ಮೂಲ: ಟಿ ಎಸ್ ಎಲಿಯಟ್
ಮಿಸ್ತಾಕುರ್ತ್ಸ್ – ಅವನು ಸತ್ತಿದ್ದಾನೆ೧
ಗಯ್‌ಗೆ ಒಂದು ಪೆನ್ನಿ ಕೊಡಿ೨
I
ಟೊಳ್ಳು ಜನ ನಾವು
ಮೈಯೊಳಗೆ ಸೊಪ್ಪುಸೆದೆ ತುರುಕಿದವರು
ಒಣಹುಲ್ಲು ಗಿಡಿದ ತಲೆಗಳನ್ನೊಟ್ಟಿಗೇ
ತೂಗುವವರು ಅಯ್ಯೋ!
ಒಟ್ಟಾಗಿ ನಾವು ಪಿಸುಗುಟ್ಟಿದಾಗ ನಮ್ಮ
ಒಣದನಿಗಳೂ-
ಶಬ್ದವಲ್ಲದ ಸದ್ದು, ಅರ್ಥ ಸೊನ್ನೆ
ಗಾಳಿ ಒಣಹುಲ್ಲನ್ನು ತೂರಿದಂತೆ
ಅಥವಾ ಕೆಳಮಾಳಿಗೆಯ ಒಳಗೆ೩
ಪುಡಿಗಾಜುಗಳ ಮೇಲೆ
ಇಲಿಕಾಲು ಪುರಪುರನೆ ಓಡಿದಂತೆ
ಆಕೃತಿಯೆ ಇಲ್ಲದ ಬರಿಯ ಆಕಾರ, ಬಣ್ಣವಿಲ್ಲದ ನೆರಳು
ಜಡ್ಡುಗಟ್ಟಿದ ಸತ್ವ, ಸ್ತಬ್ದ ಸನ್ನೆಗಳು
ಮೃತ್ಯುವಿನ ಮತ್ತೊಂದು ರಾಜ್ಯಕ್ಕೆ ದಾಟದ
ದಿಟ್ಟಗಣ್ಣಿನ ಜನರು೪
ನೆನೆದಾರೆ ನಮ್ಮನ್ನು?೫
ನೆನೆದರೂ ಕೂಡ ಎಂಥವರು ಎಂದು?
ಹಿಂಸೆಗೊಲಿದಿದ್ದ ಖಳರು ಎಂದಲ್ಲ,
ಟೊಳ್ಳುಜನ ಎಂದು;
ಸೊಪ್ಪುಸದೆ ಗಿಡಿದ
ಟೊಳ್ಳು ಅಟ್ಟೆಗಳೆಂದು.
II
ಕನಸಿನಲ್ಲಿಯೂ ಎದುರಿಸಲಾಗದ ಕಣ್ಣುಗಳು೬
ಸಾವಿನ ಕನಸಿನ ರಾಜ್ಯದಲ್ಲಿ
ಕಾಣಲು ಸಿಗವೀ ಕಣ್ಣುಗಳು:೭
ಕೊರೆದ ಸ್ತಂಭಗಳ ಮೇಲೆ ಹರಡಿರುವ
ಸೂರ್ಯಪ್ರಭೆ ಆ ಕಣ್ಣುಗಳು
ತೂಗುವ ಮರವಿದೆ ಅಲ್ಲಿ, ದನಿ ಇದೆ
ಗಾಳಿಯ ಗಾಯನದಲ್ಲಿ.
ಕರಗುತ್ತಿರುವ ತಾರೆಗಿಂತ ಅವು ದೂರದಲ್ಲಿವೆ
ತಾರೆಗಿಂತಲೂ ಹೆಚ್ಚು ಭವ್ಯ
ಗಂಭೀರವಾಗಿವೆ.೮
ಸಾವಿನ ಕನಸಿನ ರಾಜ್ಯದಲ್ಲಿ ನಾ
ಹತ್ತಿರ ಸುಳಿಯುವುದಲ್ಲ
ಬೇಕೆಂದೇ ನಾ ಹಾಕುವೆ ಅಲ್ಲಿ
ಬಗೆ ಬಗೆ ವೇಷವನೆಲ್ಲ
ಕಟ್ಟಿಗೆ ಕಾಲು, ಕಾಗೆಯ ತೊಗಲು, ಹೆಗ್ಗಣದಂಗಿ ತೊಟ್ಟು
ಹತ್ತಿರ ಹೋಗದೆ ಆಡುತ್ತೇನೆ
ಗಾಳಿಯ ಹಾಗೆ ಬಯಲಲ್ಲೇ
ಅಲ್ಲಲ್ಲೇ
ಸಂಧ್ಯಾಕಾಂತಿಯ ರಾಜ್ಯದಲ್ಲಿನ
ಅಂತಿಮ ಭೇಟಿ ಇದಲ್ಲ.೯
III
ಇದು ಸತ್ತ ನಾಡು
ಪಾಪಾಸುಕಳ್ಳಿ ಬೆಳೆವ ಬೆಂಗಾಡು
ಜೀವದುಂಬುತ್ತವೆ ಕಲ್ಲವಿಗ್ರಹ ಇಲ್ಲಿ
ಕ್ಷೀಣಿಸುವ ಚಿಕ್ಕೆಯ ಮಿಣುಕು ಬೆಳಕಲ್ಲಿ – ಅವು
ಸತ್ತವನ ಕೈಯಿಂದ ಏನೊ ಅಹವಾಲನ್ನು
ಕೊಳ್ಳುತ್ತವೆ.
ಮೃತ್ಯುವಿನ ಮತ್ತೊಂದು ರಾಜ್ಯದಲ್ಲಿ
ಹೀಗೇ ಇದೆಯೇ?
ಒಬ್ಬನೇ ಹಠಾತ್ತನೆ ಎಚ್ಚರಾಗಿ
ಮಾರ್ದವತೆಯಿಂದ ಕಂಪಿಸುವ ಗಳಿಗೆಗಳಲ್ಲಿ
ಮುತ್ತನಿಡಬೇಕಾದ ತುಟಿಗಳೆರಡೂ
ಒಡೆದ ಶಿಲೆಯೆದುರಲ್ಲಿ ಮಂಡಿಯೂರಿ
ಪ್ರಾರ್ಥಿಸುವುವೆ?
IV
ಆ ಕಣ್ಣು ಇಲ್ಲಿಲ್ಲ
ಅಳಿವ ನಕ್ಷತ್ರಗಳ ಈ ಕಣಿವೆಯಲ್ಲಿ
ಈ ಪೊಳ್ಳು ನೆಲೆಯಲ್ಲಿ
ಕುಸಿದ ಪ್ರಭುತ್ವಗಳ ಈ ಒಡೆದ ದವಡೆಗಳಲ್ಲಿ
ಇಲ್ಲ ಆ ಕಣ್ಣಿಲ೧೦
ಒಟ್ಟಾಗಿ ಸೇರುವ ಈ ಕೊನೆಯ ನೆಲೆಯಲ್ಲಿ
ನೆರೆ ಬಂದ ಕೊಳಕುಹೊಳೆ೧೧ ದಡದ ಮೇಲೆ
ಬರಿದೆ ತಡಕುತ್ತೇವೆ
ಮಾತಿನವಕಾಶಗಳ ತಪ್ಪಿಸುತ್ತೇವೆ.
ಪೊಳ್ಳು ಜನಗಳಿಗಿರುವ ಭರವಸೆ ಅದೊಂದೇ
ಸಂಜೆಗಾಂತಿಯ ಆ ಮೃತ್ಯುಸಾಮ್ರಾಜ್ಯದ
ಕೋಟಿದಳದ ಗುಲಾಬಿ
ಸಾವಿರದ ಧ್ರುವತಾರೆ೧೨
ಉದಿಸಿ ಬಂದಾಗ ಮಾತ್ರ ದೃಷ್ಟಿ ಮರಳುವುದು
ಇಲ್ಲದಿದ್ದಲ್ಲಿ
ದೃಷ್ಟಿಹೀನತೆಯೇ ಎಂದೆಂದಿಗೂ.
V
ಪಾಪಾಸುಕಳ್ಳಿಯ ಸುತ್ತಾ ನಾವು
ಸುಮ್ಮನೆ ಸುತ್ತುವೆವು – ಎಲ್ಲಾ
ಸುಮ್ಮನೆ ಸುತ್ತುವೆವು
ಪಾಪಾಸುಕಳ್ಳಿಯ ಸುತ್ತೋದಕ್ಕೆ
ಐದಕ್ಕೇಳುವೆವು – ಬೆಳಿಗ್ಗೆ
ಐದಕ್ಕೇಳುವವು.೧೩
ಕಲ್ಪನೆಗು ಮತ್ತು
ಆಗುವಿಕೆಗೂ ನಡುವೆ
ಚಿಂತನೆಗು ಮತ್ತು
ಕ್ರಿಯೆಗೂ ನಡುವೆ
ಛಾಯೆ ಹಾಯುತ್ತದೆ
ಏಕೆಂದರೆ ಪ್ರಭೂ ನಿನ್ನದೀ ರಾಜ್ಯ
ಸಂವೇದನೆಗು ಮತ್ತು
ಸೃಷ್ಟಿಗೂ ನಡುವೆ
ಭಾವನೆಗು ಅದರ ಪ್ರತಿ-
ಸ್ಪಂದನಕ್ಕೂ ನಡುವೆ
ಛಾಯೆ ಹಾಯುತ್ತದೆ
ಬಾಳು ಬಲು ದೀರ್ಘ
ಬಯಕೆಗೂ ಅದರ
ಪೂರೈಕೆಗೂ ನಡುವೆ
ಇರುವ ಶಕ್ತಿಗು ಮತ್ತು
ಇರುವ ರೀತಿಗು ನಡುವೆ
ಸತ್ವಕ್ಕೂ ಮತ್ತು
ಅವತರಣಕ್ಕೂ ನಡುವೆ
ಛಾಯೆ ಹಾಯುತ್ತದೆ
ಬಾಳು ಇದೆ ನಿನಗಂದ
ಏಕೆಂದರೆ ಪ್ರಭೂ ನಿನ್ನದೀ ರಾಜ್ಯ
ನಿನ್ನದೀ
ಬಾಳು ಇದೆ ನಿನಗೆಂದೆ
ಆಗಿದೆ
ನಿನ್ನದೀ ಎಲ್ಲ.
ಲೋಕ ಕೊನೆಯಾಗುವುದು ಈ ರೀತಿಯಲ್ಲೇ೧೪
ಲೋಕ ಕೊನೆಯಾಗುವುದು ಈ ರೀತಿಯಲ್ಲೇ
ಲೋಕ ಕೊನೆಯಾಗುವುದು ಈ ರೀತಿಯಲ್ಲೇ
ಗುಡುಗುತ್ತ ಅಲ್ಲ, ಗೊಣಗುತ್ತ
*****
೧೯೨೫
ವಿಲಿಯಮ್ ಮಾರಿಸ್ (೧೮೩೪-೯೬) ಬರೆದ ‘ದಿ ಹಾಲೋ ಲ್ಯಾಂಡ್’ ಎಂಬ ಕಾದಂಬರಿ ಮತ್ತು ರುಡ್ ಯಾರ್ಡ್ ಕಿಪ್ಲಿಂಗ್ ಬರೆದ ‘ದಿ ಬ್ರೋಕನ್ ಮೆನ್’ ಎಂಬ ಕವನ – ಇವೆರಡನ್ನೂ ಮನಸ್ಸಿನಲ್ಲಿಟ್ಟು ತನ್ನ ಕವನಕ್ಕೆ ‘ದಿ ಹಾಲೋಮನ್’ ಎಂಬ ಶೀರ್ಷಿಕೆ ಕೊಟ್ಟಿದ್ದಾಗಿ ಕವಿಯೇ (೧೯೩೫ ರಲ್ಲಿ) ಹೇಳಿದ್ದುಂಟು. ಮುಂದೊಮ್ಮೆ ಮಾತಿನ ನಡುವೆ, ಕಿಪ್ಲಿಂಗ್ ನ ಪದ್ಯವನ್ನು ನೋಡಿರದಿದ್ದರೆ ತನ್ನ ಕವನಕ್ಕೆ ಈ ಶೀರ್ಷಿಕೆಯನ್ನು ಯೋಚಿಸುತ್ತಲೇ ಇರಲಿಲ್ಲವೆಂದೂ ಎಲಿಯಟ್ ಹೇಳಿದ.
ಈ ಕವನದ ಮೇಲೆ ಪ್ರಭಾವ ಬೀರಿದ ಇತರ ಕೃತಿಗಳೂ ಇವೆಯೆನ್ನಿಸುತ್ತದೆ. ‘ಹಾಲೋ ಮೆನ್’ ಎಂಬ ಪದ ‘ಜೂಲಿಯಸ್ ಸೀಜರ್’ ನಾಟಕದಲ್ಲಿ ಬಹಳ ಪರಿಣಾಮಕಾರಿಯಾದ ಸನ್ನಿವೇಶದಲ್ಲಿ ಬಳಕೆಯಾಗಿದೆ. ಆ ಪದವನ್ನು ಚುರುಕಾಗಿ ಅರ್ಥೈಸುವ ಸಾಲುಗಳು ಅಲ್ಲಿಸಿಗುತ್ತವೆ. ಸೀಜರನ ಕೊಲೆಯಾದ ಮೇಲೆ ಕ್ಯಾಷಿಯಸ್ ತನ್ನ ವಿಷಯದಲ್ಲಿ ಮುಂಚಿನ ಸ್ನೇಹ ಗೌರವಗಳಿಗೆ ಹೊರತಾಗಿ ನಡೆದುಕೊಳ್ಳುತ್ತಿದ್ದಾನೆ ಎಂಬ ಭಾವನೆ ಬಂದಾಗ ಬ್ರೂಟಸ್ ಹೇಳುವ ಮಾತು ಇದು.
But hollow men, like horses at hand,
Make gallant show and promise of their mettle,
But when they should endure the bloody spur,
They fall their crests, and like deceitful Jades,
Sink in the trail
– ಜೂಲಿಯಸ್ ಸೀಜರ್, IV-II
ಕಾರ್ನಾಡನ ‘ಹಾರ್ಟ್ ಆಫ್ ಡಾರ್ಕನೆಸ್’ ಕಥೆಯೂ ಈ ಕವನದ ಮೇಲೆ ಪ್ರಭಾವ ಬೀರಿದೆ. ಎಲಿಯಟ್ ಆ ಕಥೆಯನ್ನು ಮೆಚ್ಚಿ ಮಾತಾಡಿದ್ದಾನೆ. ಅಲ್ಲಿ ಬರುವ ‘ಕುರ್ತ್ಸ್’ ಆಳದಲ್ಲಿ ಪೂರಾ ಟೊಳ್ಳಾದ ವ್ಯಕ್ತಿಯಾಗಿದ್ದು ಅವನನ್ನು ಹಾಲೋ ಶ್ಯಾಮ್ ಎಂದೇ ವರ್ಣಿಸಲಾಗಿದೆ. ಮನುಷ್ಯನ ಪೊಳ್ಳು ವ್ಯಕ್ತಿತ್ವದ ನಿರೂಪಣೆ ಕಥೆಯ ಉದ್ದಕ್ಕೂ ಬಂದಿದೆ. ‘ಟೊಳ್ಳುಜನ’ ಕವನದ ಆಶಯ ಸೂಚನೆಗಾಗಿ ಮೇಲ್ಬಾಗದಲ್ಲಿ ಕೊಟ್ಟ ಪದಪುಂಜದಲ್ಲಿ ‘ಕುರ್ತ್ಸ್’ನ ಹೆಸರೂ ಇದೆ.
೧. ಮಿಸ್ತಾಕುರ್ತ್ಸ್ – ಅವನು ಸತ್ತಿದ್ದಾನೆ : ‘ಹಾರ್ಟ್ ಆಫ್ ಡಾರ್ಕನೆಸ್’ನಲ್ಲಿ ಸೇವಕನೊಬ್ಬ ಕುರ್ತ್ಸ್ ನ ಸಾವನ್ನು ವರದಿಮಾಡುತ್ತಾನೆ. ಕೇಡಿನ ಸಾಕಾರ ಮೂರ್ತಿ ಬಾಳಿನಿಂದ ಮರೆಯಾದುದರಿಂದ ಜೀವನದ ಎಲ್ಲ ಮೌಲ್ಯಗಳೂ ಮರೆಯಾದಂತೆ. ಉದ್ದರಣ ವಾಕ್ಯದ ಆಶಯ ಇದೇ ಎಂದೂ ಹೋದರ್ತ್ ಹೇಳುತ್ತಾನೆ. ಟೊಳ್ಳುಜನ ಒಳ್ಳೆಯದನ್ನಿರಲಿ, ಕೇಡನ್ನೂ ಮಾಡಲಾಗದವರು, ಅವರು ಕೇಡಿಗರಿಂತಲೂ ಕಡೆ’.
೨. ಗಯ್‌ಗೆ ಒಂದು ಪೆನ್ನಿ ಕೊಡಿ : ಇದು ಗಯ್ ಫಾಕ್ಸ್‌ನ ಪ್ರತಿಕೃತಿಯ ದಹನದ ಸಂದರ್ಭದಲ್ಲಿ ಬರುವ ಮಾತು. ಇಂಗ್ಲೆಂಡಿನ ದೊರೆಯಾಗಿದ್ದ ಮೊದಲನೆಯ ಜೇಮ್ಸ್‌ನನ್ನು ಸಂಚು ಹೂಡಿ ಕೊಲ್ಲಲು ಹೊರಟ ಪಿತೂರಿಗಾರರಲ್ಲಿ ಗಯ್ ಫಾಕ್ಸನೂ ಒಬ್ಬ. ಆದರೆ ಸಂಚು ವಿಫಲವಾಗಿ ಗಯ್ ಫಾಕ್ಸನೇ ಮರಣ ದಂಡನೆಗೆ ಒಳಗಾದ. ಪ್ರತಿವರ್ಷದ ನವೆಂಬರ್ ಐದನೆಯ ತಾರೀಖು ರಾಜದ್ರೋಹಿಯಾದ ಅವನ ಪ್ರತಿಕೃತಿಯನ್ನು ಸುಡುವ ಹಬ್ಬ ಇಂಗ್ಲೆಂಡಿನಲ್ಲಿ ಆಚರಣೆಯಲ್ಲಿದೆ. ಈ ಹಬ್ಬವನ್ನು ಆಚರಿಸುವವರು ಮಕ್ಕಳು. ಮನೆಯಲ್ಲಿರುವ ಹಳೆಬಟ್ಟೆಯ ತುಂಡುಗಳು, ಕಾಗದ, ಒಣಹುಲ್ಲು ಚಿಂದಿ ವಸ್ತುಗಳನ್ನು ಒಟ್ಟು ಸೇರಿಸಿ ಮಕ್ಕಳು ಗಯ್ ಫಾಕ್ಸನ ಪ್ರತಿಕೃತಿಯನ್ನು ತಯಾರು ಮಾಡುತ್ತಾರೆ. ಅದನ್ನು ಪ್ರದರ್ಶಿಸಿ, ಜನರಿಂದ ಒಂದೊಂದು ಪೆನ್ನಿ ಸಂಗ್ರಹಿಸಿ, ಆ ಗೊಂಬೆಯನ್ನು ಬೆಂಕಿಗೆ ಹಾಕಿ ಸುಡುತ್ತಾರೆ, ಪಟಾಕಿ ಸಿಡಿಮದ್ದು ಹಾರಿಸಿ ಖುಷಿಯಿಂದ ಕುಣಿಯುತ್ತಾರೆ. ಹಣ ಕೇಳುವಾಗ ಮಕ್ಕಳು ‘ಎ ಪೆನ್ನಿ ಪಾರ್ ದಿ ಗಯ್’ ಎಂದು ಕೂಗುವುದು ವಾಡಿಕೆ. ಎಲಿಯಟ್ ಈ ವಾಕ್ಯಕ್ಕೆ ‘ಓಲ್ಡ್’ ಎಂಬ ಪದವನ್ನು ಸೇರಿಸಿ A penny for the old guy ಎಂದು ಮಾಡಿಕೊಂಡಿದ್ದಾನೆ. ಮಕ್ಕಳ ಕೂಗನ್ನು ತಪ್ಪಾಗಿ ಕೇಳಿಸಿಕೊಂಡಿರುವುದರಿಂದ ಹೀಗಾಗಿದೆಯೋ ಅಥವಾ
ಎಲಿಯಟ್ ಉದ್ದೇಶಪೂರ್ವಕವಾಗಿ ಪದವನ್ನು ಸೇರಿಸಿದ್ದಾನೋ ತಿಳಿಯುವುದಿಲ್ಲ.
೩. ಕೆಳಮಾಳಿಗೆಯ ಒಳಗೆ : ಪಾರ್ಲಿಮೆಂಟಿನ ನೆಲಮಾಳಿಗೆಯ ಒಳಗೆ ಸ್ಫೋಟಕ್ಕೆಂದು ಶೇಖರಿಸಿದ್ದ ಮದ್ದುಗುಂಡುಗಳಿಗೆ ಕಾವಲು ನಿಂತಿದ್ದ ಗಯ್ ಫಾಕ್ಸ್‌ನನ್ನು ಬಂಧಿಸಿ ಮರಣದಂಡನೆಗೆ ಗುರಿಪಡಿಸಲಾಯಿತು.
೪. ಮೃತ್ಯುವಿನ ಮತ್ತೊಂದು ರಾಜ್ಯಕ್ಕೆ…. ಜನರು : ಟೊಳ್ಳು ಜನರು ತಮ್ಮ ನೆಲೆಯಾದ ‘ಸಾವಿನ ಕನಸಿನ ರಾಜ್ಯ’ದಲ್ಲಿದ್ದಾರೆ. ಇದಕ್ಕಿಂತ ಉತ್ತಮ ನೆಲೆಯಾದ ‘ಮೃತ್ಯುವಿನ ಮತ್ತೊಂದು ರಾಜ್ಯ’ಕ್ಕೆ ಹೋದ ದಿಟ್ಟಿಗಣ್ಣಿನ ಜನರನ್ನು ಅವರು ನೆನೆಯುತ್ತಿದ್ದಾರೆ.
೫. ನೆನೆದಾರೆ ನಮ್ಮನ್ನು? : ಗಮ್ ಫಾಕ್ಸ್‌ನನ್ನು ಸುಡುವ ಉತ್ಸವಕ್ಕಾಗಿ ಮಕ್ಕಳು ಹಣ ಕೇಳುವಾಗ ಹೇಳುವ ಹಾಡು :
Please to remember
The fifth of November
Gun powder treason and plot
೬. ಕನಸಿನಲ್ಲಿಯೂ ಎದುರಿಸಲಾಗದ ಕಣ್ಣುಗಳು : ಡಾಂಟೆಯನ್ನು ಮತ್ತೆ ಸದ್ಗುಣಗಳ ಹಾದಿಗೆ ಹಚ್ಚಲು ತಾನು ಹೇಗೆ ಅವನ ಕನಸಿನಲ್ಲಿ ಬಂದು ಪ್ರೇರಣೆ ನೀಡಿದೆ ಎನ್ನುವುದನ್ನು ಬಿಯಾಟ್ರಿಸ್ ಡಾಂಟೆಗೆ ಹೇಳುವ ಸನ್ನಿವೇಶ ಇದರ ಹಿನ್ನೆಲೆಗಿದೆ. ‘ಎದುರಿಸಲಾಗದ ಕಣ್ಣುಗಳ’ ಪ್ರತಿಮೆಯು ಡಾಂಟೆ, ಕಾನ್ರಾಡ್ ಇಬ್ಬರಲ್ಲಿಯೂ ಬರುತ್ತದೆ. ಡಾಂಟೆ ಬಿಯಾಟ್ರಿಸ್‌ಳನ್ನು ಮೊದಲ ಬಾರಿಗೆ ಸ್ವರ್ಗದಲ್ಲಿ ನೋಡಿದಾಗ ಅವಳ ನೋಟವನ್ನು ಎದುರಿಸಲಾಗದೆ ಹೋಗುತ್ತಾನೆ. ಹಾಗೆಯೇ ‘ಹಾರ್ಟ್ ಆಫ್ ಡಾರ್ಕ್‌ನೆಸ್’ನಲ್ಲಿ ಕುರ್ತ್ಸ್ ನ ಪ್ರೇಮಿಯ ನೋಟದ ತೀವ್ರತೆಯನ್ನು ಎದುರಿಸಲು ಮಾರ್ಲೋ ಅಸಮರ್ಥನಾಗುತ್ತಾನೆ. ಅವನ ನೈತಿಕತೆಯ ಸಂಧ್ಯೆ ಅದು. ಕುರ್ತ್ಸ್ ಬಗ್ಗೆ ತನಗೆ ಗೊತ್ತಿದ್ದ ಕ್ರೂರಸತ್ಯವನ್ನು ಅವಳಿಗೆ ಹೇಳಲು ಮಾರ್ಲೋಗ ಸಾಧ್ಯವಾಗುವುದಿಲ್ಲ. ಕುರ್ತ್ಸ್ ಅವಳನ್ನು ನೆನೆಯುತ್ತಲೇ ಸತ್ತನೆಂದು ಸುಳ್ಳು ಹೇಳಿಬಿಡುತ್ತಾನೆ.
೭. ಸಾವಿನ ಕನಸಿನ ರಾಜ್ಯದಲ್ಲಿ ಕಾಣಲು ಸಿಗವೀ ಕಣ್ಣುಗಳು : ಈ ವಿಭಾಗದ ಮೊದಲ ಸಾಲಿನಲ್ಲಿ ಬರುವ ಕಣ್ಣುಗಳು ಎದುರಿಸಲಾಗದ ದಿವ್ಯನೇತ್ರಗಳು. ಅವು ಸಾವಿನ ಕನಸಿನ ರಾಜ್ಯದಲ್ಲಿ ಕಾಣಲು ಸಿಗದಂಥವು ಎಂದು ಇಲ್ಲಿ ಅರ್ಥ.
೮. ಕೊರೆದ ಸ್ತಂಭಗಳ…. ಗಂಭೀರವಾಗಿವೆ: ಇದು ಮೃತ್ಯುವಿನ ಮತ್ತೊಂದು ರಾಜ್ಯದಲ್ಲಿ ದೂರದಿಂದ ಕಾಣಸಿಗುವ ಅಸ್ಪಷ್ಟ ದರ್ಶನ, ಇಲ್ಲಿಯ ವಿವರಗಳನ್ನು ಕವಿ ಡಿವೈನ್ ಕಾಮೆಡಿಯ ‘ಪರ್ಗೇಟರಿ’ ವಿಭಾಗದಿಂದ ತೆಗೆದುಕೊಂಡಂತಿದೆ. ಭೂಸ್ವರ್ಗ, ಮರಗಳಲ್ಲಿ ತೂಗಿಕೊಂಡು ಹಾಡುತ್ತಿರುವ ಹಕ್ಕಿ, ಬೀಸುತ್ತಿರುವ ತಂಗಾಳಿಗಳು, ಯಾವುದೋ ಗಾಯನದ ದನಿ, ರೆಂಬೆಗಳ ಕೆಳಗೆ ಮಿಂಚುವ ಬೆಳಕು – ಇವು ಅಲ್ಲಿ ಬರುತ್ತವೆ. ಇಲ್ಲಿಯ ಕರಗುತ್ತಿರುವ ತಾರೆ ಅಲ್ಲಿ ಬರುವ ನಕ್ಷತ್ರವೇ ಆಗಿದ್ದು ದೈವ ಅಥವಾ ಮೇರಿಯ ಸಂಕೇತಗಳಾಗಿವೆ.
೯. ಸಂಧ್ಯಾಕಾಂತಿಯ ರಾಜ್ಯದಲ್ಲಿ ಅಂತಿಮ ಭೇಟಿ ಇದಲ್ಲ: ಡಾಂಟೆ `ಪರ್ಗೆಟರಿ’ಯಲ್ಲಿ ಬಿಯಾಟ್ರಿಸ್‌ಳನ್ನು ಕಾಣುವ ಸಂದರ್ಭ ಇಲ್ಲಿ ನೆನಪಾಗುತ್ತದೆ. ಆ ಸಂದರ್ಭ ಡಾಂಟೆಗೆ ಆನಂದದ ಜೊತೆಗೆ ಭಯವನ್ನೂ ತರುವಂಥದು. ಬಿಯಾಟ್ರಿಸಳ ದಿವ್ಯನೇತ್ರಗಳನ್ನು ನೋಡಿದಾಗ ಡಾಂಟೆಗೆ ತನ್ನಲ್ಲಿನ ಪಾಪಬುದ್ದಿ ಮತ್ತು ಮಿತಿಗಳ ತೀವ್ರ ಅನುಭವವಾಗುತ್ತದೆ.
೧೦. ಆ ಕಣ್ಣು ಇಲ್ಲಿಲ್ಲ.. ಇಲ್ಲ ಆ ಕಣ್ಣಿಲ್ಲ: ‘ಕುಸಿವ ನಕ್ಷತ್ರಗಳ’ ‘ಪೊಳ್ಳುಕಣಿವೆ’ಯೊಂದು ‘ಹಾರ್ಟ್ ಆಫ್ ಡಾರ್ಕ್‌ನೆಸ್’ ಕಥೆಯಲ್ಲಿಯೂ ಬರುತ್ತದೆ. ಅಲ್ಲಿ ಅಗೆದು ಶೋಧಿಸಿದ ಕಣಿವೆಯನ್ನು ನೋಡಿದಾಗ “ಮಂಕು ಕವಿದ (ನರಕದ) ವೃತ್ತವೊಂದಕ್ಕೆ ಬಂದಂತೆ ನನಗನ್ನಿಸಿತು” ಎಂದು ಮಾರ್ಲೋ ಹೇಳುತ್ತಾನೆ.
೧೧. ನೆರೆಬಂದ ಕೊಳಕು ಹೊಳೆ : ಇದು ಡಿವೈನ್ ಕಾಮೆಡಿಯ ‘ಇನ್‌ಫರ್ನೊ’ದಲ್ಲಿ ಬರುವ ಆಖೆರಾನ್ ನದಿಯನ್ನು ನೆನಪಿಸುತ್ತದೆ. ‘ಹಾರ್ಟ್ ಆಫ್ ಡಾರ್ಕ್‌ನೆಸ್’ ಕೃತಿಯಲ್ಲಿಯೂ ಮಾರ್ಲೋ ಕಾಂಗೋ ಪ್ರದೇಶಕ್ಕೆ ಬಂದಾಗ `ನರಕದ ತೊರೆ’ಯನ್ನು ‘ಕತ್ತಲ ಹೊಳೆ’ಯನ್ನು ಕಾಣುತ್ತಾನೆ.
೧೨. ಕೋಟಿದಳದ ಗುಲಾಬಿ, ಸಾವಿರದ ಧ್ರುವತಾರೆ: ಡಾಂಟೆ ಸ್ವರ್ಗ (ಪ್ಯಾರಡೈಸ್)ದಲ್ಲಿ ದಿವ್ಯ ಗುಲಾಬಿ ಪುಷ್ಪವೊಂದನ್ನು ಕಾಣುತ್ತಾನೆ. ಅದು ಮೇಲಿನ ಸಾಲಿಗೆ ಹಿನ್ನೆಲೆಯಾಗಿರುವಂತಿದೆ. ಗುಲಾಬಿ ಅಲ್ಲಿ ಸ್ವರ್ಗದ ಅತ್ಯುನ್ನತ ನೆಲೆಯ ದರ್ಶನವನ್ನು ಸಂಕೇತಿಸುತ್ತದೆ. ಅಲ್ಲಿಯ ಏಕಮೇವ ತಾರೆ ದೈವದ ಸಂಕೇತವಾದರೆ ಗುಲಾಬಿ ಹೂವು ಮೇರಿಯ ಸಂಕೇತವಾಗಿದೆ, ಸಂತರು ಅದರ ದಳಗಳಾಗಿದ್ದಾರೆ. ಡಿವೈನ್ ಕಾಮೆಡಿಯಲ್ಲಿ ಬರುವ ಎಲ್ಲ ವಿವರಗಳೂ ಇಲ್ಲಿ ಇಲ್ಲ ಆದರೆ ಎರಡು ಸನ್ನಿವೇಶಗಳಲ್ಲೂ ಕೆಲಮಟ್ಟಿನ ಹೋಲಿಕೆ ಇದೆ.
೧೩. ಪಾಪಾಸುಕಳ್ಳಿಯ ಸುತ್ತಾ… ಐದಕ್ಕೇಳುವೆವು: ಮಕ್ಕಳ ಆಟಕ್ಕೆ ಬಳಕೆಯಾದ ಹಾಡು. (ಮೊದಲಲ್ಲಿ ಇದು ಫಲವಂತಿಕೆಗೆ ಸಂಬಂಧಿಸಿದ ವಿಧಿಯೊಂದರಲ್ಲಿ ಬಳಸುವ ಹಾಡಾಗಿತ್ತು. ಮುಂದೆ ಮಕ್ಕಳಾಟದ ಹಾಡಾಗಿ ಪರಿಣಮಿಸಿತು.)
Here we go round the mulberry bush
The mulberry bush, the mulberry bush
Here we go round the mulberry bush
on a cold and frosty morning
ಎಲಿಯಟ್ mulberry bush ಎಂಬ ಶಬ್ದಗಳ ಬದಲಾಗಿ prickly pear ಎಂಬ ಶಬ್ದಗಳನ್ನು ಬಳಸಿ ಇಡೀ ಪದ್ಯದ ಅರ್ಥವನ್ನು ಕವನದ ಸಂದರ್ಭಕ್ಕೆ ನಾಟಕೀಯ ವ್ಯಂಗ್ಯದಲ್ಲಿ ಹೂಡುತ್ತಾನೆ. ‘ಪ್ರಿಕ್ಲಿಪೇರ್’ ಎನ್ನುವುದು ಒಂದು ಬಗೆಯ ಕ್ಯಾಕ್ಟಸ್ ಸಸ್ಯ. ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ಬೆಳಿಗ್ಗೆಯ ಐದುಗಂಟೆ ಏಸುಕ್ರಿಸ್ತ ಪುನರುತ್ಥಾನಗೊಂಡ ಸಮಯ.
೧೪. ಲೋಕ ಕೊನೆಯಾಗುವುದು ಈ ರೀತಿಯಲ್ಲೇ : ಮೇಲೆ ಪ್ರಸ್ತಾಪಿಸಿರುವ ಮಕ್ಕಳ ಹಾಡಿನಲ್ಲೇ ಬರುವ (This is the way we clap our hands ಎಂಬ) ಇನ್ನೊಂದು ಸಾಲನ್ನು ಕವಿ ಅಣಕು ಧಾಟಿಯಲ್ಲಿ (This is the way the world ends ಎಂಬ ಸಾಲಾಗಿ) ಬದಲಿಸಿ ಬಳಸಿದ್ದಾನೆ.