ನನ್ನ ಚಿಕ್ಕ ತಾಯಿ

ನನ್ನ ಚಿಕ್ಕ ತಾಯಿ

ನನ್ನ ತಂದಗೆ ನಾನೊಬ್ಬನೇ ಮಗನು. ನನ್ನ ತಂದೆ ತಾಯಿಗಳು ನನ್ನನ್ನು ಮದುವೆ ಮಾಡದೆ ತೀರಿಹೋದರು. ಆ ದಿನ ಮೊದಲ್ಗೊಂಡು. ನಾನು ನನ್ನ ಚಿಕ್ಕಪ್ಪನ ಮನೆಯಲ್ಲಿದ್ದೆನು. ನನ್ನ ಚಿಕ್ಕತಾಯಿಯನ್ನು ನೋಡಿದರ, ನನಗೆ ಮೈಯೆಲ್ಲ ಉರಿಯುತ್ತಿತ್ತು. ಆದರೆ ಅದನ್ನು ತಪ್ಪಿಸಲಿಕ್ಕೆ ಉಪಾಯವಿಲ್ಲ; ನನಗೆ ಉಪ್ಪನ್ನ ಕೊಡುವವರು ಬೀರೆ ಯಾರೂ ಇಲ್ಲ. ಇಷ್ಟರೂಳಗೆ ನನಗೆ ಮದುವೆಯಾಗಿ ಮೊಮ್ಮಗನ ಮೋರೆ ನೋಡುತ್ತಿದ್ದನು. ಈ ಮುದಿ ಗೂಗೆ – ಆದರೆ ಈಗ ಸಿಟ್ಜಿನಿಂದು ಬೈದು ಏನು ತಾನೆ ಪ್ರಯೋಜನ? ಆದುದೆಲ್ಲ ಆಗಿ ಹೋಯಿತು; ಜನ್ಮದ ಫಲ ತಿಂದು ಆಯಿತು. ಈಗ ಯಾಕೆ ತಾನೆ ಬೈಯುವುದು? ಕೆಲವು ತಿಂಗಳ ಹಿಂದೆ ನನ್ನ ಜಾತಕವನ್ನು ಹೊಸಪೇಟೆ ರಾಜಣ್ಣನವರು ಕೊಂಡು ಹೋಗಿ, ಅವರ ಚೊಚ್ಚಲ ಮಗಳ ಜಾತಕಕ್ಕೆ ಅದು ಕೂಡಿ ಬರುತ್ತದೆ ಎಂದು ಸಂಬಂಧದ ಪ್ರಸ್ತಾಪವನ್ನು ನಮ್ಮವರೊಡನೆ ಮಾಡುತ್ತಿದ್ದರಂತೆ. ಆದರೆ ಈ ಹಾಳು ಮೂಳಿಯ ಕೆಲಸದಿಂದ – ಬೈಯಬಾರದು; ಎಷ್ಟಾದರೂ ಚಿಕ್ಕತಾಯಿ, ನನಗೆ ಅನ್ನಕೊಟ್ಟು ಸಾಕಿದಂಥವಳು; ಮುಂದೆ ತನ್ನ ಚಿನ್ನಬಿಟ್ಟು ಸಾಯುವಂಥವಳು.

ನನ್ನ ಜೆಕ್ಕತಾಯಿಯು ೬ಂ ವರ್ಷದ ಯುವತಿ. ಹಣೆಯಲ್ಲಿ ಕುಂಕುಮ, ಗಂಡನು ಮದುವೆಯಾದೊಡನೆಯೇ ಊರುಬಿಟ್ಟು ಹೋದುದರಿಂದ ಯಾವಾಗಲೂ ಮುತ್ತೈದೆ. ತಲೆಯಲ್ಲಿ ತುಂಬಾ ಕೂದಲು. ಓಂದೆರಡು ಕಪ್ಪೂ ಇದ್ದಾವೆ. ದೇಹ ಸ್ವಲ್ಪ – ಮೊನ್ನೆ ಮುಕ್ತಪುರದಿಂದ ಹಿಂತಿರುಗಿ ಬರುತ್ತಿದ್ದಾಗ ದೋಣಿಯಿಂದ ಇಳಿಯುವ ಸಂದರ್ಭದಲ್ಲಿ ಏನೋ ವಿಪರೀತವಾಯಿತು. ಪ್ರತಿನಿತ್ಯವೂ ಮೈಯ ಆಲಸ್ಯವನ್ನು ಕುರಿತು ಗುಣ ಗುಟ್ಟುವಳು. ಆದರೆ ಹಗಲಿನ ಆಲಸ್ಯವು ರಾತ್ರಿಯ ಆಹಾರವನ್ನು ಕಡಿಮೆ ಮಾಡುತಿದ್ದಿಲ್ಲ. ರಾತ್ರಿ ಅನ್ನವನ್ನು ಊಟ ಮಾಡುತ್ತಿದ್ದಿಲ್ಲ. ಅವಳು ತಿನ್ನುವುದರಲ್ಲಿ ನನಗೂ ಆಗಾಗ್ಗೆ ಒಂದಿಷ್ಟು ಸಿಕ್ಕುತ್ತಿತ್ತು. “ಅಪ್ಪಾ! ಒಂದು ಸಲ ದೇವಸ್ಥಾನದವರೆಗೆ ನನ್ನ ಸಂಗಡ ಬಾರೆಯಾ?” ಎಂದು ಹೇಳಿ ಪ್ರಶಿ ಶುಕ್ರವಾರ ರಾತ್ರಿಯಲ್ಲಿ ಒಂದು ಚಿಗಳಿಯನ್ನು ನನ್ನ ಕೈಗೆ ಹಾಕುತ್ತಿದ್ದಳು. ಹಾದಿಯಲ್ಲಿ ಹೋಗುತ್ತಿದ್ದಾಗ ತನ್ನ ಹಣವನ್ನೂ ಚಿನ್ನವನ್ನೂ ನನ್ನ ಹೆಸರಿಗೆ ಮಾಡುತ್ತೇನಂತಲೂ ತಾನು ಇನ್ನು ಹೆಚ್ಚುಕಾಲ ಬದುಕಲಾರನೆಂತಲೂ ನನ್ನೊಡನೆ ತತ್ತಜ್ಞಾನ ಎತ್ತುತ್ತಿದ್ದಳು.

ಅವಳು ಹೀಳುವಂತೆ ಅವಳ ಬಳಿಯಲ್ಲಿ ಒಂದರಡು ಚಿನ್ನದ ವಸ್ತುಗಳಿದ್ದುವು. ಒಂದು ದೊಡ್ದದಾದ ಓಲೆಜೋಡು ಕಿವಿಯಲ್ಲಿ ಸಣ್ಣದಾಗಿ ತೋರುತಿತ್ತು. ಕೈಗೆ ಎರಡು ಹಿಂಬಳೆಗಳಿದ್ದುವು. ಉಳಿದವುಗಳಲ್ಲೆ ವಿಶೇಷ ಬಲೆಯುಳ್ಳದಾಗಿದ್ದಿಲ್ಲ. ಆದರೂ ಅವುಗಳಲ್ಲಿ ಒಂದು ಆನೆಜಮೆಸರವನ್ನು ಅಧಿಕವಾಗಿ ಎಣಿಸುತ್ತಿದ್ದಳು. ಚಿನ್ನದಿಂದ ಬಿಗಿದ ಆನೆಯ ಕೂದಲುಗಳು ಮಕ್ಕಳಿಲ್ಲದ ಹಂಗಸರು ಇಟ್ಟುಕೊಳ್ಳುವುದು ಅಪರೂಪ. ಆದರ ಈ ನಗವನ್ನು ನಮ್ಮ ಚಿಕ್ಕತಾಯಿಗೆ ಯಾರೋ ಪ್ರಸಿದ್ಧ ಪೌರಾಣಿಕರು ಕೊಟ್ಟಿದ್ದರೆಂದು ಅವಳು ಹೇಳುತ್ತಿದ್ದಳು. ಈ ನಗವನ್ನು ಕೈಯಲ್ಲಿ ಹಿಡಿದು ಜಪಮಾಡಿದರೆ ಊರು ಬಿಟ್ಟು ಹೋದ ಗಂಡನು ಮರಳಿ ಬರುವನು ಎಂದು ನಂಬಿಸಿ ಕೊಟ್ಟುದರಿಂದ ಅದರ ವಿಷಯದಲ್ಲಿ ಹೆಚ್ಚಿನ ಎಚ್ಚರಿಕೆ. ಆಭರಣಗಳನ್ನೆಲ್ಲ ಅರಿವೆಯಲ್ಲಿ ಗಂಟು ಕಟ್ಟಿ ಅವುಗಳನ್ನು ಮೈಯಲ್ಲಿ ಎಲ್ಲಿಯೋ ಅಡಗಿಸುತ್ತಿದ್ದಳು. ಹಗಲು ಅವುಗಳ ಮೇಲೆ ಮನಸ್ಸು ಇರುಳು ಅವುಗಳನ್ನು ಕುರಿತು ಕನಸು.

ಮುಕ್ತಪುರದಲ್ಲಿ ಯಾರೋ ಪೌರಾಣಿಕರು ಎರಡು ತಿಂಗಳ ಹಿಂದೆ ಬಂದಿದ್ದರು. ಪೌರಾಣಿಕರ ಜಪತಪವನ್ನೂ ಸ್ನಾನಸಮಾಧಿಯನ್ನೂ ನೋಡಲಿಕ್ಕೆ ಊರೂರಿಂದ ಜನರು ಓಡುತ್ತಿದ್ದರು. ನನ್ನ ಚಿಕ್ಕತಾಯಿಗೆ ಓಡುವುದಕ್ಕೆ ದೇಹ ಬಿಡುವುದಿಲ್ಲ. ಬಂಡಿಯನ್ನು ಒದಗಿಸಬೇಕೆಂದು ನನ್ನೊಡನೆ ಎಂದಳು. ಅವಳನ್ನು ಕೊಂಡು ಹೋಗಲಿಕ್ಕೆ ಬಂಡಿಯಾಳಲ್ಲಿ ಯಾರೂಬ್ಬನೂ ಕ್ಲುಪ್ತವಾದ ಬಾಡಿಗೆಗೆ ಒಪಲಿಲ್ಲ. ಕಡೆಗೆ ಅವಳನ್ನು ಹೇಗಾದರೂ ದೋಣಿಯಲ್ಲಿ ಕೂತುಕೊಳ್ಳಿಸಿ, ಬಳಿಕ ದೋಣಿಯ ಚಪ್ಪರವನ್ನು ಅಲ್ಲಲ್ಲಿ ಸಿಕ್ಕಿಸಿ, ಮುಕ್ತಪುರಕ್ಕೆ ನಾನು ಅವಳನ್ನು ಕಳುಹಿಸಿದೆನು. ಒಂದುವಾರವು ಕಳೆದ ಮೇಲೆ ಅವಳು ಹಿಂತಿರುಗಿ ಬಂದಳು. ಪ್ರಯಾಣದ ಆಯಾಸವು ಅವಳಲ್ಲಿ ಕಂಡುಬರಲಿಲ್ಲ. ಏಕೆಂದರೆ, ಮನೆಗೆ ಬಂದಕೂಡಲೇ ಅರಿವೆಗಳನ್ನು ಬಿಚ್ಚಲಿಕ್ಕೂ ವಸ್ತಗಳನ್ನು ನೋಡಲಿಕ್ಕೂ ಕುಳಿತಳು. ಗಂಟಿಗೆ ಸುತ್ತಿದ ಒಂದು ಅರಿವೆಯನ್ನು ಬಿಚ್ಚಿದಳು; ಆಮೇಲೆ ಮತ್ತೊಂದನ್ನು ತೆಗೆದಳು; ಬಳಿಕ ಇನ್ನೊಂದನ್ನು ತೆಗೆದಳು. ಪುನಃ ಮತ್ತೊಂದು, ಮತ್ತೊಂದು, ಮತ್ತೊಂದು – ದ್ರೌಪದಿಯ ವಸ್ತ್ರಹರಣವು ಸ್ಮರಣಗೆ ಬರುವಂತೆ ಮಾಡಿದಳು.

ಎಲ್ಲವನ್ನು ಈಚೆಗೆ ತೆಗೆದು ಸ್ವಲ್ಪ ಹೂತ್ತಿನ ಮೇಲೆ “ಹೋಯ್ತು! ಅಪ್ಪಾ! ನನ್ನ ಸರ್ವಸ್ವ ಹೋಯ್ತು” ಎಂಬ ಗೋಳು ಕೇಳಿಸಿತು. ಜಗುಲಿಯಲ್ಲಿದ್ದ ನಾನು ಒಳಗೆ ಓಡಿದೆನು. ಅವಳ ಮುಖವು ಸಿಡಿಲು ಬಡಿದ ತೆರದಲ್ಲಿತ್ತು. ಅರಿವೆ ಚಿಂದಿಗಳಿಂದ ಹಣೆ ಚಚ್ಚಿಕೊಳ್ಳುವುದನ್ನು ಕಂಡು ದುಃಖದ ಕಾರಣವನ್ನು ಊಹಿಸಿದೆನು. ಒಡವೆಗಳ ಗಂಟು ಅರಿವೆಯೊಳಗೆ ಇದ್ದಿಲ್ಲ. ಮುದುಕಿಗೆ ತಕ್ಕದಾದ ಶಾಸ್ತಿಯಾಯಿತೆಂದು ನಾನು ಒಂದು ನಿಮಿಷ ಹಿಗ್ಗಿದೆನು. ಆದರೆ ಮುದುಕಿಯ ರೋದನದಲ್ಲಿ ನನ್ನ ಮನಸ್ಸು ಕರಗುತ್ತಾ ಬಂತು. ಅವಳ ದುಃಖ ಧ್ವನಿಯಲ್ಲಿಯೂ ಅವಳ ದುಃಖಾಶ್ರುಗಳಲ್ಲಯೂ ಅವಳ ನಿಷ್ಟಾಪಟ್ಯವೂ, ಅವಳ ಸ್ಥೂಲಬುದ್ಧಿಯೂ, ಅವಳ ವಾತ್ಸಲ್ಯವೂ ಸ್ಫುಟವಾದವು. “ಅಪ್ಪಾ!” ತಲೆಯನ್ನು ಚಚ್ಚಿಕೊಳ್ಳುತಾ “ಅಪ್ತಾ! ನನ್ನ ಸರ್ವಸ್ವಕ್ಕೆ ಯಾರೋ ಕೈಹಾಕಿದರು. ಹೊಟ್ಟೆಕಟ್ಟಿ ಕೂಡಿಸಿದ ಮೂರುಕಾಸುಗಳನ್ನು ನಿನಗೆ ಕೊಡಬೇಕೆಂದಿದ್ದೆನು. ಒಂದು ಕಾಸು ಕೂಡಾ ಉಳಿಯಲಿಲ್ಲ. ನಗಗಳ ಚಿಂತೆಯನ್ನು ನಾನು ಕಟ್ಟಿಕೊಳ್ಳಲಿಲ್ಲ. ಆ ಆನೆಜಮೆಸರ ಹೋಯಿತಲ್ಲ! ಇನ್ನು ನಿನ್ನ ಚಿಕ್ಕತಂದೆಯವರನ್ನು ನೋಡುವೆನೆಂಬ ಆಸೆಯು ಇಂದಿಗೆ ಆಯಿತು. ಎಲ್ಲವಾದರೂ ಹೋಗಬಹುದಿತ್ತು. ಈ ನಗವು ಉಳಿಯಬಹುದಿತ್ತು. ಬೆಳಗ್ಗೆ ನಾನು ಯಾರ ಮೋರೆಯನ್ನು ಕಂಡೆನೋ?” ಎಂದು ತಡವೆತಡವೆಗೆ ಮಕ್ಕಳಂತೆ ಹಂಬಲಿಸಿ ಅಳುತಿದ್ದಳು.

ಅವಳು ಅಳುವುದನ್ನು ನೋಡಿ ನನ್ನ ಕಣ್ಣುಗಳಲ್ಲಿಯೂ ಒಂದೆರಡು ತಟಕು ನೀರು ಒಸರಿತು. ಮುಂದೆ ನನಗೆ ಸಿಕ್ಕುವ ಗಂಟನ್ನು ಯಾರೋ ಎತ್ತಿದರೆಂದು, ಒಂದು ನಿಮಿಷದ ಮೇಲೆ, “ನನ್ನ ಒಡವಗಳನ್ನು ಯಾರು ತೆಗೆದಿರಬಹುದು? ದೋಣಿಯಾಳು ತೆಗೆದಿರಲಾರನು; ಅವನು ನನ್ನ ಹತ್ತಿರವೇ ಮಲಗಿದ್ದನು. ಅಯ್ಯೋ! ನನ್ನ ಜಪಸರವು ಹೋಯಿತಲ್ಲ! ಅವರ ಮುಖವನ್ನು ಈ ಇನ್ನೊಂದುಸಲ ನೋಡುವನೆಂಬ ಆಸೆಯೂ ತೀರಿತಲ್ಲ!” ಎಂದು ಪುನಃ ಪ್ರಲಾಪಿಸಿದಳು. ಸ್ವಲ್ಪ ಹೊತ್ತಿನ ಮೇಲೆ ತಾನೇ ಸಮಾಧಾನವನ್ನು ಹೊಂದಿ “ಅಪ್ಪಾ! ನೀನಾದರೂ ಪ್ರಯತ್ನ ಮಾಡು; ನೀನು ಸೊಂಟ ಕಟ್ಟಿದರೆ ಅವುಗಳೆಲ್ಲವು ಸಿಕ್ಕದೆ ಇರಲಾರವು. ಸಿಕ್ಕಿದರೆ ನನ್ನ ಬೊಟ್ಟಿನ ಕುಂಕುಮ ಉಳಿಸಿದ ಪುಣ್ಯ ನಿನಗೆ” ಎಂದು ಹೇಳಿದಳು. ಕಳವನ್ನು ಕುರಿತು ಪೂಲೀಸನವರಿಗೆ ವರ್ತಮಾನ ಮುಟ್ಟಿಸಿದ್ದಾಯಿತು.

ಯಾರ ಮೇಲೂ ಸಂಶಯವಿದ್ದಿಲ್ಲ; ಸಂಶಯವಿದ್ದರೂ ನನ್ನ ಸಂಶಯವು ಫಲಿಸದಿದ್ದರೆ ವಿನಾಕಾರಣವಾಗಿ ವಿರೋಧ; ವಿರೋಧವಾದರೂ ಅವಚಿಯು ನನ್ನನ್ನು ಇನ್ನೂ ಹೆಚ್ಚಾಗಿ ಪ್ರೀತಿಸಳು. ಆದರೆ ಕಳ್ಳನನ್ನು ಹುಡುಕುವುದು ಹೇಗೆ? ಅನೇಕರಾದರೊ, ಅರಿವೆ ವಾಸನೆಯಿಂದ ಹೆಜ್ಜೆ ಕುರುಹುಗಳಿಂದ, ಕೆಮ್ಮಿನ ಸ್ವರದಿಂದ, ಎಂಜಲ ರುಚಿಯಿಂದ ಪಾತಾಳದಲ್ಲಿ ಅಡಗಿದ್ದ ಕಳ್ಳನನ್ನು ಎತ್ತಿ ತಂದಿರುವರಂತೆ, ಪಂಚೇಂದ್ರಿಯಗಳ ಇಂತಹ ಗುಣವಿಶೇಷವು ನನ್ನಲ್ಲಿಲ್ಲ. ಆದರೂ ಸಾಧಿಸಬೇಕೆಂದು ದೃಢಮಾಡಿದೆನು. ಮೊದಲು ಹೆಜ್ಜೆಗಳ ಗುರುತುಗಳನ್ನು ಹಿಡಿದ್ದು ಹುಡುಕಿದೆನು. ಜಗುಲಿಯ ಮೇಲೆ ಕೆಲವು ಕುರುಹುಗಳಿದ್ದವು; ಅಂಗಳಕ್ಕೆ ಇಳಿಯುತ್ತಲೇ ಆ ಗುರುತುಗಳು ಒಂದೊಂದು ಅಳಿಸಿಕೊಂಡು. ಹೋದುವು. ಮನೆಯ ಎಲ್ಲವನ್ನೂ ಹುಡುಕಿದೆನು. ಹಿಂತಿರುಗಿ ಬರುತಿದ್ದಾಗ ಒಂದು ನಸೆಡಬ್ಬಿಯ ಬಿರುಡೆ ಹಾದಿಯಲ್ಲಿ ತೋರಿತು. ಕಳ್ಳ ಸಿಕ್ಕಿದನೆಂದು ಭಾವಿಸಿದೆನು. ಮನಸ್ಸಿನಲ್ಲಿ ಔತ್ಸುಕ್ಯವು ಕುದಿದು ಉಕ್ಕಿಬಂತು. ಅವಚಿಗೆ ತಿಳಿಸಲಿಕ್ಕೆ ಬೇಗನೆ ಓಡಿದೆನು. ಓಡುತ್ತಿದ್ದಾಗ ನನ್ನ ಉಡಿಯಿಂದ ಏನೋ ಕೆಳಗೆ ಬಿತ್ತು. ಸ್ವಲ್ಪ ಅಲ್ಲಿಯೆ ತಡೆದೆನು. ಬಿದ್ದ ಪದಾರ್ಥವನ್ನು ಕೈಯಲ್ಲಿ ಹಿಡಿದು ನೋಡಿದೆನು. ಒಳಗೆಲ್ಲ ಬರಿದಾಗಿತ್ತು. ಬಿರುಡೆ ಜಾರಿದುದರಿಂದ ನಸೆಯೆಲ್ಲ ಸುರಿದುಹೋಗಿ ಬರಿದಾದ ನನ್ನ ನಸೆಡಬ್ಬಿ, ನನ್ನ ಕೈಯಲ್ಲಿದ್ದ ಬಿರುಡೆಯನ್ನು ಅದಕ್ಕೆ ಜೋಡಿಸಿದೆನು; ಸರಿಯಾಗಿತ್ತು. ಒಂದು ತಡವೆಗೆ ನನ್ನ ಉತ್ಸಾಹದ ಮೇಲೆ ತಣ್ಣೀರು ಎರಚಿದಂತಾಯಿತು. ಒಂದು ತಡವೆಗೆ ಕಳ್ಳನು ಸಿಕ್ಕುವನೆಂಬ ನಂಬಿಕೆಯು ಮನಸ್ಸಿನಿಂದ ಕಿತ್ತುಹೋಯಿತು.

ಪ್ರಾತಃಕಾಲದಲ್ಲಿ ನಾನು ಮನೆಯಿಂದ ಹೊರಟೆನು. ಎಷ್ಟೋ ಸ್ಥಳಗಳಲ್ಲಿ ಮಾತನಾಡುತ್ತಾ ಕುಳಿತೆನು. ಒಂದೆರಡು ಮನೆಗಳಲ್ಲಿ ‘ಕಾಫಿ’ ಕುಡಿದಾಯಿತು. ಮಧ್ಯಾಹಕ್ಕೆ ಮನೆಗೆ ಹಿಂತಿರುಗಿದೆನು. ಹಾದಿಯಲ್ಲಿ ಒಬ್ಬ ಹೆಂಗಸನ್ನು ನೋಡಿದೆನು; ನೋಡುತ್ತಲೇ ಹೋದ ಓಡವೆ ಗಂಟು ಸ್ಮರಣೆಗೆ ಬಂತು. ಒಡವೆ ಗಂಟಿನಲ್ಲಿ ಚಿನ್ನದಿಂದ ಬಿಗಿದ ಆನೆಜಮೆ ಇತ್ತು; ಈ ಸ್ತ್ರೀಯ ಮಸ್ತಕದಲ್ಲಿ ಅಷ್ಟೇ ಬಿರುಸಾದ ಕೇಶಪಾಶಗಳು ಜಡೆ ಕಟ್ಟಿದ್ದುವು. ನನ್ನ ದೃಷ್ಟಿಯು ಅವಳ ಕೂದಲುಗಳಲ್ಲಿ ಸಿಕ್ಕಿಕೊಳ್ಳುತ್ತಲೇ ಅವಳು ತನ್ನ ಎಡಗೈಯಿಂದ ತುರುಬನ್ನು ಸವರಿದಳು. ನಾನು ನನ್ನಲ್ಲಿಯೇ ನಾಚಿಕೊಂಡು ಮುಂದರಿಸಿದೆನು. ಸ್ವಲ್ಪದೂರಕ್ಕೆ ಹೋದ ಮೇಲೆ ನಾನು ಮುಖ ತಿರುಗಿಸಿ ನೋಡಿದರೂ ಅವಳ ತುರುಬು ಚೆನ್ನಾಗಿ ನೋಡಲಿಕ್ಕೆ ಸಿಕ್ಕಲಿಲ್ಲ. ಅವಳು ನನ್ನಂತೆಯೇ ಮುಖ ತಿರುಗಿಸಿ ಯಾವುದನ್ನೋ ನೋಡುತಿದ್ದಳು. ನಾನು ಮನೆಯನ್ನು ಸೇರಿದೆನು. ಆದರೆ ಅವಚಿಯ ಇದಿರು ಹೋಗಲಿಕ್ಕೆ ನನಗೆ ಮೋರೆ ಇಲ್ಲ. ಅವಳಾದರೋ? ನಾನು ಕೈಯಲ್ಲಿ ಕಳ್ಳನನ್ನು ಹಿಡಿದು ತಾರದೆ ಬಿಡೆನೆಂದು ದೃಢವಾಗಿ ನಂಬಿದ್ದಳು. ಕಳ್ಳನ ಶಿಕ್ಷೆಯ ಮೇಲೆ ಅವಳ ಮನಸ್ಸು ನಿಲ್ಲಲಿಲ್ಲ; ಅವಳ ಜೀವವು ಹೋದೂಡವೆಗಳ ಮೇಲಿತ್ತು. ನಾನು ಬರುತ್ತಲೇ ಗಂಟನ್ನು ಕುರಿತು ನನ್ನನ್ನು ಕೇಳಿದಳು. ನಾನು ಇಲ್ಲದ ವೇಳೆಯಲ್ಲಿ ಪೂಲೀಸನವನು ಬಂದು ಒಂದು ರೂಪಾಯಿಯನ್ನು ಇಸುಕೊಂಡು ಹೋದನೆಂದು ಅವಳಿಂದ ತಿಳಿದೆನು. ನಾನು ಹಗಲು ಇರುಳು ಹುಡುಕುವುದರಲ್ಲಿಯೇ ಇದ್ದೆನೆಂದು ಹೇಳಿದೆನು. ಹೀಗೆ ಸುಳ್ಳು ಹೇಳುತ್ತಾ ಮೂರು ದಿವಸಗಳನ್ನು ಕಳೆದೆನು. ಆ ದಿನ ಮೊದಲ್ಗೊಂಡು ಸುಳ್ಳಂದರೇನು ಸತ್ಯವೆಂದರೇನು ಎಂಬ ಭೇದವು ನನ್ನ ಮನಸ್ಸಿಗೇ ಬರುತ್ತಿದ್ದಿಲ್ಲ.

ಅನಿವಾರ್ಯವಂದು ತೋರುವ ಅಪಾಯಗಳನ್ನು ಪರಿಹರಿಸುವ ಉಪಾಯಗಳು ಮೂಢರ ಮನಸಿನಲ್ಲಿಯೂ ಹೊಳೆಯುವುದುಂಟು. ಈ ಮಾತು ನನ್ನ ವಿಷಯದಲ್ಲಿ ಸಿದ್ಧವಾಗಿ ದೃಷ್ಟಾಂತಕ್ಕೆ ಬಂತು. ಆನೆಜಮೆಸರವನ್ನು ಹೀಗೂ ಶೋಧಿಸದಿದ್ದರೆ ಚಿಕ್ಕ ತಾಯಿಯ ಮನಸ್ಸು ಎಂದೂ ಸ್ವಸ್ಥವಾಗಿರದು; ಅವಳು ತನ್ನ ಮನೆಮಾರನ್ನು ನನ್ನ ಹಸರಿಗೆ ಮಾಡುವಳು ಎಂಬುದೊಂದು ಆಶೆಯು ಇನ್ನೂ ಉಳಿಯದು. ನನ್ಕ ಚಿಕ್ಕ ತಾಯಿಗೆ ದೇವರ ಮೇಲೆ ಭಕ್ತಿಯೂ, ಪೌರಾಣಿಕರ ಮೇಲೆ ಪ್ರೀತಿಯೂ ಅಧಿಕವಾದುದರಿಂದ, ಅವಳ ಸರ್ವಸ್ವವು ಅವಳ ಮರಣವನ್ನು ನಿರಂತರ ಎದುರ್ನೋಡುತ್ತಿರುವ ಪೌರಾಣಿಕರ ಹಸ್ತಗತವಾಗುವುದಲ್ಲದೆ ಅದರಲ್ಲಿ ಒಂದು ಕಾಸು ನನ್ನ ಪಾಲಿಗೆ ಬರುವುದರಲ್ಲಿ ಬಹಳ ಸಂದೇಹವಿತ್ತು. ಆದರೆ ನಗವನ್ನು ನಾನು ಹುಡುಕಿ ತಂದರೆ ಅವಳ ವಾತ್ಸಲ್ಯವನ್ನು ನನ್ನ ಕಡೆಗೆ ತಿರುಗಿಸಿ, ಅವಳಿಗೆ ನಾನೇ ಉತ್ತರಾಧಿಕಾರಿಯಾಗುವ ಹಾಗೆ ಮಾಡಿಸಿದರೆ ನನ್ನ ಅದೃಷ್ಟವು ಮುಂದೆ ಅಷ್ಟೊಂದು ಹಾಳಾಗದು. ಈ ಕಾರಣಗಳಿಂದ ಆಭರಣಗಳನ್ನು ಹೇಗಾದರೂ ಹುಡುಕಿ ತರುವುದಕ್ಕೆ ಮನಸ್ಸನ್ನು ನಿರ್ಧರಿಸಿದೆನು. ಆದರೆ ಆಭರಣಗಳೇನೋ ಅಕ್ಕಸಾಲಿಗನ ಅಗ್ಗಿಷ್ಟಿಕೆಯನ್ನು ಸೇರಿದುವು; ಅವುಗಳು ಇನ್ನು ಚಿಕ್ಕತಾಯಿಯ ಕಣ್ಣಿಗೆ ಬೀಳುವ ಹಾಗಿಲ್ಲ. ಅದು ಸಿಕ್ಕದಿದ್ದರೆ ಅದರಂತೆ ಇನ್ನೊಂದನ್ನು ಒದಗಿಸಿ ಕೊಳ್ಳುವುದು ಕಷ್ಟಸಾಧ್ಯವೇ? ಹೀಗೆ ಒದಗಿಸಿದ ನಗದಿಂದ ಮುದಿಕಣ್ಣುಗಳನ್ನು ಮೋಸ ಗೊಳಿಸುವುದು ದೊಡ್ಡದೇ? ಈ ದುರಾಲೋಚನೆಗಳು ನನ್ನ ಮನಸ್ಸಿನಲ್ಲ ಪುನಃ ಪುನಃ ತಿರುಗಿದುವು. ಮರುದಿನ ಪ್ರಾತಃಕಾಲ ಎದ್ದು, “ಅವಚೀ! ಅವಸರಪಟ್ಟರೆ ಕಾರ್ಯವು ಭಂಗವಾಗುವುದು. ಇನ್ನೊಂದು ವಾರದೊಳಗೆ ನಾನು ಕಳ್ಳನನ್ನು ಹಿಡಿಯದೆ ಬಿಡೆನು. ನನ್ನ ಮನಸ್ಸಿಗೆ ಕೆಲವು ಉಪಾಯಗಳು ನಿನ್ನೆ ರಾತ್ರಿ ಕಂಡು ಬಂದುವು. ಇಂದು ಕಳ್ಳನ ಹಜ್ಜೆಯಲ್ಲಿಯೇ ನಾನು ನಡೆಯುತಿದ್ದೇನೆ. ನಾನು ನಗವನ್ನು ತಾರದಿದ್ದರೆ ನನ್ನ ಹಸರು ರಾ… ಅಲ್ಲ” ಎಂದು ಹೇಳಿ ನನ್ನ ಉಪಾಯಗಳನ್ನು ಕಾರ್ಯಗಳಲ್ಲಿ ಸಿದ್ಧಪಡಿಸಲಿಕ್ಕೆ ಹೊರಟೆನು.

ಆನೆಜಮೆಯನ್ನು ಒದಗಿಸುವುದು ಕಷ್ಪಸಾಧ್ಯವೆಂದು ನಾನು ಎಣಿಸಲಿಲ್ಲ. ಎರಡು ದಿನಗಳ ಹಿಂದೆ ಸಂಜೆಯಲ್ಲಿ ಮನೆಗೆ ಹಿಂತಿರುಗುತ್ತಿದ್ದಾಗ ಅಂತಹ ಕೂದಲುಗಳು ಸ್ತ್ರೀ ಮಸ್ತಕದಲ್ಲಿ ನೋಡಿದುದು ಸ್ಮರಣೆಯಲ್ಲಿತ್ತು. ಅವುಗಳಲ್ಲಿ ಒಂದೆರಡು ಕೂದಲುಗಳು ಬಲೆಗೆ ಸಿಕ್ಕಿದರೂ ನನ್ನ ಕಾರ್ಯವು ನರವೇರುವುದು. ಸ್ತ್ರೀಯರಲ್ಲಿ ಕೆಲವರು ತಮ್ಮ ಪುರುಷರ ಜುಟ್ಟನ್ನು ಹಿಡಿದು, ತಮಗೆ ವಿಧೇಯರಾಗಿ ಅವರನ್ನು ಇರಿಸುವರಂತೆ; ನಾನು ಅವರಂತೆಯೇ ಪ್ರೀತಿಯನ್ನು ನಟಿಸಿದರೆ ಒಬ್ಬ ಹೆಂಗಸಿನ ಕೂದಲನ್ನಾದರೂ ಹಿಡಿಯಲಾರೆನೆ? ಅದಲ್ಲದೆ ನನಗೆ ಬೇಕಾದ ಕೂದಲುಗಳಿರುವ ಹೆಂಗಸು ಸಾಮಾನ್ಯೆಯಾಗಿರುವಳು; ರಾಜಣ್ಣನವರ ನೆರೆಮನೆಯಲ್ಲಿ ಕೆಲಸ ಮಾಡಿ ಕಾಲಕ್ಷೇಪ ಮಾಡುವಂತಹಳು ಕಾಸು ಕೊಟ್ಟರೆ ಕೂದಲ್ಲು ಕೊಡಲಾರಳೇ? ಹೀಗೆ ಮನಸಿನಲ್ಲಿ ಯೋಚಿಸುತ್ತಾ ಹಾದಿ ನಡೆದುದರಿಂದ ಗೋವಿಂದರಾಯರ ಮನೆ ದೂರದಲ್ಲಿದ್ದುದನ್ನು ತಿಳಿಯಲೇ ಇಲ್ಲ. ಕೆಲವು ಹೆಜ್ಜೆ ನಡೆಯುತ್ತಲೇ ಮನೆಯು ಸಮೀಪಿಸಿತು. ಅಂಗಳದಲ್ಲಿ ಅವಳು ಏನೋ ಕೆಲಸ ಮಾಡುವುದನ್ನು ಮಾರ್ಗದ ಮೇಲೆ ನಿಂತು ನೋಡಿದೆನು. ಮನೆಯ ಯಜಮಾನರನ್ನು ನೋಡಲಿಕ್ಕೆ ಬಂದೆನೆಂಬ ನಪಮಾಡಿ ಮನೆಯನ್ನು ಹೊಕ್ಕೆನು. ಅಂಗಳದಲ್ಲಿ ಅವಳನ್ನು ನೋಡುತ್ತಲೇ ನನ್ನ ಮನಸ್ಸು ಸ್ವಲ್ಪ ಹಿಂಜರಿಯಿತು. ಆ ರಮಣಿಯು ೩ಂಕ್ಕೆ ಮೀರಿರಲಿಲ್ಲ. ದೇಹಕಾಂತಿಯು ಕೃಷ್ಣವರ್ಣದಿಂದ ಮಂಜುಳವಾಗಿತ್ತು. ಆ ಸಂಕುಚಿತ ಚಕ್ಷುಗಳನ್ನು ಆವರಿಸಿದ ಭ್ರೂಯುಗ್ಮವು ಲಲಾಟ ಪ್ರದೇಶದಲ್ಲಿ ಕಲಭಕೇಶದಂತಿದ್ದ ಅವಳ ಅಲಕಾವಳಿಯನ್ನು ತಡವೆ ತಡವೆಗೆ ಚುಂಬಿಸುತ್ತಿತ್ತು. ತಾಂಬೂಲದಿಂದಾ ರಕ್ತವಾದ ದಂತಗಳು ಅಧರನಿರೋಧವನ್ನು ಅತಿಕ್ರಮಿಸಿ ಮುಖದ ಮೇಲೆ ಅಲಂಕೃತವಾದ ಕೆಂಪು ಚಿಬ್ಲುಗಳನ್ನು ನೋಡುವಂತೆ ವಿರಾಜಿಸುತ್ತಿದ್ದವು. ಕಂಚುಕವು ಸ್ಕಂದಾಗ್ರದಲ್ಲಿಯೇ ಪೂರೈಸಿದುದರಿಂದ ಉಳಿದ ಹಸ್ತಭಾಗದಲ್ಲಿ ಗಾಜಿನ ಹಿಂಬಳೆಗಳಲ್ಲದೆ ಮತ್ತೊಂದಲಂಕಾರವಿರಲಿಲ್ಲ. ಜಗುಲಿಯ ಮೇಲೆ ಯಾರೂ ಇಲ್ಲದುದನ್ನು ನೋಡಿ, ಅವಳೂಡನೆ ಮಾತು ಹಗೆ ಎತ್ತುವುದು ಎಂದು ಒಂದು ನಿಮಿಷ ಯೋಚಿಸಿ ಅಲ್ಲಿಯೇ ತಡೆದೆನು. ಏನು ಮಾಡಿದರೂ ಹೃದಯವು ದಡದಡಿಸುವುದಲ್ಲದೆ ಮಾತು ಬಾರದು. ಕಡೆಗೆ ಪ್ರಯತ್ನಪೂರ್ವಕವಾಗಿ “ಮ್ ಮ್ ಮನೆ ಯಜಮಾನ ರಿರುವರೇ?” ಎಂದು ವಿಚಾರಿಸಿದೆನು, ಅಂದು ಮಾತನಾಡಿದುದು ಪೂರ್ಣ ಸ್ಮರಣೆಯಲ್ಲಿಲ್ಲ. ಆದರೆ ಅವಳು ನನ್ನ ಮಾತಿಗೆ ಪ್ರತ್ಯುತ್ತರ ಕೊಡಲಿಲ್ಲ. ಕಸಗುಡಿಸುವ ಸಪ್ಪುಳದಲ್ಲಿ ನನ್ನ ಮಾತು ಅವಳಿಗೆ ಕೇಳಿಸಲಿಲ್ಲವೆಂದು ನಾನು ಪುನಃ ವಿಚಾರಿಸಿದೆನು. ಅದಕ್ಕೆ ಅವಳು ಇಲ್ಲವೆಂದು ಉತ್ತರ ಕೊಟ್ಟಳು. ನಾನು ಧೈರ್ಯಗೊಂಡೆನು. ಆ ಮಾತು ನನಗೆ ಕೇಳಿಸಲಿಲ್ಲವೆಂದು ಹೇಳಿ ಅವಳ ಬಳಿಗೆ ಹೋದೆನು. ಹತ್ತಿರ ಬರುತಲೇ ನನ್ನ ಮೂಗಿನಲ್ಲಿ ವಿಜಾತೀಯವಾದ ಗಾಳಿಯು ಬೀಸಿದಂತಾಯಿತು. “ಯಜಮಾನರು ಮನೆಯಲ್ಲಿ ಇರುವರೇ?” ಎಂದೂ ಮತ್ತೆ ಕೇಳಿದೆನು. “ಇಲ್ಲ; ಅವರು ಬೆಳಗ್ಗೆ ಎದ್ಗು ಹೋಗಿರುವರು” ಎಂದಳು. ಆ ಬಳಿಕ ಅವಳು ಸುಮ್ಮನಾದುದನ್ನು ನೋಡಿ, ನಾನು ಮನಸ್ಸಿನಲ್ಲಿಯೇ ಏನೋ ಹೇಳಿ ಹಿಂತಿರುಗಿದೆನು. ಆಗಲೇ ಒಬ್ಬ ಹೆಂಗಸು ಅಂಗಳದಿಂದ ಜಗುಲಿಯನ್ನು ಹತ್ತಿದಳು. ಅವಳು ಯಾರೆಂದು ತಿಳಿಕೊಳ್ಳುವ ಶ್ರಮವನ್ನು ತೆಗೆದುಕೊಳ್ಳದೆ, ನನ್ನ ಕೃತ್ಯಕ್ಕೆ ನಾನೇ ಹೆದರಿ ಬೀದಿಗೆ ಇಳಿದೆನು. ನನ್ಕ ಸತ್ಕಾರ್‍ಯದ ಪ್ರಸ್ತಾವನೆಯು ಇಲ್ಲ ಮುಗಿದುದು.

ಕಾರ್ಯಸಾಧನೆಯಲ್ಲಿ ವಿಘ್ನಗಳು ಪ್ರತಿಭಟಿಸಿದರೂ ಬುದ್ಧಿವಂತರು ಸ್ಥಿರಪ್ರಯತ್ನರಾಗಿ ಅವುಗಳನ್ನು ಕೊನೆಗಾಣಿಸಬೇಕೆಂಬುದೊಂದು ಹಿರಿಯರ ಮಾತು ಇರುವುದು. ಇದಕ್ಕನುಸಾರವಾಗಿ ನಡೆಯಬೇಕೆಂದು ನಾನು ನಿಶ್ಚಯಿಸಿದೆನು. ಚಿಕ್ಕತಾಯಿಯನ್ನು ಮೋಸಗೊಳಿಸಲಿಕ್ಕೆ ಈ ಸ್ತ್ರೀಯ ಪರಿಚಯವು, ಅದೂ ಸಾಲದಿದ್ದರೆ ಅವಳೊಡನೆ ಅನೃತ ಪ್ರಣಯವು ಅವಶ್ಯವೆಂದು ನನ್ನ ಮನಸ್ಸಿಗೆ ಖಚಿತವಾಯಿತು. ಕಳವಾದ ಆನೆಜಮೆಸರದಂತೆ ಮತ್ತೊಂದನ್ನು ಇವಳ ಕೂದಲುಗಳಿಂದಲ್ಲದೆ ಇನ್ನು ಯಾವ ಸಾಮಗ್ರಿಯಿಂದಲೂ ಓದಗಿಸಲಿಕ್ಕೂ ಸಾಧ್ಯವಿಲ್ಲವೆಂದು ನನ್ನ ಮನಸ್ಸಿಗೆ ಬಲವಾಗಿ ಕಂಡುಬಂತು. ಆದರೆ ನವೀನ ಈ ಸ್ತ್ರೀಯು ತನ್ನ ತಲೆಯನ್ನು ನನ್ನ ಕೈಯಲ್ಲಿ ಕೊಡುವುದು ಬಹಳ ಸಂದೇಹಾಸ್ಪದವಾಗಿತ್ತು. ಏಕೆಂದರೆ, ಅವಳ ತಲೆ ಮಾತ್ರವಲ್ಲ, ಸಂಪೂರ್ಣ ದೇಹವು ಬೇರೆಯವರ ವಶವಾಗಿರುವ ಸಂಗತಿಯಲ್ಲಿ ಅಂತಹ ಕೇಶಸಾಧನೆಯಲ್ಲಿ ನನ್ನ ಕೂದಲು ಮಾತ್ರವಲ್ಲ, ತಲೆ ಹೋದೀತೆಂಬ ಹದರಿಕೆಯು ನನಗಿತ್ತು. ಅದಲ್ಲದೆ ಕೋಳಿಗೆ ತನ್ನ ಚೂಡದ ಮೇಲೆ ಎಷ್ಟು ಪೇಮವೋ ಅದಕ್ಕಿಂತಲೂ ದಶಾಂಶವಾಗಿ ಅವಳಿಗೆ ತನ್ನ ವೇಣಿಯ ಮೇಲೆ ಪ್ರೇಮವಿತ್ತು. ಆದರ ನ್ಯಾಯಾಧೀಶನ ಸತ್ಯಸಂಧತೆಯನ್ನೂ ನಾರಿಯರ ಸತೀತ್ವವನ್ನೂ ಸೂರಗೊಳ್ಳುವ ಹಣವು ಒಬ್ಬ ಕ್ಷುದ್ರಸ್ತ್ರೀಯ ಒಂದೆರಡು ಕೂದಲುಗಳನ್ನು ಕೊಂಡುಕೂಳ್ಳಲಾರದೇ? ಒಂದು ಹಿಡಿ ಅಕ್ಷಿಗೋಸುಗ ದಿನವೆಲ್ಲ ಕಷ್ಟ ಮಾಡುವವಳು ಒಂದೆರಡು ರೂಪಾಯಿಗೆ ಕೆಲವು ಕೂದಲುಗಳನ್ನು ಕೂಡಲಾರಳೇ? ಈ ವಿಧವಾದ ತರ್ಕವಿತರ್ಕಗಳನ್ನು ನನ್ನಲ್ಲಿಯೇ ಮಥಿಸುತ್ತಾ ನಾನು ಪುನಃ ಮನೆಯನ್ನು ಸೇರಿದೆನು.

ಮೂರು ದಿವಸಗಳು ನಿಲ್ಲದೆ ಕಳೆದುವು. ನಾಲ್ಕನೆಯ ದಿನ. ರಾಯರ ಮನೆಗೆ ಹೋದೆನು. ಹೋದವನು ಕಾಲು ತೊಳಯುವುದಕ್ಕೆ ನಟ್ಟನೆ ಬಚ್ಚಲಿಗೆ ಹೋದೆನು. ಕೂದಲಿನವಳು ಒಲೆಗೆ ಕಟಿಗೆಯನ್ನೊಟ್ಟಿ, ಬೆಂಕಿಯನ್ನುರಿಸುತ್ತಿದ್ದಳು. ನನ್ನನ್ನು ಮೆಲ್ಲಗೆ ನೋಡುತ್ತಲೇ – “ಹಾಳು ಕಟ್ಟಿಗೇ! ಊದಿ ಊದಿ ಕಣ್ಣು ಹೋಯಿತು. ಇನ್ನೂ ಉರಿಯುವುದಿಲ್ಲ.” ಎಂದು ತನ್ನಲ್ಲಿಯೇ ಗುಣಗುಟ್ಟುತ್ತಿದ್ದಳು. “ಕಾಲು ತೊಳೆಯುವುದಕ್ಕೆ ಒಂದು ತಪ್ಪಲೆ ನೀರು ಈಚೆಗೆ…..” ಎಂದು ದೃಢಮನಸ್ಕನಾಗಿ ಕೇಳಿದೆನು. ಅವಳು ಎದ್ದು ನಿಂತಳು. ಆದರೆ ನಿಂತವಳು ಕೈಯಲ್ಲಿ ತಪ್ಪಲೆಯನ್ನು ಕೊಳ್ಳದೆ, ಬೆಳ್ಳಿ ಬಿಗಿದ ನಸೆಡಬ್ಬಿಯನ್ನು ಕುಪಸದಿಂದೀಚೆಗೆ ತೆಗೆದಳು. ನಸೆ ಉಂಟೋ ಇಲ್ಲವೋ ಎಂದು ನೋಡುವಂತೆ ಡಬಿಯನ್ನು ತನ್ನ ಕಣ್ಣಿದಿರಿಗ (ಆದುದರಿಂದ ನನ್ನ ಕಣ್ಣಿದಿರಿಗೂ) ಹಿಡಿದು ಅಲ್ಲಿಯೇ ತಡೆದಳು. ನಾನೇನೋ ಧೈರ್ಯಗೊಂಡು, ಕಾಲು ತೊಳೆಯುವುದನ್ನು ಮರೆತು – “ಚಲೋ ನಸೆಡಬ್ಬಿ! ನಸೆ ಇಲ್ಲವೆ?” ಎಂದು ಕೇಳಿದೆನು. ಅವಳು ಡಬ್ಬಿಯನ್ನು ನನ್ನ ನೀಡಿದ ಕೈಗೆ ಕೊಡುವುದಕ್ಕೆ ಲಜ್ಜಿತಳಾಗಿ ನನ್ನ ಕಣ್ಣ ಮುಂದಿಟ್ಟು, ತಪ್ಪಲೆಯನ್ನು ಹಿಡಿದು, ಗುಡಾಣದಲ್ಲಿ ಮುಳುಗಿಸುತ್ತಿದ್ದಳು. ಆಗ ಏನು ಕಾರಣವೋ ನನಗೆ ಮುಗುಳು ನಗೆ ಬಂತು; ನಾನು ನಗುವುದನ್ನು ಅವಳು ಓರೆ ನೋಟದಿಂದ ನೋಡದೆ ಹೋಗಲಿಲ್ಲ. ತಪ್ಪಲೆಯನ್ನು ನೀರು ತುಂಬಿ ನನ್ನ ಕೈಗೆ ಕೊಡುತ್ತಿದ್ದಾಗ ಅವಳೂ ನಗಾಡುತ್ತಿದ್ದಳು. ಆ ಸಮಯದಲ್ಲಿ ಯಾರೋ ಬರುವ ಸಪ್ಪುಳಾದುದರಿಂದ ನಾನು ಈಚೆಗೆ ಸರಿದೆನು. ಬಂದವಳು ನಮ್ಮಿಬ್ಬರನ್ನು ದೃಷ್ಟಿಸಿ ಮನೆಯೊಳಗೆ ಸೇರಿದಳು. ನಾನು ದುರದೃಷ್ಟನೆಂದೆಣಿಸಿ ಅಲ್ಲಿಂದ ಕಾಲು ತೆಗೆದನು.

ಈ ವಿಧವಾಗಿ ಎರಡು ಚಿಕುರಗಳಿಗೋಸುಗ ನಾನು ನಿದ್ರಾಹಾರಾದಿಗಳನ್ನು ಬಿಟ್ಟು ಒದ್ದಾಡಿದೆನು. ನಾನು ಪಟ್ಟ ಕಷ್ಟಗಳೆಲ್ಲವನ್ನು ಕೇಳಿದರೆ (ಮದುವೆಯಾಗಿದ್ದರೆ) ನನ್ನ ಹಂಡತಿಯು ಹಗಲನ್ನದೆ ಇರುಳೆನ್ನದೆ ಕೇರಿಯಿಂದ ಕೇರಿಗೆ ಓಡುತ್ತಾ ನಿರ್ಜನ ಪ್ರದೇಶಗಳಲ್ಲಿ ಅಲೆಯುತ್ತಾ, ಅನೇಕ ಗವಿಗಳಲ್ಲಿ ಅಡಗುತ್ತಾ, ಕಷ್ಟಪಟ್ಟರೂ ಹಿಡಿದ ಕಾರ್ಯವನ್ನು ಬಿಡಲಿಲ್ಲ. ಕೂದಲುಗಳು ಸಿಕ್ಕಿದುವು; ಅವುಗಳನ್ನು ಚಿನ್ನದಿಂದ ಬಿಗಿದು ನಗವು ಸಿದ್ಧವಾಯಿತು. ಚಿಕ್ಕತಾಯಿಯ ಆನೆಜಮೆಸರಕ್ಕೂ ಈ ನಗಕ್ಕೂ ಯಾವ ವ್ಯತ್ಯಾಸವೂ ಇದ್ದಂತೆ ನನಗೆ ತೋರಲಿಲ್ಲ. ಇನ್ನು ಮುದಿ ಕಣ್ಣುಗಳಿಗೆ ಕಂಡುಹಿಡಿಯಲಿಕ್ಕೆ ಸಾಧ್ಯವೇ? ಚಿಕ್ಕತಾಯಿಯ ಸಟ್ವಸ್ವವೂ ನನ್ನ ಕೈಗೆ ಸಿಕ್ಕಿತು, ಇನ್ನು ಮುಂದೆ ನನ್ನ ಸೌಭಾಗ್ಯಕ್ಕೆ ಪಾರವಾರವಿಲ್ಲ; ಇನ್ನು ರಾಜಣ್ಣನವರ ಅಳಿಯನಾಗುವುದರಲ್ಲಿ ನನಗೇನೂ ಸಂಶಯವಿರಲಿಲ್ಲ. ಅಳಿಯನಾದರೆ ಮುಂದೆ ಅವರ ಹಣವು ನನ್ನ ಪಾಲಿಗೇ ಬರುವುದು. (ಅವರಿಗ ಒಂದು ಹಣ್ಣು ಮಗುವಲ್ಲದೆ ಬೇರೆ ಮಕ್ಕಳಿರಲಿಲ್ಲ). ಈ ವಿಧವಾಗಿ ಅಂತರಿಕ್ಷ ಗೋಪುರಗಳನ್ನು ಮನಸಿನಲ್ಲಿಯೇ ಕಟುತ್ತ ನಾನು ಮನೆಗೆ ಓಂದು ದಿನ ಸಾಯಂಕಾಲ ಹಿಂತಿರುಗುತ್ತಿದ್ದೆನು. ಎಡಬಲದಲ್ಲಿ ಹೋಗುವವರನ್ನು ನಾನು ಲಕ್ಷಿಸಲಿಲ್ಲ. ಒಡನೆ ನನ್ನ ಹಿಂದೆ ಯಾರೋ ಓಡಿಬರುವ ಸಪ್ಪುಳವನ್ನು ಕೇಳಿದೆನು. ಮನೆಯನ್ನು ಮುಟ್ಟಲಿಕ್ಕೆ ಒಂದೆರಡು ಹೆಜ್ಜೆ ದೂರವಿತ್ತು. ಸಪ್ಪುಳು ನನ್ನ ಬೆನ್ನು ಹಿಂದೆಯೇ ಕೇಳಿಸಿತು. ಒಡನೆ ನನ್ನ ಹಗಲಿನ ಮೇಲೆ ಯಾರೋ ಕೈಯಿಟ್ಟರು. ಕತ್ತಲು ಬಲವಾದುದರಿಂದ ಯಾರೆಂದು ಚನ್ನಾಗಿ ತಿಳಿಯಲಿಲ್ಲ.

ವ್ಯಕ್ತಿ – “ರಾಯರೇ! ನಿಮ್ಮನ್ನು ಕರೆತರಲಿಕ್ಕೆ ನನ್ನನ್ನು ಕಳುಹಿಸಿರುವರು; ಒಂದು ಸಲ ಪೊಲೀಸ್ ಸ್ಟೇಶನ್ನಿಗೆ ದಯಮಾಡಬೇಕೆಂದು ಅಪಣೆಯಾಗಿದೆ.”

“ಇದೇನು ಯಾರು ಅಪಣೆ ಕೊಟ್ಟವರು?” ಎಂದು ನಾನು ತುಟಿಯಲ್ಲಾಡಿಸಿದೆನು.

ಒಡನೆ ಜನರೆಲ್ಲರು ಗುಂಪುಗುಂಪಾಗಿ ಬರಲಾರಂಭಿಸಿದರು; ಒಬ್ಬಿದ್ದಿರು “ಏತಕ್ಕೆ ಕೈದು ಮಾಡಿದರು? ಏತಕ್ಕೆ ಕೈದು ಮಾಡಿದರು?” ಎಂದು ಪರಸ್ಪರ ವಿಚಾರಿಸುತ್ತಿದ್ದರು. ಆ ಮಾತುಗಳನ್ನು ಕೇಳುತಲೇ ತಲೆಯ ಮೇಲೆ ಆಕಾಶವೇ ಕಳಚಿ ಬಿದ್ದಂತಾಯಿತು. ಕಣ್ಣುಗಳಲ್ಲಿ ನಕ್ಷತ್ರಗಳು ಮಿಣುಕಿದವು; ವಸ್ತುಗಳೆಲ್ಲವೂ ನನ್ನ ಸುತ್ತಲೂ ತಿರುಗುವಂತೆ ಕಂಡುಬಂದವು; ಜನರ ಮಾತುಗಳು ದೂರದಿಂದ ಕೇಳಿಸುವಂತಾದುವು.

ವ್ಯಕ್ತಿ- “ಇವರ ಚೆಕ್ಕತಾಯಿಯ ಕೆಲವು ನಗಗಳು ಕಳವಾಗಿದ್ದುವು. ಅದಕ್ಕೋಸುಗ ಇವರನ್ನು ತರಬೇಕೆಂದು ಖಾವಂದರು ಅಪ್ಪಣೆ ಕೊಟ್ಟಿದ್ದರು. ಮೂರು ದಿವಸಗಳಿಂದ ಇವರನ್ನು ಹುಡುಕಿದರೂ ಇವರು ಸಿಕ್ಕಲಿಲ್ಲ. ಅದರಲ್ಲಿ ಆಗುವುದೇನೂ ಇಲ್ಲ.”

“ಅದು ಹೇ-ಹೇಗೆ ನಾ-ನಾನು ಕಳುವು ಮಾಡಿದನೇ?”

ವ್ಯಕ್ತಿ- “ನಿಮ್ಮ ಚಿಕ್ಕತಾಯಿ ಎಲ್ಲವನ್ನೂ ಬಲ್ಲಳು. ಅದನ್ನೆಲ್ಲ ಮತ್ತೆ ನೋಡುವ! ಈಗ ಒಂದು ಸಲ ಸ್ಟೇಶನ್ನಿಗೆ ನಡೆಯುವ!”

ನಾನು ಚಿಕ್ಕತಾಯಿಯನ್ನು ನೋಡದೆ ಬರಲಾರೆನೆಂದೆನು. ಕಡೆಗೆ ಪೊಲೀಸನವನು ಒಪ್ಪಿ, ನನ್ನ ಕೈ ಹಿಡಿದು ನನ್ನೊಡನೆ ಮನಗೆ ಬಂದನು.

ಮಾರ್‍ಗದ ಮೇಲೆ ಬರುತ್ತಿರುವಾಗ ನನಗೆ ಎಲ್ಲ ಸಂಗತಿಗಳು ಮನಸಿನಲ್ಲಿ ಎದ್ದುನಿಂತು ಸ್ಪಷ್ಟವಾಗಿ ತೋರಿದುವು. ಪೂಲೀಸನವರು ಮೊದಲಿನಿಂದ ನನ್ನನ್ನೇ ಗುರಿ ನೋಡುತ್ತಿದ್ದರೆಂತಲೂ, ನಾನು ಮೈಮರೆವಂತೆ ಅವರು ನಂಬ್ರವನ್ನು ಸಡಿಲು ಬಿಟ್ಟರೆಂತಲೂ, ನನ್ನ ಕಳ್ಳಹಜ್ಜೆಗಳನ್ನು ಅವರು ಆಗಾಗ ಹೊಂಚಿ ನೋಡುತ್ತಿದ್ದರೆಂತಲೂ, ನನ್ನ ಮನಸ್ಸಿಗೆ ಖಚಿತವಾಯಿತು. ಅದಲ್ಲದೆ ನಾನು ಅನೇಕ ಅಕ್ಕಸಾಲಿಗರ ಅಂಗಡಿಗಳಲ್ಲಿ ಕುಳಿತಿರುವುದನ್ನೂ, ವಿಜನಸ್ಥಳಗಳಲ್ಲಿ ಒಂಟಿಗನಾಗಿ ಅಲೆಯುವುದನ್ನೂ, ಕ್ಷುದ್ರ ಸ್ತ್ರೀಯ ಗವಿಯಲ್ಲಿ ಆಗಾಗ ನುಸುಳುವುದನ್ನೂ ಇವರು ನೋಡಿದ್ದರೂ ಇರಬಹುದು. ಈ ವಿಷಯಗಳು ನನ್ನ ಮನಸಿಗೆ ಪರಂಪರೆಯಾಗಿ ಸಾಲಿಡುತ್ತಲೇ ನನ್ನ ಕಳವಳವು ಭಯಂಕರವಾಯಿತು. ನನ್ನ ಚಿತೆಯನ್ನು ನಾನೇ ಸಿದ್ಧಪಡಿಸಿದಂತಾಯಿತು. ನಾನು ಅಗಿದ ಗುಣಿಯಲ್ಲಿ ನಾನೇ ಬೀಳುವುದಾಯಿತು. ಒಂದು ಕಡೆಯಲ್ಲಿ ಬಂಧನ ಶಿಕ್ಷೆ, ಇನ್ನೊಂದು ಕಡೆಯಲ್ಲಿ ದುಃಖಕರವಾದ ಕೃತಘ್ನತೆಯ ರೋಷ. ಇದನ್ನು ತಪ್ಪಿಸುವ ಹಾದಿ ಯಾವುದು? ಸತ್ಯವನ್ನು ಅಡಗಿಸಿದರೆ ಶಿಕ್ಷೆಯು ಎಷ್ಟು ವರ್ಷ ಎಂಬ ಪ್ರಶ್ನೆಯಲ್ಲದ ಮತ್ತೊಂದಿಲ್ಲ. ಸತ್ಯವನ್ನೊಪ್ಪಿದರೆ ಈ ಜನ್ಮದಲ್ಲಿ ಚಿಕ್ಕತಾಯಿಯನ್ನು ನೋಡುವುದು ಮುಗಿಯಿತು. ಆದುದರಿಂದ ಅಸತ್ಯದಿಂದ ಅಸತ್ಯವನ್ನು ದೃಢಪಡಿಸಬೇಕಂದು ಮನಸಿನಲ್ಲಿ ನಿರ್ಧರಿಸಿದೆನು.

ಪೊಲೀಸನವರು ನನ್ನನ್ನು ಹಿಡಿದಿರುವರು ಎಂಬುದನ್ನು ಚಿಕ್ಕತಾಯಿಯು ಕೆಲವು ನಿಮಿಷಗಳ ಹಿಂದೆ ತಿಳಿದಿದ್ದಳು. ನಾವಿಬ್ಬರು ಒಳಗೆ ಬರುತ್ತಲೇ ಅವಳು ನನಗೋಸುಗ ಅಳುವುದನ್ನೂ, ಪೂಲೀಸನವರನ್ನು ಮಧುರ ಭಾಷೆಯಿಂದ ಶಪಿಸುವುದನ್ನೂ ನಾನು ಕೇಳಿದೆನು. ಒಡನೆ ಅವಳಿದ್ದಲ್ಲಿಗೆ ನಡೆದು, ಪೊಲೀಸನವನು ಬಂದ ಸಂಗತಿಯನ್ನು ತಿಳಿಸಿದೆನು; ವಿಳಂಬ ಮಾಡದೆ ನಗವನ್ನು ತಂದಿರುವೆನೆಂದು ಹೇಳಿ, ಆನೆಜಮೆಸರವನ್ನು ಅವಳ ಕೈಗೆ ಕೊಟ್ಟೆನು. ಅವಳು ಅದನ್ನು ಎಷ್ಟೋ ನೋಡಿದಳು! ನನ್ನನ್ನು ಎಷ್ಟೋ ಹೊಗಳಿದಳು! ಪೊಲೀಸನವರನ್ನು ಎಷ್ಟೋ ಬೈದಳು! ಪೊಲೀಸನವನು ನಗವನ್ನು ನೋಡಿ “ಆ ನಗವು ನಿಮ್ಮದೆಂದು ನೀವು ಹೀಳುವಿರೇ?” ಎಂದನು. “ನನ್ನ ನಗವನ್ನು ನಾನು ಕಂಡುಹಿಡಿಯಲಾರನೇ? ಇದು ಸಾವಿರ ನಗಗಳಲ್ಲಿದ್ದರೂ ನಾನು ಇದನ್ನೇ ಗುರುತು ಹಿಡಿದೇನು” ಎಂದಳು. “ಇದು ನಿಮ್ಮದೆಂದು ನೀವು ಒಪ್ಪುತ್ತೀರ?” ಎಂದು ಪುನಃ ಕೇಳಿದನು. ಈ ಮಾತುಗಳನ್ನು ಕೇಳಿ ನನ್ನ ಮನಸಿಗೆ ಇನ್ನೂ ಸಂಶಯವೂ ಭಯವೂ ಉಂಟಾಯಿತು; ಏಕೆಂದರೆ ಈ ಮಾತುಗಳನ್ನೇ ನನ್ನ ಚಿಕ್ಕ ತಾಯಿ ಮತ್ತೂ ಒಪ್ಪಿದರೆ ನಾನೇ ಕಳ್ಳನೆಂದು ಸಾಧಿಸುವುದರಲ್ಲಿ ಕಷವೇನು ಇಲ್ಲ. ಆ ಮಾತುಗಳ ಬಲವನ್ನು ತಪಿಸಲೋಸುಗ ನಾನು ಒಂದು ನುಡಿಯನ್ನಾಡಲಿಕ್ಕೆ ಬಾಯೆತ್ತಿದೆನು. ಆದರೆ ಅಷ್ಟರೊಳಗೆ ಯಾರೋ ಒಳಗೆ ಬಂದರು. ಬಂದವನು ಒಂದು ಕಾಗದವನ್ನು ಪೊಲೀಸನವನ ಕೈಗೆ ಕೊಟ್ಟಮು. ಕಾಗದವು ಚಿಕ್ಕಕಾಯಿಯ ವಿಳಾಸ ಬರೆದಿತ್ತು. ಕೂಡಲೇ ಅವಚಿಯು ಅದನ್ನೋದುವುದಕ್ಕೆ ಹೇಳಿದಳು. ಅದರಲ್ಲಿ ಬರೆದುದನ್ನು ಪೂಲೀಸನವನು ಹೀಗೆ ಓದಿದನು.

“ನೀವು ಎರಡು ತಿಂಗಳ ಹಿಂದೆ ಇಲ್ಲಿ ಬಂದಾಗ, ಮಂದಿರದಲ್ಲಿ ನಡೆಯುವ ಪುರಾಣ ಶ್ರವಣಕಾಲದಲ್ಲಿ ನಿಮ್ಮ ನಗಗಳ ಗಂಟನ್ನು ಇಲ್ಲಿ ಮರತುಬಿಟ್ಟು ಹೋದಿರಿ. ನಿಮ್ಮ ಆನೆಜಮೆಸರವು ನಿಮ್ಮ ಜಪಕ್ಕೆ ನಿತ್ಯವೂ ಅವಶ್ಯವೆಂದು ಸ್ಪತಃ ಗೊತ್ತಿದುದರಿಂದ, ಈ ಕಾಗದ ತರುವವನ ಕೈಯಲ್ಲಿ ಅದನ್ನು ಕಳುಹಿಸಿರುತ್ತೇನೆ. ತಮ್ಮ ಮಿಕ್ಕ ನಗಗಳು ದೇವ ಪ್ರತಿಮೆಯ ಅಲಂಕಾರಕ್ಕಾಗಿ ಇಲ್ಲಿ ಇಟ್ಟಿರುತ್ತೇನೆ. ಕೃಷ್ಣಾಷ್ಟಮಿಯ ಉತ್ಸವವೂ ಭಜನೆಯೂ ಈ ವರ್ಷ ವಿಶೇಷ ತರದ್ದಾಗಿರುವುದರಿಂದ ತಾವು ಬರಬೇಕಾಗಿ ಪೌರಾಣಿಕರು ಅಪೇಕಿಸುತ್ತಾರೆ.”

ಈ ಕಾಗದವನ್ನು ಓದುತ್ತಲೇ ನನ್ನ ಮೈಯೆಲ್ಲಾ ತಣ್ಣಗಾಯಿತು; ಕಣ್ಣುಗಳಲ್ಲಿ ದೂಣ್ಣೆಯಿಂದ ಯಾರೋ ಬಡಿದಂತಾಯಿತು. ನಾನು ಏನು ಹೇಳಿದೆನೋ ಏನು ಮಾಡಿದೆನೋ ಈಗ ಸ್ಮರಿಸಲಾರೆನು.

ಆಮೇಲೆ ನಡೆದ ವಿಷಯವನ್ನು ಇಲ್ಲಿ ಹೇಳುವುದು ಅವಶ್ಯವಿಲ್ಲ. ನನಗೆ ಮನೆಗಿಂತಲೂ ಸೆರೆಯೆ ಲೇಸೆಂದು ಕಂಡುಬಂತು. ಇನ್ನು ಮಾಡುವುದೇನು? ಆದರ ಸಂಪೂರ್ಣ ವಿಷಯವನ್ನು ಹೇಳುವುದು ಒಳ್ಳೆಯದು. ಮರುದಿನ ಹೂಸಪೇಟೆ ರಾಜಣ್ಣನವರ ಪತ್ನಿಯು ಬಂದು, ನನ್ನ ಜಿಕ್ಕತಾಯಿಯೊಡನೆ ಈ ರೀತಿಯಲ್ಲ ಮಾತಾಡುವುದನ್ನು ನಾನು ಮರೆಯಲ್ಲಿದ್ದು ಕೇಳಿದನು –

“ನಿಮ್ಮ ಹುಡುಗನ ಜಾತಕವು ನಮ್ಮ ಸಕಲಾವತಿಯ ಜಾತಕಕ್ಕೆ ಕೂಡಿಬರುತ್ತಿತು; ಸಂಬಂಧವು ಒಳ್ಳಯದಾಗಿತ್ತು. ಆದರೆ ನಿಮ್ಮ ಹುಡುಗನು ಕೆಲವು ದಿನಗಳಿಂದ ಈಚೆಗೆ ಕೇರಿಕೇರಿಗಳಲ್ಲಿ ತಿರುಗುವುದನ್ನೂ, ಒಂದೆರಡು ಸಲ-ಮನೆಗಳನ್ನು ಸೇರಿದುದನ್ನೂ ನಮ್ಮ ಮನೆಯವರು ನೋಡಿದರಂತೆ. ನಾನು ಹುಡುಗನೆಂದು ಸುಮ್ಮನಿದ್ದೆನು. ಆತನು ಹೆಚ್ಚು ಸಲ ನಮ್ಮ ನೆರಮನೆಯ ಸೋಮಿಯೊಡನೆ ಒಬ್ಬನೇ ಮಾತಾಡುವುದನ್ನೂ ರೂಪಾಯಿ ಕೈಯಲ್ಲಿ ಹಿಡಿದುದನ್ನೂ ನಾನು ಗೋವಿಂದರಾಯರ ಮನೆಗೆ ಬರುತ್ತ ಹೋಗುತಿದ್ದಾಗ ನೋಡಿದ್ದೇನೆ. ಈ ಕಾರಣದಿಂದ ನಮ್ಮ ಮನೆಯವರಿಗೆ ಸಂಬಂಧದ ಪಸ್ತಾಪವು ಈಗ ಕಿವಿಗೇ ಹೋಗುವುದಿಲ್ಲ.”

ಇದನ್ನು ಕೇಳುತ್ತಲೇ ನನ್ನ ಜೀವದಾಸೆ ಎಲ್ಲವೂ ಮುಗಿಯಿತು. ಏನು ಮಾಡುವುದು? ಈಗ ನಾನೇನು ಮಾಡಲಿ? ಸರ್ವಜನ ಪರಿಪೂರಿತವಾದ ಈ ಲೋಕಸಾಗರದಲ್ಲಿ ನಾನು ನನ್ನ ಜೀವನ ನೌಕವನ್ನು ಮುಂದೆ ಹಗೆ ನಡಯಿಸಲಿ? ನನ್ನ ಕಥೆಯನ್ನು ಓದುವ ಅಭಿಜ್ಞ ಪಾಠಕರಲ್ಲಿ ಯಾರೊಬ್ಬನಾದರೂ ಹೆಡ್ಡನಾದ ನಾನು ಮುಂದೆ ಏನು ಮಾಡಬೇಕೆಂದು ಹೇಳಲಾರ.
*****
(ಸುವಾಸಿನಿ ೧೯೦೦)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗತ್ತು – ಗಮ್ಮತ್ತು
Next post ಮದುವೆಗೆ ಮುಂಚೆ

ಸಣ್ಣ ಕತೆ

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

cheap jordans|wholesale air max|wholesale jordans|wholesale jewelry|wholesale jerseys