ಏ ಯವ್ವ ಬುಡ್ಡವ್ವ ಗಿಡ್ಡವ್ವ ಮುದುಕವ್ವ
ಉಪ್ಪವ್ವ ಉಪ್ಪೂ ತಾರೆಯವ್ವ
ಪಿಚ್ಚೀನ ಗೊರಕೆವ್ವ ತೂಕಡಿಕಿ ತಕಡೆವ್ವ
ಉಪ್ಪವ್ವ ಉಪ್ಪೂ ನೀಡೆಯವ್ವ

ನೀನೊಂದು ಗುಳ್ಳವ್ವ ಗುಳಕವ್ವ ಉಳಕವ್ವ
ಚಿಬ್ಲುಪ್ಪು ಚಳ್ಳಣ್ಣು ತಾರೇಯವ್ವ
ಗೊಂಗ್ಡ್ಯಾಗ ಗೋಣ್ಹಾಕಿ ಮುಂಗ್ಲ್ಯಾಗಿ ನಗತೀದಿ
ಬಾಯ್ಹಲ್ಲು ಬಿದ್ದಾವು ನೋಡೇಯವ್ವ

ಹಲ್ಲಿಲ್ಲ ತಂಬಿಟ್ಟು ಹಸುವಿಲ್ಲ ಉಪ್ಪಿಟ್ಟು
ಬೇಕೆಂದು ಬಾಯ್ಬಾಯಿ ಬಡಿಯತೀದಿ
ಔಸಿದ್ದಿ ಕುಡಿಯಂದ್ರ ಕಿಸಕ್ಕೆಂದು ನೋಡ್ತೀದಿ
ಹರಕುಗ್ಗಿ ಹರತುಪ್ಪ ಕೇಳತೀದಿ

ಪ್ಯಾಟ್ಯಾನ ಭಜಿ ಅಂದ್ರ ಪುರಮಾಸಿ ಓಡ್ತೀದಿ
ಮೊಮ್ಮಗನ ಉಡದಾರ ಮಾರಽತೀದಿ
ಗುಳಗಡಿಕಿ ಉಂಡೀಗೆ ಹೆಣಬಾಯಿ ಬಿಡತೀದಿ
ಬಿಸಿರೊಟ್ಟಿ ತಿನ್ನಂದ್ರ ಸಾಯಽತೀದಿ

ಹೆಸರುಂಡಿ ತಿನತೀದಿ ಹೊಸಹೂಂಸು ಬಿಡತೀದಿ
ಬ್ಯಾಡಂದ್ರ ಕಟಬಾಯಿ ತಿವಿಯತೀದಿ
ಉಪ್ಪವ್ವ ಉಪ್ಪಂದ್ರ ಆಚಿಮನಿ ಪೌ‌ಅಂತಿ
ಯಚಿಮನಿ ಹುಚಮನಿ ತೋರತೀದಿ

ಈಚಲದ ಹರಿಚಾಪಿ ಸುಳಿಸುತ್ತಿ ಹೊರತಾರು
ತಟ್ನ್ಯಾಗ ನಿನ್ನಿಟ್ಟು ಹುಗಿಯತಾರು
ಇಲ್ಲುಪ್ಪು ಕೊಡದಿದ್ರ ಕಲ್ಲುಪ್ಪು ನೀನಾದಿ
ಅಲ್ಲಪ್ಪನರಮನಿಗೆ ಯರವೂ ಆದಿ
*****