ಆವೇಶ

ಆವೇಶ

ಗಡಿಯಾರ ಬಲಗೈಯಿಂದ ಎಡಗೈಗೆ ಬಂತು. ಅದು ನನಗರಿವಿಲ್ಲದಂತೆ ಆದ ಕೆಲಸ, ಅತಿಯಾದ ನನ್ನ ಭಾವುಕತೆಯನ್ನು ಹದ್ದುಬಸ್ತಿನಲ್ಲಿಡುವ, ನನ್ನ ಮೇಲೆ ನಾನು ನಿಗ್ರಹ ಪಡೆಯಲು ಮಾಡುತ್ತಿರುವ ಯತ್ನಗಳಲ್ಲಿ ಅದೂ ಒಂದು. ಬಹು ದಿನಗಳಿಂದ ಬಲಗೈಗೆ ಗಡಿಯಾರ ಕಟ್ಟುವುದನ್ನು ಆರಂಭಿಸಿದ್ದೆ. ಅದನ್ನು ನೋಡಿದಾಗ, ಮುಟ್ಟಿದಾಗ ಎಡಗೈಗೆ ಇರಬೇಕಾದ ಅದು ಅಲ್ಲಿ ಇರುವವರ ಕಾರಣ ಅರಿವಾಗಿ ಕಡಿಮೆ, ಮಲ್ಲನೆ, ಬೇಕಾದಷ್ಟೇ ಮಾತಾಡುವ ಎಚ್ಚರ ನೀಡುತ್ತಿತ್ತು.

ಬಸ್ಸು ಕೊಪ್ಪಳದಲ್ಲಿ ಬಂದು ನಿಂತಿತು. ಆಗ ರಾತ್ರಿಯ ಹನ್ನೊಂದುವರೆ, ಅಲ್ಲಿ ಜನರ ಗದ್ದಲ ಬಹಳ, ಇಳಿಯುವರು ಕಡಿಮೆ ಹತ್ತುವವರು ಹೆಚ್ಚಾಗಿದ್ದರು. ಡ್ರೈವರ್ ಕಂಡಕ್ಟರ್‌ರೊಡನ ಜನರ ವಾದವಿವಾದ ಆರಂಭವಾದ ಹಾಗಿತ್ತು. ಅದು ಹೆಚ್ಚಾಗುತ್ತಲೇ ಹೋಗುತ್ತಿತ್ತು. ಮೂರು ದಿನದಿಂದ ನಿದ್ದೆಗೆಟ್ಟ ನನಗೆ ಅದರ ಕಡೆ ಗಮನ ಕೊಡುವ ಮನಸ್ಸಿರಲಿಲ್ಲ. ಯಾವಾಗ ಜಗಳ ನಿಂತು ಬಸ್ಸು ಮುಂದೆ ಸರಿದಿದ್ದು ಕೂಡ ಜ್ಞಾಪಕವಿಲ್ಲ.

ಹುಬ್ಬಳ್ಳಿಯಿಂದ ಹೈದ್ರಾಬಾದಿಗೆ ಬರುವ ಬಸ್ಸದು. ಗಂಗಾವತಿ ಹತ್ತಿರ ವಾಗುತ್ತಿರುವಾಗ ಎದುರಿನ ಸೀಟಿಗೆ ಹಣೆ ತಗುಲಿ ಎಚ್ಚರವಾಯಿತು. ನಿಲ್ಲಲು ಸ್ಥಳವಿರದಂತೆ ತುಂಬಿದ್ದರು ಪ್ರಯಾಣಿಕರು. ಕೊಪ್ಪಳದಲ್ಲಿ ಹತ್ತಿದವನೊಬ್ಬ, ಹೈದ್ರಾಬಾದಿನಲ್ಲಿ ನಿನ್ನ ನೋಡಿಕೊಳ್ಳುತ್ತೇನೆ” ಎಂದು ಡ್ರೈವರನಿಗೆ ಹೇಳಿದ್ದನಂತೆ. ಕುಡಿದ ಅವನು ಹಿಂದೆಯೇ ನಿಂತಿರ ಬಹುದು. ಇನ್ನೂ ಆ ವಿಷಯವನ್ನೇ ಮಾತಾಡುತ್ತಿದ್ದರು ಜನ. ಎದುರಿಗೆ ನಿಂತವರನ್ನು ನೋಡಿದ. ಹೈದ್ರಾಬಾದಿಗೆ ಹೋಗುತ್ತಿರುವನಾಗಿ ಇನ್ನೂ ಏನೇನೋ ಬಡಾಯಿ ಕೊಚ್ಚಿ ಕೊಳ್ಳುತ್ತಿದ್ದ ಒಬ್ಬ ಯುವಕ. ೨೬-೨೮ರ ವಯಸ್ಸಿನವ ನಿರ್ವಿರಾಮವಾಗಿ ಮಾತಾಡುತ್ತಿದ್ದ ಅವನ ಕಡೆ ಎರಡು ಮೂರು ಸಲ ನೋಡಿದ. ಯಾಕೋ ಆ ವ್ಯಕ್ತಿಯ ಮಾತು, ಮಾತಾಡುವ ರೀತಿ ನನಗೆ ಹಿಡಿಸಲಿಲ್ಲ.

ಗಂಗಾವತಿಯಲ್ಲಿ ನನ್ನ ಬದಿಗೆ ಕುಳಿತ ಇಬ್ಬರು ಇಳಿದರು. ಅದೇ ಅವರ ಗಮ್ಯ. ನಾನೂ ಅಲ್ಲಿ ಇಳಿದು ಹೊಟ್ಟೆ ಬರಿದು ಮಾಡಿ ಚಹಾ ಕುಡಿಯಲು ಹೋದೆ. ಅಲ್ಲೇ ಇದ್ದ ಕಂಡಕ್ಟರ್ ಮತ್ತು ಡ್ರೈವರ್ ಕೊಪ್ಪಳದಲ್ಲಿ ಬಸ್ಸೇರಿದ ಕುಡುಕನ ಉದ್ಘಟತನದ ಬಗ್ಗೆಯೇ ಮಾತಾಡುತ್ತಿದ್ದರು. ಅವರ ಮಾತುಗಳಿಂದ ಆ ವ್ಯಕ್ತಿ ಡ್ರೈವರನ ಮೇಲೆ ಬಹಳ ರೋಪು ಹಾಕಿದ್ದಾನೆಂಬುದು ಮಾತ್ರ ಗೊತ್ತಾಯಿತು.

ಗಂಗಾವತಿಯಿಂದ ಬಸ್ಸು ಹೊರಟಾಗ ನನ್ನ ಪಕ್ಕದಲ್ಲಿ ಕುಳಿತಿದ್ದ ಆ ವಾಚಾಳಿ ಯುವಕ. ಕಿಟಕಿಯ ಬಳಿ ಇತ್ತು ನನ್ನ ಸೀಟು, ಪಕ್ಕದಲ್ಲಿ ಕುಳಿತ ಯುವಕ ಕೊನೆಯಲ್ಲಿ ಕುಳಿತ ನಡುವಯಸ್ಕನೊಡನೆ ಯಾವುದೋ ವೈಯಕ್ತಿಕ ವಿಷಯದ ಮಾತುಕತೆ ನಡೆಸಿದ್ದ. ಅವರ ಮಾತುಗಳಿಂದ ಇಬ್ಬರೂ ಕೊಪ್ಪಳದವರೇ ಎಂದು ಗೊತ್ತಾಯಿತು. ಬಹುಶಃ ಗಂಗಾವತಿಯಲ್ಲಿಯೇ ನನ್ನ ಗಡಿಯಾರ ಬಲಗೈಯಿಂದ ಎಡಗೈಗೆ ಬಂದಿರಬಹುದು. ಕಾಲು ಸ್ವಲ್ಪ ಅಗಲ ಮಾಡಿ ಕುಳಿತಿದ್ದ ಯುವಕ. ನಿದ್ದೆ ಹೋಗುವ ಯತ್ನದಲ್ಲಿದ್ದ ನಾನು ಅವನಿಗೆ ಸರಿಯಾಗಿ ಕೂಡಲು ಹೇಳಿದೆ “ಬೇಕಾದ್ರೆ ಟೇಪ್ ಇಟ್ಟು ಮಾಪನ ಮಾಡಿ, ಯಾರು ಎಷ್ಟು ಜಾಗದಾಗ ಕೂತಾರ ಗೊತ್ತಾಗ್ತದ” ಎಂದನವ. ಸಿಟ್ಟಿನಿಂದ ಅವನ ಕಡೆ ನೋಡಿದೆ. ಆದರೆಡೆ ಗಮನ ಕೊಡದ ತನ್ನ ಪಕ್ಕದಲ್ಲಿದ್ದವನೊಡನೆ ಮಾತಿನಲ್ಲಿ ತೊಡಗಿದನಾತ. ಹೊಲಸಾದ ಬಟ್ಟೆ, ಕುರುಚಲ ಗಡ್ಡ, ಸಂಸ್ಕಾರ ಕಾಣದ ತಲೆ ಕೂದಲು, ಅವನೊಡನೆ ವಾದ ವ್ಯರ್ಥವೆನಿಸಿ ನಿದ್ದೆಯನ್ನು ಆಹ್ವಾನಿಸುವ ಯತ್ನದಲ್ಲಿ ತೊಡಗಿದೆ.

ಒಮ್ಮಲೆ ಗೋಣು ಹಿಂದೆ ಸರಿದ ಕಾರಣ ಎಚ್ಚರವಾಯಿತು. ಬಸ್ಸಿನೊಳಗೆ ಕತ್ತಲು, ಕತ್ತಲನ್ನೇ ಸೀಳುತ್ತ ಓಡುತ್ತಿತ್ತು ಬಸ್ಸು, ಎಷ್ಟು ಹೊತ್ತು ಮಲಗಿದ್ದೆ, ಎಷ್ಟು ದಾರಿ ಸವೆದಿರಬಹುದು ಎಂದು ನೋಡಲು ಎಡಗೈಯ ಮೇಲೆ ಕೈಸವರಿದೆ. ಗಡಿಯಾರವಿಲ್ಲ. ಬಲಗೈಗೂ ಗಡಿಯಾರವಿಲ್ಲ. ನಾಲ್ಕೈದು ಸಲ ಹಾಗೇ ನೋಡಿದ ಮೇಲೆ ಅದು ಹೋಗಿದೆ ಎಂಬುವುದು ಖಚಿತವಾಯಿತು. ಗಂಗಾವತಿಯಲ್ಲಿ ಬಸ್ಸು ಏರಿದನಂತರ ನಾ ಕೆಳಗೆ ಇಳಿದೇ ಇಲ್ಲ. ಬಸ್ ಇಳಿಯುವಾಗ ಏರುವಾಗ, ಯಾರಾದರೂ ಅದನ್ನು ಕದ್ದಿರಬಹುದೇ ಎಂಬ ಯೋಚನೆ ಬಂತು. ಹಾಗೆ ಆಗಲು ಸಾಧ್ಯವಿಲ್ಲ. ಬಸ್ ಇಳಿಯುವಾಗ ಎಲ್ಲರಿಗಿಂತ ಕಡೆಗಿಳಿದವ ನಾನು, ಏರುವಾಗ ಗದ್ದಲವಿರಲಿಲ್ಲ. ಅಂದರೆ ಆ ಕೆಲಸ ನನ್ನ ಬದಿಗೆ ಕುಳಿತವನದೇ ಇರಬೇಕೆನಿಸಿತು. ಆಗಾಗ ಎದುರಿನಿಂದ ಬರುತ್ತಿದ್ದ ವಾಹನಗಳು ಬಸ್ಸಿನೊಳಗೆ ಬೆಳಕು ಚೆಲ್ಲಿ ಹೋಗುತ್ತಿದ್ದವು. ನನ್ನ ಬದಿಗೆ ಕುಳಿತವ ಕೊನೆಗೆ ಕುಳಿತವನ ಭುಜದ ಮೇಲೆ ತಲೆಯಿಟ್ಟು ನಿದ್ದೆ ಹೋಗಿದ್ದ. ಕೊನೆಗೆ ಕುಳಿತವ ಬೇರೆಯ ವ್ಯಕ್ತಿಯೇ ಆಗಿದ್ದ, ಅಂದರೆ ನಾವು ಸಿಂಧನೂರು ದಾಟಿ ಬಂದಿದ್ದೆವು. ಮೊದಲು ಕುಳಿತ ವ್ಯಕ್ತಿ ಸಿಂಧನೂರಿನಲ್ಲಿ ಇಳಿದಿರಬಹುದು. ಗಡಿಯಾರ ಲಪಟಾಯಿಸಿದ ಇವನು ಅದನ್ನು ಸಂಗಡಿಗನಿಗೆ ಕೊಟ್ಟಿರಬಹುದು ಎಂದುಕೊಂಡೆ.

ಬಸ್ಸು ಮಾಡುತ್ತಿದ್ದ ಶಬ್ದ ಬಿಟ್ಟರೆ ಇನ್ಯಾವ ಶಬ್ದವೂ ಇರಲಿಲ್ಲ. ಪ್ರಯಾಣಿಕರೆಲ್ಲ ನಿದ್ದೆ ಹೋದಹಾಗಿತ್ತು. ಶಾಂತಚಿತ್ತನಾಗಿ ಮುಂದೇನು ಮಾಡಬೇಕೆಂಬುವುದನ್ನು ಯೋಚಿಸತೊಡಗಿದೆ. ಹೋದ ಗಡಿಯಾರ ಇನ್ನು ದೊರೆಯುವದು ಅಸಂಭವ. ಅದನ್ನು ನಾನು ಹೊರಗೆ ಕಳೆದುಕೊಂಡಿಲ್ಲ. ಬಸ್ಸಿನಲ್ಲೇ ಅದು ಹೋಗಿರುವುದು. ಅದಕ್ಕೆ ಕಾರಣ ಪಕ್ಕದಲ್ಲಿ ಕುಳಿತ ಯುವಕನೆ. ಅದನ್ನು ದೃಢಪಡಿಸಿಕೊಳ್ಳಲು ಅವನನ್ನೇ ಗಮನಿಸತೊಡಗಿದೆ. ನಿದ್ದೆಯಲ್ಲಿ ಅವನು ತೃಣಮಾತ್ರವೂ ನನ್ನ ಕಡೆ ವಾಲಲಿಲ್ಲ, ಬಸ್ಸು ತಿರುವುಗಳನ್ನು ತಿರುಗಿದಾಗ ಕೂಡ ನನ್ನ ತಾಕದಂತೆ ಜಾಗ್ರತೆ ವಹಿಸುತ್ತಿದ್ದ. ಇಂತಹ ವರ್ತನೆ ಅವನೇ ಗಡಿಯಾರದ ಕಳ್ಳನೆಂಬುವುದು ನನ್ನಲ್ಲಿ ಇನ್ನೂ ದೃಢಪಡಿಸಿತು. ಹೋದ ಗಡಿಯಾರ ಸಿಗಲಿಕ್ಕಿಲ್ಲ. ಆದರೆ ಕಳ್ಳನಿಗೆ ಶಿಕ್ಷೆಯಾಗಬೇಕು. ಶಾಂತಚಿತ್ತನಾಗಿ ಮುಂದೇನು ಮಾಡಬೇಕೆಂಬ ನಿರ್ಧಾರಕ್ಕೆ ಬಂದ.

ಬಸ್ ನಿಧಾನಗೊಳ್ಳುತ್ತಿದ್ದಾಗ ಬಾಗಿಲ ಬಳಿಯ ಸೀಟಿನಲ್ಲಿ ಕುಳಿತ ಕಂಡಕ್ಟರ್‌ನಿಗೆ ಬಸ್ಸನ್ನು ಪೊಲೀಸ್ ಸ್ಟೇಷನ್ ಬಳಿ ನಿಲ್ಲಿಸುವಂತೆ ಹೇಳಿದೆ. ನನ್ನ ಮಾತು ನಿದ್ದೆಯಲ್ಲಿದ್ದವರನ್ನೆಲ್ಲ ಎಬ್ಬಿಸಿತು. ನನ್ನ ಮಾತಿನ ಭಾವಾವೇಶ ಹಾಗಿತ್ತು. ಲೈಟನ್ನು ಹಾಕಿ ಇಲ್ಲೇ ಇದೆ ಪೊಲೀಸ್ ಸ್ಟೇಷನ್ ಎಂದ ಕಂಡಕ್ಟರ್ ಬಸ್ಸನ್ನು ನಿಲ್ಲಿಸುವಂತೆ ಆದೇಶಿಸಿದ. ನನ್ನ ಕೈಗಡಿಯಾರ ಹೋಗಿದೆ ಎಂದು ತಿಳಿದಾಗ ಪ್ರಯಾಣಿಕರು ಬಸ್ಸುಗಳಲ್ಲಿ ಎಲ್ಲಿ ಎಲ್ಲಿ ಹೇಗೆ ಹೇಗೆ ಕಳ್ಳತನಗಳಾಗಿವೆ ಎಂಬುದರ ಬಗ್ಗೆ ಮಾತಿನಲ್ಲಿ ತೊಡಗಿದರು. ಆ ಯುವಕ ಬರಿದಾದ ಸೀಟಿನಲ್ಲಿ ಉರುಳಿ ಮಲಗಿದ್ದ.

ಬಸ್ಸಿನಿಂದಿಳಿದು ಸಿಗರೇಟು ಅಂಟಿಸುವುದರಲ್ಲಿ ಇಬ್ಬರು ಪೇದೆಗಳೊಡನೆ ಬಂದರು ಡ್ರೈವರ್, ಕಂಡಕ್ಟರ್. ನನ್ನ ಬದಿಗೆ ಕುಳಿತವನೇ ಕದ್ದಿರಬಹುದೆಂದು ಖಂಡಿತ ದನಿಯಲ್ಲಿ ಹೇಳಿದೆ. ಒಬ್ಬ ಪೇದೆ ಅವನನ್ನು ಹೊರಗಡೆ ತಂದ. ಪೊಲೀಸ್‌ನವರನ್ನು ಆಗಲೇ ಹೊರಬಂದ ಪ್ರಯಾಣಿಕರನ್ನು ನೋಡಿ ಭಯದಿಂದ ಬಿಳಿಚಿಕೊಂಡಿತವನ ಮುಖ, ಅಳುತ್ತ ತನಗೆ ಗಡಿಯಾರದ ಬಗ್ಗೆ ಏನೂ ಗೊತ್ತಿಲ್ಲವೆಂದು ತನ್ನ ಪೊಲೀಸ್ ಸ್ಟೇಷನ್‌ಗೆ ಒಯ್ಯಬಾರದೆಂದು ಅವರ ಕಾಲು ಹಿಡಿದು ಯಾಚಿಸತೊಡಗಿದ. ತನ್ನ ಅವರಿಂದ ಬಿಡಿಸಬೇಕೆಂದು ಆರ್ತನಾಗಿ ನನ್ನನ್ನು ಬೇಡತೊಡಗಿದ. ಕಳ್ಳರೆಲ್ಲ ಹೀಗೆ ನಾಟಕವಾಡುತ್ತಾರೆ ಎಂದ ಒಬ್ಬ. ಅದಕ್ಕೆ ನನ್ನ ದನಿಯನ್ನು ಸೇರಿಸಿ ಆ ವಿಷಯದಲ್ಲಿ ನನ್ನ ಪಾಂಡಿತ್ಯವನ್ನು ತೋರಿಸಿಕೊಂಡೆ. ಅಷ್ಟರಲ್ಲಿ ಒಬ್ಬ ನನ್ನ ಗಡಿಯಾರ ಹಿಡಿದು ಬಂದು ಅದು ಕೆಳಗೆ ಬಿದ್ದಿತ್ತೆಂದು ಹೇಳಿದ. ನನ್ನ ಯೋಚನೆ ಗಡಿಯಾರವನ್ನು ಬಿಟ್ಟು ಎಲ್ಲೆಲ್ಲೋ ಓಡತೊಡಗಿತು.

ಇದೇ ಅವಕಾಶವನ್ನು ಉಪಯೋಗಿಸಿಕೊಂಡು ಡ್ರೈವರ್ ಕೊಪ್ಪಳದಲ್ಲಿ ತನ್ನ ಮೇಲೆ ರೋಪು ಹಾಕಿದವನ ವಿವರ ಕೊಟ್ಟ. ಅವನ ನಿಶ ಆಗಲೆ ಇಳಿದುಹೋಗಿತ್ತು. ಅವನನ್ನು ಎಳೆತಂದ ಮತ್ತೊಬ್ಬ ಪೇದೆ. ನನ್ನ ಗಡಿಯಾರವನ್ನು ತನ್ನ ಕೈಗೆ ಹಾಕಿಕೊಂಡ ಪೇದೆ ಅದರ ವಿವರ ಕೇಳಿದ. ಎಲ್ಲಾ ಹೇಳಿದೆ. ಅವರಿಬ್ಬರಿಗೆ ಆಗಲೇ ಲಾಠಿಗಳಿಂದ ಏಟುಗಳು ಬೀಳಲು ಆರಂಭವಾಗಿತ್ತು. ಆ ಯುವಕನ ದಯಾನೀಯ ಯಾಚನೆ, ಭಯದಿಂದ ವಿಕಾರವಾದ ಮುಖಭಾವ ನನ್ನಿಂದ ನೋಡಲಾಗಲಿಲ್ಲ. ಅವನನ್ನು ಬಿಟ್ಟುಬಿಡುವಂತೆ ಹೇಳಿದೆ. ನನ್ನ ಗಡಿಯಾರ ನನಗೆ ಕೊಟ್ಟು ಅವರನ್ನು ಬಿಡಲು ಆಗುವುದಿಲ್ಲವೆಂದು ಪೊಲೀಸ್ ಸ್ಟೇಷನ್‌ಗೆ ಎಳೆದುಕೊಂಡು ಹೋದರು ಪೇದೆಗಳು.

ಅದೇ ವಿಷಯ ಮಾತಾಡುತ್ತ ಎಲ್ಲಾ ಪ್ರಯಾಣಿಕರು ಬಸ್ ಏರಿದರು. ಅದು ಮುಂದೆ ಹೋಗತೊಡಗಿತು. ಯಾವಾಗಲೋ ಅಂಕುರಿಸಿದ್ದ ಅಪರಾಧಿ ಭಾವ ನನ್ನಲ್ಲಿ ಬೆಳೆಯುತ್ತ ಹಿಂಸಿಸತೊಡಗಿತ್ತು. ಮಾತಾಡದೆ ಎಲ್ಲವನ್ನೂ ಕೇಳುತ್ತಿದ್ದೆ. ಹತ್ತು ನಿಮಿಷದ ಪ್ರಯಾಣದ ಬಳಿಕ ಕುಡುಕನ ಸಂಗಡಿಗ ಹೇಳಿದ ಮಾತು ಬಸ್ಸಿನಲ್ಲಿದ್ದರು ಎಲ್ಲರಲ್ಲೂ ಅನುಕಂಪ ಹುಟ್ಟಿಸಿತು. ಆ ಕುಡುಕನ ಬಳಿ ಐದು ಸಾವಿರ ಇರುವದಾಗಿ ಯಾವುದೋ ವ್ಯಾಪಾರನಿಮಿತ್ತ ಅವನು ಹೈದ್ರಾಬಾದಿಗೆ ಹೋಗುತ್ತಿರುವುದಾಗಿ ಹೇಳಿದ. ಪೊಲೀಸ್‌ನವರು ಆ ಹಣವನ್ನು ಲಪಟಾಯಿಸುವುದು ಖಂಡಿತವೆಂದು ಎಲ್ಲರ ಏಕಾಭಿಪ್ರಾಯವಾಗಿತ್ತು. ಕಳ್ಳ ಕಳ್ಳನಲ್ಲವೆಂದರೆ ಯಾರಾದರೂ ನಂಬಬಹುದೇನೋ ಪೊಲೀಸಿನವರು ಕಳ್ಳನಲ್ಲವೆಂದರೆ ನಂಬುವವರು ಬಹಳ ವಿರಳ. ನನಗೂ ಆ ಯುವಕನನ್ನು ಹೇಗಾದರೂ ಪೊಲೀಸಿನವರ ಪಂಜದಿಂದ ಬಿಡಿಸ ಬೇಕೆನಿಸುತ್ತಿತ್ತು. ಪಾಪ ಅವನು ಯಾವ ಕೆಲಸದ ಮೇಲೆ ಹೈದ್ರಾಬಾದಿಗೆ ಹೋಗುತ್ತಿದ್ದಾನೆನೋ. ಕಂಡಕ್ಟರ್‌ನಲ್ಲಿ ಕೂಡ ಅವರುಗಳ ಬಗ್ಗೆ ಕನಿಕರ ಹುಟ್ಟಿ ಬಸ್ಸು ನಿಲ್ಲಿಸಿದ್ದ. ಅವನು ಮತ್ತು ಡ್ರೈವರ್‌ನನ್ನು ಕೂಡ ಅಪರಾಧಿ ಭಾವ ಕಾಡುತ್ತಿದ್ದಿರಬೇಕು. ಯಾವ ಆಗ್ರಹವೂ ಇಲ್ಲದೆ ಬಸ್ಸನ್ನು ಹಿಂತಿರುಗಿಸಿ ಮತ್ತೆ ಪೊಲೀಸ್ ಸ್ಟೇಷನ್ ಕಡೆ ಓಡಿಸತೊಡಗಿದ.

ನಾವೆಲ್ಲರೂ ಪೊಲೀಸ್ ಸ್ಟೇಷನ್ ಸೇರಿದಾಗ ಅವರಿಬ್ಬರಿಗೂ ಲಾಠಿಯ ಏಟುಗಳು ಬೀಳುತ್ತಿದ್ದವು. ಯುವಕನ ಮೇಲೆ ಬೀಳುತ್ತಿದ್ದ ಪ್ರತಿ ಏಟು ನನ್ನಲ್ಲಿ ಅವನಿಗಿಂತ ಹೆಚ್ಚು ನೋವನ್ನು ಉಂಟುಮಾಡುತ್ತಿತ್ತು. ದೊಡ್ಡ ಟೇಬಲ್‌ನ ಮೇಲೆ ನೂರರ ನೋಟುಗಳ ಎರಡು ಕಂತೆಗಳಿದ್ದವು. ನಾನು ನೇರವಾಗಿ ಅಲ್ಲಿ ಕುಳಿತಿದ್ದ ಹೆಡ್‌ಕಾನ್ಸ್‌ಟೇಬಲ್‌ನ ಬಳಿ ಹೋಗಿ ಕುಳಿತು ಅವರನ್ನು ಬಿಟ್ಟು ಬಿಡುವಂತೆ ಹೇಳಿದೆ. ಸಾಹೇಬರು ಅಂದರೆ SI ಬರುವವರೆಗೂ ಅವರನ್ನು ಬಿಡಲು ಸಾಧ್ಯವಿಲ್ಲವೆಂದನವ. ಬೇರೆ ಪ್ರಯಾಣಿಕರಲ್ಲೂ ಹೊಡೆಸಿಕೊಳ್ಳುತ್ತಿದ್ದ ಅವರ ಮೇಲೆ ಕನಿಕರ ಉಕ್ಕಿ ಬಂದಿತ್ತು. ಡ್ರೈವರ್ ಒಬ್ಬ ಪೇದೆಯೊಡನೆ ಏನೋ ಮಾತಾಡಿದ. ಪ್ರಯಾಣಿಕರು ಬಂದಿಗಳ ಪರವಾಗಿ ವಾದಿಸಿದರು. ಅಂತೂ ಅವರಿಗೆ ಅವರವರ ಹಣ ಕೊಟ್ಟ ಹೆಡ್‌ಕಾನ್ಸ್‌ಟೇಬಲ್, ಆ ಯುವಕನ ಬಳಿ ಹದಿನಾರು ನೂರು ರೂಪಾಯಿಗಳಿದ್ದವು. ಅದನ್ನು ಮತ್ತೊಮ್ಮೆ ಎಣಿಸಿಕೊಳ್ಳುವಂತೆ ಹೇಳಿದ.

ಆ ಇಬ್ಬರನ್ನೂ ಕರೆದುಕೊಂಡು ಬಸ್ಸಿನ ಕಡೆ ಹೊರಟಾಗ ಪೊಲೀಸ್‌ನವರಿಗೆ ಏನಾದರೂ ಕೊಡಬೇಕೆಂದು ಹೇಳಿದರು ಕೆಲವರು. ಅದರ ಅವಶ್ಯಕತೆ ಇಲ್ಲವೆಂದು ಜೋರಾಗಿಯೇ ಹೇಳಿದೆ ನಾನು. ಎಲ್ಲರೂ ಬಸ್ಸಿನಲ್ಲಿ ಕುಳಿತಾದ ಮೇಲೆ ಪೊಲೀಸ್‌ನವರು ಹಣ ಕೇಳುತ್ತಿದ್ದಾರೆಂದು ಐವತ್ತು ರೂಪಾಯಿ ಕೊಡಬೇಕೆಂದು ಕೇಳಿದ ಒಬ್ಬ, ನನ್ನ ಬದಿಗೆ ಕುಳಿತ ಯುವಕ ಯಾವ ಮಾತೂ ಇಲ್ಲದೆ ಐವತ್ತರ ಒಂದು ನೋಟನ್ನು ಕೊಟ್ಟ, ಆ ಹಣವನ್ನು ನಾನು ಕೊಡಬೇಕಾಗಿತ್ತೆನಿಸಿತು.

ಬಸ್ ಆಗಲೇ ಒಂದು ಗಂಟೆ ತಡವಾಗಿತ್ತು. ಆದರೂ ಅದರ ಚಿಂತೆ ಯಾರಿಗೂ ಇರಲಿಲ್ಲ. ಲೋಕದಲ್ಲಿ ಹೆಚ್ಚು ಜನ ಒಳ್ಳೆಯವರೇ ಎಂಬುವದನ್ನು ಇನ್ನೊಂದು ಸಲ ನನಗೆ ನಾನೇ ಹೇಳಿಕೊಂಡು ಯುವಕನೊಡನೆ ಮಾತಿಗೆ ತೊಡಗಿದೆ. ಅವನ ಕೈ ಮತ್ತು ಕಾಲುಗಳಿಗೆ ನಾಲ್ಕಾರು ಏಟುಗಳನ್ನು ಹಾಕಿದ್ದರಷ್ಟೆ. ಕುಡುಕನಿಗೆ ಬಹಳ ಹೊಡೆತಗಳು ಬಿದ್ದಿದ್ದವು. ಬುರಾನ್ ಆ ಯುವಕನ ಹೆಸರು. ಐದು ಜನ ಅಕ್ಕತಂಗಿಯರಲ್ಲಿ ಅವನೊಬ್ಬನೇ ಗಂಡುಮಗ ಸೋಫಾಗಳ, ಸ್ಕೂಟರ್, ಸೈಕಲ್ ಮೋಟರ್‌ಗಳ ಸೀಟಿನ ಕೆಲಸ ಮಾಡುತ್ತಾನೆ ಸಾಕಷ್ಟು ಸಂಪಾದನೆಯಿದೆ. ತಂದೆಯಿಲ್ಲ, ಅವನೇ ಇಬ್ಬರು ಅಕ್ಕಂದಿರ, ಇಬ್ಬರು ತಂಗಿಯರ ಮದುವ ಮಾಡಿದ್ದಾನೆ. ಇನ್ನೊಬ್ಬ ತಂಗಿ ಮದುವೆಗಿದ್ದಾಳೆ. ಇಷ್ಟು ಸಂಪಾದನೆ ಇದ್ದರೆ ಹೊಲಸು ಬಟ್ಟೆ ಯಾಕೆ ಎಂದು ಕೇಳಿದಾಗ ಅವನು ಕೊಟ್ಟ ಉತ್ತರ ನನ್ನ ಹೃದಯವನ್ನು ಹಿಡಿದು ಹಿಚುಕಿತು. ಒಳ್ಳೆಯ ಬಟ್ಟೆ ಹಾಕಿಕೊಂಡು ಹೈದ್ರಾಬಾದಿನಂತ ಪಟ್ಟಣದಲ್ಲಿ ಓಡಾಡಿದರೆ ತನ್ನ ಬಳಿ ಹಣವಿದೆ ಎಂದು ಕೊಳ್ಳುವುದು ಸಹಜ. ಅದರಿಂದ ಸಾಮಾನು ತರಲು ಇಟ್ಟುಕೊಂಡ ಹಣ ಯಾರಾದರೂ ಕದಿಯಬಹುದು. ಆ ಭಯಕ್ಕೆ ಹೊಲಸು ಬಟ್ಟೆ, ಮಾತಾಡುತ್ತಿದ್ದಾಗಲೆಲ್ಲ ಅವನು ತನ್ನ ಬೆರಳುಗಳನ್ನು ನೀವಿಕೊಳ್ಳುತ್ತಿದ್ದ. ನೋವು ಬಹಳವಾಗುತ್ತಿರಬಹುದೆನಿಸಿದಾಗ ನನ್ನ ಯಾತನೆ ಹೆಚ್ಚಾಗುತ್ತಿತ್ತು.

ರಾಯ್ಚೂರಿನಲ್ಲಿ ಬಹಳಷ್ಟು ಪ್ರಯಾಣಿಕರು ಇಳಿದರು. ನನ್ನ ಪಕ್ಕದಲ್ಲಿ ಕುಳಿತಿದ್ದ ಬುರಾನ್ ಮುಂದಿನ ಸೀಟಿಗೆ ಹೋದ. ನಾನವನ ಕಡೆಯೆ ನೋಡುತ್ತಿದ್ದೆ, ಅವನು ಒಂದು ಸಲವೂ ಹಿಂತಿರುಗಿ ನೋಡುವ ಗೋಜಿಗೆ ಹೋಗಲಿಲ್ಲ. ನಾನಂದರೆ ಭಯವೆ? ಅಸಹ್ಯವೆ? ನಾನೆ ಅವನ ಸ್ಥಾನದಲ್ಲಿದ್ದಿದ್ದರೆ ಏನು ಮಾಡುತ್ತಿದ್ದೆ, ಸುಳ್ಳು ಸುಳ್ಳೆ ನನ್ನ ಮೇಲೆ ಕಳ್ಳತನದ ಅಪರಾಧ ಹೊರೆಸಿದ ಯಾರನ್ನು ಸುಮ್ಮನೆ ಬಿಡುತ್ತಿರಲಿಲ್ಲ. ನಾನು ಬಹಳ ಭಾವುಕ, ಚಿಕ್ಕ ಪುಟ್ಟ ವಿಷಯಗಳಿಗೂ ಆವೇಶಗೊಳ್ಳುತ್ತಿದ್ದೆ. ಅದು ನನ್ನ ಸ್ವಭಾವವೆ ಆಗಿ ಬಿಟ್ಟಿತ್ತು. ಎಷ್ಟೋ ಸಲ ಗಡಿಯಾರದ ಪಟ್ಟಿ ಸಡಿಲಾಗಿ ಕೆಳಗೆ ಬಿದ್ದಿದ್ದುಂಟು. ಇವತ್ತು ಅದನ್ನು ಹುಡುಕುವ ಗೋಜಿಗೆ ಹೋಗದೆ ಬುರಾನನ ಮೇಲೆ ಅಪರಾಧ ಹೊರೆಸಿದ್ದೆ. ಮನೆಯಲ್ಲಿ ನನ್ನ ವಸ್ತುಗಳನ್ನು ಎಲ್ಲೋ ಮರೆತು ಎಷ್ಟೋ ಸಲ ಮನೆಯವರನ್ನೆಲ್ಲ ಗೋಳು ಹೊಯ್ದು ಕೊಂಡ ಸಂದರ್ಭಗಳು ನೆನುಹಿಗೆ ಬರತೊಡಗಿದವು.

ಯಾರೊಡನೆಯೂ ಮಾತಿಲ್ಲದೆ ಕುಳಿತಿದ್ದ ಬುರಾನ್, ಅವನು ಪೊಲೀಸಿನವರ ಕಾಲು ಹಿಡಿಯುವುದು, ನನ್ನ ಕಾಲು ಹಿಡಿಯುವುದು, ಅಳು ಮುಖ ಮಾಡಿ ದಯನೀಯ ಕಂಠದಲ್ಲಿ ಯಾಚಿಸುವುದು ಅವೆ ದೃಶ್ಯಗಳು ನನ್ನ ಕಣ್ಣ ಮುಂದೆ ಸುಳಿದಾಡತೊಡಗಿದವು. ಒಂದು ಚಿಕ್ಕ ತಪ್ಪಿನಿಂದ, ನನ್ನ ಆವೇಶದ ಕಾರಣ ಹುಟ್ಟಿಸಿಕೊಂಡ ಯಾತನೆ ಉಸಿರುಗಟ್ಟಿಸುವಂತೆ ಮಾಡುತ್ತಿತ್ತು. ಅವನ ಕ್ಷಮೆ ಯಾಚಿಸುವದೊಂದ ಇದರಿಂದ ಮುಕ್ತಿಯ ಮಾರ್ಗ ಎಂಬ ನಿರ್ಣಯಕ್ಕೆ ಬಂದೆ. ಬಸ್ ಹೈದ್ರಾಬಾದ್ ತಲುಪುವವರೆಗೂ ಅವನು ನನ್ನಡೆ ನೋಡಲಿಲ್ಲ.

ಎಲ್ಲರಿಗೂ ಮೊದಲು ಇಳಿಯುವ ಅವಸರ, ನಾನಿಳಿದು ಅವನಿಗಾಗಿ ಕಾಯ ತೊಡಗಿದೆ. ಎಲ್ಲರಿಗಿಂತ ಕೊನೆಗಿಳಿದ ಅವ.

“ಅವಸರದಲ್ಲಿ ನಾ ತಪ್ಪು ಮಾಡಿದೆ ಬುರಾನ್, ನನ್ನ ಕ್ಷಮಿಸು”

ನನ್ನ ಮಾತು ಕೇಳಿ ಅವನ ತುಟಿಗಳಲ್ಲಿ ಒಂದು ತರಹದ ಮುಗುಳ್ನಗೆ ಹಾಯಿತು. ಅದು ಯಾವ ಭಾವ ವ್ಯಕ್ತಪಡಿಸುತ್ತಿತ್ತೆಂದು ಹೇಳುವುದು ಕಷ್ಟ.

“ಜೀವನ್ದಾಗ ಇಂಥವೆಲ್ಲ ನಡಿತಾರ್‍ತವರಿ ಸಾಬ್ರ! ಅದ್ರಾಗ ಕ್ಷಮಿಸೂದೆನದ” ಎಂದ ಅವನು ತನ್ನ ಕೈಚೀಲದೊಡನೆ ಜನರಲ್ಲಿ ಮರೆಯಾದ, ಅವನೆದುರು ನಾನೊಂದು ಹುಳು ಎನಿಸಿತು.

ಸಮಯ ಎಲ್ಲವನ್ನು ಮರೆಸುತ್ತದೆ, ಅದು ಪ್ರಕೃತಿ ನಿಯಮ ಎನ್ನುತ್ತಾರೆ. ಆ ಘಟನೆ ನಡೆದು ವರ್ಷಗಳು ಕಳೆದಿವೆ. ಆದರೂ ಬುರಾನ್‌ನ ಆ ವಿಚಿತ್ರ ಮುಗುಳ್ನಗೆ ನನಗಿನ್ನೂ ಯಾತನೆ ಕೊಡುತ್ತಿದೆ.

ಎಡಗೈಯ ಗಡಿಯಾರ ಬಲಗೈಗೆ ಕಟ್ಟಿದರೂ, ಎಡಕ್ಕೆ ತೆಗೆಯುವ ಬೈತಲು ಬಲಕ್ಕೆ ತೆಗೆದರೂ, ಮೀಸೆ ಇದ್ದ ತುಟಿಗಳನ್ನು ಬೋಳು ಮಾಡಿದರೂ ಭಾವೋದ್ವೇಗಗಳನ್ನು ಹದ್ದು ಬಸ್ತಿನಲ್ಲಿಡುವಲ್ಲಿ ನಾನಿನ್ನೂ ಯಶಸ್ವಿಯಾಗಿಲ್ಲ. ಆದರೂ ಯತ್ನ ಬಿಟ್ಟಿಲ್ಲ. ಬುರಾನನ ಆ ವಿಚಿತ್ರ ಮುಗುಳ್ನಗೆ ಕೂಡ ಆಗಾಗ ನನ್ನ ಸಹಾಯಕ್ಕೆ ಬರುತ್ತದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬನ್ನಿ ಮೋಡಗಳೇ
Next post ಮಗಳು

ಸಣ್ಣ ಕತೆ

 • ಮುಗ್ಧ

  ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

 • ಗಂಗೆ ಅಳೆದ ಗಂಗಮ್ಮ

  ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

 • ಕಳಕೊಂಡವನು

  ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

 • ಪತ್ರ ಪ್ರೇಮ

  ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

 • ಬಾಗಿಲು ತೆರೆದಿತ್ತು

  ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…