ಆರೋಪ – ೧೦

ಆರೋಪ – ೧೦

ಚಿತ್ರ: ಜೆರಾರ್ಡ ಗೆಲ್ಹಿಂಗರ್‍

ಅಧ್ಯಾಯ ೧೯

ಆಗಾಗ ಕೈಕೊಡುತ್ತಿದ್ದ ಫ್ಯಾನು, ಕೆಟ್ಟ ಸೆಕೆ, ಪಕ್ಕದ ರೂಮಿನ ಜೋಡಿಯ ಸದ್ದು, ಸೊಳ್ಳೆಗಳು-ಇವೆಲ್ಲವುಗಳಿಂದಾಗಿ ಅರವಿಂದನಿಗೆ ನಿದ್ದೆ ಇಲ್ಲ. ಜೊಂಪು ಹತ್ತುವಷ್ಟರಲ್ಲಿ ಬೆಳಗೂ ಆಗಿತ್ತು. ಕಣ್ಣುಗಳಲ್ಲಿ ಉಸುಕುದಂತೆ ಉರಿ, ಸರಿಯಾದೊಂದು ವಸತಿಯನ್ನು ಮಾಡಿಕೊಳ್ಳಬೇಕು ಒಡನೆ ಹಾಸ್ಟೆಲಿನಲ್ಲಿ ಜಾಗ ಖಾಲಿಯಿರಲಿಲ್ಲ. ಕ್ಯಾಂಪಸ್‌ನ ಹೊರಗೆ ಉಳಿಯುವುದು ಅನಿವಾರ್ಯ. ಕೆಲವರಲ್ಲಿ ಹೇಳಿದ್ದ-ಡಾಕ್ಟರ್ ವೈಶಾಖಿಯ ಸಮೇತ.

ಹತ್ತು ಗಂಟೆಗೆ ಅವರೊಂದಿಗೆ ಭೇಟಿಯಿತ್ತು. ಅದಕ್ಕೆ ಮೊದಲು ಸರ್ ಖಾಡಿಲ್ಕರರ ಮನೆ ಪಾಠ ಎಂಟರಿಂದ ಒಂಬತ್ತರ ತನಕ, ಬೇಗನೆ ಉಪಹಾರ ಮುಗಿಸಿ ಬಸ್ಸು ಹಿಡಿದು ಪ್ರೊಫೆಸರರ ಮನೆಗೆ ಹೋದ. ಪ್ರೊಫೆಸರರ ಭೇಟಿಯಾದಂದಿನಿಂದಲೂ ಪಾಠ ನಡೆದೇ ಇತ್ತು, ಇಂಡಿಯನ್ ಹಿಸ್ಟರಿ.
ಅಂದು ಪಾಠ ಮುಗಿಸಿ ಇನ್ನೇನು ಹೊರಡಬೇಕು ಎನ್ನುವಾಗ ಪ್ರೊಫೆಸರರ ಹೆಂಡತಿಯಿಂದ ಒಂದು ಕ್ಷಣ ಇರಲು ಸೂಚನೆ ಬಂತು. ಇನ್ನೇನು ಕಾದಿದೆ ಅಂದುಕೊಂಡೇ ಕುಳಿತು ಪತ್ರಿಕೆಗಳ ಮೇಲೆ ಕಣ್ಣಾಡಿಸಿದ.

ಹತ್ತು ನಿಮಿಷ ಕಳೆಯಿತು.

ಪ್ರೊಫೆಸರರ ಹೆಂಡತಿ ಒಂದು ಟ್ರೇಯಲ್ಲಿ ಕಾಫಿ ಉಪ್ಪಿಟ್ಟು ಮುಂದಿರಿಸಿದಳು.
“ಇದಲ್ಲ ಯಾಕೆ!?”
“ಹಸಿದ ಹೊಟ್ಟೆಯಲ್ಲಿ ಹೋಗಬಾರದು.”
“ತಿಂಡಿ ಮಾಡಿಕೊಂಡೇ ಬಂದೆ.”
“ಹೋಟೆಲಿನ ತಿಂಡಿ.”
ಕೆಟ್ಟ ಉಪ್ಪಿಟ್ಟು ಕಾಫಿ-ಕೆಟ್ಟದೆಂದು ತೋರಿಸಿಕೊಳ್ಳದೆ ಮುಗಿಸಿದ. ಪ್ರೊಫೆಸರರ ಹೆಂಡತಿ ಆಕೆಯ ಮಕ್ಕಳು ನೋಡುತ್ತಾ ಕುಳಿತರು, ದಿನಾ ಈ ಗತಿ ಬರದಿರಲಿ ಎಂದು ಮನಸ್ಸಿಲ್ಲೇ ಪ್ರಾರ್ಥಿಸಿಕೊಂಡ.

ಬಸ್ ಸ್ಟಾಪ್ ತಲುಪಿದಾಗ ಗಂಟೆ ಒಂಬತ್ತೂವರೆ, ಬಂದ ಬಸ್ಸುಗಳಲ್ಲೆಲ್ಲಾ ಜಿಗಿ ಜಿಗಿ ಜನ. ಕೊನೆಗೂ ಒಂದರಲ್ಲಿ ಮೈ ತುರುಕಿಕೊಂಡು ಸಂಸ್ಥೆ ಸೇರಿದಾಗ ಹತ್ತೂವರೆ ಕಳೆದಿತ್ತು.
“ಹತ್ತು ಗಂಟೆಗೆ ಬರಲು ಹೇಳಿದ್ದೆ,” ಎಂದು ತುಸು ಅಸಮಾಧಾನದಿಂದಲೇ ನೆನಪಿಸಿದರು ವೈಶಾಖಿ.

ಅರವಿಂದ ತಬ್ಬಿಬ್ಬಾದ, ಖಾಡಿಲ್ಕರರ ಪಾಠದ ಬಗ್ಗೆ ಹೇಳಲೇ ಅಂದು ಕೊಂಡ, ಖಾಡಿಲ್ಕರರನ್ನು ಮನಸ್ಸಿನಲ್ಲೇ ಶಪಿಸಿದ. ಆದರೂ ಅವರ ಪ್ರಭಾವವಿಲ್ಲದೆ ಇಲ್ಲಿ ಪ್ರವೇಶ ಸಿಗುತ್ತಿತ್ತೆ? ಬೀದಿಯಲ್ಲಿರಬೇಕಾಗುತ್ತಿತ್ತು…. ಎನಿಸಿತು.
“ಬಸ್ಸು…..” ಅಂದ.
“ನನಗೀಗ ಒಂದು ಮೀಟಿಂಗ್ ಇದೆ. ನಾಳೆ ನಾಡಿದ್ದು ನಾನು ಇರೋದಿಲ್ಲ. ಪೂನಾದಲ್ಲೊಂದು ಕಾನ್ಫರನ್ಸ್, ಒಂದು ಕೆಲಸ ಮಾಡಿ, ನಾನು ಕೊಟ್ಟ ರೆಫರೆನ್ಸ್ ಇವೆಯಲ್ಲ. ಅವನ್ನೆಲ್ಲ ಓದಿಕೊಂಡು ಮುಂದಿನ ವಾರ ಬನ್ನಿ…. ಇನ್ನೊಂದು ವಿಷಯ, ವಸತಿ ಬಗ್ಗೆ ಏನೋ ಹೇಳಿದ್ದಿರಲ್ಲ.”
“ಹೌದು ಸರ್.”
“ಯುವಕ ಸಮಾಜ ಅಂತ ಒಂದು ಹಾಸ್ಟೆಲ್ ಇದೆ. ನನ್ನ ಪರಿಚಯದವರ ಮೂಲಕ ಹೇಳಿಸಿದ್ದೇನೆ. ಸಂಜೆ ಕಡೆ ಅಲ್ಲಿ ಹೋಗಿ ನೋಡಿ. ನಾನು
ಕಳಿಸಿದ್ದು ಅನ್ನಿ. ಲಕ್ ಇದ್ದರೆ ಸಿಗಬಹುದು,” ಎಂದು ವಿಳಾಸ ಕೊಟ್ಟರು.

ಲೈಬ್ರರಿಯಲ್ಲಿ ಪುಸ್ತಕಗಳನ್ನು ಮುಂದೆ ಪೇರಿಸಿಟ್ಟುಕೊಂಡು ಪೆನ್ಸಿಲಿನ ಮೊನೆಯನ್ನು ಕಚ್ಚುತ್ತ ಕುಳಿತಿದ್ದಳು ಕವಿತೆ.

“ನಿಮಗೋಸ್ಕರನೆ ಕಾಯುತ್ತಿದ್ದೆ.”
ಅವಳ ಪಕ್ಕದಲ್ಲಿ ಕುಳಿತ.
“ಹೇಳಿ.”
“ರಿಸರ್ಚ್ ಪ್ರೊಪೋಸಲ್.”
ಅವಳು ಕಾಗದದಲ್ಲಿ ಗೀಚಿದುದನ್ನು ನೋಡಿದ, ಗಟ್ಟಿಯಲ್ಲದ ಭಾಷೆ. ಒಂದಕ್ಕೊಂದು ಹೊಂದಿಕೆಯಾಗದ ವಾಕ್ಯಗಳು. ಈಕೆ ರಿಸರ್ಚು ಹೇಗೆ ಮಾಡುತ್ತಾಳೆ ಎಂದು ಅಚ್ಚರಿಯಾಯಿತು. ಕವಿತ ಅವನ ಬದಿಗೆ ಸರಿದು ಕುಳಿತು ತನ್ನ ಸಮಸ್ಯೆಯನ್ನು ವಿವರಿಸಲು ಯತ್ನಿಸಿದಳು.

ಪ್ರೊಪೋಸಲುಗಳನ್ನು ಕೊಡುವುದೊಂದು ಪದ್ಧತಿ. ಯಾರೂ ಅವುಗಳನ್ನು ಗಂಭೀರವಾಗಿ ಅವಲೋಕಿಸುವುದಿಲ್ಲ. ಆದರೂ ಒಂದಷ್ಟು ಬರೆಯಲೇ ಬೇಕಲ್ಲ!

ಅರವಿಂದ ಕುಳಿತು ಪ್ರೊಪೋಸಲ್ ಸಿದ್ಧಪಡಿಸುವುದಕ್ಕೆ ಮಧ್ಯಾಹ್ನವಾಗಿತ್ತು. ಕವಿತ ತಲೆನೋವು ಎಂದು ಹೊರಟು ಹೋಗಿದ್ದಳು, ಬರೆದ ಹಾಳೆಗಳನ್ನು ಆಕೆಯ ಕಾರೆಲ್‌ನಲ್ಲಿರಿಸಿ ಕ್ಯಾಂಟೀನಿಗೆ ಹೋಗಿ ಊಟ ಮಾಡಿದ. ಆ ದಿನ ಕ್ಲಾಸುಗಳೇನೂ ಇರಲಿಲ್ಲ. ವೈಶಾಖಿಯವರು ಕೊಟ್ಟ ವಿಳಾಸದ ಚೀಟಿ ಜೇಬಿನಲ್ಲಿತ್ತು.

ಸಂಜೆ ಅವರು ಹೇಳಿದ ಕಡೆ ಹೋದ. – ಯುವಕ ಸಮಾಜ ಒಂದು ಖಾಸಗಿ ಹಾಸ್ಟೆಲು. ನಗರದ ಮಧ್ಯದಲ್ಲಿದ್ದು ಅನುಕೂಲವಾಗಿದ್ದಂತೆ ಕಂಡಿತು. ಸಂಸ್ಥೆಯಿಂದಲೂ ಹೆಚ್ಚು ದೂರವಿಲ್ಲ. ವಸತಿ ಮಾತ್ರವಲ್ಲದೆ ಊಟ ಕಾಫಿಯ ಅನುಕೂಲವೂ ಇತ್ತು.

ಮ್ಯಾನೇಜರರನ್ನು ಭೇಟಿಮಾಡಿ ವೈಶಾಖಿಯವರು ಕಳಿಸಿದ್ದು ಎಂದ. ಮ್ಯಾನೇಜರ್‌ ಅರವಿಂದನನ್ನು ಅಡಿಯಿಂದ ಮುಡಿವರಿಗೆ ದೃಷ್ಟಿಸಿದ.
“ನೀವು ವಿದ್ಯಾರ್ಥಿಯೆ?”
“ಹೌದು.”
“ಸಾಧಾರಣವಾಗಿ ವಿಧ್ಯಾರ್ಥಿಗಳನ್ನು ನಾವು ತೆಗೆದುಕೊಳ್ಳುವುದಿಲ್ಲ.” “ನಾನು ಸಂಶೋಧಕ ವಿದ್ಯಾರ್ಥಿ.”
“ಯಾವ ವಿದ್ಯಾರ್ಥಿಯೇ ಆಗಿರಲಿ…. ಇಲ್ಲಿರೋರೆಲ್ಲ ಕೆಲಸದಲ್ಲಿರುವವರು ಬ್ಯಾಂಕು, ಫ್ಯಾಕ್ಟರಿ, ಶಾಪು ಇತ್ಯಾದಿ ಕಡೆ. ಎಲ್ಲ ಜವಾಬ್ದಾರಿ ಇರುವವರೇ. ಇವರ ಮಧ್ಯೆ ವಿದ್ಯಾರ್ಥಿಗಳನ್ನು ತಂದರೆ ಹೇಗೆ?”

“ವಿದ್ಯಾರ್ಥಿಗಳ ಕುರಿತು ಯಾಕಿಷ್ಟು ಸಿಟ್ಟು?”
“ಸಿಟ್ಟೇನಿಲ್ಲ.”
“ಮತ್ತೆ?”
“ಅವರು ಸುಮ್ಮನೆ ಗುಲ್ಲೆಬ್ಬಿಸುತ್ತಾರೆ. ನನಗೆ ಅನುಭವವಿದೆ….”
“ನಾನು ಗುಲ್ಲೆಬ್ಬಿಸೋಲ್ಲ.”
“ರೂಮಿನಲ್ಲಿ ಕುಡಿಯಬಾರದು.”
“ನನಗೆ ಕುಡಿಯೋ ಅಭ್ಯಾಸವೇ ಇಲ್ಲ.”
“ಗರ್ಲ್ ಫ್ರೆಂಡ್ಸ್ ಇದ್ದಾರೆಯೆ?”
“ಇಲ್ಲ.”
“ಸಮಾಜದ ಮೆಸ್‌ನಲ್ಲಿ ಊಟ ಮಾಡೋದು ಕಡ್ಡಾಯ.”
“ಆಯ್ತು.”
“ರೂಮಿನಲ್ಲಿ ಅಡುಗೆ ಮಾಡಬಾರದು.”
“ಇಲ್ಲ.”
“ಸಿಂಗಲ್ ರೂಮುಗಳಾವುದೂ ಖಾಲಿಯಿಲ್ಲ. ಡಬಲ್ ರೂಮೊಂದಿದೆ. ಕೇಶವುಲುನೊಂದಿಗೆ ಶೇರ್ ಮಾಡಬೇಕಾಗುತ್ತದೆ. ನಡೆಯುತ್ತದೆಯೇ?”
“ನಡೆಯುತ್ತದೆ.”
“ಆಡ್ವಾನ್ಸ್ ಕೊಡಿ,”
“ಎಷ್ಟು?”
“ಐನೂರು.”
“ಐನೂರೇ???”
“ಎರಡು ತಿಂಗಳ ಅಂದಾಜು ಬಿಲ್ಲು, ಊಟ ಕಾಫಿ ಹೊಂದಿಕೊಂಡು ಬಿಲ್ಲು ಹೆಚ್ಚು ಕಡಿಮೆ ಆಗಬಹುದು ಸ್ವಲ್ಪಮಟ್ಟಿಗೆ.”
“ನಾಳೆ ಕೊಡುತ್ತೇನೆ.”
ಮ್ಯಾನೇಜರ್ ಒಂದು ಥರವಾಗಿ ನೋಡಿದೆ. ಅಡ್ವಾನ್ಸು ಕೊಡಲಾರದವನು ರೂಮು ಕೇಳಲು ಯಾಕೆ ಬಂದ ಎಂಬಂತೆ.
“ನಾಳೆಯೇ ಬರುತ್ತೀರ?”
“ಬರುತ್ತೇನೆ. ಇನ್ನು ಯಾರಿಗೂ ಕೊಟ್ಟುಬಿಡಬೇಡಿ.”
“ವೈಶಾಖಿಯವರು ಶಿಫಾರ್ಸು ಮಾಡಿಸಿದ್ದಕ್ಕೆ ನಿಮಗೆ ರೂಮು ಸಿಕ್ಕಿತು. ಇಲ್ಲದಿದ್ದರೆ ಸಿಗುತ್ತಿರಲಿಲ್ಲ. ಇಲ್ಲಿ ಯಾವಾಗಲೂ ರಶ್ಯು, ವಶೀಲಿ, ಹೈದರಾಬಾದು ಬದುಕೋದಕ್ಕೆ ಅಸಾಧ್ಯವಾಗ್ತಾ ಇದೆ !”
ಮರುದಿನವೇ ಅರವಿಂದ ತನ್ನ ವಸತಿ ಬದಲಾಯಿಸಿಕೊಂಡ. ಕೋಣೆಯಲ್ಲಿ ಎರಡು ಮಂಚಗಳಿದ್ದು ಸಾಕಷ್ಟು ವಿಶಾಲವಾಗಿತ್ತು. ಒಂದು ಮಂಚದ ಮೇಲೆ ಹಾಸಿಗೆ ತಲೆದಿಂಬುಗಳಿದ್ದುವು, ಅದೇ ಕೇಶವುಲುನದ್ದಾಗಿರಬೇಕು ಅಂದುಕೊಂಡ. ಇನ್ನೊಂದರ ಮೇಲೆ ಕೇಶವುಲು ತನ್ನ ಚಪ್ಪಲಿ, ಬೂಟ್ಸು, ಪಾಲಿಶುಗಳನ್ನಿರಿಸಿದ್ದ. ಒಂದು ಬದಿಯಲ್ಲಿ ಆರಲು ಹಾಕಿದ ಹನುಮಾನ್ ಕಾಚ. ಇನ್ನೊಂದು ಬದಿಯಲ್ಲಿ ಕೊಳಕಾದ ಬಾತ್ ಟವೆಲು. ಈ ಕೇಶವಲು ಯಾರು? ಎಂಥ ಮನುಷ್ಯ? ಗಲಾಟೆಯವನೆ ಅಥವಾ ಹೊಂದಿಕೊಂಡು ಹೋಗುವವನೆ?

ಯುವಕ ಸಮಾಜದ ಸುತ್ತಲೂ ಎತ್ತರದ ಕಾಂಪೌಂಡು. ಗೋಡೆಯ ಮೇಲೆ ಗಾಜಿನ ಚೂರುಗಳು, ಅಂಗಳದಲ್ಲಿ ದಾಳಿಂಬೆ, ನಿಂಬೆ, ಕಹಿಬೇವು ಗಿಡಮರಗಳು ; ಹೂವಿನ ಗಿಡಗಳು. ಹೊರಗೆ ಕಾಲಿಟ್ಟರೆ ಸಿಗುವುದೇ ಪೇಟೆ, ಅರವಿಂದ ಅಂಗಡಿಗಳಿಗೆ ಹೋಗಿ ಒಂದು ಹಾಸಿಗೆ ತಲೆದಿಂಬು ಇನ್ನಿತರ ಅತ್ಯಗತ್ಯದ ಸಾಮನುಗಳನ್ನು ಕೊಂಡು ತಂದ. ಸಮಾಜಕ್ಕೆ ಐದು ನೂರನ್ನು ಮುಂಗಡ ಕೊಟ್ಟದ್ದಾಗಿತ್ತು, ಕೈಯಲ್ಲಿದ್ದ ಹಣ ಕರಗುತ್ತ ಬಂದಿತ್ತು. ಆದರೂ ಮುಂದಿನ ತಿಂಗಳು ಫೆಲೊಶಿಪ್‌ನ ಹಣ ಕೈಗೆ ಬರುತ್ತದೆಂಬ ಸಮಾಧಾನ. ಅದು ಕೈಗೆ ಬಂದಾಗ ಏನೆಲ್ಲ ಕೊಂಡುಕೊಳ್ಳಬೇಕೆಂದು ಮನಸ್ಸು ಈಗಾಗಲೇ ಪ್ಲಾನುಗಳನ್ನು ಹಾಕ ತೊಡಗಿತ್ತು.

ಕೇಸವುಲುನ ಸುದ್ದಿಯಿಲ್ಲ.

ಮಂಚದಿಂದ ಆತನ ಸಾಮಾನುಗಳನ್ನು ತೆಗೆದು ಒಂದೆಡೆ ಇರಿಸಿ ತನ್ನ ಹಾಸಿಗೆಯನ್ನು ಬಿಡಿಸಿದ. ಸ್ನಾನ ಮಾಡಿಕೊಂಡು ಬರುವಷ್ಟರಲ್ಲಿ ಅಡುಗೆ ಸಿದ್ಧವಾಗಿತ್ತು ಮೆಸ್‌ನಲ್ಲಿ ಹೆಚ್ಚು ಮಂದಿಯಿರಲಿಲ್ಲ. ಸಮಾಜದ ನಿವಾಸಿಗಳೆಲ್ಲರೂ ಇನ್ನೂ ಬಂದು ಸೇರಿರಲಿಲ್ಲ. ಬಂದವರು ಅವನನ್ನು ಗಮನಿಸಿಯೂ ಗಮನಿಸದಂತಿದ್ದರು. ಒಂದು ಕೋಣೆಯಲ್ಲಿ ಇಸ್ಪೀಟು ಆಟ ಭರದಿಂದ ಸಾಗುತ್ತಿತ್ತು.

ಊಟ ಮುಗಿಸಿ ಕೋಣೆಗೆ ಮರಳಿದ. ಕೋಣೆಯಲ್ಲಿದ್ದುದು ಒಂದು ಕುರ್ಚಿ ಒಂದು ಮೇಜು, ಇವುಗಳ ಮೇಲೂ ಕೇಶವುಲುನ ಸಾಮಾನುಗಳು ಬಿದ್ದಿದ್ದುವು. ಟೂತ್ ಪೇಸ್ಟ್, ಬ್ರಶ್, ಸೋಪು, ಶೇವಿಂಗ್ ಸೆಟ್, ಆಫ಼್ಟರ್ ಶೇವ ಲೋಶನ್, ಕೂಂಬು, ಬನಿಯನು, ಚಿಲ್ಲರೆ ನಾಣ್ಯಗಳು, ಸಾಕ್ಸ್ ಇತ್ಯಾದಿ.. ಕೇಶವುಲು ನಿಜಕ್ಕೂ ಇಡಿಯ ಕೋಣೆಯನ್ನೇ ತನ್ನದಾಗಿ ಮಾಡಿಕೊಂಡಿದ್ದ. ಗೋಡೆಗಳಲ್ಲಿ ಬೆತ್ತಲೆ ಹೆಣ್ಣುಗಳ ಚಿತ್ರಗಳಿರುವ ಕ್ಯಾಲೆಂಡರುಗಳು, ಕೇಶವುಲುನ ಹಾಸಿಗೆಯ ಕೆಳಗಿಂದ ಲೈಂಗಿಕ ಪುಸ್ತಕಗಳು ಹಣಕುತ್ತಿದ್ದುವು. ಅರವಿಂದನಿಗೆ ತಾನು ಫಕ್ಕನೆ ಅಪರಿಚಿತನೊಬ್ಬನ ಜೀವನವನ್ನು ಅವನ ಇಚ್ಛೆಗೆ ವಿರುದ್ಧವಾಗಿ ಪ್ರವೇಶಿಸಿದಂತೆನಿಸಿ ಮುಜುಗರವಾಯಿತು.

ನಿದ್ದೆ ಬಂದು ಎಷ್ಟೋ ಹೊತ್ತಾದ ಮೇಲೆ ಯಾರೋ ದೊಡ್ಡದಾಗಿ ಕಿರುಚಿದ ಹಾಗೆನಿಸಿ ತಟ್ಟನೆ ಎಚ್ಚರಗೊಂಡ, ಕಣ್ಣು ಕುಕ್ಕುವಂತೆ ಉರಿಯುವ ಬಲ್ಬಿನ
ಬೆಳಕಿನಲ್ಲಿ ಕಾಣಿಸಿದುದು ಕರಗಿನ ದಪ್ಪ ಕುಳ್ಳ ವ್ಯಕ್ತಿ. ಬಕ್ಕ ತಲೆ, ಮೈಯಲ್ಲಿ ಕರಡಿಯಂತೆ ರೋಮ, ಪ್ಯಾಂಟು ಶರ್ಟು ಬೆಲ್ಟು ಧರಿಸಿಕೊಂಡಿದ್ದ. ಹಿಟ್ಟಿನಿಂದ ಮಾಡಿದಂಥ ಮುಖ. ಬಿಟ್ಟ ಕಣ್ಣುಗಳಿಂದ ತನ್ನ ಕಡೆ ಬಾಯಿಬಿಟ್ಟು ನೋಡುತ್ತ ನಿಂತಿದ್ದ.

ಕೇಶವುಲು!

ಅರವಿಂದ ಎದ್ದು ಕುಳಿತ. ತನ್ನ ಹೆಸರು ಪರಿಚಯ ಹೇಳಿದ.

ಕೇಶವುಲು ಏನೂ ಹೇಳಲಿಲ್ಲ. ತನ್ನ ಮಂಚದಲ್ಲಿ ಹೋಗಿ ಕುಳಿತು ಅಳತೊಡಗಿದ. ಯಾಕೆ? ಅರವಿಂದನಿಗೆ ಆಶ್ಚರ್ಯವಾಯಿತು. ತಾನಿಲ್ಲಿರುವುದು ಇವನಿಗಿಷ್ಟವಿಲ್ಲವೆ? ಏನಾದರೂ ಕೆಟ್ಟ ವಾರ್ತೆ ಕೇಳಿಕೊಂಡು ಬಂದನೆ? ಇಷ್ಟು ದೊಡ್ಡ ಮನುಷ್ಯ ಹೀಗೆ ಅಳುವುದನ್ನು ಅವನು ಹಿಂದೆಂದೂ ನೋಡಿರಲಿಲ್ಲ.

“ನೀವು ಕೇಶವುಲು ಅಲ್ಲವೆ?”

ಕೇಶವುಲು ತಲೆಯೆತ್ತಿ ನೋಡಿದ. ಕೆಂಪಗೆ ಹೊರಗೆ ಸಿಡಿಯಲು ತಯಾರಾದ ಕಣ್ಣ ಗುಡ್ಡೆಗಳು. ಅವನು ನಿಜಕ್ಕೂ ಅಳುತ್ತಿರಲಿಲ್ಲ. ಚೆನ್ನಾಗಿ ಕುಡಿದುದರಿಂದ ಬಿಕ್ಕಳಿಕೆ ಬರುತ್ತಿತ್ತು.

ಕೇಶವುಲು ತಲೆದೂಗಿದ.
“ಭಯವಾಯಿತೆ?” ಅರವಿಂದ ಕೇಳಿದ.
ಕೇಶವುಲು ಅಂದ :
“ಆ ಮಂಚದಲ್ಲಿ ನನ್ನ ಗೆಳೆಯನೊಬ್ಬನಿದ್ದ. ತಿಂಗಳ ಕೆಳಗೆ ಹಾರ್ಟ್ ಫೈಲಾಗಿ ತೀರಿಕೊಂಡ. ಅವನ ಶವವನ್ನು ರಾಜಮಂದ್ರಿಗೆ ಸಾಗಿಸಿದ್ದು ನಾನೇ. ಪಾಪ ಊರಲ್ಲಿ ಹೆಂಡತಿ ಮಕ್ಕಳು, ತಾಯಿ…. ಅವನು ಸತ್ತ ಅಂದರೆ ನಂಬುವುದಕ್ಕೆ ಸಾಧ್ಯವಾಗುತ್ತಿಲ್ಲ ನನಗೆ. ಮಂಚದ ಮೇಲೆ ನೀವು ಮಲಗಿದುದನ್ನು ಕಂಡು ಒಂದು ಕ್ಷಣ ನನಗೇನೋ ಭ್ರಮೆಯಾಯಿತು. ಆ ಬಾಟಲುಗಳನ್ನು ನೋಡಿ….”

ಮೂಲೆಯಲ್ಲಿ ಪೇರಿಸಿಟ್ಟ ಬೀಯರು ವಿಸ್ಕಿ ಬ್ರಾಂದಿ ಬಾಟಲಿಗಳನ್ನು ತೋರಿಸಿದ.

“ಇಬ್ಬರೂ ಸೇರಿಯೇ ಮುಗಿಸಿದ್ದು. ನೆನಪಿಗೋಸ್ಕರ ಇಟ್ಟುಕೊಂಡಿದ್ದೇನೆ.”

“ಕೇಶವುಲುಗೆ ಮಲಗಿದ ತಕ್ಷಣ ನಿದ್ದೆ ಬಂತು. ನಿದ್ದೆ ಬಂದಂತೆ ದೊಡ್ಡ ಗೊರಕೆಯ ಸುರುವಾಯಿತು.
*****

ಅಧ್ಯಾಯ ೨೦
ತನ್ನ ಹೊಸ ರೂಮ್ ಮೇಟು ಸಂಶೋಧಕ ವಿದ್ಯಾರ್ಥಿ, ಕಲಿತವನು, ದೊಡ್ಡ ದೊಡ್ಡ ಪುಸ್ತಕಗಳನ್ನು ಓದುವವನು ಎಂದು ತಿಳಿದ ಮೇಲೆ ಕೇಶವುಲುಗೆ ಅರವಿಂದನ ಕುರಿತಾದ ಭಯಭಕ್ತಿಗಳು ಹೆಚ್ಚಿದುವು. ಅವನಾದರೆ ಬೆಳಗಿನ ವೃತ್ತ ಪತ್ರಿಕೆ, ತೆಲುಗಿನಲ್ಲಿ ಧಾರಾಳ ದೊರಕುತ್ತಿದ್ದ ಲೈಂಗಿಕ ಪುಸ್ತಕಗಳು-ಇವುಗಳಾಚೆ ಓದುವವನಾಗಿರಲಿಲ್ಲ. ಮೇಜು ಕುರ್ಚಿಗಳಿಂದ ತನ್ನ ಸಾಮಾನುಗಳನ್ನು ತೆಗೆದು ಅವನ್ನು ಅರವಿಂದನಿಗೆಂದು ಬಿಟ್ಟುಕೊಟ್ಟ, ಕೆಲಸದ ಹುಡುಗನನ್ನು ಕರೆದು ರೂಮನ್ನು ಗುಡಿಸಿ ಸ್ವಚ್ಛ ಮಾಡಿಸಿದ. ಖಾಲಿ ಬಾಟಲುಗಳನ್ನೂ ಹಳೆ ಪೇಪರುಗಳನ್ನೂ ವ್ಯಾಪಾರಿಗಳಿಗೆ ಮಾರಿದ, ಅರವಿಂದನಿಗೆ ಬಟ್ಟೆಗಳನ್ನು ಆರಿಹಾಕಲು ಹಗ್ಗ ಕಟ್ಟಿ ಕೊಟ್ಟ. ಇಬ್ಬರಿಗೂ ನೀರು ಕುಡಿಯಲೆಂದು ಮಣ್ಣಿನ ದೊಡ್ಡದೊಂದು ಹೂಜಿಯನ್ನು ಕೊಂಡುತಂದ. ತುಂಬಾ ಸಹಕಾರಿಯಾಗಿರಲು ಪ್ರಯತ್ನಿಸಿದ.

ನಗರದ ಚಿಟ್ ಫಂಡೊಂದರಲ್ಲಿ ಚೀಫ್ ಅಕೌಂಟೆಂಟಾಗಿದ್ದ ಕೇಶವುಲು ಯುವಕ ಸಮಾಜಕ್ಕೆ ಹೊಸಬನಲ್ಲ. ಅವನೂ ಯುವಕ ಸಮಾಜವೂ ಒಟ್ಟಾಗಿಯೇ ಬೆಳೆದುದು. ನಾನಿಲ್ಲಿ ಬಂದು ಸೇರಿದಾಗ ನಿಮ್ಮಂತೆಯೇ ಯುವಕನಾಗಿದ್ದೆ. ತಲೆ ತುಂಬಾ ಕೂದಲುಗಳಿದ್ದುವು. ಎಲ್ಲರೂ ಇಲ್ಲಿಗೆ ಬರುವಾಗ ಯುವಕರಾಗಿಯೇ ಇರುತ್ತಾರೆ. ಅದಕ್ಕೆಂದೇ ವಸತಿಗೃಹಕ್ಕೆ ಈ ಹೆಸರು. ಚಿಟ್ ಫಂಡ್ ವ್ಯವಹಾರದಲ್ಲಿ ನನ್ನ ತಲೆಗೂದಲು ಉದುರಿಹೋಯಿತು. ಈಗಿನ್ನು ಕೆಲಸ ಬದಲಾಯಿಸುವುದರಲ್ಲಿ ಅರ್ಥವಿಲ್ಲ. ಇದರೊಂದಿಗೇ ಬದುಕಬೇಕು ಅನ್ನುತ್ತಿದ್ದ.

ತೀರಿಹೋದ ಗೆಳೆಯನ ಬಗ್ಗೆ ಆಗಾಗ ಮಾತಾಡುತ್ತಿದ್ದ. ಅವನ ಹೆಸರು ಆನಂದ. ಬಹಳ ಸಾಹಸಿ ತೀರಿಹೋಗುವ ತನಕವೂ ಕೆಲಸ ಬದಲಾಯಿಸುತ್ತಲೇ ಇದ್ದ. ಯಾವುದೊ ಏಜೆನ್ಸಿಯಲ್ಲಿ ಸೇಲ್ಸ್ ಮ್ಯಾನ್ ಆಗಿದ್ದವನು ಕ್ಲಾರ್ಕ್ ಆದ, ಕಂಟ್ರಾಕ್ಟರ್ ಆದ-ಗಲ್ಫ಼ಿಗೆ ಹೋಗುವ ವಿಚಾರ ಮಾಡತೊಡಗಿದ್ದ….

ಕೇಶವುಲು ಆಗಾಗ ಬಿಯರೋ ಬ್ರಾಂದಿಯೋ ತಂದು ಕುಡಿಯಲು ಕೂರುತಿದ್ದ. ಕಂಪೆನಿಗೋಸ್ಕರ ಸೇರುವಂತೆ ಅರವಿಂದನನ್ನು ಕೇಳಿಕೊಳ್ಳುತ್ತಿದ್ದ. ಕುಡಿದು ಧೋ ಎಂದು ಬೆವರುತ್ತ ಕೇಶವುಲು ಅರವಿಂದನನ್ನು ಆನಂದನೆಂದು
ಭ್ರಮಿಸಿ ಮಾತಾಡುತ್ತಿದ್ದ. ಅರವಿಂದನಿಗೆ ತಾನು ಇನ್ನೊಬ್ಬನ ಬದುಕನ್ನು ಬದುಕುತ್ತಿರುವಂತೆ ಅನಿಸತೊಡಗಿತು.

ಆದರೂ ಯುವಕ ಸಮಾಜ ಬೇರೆಲ್ಲ ವಿಧಗಳಿಂದಲೂ ಅನುಕೂಲವಾದ ವಸತಿಗೃಹ, ಕ್ರಮೇಣ ಅರವಿಂದನ ದೈನಂದಿನ ಜೀವನ ಒಂದು ಕ್ರಮಕ್ಕೆ ಬಂತು. ಬೆಳಗ್ಗೆ ಆರು ಆರೂವರೆಯ ಸುಮಾರಿಗೆ ಮೆಸ್ಸಿನ ಹುಡುಗ ಚಹಾ ತಂದು ಎಬ್ಬಿಸುತ್ತಿದ್ದ. ಸ್ನಾನ ಬಟ್ಟೆ ಒಗೆದು ಆರಿಸುವುದು ಇತ್ಯಾದಿ ಕೆಲಸಗಳು ಮುಗಿಯುವಷ್ಟರಲ್ಲಿ ಬೆಳಗಿನ ಉಪಹಾರ ಸಿದ್ದವಾಗಿರುತ್ತಿತ್ತು. ಎಂಟರಿಂದ ಒಂಬತ್ತರ ತನಕ ಪ್ರೋಫೆಸರರ ಮನೆ ಟ್ಯೂಷನು, ಹತ್ತಕ್ಕೆ ಸಂಸ್ಥೆ, ಮಧ್ಯಾಹ್ನದ ಊಟ ಕೆಂಟೀನಿನಲ್ಲಿ ಆಗುತ್ತಿತ್ತು. ಮತ್ತೆ ಸಂಜೆ ಸುಮಾರು ಏಳು ಎಂಟು ಗಂಟೆಯ ಹೊತ್ತಿಗೆ ಮರಳಿ ಉಂಡು ಮಲಗಿದರೆ ಕೇಶವುಲುನ ಗೊರಕೆಗೂ ಕೂಡ ಎಚ್ಚರಾಗುತ್ತಿರಲಿಲ್ಲ.

ಅವನು ಕಾಣಬಹುದಾದ ಭವಿಷ್ಯವಿದ್ದರೆ ಅದು ಈ ಸಂಸ್ಥೆಯಲ್ಲೇ. ಇಲ್ಲಿ ಮುಂದೆ ಬರಬೇಕಾದರೆ ಯಾರ ಬೆಂಬಲವೂ ಇಲ್ಲದೆ ತಾನು ಅಭ್ಯಾಸದಲ್ಲಿ ಚೆನ್ನಾಗಿ ಮಾಡಬೇಕೆಂದು ಎಂದೋ ಅವನಿಗೆ ಮನವರಿಕೆಯಾಗಿತ್ತು. ಇದಕ್ಕೆ ಅನುಕೂಲವಾಗುವಂತೆ ಸೆಮಿನಾರು ವರ್ಕ್‌ಶಾಪಗಳು ಟರ್ಮ್‍ಪೇಪರುಗಳು ಪರೀಕ್ಷೆಗಳು ಕ್ಯಾಂಟೀನು ಚರ್ಚೆಗಳೆಂದು ಹಲವು ಹೊರದಾರಿಗಳಿದ್ದುವು- ಪ್ರತಿಭೆಯನ್ನು ಪ್ರಕಟಿಸುವುದಕ್ಕೆ. ಅವನು ಸಿಕ್ಕಿದ ಅವಕಾಶಗಳನ್ನೆಲ್ಲಾ ಬಿಡದೆ ಉಪಯೋಗಿಸತೊಡಗಿದ. ಮೊದಮೊದಲು ತಾನು ಈ ವಠಾರಕ್ಕೆ ನಿಜಕ್ಕೂ ಸೇರಿದವನಲ್ಲ, ಯಾವುದೋ ಯೋಗಾಯೋಗದಲ್ಲಿ ಇಲ್ಲಿ ದಡಕಂಡಿದ್ದೇನೆ, ತಾನು ಬೇರೆ ತನ್ನ ಹಿನ್ನೆಲೆ ಬೇರೆ, ಅದು ಯಾರು ಕಂಡಿರದ ಬಂಟ್ವಾಳದ ಹಳ್ಳಿ, ಅಂತೆಯೆ ನಾಗೂರು. ನಾಗೂರಿನ ಅವಮಾನಗಳು, ಶಾಲಾ ಮಾಸ್ತರನಾಗಿದ್ದವನು ಕವಿತಳ ಮುಂದೆ ಲೆಕ್ಚರರಾಗಿದ್ದೆನೆಂದು ಕೊಚ್ಚಿಕೊಂಡಿದ್ದ, ಒಂದು ವಿಧದಲ್ಲಿ ತನ್ನ ಈ ಬದುಕು ಒಂದು ದೊಡ್ಡ ವಂಚನೆ, ಇದು ಒಂದಲ್ಲ ಒಂದು ದಿನ ಬಯಲಾದಾಗ ತನ್ನ ನೆಲೆಯೇನು? ಎಂದು ಭೀತಿ ಸಂದೇಹಗಳಿಗೆ ಒಳಗಾಗಿಬಿಡುತ್ತಿದ್ದ. ಆದರೂ ಈ ಬದುಕು, ಈಗಿನ ಈ ಸ್ಥಿತಿ ಬರೇ ಅದೃಷ್ಟದಿಂದ ಬಂದುದಲ್ಲ, ತಾನು ಬೇಕೆಂದೇ ಬೆನ್ನುಹತ್ತಿ ಬಂದುದೂ ಹೌದು, ಇದನ್ನು ಬದುಕುವದಂತೂ ಖಂಡಿತ ಎಂದು ಕೊಳ್ಳುತ್ತಿದ್ದ.

ಎಲ್ಲರೊಂದಿಗೂ ಮೈ ಚಳಿ ಬಿಟ್ಟು ಬೆರೆಯತೊಡಗಿದ. ಎಲ್ಲರಿಗೂ ಅವರು ಕೇಳಿದ ಸಹಾಯಕ್ಕೆ ಮುಂದಾದ-ಶಾಪಿಂಗ್‌ಗೆ ಸಹಾಯ ಮಾಡುವುದರಿಂದ ಹಿಡಿದು ಸೆಮಿನಾರ್, ಟರ್ಮ್ ಪೇಪರುಗಳನ್ನು ಬರೆದುಕೊಡುವವರೆಗೆ, ಅರವಿಂದ ಜನಪ್ರಿಯ, ಅರವಿಂದ ಸ್ನೇಹಜೀವಿ, ಅರವಿಂದ ಪರೋಪಕಾರಿ, ಅರವಿಂದ ಚುರುಕು, ಅರವಿಂದ ಬುದ್ಧಿವಂತ, ಅರವಿಂದ ಸ್ಕಾಲರು, ಅರವಿಂದನಿಗೆ ಒಳ್ಳೆ ಭವಿಷ್ಯವಿದೆ-ಜನರ ಮನಸ್ಸಿನಲ್ಲಿ, ಅವರ ನೆನಪಿನಲ್ಲಿ ಮುದ್ರೆಯೊತ್ತಿದ. ಎಲ್ಲೋ ಒಂದು ಕಡೆ ಹಳೇ ಕ್ಲಾಸ್‌ಮೇಟು ಜೋಷಿ ಅದೃಶ್ಯವಾಗಿ ನಿಂತು ಹಾಗೆ ಮಾಡು ಹೀಗೆ ಮಾಡು ಆ ಜನರ ಪರಿಚಯ ಮಾಡಿಕೋ ಎಂದು ನಿರ್ದೇಶಿಸುತ್ತಿರುವಂತೆ ಅನಿಸಿ ಕಸಿವಿಸಿಯಾಗುವುದಿತ್ತು. ಆದರೆ ಜೋಷಿಯನ್ನು ದಾಟಿ ಅವನು ಈಗಾಗಲೆ ಬಹಳ ದೂರ ಬಂದುಬಿಟ್ಟಿದ್ದ. ಅಲ್ಲದೆ ಆತನ ಮಾದರಿಯನ್ನು ತಾನೇಕೆ ಒಪ್ಪಿ ಕೊಳ್ಳಬೇಕು? ಜೊಷಿಗೆ ಬರೇ ವಿನಯದ, ಶಿಷ್ಟಾಚಾರದ ನಯ, ವಂಚನೆ ಮಾತ್ರ ಗೊತ್ತು. ತನಗೆ ಹಟವಿದೆ, ಬುದ್ದಿಯಿದೆ, ಎಲ್ಲಕ್ಕಿಂತ ಹೆಚ್ಚಾಗಿ ಹುಚ್ಚು ಸಾಹಸವಿದೆ.

ಆದರೂ ಎಲ್ಲಾ ಇದ್ರೂ ಏನೋ ಕಳೆದುಕೊಂಡ ನೋವೂ ಅರಿವಿಂದನಿಗೆ ಬರುತ್ತಿತ್ತು. ಮೊದಲಾದರೆ ಇತಿಹಾಸವೆಂದರೆ ಅದು ಬರೇ ಒಂದು ಅಧ್ಯಯ ವಿಷಯವಷ್ಟೇ ಆಗಿರಲಿಲ್ಲ. ಅದೊಂದು ದರ್ಶನದಂತಿತ್ತು. ಹಳೆ ಪುಸ್ತಕದಂಗಡಿಗಳಲ್ಲಿ ಕುಳಿತು ಇತಿಹಾಸದ ಕಿಂಡಿಗಳಲ್ಲಿ ಇಣಿಕಿನೋಡುವ ಪುಳಕ, ಈಗಲಾದರೋ ಅತ್ಯುತ್ತಮವಾದ ಲೈಬ್ರೆರಿಯೇ ಅವನ ಮುಂದಿದೆ. ಹಳೆ ಹೊಸ ಪುಸ್ತಕಗಳು ಪತ್ರಿಕೆಗಳು, ಫಿಲ್ಮುಗಳು-ಇಡಿಯ ಮಾನವ ಇತಿಹಾಸವೇ ಕೈಯ ಅಳತೆಯೊಳಗಿದೆ. ಆದರೂ ಅವನಿಗೆ ಮೊದಲಿನ ಕುತೂಹಲವಿಲ್ಲ. ಹೊಸ ವಿಚಾರಗಳನು ಓದುವಾಗ, ಹೊಸ ರೀತಿಯಲ್ಲಿ ಚಿಂತಿಸುವಾಗ ಹೊಸ ಜಗತ್ತು ತೆರೆದುಕೊಂಡ ಹಾಗೆ ಅನಿಸುವುದಿಲ್ಲ. ಬೆಳೆಯುವ ಬಗೆಯೇ ಹೀಗೆಯೆ ಅಥವಾ ತಾನು ಬೆಳೆಯುತ್ತಿರುವ ರೀತಿಯೇ ಸರಿಯಿಲ್ಲವೆ?

ಮೊದಲಿನ ಸಮಯವೂ ಈಗ ಇಲ್ಲ. ಮುಂಜಾನೆ ಎದ್ದರೆ ಮತ್ತೆ ರಾತ್ರಿ ಹಾಸಿಗೆಯಲ್ಲಿ ಮೈ ಚಾಚುವ ತನಕ ಕೆಲಸ ಏನೋ ಕೆಲಸ, ಸದಾ ಪ್ರಕ್ಷುಬ ಗೊಂಡೇ ಇರುವ ಮನಸ್ಸು. ಊರ ದಿನಗಳು ನೆನಪಿಗೆ ಬರುತ್ತಿದ್ದವು. ಬೇಸಿಗೆಯ ಅಪರಾಹ್ನಗಳು, ಸಂಜೆಗಳು, ಮಳೆಯ ರಾತ್ರಿಗಳು ಎಷ್ಟೊಂದು ದೀರ್ಘವಾಗಿದ್ದುವು ! ಸಮಯ ಸ್ಥಗಿತವಾಗಿತ್ತು ಅಲ್ಲಿ. ಆಗ ಓದಿದ ಪುಸ್ತಕಗಳು, ಕಂಡ ವ್ಯಕ್ತಿಗಳು, ನಡೆದ ಘಟನೆಗಳು ನೆನಪಿನಲ್ಲಿ ಬೇರೂರಿದಂತೆ ಈಗ ಯಾಕೆ ಆಗುವುದಿಲ್ಲ?

ಈಗ ದೇಶ ವಿದೇಶಗಳಲ್ಲಿ ಉನ್ನತ ಸ್ಥಾನಮಾನಗಳನ್ನು ಪಡೆಯಲು ಹೆಣಗಾಡುವ, ರಿಸರ್ಚ್ ಪೇಪರುಗಳನ್ನು ಯಂತ್ರಗಳಂತೆ ಹೊರ ಹಾಕುವ, ಕರೆ ಬಂದ ತಕ್ಷಣ ಕಾನ್ಫರೆನ್ಸ್‌ಗಳಿಗೆ ಹೋಗಲು ಸೂಟ್‌ಕೇಸು ಹಿಡಿದು ತಯಾರಾಗಿ ನಿಂತಿರುವ ಆಧ್ಯಾಪಕರು, ಇವರ ಹೆಜ್ಜೆಯ ಮೇಲೆ ಹೆಜ್ಜೆಯಿಟ್ಟು ನಡೆಯುವ ವಿದ್ಯಾರ್ಥಿಗಳು, ಎಲ್ಲರ ಮಧ್ಯೆ ಎಲ್ಲರಂತಾಗಿದ್ದುಕೊಂಡೇ ಎಲ್ಲರಿಗಿಂತಲೂ ಮುಂದೆ ಸಾಗಬೇಕೆಂಬ ತಾನು!

ಎಲ್ಲದಕ್ಕೂ ಒಂದಷ್ಟು ಮುಗ್ಧತೆಯಿರಬೇಕು. ತಾನದನ್ನು ಎಂದೋ ಕಳೆದುಕೊಂಡಿದ್ದೇನೆ ಎಂದು? ವೆಂಕಟರಮಣ ಮೂರ್ತಿಯನ್ನು ದ್ವೇಷಿಸಲು ಆರಂಭಿಸಿದಂದು ಅಥವಾ ಆತನಿಗೆ ತನ್ನ ಹಳೆಯ ಪುಸ್ತಕಗಳನ್ನೆಲ್ಲ ಇಡಿಯ ನೆನಪನ್ನೇ ಒರೆಸುವಂತೆ ದಾನಮಾಡಿದಂದು ಅಥವಾ ಮರೀನಾ ಓಡಿಹೋಗಿದ್ದಾಳೆಂದು ತಿಳಿದ ದಿನ?

ಯಾರನ್ನೂ ಗಮನಿಸದೆ ಧಾವಿಸುವ ಮನುಷ್ಯರು, ಅವರ ಕೈಗಳಲ್ಲಿರುವ ಫೈಲುಗಳು, ಬ್ರೀಫ್‌ಕೇಸುಗಳು, ಕಾರಿಡಾರುಗಳಲ್ಲಿ ನಡೆದರೆ ಸದ್ದಾಗದಿರಲೆಂದು ಹಾಸಿದ ಹುರಿಯ ಕಾರ್ಪೆಟುಗಳು, ಟೈಪ್ ರೈಟರುಗಳ ಕಟಕಟ ಸದ್ದು. ಆಫೀಸ್ ಹೆಡ್‌ಗಳ ಇಲೆಕ್ಟ್ರಿಕ್ ಕರೆಗಂಟೆಯ ಬೀಮ್ ಅನ್ನುವ ಸದ್ದು, ಕಾನ್‌ಫರೆನ್ಸ್, ವರ್ಕ್‌ಶಾಪ್, ಸೆಮಿನಾರು, ಪ್ರಬಂಧಗಳು, ಭಾಷಣಗಳು ಇತಿಹಾಸದಿಂದ ಬಹಳ ದೂರ ಸರಿದ ಕಾಳಜಿಗಳು. ಇವೆಲ್ಲದರ ಮಧ್ಯೆ ಮನುಷ್ಯನ ಮೂಲಭೂತ ಮುಗ್ಧತೆಯನ್ನು ಬೇರೆ ಬೇರೆ ರೀತಿಯಲ್ಲಿ ಒಳಗೊಂಡು ನಿಂತಂತೆ ಅವನಿಗೆ ಕಾಣಿಸಿದುದು ಇಬ್ಬರು ವ್ಯಕ್ತಿಗಳು ಯಾವುದೋ ಆದರ್ಶದ ಕನಸು ಕಟ್ಟಿ ಅದಕ್ಕೋಸ್ಕರವಾದರೂ ಬದುಕು ಬದುಕಲರ್ಹವಾದುದು ಎಂದು ನಂಬಿಕೊಂಡಿರುವ ಪ್ರಭಾಕರ ರೆಡ್ಡಿ ; ಬದುಕನ್ನು ಕುತೂಹಲದಿಂದ ನೋಡುತ್ತ, ನಂಬುತ್ತ, ಆಯಾ ದಿನವನ್ನು ಅದು ಬಂದ ಹಾಗೆ ಸ್ವೀಕರಿಸುವಂತೆ ತೋರುವ ಶಕುಂತಳೆ.

ಇವರು ಯಾಕೋ ತನ್ನ ಮನಸ್ಸನ್ನು ಬೇರೆ ಬೇರೆ ಕಾರಣಗಳಿಗೋಸ್ಕರ ಅಸ್ವಸ್ಥಗೊಳಿಸುತ್ತಿರುವಂತೆ ಅರವಿಂದನಿಗೆ ಅನಿಸುತ್ತಿತ್ತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಂದೇ
Next post ಜೀವನದ ರೂಪನ್ನೆ ಬದಲಿಸುವ, ಬಾ!

ಸಣ್ಣ ಕತೆ

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…