿಪದ್ಧತಿಗೂ ಆರ್ಥಿಕ ಪದ್ಧತಿಗೂ ಇದ್ದ ಸಾಂಪ್ರದಾಯಿಕ ಸಂಬಂಧದ ಜಡಸ್ಥಿತಿಯಲ್ಲಿ ನಡುಕ ಹುಟ್ಟಿಸಿತು. ಕುಲ ಮತ್ತು ಕಸುಬುಗಳ ನಡುವಿನ ಬಂಧದಲ್ಲಿ ಬಿರುಕು ಮೂಡಿಸಿತು. ಇದರ ಫಲವಾಗಿ ನಿರ್ದಿಷ್ಟ ಜಾತಿ ಅಥವಾ ಕುಲದವರು ನಿರ್ದಿಷ್ಟ ಕಸುಬಿನಲ್ಲೇ ಕಡೆಯವರೆಗೂ ತೊಡಗಿಸಿಕೊಳ್ಳಬೇಕೆಂಬ ಸಾಮಾಜಿಕ ನೀತಿ ನಿದ್ದೆಗೆಟ್ಟಿತು. ನಿಜ; ಎಲ್ಲವೂ ಬದಲಾಗಲಿಲ್ಲ; ಜಾತಿಪದ್ಧತಿ ಸಂಪೂರ್ಣ ನಾಶವಾಗಲಿಲ್ಲ. ಆದರೆ ಶಿಥಿಲಗೊಂಡದ್ದು, ಸ್ಥಿತ್ಯಂತರಗೊಂಡದ್ದು ಸತ್ಯ. ಇದಕ್ಕೆ ಕೈಗಾರಿಕೀಕರಣ ಮತ್ತು ಮಿಶ್ರ ಆರ್ಥಿಕ ನೀತಿಗಳು ಕಾರಣವಾದಂತೆ ಶಿಕ್ಷಣದ ಪ್ರಜಾಪ್ರಭುತ್ವೀಕರಣವೂ ಕಾರಣವಾಯಿತು. ಸರ್ವರಿಗೂ ಶಿಕ್ಷಣವನ್ನು ತಲುಪಿಸುವ ನೀತಿಯಿಂದ ಈ ಪ್ರಜಾಪ್ರಭುತ್ವೀಕರಣ ಪ್ರಾರಂಭವಾಯಿತು.

ಇಪ್ಪತ್ತನೇ ಶತಮಾನದ ಸತ್ವ ಇರುವುದೇ ಇಲ್ಲಿ : ಸಾಮಾಜಿಕ-ಆರ್ಥಿಕ ಸ್ವರೂಪದಲ್ಲಿ ಕಾಣಿಸಿಕೊಂಡ ಸ್ಥಿತ್ಯಂತರದ ಸೂಕ್ಷ್ಮಗಳು, ಶಿಕ್ಷಣದ ಪ್ರಜಾಪ್ರಭುತ್ವೀಕರಣದ ದಿಟ್ಟ ಹೆಜ್ಜೆಗಳು, ಹೊಸ ನೋಟದ ಚಿಂತನೆಗಳು, ಪ್ರಜಾಸತ್ತಾತ್ಮಕ ವಾಗ್ವಾದಗಳು, ಇಪ್ಪತ್ತನೇ ಶತಮಾನವನ್ನು ಜೀವಂತವಾಗಿಟ್ಟವು; ಬಹುಮುಖೀ ನೆಲೆಗಳ ಮೂಲಕ ಮನುಷ್ಯ ಮನಸ್ಸಿನಲ್ಲಿ ಮಿಂಚಿನ ಸಂಚಾರ ಉಂಟುಮಾಡಿದವು.

ಆದರೆ ಇಪ್ಪತ್ತೊಂದನೆಯ ಶತಮಾನದ ವಿಷಯದಲ್ಲಿ ಇದೇ ಮಾತನ್ನು ಹೇಳುವಂತಿಲ್ಲ. ಇಪ್ಪತ್ತನೇ ಶತಮಾನದ ಕೊನೆಯ ದಶಕದಲ್ಲಿ ಆರಂಭವಾದ ಮುಕ್ತ ಆರ್ಥಿಕ ನೀತಿಯ ಪರಿಣಾಮವಾಗಿ ನಮ್ಮ ಸಾಮಾಜಿಕ-ಶೈಕ್ಷಣಿಕ ಚಿತ್ರ ಬದಲಾಗತೊಡಗಿತು. ಇಪ್ಪತ್ತನೆಯ ಶತಮಾನದಲ್ಲಿ ಮೇಲುಗೈ ಪಡೆದ ಸಾಮಾಜಿಕ-ಆರ್ಥಿಕ ವಿಮೋಚನೆಯ ಒತ್ತಾಸೆಗಳು ಬತ್ತಿ ಹೋಗುವ ವಿಷಾದವನ್ನೇ ನೆತ್ತಿ ಮೇಲಿಟ್ಟುಕೊಂಡು ಮೆರೆಸಿದ ಮುಕ್ತ ಮಕುಟಧಾರಿಗಳ ಅಟ್ಟಹಾಸ ಹೆಚ್ಚಾಗ ತೊಡಗಿತು. ಅಟ್ಟಹಾಸವನ್ನೇ ಮಂದಹಾಸವೆಂದು ಚಿತ್ರಿಸುವ ವಿಚಿತ್ರ ವೈಖರಿ ಮೇಲುಗೈ ಪಡೆಯುತ್ತ ಬಂತು. ಇಂತಹ ಸನ್ನಿವೇಶಕ್ಕೆ ನಾಂದಿ ಹಾಡಿದ್ದು ೧೯೯೨ನೇ ಇಸವಿ. ಶ್ರೀ ನರಸಿಂಹರಾವ್ ಮತ್ತು ಡಾ. ಮನಮೋಹನ್ ಸಿಂಗ್ ನೇತೃತ್ವದಲ್ಲಿ ಅಂದಿನ (ಕಾಂಗ್ರೆಸ್) ಸರ್ಕಾರವು ಮುಕ್ತ ಆರ್ಥಿಕ ನೀತಿಗೆ ನಾಂದಿ ಹಾಡಿತು. ಇದೇ ವರ್ಷ ಕೆಲವು ಬಿ.ಜೆ.ಪಿ. ನಾಯಕರ ನೇತೃತ್ವದಲ್ಲಿ ಹಿಂದೂ ಮೂಲಭೂತವಾದಿಗಳಿಂದ ಬಾಬರಿ ಮಸೀದಿಯ ಮೇಲೆ ದಾಳಿ ನಡೆಯಿತು. ಈ ಎರಡು ಘಟನೆಗಳು ಒಂದೇ ವರ್ಷದಲ್ಲಿ ಸಂಭವಿಸಿದ್ದು ಕಾಕತಾಳೀಯವಾಗಿರಬಹುದಾದರೂ ನಮ್ಮ ದೇಶದ ಬಹುಮುಖೀ ನೆಲೆಗಳನ್ನು ನಾಶ ಮಾಡುವ ಎರಡು ಆಕ್ರಮಣಕಾರಿ ಪ್ರಯತ್ನಗಳಾಗಿ ಚರಿತ್ರೆಯಲ್ಲಿ ದಾಖಲಾಗುತ್ತವೆ. ಒಂದು-ಮಿಶ್ರ ಆರ್ಥಿಕ ಪದ್ಧತಿಗೆ ವಿರುದ್ಧವಾದ ಕ್ರಿಯೆ. ಇನ್ನೊಂದು-ಬಹುಧರ್ಮೀಯ ಪದ್ಧತಿಗೆ ವಿರುದ್ಧವಾದ ಕ್ರಿಯೆ. ಒಂದು-ಆರ್ಥಿಕ ಮೂಲಭೂತವಾದ; ಇನ್ನೊಂದು-ಧಾರ್ಮಿಕ ಮೂಲಭೂತವಾದ.

ಹೆಸರಿಗೆ ಮಾತ್ರ ‘ಮುಕ್ತ’ ಎನಿಸಿಕೊಂಡ ಮಾರುಕಟ್ಟೆ ಕೇಂದ್ರಿತ ಆರ್ಥಿಕ ಪದ್ಧತಿಯು ಏಕಮುಖೀ ಆರ್ಥಿಕ ನೀತಿಯನ್ನು ಪ್ರತಿಪಾದಿಸುವ ಮೂಲಕ ಆರ್ಥಿಕ ಮೂಲಭೂತವಾದವಾದರೆ, ಏಕಧರ್ಮ ಶ್ರೇಷ್ಠತೆಯನ್ನಷ್ಟೇ ಆದರ್ಶ ಮಾದರಿ ಮಾಡಿಕೊಂಡ ಪ್ರವೃತ್ತಿಯು ಧಾರ್ಮಿಕ ಮೂಲಭೂತವಾದವಾಗುತ್ತದೆ.

ಇಪ್ಪತ್ತನೇ ಶತಮಾನದಿಂದ ಹೆಚ್ಚಾಗುತ್ತ ಬಂದ ಮಾರುಕಟ್ಟೆ ಮತ್ತು ಮಿಲಿಟರಿ ಮನೋ ಧರ್ಮವು ಯುದ್ಧೋನ್ಮಾದವನ್ನು ಮುಂಚೂಣಿಗೆ ತಂದು ನಿಲ್ಲಿಸಿದೆ. ಮಾರುಕಟ್ಟೆ ಮನೋಧರ್ಮವು ಲಾಭಕೋರತನಕ್ಕಾಗಿ ಸ್ಪರ್ಧಾಯುದ್ಧಕ್ಕೆ ಸನ್ನದ್ಧವಾದರೆ ಮಿಲಿಟರಿ ಮನೋಧರ್ಮವು ಸೈನಿಕ ಯುದ್ಧವನ್ನಷ್ಟೇ ಅಲ್ಲ, ಹುಸಿ ಸಂಸ್ಕೃತಿ ಪರವಾದ ಯುದ್ಧವನ್ನೂ ಗೆಲ್ಲಬೇಕೆಂಬ ಗುರಿಯನ್ನು ಹುರಿಗೊಳಿಸಿ ಧರ್ಮ-ಧರ್ಮಗಳ ನಡುವೆ ಹಣಾಹಣಿಯನ್ನು ತಂದಿಟ್ಟಿದೆ.

ಹೀಗೆ ಏಕಕಾಲಕ್ಕೆ ೧೯೯೨ರಲ್ಲಿ ಆಕ್ರಮಣಶೀಲವಾಗಿ ಆರಂಭಗೊಂಡ ಆರ್ಥಿಕ ಮತ್ತು ಧಾರ್ಮಿಕ ಮೂಲಭೂತವಾದಿಗಳು ಅನಂತರವೂ ಮುಂದುವರೆದು ನಮ್ಮ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸನ್ನಿವೇಶದ ಮೇಲೆ ಕೆಟ್ಟ ಪರಿಣಾಮಗಳನ್ನುಂಟುಮಾಡಿ ಅಧಿಕೃತಗೊಳ್ಳುತ್ತ ಬಂದ ದುರಂತ ನಮ್ಮದಾಗಿದೆ.

ಈ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯಗಳ ಶೈಕ್ಷಣಿಕ ಆದ್ಯತೆಯ ಬಗ್ಗೆ ಒಂದು ಸಾಂಕೇತಿಕ ಸಾಕ್ಷಿ ಒದಗಿಸಬಯಸುತ್ತೇನೆ. ಮುಕ್ತ ಆರ್ಥಿಕ ನೀತಿ ಬಂದ ಮೇಲೆ ವಿಶ್ವದ ವಿವಿಧ ವಿಶ್ವವಿದ್ಯಾಲಯಗಳ ಜೊತೆಗೆ ನಮ್ಮ ವಿಶ್ವವಿದ್ಯಾಲಯಗಳು ಮುಕ್ತವಾಗಿ ಶೈಕ್ಷಣಿಕ ಒಪ್ಪಂದಗಳನ್ನು ಮಾಡಿಕೊಳ್ಳತೊಡಗಿದವು. ಒಂದು ಮಾಹಿತಿಯ ಪ್ರಕಾರ ಅವುಗಳ ಶೇಕಡಾವಾರು ಸರಾಸರಿ ಹೀಗಿದೆ :
ವಾಣಿಜ್ಯ ವ್ಯವಸ್ಥಾಪನ (Business Management) – ೬೦%
ಹೋಟೆಲ್ ವ್ಯವಸ್ಥಾಪನ (Hotel Management) – ೧೫%
ವಾಸ್ತುಶಿಲ್ಪ (Architecture) – ೧೦%
ಫ್ಯಾಷನ್ ವಿನ್ಯಾಸ (Fashion Designing) – ೧೦%
ಮಾನವಿಕ (Humanities) – ೫%

ಮಾನವಿಕ ಜ್ಞಾನಶಾಖೆಗಳಿಗೆ ಸಂಬಂಧಿಸಿದಂತೆ ಆಗಿರುವ ಒಪ್ಪಂದಗಳು ಕೇವಲ ಶೇ. ೫ರಷ್ಟು ಎಂಬ ಅಂಶವು ಮುಕ್ತ ಆರ್ಥಿಕ ನೀತಿಯು ಉನ್ನತ ಶಿಕ್ಷಣವನ್ನು ‘ಮುಕ್ತವಾಗಿಸಿದ’ ಪರಿಯನ್ನು ಪರಿಚಯಿಸುತ್ತದೆ. ಅಂದರೆ ಶಿಕ್ಷಣವು ಉದ್ಯಮಮುಖಿಯಾಗಿ ಸಾಗುವುದಕ್ಕೂ ಮುಕ್ತ ಆರ್ಥಿಕ ನೀತಿಗೂ ಸಂಬಂಧವಿರುವುದನ್ನು ಇಲ್ಲಿ ಗುರುತಿಸಬಹುದು. ಮುಕ್ತ ಆರ್ಥಿಕತೆಗೂ ಮುಂಚಿನಿಂದ ನಮ್ಮ ದೇಶದಲ್ಲಿ ವೃತ್ತಿಶಿಕ್ಷಣಕ್ಕೆ ಪ್ರಾಶಸ್ತ್ರ ಕೊಡುವ ಪರಿಪಾಟ ಮತ್ತು ಶಿಕ್ಷಣದ ವ್ಯಾಪಾರೀಕರಣಗಳು ದಟ್ಟವಾಗಿಯೇ ಹಬ್ಬುತ್ತ ಬಂದಿವೆಯೆಂಬುದು ನಿಜ. ಆದರೆ ಮುಕ್ತ ಆರ್ಥಿಕ ನೀತಿಯು ಶಿಕ್ಷಣದ ವ್ಯಾಪಾರೀಕರಣ ಮತ್ತು ವೃತ್ತಿಶಿಕ್ಷಣದ ಆದ್ಯತೆಯನ್ನು ಉತ್ತುಂಗಕ್ಕೆ ಕೊಂಡೊಯ್ದು ಕ್ರಮಬದ್ಧಗೊಳಿಸಲು ಕಾರಣವಾಗಿದೆ. ಪ್ರಾಥಮಿಕ ಶಿಕ್ಷಣದ ಹಂತದಿಂದಲೇ ಅಂತರ್ ರಾಷ್ಟ್ರೀಯ ಹಣೆಪಟ್ಟಿಯ ಶಾಲೆಗಳು ಆರಂಭವಾಗಿ ವ್ಯಾಪಾರೀಕರಣಕ್ಕೆ ನಾಂದಿ ಹಾಡುತ್ತಿವೆ.

ಮುಕ್ತ ಆರ್ಥಿಕ ನೀತಿಗೆ ಪೂರಕವಾಗಿರುವ ಗ್ಯಾಟ್ ಒಪ್ಪಂದದಲ್ಲಿ ಶಿಕ್ಷಣ ಕ್ಷೇತ್ರದ ಪರಿಭಾಷೆಯೇ ಬದಲಾಗಿರುವುದನ್ನು ಗಮನಿಸಬಹುದು. ಗ್ಯಾಟ್ ಒಪ್ಪಂದವು ಶಿಕ್ಷಣಕ್ಷೇತ್ರವನ್ನು ಜ್ಞಾನೋದ್ಯಮ (Knowledge Industry) ಎಂದು ಕರೆದಿದೆ. ಈ ಉದ್ಯಮದಲ್ಲಿರುವ ಪ್ರಾಧ್ಯಾಪಕರನ್ನು “Knowledge Industry Workers’ ಎಂದೂ ವಿದ್ಯಾರ್ಥಿಗಳನ್ನು “Knowledge Industry Clients’ ಎಂದೂ ಕರೆಯಲಾಗಿದೆ. ಇದಕ್ಕೆ ಪೂರಕವಾಗಿ ವಿಶ್ವವಿದ್ಯಾಲಯಗಳಿಗೆ ‘Star’ ಗಳನ್ನು ನೀಡುವ ಪರಿಪಾಠವನ್ನು ವಿಶ್ವವಿದ್ಯಾಲಯ ಧನಸಹಾಯ ಆಯೋಗವು ಅನುಸರಿಸುತ್ತಿದೆ. ಹೋಟೆಲ್ ಉದ್ಯಮದ ‘Star’ ಪದ್ಧತಿಯು ವಿಶ್ವವಿದ್ಯಾಲಯಗಳಿಗೂ ವಿಸ್ತಾರಗೊಂಡಿದೆ. ಈ ಮೂಲಕ ಹೋಟೆಲ್ ಉದ್ಯಮದಂತೆಯೇ ಶಿಕ್ಷಣವೂ ಒಂದು ಉದ್ಯಮವೆಂದು ಸ್ವಯಂ ಸ್ಪೂರ್ತಿಯ ಸಮರ್ಥನೆ ನೀಡಿದಂತಾಗಿದೆ.

ಗ್ಯಾಟ್ ಒಪ್ಪಂದದ ಪರಿಭಾಷೆಯು ಕೇವಲ ಭಾಷೆಯ ಬದಲಾವಣೆಯಲ್ಲ. ಆರ್ಥಿಕ ನೀತಿಯ ಫಲವಾಗಿ ರೂಪುಗೊಂಡ ಶಿಕ್ಷಣ ನೀತಿ ಮತ್ತು ಪದ್ಧತಿಯ ದಿಕ್ಕೂಚಿ. ಇದು ಸೇವಾ ಕ್ಷೇತ್ರವೆಂದು ಪ್ರಸಿದ್ಧವಾಗಿದ್ದ ಶಿಕ್ಷಣಕ್ಷೇತ್ರವನ್ನು ಉದ್ಯಮವಲಯವಾಗಿ ಪರಿವರ್ತಿಸುವ ಸ್ಪಷ್ಟ ಪ್ರಯತ್ನ. ಒಟ್ಟಿನಲ್ಲಿ ಶಿಕ್ಷಣಸೇವೆ ಶಿಕ್ಷಣೋದ್ಯಮವಾಗುತ್ತಿದೆ. ಶಿಕ್ಷಣತಜ್ಞರ ಜಾಗವನ್ನು ಶಿಕ್ಷಣೋದ್ಯಮಿಗಳು ಅಲಂಕರಿಸುತ್ತಿದ್ದಾರೆ. ಈ ಎಲ್ಲ ಬೆಳವಣಿಗೆಗಳಿಂದ ಮೊದಲೇ ಹಿನ್ನಡೆ ಅನುಭವಿಸಿದ್ದ ಮಾತೃಭಾಷಾ ಮಾಧ್ಯಮದ ಶಿಕ್ಷಣವು ಈಗ ಸಂಪೂರ್ಣ ಹಿಂದಿನ ಸಾಲಿಗೆ ಸರಿಯುವ ಸನ್ನಿವೇಶ ಏರ್ಪಟ್ಟಿದೆ; ಉನ್ನತ ಶಿಕ್ಷಣದಲ್ಲಿ ವೃತ್ತಿಶಿಕ್ಷಣವೇ ಶ್ರೇಷ್ಠವೆಂಬಂತೆ ಶಿಕ್ಷಣದ ಸ್ವರೂಪ ಬದಲಾಗುತ್ತಿದೆ. ಇದರ ಫಲವಾಗಿ ಮಾತೃಭಾಷಾ ಶಿಕ್ಷಣ ಮತ್ತು ಸಾಮಾನ್ಯ ಶಿಕ್ಷಣಗಳಿಗೆ ದೊಡ್ಡ ಪೆಟ್ಟು ಬಿದ್ದಿದೆ. ಮಾನವಿಕ ಜ್ಞಾನಶಾಖೆಗಳನ್ನು ನಿರ್ಲಕ್ಷಿಸುವ ನಿಲುವಿನಿಂದಾಗಿ ವಿಶ್ವವಿದ್ಯಾಲಯಗಳು ವಾಣಿಜ್ಯ ವ್ಯಕ್ತಿತ್ವಗಳನ್ನು ರೂಪಿಸುವ ಕಾಯಕದಲ್ಲಿ ತೊಡಗುವಂತಾಗಿದೆ. ಇಷ್ಟಾದರೂ ಸಾಂಸ್ಕೃತಿಕ ಸೃಜನಶೀಲತೆ ನಿಂತಿಲ್ಲ ಎಂಬುದು ನಿಜ. ಆದರೆ ಸಾಂಸ್ಕೃತಿಕ ಸೃಜನಶೀಲತೆಯು ಶಿಕ್ಷಣಕ್ಷೇತ್ರದ ಆದ್ಯತೆಗಳಲ್ಲೊಂದಾಗಿಲ್ಲ. ಆದ್ಯತೆಯ ಪಟ್ಟಿಯಲ್ಲಿರುವುದು ಒತ್ತಟ್ಟಿಗಿರಲಿ, ಅದೊಂದು ಅನಿವಾರ್ಯ ಅಧ್ಯಯನವಾಗಬೇಕೆಂಬ ಆಸಕ್ತಿಯೂ ಕಾಣಿಸುತ್ತಿಲ್ಲ. ಅಷ್ಟೇಕೆ, ಮಾನವಿಕ, ಸಾಂಸ್ಕೃತಿಕ ಆದ್ಯತೆಗಳ ಪಲ್ಲಟದ ಜೊತೆಗೆ ಸಾಮಾನ್ಯ ವಿಜ್ಞಾನದ ಅಧ್ಯಯನಕ್ಕೂ ಆಂತಕವೊದಗಿದೆ. ಇಂಥ ಕ್ಲಿಷ್ಟಕರ ಸನ್ನಿವೇಶದಲ್ಲಿ ಕನ್ನಡ ವಿಶ್ವವಿದ್ಯಾಲಯದ ಪಾತ್ರವೇನು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಾಗಿದೆ.

ಕನ್ನಡ ವಿಶ್ವವಿದ್ಯಾಲಯವು ಕೇವಲ ಸಾಹಿತ್ಯಕ್ಕೆ ಸಂಬಂಧಿಸಿದ್ದಲ್ಲ. ಹಾಗೆ ನೋಡಿದರೆ ನಮ್ಮ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳು ಕನ್ನಡ ಸಾಹಿತ್ಯ ವಿಭಾಗಗಳನ್ನು ಹೊಂದಿವೆ. ಜೊತೆಗೆ ಜಾನಪದ ಅಧ್ಯಯನಕ್ಕೂ ತಕ್ಕ ಅವಕಾಶವನ್ನು ಕಲ್ಪಿಸಲಾಗಿದೆ. ಆದ್ದರಿಂದ ಸಾಹಿತ್ಯ, ಜಾನಪದಗಳು ಮಾತ್ರವಲ್ಲದೆ ಎಲ್ಲ ಜ್ಞಾನ ಶಿಸ್ತುಗಳ ಕನ್ನಡೀಕರಣವು ಕನ್ನಡ ವಿಶ್ವವಿದ್ಯಾಲಯದ ಕಾರ್ಯವ್ಯಾಪ್ತಿಯಾಗಿದೆ. ಇಂದು ಜಾಗತೀಕರಣವೆಂಬ ಹಣೆಪಟ್ಟಿ ಹೊತ್ತು ಬಂದಿರುವ ಅಮೆರಿಕೀಕರಣಕ್ಕೆ ಕನ್ನಡೀಕರಣದ ಮೂಲಕ ಉತ್ತರ ಕೊಡುವ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಸವಾಲನ್ನು ಕನ್ನಡ ವಿಶ್ವವಿದ್ಯಾಲಯವು ಸ್ವೀಕರಿಸಬೇಕಾಗಿದೆ. ಈ ದಿಕ್ಕಿನಲ್ಲಿ ಕನ್ನಡ ವಿಶ್ವವಿದ್ಯಾಲಯವು ಕಾರ್ಯಪ್ರವೃತ್ತವಾಗಿದ್ದರೂ ಅದು ಅಮೇರಿಕೀಕರಣಕ್ಕೆ ನೇರ ಉತ್ತರವಾಗುವ ಕ್ರಮಬದ್ದ ಹಾಗೂ ಯೋಜನಾಬದ್ಧ ರೂಪುರೇಷೆಗಳಿಂದ ಪುಟಿದೇಳುವ ದಿಟ್ಟ ಪ್ರತಿರೋಧವಾಗಬೇಕಾದ ಅಗತ್ಯವಿದೆ ಯಂದು ನಾನು ಭಾವಿಸುತ್ತೇನೆ. ಈಗ ಕನ್ನಡ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳಲ್ಲಿ ನಡೆಯುತ್ತಿರುವ ಅಧ್ಯಯನಗಳನ್ನು ಮೆಚ್ಚುತ್ತಲೇ ಈ ಮಾತನ್ನು ಹೇಳುತ್ತಿದ್ದೇನೆ. ಯಾಕೆಂದರೆ ಸ್ವಯಂಸ್ಪೂರ್ತಿಯಿಂದ ನಡೆಯುವ ಸಂಶೋಧನೆ ಮತ್ತು ಅಧ್ಯಯನಗಳ ಮಾದರಿ ಒಂದು ಬಗೆಯದು; ಸಂಸ್ಥೆಯಾಗಿ ಸೆಟೆದು ನಿಲ್ಲುವ ನಿರ್ದಿಷ್ಟ ನಿಲುವಿನ ಯೋಜನಾಬದ್ಧ ಮಾದರಿ ಇನ್ನೊಂದು ಬಗೆಯದು.

ನನಗೆ ಗೊತ್ತು : ವಿವಿಧ ವಿಶ್ವವಿದ್ಯಾಲಯಗಳಲ್ಲಿರುವ ಶೈಕ್ಷಣಿಕ ಮಾದರಿಗಳನ್ನು ಬದಲಾಯಿಸುವ ಅಧಿಕಾರ ಕನ್ನಡ ವಿಶ್ವವಿದ್ಯಾಲಯಕ್ಕೆ ಇಲ್ಲ. ಆದರೆ ವಿವಿಧ ವಿಶ್ವವಿದ್ಯಾಲಯಗಳಲ್ಲಿರುವ ಮಾದರಿಗಳಿಗೆ ಪರ್ಯಾಯವಾಗುವ ಹಕ್ಕು ಕನ್ನಡ ವಿಶ್ವವಿದ್ಯಾಲಯಕ್ಕಿದೆ. ಜೊತೆಗೆ ಆಂಗ್ಲಮಯವಾಗುತ್ತಿರುವ ಅನ್ಯ ವಿಶ್ವವಿದ್ಯಾಲಯಗಳ ಪಠ್ಯಕ್ರಮ ಮತ್ತು ಪರಾಮರ್ಶನ ಆಕರಗಳನ್ನು ಕನ್ನಡದಲ್ಲಿ ಕಟ್ಟಿಕೊಡುವ ಮೂಲಕ ಕನ್ನಡ ಭಾಷೆಯು ಎಲ್ಲ ಜ್ಞಾನ ಶಿಸ್ತುಗಳನ್ನೂ ಒಳಗೊಳ್ಳುವ ಶಕ್ತಿ ಸಾಮರ್ಥ್ಯಗಳನ್ನು ಪಡೆದಿದೆಯೆಂದು ತೋರಿಸಬಹುದಾಗಿದೆ. ಈ ಮೂಲಕ ಉನ್ನತ ಶಿಕ್ಷಣದ ಜ್ಞಾನ ಶಾಖೆಗಳು ಕನ್ನಡೀಕರಣವಾಗುವಂತೆ ಮಾಡಬಹುದಾಗಿದೆ.

ಅಂತಿಮವಾಗಿ ಇದು ಸಾಮಾನ್ಯ ಶಿಕ್ಷಣ, ಸಾಮಾನ್ಯವಿಜ್ಞಾನ ಮತ್ತು ಮಾನವಿಕ ಜ್ಞಾನ ಶಾಖೆಗಳನ್ನು ಉಳಿಸಿ ಬೆಳೆಸುವ ಒಂದು ಮುಖ್ಯ ಹೆಜ್ಜೆಯಾಗಲಿದೆ.
ಯಾಕೆಂದರೆ, ಎಲ್ಲ ವಿಷಯಗಳಲ್ಲೂ ಕನ್ನಡ ವಿಶ್ವವಿದ್ಯಾಲಯವು ಇತರ ವಿಶ್ವವಿದ್ಯಾಲಯ ಗಳಿಗೆ, ಏಕಕಾಲಕ್ಕೆ ಪರ್ಯಾಯ ಮತ್ತು ಪೂರಕ ಶೈಕ್ಷಣಿಕ ಮಾದರಿಗಳನ್ನು ನಿರ್ಮಾಣ ಮಾಡಬೇಕಾಗಿದೆ. ಇದು ವೇದಿಕೆಗಳ ಮೇಲೆ ನಿರ್ಧಾರವಾಗುವ ವಿಷಯವಲ್ಲ. ಆದ್ದರಿಂದ, ಈ ದಿಕ್ಕಿನಲ್ಲಿ ಸೂಕ್ತ ಚಿಂತನೆ ನಡೆಸುವ ಅಗತ್ಯವಿದೆಯೆಂದು ವಿನಮ್ರವಾಗಿ ತಿಳಿಸಬಯಸುತ್ತೇನೆ. ಈ ಚಿಂತನಾಕ್ರಿಯೆಯಲ್ಲಿ ಕೆಲಸ ಮಾಡಬೇಕಾದ್ದು ಕನ್ನಡದ ವಿವೇಕ.

ಕನ್ನಡದ ವಿವೇಕಕ್ಕೆ ದೊಡ್ಡ ಪರಂಪರೆಯೇ ಇದೆ. ಸಂಸ್ಕೃತ ಸಾಹಿತ್ಯದಿಂದ ಕಥಾವಸ್ತುವನ್ನು ಸ್ವೀಕರಿಸಿ ‘ಮಾರ್ಗ’ ಶೈಲಿಯನ್ನು ಅನುಸರಿಸುತ್ತಲೇ ಅದಕ್ಕೆ ದೇಸಿಯನ್ನು ಮುಖಾಮುಖಿಯಾಗಿಸಿದ ಮಹಾಕವಿ ಪಂಪನಿಂದಲೇ ಕನ್ನಡದ ವಿವೇಕ ಪರಂಪರೆ ಪ್ರಾರಂಭವಾಗಿದೆ. ಅರಿವನ್ನು ಎಲ್ಲಿಂದಲಾದರೂ ಪಡೆಯೋಣ; ಆದರೆ ಅದಕ್ಕೆ ಆಳಾಗದಿರೋಣ; ಹೊಸ ಶೋಧಕ್ಕೆ ಸಿದ್ದವಾಗೋಣ-ಎನ್ನುವುದೇ ಕನ್ನಡದ ವಿವೇಕ. ಈ ವಿವೇಕ ಪರಂಪರೆಯ ಭಾಗವಾಗಿ ನಯಸೇನ, ಆಂಡಯ್ಯ, ಕುಮಾರವ್ಯಾಸ, ಮಹಲಿಂಗರಂಗ, ಮುದ್ದಣ, ವಚನ ಸಾಹಿತ್ಯ, ದಾಸ ಸಾಹಿತ್ಯಗಳ ನಡೆ-ನಿಲುವುಗಳನ್ನು ಸಾಂಕೇತಿಕವಾಗಿ ಉದಾಹರಿಸಬಹುದು. ಕನ್ನಡ ಮತ್ತು ಸಂಸ್ಕೃತವನ್ನು ಒಟ್ಟಿಗೆ ಬೆರೆಸಬೇಡಿ ಎಂದು ಹೇಳಿದ ನಯಸೇನ ಸಂಸ್ಕೃತದ ಹಿಡಿತದಿಂದ ಕನ್ನಡದ ಬಿಡುಗಡೆಗೆ ಬಾಯಿಕೊಟ್ಟರೆ, ಸಂಸ್ಕೃತಕ್ಕೆ ಬದಲಾಗಿ ಕನ್ನಡ ತದ್ಭವಗಳನ್ನು ಸೃಷ್ಟಿಸಿದ ಆಂಡಯ್ಯ ಪ್ರತಿರೋಧದ ಪಟ್ಟು ಹಾಕಿದ. ಮೋಕ್ಷಸಾಧನೆಗೆ ಸಂಸ್ಕೃತದ ಅಗತ್ಯವಿಲ್ಲವೆಂದ ಮಹಲಿಂಗರಂಗ ‘ಮಿಸುಕದ ಸಕ್ಕದ’ಕ್ಕೆ ಬದಲಾಗಿ ‘ಸುಲಿದ ಬಾಳೆಯ ಹಣ್ಣಿನಂದದಿ, ಕಳೆದ ಸಿಗುರಿನ ಕಬ್ಬಿನಂದದಿ, ಅಳಿದ ಉಷ್ಣದ ಹಾಲಿನಂದದಿ’ ಇರುವ ಕನ್ನಡದ ನುಡಿಯ ಮೂಲಕ ಮೋಕ್ಷಗಳಿಸಿಕೊಂಡರೆ ಸಾಲದೆ? ಮೋಕ್ಷಕ್ಕೆ ಸಂಸ್ಕೃತ ಯಾಕೆ ಬೇಕು? ಎಂದು ಪ್ರತಿಪಾದಿಸುವ ಮೂಲಕ ಭಾಷಿಕವಾಗಿ ಮಾತ್ರವಲ್ಲ, ಸಾಂಸ್ಕೃತಿಕ ಪಲ್ಲಟದ ಪ್ರತೀಕವಾದ. ಮುಂದೆ, ಮುದ್ದಣ ಕವಿ ಸಂಸ್ಕೃತವು ಕನ್ನಡವೆಂಬ ಕರಿಮಣಿ ಸರದ ಕಾಂತಿಯನ್ನು ಹೆಚ್ಚಿಸುವ ಕೆಂಪು ಹವಳವಾಗಿರಬೇಕೆಂಬ ಆಶಯವನ್ನು ವ್ಯಕ್ತಪಡಿಸಿದ. ಈ ಮಧ್ಯೆ ವಚನ ಸಾಹಿತ್ಯ ಕನ್ನಡದ ಹೊಸ ನುಡಿಗಟ್ಟಿಗೆ ಕಾರಣವಾಯಿತು. ದಾಸ ಸಾಹಿತ್ಯವೂ ಸರಳ ಕನ್ನಡದ ಮೂಲಕ ಮಾತಾಡಿತು. ಕುಮಾರವ್ಯಾಸ ಕನ್ನಡ ಭಾಷೆಯ ದೇಸಿ ಗುಣಕ್ಕೆ ಗೌರವ ತಂದುಕೊಟ್ಟ ಮಹಾಕವಿ. ಹೀಗೆ ಸಂಸ್ಕೃತ ಭಾಷೆಯಿಂದ ಬಿಡುಗಡೆ ಪಡೆಯುವ ಪ್ರಯತ್ನದಲ್ಲಿ ಕನ್ನಡ ಭಾಷೆಯ ಅನನ್ಯತೆ ಮತ್ತು ಸಾಂಸ್ಕೃತಿಕ ಸ್ವಾತಂತ್ರ್ಯಕ್ಕೆ ಕಾರಣರಾದ ಕವಿಗಳು ಯಾವತ್ತೂ ಸಂಸ್ಕೃತ ಮೂಲದ ಜ್ಞಾನವನ್ನು ನಿರಾಕರಿಸಲಿಲ್ಲ; ಸಂಸ್ಕೃತದ ಆಳ್ವಿಕೆಯನ್ನು ವಿರೋಧಿಸಿದರು.

ಅಂತೆಯೇ ಆಧುನಿಕ ಕನ್ನಡ ಸಾಹಿತ್ಯವು ಆಂಗ್ಲ ಸಾಹಿತ್ಯದಿಂದ ಬರುವ ಜ್ಞಾನವನ್ನು ನಿರಾಕರಿಸಲಿಲ್ಲ. ನಮಗೆ ಷೇಕ್ಸ್ಪಿಯರ್, ವರ್ಡ್ಸ್‌ವರ್ತ್, ಕೀಟ್ಸ್, ಏಲಿಯಟ್ ಮುಂತಾದವರ ಜ್ಞಾನ ಬೇಕು. ಆದರೆ ಆಂಗ್ಲರ ಮತ್ತು ಆಂಗ್ಲಭಾಷೆಯ ಆಳ್ವಿಕೆ ಬೇಕಾಗಿಲ್ಲ. ಈ ಮಾತು ಹಿಂದಿಯೇ ಮುಂತಾದ ಎಲ್ಲ ಭಾಷೆಗಳಿಗೂ ಅನ್ವಯಿಸುತ್ತದೆ. ಅನ್ಯಭಾಷೆಗಳ ಅರಿವು ಬೇಕು, ಆಳ್ವಿಕೆ ಬೇಡ-ಎನ್ನುವುದೇ ಕನ್ನಡ ವಿವೇಕದ ಪರಂಪರೆ.

ಕನ್ನಡ ಸಂವೇದನೆಯಲ್ಲೂ ಕನ್ನಡ ವಿವೇಕದ ವಿಸ್ತರಣೆಯಾಗಿರುವುದನ್ನು ನಾವು ಕಾಣಬಹುದು. ಕನ್ನಡ ಸಂವೇದನೆಯಲ್ಲಿ ಸ್ಥಳೀಯ ಸ್ವೋಪಜ್ಞತೆಗೆ ಆದ್ಯತೆ. ಆದರೆ ಅದೇ ಸಂದರ್ಭದಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿದ್ಯಮಾನಗಳಿಗೆ ಸ್ಪಂದಿಸುವ ಗುಣವೂ ಕನ್ನಡ ಸಂವೇದನೆಗಿದೆ. ಬೆಂಜಮಿನ್ ಮೊಲಾಯಿಸ್ ಎಂಬ ವಿದೇಶಿ ಕ್ರಾಂತಿಕಾರಿ ಕವಿ ಸತ್ತರೆ, ಕನ್ನಡದಲ್ಲಿ ಮೂವತ್ತಕ್ಕೂ ಹೆಚ್ಚು ಕವಿತೆಗಳು ಹುಟ್ಟುತ್ತವೆ. ಪ್ಯಾಬ್ಲೊ ನೆರೂದನಿಗಾಗಿ ಪದ್ಯಗಳು ಮಿಡಿಯುತ್ತವೆ. ನೆಲ್ಸನ್ ಮಂಡೆಲಾನ ಬಿಡುಗಡೆಯಲ್ಲಿ ನಮ್ಮ ಕನ್ನಡ ಸಂಭ್ರಮಿಸುತ್ತದೆ. ಬರಾಕ್ ಒಬಾಮರ ಆಯ್ಕೆಗಾಗಿ ನಮ್ಮ ಕನ್ನಡ ಸಂತೋಷಿಸುತ್ತದೆ. ಇರಾಕ್‌ನಲ್ಲಿ ನಡೆದ ಅಮೇರಿಕದ ಹತ್ಯಾಕಾಂಡಕ್ಕೆ ನಮ್ಮ ಕನ್ನಡ ಆತಂಕಿಸುತ್ತದೆ, ಮುಂಬೈನಲ್ಲಿ ಉಗ್ರಗಾಮಿಗಳ ಅಟ್ಟಹಾಸ ನಡೆದರೆ ನಮ್ಮ ಕನ್ನಡ ಖಂಡಿಸುತ್ತದೆ. ಅಂತೆಯೇ ಮಂದಿರ ಮಸೀದಿಗಳ ವಿವಾದಕ್ಕೆ ನಮ್ಮ ಕನ್ನಡ ಖಿನ್ನವಾಗುತ್ತದೆ. ಅಂದರೆ, ಕನ್ನಡ ಸಂವೇದನೆಗೆ ಏಕಕಾಲಕ್ಕೆ ಸ್ಥಳೀಯವೂ ರಾಷ್ಟ್ರೀಯವೂ ಅಂತಾರಾಷ್ಟ್ರೀಯವೂ ಆಗುವ ಶಕ್ತಿಯಿದೆ. ಈ ಕನ್ನಡ ಸಂವೇದನಾ ಶಕ್ತಿಯನ್ನು ಸರಿಯಾಗಿ ಗ್ರಹಿಸುವ ಮತ್ತು ಅದರಿಂದ ಪ್ರೇರಣೆ ಪಡೆಯುವ ಕನ್ನಡದ ಕೆಲಸಗಳು ಮಾತ್ರ ಸಂವೇದನಾಶೀಲವಾಗಿರುತ್ತವೆ; ಸಾರ್ಥಕವಾಗುತ್ತವೆ. ಇಲ್ಲದಿದ್ದರೆ ಕೊರಳಿನ ಕನ್ನಡಾಭಿಮಾನದಲ್ಲಿ ಕರುಳಿನ ಕನ್ನಡಾಭಿಮಾನ ಕಳೆದು ಹೋಗುತ್ತದೆ. ನಮಗೆ ಕೊರಳು ಬೇಕು; ನಿಜ. ಆದರೆ ಕರುಳಿಲ್ಲದ ಕೊರಳು ಬಾಯಿಪಾಠವನ್ನಷ್ಟೇ ಒಪ್ಪಿಸುತ್ತದೆ. ಆಗ ಕನ್ನಡ ಮತ್ತು ಕರ್ನಾಟಕದ ಬಹುಮುಖೀ ನೆಲೆಗಳಿಗೆ ನಾಲಿಗೆಯಿಲ್ಲದಂತಾಗುತ್ತದೆ. ಈ ಮಾತನ್ನು ಮುಂದಿನಂತೆ ವಿಸ್ತರಿಸಬಯಸುತ್ತೇನೆ :

ನಮ್ಮಲ್ಲಿ ಶ್ರೀಗಂಧದ ಕರ್ನಾಟಕ ಇರುವಂತೆಯೇ ಹೊಂಗೆ, ಹುಣಿಸೆ ಮತ್ತು ಜಾಲಿಮರಗಳ ಕರ್ನಾಟಕವಿದೆ. ಭೋರ್ಗರೆವ ಕಡಲಿನ ಕರ್ನಾಟಕವಿರುವಂತೆಯೇ ಬಿರುಕುಬಿಟ್ಟ ಕೆರೆಗಳ ಕರ್ನಾಟಕವಿದೆ. ತುಂಬಿದ ನದಿಗಳ ಕರ್ನಾಟಕವಿರುವಂತೆಯೇ ನೀರಿಲ್ಲದ ಹಳ್ಳಕೊಳ್ಳಗಳ ಕರ್ನಾಟಕ ಏದೆ. ಕೋಗಿಲೆಗಳ ಕರ್ನಾಟಕವಿರುವಂತೆ ಕಾಗೆಗಳ ಕರ್ನಾಟಕವೂ ಇದೆ. ವೈಭವೀಕರಣಕ್ಕೆ ಮಾತ್ರ ನಾಲಗೆಯಾಗುವ ಕಂಠಪಾಠಕ್ಕೆ ಶ್ರೀಗಂಧ, ಕಡಲು, ನದಿ, ಕೋಗಿಲೆಗಳ ಕರ್ನಾಟಕ ಮಾತ್ರ ಮುಖ್ಯವಾಗುತ್ತದೆ. ಹೊಂಗೆ, ಹುಣಿಸೆ, ಜಾಲಿ, ಕೆರೆ, ಹಳ್ಳಕೊಳ್ಳ, ಕಾಗೆಗಳ ಕರ್ನಾಟಕ ಅಮುಖ್ಯವಾಗುತ್ತವೆ. ಇದರ ಪರಿಣಾಮ ಏನು ಗೊತ್ತೆ?

ಸಮೃದ್ದ ಕರ್ನಾಟಕದ ಕಂಠಪಾಠದಲ್ಲಿ ಹಸಿವಿನ ಕರ್ನಾಟಕ ಅಲಕ್ಷಕ್ಕೀಡಾಗುತ್ತದೆ. ನಮ್ಮಲ್ಲಿ ಇರುವುದು ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಮುಂಬೈ ಕರ್ನಾಟಕ, ಹೈದರಾಬಾದ್ ಕರ್ನಾಟಕವೆಂಬ ಪ್ರಾದೇಶಿಕ ವಿಭಾಗಗಳು ಮಾತ್ರವಲ್ಲ. ಈ ಎಲ್ಲ ಪ್ರಾದೇಶಿಕ ವಿಭಾಗಗಳಿಗೂ ಅನ್ವಯಿಸುವ ‘ಹಸಿವಿನ ಕರ್ನಾಟಕ’ ಎಂಬ ಬಹುಮುಖ್ಯವಾದ ವಿಭಾಗವೊಂದಿದೆ. ಈ ಹಸಿವಿನ ಕರ್ನಾಟಕದ ಸಮಸ್ಯೆಗಳಿಗೆ ಪರಿಹಾರ ಹುಡುಕಿದರೆ, ಅಲ್ಲಿನ ಪ್ರಶ್ನೆಗಳಿಗೆ ಉತ್ತರ ವಾದರೆ, ಅದು ಕರ್ನಾಟಕದ ನಿಜವಾದ ದನಿಯಾಗುತ್ತದೆ. ನನಗನ್ನಿಸುತ್ತದೆ : ಹಸಿವಿನ ಭಾಷೆ ಯನ್ನು ಅರ್ಥ ಮಾಡಿಕೊಳ್ಳದ ಅಭಿವೃದ್ಧಿಗೆ ಅರ್ಥವಿಲ್ಲ. ಅಭಿವೃದ್ಧಿಯೆನ್ನುವುದು ಕಂಠಪಾಠದ ಮಂತ್ರವಾಗಬಾರದು; ಹಸಿವಿನ ಆತಂಕವಾಗಬೇಕು. ಈ ಆತಂಕದ ಆಂತರ್ಯದಲ್ಲಿ ಹುಟ್ಟುವ ನಡೆ-ನುಡಿಗಳು ಕನ್ನಡಕ್ಕೆ ಬತ್ತಿಹೋಗದ ಮಾನವೀಯ ಮನಸನ್ನು ತಂದುಕೊಡುತ್ತವೆ; ಕಮರಿ ಹೋಗದ ಕನಸನ್ನು ಕಟ್ಟಿ ಕೊಡುತ್ತವೆ. ಹೀಗಾಗಿ, ಅಭಿವೃದ್ದಿಗಷ್ಟೇ ಅಲ್ಲ, ನಮ್ಮ ಅಧ್ಯಯನಗಳಿಗೂ ಹಸಿವಿನ ಭಾಷೆ ಅರ್ಥವಾಗಬೇಕು. ಅಜ್ಞಾತ ವಲಯಗಳ ಅನಾವರಣ ಮುಂದುವರೆಯಬೇಕು. ಈ ಮೂಲಕ ಕನ್ನಡ ಸಂಶೋಧನೆ ವಿಶಿಷ್ಟ ಸಂವೇದನೆಯನ್ನು ಒಳಗೊಳ್ಳಬೇಕು. ಅಧ್ಯಯನಕ್ಕೆ ಅಂತಃಕರಣ ಲಭ್ಯವಾಗಬೇಕು.

ಹಾಗಾದರೆ ಇಲ್ಲಿಯವರೆಗಿನ ನಮ್ಮ ಸಂಶೋಧನೆ ಹಾಗೂ ಅಧ್ಯಯನಗಳು ಈ ಕೆಲಸವನ್ನು ಮಾಡೇ ಇಲ್ಲವೆ ಎಂದರೆ ಸಂಪೂರ್ಣ ನಕಾರಾತ್ಮಕ ಉತ್ತರ ಕೊಡಲಾಗದು. ಯಾಕೆಂದರೆ ಹಸಿವಿನ ಭಾಷೆಯಾಗಿ ಹೊರಬಂದ ಅಧ್ಯಯನ ಮತ್ತು ಅಭಿವ್ಯಕ್ತಿಕ್ರಮಗಳು ಅಲ್ಲಲ್ಲೇ ಕಾಣಿಸಿ ಕೊಂಡಿವೆ. ವಿಶೇಷವಾಗಿ ಎಪ್ಪತ್ತರ ದಶಕದಿಂದೀಚೆಗೆ, ವಿವಿಧ ಸಾಮಾಜಿಕ-ಸಾಂಸ್ಕೃತಿಕ ಚಳವಳಿಗಳ ಫಲವಾಗಿ ಹಸಿವಿನ ಕರ್ನಾಟಕವೂ ಕೆಲ ಅಜ್ಞಾತ ಸಂಸ್ಕೃತಿಗಳೂ ಅನಾವರಣ ಗೊಂಡಿವೆ.

ಇಷ್ಟಾಗಿಯೂ ನಮ್ಮ ಸಂಶೋಧನೆಗಳನ್ನು ಕುರಿತ ಕೆಲವು ಪ್ರಶ್ನೆಗಳು ನನ್ನನ್ನು ಕಾಡಿಸುತ್ತಿವೆ. ಎಪ್ಪತ್ತರ ದಶಕಕ್ಕಿಂತ ಮುಂಚೆ ನಡೆದ ನಮ್ಮ ಸಂಶೋಧನೆಗಳು-ಅಧ್ಯಯನದ ಶಿಸ್ತು, ನಿಖರ ಆಕರ, ಶೋಧದ ಸಂಯಮಗಳಿಂದ ಮಹತ್ವ ಪಡೆದಿವೆ. ಅದಕ್ಕಾಗಿ ನಮ್ಮ ಸಂಶೋಧಕರನ್ನು ನಾವು ನಮಿಸಲೇಬೇಕು. ಆದರೆ ಆಧುನಿಕ ಕನ್ನಡ ಸಾಹಿತ್ಯದ ಅತ್ಯಂತ ಆರಂಭದ ಕಾಲಘಟ್ಟ ಮತ್ತು ಕೆಲವು ಜಾನಪದ ಸಂಶೋಧನೆಗಳನ್ನು ಹೊರತುಪಡಿಸಿದರೆ, ಉಳಿದಂತೆ, ನಮ್ಮ ಸಂಶೋಧಕರು ತಂತಮ್ಮ ಜಾತಿ ಮತ ಧರ್ಮಕ್ಕೆ ಸಂಬಂಧಿಸಿದ ಕ್ಷೇತ್ರಗಳು ಮತ್ತು ಕೃತಿಗಳನ್ನೇ ಹೆಚ್ಚು ಆಯ್ಕೆ ಮಾಡಿಕೊಂಡಿರುವುದು ನಿಜವಲ್ಲವೆ? ಜೈನ, ವೀರಶೈವ, ವೈದಿಕ ಎಂದು ಸಾಹಿತ್ಯ ವನ್ನು ವಿಭಾಗಿಸುವಷ್ಟರ ಮಟ್ಟಿಗೆ ಸಂಶೋಧನೆ ಮತ್ತು ಅಧ್ಯಯನ ವಲಯ ಕೇಂದ್ರೀಕೃತವಾಗಿರಲಿಲ್ಲವೆ? ಕೆಲವು ಅಪವಾದಗಳನ್ನು ಬಿಟ್ಟರೆ ತಮ್ಮ ಜಾತಿಮತ ಧರ್ಮಕ್ಕೆ ಸೇರದೆ ಇರುವ ಕೃತಿಗಳನ್ನು ಯಾಕೆ ಯಾರೂ ಮುಟ್ಟಲಿಲ್ಲ? ಹಾಗಾದರೆ ಜೈನ, ವೀರಶೈವ, ವೈದಿಕ ಕೃತಿಗಳಾಚೆಗೆ ಬೇರೆ ಮಹತ್ವದ ಕೃತಿಗಳು ಇರಲೇ ಇಲ್ಲವೆ ? ಅಂತಹ ಯಾವ ತಾಳೆಗರಿಗಳು ಸಿಗಲೇ ಇಲ್ಲವೆ ? ಸಿಕ್ಕಿದರೂ ‘ಗ್ರಂಥ ಸಂಪಾದನೆ’ಯಾಗಲಿಲ್ಲವೆ? ಮೊದಲು ಅಕ್ಷರ ಸಂಸ್ಕೃತಿಗೆ ತೆರೆದುಕೊಂಡ ಕಾರಣದಿಂದ ಈ ಮೂರು ಮುಖ್ಯ ಧರ್ಮಕ್ಕೆ ಸೇರಿದವರ ಸಾಹಿತ್ಯಾಭಿವ್ಯಕ್ತಿ ಸಾಧ್ಯವಾಗಿರಬಹುದು. ಅದು ಸಹಜ. ಆದರೆ ಸಂಶೋಧಕರು ತಮ್ಮದಲ್ಲದ ಸಾಮಾಜಿಕ ವಲಯಕ್ಕೆ ಪ್ರವೇಶ ಮಾಡಿದ ಉದಾಹರಣೆಗಳು ತೀರಾ ಕಡಿಮೆಯಾಗಿದ್ದರ ಹಿಂದಿರುವ ಒತ್ತಾಸೆಗಳೇನು ?

ಈಗ ನೋಡಿ; ದಲಿತ ಮತ್ತು ಹಿಂದುಳಿದ ವರ್ಗಗಳ ಕೆಲವರು ವಚನಗಳನ್ನು ಬರೆದಿದ್ದಾರೆ. ಅದೇ ಅವಧಿಯಲ್ಲಿ ಈ ವರ್ಗಗಳವರು ಬೇರೇನೂ ಬರೆಯಲೇ ಇಲ್ಲವೆ ? ಅವರು ಬೇರೇನೂ ಬರೆಯದೆ ವಚನಗಳಿಗೆ ಮಾತ್ರ ಸೀಮಿತರಾದರೆಂದು ತೀರ್ಮಾನಿಸುವುದು ಸಾಧುವೆ? ಈ ವರ್ಗಗಳ ‘ಭವಿಗಳು’ ಬರೆದದ್ದು ಲಭ್ಯವಾಗಿಲ್ಲವೆ ಅಥವಾ ಲಭ್ಯವಾದದ್ದು ಮೂಲೆಗುಂಪಾಗಿದೆಯೆ ಅಥವಾ ಈ ದೃಷ್ಟಿಯ ಶೋಧಕ್ಕೆ ಸಂಶೋಧಕರು ಮನಸ್ಸು ಮಾಡಿಲ್ಲವೆ? – ಇಂತಹ ಪ್ರಶ್ನೆಗಳು ಸಹಜವಾಗಿ ನನ್ನನ್ನು ಕಾಡಿಸುತ್ತವೆ. ಈ ಪ್ರಶ್ನೆಗಳನ್ನು ದಾಸಸಾಹಿತ್ಯದ ಅವಧಿಗೂ ಅನ್ವಯಿಸಬಹುದು. ನಿಜ; ವಚನಸಾಹಿತ್ಯ ಮತ್ತು ದಾಸಸಾಹಿತ್ಯದ ಅವಧಿಯಲ್ಲಿ ಬರೆದಿರಬಹುದಾದ ಕೆಲವು ಕೃತಿ ಮತ್ತು ಕೃತಿಕಾರರನ್ನು ಸಾಹಿತ್ಯ ಚರಿತ್ರಕಾರರು ಪ್ರಸ್ತಾಪಿಸಿದ್ದಾರೆ. ಆದರೆ ದಲಿತ, ಹಿಂದುಳಿದ ವರ್ಗಗಳ ಅಭಿವ್ಯಕ್ತಿ ವಲಯವನ್ನು ಹುಡುಕುವ ಒತ್ತಾಸೆ ಮುಖ್ಯವಾಗಿಲ್ಲವೆಂಬುದನ್ನು ಗಮನಿಸಬೇಕು. ವಚನ ಮತ್ತು ದಾಸ ಪರಂಪರೆಯಲ್ಲಿ ಮಾತ್ರ ಈ ವರ್ಗಗಳ ಕೃತಿಕಾರರನ್ನು ಗುರುತಿಸಲಾಗಿದೆಯೇ ಹೊರತು ಅದರಾಚೆಗೆ ಏನಾದರೂ ಇರಬಹುದೆ ಎಂಬ ಪ್ರಶ್ನೆಗೆ ಸಮಾಧಾನಕರ ಉತ್ತರ ಸಿಗುತ್ತಿಲ್ಲ. ಇದು ಜಾತಿ ಮೂಲ ಸಂಶೋಧನೆಯ ಫಲಶೃತಿಯಿರಬಹುದಲ್ಲವೆ? ಸಂಶೋಧನೆಯ ಈ ಮಿತಿಗೂ ಅನುಭವ ಪ್ರಾಮಾಣ್ಯಕ್ಕೂ ಸಂಬಂಧವಿಲ್ಲ. ಅನುಭವ ಪ್ರಾಮಾಣ್ಯದ ಅಂಶ ಅನ್ವಯಿಸುವುದು ಕತೆ, ಕಾವ್ಯದಂತಹ ಸೃಜನಶೀಲ ಅಭಿವ್ಯಕ್ತಿ ಪ್ರಕಾರಗಳಿಗೆ.

ಎಪ್ಪತ್ತರ ದಶಕದಿಂದ ಈಚೆಗೆ ಕೆಲವು ಅಜ್ಞಾತ ವಲಯಗಳು ಅನಾವರಣಗೊಂಡದ್ದಕ್ಕೆ ಅಕ್ಷರ ಸಂಸ್ಕೃತಿಯ ವಿಸ್ತರಣೆ ಹಾಗೂ ಸಾಮಾಜಿಕ ಸಾಂಸ್ಕೃತಿಕ ಚಳುವಳಿಗಳ ಪ್ರೇರಣೆ ಕಾರಣ. ಆದರೂ ಈಗ ಅನಾವರಣಗೊಳ್ಳುತ್ತಿರುವ ಅಜ್ಞಾತ ವಲಯಗಳು ಪ್ರತಿಷ್ಠಿತ ವಲಯಕ್ಕೆ ಮೂಜಿಯಂ ಸಂಸ್ಕೃತಿಗಳಾಗಿ ಕಾಣಿಸುತ್ತಿವೆಯೋ ಅಥವಾ ಹಸಿವಿನ ಭಾಷೆ ಹುಟ್ಟಲು ಪ್ರೇರಕವಾಗುತ್ತಿದೆಯೊ? ಇಂತಹ ಅನೇಕ ಪ್ರಶ್ನೆಗಳು ನನಗೆ ಪ್ರಸ್ತುತವೆನ್ನಿಸುತ್ತವೆ. ಈ ಪ್ರಶ್ನೆಗಳ ಮೂಲಕ ನಾನು ನಮ್ಮ ಸಂಶೋಧಕರು ಮತ್ತು ಅಧ್ಯಯನಕಾರರ ವಿಶ್ವಾಸಾರ್ಹತೆಯನ್ನು ಅನುಮಾನಿಸುತ್ತಿಲ್ಲ. ನಮ್ಮ ಸಾಮಾಜಿಕ ಚರಿತ್ರೆಯ ವೈರುಧ್ಯ ಮತ್ತು ವ್ಯಂಗ್ಯದ ಕಡೆಗೆ ಗಮನ ಸೆಳೆಯಬಯಸುತ್ತೇನೆ. ಅಧ್ಯಯನ ವಿಷಯಗಳ ಆಯ್ಕೆಯಲ್ಲಿ ಕೆಲಸ ಮಾಡಿರಬಹುದಾದ ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯ ಸೂಕ್ಷ್ಮಗಳನ್ನು ಕುರಿತೇ ಒಂದು ಸಣ್ಣ ಸಂಶೋಧನೆಯ ಅಗತ್ಯವಿದೆಯೆಂದು ಭಾವಿಸುತ್ತೇನೆ. ಕನ್ನಡ ವಿಶ್ವವಿದ್ಯಾಲಯವು ಅಜ್ಞಾತ ಸಂಸ್ಕೃತಿಗಳ ಅಧ್ಯಯನಕ್ಕೆ ಆದ್ಯತೆ ನೀಡುವ ಮೂಲಕ ಹೊಸ ಶೋಧಗಳಿಗೆ ಕಾರಣವಾಗಬೇಕೆಂಬ ಅಪೇಕ್ಷೆ ನನ್ನದಾಗಿದೆ. ಈ ಕೆಲಸವನ್ನು ಕನ್ನಡ ವಿಶ್ವವಿದ್ಯಾಲಯವು ಆರಂಭಿಸಿಯೇ ಇಲ್ಲವೆಂದು ಹೇಳಿದರೆ ತಪ್ಪಾಗುತ್ತದೆ. ಆದರೆ ನಾನು ಎತ್ತಿದ ಪ್ರಶ್ನೆಗಳ ಹಿನ್ನೆಲೆಯಲ್ಲಿ ಮತ್ತಷ್ಟು ವ್ಯಾಪಕವಾಗಿ ಜಾತ್ಯತೀತ ಕನ್ನಡ ಸಂಶೋಧನೆಯನ್ನು ಸೈದ್ಧಾಂತಿಕವಾಗಿ ಸ್ಥಾಪಿಸಲು ಸಾಧ್ಯವಾಗಬೇಕೆಂಬ ಹಂಬಲ ನನ್ನದು. ಇದು ಮುಖ್ಯವಾಗಿ ಮೂರು ನೆಲೆಗಳಲ್ಲಿ ನಡೆಯಬೇಕಾಗಬಹುದು : ೧. ಸಾಮಾಜಿಕ ೨. ಸಾಂಸ್ಕೃತಿಕ ೩. ಚಾರಿತ್ರಿಕ, ಈ ಮೂರು ನೆಲೆಗಳ ಮೂಲಕ ಅಜ್ಞಾತ ವಲಯಗಳ ಅನಾವರಣಕ್ಕೆ ಲಿಖಿತ ವಲಯ ಮತ್ತು ಅಲಿಖಿತ ವಲಯ – ಎರಡೂ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಪ್ರಾಚೀನ ಮತ್ತು ಮಧ್ಯಕಾಲೀನ ಲಿಖಿತ ಕನ್ನಡ ಸಾಹಿತ್ಯದಲ್ಲಿ ಬೆಳಕಿಗೆ ಬಾರದ ಎಷ್ಟೋ ಕೃತಿಗಳು ಇರಬಹುದೆ ಎಂಬ ಬಗ್ಗೆ ಸಂಶೋಧಿಸಬೇಕು. ಜೊತೆಗೆ, ಆಧುನಿಕ ಸಂದರ್ಭದಲ್ಲಿ ರೂಪುಗೊಂಡ ಹುಸಿ ಶ್ರೇಷ್ಠತೆಯ ಮಾನದಂಡದಿಂದ ಮೂಲೆಗುಂಪಾದ ಕೃತಿಗಳು ಇರಬಹುದೆ ಎಂದು ಹುಡುಕಬೇಕು. ಪ್ರಧಾನ ಸಾಂಸ್ಥಿಕ ಧರ್ಮಗಳಿಗೆ ಪಥ್ಯವಾಗದ ವಸ್ತುವುಳ್ಳ ಕಾವ್ಯಗಳೂ ಗ್ರಂಥಗಳೂ ಹೆಚ್ಚು ಪ್ರಚಾರವಾಗದೆ ಹೋಗಿರಬಹುದೆ ಎಂದು ನೋಡಬೇಕು. ಇದಲ್ಲದೆ ಅಲಿಖಿತ ವಲಯದಲ್ಲಿ ನಡೆಯುತ್ತಿರುವ ಸಾಮಾಜಿಕ-ಸಾಂಸ್ಕೃತಿಕ ಸಂಶೋಧನೆಯನ್ನು ಮತ್ತಷ್ಟು ವಿಸ್ತರಿಸಬಹುದು. ಜೊತೆಗೆ ಕರ್ನಾಟಕದ ಸ್ಥಳೀಯ ಚರಿತ್ರೆಗಳನ್ನು ಕಟ್ಟಿಕೊಡುವ ಕೆಲಸವನ್ನು ವ್ಯಾಪಕವಾಗಿ ಕೈಗೆತ್ತಿಕೊಳ್ಳಬಹುದು. ಇದರಿಂದ ಹೆಚ್ಚು ಪ್ರಚಾರವಾಗದ ಎಷ್ಟೋ ಸನ್ನಿವೇಶಗಳು ಸಿಗುತ್ತವೆ. ವ್ಯಕ್ತಿಗಳು ಬೆಳಕು ಕಾಣುತ್ತಾರೆ. ಹೊಸ ಸಾಮಾಜಿಕ, ಸಾಂಸ್ಕೃತಿಕ, ಚಾರಿತ್ರಿಕ ನಾಯಕರು ಪರಿಚಯವಾಗುತ್ತಾರೆ. ಆದ್ದರಿಂದ ಸಾಮಾಜಿಕ, ಸಾಂಸ್ಕೃತಿಕ, ಚಾರಿತ್ರಿಕವೆಂಬ ಮೂರೂ ನೆಲೆಯಲ್ಲಿ ಅಕ್ಷರಸ್ಥ ಮತ್ತು ಅನಕ್ಷರಸ್ಥ ಅಜ್ಞಾತ ವಲಯಗಳ ಅಧ್ಯಯನಕ್ಕೆ ಆದ್ಯತೆ ನೀಡುವ ಅಗತ್ಯವಿದೆಯೆಂದು ನಾನು ಭಾವಿಸುತ್ತೇನೆ.

ಅದೇನೇ ಇರಲಿ, ಸಂಶೋಧನೆಯ ಆಯ್ಕೆಯಲ್ಲಿ ಜಾತಿ ಮತ ಧರ್ಮಗಳ ಪಾತ್ರವಿರಬಹುದಾದರೂ ಈಗ ಲಭ್ಯವಿರುವ ಅಥವಾ ಲಭ್ಯವಾಗುವಂತೆ ಮಾಡಿರುವ ಲಿಖಿತ ಕನ್ನಡ ಸಾಹಿತ್ಯವು ಇಂದಿಗೂ ಪ್ರಸ್ತುತವಾದ ಕೆಲವು ಮಾನವೀಯ ಮೌಲ್ಯಗಳನ್ನು ಒಳಗೊಂಡಿರುವುದು ಅತ್ಯಂತ ಮಹತ್ವದ ಅಂಶವಾಗಿದೆ. ಧರ್ಮ-ಧರ್ಮಗಳ ನಡುವೆ ದ್ವೇಷದ ದಳ್ಳುರಿಯನ್ನು ಹಬ್ಬಿಸುತ್ತಿರುವ ಇಂದಿನ ಸನ್ನಿವೇಶದಲ್ಲಿ ಕನ್ನಡ ಸಾಹಿತ್ಯದಿಂದ ಕಲಿಯಬೇಕಾದ ಪಾಠವೆಂದರೆ – ಮೀರುವ ಮನಸ್ಸಿನ ಮಹತ್ವ. ಈ ಮಾತನ್ನು ಹೀಗೆ ವಿಸ್ತರಿಸಬಹುದು. ಪಂಪ ಮಹಾಕವಿ ಜೈನ ಧರ್ಮೀಯ, ಜೈನಧರ್ಮದೊಳಗಿದ್ದೂ ಜೈನ ಧರ್ಮವನ್ನು ಮೀರಿದ; ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂಬ ಸಾರ್ವಕಾಲಿಕ ಸತ್ಯಕ್ಕೆ ದನಿಯಾದ. ಕುಮಾರವ್ಯಾಸ ಹುಟ್ಟಿನಿಂದ ವೈದಿಕನಾದರೂ ಅದನ್ನು ಮೀರಿದ ಧರ್ಮ ಜಿಜ್ಞಾಸೆಗೆ ಕಾರಣನಾದ; ವ್ಯಾಧನನ್ನೂ ‘ಧರ್ಮವ್ಯಾಧ’ನನ್ನಾಗಿಸಿದ, ಮಾಹೇಶ್ವರ ನಿಷ್ಠೆಯೊಳಗಿದ್ದೂ ವಚನಕಾರರು ದೇಹಕ್ಕೆ ದೇವಾಲಯವನ್ನು ಸ್ಥಳಾಂತರಿಸಿ ಧಾರ್ಮಿಕ ಸ್ವಾತಂತ್ರ್ಯದ ಸಂವೇದನೆ ಮತ್ತು ಪರಿಭಾಷೆಗೆ ಒತ್ತಾಸೆಯಾದರು. ದಾಸರು ರಾಜನಿಗೆ ಪರ್ಯಾಯವಾಗಿ ತಮ್ಮ ನಂಬಿಕೆಯ ದೇವರನ್ನು ಪ್ರತಿಷ್ಠಾಪಿಸಿಕೊಂಡರು. ಹೀಗೆ ತಮ್ಮ ಧರ್ಮದೊಳಗಿದ್ದೂ ಧರ್ಮವನ್ನು ಮೀರುವ ಮೂಲಕ ವಿಶಿಷ್ಟ ಹಾದಿಯನ್ನು ತೋರಿದ ಧಾರ್ಮಿಕ ಧಾರೆಯೊಂದು ಕನ್ನಡ ಸಾಹಿತ್ಯ ಪರಂಪರೆಯಲ್ಲಿದೆ. ಸಾಂಸ್ಥಿಕ ಧರ್ಮ ಮತ್ತು ಧಾರ್ಮಿಕತೆಗಳು ಬೇರೆಬೇರೆಯೆಂದು ತೋರಿಸಿಕೊಟ್ಟಿದೆ. ಸಾಂಸ್ಥಿಕ ಧರ್ಮವು ಶಾಸ್ತ್ರಬದ್ದವಾಗಿರುತ್ತದೆ. ಮೀರುವ ಮನೋಧರ್ಮಕ್ಕೆ ವಿರುದ್ದವಾಗಿರುತ್ತದೆ. ಆದರೆ ಧಾರ್ಮಿಕತೆಗೆ ಶಾಸ್ತದ ಹಂಗಿಲ್ಲ. ಅದಕ್ಕೆ ಬೇಕಾದ್ದು ಭಕ್ತಿ ಮಾತ್ರ ‘ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೆ?’ (ಕುವೆಂಪು) ಎಂದು ಕೇಳಿಕೊಳ್ಳುವುದು ಧಾರ್ಮಿಕತೆ, ತನ್ನ ಬೈಲಾಕ್ಕೆ ಮಾತ್ರ ಬದ್ಧವಾಗುವುದು ಸಾಂಸ್ಥಿಕ ಧರ್ಮ. ಕನ್ನಡ ಸಾಹಿತ್ಯದಲ್ಲಿ ಪಂಪಕವಿಯಾದಿಯಾಗಿ ಕೆಲವರು ಜಡ ಸಾಂಸ್ಥಿಕ ಧರ್ಮವನ್ನು ಮೀರುವ ಸಂವೇದನೆಗೆ ಸಾಕ್ಷಿಯಾಗಿದ್ದಾರೆ. ಏಕಧರ್ಮ ಶ್ರೇಷ್ಠತೆಯ ವಕಾಲತ್ತು ವಹಿಸುವವರು ಕನ್ನಡ ಸಾಹಿತ್ಯದ ಕೆಲಕವಿಗಳ ಮೀರುವ ಮನೋಧರ್ಮವನ್ನು ಅರ್ಥ ಮಾಡಿಕೊಂಡರೆ ನಾವು ಹಸಿವಿನ ಕರ್ನಾಟಕಕ್ಕೆ ಸ್ಪಂದಿಸಿ ಸಮೃದ್ಧ ಹಾಗೂ ಸೌಹಾರ್ದ ಕರ್ನಾಟಕವನ್ನು ಕಟ್ಟಲು ಸಾಧ್ಯ.
ಹಸಿವಿನ ಕರ್ನಾಟಕಕ್ಕೆ ಪ್ರಾದೇಶಿಕತೆಯ ಪರಿಮಿತಿಯಿಲ್ಲ. ಅದು ಎಲ್ಲ ಪ್ರದೇಶಗಳಲ್ಲೂ ಇರುತ್ತದೆ; ಉಳಿವಿಗಾಗಿ ಹೋರಾಡುತ್ತದೆ. ಹಸಿವಿನ ಕರ್ನಾಟಕಕ್ಕೆ ಮತೀಯತೆಯ ಸೋಂಕಿಲ್ಲ.

ಅದು ಮಠಮಾನ್ಯಗಳ ರಾಜಕೀಯಕ್ಕೆ ಒಗ್ಗುವುದಿಲ್ಲ; ಅಗತ್ಯವಾದ ಆರ್ಥಿಕ ಶಕ್ತಿಯೂ ಇಲ್ಲ.
ಹಸಿವಿನ ಕರ್ನಾಟಕಕ್ಕೆ ಜಾತಿವಾದ-ಕೋಮುವಾದ ಬೇಕಾಗಿಲ್ಲ. ಅದು ಜಾತಿವಾದದ ಜೈಲಿನಲ್ಲಿ ನರಳುತ್ತಿದೆ; ಕೋಮುವಾದದ ಕೆಂಡದಲ್ಲಿ ಕಮರುತ್ತಿದೆ. ಜೊತೆಗೆ, ಹಸಿವಿನ ಕರ್ನಾಟಕವನ್ನು ದುರುಪಯೋಗಪಡಿಸಿಕೊಳ್ಳುವ ಸಾಮಾಜಿಕ, ರಾಜಕೀಯ ಶಕ್ತಿಗಳು ಮೇಲುಗೈ ಪಡೆಯುತ್ತಿವೆ. ಆತ್ಮನಿರೀಕ್ಷೆಯಿಲ್ಲದ ನಿರ್ಣಯಾತ್ಮಕ ನೀತಿಗಳನ್ನು ಹೇರುತ್ತಿವೆ. ಅಭಿವೃದ್ಧಿ ಮತ್ತು ಅಧ್ಯಯನದ ವಾಗ್ವಾದಗಳೂ ಇದಕ್ಕೆ ಹೊರತಾಗಿಲ್ಲ. ಪರಿಸರ ಪ್ರೀತಿಯೊಂದೇ ಅಭಿವೃದ್ಧಿ ವಿಧಾನದ ಕೊರತೆಯನ್ನು ಹೇಳಿದಂತಾಗುವುದಿಲ್ಲ, ಮತ ಧರ್ಮಗಳ ಮನೋಧರ್ಮವೊಂದೇ ಅಧ್ಯಯನದ ಅಂತಿಮ ಹಾದಿಯಾಗುವುದಿಲ್ಲ.

ಅಭಿವೃದ್ಧಿ ಮತ್ತು ಅಧ್ಯಯನಗಳಿಗೆ ಹಸಿವಿನ ಭಾಷೆ ಅರ್ಥವಾದರೆ, ಅಭಿವೃದ್ಧಿಯಿಂದ ಸಾಮಾಜಿಕ ನ್ಯಾಯವೂ ಅಧ್ಯಯನದಿಂದ ಸಾಂಸ್ಕೃತಿಕ ನ್ಯಾಯವೂ ತನಗೆ ತಾನೇ ಲಭ್ಯವಾಗುತ್ತದೆ. ಆದರೆ, ಹಸಿವಿನ ಭಾಷೆಯೂ ಏಕಪಕ್ಷೀಯವಾಗದಂತೆ ನೋಡಿಕೊಳ್ಳುವ ಎಚ್ಚರ ಇರಬೇಕಾಗುತ್ತದೆ.
(೨೦೦೯)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಂಬನಿಯ ಲವಣ
Next post ಮತ್ತೆ ಬೆಳಗಾಗಿದೆ

ಸಣ್ಣ ಕತೆ

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…