Home / ಕವನ / ಕವಿತೆ / ಸ್ನೇಹ-ಸಿಂಧು

ಸ್ನೇಹ-ಸಿಂಧು

ದೇವ ಹೃದಯದ ನೀಲದಾಳದಿ
ಮೊರೆವ ಸ್ನೇಹದ ಸಿಂಧುವೆ!
ಬೆಂದ ಬಾಳಿಗೆ ನೊಂದ ಜೀವಿಗೆ
ನೀನೆ ಸರುವರ ಬಂಧುವೆ!

ಇಳೆಯ ಕುದಿಯನು ಕಳೆಯಲೋಸುಗ
ಹಸಿರ ಸಿರಿಯನು ಹೊದಿಸಿದೆ
ಏಳು ಕಡಲುಗಳನ್ನೆ ಹರಿಯಿಸಿ
ಪ್ರಾಣಪವನವ ಸುತ್ತಿದೆ.
ಹಗಲಿನುರಿ ನಂದಿಸಲು ಸಂಧ್ಯಾ-
ಮೋಹ ಕಂಕಣ ಕಟ್ಟಿದೆ
ಇರುಳಿನೆದೆಯಲಿ ಚೆಲುವ ಚಂದ್ರನ
ಬಿಂಬವನ್ನೇ ಬಿತ್ತಿದೆ.

ಸೂರ್ಯ ಲೋಕದ ಸುತ್ತು ಭ್ರಮಿಸುವ
ನಿಖಿಲ ಗ್ರಹಗಳ ರತಿಯಲಿ
ಕಾಲಚಕ್ರದ ವಕ್ರಗತಿಯಲಿ
ಜನ್ಮ ಮರಣದ ಜೊತೆಯಲಿ
ದಿವ್ಯ ಪ್ರೀತಿಯ ಭವ್ಯ ಗೀತವ
ಮಿಡಿಡು ವಿಶ್ವವ ತುಂಬಿದೆ
ಪಂಚ ಭೂತಗಳನ್ನು ಬೆರೆಯಿಸಿ
ಬಣ್ಣದಾಟವ ನಾಡಿದೆ

ಚೆಲುವಿನಲಿ ಸೆಳೆ ಆಳಲಿನಲಿಯ-
ಕ್ಕರತೆ ನೆಲದಲಿ ಕಂಪನು
ಆಸೆಗನಸುಗಳರಳ ಹೃದಯದಿ
ಬೆಳೆದೆ ಇಹದಲಿ ಸಿರಿಯನು
ನಿನ್ನ ತೆರೆಗಳು ತಟ್ಟಿದೆಡೆಯಲಿ
ಸ್ವರ್ಗಲೋಕವು ಬೆಳೆವುದು
ನಿನ್ನ ಮೊಳಗೂ ಕೇಳದಾಕಡೆ
ನರಕಕಲ್ಲವೆ ನೆಲೆಯದು.

ನಿನ್ನ ದಂಡೆಯ ಉಸುಕಿನಿಂದಲೆ
ಗುಬ್ಬಿ ಗೂಡನು ಕಟ್ಟುತ
ಆಟವಾಡುತ ಮರೆತ ಕೆಲವರ
ಕರೆವೆ ತೆರೆ ಬೆರಳೆತ್ತುತ
ಕಣ್ಣ ಮಿಂಚಿನ ಬಲೆಯ ಬೀಸುತ
ಸೆಳೆವೆ ನಿನ್ನೆಡೆ ಹಲವರ.
ಸ್ವಪ್ನ ಸುಂದರ ಮಾಯೆಯಾಮಿಷ
ಹರಡಿ ನೀ ಸ್ನೇಹಾಕರ

ನೀ ಕೃಪಾಕರನೆಂದು ನಿನ್ನಡಿ
ಗೆರಗಿದವರನು ಮುರಿಯುವೆ
ನೀ ಕೃಪಾಣದ ಕೈಯನೆತ್ತುತ
ರುದ್ರರೂಪವ ತೋರುವೆ
ಯಾವ ಸಾಸಿಗ ನಿನ್ನ ನೀರೊಳು
ಧುಮುಕಿ ಸಿರಿಯನು ಜರೆವನು
ನಿನ್ನದೊಂದೇ ಹನಿಯನಾಶಿಸಿ
ಶಾಂತಿ ಸುಖವನು ತೊರೆವನು.

ನಿನ್ನ ಕರೆಯನು ಕೇಳಿದವರಿಗೆ
ಎಲ್ಲಿ ಬಿಡುಗಡೆ ಇರುವುದು
ನಿನ್ನ ಸುಡುವುರಿ ಮಡಲಿನಲಿ
ಒಡಲೆಲ್ಲಿ ತಂಪನು ಪಡೆವುದು.
ನಿನ್ನ ಮಡಿಲಲಿ ಆಡ ಬಂದೆನು
ಲೀಲೆಯಲಿ ಕುಣಿದಾಡಲು
ತಿಳಿಯದೆಯೆ ನಾ ಬೆಂದು ಹೋದೆನು
ಕನಸಿನಾಳಿಕೆ ಮುಗಿಯಲು

ನನ್ನ ಆಸೆಯ ಭವ್ಯ ಮಂದಿರ
ಶೂನ್ಯದಲಿ ಮರೆಯಾಯಿತು
ಮನದ ಬಾಂದಳದಲ್ಲಿ ಮಿನುಗಿದ
ಚಂದ್ರ ದೀಪವು ಆರಿತು.
ರಮ್ಯ ಭಾವದ ಸುಮನ ಪಲ್ಲವ
ಬಾಡೆ ಎದೆ ಕೊರಡಾಯಿತು
ಪಾರಿಜಾತದ ಮೃದುಲ ಹಾಸುಗೆ
ಶರಗಳಾಸನವಾಯಿತು.

ಸ್ವಪ್ನ ಸುಂದರವಾದ ಸುಖಮಯ
ಸುಲಭ ಜೀವನ ಮುಗಿಯಿತು
ನಿಜದ ಕಲ್ಲೆದೆ ಕೊರೆದು ಹರಿಯುವ
ಸತ್ವ ಸಮಯವು ಬಂದಿತು.
ನಿನ್ನ ಆಸರೆಯಲ್ಲಿ ನಿಂದಿಹ
ಬಾಳ ಬಗೆಯನು ಅರಿತೆನು
ಮುರಿನ ಕೈಯೇ ಅಭಯ ಕರವೆಂ-
ಬುದರೆ ಪರಿಯನು ತಿಳಿದೆನು.

ಬೆನ್ಗೆ ನಿನ್ನಯ ಭೀಮರಕ್ಷೆಯ
ಕಟ್ಟಿಿಕೊಂಡಿಹ ಧೀರರು
ಶಿಲುಬೆಯನು ನಗುನಗುತಲೇ-
ರಿದರತುಲ ತ್ಯಾಗದ ವೀರರು.
ನಂಜುನುಂಗಿದ ಒಡಲಿಗಿಳಿಯಿತು
ಅಮೃತ ಸತ್ವದ ಶಾಂತಿಯು
ಉರಿಗೆ ಧುಮುಕಿದರೇನು ದೊರೆಯಿತು
ಚಂದ್ರಶೀತಲ ಪ್ರೀತಿಯು

ಆದರೆನ್ನೆದೆಯಲ್ಲಿ ಭೀತಿಯು
ನೆರಳ ಚಾಚುತಲಿರುವುದು
ಕಣ್ಗೆ ಮಂಕನು ಕವಿದು ಹೃದಯದ
ಕಸುವ ಕೀಳುತಲಿರುವುದು.
ಏತಕಿನ್ನೂ ಹೃದಯ ತಳದಲಿ
ಹಗೆಯ ಹಾವವಿತಿರುವುದು
ಹೆಡೆಯ ಹರಡುತ ಬಾಳಿನಲಿ ನಂ-
ಜೇಕೆ ಚಿಮ್ಮುತಲಿರುವುದು.

ಹೃದಯವೆಲ್ಲಾ ನಿನ್ನೆ ಕರುಣೆಯ
ಕಿರಣಕಾಶಿಸಿ ಕಾಯ್ದಿದೆ
ಯಾವ ದೈವವು ನಮ್ಮ ಮಧ್ಯದಿ
ಮೇಘ ಜವನಿಕೆಯೆಳೆದಿದೆ.
ಯಾರು ಕೆಡುಕಿನ ಬೀಜ ಗಾಳಿಗೆ
ತೂರಿ ಎಲ್ಲೆಡೆ ಬೆಳೆದರು
ಹಗೆಯ ಕಾಡಿನ ವಿಷದ ವಲಯವ
ನಾಡು ಬೀಡಿಗೆ ಬಿಗಿದರು.

ದಿನವು ಚಿಮ್ಮುವ ಕೊಲೆಯ ರಕ್ತವು
ಹೇಗೆ ನನ್ನೆದೆ ತಟ್ಟಿತು
ಜಗದ ಪಾಪದ ಭೂತ ನೃತ್ಯವು
ಮನದ ರಂಗಕ್ಕಿಳಿಯಿತು.
ಯಾರ ಕರ್ಮವು ಬೆಳೆದ ಕಟುಫಲ
ನನ್ನ ಬಾಯಲಿ ಬಿದ್ದಿತು
ಅದರ ಕಹಿ ಯೊಡಲನ್ನು ತುಂಬಿರೆ
ಹರಣ ಕಸಿವಿಸಿ ಗೊಂಡಿತು.

ಯಾರು ಈ ಕಹಿ ಕಳೆವರೆನ್ನಯ
ಕೊಳೆಯನ್ನೆಲ್ಲಾ ತೊಳೆವರು
ಲೋಕವೆಲ್ಲಾ ತುಂಬಿ ಉಳಿದಿಹ
ಪಾಪವನು ಉರಿಗಿಡುವರು
ಪಾಪನಾಶನ ಗಂಗೆಯಲಿ ಇ-
ಕ್ಕೆಲದಿ ಕೊಳೆಯೇ ತುಂಬಿದೆ
ಸಪ್ತಸಾಗರದಂತರಂಗದಿ
ಕೊಲೆಯ ಜಾಲವು ಹರಡಿದೆ.

ಇನ್ನು ನೀನೇ ಶರಣು ಪತಿತಗೆ
ಯಾರು ಎತ್ತುವರನ್ಯರು
ನಿನ್ನ ಕರೆಯನು ಕೇಳಿ ನಿನ್ನೆಡೆ
ಓಡಿಬರುವರೆ ಧನ್ಯರು
ಏಳು ಸ್ನೇಹನೆ ಅರಳು ನಂದಾ-
ದೀಪವಾಗೆನ್ನೆದೆಯಲಿ
ನಿನ್ನ ಸಾಗರ ಘೋಷವೇಳಲಿ
ನನ್ನ ತನುಮನ ಕೆಣಕಲಿ.

ಕ್ಲೈಬ್ಯ ತೊಲಗಲಿ ಭೀತಿಯೋಡಲಿ
ಕೀಳು ಎಣಿಕೆಗಳಳಿಯಲಿ
ನಿನ್ನ ನಂಬಿದ ನನ್ನ ನೌಕೆಯು
ನಿನ್ನ ನೀರಲಿ ಧುಮುಕಲಿ
ಮತ್ತೆ ಬೇರೆಡೆ ಸುಖದ ಜೀವನ
ದೊರೆತರೂ ನಾನೊಲ್ಲೆನು
ಇಲ್ಲಿ ನಿನ್ನೆಡೆಯಲ್ಲಿ ಸಾವಿನ
ಸಖ್ಯ ಬೆಳೆಸಲು ಸಿದ್ಧನು.

ನಿನ್ನ ಸ್ಪರ್ಶವು ರೋಮ ರೋಮದಿ
ಸ್ನೇಹವಲ್ಲಿಯ ಚಿಗಿಸಲಿ
ನಿನ್ನ ಕರುಣಾ ದೃಷ್ಟಿ ಹೃದಯದ
ಅಮೃತ ಸೃಷ್ಟಿಯ ತೆರೆಯಲಿ
ದಿಗ್‌ದಿಗಂತದಿ ಮುತ್ತು ಹವಳದ
ವರ್ಣ ಸಂಪದ ಬೆಳೆಯಲಿ
ಬಾನು ನೆಲದಲಿ ಹರ್ಷಧವಲತೆ
ಜೊನ್ನದೊಲು ತುಳುಕಾಡಲಿ

ಸ್ನೇಹ ಸಿಂಧುವೆ, ನಿನ್ನ ಸ್ನೇಹಲ
ಲಹರಿಯಲಿ ಮುಳುಗೇಳಲು
ಶುದ್ಧ ಪಾವನ ತ್ಯಾಗ ಜೀವನ
ಸತ್ವವನು ಸವಿದೇಳಲು
ನನ್ನ ಬಾಳಿನ ಭಾವ ಬಳ್ಳಿಗೆ
ಆಶೆಯೊಂದೇ ಕೊನರಿದೆ
ನಿನ್ನನೊಳ ಹೊರಗೆಲ್ಲ ಕಡೆಗೂ
ತುಂಬಿಕೊಳ್ಳಲು ಎಳಸಿದೆ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...