(‘ದಿ. ಜಾನ್ ಕೆನಡಿ’ಯ ಕೊಲೆಯನ್ನು ನೆನೆದು)

ಅಯ್ಯೋ! ಹತನಾದ ವಿಶ್ವ ಪ್ರೇಮಿ!!
ಕಗ್ಗೂಲೆಯ ಕಾಳ ರಾತ್ರಿಯಲಿ
ಜಗ ಬೆರೆಯಿತು….
ವಿಶ್ವ ಪ್ರಾಣದ ರಕ್ತ –
ಕೋಡಿ ಹರಿಯಿತು

ಶೋಕಾಂಬುಧಿಯ ತೆರೆ
ಎದ್ದು ಮೊರೆಯಿತು!

ಜವರಾಯ ನೀ ನನ್ನಿಕಾರನೆಂದು
ನನ್ನಿಯಲೆ ನಿನ್ನ ಒಲವೆಂದು
ಧರೆಯೆಲ್ಲ ನಂಬಿಹುದು….

ಆದರೆ….. ಹುಸಿ,
ನಿನ್ನ ನಂಬಿದ ಕುಲಕೆ
ನೀ ಬರೆದೆ ಎದೆ ಬಿರಿವ ಪುಸಿ

ಹಾಸ…ಪರಿಹಾಸ…..ಮೋಸ!
ನಮ್ಮ ಕನಸಿನ ಮನೆಗೆ
ಎರಗಿ ಬಂದ ನಾಶ…..

‘ಬಾಪು ಆಬೆಗೆ’ ಬಡಿದ ದೆವ್ವ
ಜವಗುಣವ ಮೀರಿ
ಮನುಜತೆಯ ಜೀವಂತ ದೀಪಕೆ ಬಡಿಯಿತು….ದಿವ್ಯ

ಹೊಸಭಾವ, ಜೀವೈಕ್ಯದ ನವೀನ
ರಸದುಂಬಿ
ಮನುಷ್ಯತ್ವ, ಸಮತತ್ವ

ನಿಜವೆಂದು ನಂಬಿ-ದ
ನಿರ್ಮಲ ನಗುಮೊಗದ
ವಿಶ್ವಶಾಂತಿಯ

ಸಹೃದಯ ವಿಶ್ವನೇತ
ಓ ! ನೀನಿಲ್ಲ!!
ಆವ ನಿರ್ದಯ ಕಠೋರ
ನಿರ್ಮಮ ಪ್ರೇತ
ಗೈದಿತು ಮಹಾ
ಪ್ರಾಣಕೆ ಘಾತ….

ನಿನ್ನುಸಿರಿನ
ಬೆಲೆಯನರಿಯದೀ
ಹಾಳು ನರಜಾತಿ

ನಿನ್ನ ಬದುಕಿನ
ನೆಲೆಯ ತಿಳಿಯದೀ
ಕಟುಕವಾನರಕೋತಿ….

ನಿನ್ನಿರವಿನ ಭೇದವರಿಯದ ಜನ
ಕ್ಲೀಬತನಲಿ ಸಿಡಿದರೇನು
ನಂಜಿನ ಗುಂಡು….?

ನೀನಮರ, ಅಜೇಯ
ದೈವ ಮಾನವ,
ಜಗಕಾಗಿ ಮಡಿದ ಗಂಡು…..!
*****