ಕಾರುಗಹಳ್ಳಿಯ ಪಾಳಯಗಾರರು ಮೈಸೂರಿನಿಂದ ಓಡಿಸಿದಮೇಲೆ ಬೆಟ್ಟದ ಒಡೆಯರು ಕತ್ತಿಯನ್ನು ಹಿಡಿದು ರಾಜ ಒಡೆಯರಿಗಾಗಿ ಅನೇಕ ಜಯಗಳನ್ನು ಪಡೆದರು. ರಾಜ ಒಡೆಯರ ಪ್ರಾಬಲ್ಯವನ್ನು ಶ್ರೀರಂಗಪಟ್ಟಣದ ಅಧಿಕಾರಿಯು ಸಹಿಸಲಿಲ್ಲ; ಅದನ್ನು ತಗ್ಗಿಸುವ ಯೋಚನೆಯಿಂದ ಮೈಸೂರಿನ ಬಳಿ ಇದ್ದ ಕೆಸರೆಯೆಂಬ ಕೋಟೆಯನ್ನು ಹಿಡಿಯಲು ಸೈನ್ಯವನ್ನು ಕಳುಹಿಸಿದನು. ಆ ಅಧಿರಾಜನ ಸೈನ್ಯವನ್ನು ಬೆಟ್ಟದ ಒಡೆಯರೇ ಎದುರಿಸಿ ಸೋಲಿಸಿದರು. ಕೆಸರೆಯ ಕೋಟೆಯನ್ನು ಕೊಳ್ಳೆ ಹೊಡೆದರು. ಕೊಳ್ಳೆಯಲ್ಲಿ ಉತ್ತಮವಾದ ಒಂದಾನೆಯು ಸಿಕ್ಕಿತು. ಆ ಆನೆಯನ್ನು ತಂದು ಬೆಟ್ಟದ ಒಡೆಯರು ರಾಜ ಒಡೆಯರಿಗೆ ಒಪ್ಪಿಸಿದರು.

ರಾಜ ಒಡೆಯರು ಆನೆಯನ್ನು ಸಾಕಿಕೊಳ್ಳುವುದು ಕಷ್ಟವಾಗಿತ್ತು. ಇಟ್ಟುಕೊಂಡರೆ ವೃಥಾ ವೆಚ್ಚವಾಗುವುದೆಂದು ಯೋಚಿಸುತ್ತ ” ಈ ಆನೆಗಾಗಿ ವೆಚ್ಚ ಮಾಡತಕ್ಕ ಹಣದಿಂದ ಮೂವತ್ತು ಸೈನಿಕರ ಸಂಬಳಗಳನ್ನು ಕೊಡಬಹುದು ಆದ್ದರಿಂದ ಮೂವತ್ತು ಸೈನಿಕರನ್ನು ಸೇನೆಯಲ್ಲಿ ಹೆಚ್ಚಿಸೋಣ. ಆನೆಯನ್ನು ಕರೆದು ಕೊಂಡುಹೋಗಿ ಶ್ರೀರಂಗಪಟ್ಟಣದ ರಾಯರಿಗೆ ಕೊಟ್ಟುಬಿಡೋಣ” ಎಂದರು. ಈ ರೀತಿಯಲ್ಲಿ ಎದುರುಬಿದ್ದ ತಪ್ಪನ್ನು ತೊಡೆದುಹಾಕಲು, ರಾಜ ಒಡೆಯರು ಸಂಧಾನಮಾಡಿ ತಮ್ಮ ಹಣವನ್ನು ವ್ಯರ್ಥವ್ಯಯಕ್ಕೆ ಕೊಡದೆ ಇದ್ದರು. ಶ್ರೀರಂಗಪಟ್ಟಣದ ರಾಯನು ಅನೆಯನ್ನು ಸ್ವೀಕರಿಸಿ ಸಮಾಧಾನಪಟ್ಟು, ರಾಜ ಒಡೆಯರನ್ನು ಮನ್ನಿಸಿದನು. ತರುವಾಯ, ತಮ್ಮ ಭೂಮಿಗಳಲ್ಲಿ ಇತರರ ತೊಂದರೆ ಹೆಚ್ಚಿತೆಂದು ಜಾಣತನದಿಂದ ಹೇಳಿ ರಾಜ ಒಡೆಯರು ಕೊಡುತ್ತಿದ್ದ ಪೊಗದಿಯನ್ನು ನಿಲ್ಲಿಸಿದರು. ಮತ್ತು ಹೊಸದಾಗಿ ಒಂದೆರಡು ಹಳ್ಳಿಗಳನ್ನು ರಾಜನಿಂದ ಪಡೆದರು.
*****
[ವಿಲ್ಕ್ಸ್, ಸಂ.೧; ಪುಟ ೨೪]