ವಿಜಯಶ್ರೀ

ವಿಜಯಶ್ರೀ

ಹಿರಿಯರು-ಹೊನ್ನೂರುಗಳ ನಡುವೆ ಐದಾರು ಮೈಲು ಅ೦ತರ. ಒ೦ದು ಊರಿಂದ ಮತ್ತೊಂದು ಊರಿಗೆ ಹೋಗಬೇಕಾದರೆ ಚೆನ್ನಾಗಿ ನಡೆಯುವವನಿಗೂ ಎರಡು ತಾಸು ಹಿಡಿಯುತ್ತಿತ್ತು. ಯಾಕಂದರೆ ದಾರಿಯು ಎರಡು ಮೂರು ಮೊರಡಿಗಳನ್ನು ಸುತ್ತುವರಿದು ಏರಿ ಇಳಿದು ಹೋಗು ವಂತಹದು, ಕಲ್ಲು ಮುಳ್ಳುಗಳಿಂದ ಕೂಡಿದಂತಹುದು. ಇಂಥ ದಾರಿಯಿಂದ ಚಿಕ್ಕಣ್ಣ ಅವಸರದಿಂದ ಹಿರಿಯೂರಿಗೆ ನಡೆದಿದ್ದಾನೆ. ಅವನ ದೃಷ್ಟಿಯು ಮೇಲಿಂದ ಮೇಲೆ ಕೈಗಡಿಯಾರದತ್ತ ಹರಿಯುವುದು. ಈಗಾಗಲೆ ಎಂಟೂ ಕಾಲು ಗಂಟೆ ಯಾಗಿದ್ದಿತು. ಒಂಬತ್ತು ಗಂಟೆಗೆ ಅವನು ಶಾಲೆಯಲ್ಲಿ ಇರಲಿಕ್ಕೆ ಬೇಕು. ಶಾಲೆಯ ಸರಿಯಾದ ಸಮಯಕ್ಕೆ ಹೋಗಬೇಕಾದರೆ ಆದಷ್ಟು ವತ್ತರದಿಂದ ಸಾಗಬೇಕಾಗಿದ್ದಿತು. ಅದರಲ್ಲೂ ಈ ಹೊತ್ತು ಊರಿಂದ ಹೊರಡಲಿಕ್ಕೆ ಸ್ವಲ್ಪ ತಡವಾಗಿದ್ದಿತವನಿಗೆ. ಆದುದರಿಂದ ಚಿಕ್ಕಣ್ಣ ಅತ್ತಿತ್ತ ನೋಡದೆ ಮುನ್ನಡೆಯುತ್ತಿದ್ದ. ಮುಖ್ಯಾಧ್ಯಾಪಕರು ಈ ವಿಲಂಬವಾದುದಕ್ಕೆ ಏನೆನ್ನುವರೋ ಎಂಬ ಯೋಚನೆಯಲ್ಲಿ ಆದಷ್ಟು ಹಾದಿಯನ್ನು ಹಿಂದೆ ಸರಿಸುವುದರಲ್ಲಿ ಆತುರನಾಗಿದ್ದನಲ್ಲದೆ, ಮತ್ತಾವ ಕಡೆಗೂ ಲಕ್ಷವಿರಲಿಲ್ಲ.

“ನಮಸ್ಕಾರರೀ ರಾಯರ” ಎಂಬ ನಗೆಗೂಡಿದ ಮಾತೊಂದು ಒಮ್ಮೆಲೆ ಚಿಕ್ಕಣ್ಣನ ಕಿವಿಗೆ ಬಿತ್ತು. ಚಿಕ್ಕಣ್ಣ ಮುಖವೆತ್ತಿ ನೋಡಿದ ಸಮೀಪದ ಮೊರಡಿಯಲ್ಲಿಯ ಕಾಲುದಾರಿಯೊಂದರಿಂದ ಶಾಂತೇಶ ಬರುತ್ತಿದ್ದಾನೆ. ಅವನ ಜೊತೆಯಲ್ಲಿ ಅಪರಿಚಿತನೊಬ್ಬನಿದ್ದ. ಕೆಲಹೊತ್ತು ಮಾತನಾಡದೆ ಇಬ್ಬರೂ ಮುಂದೆ ಬಂದರು. ಅದೇಕೋ ಈ ಹೊತ್ತು ಶಾಂತೇಶನ ಮುಖ ಬಾಡಿದಂತಿತ್ತು. ನಿದ್ದೆಗೆಟ್ಟವರಂತೆ ಕಣ್ಣುಗಳು ಕೆಂಪಾಗಿದ್ದುವು. ಜೊತೆಯವನ ಮುಖದಲ್ಲಿ ಅಂಜಿಕೆಯು ಒಡಮೂಡುತ್ತಲಿತ್ತು. ಸೂಕ್ಷ್ಮ ದೃಷ್ಟಿ ಯವನಾದ ಚಿಕ್ಕಣ್ಣನಿಗೆ ಇದು ಹೊಳೆಯದೆ ಇರಲಿಲ್ಲ.

“ಏನು ಶಾಂತೇಶ, ಇಷ್ಟು ನಸುಕಿನಲ್ಲಿ ಯಾವ ಕಡೆಯಿಂದ ಬರುವುದಾಯಿತು? ಸಂಗಡ ಹೊಸಬರಾರೋ ಇದ೦ತೆ ಕಾಣುತ್ತದೆ?” ಚಿಕ್ಕಣ್ಣ ನಗೆಮೊಗದಿಂದ ಕೇಳಿದ.

“ಮೊನ್ನೆ ಸಂಜಿಗೇನೇ ಬಂದಿದ್ದೇವೆ. ನಿಮ್ಮ ದಾರೀ ಕಾಯ್ದು ಕಾಯ್ದು ಸಾಕಾಗಿ ಹೋಯ್ತು. ನಿಮ್ಮನ್ನು ಕಾಣುವ ಆತುರ ಹೆಚ್ಚಾಗಿ ಈಗ ಬರಬಹುದೇನೋ ಎಂದು ಇದೇ ದಾರಿಗಿರುವ ಬಾವಿಗೆ ಸ್ನಾನಕ್ಕೆಂದು ಬಂದಿದ್ದೆವು.”……ಎಂದು ಎಳೆದ ಸ್ವರದಲ್ಲಿ ಶಾಂತೇಶ ನುಡಿದ.

“ದೊಡ್ಡವರು! ಇಂಥ ಚಳಿಯಲ್ಲಿ ತಣ್ಣೀರಿನ ಸ್ನಾನ ಮಾಡಲಿಕ್ಕೇನು? ಮನೆಯಲ್ಲಿ ಮಾಡಬೇಕಿತ್ತು? ಅಜ್ಜಿಗೆ ಹೇಳಿದ್ದರೆ ನೀರು ಕಾಯಿಸಿ ಕೊಡುತ್ತಿರಲಿಲ್ಲವೆ?”….

“ಅವರು ನೀರು ಕಾಯಿಸಿದ್ದರು, ನಾವು ಏಳುವಷ್ಟರಲ್ಲಿ; ಆದರೆ ನಿಮ್ಮನ್ನು ಕಾಣುವ ಆತುರ ಒ೦ದಿತ್ತಲ್ಲ;… ಅದಕ್ಕಾಗಿ ಬಂದೆವಾಯಿತು…..” ಶಾಂತೇಶ ನಡುವೆಯೇ ಹೇಳಿದ.

“ಎರಡು ಮೂರು ತಿಂಗಳಲ್ಲಿ ಒಮ್ಮೆಯಾದರೂ ನೋಡಬಯಸದವರಿಗೆ ಈಗ ಇಷ್ಟು ಆತುರ ಹೆಚ್ಚಾಯಿತೆ?”

“ನಮ್ಮ ಕೆಲಸ ಸುಸೂತ್ರ ಸಾಗಿದಾಗ ನಿಮ್ಮ ಕಡೆಗೆ ಯಾಕೆ ಬರಬೇಕು ನಾವು?”

“ಅದೇಕೆ ಬರಬಾರದು?” ಸ್ವಲ್ಪ ತಡೆದು… “ಈಗ ಚರಕಾ ಸಂಘವು ಚೆನ್ನಾಗಿ ನಡೆದಿಲ್ಲವೇ? ಮೊನ್ನೆ ಮಹಾತ್ಮರನ್ನು ಹಿಡಿದ ದಿವಸ ತರುಣರು ಒಳ್ಳೆ ಹುರುಪಿನಿಂದ ಕೆಲಸ ಮಾಡಿದರಂತಲ್ಲ!” ಎಂದು ಚಿಕ್ಕಣ್ಣ ಉತ್ಸುಕತೆಯಿಂದ ಕೇಳಿದ.

“ನಿಜ; ಆದರೆ ಅದರ ಸ್ವರೂಪವು ಬೇರೆಯೇ ಆಯಿತು. ನಿಮಗೂ ಕೇಳಿ ಗೊತ್ತಿರಬೇಕಲ್ಲ!”

“ಅಹುದು; ನಿನ್ನೆಯೇ ಮೋಟಾರ್ ಸ್ಟಾಂಡಿನ ಮೇಲೆ ಯಾರೋ ಮಾತಾಡುತ್ತಿದ್ದರು….. `ಬೆಕ್ಕೇರಿಗೆ ಮಿಲಿಟರಿ ಬಂದಿದೆ. ತರುಣರೆಲ್ಲ ಊರು ಬಿಟ್ಟಿರುವರು….’ ಎಂದು.”

ಮುಂಜಾನೆಯ ಹೊಗೆಮಂಜಿನಲ್ಲಿ ಮೊರಡಿಯ ಮೇಲೆ ಎದುರೆದುರಾಗಿ ನಿಂತ ಮೂವರ ಮುಖದಲ್ಲಿಯೂ ಆತುರವು ಹೆಚ್ಚಾಗಿದ್ದಿತು. ಮಂಜಿನ ಮರೆಯಲ್ಲಿ ರವಿಯು ಮೆಲ್ಲಗೆ ಮೇಲಕ್ಕೇರುತ್ತಲಿದ್ದ. ಮೂವರೂ ಕೂಡಿ ಹಿರಿಯೂರ ಕಡೆಗೆ ಸಾವಕಾಶವಾಗಿ ನಡೆಯತೊಡಗಿದರು.

“ಹೀಗೇನು? ಮತ್ತೇನೇನು. ಆಗಿದೆಯಂತೆ….?” ಎಂದು ಚಿಕ್ಕಣ್ಣನ ಮುಖದ ಕಡೆಗೆ ನೋಡುತ್ತ ಶಾಂತೇಶ ಕೇಳಿದೆ.

“ನನ್ನನ್ನೇ ಕೇಳು! ನಿಮಗೆ ಗೊಲ್ಲವೇ ನೀವು ಮಾಡಿದ್ದು?” ಚಿಕ್ಕಣ್ಣ ನಗುತ್ತ ನುಡಿದ.

“ಅವರಿಗೇನು ಗೊತ್ತು? ಮೂರು ದಿವಸಗಳಾಯಿತು ಅವರು ಊರುಬಿಟ್ಟು…., ಎಂದು ರಾಮ ಇನ್ನೊಬ್ಬಾತನ ಹೆಸರು-ನಡುವೆಯೇ ಮಾತು ಸೇರಿಸಿದ.

“ನೀವೆಂದು ಊರು ಬಿಟ್ಟಿರಿ?” ಕೈ ಯೊಳಗಿನ ಕೊಡೆಯನ್ನು ಬಗಲಲ್ಲಿ ಹಿಡಿಯುತ್ತ, ರಾಮನ ಕಡೆಗೆ ಹೊರಳಿ ಚಿಕ್ಕಣ್ಣ ಕೇಳಿದ.

“ನಿನ್ನೆ ಸಂಜೆಗೆ….” ಮುಖದಲ್ಲಿ ಭಯವು ಒಡಮೂಡುತ್ತಿರಲು ರಾಮ ಹೇಳಿದ.

“ಅಲ್ಲಿ ಏನು ವಿಶೇಷ?” ಚಿಕ್ಕಣ್ಣ ಕೇಳಿದೆ.

“ವಿಶೇಷವೆಂದೇನು ಕೇಳುವಿರಿ? ಎಂಥ ಭಯಂಕರ ಪರಿಸ್ಥಿತಿಯದು! ನಿನ್ನೆಯ ಬೆಳಗು ಮುಂಜಾನೆ ಒಮ್ಮೆಲೇ ಹತ್ತೆಂಟು ಮಿಲಿಟರಿ ಮೋಟಾರುಗಳು ಬಂದವು. ಕೂಡಲೆ ಊರೆಲ್ಲ ಗಡಿಬಡಿ ಎದ್ದಿತು. ಕೆಲವು ಜನ ಹಿರಿಯರು: `ತರುಣರೆಲ್ಲರು ಈಗಿಂದೀಗ ಊರುಬಿಟ್ಟು ಹೊಲಗಳಲ್ಲಿ ಬೆಳೆಯೊಳಗೆ ಅಡಗಿಕೊಳ್ಳಬೇಕು….’ ಎಂದರು. ಮತ್ತೆ ಕೆಲವರು: `ಎಲ್ಲಿ ಹೋದರೇನು, ಅವರು ಬಿಟ್ಟು ಹೋಗುವರೆ?’ ಎಂದೆನ್ನ ತೊಡಗಿದರು. ಮತ್ತೊಬ್ಬರು ಹುಡುಗಾಟ ಮಾಡಿ ಎಲ್ಲರ ಮೇಲೆ ತಂದಿಟ್ಟರು! ಮರೀ ಕೂಗಿ ನರೀಗಿ ಹಾವಳಿ ತಂದಿಟ್ಟಿತಂತ! ಆಗಽ ನಿತ ತಿಳಿದಿದ್ದೆ ಅವರ ಬೆನ್ನ ಹತ್ತೂದು ನೆಟ್ಟಗಲ್ಲ. ಅ೦ತ….ಏ; ಆ ಬಿಳಿ ಟೊಪ್ಪಗೀ ತಗದು ಒಗೆದು ಪಟಕಾನಽರ ಸುತಾಕಿಲ್ಲಾ?” ಎಂದು ತರುಣರಿಗೆ ಹೇಳ ತೊಡಗಿದರು. ಇದೆಲ್ಲದರ ಪರಿಣಾಮವಾಗಿ ತರುಣರೆಲ್ಲ ಅಡಗಲೆ೦ದು ಅತ್ತಿತ್ತ ಓಡಾಡಲು ಪ್ರಾರಂಭಿಸಿದರು. ಕೆಲ ಹೊತ್ತಿನಲ್ಲಿ ಯಾರ ತಲೆಯ ಮೇಲೆ ನೋಡಿದರೂ ಗಾಂಧಿ ಟೊಪ್ಪಿಗೆಯ ಬದಲು ಬಾದಲಿ `ಕೋಖಾ’ ಪಟಕೆಗಳೇ ಕಾಣ ಹತ್ತಿದವು. ಕೆಲವರು ಊರ ನೆರೆ ಯಲ್ಲಿರುವ ಜೋಳದ ಬೆಳೆಯಲ್ಲಿ ಸೇರಿ, ಅಲ್ಲಿಂದ ಹೋದರು. ಹೊಸಮನಿ ಭೀಮನೂ ಹಾಗೆ ಮಾಡಬೇಕೆಂದು ಕಮತರ ಹಿತ್ತಲಿನಿಂದ ಬೇಲಿ ಹಾರುವುದರಲ್ಲಿದ್ದ. ಅಷ್ಟರಲ್ಲಿ ಒಬ್ಬ ಮಿಲಿಟರಿ ಸೀಪಾಯಿ ಕಾಣಿಸಿದನಂತೆ, ಅವನಿಗೆ. ಅಷ್ಟರಲ್ಲಿಯೆ ಊರಸುತ್ತಲೂ ಮಿಲಿಟರಿ ಸೀಪಾಯಿಗಳು ವ್ಯಾಪಿಸಿದ್ದರಂತೆ. ನನ್ನ ಮೇಲೆ ಗೌಡರ ಕಣ್ಣು ಬಹಳವಾದ್ದರಿಂದ ನಾನು ಮೊನ್ನೆಯಿಂದ ಊರಲ್ಲಿಲ್ಲವೆಂಬ ಸುದ್ದಿಯನ್ನೇ ನಮ್ಮ ಮನೆಯವರು ಊರಲ್ಲೆಲ್ಲ ಹರಡಿದ್ದರು. ಈ ಶಾಂತೇಶನ ಸಂಗಡ ನಾನೂ ಹೋಗಿರಬೇಕೆಂದು ಕೆಲವರು ತರ್ಕಿಸುತ್ತಿದ್ದರು. ಅದರಿಂದ ನಾನು ಮನೆ ಬಿಟ್ಟು ಹೊರಗೆ ಬರುವುದೂ ಉಚಿತವಾಗಿರಲಿಲ್ಲ; ಅಲ್ಲೇ ಹಿತ್ತಲಲ್ಲಿ ಹೊಟ್ಟಿನ ಬಣಿವೆಯಲ್ಲಿ ಸೇರಿ, ಮರೆಗೆ ಕಣಿಕೆಯ ಸಿವುಡುಗಳನ್ನು ಇಟ್ಟುಕೊಂಡೆ. ಅಲ್ಲಿಂದ ನಮ್ಮೂರ ಮುಖ್ಯ ದಾರಿಯು ಕಾಣುತ್ತಿದ್ದಿತು. ಯಾರು ಊರೊಳಗೆ ಬರಬೇಕಾದರೂ ಈ ದಾರಿಯಿಂದಲೇ ಬರಬೇಕು. ಚಾವಡಿಯಿಂದ ಊರ ಹೊರಗೆ ಹೋಗಬೇಕಾದರೂ ಇದೇ ಮಾರ್ಗದಿಂದ ಹೋಗುವರು, ಎಲ್ಲವು ಕಾಣುವುದೆಂದು ಸ್ವಸ್ಥವಾಗಿ ಕುಳಿತೆ. ಆದರೂ ಎದೆ ಹಾರುತ್ತಿದ್ದಿತು. ಮೂರು ನಾಲ್ಕು ಗುಂಡು ಹಾರಿಸಿದ ಸಪ್ಪಳವು ನನ್ನ ಎದೆಯನ್ನೇ ನಡುಗಿಸಿತು. ಸ್ವಲ್ಪ ಹೊತ್ತು ಎಲ್ಲವೂ ಶಾಂತವಾಗಿದ್ದಿತು. ಆ ಮೇಲೆ `ಟಪ್-ಟಪ್’ ಎಂದು ಬೂಟಿನ ಸಪ್ಪಳ ಕೇಳಬರಹತ್ತಿತು. ನಾನು ಕುಳಿತಲ್ಲಿಂದಲೇ ಆ ಸಿವುಡುಗಳ ಸಂದಿಯೊಳಗಿಂದ ನಮ್ಮೂರ ಮುಖ್ಯ ಮಾರ್ಗದ ಕಡೆಗೆ ಕಣ್ಣು ಮಿಟುಕಿಸದೆ ನೋಡುತ್ತಿದ್ದೆ. ಗೌಡರು ಯಾರೊಡನೆಯೋ ಮೆಲ್ಲಗೆ ಮಾತಾಡುತ್ತ ಓಡುತ್ತಿದ್ದರು! ತಲೆಯ ರುಮಾಲು ಬಿಚ್ಚಿತ್ತು….ಕೈ ನಡುಗುತ್ತಿದ್ದವು….. ಕೋಟು ಅಸ್ತವ್ಯಸ್ತವಾಗಿತ್ತು….. ಕಚ್ಚೆ ಕಳೆಯುವುದರಲ್ಲಿತ್ತು. ‘ಆ ಶಾಂತೇಶನನ್ನು ತಂದುಕೊಡಿ’ ಇಲ್ಲವಾದರೆ ಊರನ್ನೇ ಸುಟ್ಟು ಹಾಕುವೆವು ಮನೆ ಮನೆ ಹುಡುಕುವೆನು. ಸಿಕ್ಕವರಿಗೆ ಗುಂಡು ಹಾಕುವೆವು’ ಎನ್ನುವರು. ಎ೦ದು ಏನೇನೋ ಹೇಳು ನಡೆದಿದ್ದರು! ಹಿಂದಿನಿಂದಲೇ ನಲುವತ್ತು ಇವತ್ತು ಜನ ಸೋಲ್ಜರರು ಕಮಾಂಡರನ ಆಜ್ಞೆಯ ಮೇರೆಗೆ `ರೈಟ್ ಲೇಫ್ಟ್’ ಎಂಬ ತಾಳದಗುಂಟ ಹೆಜ್ಜೆಗಳನ್ನಿಡುತ್ತ ಬಂದರು….! ಎಲ್ಲರ ಹೆಗಲುಗಳ ಮೇಲೆಯೂ ಕೋವಿಗಳಿದ್ದುವು. ಸ್ವಲ್ಪ ಸ್ವಲ್ಪ ನಡೆದು ಅಲ್ಲಲ್ಲಿಗೆ ನಿಂತು ನಿಂತು `ರೈಟ್ ಲೆಫ್ಟ್’ ಎ೦ದು ಕಾಲುಗಳನ್ನು ನೆಲಕ್ಕೆ ಬಡಿಯುತ್ತಿದ್ದರು!

“ಅರ್ಧ ಮರ್ಧ ಕಲಿತ ಕೆಲವು ಮಿಲಿಟರಿ ಸಿಪಾಯಿಗಳನ್ನು ತಂದು, ಹಳ್ಳಿಯ ಜನರನ್ನು ಬೆದರಿಸುತ್ತಿರಬೇಕು…..” ಎ೦ದು ಚಿಕ್ಕಣ್ಣ ತನ್ನ ತರ್ಕವನ್ನು ತಿಳಿಸಿದ!

“ಅಲ್ಲ, ಮುಂದೆ ಹೇಳುವೆನಾದರೂ ಕೇಳಿರಿ! ಆ ಮಿಲಿಟರಿ ಜನರು ಊರೊಳಗೆ ಬಂದಾಗ, ಯಾವ ಮನೆಯಿಂದಲೂ ಒಂದು ಕೂಸು ಕೂಡ ಹೊರಗೆ ಬರುತ್ತಿರಲಿಲ್ಲ. ಇನ್ನು ಭೀಕರವಾಗಿತ್ತು. ಆ ಸಂದರ್ಭ ಆ ಸಮಯದಲ್ಲಿ ಅವರ ಹೆಜ್ಜೆಯ ಸಪ್ಪಳವು ತಮ್ಮ ತಾಯಿಯನ್ನು ತಾವೇ ತುಳಿದೊತ್ತುವ ಪೆಟ್ಟುಗಳ ಸಪ್ಪಳದಂತೆ ಕೇಳಬರುತ್ತಿದ್ದಿತು. ಸಂಜೆಯವರೆಗೆ ಊರಲ್ಲೆಲ್ಲ ತಿರುಗಿದರು. ಮನೆಮನೆ ಹೊಕ್ಕರು, ಹೆಂಗಸರನ್ನು ಹೆದರಿಸಿದರು, ಹುಡುಗರನ್ನು ಹಿಡಿದರು. ತರುಣರನ್ನು ಹೊಡೆದರು. ಕೆಲವು ಮುದುಕರನ್ನಂತೂ ಮುಂಜಾನೆ ಚಾವಡಿಯಲ್ಲಿ ಒಟ್ಟು ಕೂಡಿಸಿದವರು ಊಟಕ್ಕೂ ಮನೆಗೆ ಬಿಡಲಿಲ್ಲ. ಗೌಡರಿಗೆ ಶಾಂತೇಶನನ್ನು ತಂದು ಕೊಡಿರಿ, ಮುಖ್ಯ ಚಳವಳಿಖೋರನಾತ; ಇಲ್ಲದಿದ್ದರೆ ನಿಮ್ಮನ್ನು ಸಸ್ಪೆಂಡ್ ಇಡತೇವೆ…. ಎಂದು ಪೋಲಿಸ ಸಾಹೇಬನು ಗದರಿಸಿದನಂತೆ ಸಂಜೆಯ ತಾಸು ಹೊತ್ತು ಉಳಿಯಿತು. ಊರೆಲ್ಲ ಸ್ತಬ್ದ ವಾಯಿತು, ಎಂದು ಕೇಳುತ್ತಿರುವಾಗ ರಾಮನ ಸ್ವರವು ಜಗ್ಗಿದ್ದಿತು. ತುಟಿಗಳು ಅದುರುತ್ತಿದ್ದುವು. ಮುಖದ ಮೇಲೆ ಭೀತಿಯ ಲಕ್ಷಣಗಳು ಕಾಣುತ್ತಿದ್ದುವು. ಕಣ್ಣುಗಳನ್ನು ಹೊರಳಿಸಿ ಸುತ್ತಲೂ ನೋಡತೊಡಗಿದೆ.

ಚಿಕ್ಕಣ್ಣನ ಮುಖವು ಶಾಂತವಾಗಿದ್ದಿತು. ಅವನು ಯಾವುದೋ ವಿಚರದಲ್ಲಿರುವಂತೆ ತೋರುತ್ತಿದ್ದಿತು. ಆದರೂ ಒಂದೊಂದು ಹೆಜ್ಜೆಯನ್ನು ಮುಂದಿಡುವಾಗ ರಾಮನನ್ನು ಆಶ್ಚರ್ಯ ಬೆರೆತ ದೃಷ್ಟಿಯಿಂದ ನೋಡುತ್ತಿದ್ದ, ರಾಮು ಚಿಕ್ಕಣ್ಣನ ಕಡೆಗೆ ಹೊರಳಿದ. ಅವನಿಗೆ ಮುಂದೆ ಮತ್ತೆನೇನೋ ಹೇಳಬೇಕಾಗಿದೆಯೆಂಬುದು ಆತನ ಮುಖಚರ್ಯೆಯ ಮೇಲಿಂದ ತಿಳಿಯುತ್ತಿದ್ದಿತು. ಇಬ್ಬರೂ ಕುತೂಹಲ ದೃಷ್ಟಿಯಿಂದ ಅವನನ್ನು ನೋಡುತ್ತಿದ್ದರು. ಆಗ ಅವನು.

“ಹೊತ್ತು ಮುಳಗಿತು, ಮೆಲ್ಲನೆ ಹೊರಗೆ ಬಂದೆ ಯಾರೋ ಮಾತಾಡುತಿದ್ದುದು ಕೇಳಿಸಿತು. `ಮಿಲಿಟರಿಯು ಹೊಳೆಯಾಚೆಯ ನರಸೀಪುರವನ್ನು ಸುತ್ತುಗಟ್ಟಿ ಶಾಂತೇಶನನ್ನು ಊರಲ್ಲಿ ಹುಡುಕುತ್ತಿರುವುದು, ಅಲ್ಲಿಯೂ ಸಿಕ್ಕದಿದ್ದರೆ…. ಹಿಂದಕ್ಕೆ ನಮ್ಮಲ್ಲಿ ಮಾಸ್ತರನಿದ್ದನಲ್ಲ….. ಚಿಕ್ಕಣ್ಣ! ಅವನಿಗೂ ಶಾಂತೇಶನಿಗೂ ಬಹಳ ಗೆಳೆತನ, ಅಲ್ಲಿಗೆ ಹೋಗಿರಬೇಕೆಂದು ಎಲ್ಲರ ತರ್ಕವಂತೆ!” ಎಂದು ಕೇಳಿದ ಕೂಡಲೆ ಇತ್ತ ಹೊರಟೆ. ಊರಲ್ಲಿ ಓಣಿಯೋಣಿಗೂ ಸಿಪಾಯಿಗಳು ಮನೆಗಳೊಳಗಿಂದ ತೆಗೆದೊಗೆದ ಸಾಮಾನುಗಳು ಅಸ್ತವ್ಯಸ್ತವಾಗಿ ಬಿದ್ದಿದ್ದುವು. ಅಲ್ಲಲ್ಲಿ ಹೆಂಗುಸರೂ ಮಕ್ಕಳೂ ಗೋಳಿಡುವ ಧ್ವನಿ. ಅಡವಿಯಲ್ಲಿಯೂ ಗುಡಿಸಿಲು ಗುಡಿಸಿಲುಗಳನ್ನು ಹೊಕ್ಕು ಹುಡುಕುತ್ತ, ಸಿಕ್ಕ ಸಿಕ್ಕ ರೈತರನ್ನು ಬಡಿಯುತ್ತ ಹೊಡೆಯುತ್ತ ನಡೆದಿದ್ದರು? ಎ೦ಥ ಅಸಹ್ಯಕರವಾದ ವರ್ತನೆಗಳವು! ಆ ಭಯಂಕರ ಪರಿಸ್ಥಿತಿಯೊಳಗಿಂದ ಪಾರಾಗಿ ಇಲ್ಲಿಯವರೆಗೆ ಬರಬೇಕಾದರೆ, ಬೆಳೆ ತನಕ ಅಲ್ಲಲ್ಲಿ ಅಡಗಿ ಬರಬೇಕಾಯಿತು!” ಎಂದು ಹೇಳಿ ರಾಮ ಮಾತನ್ನು ಮುಗಿಸಿದ. ಎಲ್ಲರೂ ಹೆದರಿಕೆಯಿಂದ ಹೆಜ್ಜೆಗಳನ್ನು ಮೆಲ್ಲಗೆ ಇಡಹತ್ತಿದರು.

ಊರು ಇನ್ನು ಸ್ವಲ್ಪ ದೂರವಿತ್ತು. ಚಿಕ್ಕಣ್ಣನ ಮನದಲ್ಲಿ ಸಿಟ್ಟು ಉದ್ವೇಗ, ಆಶ್ಚರ್ಯಗಳ ತೆರೆಗಳು ಒಮ್ಮೆಲೇ ಎದ್ದು ಮುಳುಗುತ್ತಿ ದ್ದವು ಅದರಲ್ಲೂ ಮುಖದ ಮೇಲೆ ಆಶ್ಚರ್ಯವೇ ಹೆಚ್ಚಾಗಿ ಒಡಮೂಡುತಲಿತ್ತು. ಸುತ್ತಲೂ ಮಂಜಿನ ಮಬ್ಬು ಮುಸುಕಿತ್ತು. ಅದೇಕೋ ಇಂದಿನ ಮಂಜು ಅಸಹ್ಯವಾಗಿ ತೋರಿತು. ಚಿಕ್ಕಣ್ಣನು ಮುಖದ ಮೇಲಿನ ಮಂಜಿನ ಹನಿಗಳನ್ನು ಒರಸಿ ಕೊಂಡು ಶಾಂತೇಶನ ಕಡೆಗೆ ತಿರುಗಿ, “ನಿಮ್ಮನ್ನು ಇಷ್ಟೊಂದು ಲಕ್ಷ್ಯದಲ್ಲಿಡಲು ಕಾರಣವೇನು?” ಎಂದು ಕೇಳಿದ.

“ಕಾರಣವನ್ನೇನು ಕೇಳುವಿರಿ? ಒಂಬತ್ತನೆಯ ತಾರೀಖಿನ ದಿವಸ ಮುಂಬಯಿಯಲ್ಲಿ ಮಹಾತ್ಮರನ್ನು ಕಾಂಗ್ರೆಸಿನ ಮುಖಂಡರನ್ನು ಬಂಧಿಸಿದರು…… ಅದು ನಮಗೆ ಮರುದಿನ ತಿಳಿಯಿತು. ಕೂಡಲೆ ನಮ್ಮಲ್ಲಿಯ ಶಾಲೆಯನ್ನು ಮುಚ್ಚಿಸಿ ಹರತಾಳ ಪಾಲಿಸಿದೆವು. ಊರಲ್ಲಿ ಮೆರವಣಿಗೆ ಮಾಡುವುದೆಂದು ಗೊತ್ತು ಮಾಡಿದೆವು. ಭಾಷಣಗಳ ತಯಾರಿಗೆ ತೊಡಗಿದೆವು. ಸ೦ಕನಕೊಪ್ಪಕ್ಕೆ ಸಂತೆಗೆ ಹೋಗಿಬಂದವರು ಯಾರೋ ಹೇಳಿದರು. `ಅಲ್ಲಿಯೂ ಸಭೆಯಾಯಿತು, ಮೆರೆವಣಿಗೆ ಹೊರಟಿತ್ತು, ಪೋಲಿಸರು ಅಡ್ಡಿ ಮಾಡಲು ಬಂದರು. ಜನತೆ ಕೇಳಲಿಲ್ಲ, ಹಾಗೆ ಹೊಡೆದಾಡಿದರು, ಮುಂದೆ ಸಾಗಿದರು….’ ಎಂದು ಕೇಳಿ ನಮ್ಮಲ್ಲಿಯ ತರುಣರೂ ಹುರುಪುಗೊಂಡರು; ಮಹಾತ್ಮರನ್ನು ಬಿಡುವವರೆಗೆ ಹರತಾಳವನ್ನು ಪಾಲಿಸುವುದೆಂದು ಹುರುಪಿನಲ್ಲಿ ನಿಶ್ಚಯಿಸಿದರು. ಸಂಜೆಗೆ ಊರಲ್ಲಿ ಮತ್ತೆ ಮೆರೆವಣಿಗೆ ತೆಗೆಯಲಾಯಿತು. ಡಂಗುರ ಸಾರಿತು ಸಭೆಯಿದೆಯೆಂದು. ರಾತ್ರಿಯಾಯಿತು. ಬಹಳಷ್ಟು ಜನ ಬಯಲಿನಲ್ಲಿ ಕೂಡಿದ್ದಿತು. ಗೌಡರು “ಸಭೆ ಮಾಡಗೊಡುವುದಿಲ್ಲ!” ಎಂದರು. ತರುಣರು ಅವರ ಮಾತಿಗೆ ಕಿವಿಗೊಡಲಿಲ್ಲ. ಸಭೆ ಮಾಡಿದರು ಸಭೆಗೆ ಅಧ್ಯಕ್ಷರಾರೂ ಸಿಕ್ಕಲಿಲ್ಲ. ಮಾಹಾತ್ಮರ ಭಾವಚಿತ್ರವನ್ನೇ ಅದ್ಯಕ್ಷರೆಂದು ಕುರ್ಚಿಯಮೇಲಿಟ್ಟೆವು. ಮೊದಲೇ ಸಿದ್ಧ ಮಾಡಿ ಇಟ್ಟುಕೊಂಡಂತೆ…. ಎಲ್ಲರೂ ಹುರುಪಿನಿಂದ ಮಾತಾಡಿದರು. ಮರುದಿನ ಮುಂಜಾನೆ ಶಾಲೆಯಲ್ಲಿ ಹುಡುಗರು ಮಾಸ್ತರರಿಗೆ `ಅರಸನ ಫೋಟೋ ತೆಗೆದಿಡಿರಿ; ಇಲ್ಲವಾದರೆ ಒಡೆಯುವೆವು ಎಂದರು. ಮಧ್ಯಾಹ್ನ ದೊಳಗಾಗಿ ಒಡೆದೇ ಬಿಟ್ಟರು! ಮೊದಲೇ ಗ್ರಾಮಸ್ಥರು ತಿಳಿಸಿದಂತೆ ಅದೇ ದಿವಸ ಸಂಜೆಯ ನಾಲ್ಕು ಘಂಟೆಗೆಂದರೆ ಪೊಲೀಸ್ ಸಬ್ ಇನಸ್ಪೆಕ್ಟರನೂ ಪೋಲೀಸರೂ ಬಂದುಬಿಟ್ಟರು. ನಾನು ಹಾಗೆಯೇ ಕರಿನಿಶಾನಿಯ ಮೆರವಣಿಗೆ ತೆಗೆದೆವು. ಚರಕಾ ಸಂಘದಿಂದ ಮೊದಲು ಮೆರವಣಿಗೆ ಹೊರಟಿತು. ಚಾವಡಿಯ ಮುಂದೆ ಬರಲು ಪೊಲೀಸರು ಅಡ್ಡಿ ಮಾಡಲು ಬಂದರು. ಕೆರಳಿದ ಜನರು ಚಾವಡಿಗೆನೇ ಕಲ್ಲೆಸೆದು ಕೂಗಿದರು. “ಗಾಂಧಿ ಮಹಾರಾಜಕೀ ಜೈ! ಭಾರತ ಮಾತಾಕಿ ಜೈ!!” ಎ೦ದು ಜಯಘೋಷ ಮಾಡಿದರು. ಇನಸ್ಪೆಕ್ಟರನೂ ಗಾಬರಿಗೊಂಡಿರಬೇಕು. ಜನತೆ ಚಾವಡಿಯಲ್ಲಿ ಸೇರಿತ್ತು. ಫೌಜದಾರನನ್ನು ಹೊರಗೆಳೆದು ತಂದಿತು. ಎಲ್ಲರೂ ಕೂಡಿ ಅವನಿಗೂ ಖಾದಿ ಟೊಪ್ಪಿಗೆಯನ್ನೂ ಹಾಕಿದರು, ಕೈ ಯಲ್ಲಿ ಕರಿಯ ನಿಶಾನೆಯನ್ನು ಕೊಟ್ಟರು, ಸರಕಾರಕ್ಕೆ ಬೈಯಲು ಹೇಳಿದರು. ‘ವಂದೇಮಾತರಂ, ಹಾಡು ಹೇಳಲಿಕ್ಕೆ ಹಚ್ಚಿದರು, ಪೋಲಿಸರು ಸುಮ್ಮನೆ ಬೆನ್ನು ಹತ್ತಿದರು. ಫೌಜದಾರನಿಂದ –ಸತ್ಯಾಗ್ರಹಿಗಳಿಗೆ ವಿರೋಧ ಮಾಡಲಿಕ್ಕಿಲ್ಲ ಎಂದು ಪ್ರತಿಜ್ಞೆ ಮಾಡಿಸಿದೆವು. ಫೌಜದಾರನೂ ಮೆತ್ತಗಾಗಿದ್ದ. ಹೇಳಿದಂತೆ ಕೇಳಿದ; ಹೋದ ನಾವು ದಿನಾಲು ಕಾರ್ಯಕ್ರಮವನ್ನು ಹಾಗೆಯೇ ಇಟ್ಟೆವು. ಗುಪ್ತ ಸುದ್ದಿ ಯೊಂದು ಬಂತು. ‘ಒಮ್ಮೆಲೇ ಮಿಲಿಟರಿಯು ಬಂದು ಎಲ್ಲ ಕಾರ್ಯಕರ್ತರನ್ನೂ ಹಿಡಿದೊಯ್ಯುವುದು ಎಂದು. ಕೂಡಲೆ ತರುಣರೆಲ್ಲ ಒತ್ತಟ್ಟಿಗೆ ಸೇರಿದರು. ನನಗೆ ಹೇಳಿದರು: `ನೀನು ಹಿಂದೆ ಇರಲಿಕ್ಕೆ ಬೇಕು ಎಂದರೆ ಮುಂದೆ ಕಾರ್ಯ ಸಾಗುವುದು, ಎಂದು. ನನ್ನನ್ನು ಅದೇ ರಾತ್ರಿಯಲ್ಲಿಯೇ ನರಸೀಪೂರಕ್ಕೆ ಕಳಿಸಿದರು. ಅಲ್ಲಿಂದ ಇತ್ತ ಬ೦ದೆ’ ಎಂದು ಒಂದೇ ಉಸುರಿನಲ್ಲಿ ಹೇಳಿ ಮುಗಿಸಿದ ಶಾಂತೇಶ.

ಚಿಕ್ಕಣ್ಣ ನಸು ಬೆದರಿದ, ಯೋಚಿಸಹತ್ತಿದ ಹೆಜ್ಜೆಗಳನ್ನು ಸಾವಕಾಶವಾಗಿ ಎತ್ತಿಡಹತ್ತಿದ. ಕುಳಿರ್ಗಾಳಿಯೊ೦ದು ಸುಳಿಯಿತು. ಚಿಕ್ಕಣ್ಣನ ಮೈ ಮೇಲೆ ಮುಳ್ಳೆದ್ದುವು. ಊರು ಸಮೀಪಿಸಿದ್ದಿತು. “ಹೀಗೆಲ್ಲ ಆಗಿದೆಯೋ? ಎಂಬ ಉದ್ಗಾರವು ಅವನ ಬಾಯಿಂದ ಅವನಿಗೆ ಗೊತ್ತಿಲ್ಲದೆಯೆ ಹೊರಟಿತು. ಶಾಂತೇಶನ ಕಡೆಗೆ ಹೊರಳಿ `ಇರಲಿ , ನೀವು ಈ ಬೀದಿಯಿಂದ ಹಾಯ್ದು ನಮ್ಮ ಮನೆಗೆ ನಡೆಯಿರಿ, ನಾನು ಶಾಲೆಗೆ ಹೋಗಿ ಮನೆಗೆ ಬರುವೆ. ಮನೆ ಸಿಕ್ಕಬಹುದಲ್ಲ?” ಎ೦ದು ಕೈ ಮಾಡಿ ಮನೆಯ ಹಿತ್ತಲಿನ ಹಾದಿಯನ್ನು ತೋರಿಸಿದ `ಮನೆ ಸಿಗದೆ ಏನು? ಎಂದು ಹೇಳಿ ಇಬ್ಬರೂ ಹೋಗಿಬಿಟ್ಟರು.

ಚಿಕ್ಕಣ್ಣ ಸಾಲೆಯ ಕಡೆಗೆ ಹೊರಳಿ ನಡೆದ. ಅವನ ನಡಿಗೆ ಒತ್ತರದ್ದಾಗಿತ್ತು. ಅದಕ್ಕಿಂತಲೂ ಹೆಚ್ಚು ಅವನ ತಲೆಯೊಳಗಿನ ವಿಚಾರಗಳು ಓಡುತ್ತಿದ್ದವು. ‘ಇವರೇನೋ ಪುಂಡತನವನ್ನೇ ಮಾಡಿದ್ದಾರೆ! ನಿನ್ನೆ ಸಂಜೆಗೆ ಮಿಲಿಟರಿ ನರಸೀಪುರಕ್ಕೆ ಹೋಗಿದೆಯಂತೆ; ಎಂದ ಮೇಲೆ ಅವರೇನು ಇವನನ್ನು ಬಿಟ್ಟು ಹೋಗುವ ಲಕ್ಷಣ ತೋರುವದಿಲ್ಲ. ಒಂದುವೇಳೆ ನರಸೀಪುರದಲ್ಲಿ ರಾತ್ರಿ ಹನ್ನೆರಡರವರೆಗೆ ಹುಡುಕಿ ಹೊರಬಿದ್ದರೆ ಮಿಲಿಟರಿಯು ಇಷ್ಟರಲ್ಲಿಯೇ ಇಲ್ಲಿ ಬರಬೇಕಾಗಿದ್ದಿತು. ಆದರೆ ಇನ್ನೂ ಬಂದಂತಿಲ್ಲ. ಹಾದಿಯಲ್ಲಿ ಹೊಳೆಯೊ೦ದನ್ನು ದಾಟಬೇಕಾಗುತ್ತದೆ. ಇನ್ನೂ ಬರಬಹುದು….” ಎಂಬ ವಿಚಾರಮಾಲಿಕೆಯ ಮುಡಿಯೊಡನೆಯೇ ಚಿಕ್ಕಣ್ಣನ ಹೃದಯ ಹಾರತೊಡಗಿತು. ನನಗೂ ಹೊಸದಾದ ಊರು…. ಮೊನ್ನೆ ಮೊನ್ನೆಯೇ ಈ ಊರಿಗೆ ಬಂದಿರುವೆ. ಮಿಲಟರಿ ಬಂದರೆ ಶಾಂತೇಶನನ್ನು ಎಲ್ಲಿಡಬೇಕು? ಏನು ಮಾಡಬೇಕು? ಒಂದುವೇಳೆ ಸಿಕ್ಕರೆ ಎಲ್ಲರೂ ಸಿಗಬೇಕಾಗುವುದು! ಎಂದು ಮೊದಲಾದ ವಿಚಾರದ ಗೊಂದಲದಲ್ಲಿ ಬಿದ್ದ ಚಿಕ್ಕಣ್ಣನಿಗೆ ಹೊರಗಿನ ಜಗತ್ತಿನ ಪರಿವೆಯೇ ಇರಲಿಲ್ಲ.

ಯಾರೋ ಕೆಮ್ಮಿದ ಸಪ್ಪಳಾಯಿತು. ಚಿಕ್ಕಣ್ಣ ಮುಖವೆತ್ತಿ ನೋಡಿದ, ಎದುರಿಗೆ ಮಿಲಿಟರಿ ಸೀಪಾಯಿ! ಉದ್ದವಾದ ದೇಹಯಷ್ಟಿ. ಹೆಗಲಮೇಲೊಂದು ಕೋವಿ, ಕಾಲಲ್ಲಿ ಕರಿಯ ಬೂಟು! ಕಂಡೊಡನೆ ಚಿಕ್ಕಣ್ಣನ ಕೈ ಕಾಲೇ ತಣ್ಣಗಾದುವು. ಎದೆ ನಡುಗಿತು. ಮೈ ಜುಮ್ಮೆಂದಿತು. ಬೆವರಿತು. `ಇದೇನಾಯಿತು? ಮಿಲಿಟರಿಯು ಬಂದುಬಿಟ್ಟಿದೆ! ಎಲ್ಲರೂ ಸಿಗುವೆವು! ಮುಂದೆ ನನ್ನ ಸ್ಥಿತಿ? ಎಂಬ ವಿಚಾರಗಳು ತಲೆಯಲ್ಲಿ ಸುಳಿದೊಡನೆಯೇ ಇಲ್ಲಿ ನೆಲಕ್ಕೆ ಬೀಳುವೆನೆನೋ ಎಂದು ಅಂಜಿದ. ಕೈಯಲ್ಲಿಯ ಕೊಡೆಯನ್ನು ಆಧಾರಕ್ಕಾಗಿ ನೆಲಕ್ಕೆ ಊರಿದ. ಶಾಲೆಯವರೆಗೆ ಹೇಗೆ ಹೋದೆನೆಂಬುದು ಚಿಕ್ಕಣ್ಣನಿಗೆ ತಿಳಿಯಲೇ ಇಲ್ಲ. ಶಾಲೆಯ ಹೊತ್ತೂ ಆಗಿತ್ತು. ಹೆಡ್ ಮಾಸ್ತರರೂ ಬಂದಿದ್ದರು. ಶಾಲೆಯ ಸೂಚನೆಯ ಗಂಟೆಗೆ ಎಚ್ಚತ್ತು ಚಿಕ್ಕಣ್ಣ ಶಾಲೆಯ ಕಟ್ಟೆಯನ್ನು ಏರತೊಡಗಿದ, ವಿಚಾರಮುದ್ರೆಯಿಂದ. ಅಷ್ಟರಲ್ಲಿ ಮುಪ್ಪಿನ ಹೆಡ್ ಮಾಸ್ತರರೇ ಅವಸರದಿಂದ ಹೊರಗೆ ಬಂದು `ಇತ್ತ ಬರ್ರಿ!’ ಎಂದು ಸೂಚನೆಯಿಂದ ಶಾಲೆಯ ಒಂದು ಬದಿಗೆ ಕರೆದೊಯ್ದು “ಶಾಂತೇಶ ಬಂದಿದ್ದಾನೆ!” ಎಂದು ಕಳ್ಳ ದನಿಯಲ್ಲಿ ಹೆದರಿಕೆಯಿಂದ ಹೇಳಿದರು.

“ಯಾವ ಶಾಂತೇಶ?” ಏನೂ ಅರಿಯದವನಂತೆ ಚಿಕ್ಕಣ್ಣ ಕೇಳಿದ.

“ಬೆಕ್ಕೇರಿಯವ? ಏನು ಭಯಂಕರ ಪ್ರಸಂಗವದು! ಮಿಲಿಟರಿ ಬಂದಿದೆ ಬೆಕ್ಕೇರಿಗೆ; ಅವರಿಗೆ ಸಿಗಲಿಲ್ಲ. ಓಡಿಬಂದಿದ್ದಾನೆ; ಎರಡು ದಿನವಾಯಿತು. ಮಿಲಿಟರಿ ಹುಡುಕುತ್ತ ಊರೂರ ತಿರುಗಹತ್ತಿದೆ. ನಿನ್ನೆ ನರಸೀಪುರಕ್ಕೆ ಹೋಗಿತ್ತಂತೆ….”

“ಹೀಗೋ? …. ಇಲ್ಲೇಕೆ ಬಂದಿದ್ದಾನೆ! ಎಲ್ಲರಿಗೂ ಕಷ್ಟ ಕೊಡಲಿಕ್ಕೆ…. ?” ಎಂದು ಸ್ವಲ್ಪ ತ್ರಾಸಿತ ಸ್ವರವನ್ನು ತಂದು ಚಿಕ್ಕಣ್ಣ ನುಡಿದ.

“ನಿಮಗೆ ಗೊತ್ತಿಲ್ಲ?”

“ಇಲ್ಲ, ನಾನು ಮೊನ್ನೆಯೇ ಊರಿಗೆ ಹೋಗಿರಲಿಲ್ಲವೇನು? ಇದೀಗ ಬಂದೆನಲ್ಲ.. ಊರಿ೦ದ!”

“ಮೊನ್ನೆ ಬೆಳಗಿನಲ್ಲಿಯೇ ಬಂದಿದ್ದಾನೆ…. ಧ್ವನಿ ಕೇಳಬಂತು…. ಯಾರೆಂದು ಅಜ್ಜಿಯನ್ನು ಕೇಳಿದೆ…. ಆಮೇಲೆ ಅವಳನ್ನು ಹೊರಗೆ ಕರೆದು ಹೇಳಿದೆ: ಮಾಸ್ತರರು ನಾಲ್ಕು ದಿನ ಬರುವುದಿಲ್ಲ ಎಂದು ಹೇಳಿ ಕಳಿಸಿ ಕೊಡು” ಎಂದರೆ, ಹುಚ್ಚು ಮುದುಕಿ `ಬಹಳ ದಿನಕ ಬಂದಿದಾನು…. ನಾಲ್ಕು ದಿಸಾ ಇದ್ದು ಹೋಗಲಿ, ಮಾಸ್ತರು ಬೆಕ್ಕೇರಿಯಲ್ಲಿದ್ದಾಗ ಆಗಾಗ ಮನಿಗೆ ಬರತಿದ್ದ….ಚಿಕ್ಕಣ್ಣನ ಗೆಳೆಯನೀತ….’ ಎಂದಿತು. ಎಲ್ಲವನ್ನೂ ತಿಳಿಸಿ ಹೇಳುವುದು ನನ್ನಿಂದಾಗಲಿಲ್ಲ. ನಾಳೆ ಪ್ರಸಂಗ ಬಂದರೆ, ಯಾರಾದರೂ ಅವಳನ್ನು ಒಯ್ದು ಕೇಳಿದರೆ ಹೀಗೇ ನನ್ನ ಹೆಸರೂ ಹೇಳೀತೆಂದು ಭಾವಿಸಿ ಸುಮ್ಮನಾದೆ….”

“ಹಾಗೆ ಮಾಡಬಾರದಿತ್ತು. ನೀವು-ನೀವೇ ಏನಾದರೂ ಹೇಳಿಕಳಿಸಿ ಬಿಡಬೇಕಾಗಿತ್ತು-” ಎಂದು ಚಿಕ್ಕಣ್ಣ ಹೆಡ್ ಮಾಸ್ತರರ ಮಾತಿನ ಹೊಲಬನ್ನರಿತು ನುಡಿದ.

“ಇರಲಿ, ಈಗ ಬೇಗನೆ ಇಲ್ಲಿಂದ ಅವನನ್ನು ಹೊರಗೆ ಹಾಕಿ ಬಿಡಿರಿ…. ಎಲ್ಲರಿಗೂ ಉಪದ್ರವವಾದೀತು….ನೀವು ಹೊಸಬರು! ಇನ್ನೂ ನಿಮಗೆ ಈ ಊರ ಸ್ಥಿತಿ ಗೊತ್ತಿಲ್ಲ; ಈ ಊರ ಜನ ಬೇರೆ; ಒಬ್ಬರ ಬೆನ್ನು ಒಬ್ಬರಿಗೆ ಕಾಣಿಸದು. ಈಗ ನಿಮ್ಮ ನೌಕರಿ ಪ್ರಾರಂಭವಾಗಿದೆ… ಹೋಗಿರಿ! ಹತ್ತು ಹದಿನೈದು ನಿಮಿಷಗಳಲ್ಲಿ ಎಲ್ಲಿಯಾದರೂ ಕಳಿಸಿಕೊಟ್ಟು ಬನ್ನಿರಿ. ಅವರು ನಮ್ಮ ಊರಲ್ಲಿಯೇ ಇರುವುದು ಬೇಡ….” ಎಂದು ಹೇಳಿ ಶಾಲೆಯಲ್ಲಿ ಹೋಗಿ ಬಿಟ್ಟರು.

ಚಿಕ್ಕಣ್ಣ ತಿರುಗಿ ಶಾಲೆಯ ಮೆಟ್ಟಿಲುಗಳನ್ನು ಇಳಿಯುತ್ತಲಿದ್ದ, ಮನೆಗೆ ಹೋಗಲೆಂದು. ಅಷ್ಟರಲ್ಲಿ ಮರು ನಾಲ್ಕು ಜನ ಮಿಲಿಟರಿ ಸೀಪಾಯಿಗಳು ಕುಳಿತ ಬಂಡಿಯೊಂದು ಶಾಲೆಯ ಮುಂದಿನಿ೦ದಲೇ ಹಾಯ್ದು ಹೋಯಿತು. ಚಿಕ್ಕಣ್ಣ ತುಂಬ ಹೆದರಿದ. ಆದರೆ ಅದನ್ನಾವುದನ್ನೂ ತೋರ ಗೊಡದೆ, ಗಂಭೀರವಾಗಿ ತಿರುಗಿ ಶಾಲೆಯಲ್ಲಿ ಹೋದ. ತನ್ನ ವರ್ಗದ ಹುಡಗರನ್ನುದ್ದೇಶಿಸಿ “ನೋಡಿಕೊಳ್ಳಿರಿ; ಈಗ ಮೂರನೆಯ ಪಾಠ ಓದಿಸಿಕೊಳ್ಳುತ್ತೇನೆ….” ಎಂದು ಒದರಿ ಹೇಳಿದ. ಆಗ ಅವನ ಧ್ವನಿಯು ನಡುಗದೆ ಇರಲಿಲ್ಲ. ಅದಕ್ಕೆ ಮತ್ತೊಂದು ಬಂಡಿಯು ಮಿಲಿಟರಿ ಸೀಪಾಯಿಗಳಿಂದ ತುಂಬಿ ಶಾಲೆಯ ಮುಂದಿನಿಂದ ಹೋದುದು ಕಾರಣವಾಗಿರಬೇಕು. ಚಿಕ್ಕಣ್ಣ ಕೂಡಲೆ ಹೊರ ಬಿದ್ದು ಮನೆಯ ಕಡೆಗೆ ನಡೆದ. ಸ್ವಲ್ಪ ದೂರ ಹೋಗಿ ಹೊರಳಿ ನೋಡಿದ. ದೂರದಲ್ಲಿ ಆ ಮಿಲಿಟರಿ ಸೀಪಾಯಿ ಮುಂಜಾನೆ ಊರಹೊರಗೆ ಕಂಡವನು ತನ್ನ ಜಾಡನ್ನೇ ಹಿಡಿದು ಬರುತ್ತಿರುವಂತೆ ಭಾಸವಾಯಿತವನಿಗೆ. ಊರ ಹೊರಗೆ ಹೊನ್ನೂರ ಹಾದಿಯಿಂದ ನಾವು ಮೂವರೂ ಕೂಡಿ ಬರುವುದನ್ನು ಈತ ಕಂಡನೇನೋ!– ಎಂಬ ಶಂಕೆಯಿಂದ, ಚಿಕ್ಕಣ್ಣ ಮನೆಗೆ ಹೋಗಲಿಚ್ಚಿಸದೆ ಹೊರಟ.

“ಶಾಂತೇಶ, ಸದ್ಯ ನೀವು ಇಲ್ಲಿಂದ ಹೊರಡುವುದು ಸುರಕ್ಷಿತ….” ಎಂದು ಮನೆಯ ಮೆಟ್ಟುಗಲ್ಲನ್ನೇರುತ್ತ ಚಿಕ್ಕಣ್ಣ ಹೇಳಿದ. ಮತ್ತು ಸ್ವಲ್ಪ ಅತ್ತಿತ್ತ ನಿರೀಕ್ಷಿಸಿ, ಮನೆಯ ಒಳಗೆ ಹೋಗಿ ಊರಲ್ಲಿ ಏನೋ ಮಿಲಿಟರಿ ಜನರ ಓಡಾಟ ಕಾಣುತ್ತದೆ…. ಆದಷ್ಟು ಬೇಗ ಇಲ್ಲಿಂದ ಸಂಸ್ಥಾನ ಸೀಮೆಯ ಚಿಕ್ಕೂರಿಗೆ ನಡೆಯಿರಿ. ಇಲ್ಲಿಂದ ಅದು ಒಂದೇ ಮೈಲಿನಮೇಲಿದೆ. ಶಾಲೆ ಬಿಟ್ಟ ಕೂಡಲೆ ಅಲ್ಲೇ ಬಂದು ನಿಮ್ಮನ್ನು ಕಾಣುವೆ…. ಮಧ್ಯಾನದಲ್ಲಿ ನಮ್ಮ
ಶಾಲೆಗೂ ಬಿಡುವು. ಮುಂದಿನದನ್ನು ಆ ಮೇಲೆ ನಿರ್ಧರಿಸೋಣ!”

ಶಾಂತೇಶನ ಮುಖವು ಬಾಡಿತು. ಅವನ ಮೇಲೆ ಇಂತಹ ಪ್ರಸಂಗ ಬಂದುದು ಇದೇ ಮೊದಲನೆಯ ಸಾರೆ. ಸಿರಿವಂತರ ಮಗ, ಸುಖದಲ್ಲ ತಿಂದುಂಡು ಬೆಳೆದವ. ಮನದೊಳಗೆ `ಎಲ್ಲಿ ಹೋದಲ್ಲಿ ಮಿಲಿಟರಿ ಹೀಗೆ ಬೆನ್ನಟ್ಟಿದರೆ ಅಡಗಿ ತಿರುಗುವುದು ಎಷ್ಟು ದಿನ….? ಮನೆಯ ಜನರಾದರೂ ಅನುಕೂಲರಿದಾರೆಯೆ? ಅದೂ ಇಲ್ಲ. ಒಮ್ಮೆಲೇ ಸತಾಗ್ರಹವೆಂದು ಏನೋ ಕಾರ್ಯಪ್ರವೃತ್ತರಾದೆವು…. ಸಂಪೂರ್ಣ ವಿಚಾರ ಮಾಡಲಿಲ್ಲ…. ಮುಂದಿನ ಕಾರ್ಯಕ್ರಮವೇನು? ಅತ್ತ ಯುದ್ಧದಲ್ಲಿ ಮಿತ್ರಪಕ್ಷದ ಸ್ಥಿತಿ ಹೇಗಿದೆಯೋ? ಅವರ ಸ್ಥಿತಿಗತಿಗಳ ಮೇಲೆಯೇ ನಮ್ಮ ಜನತೆಯ ಏರಿಳಿತಗಳು ಅವಲಂಬಿಸಿದಂತೆ ಇವೆ.’ ಎಂದು ಮೊದಲಾದ ವಿಚಾರಗಳ ಗೊಂದಲದಲ್ಲಿ ಬಿದ್ದು:

“ನೀವು ಯಾವಾಗ ಬರುವಿರಿ?” ಎಂದು ಕೇಳುತ್ತ ಸಾಶಂಕ ದೃಷ್ಟಿಯಿಂದ ಚಿಕ್ಕಣ್ಣನ ಕಡೆಗೆ ನೋಡಿದ ಶಾಂತೇಶ.

“ಶಾಲೆ ಬಿಟ್ಟ ಕೂಡಲೆ ಬರುವೆ. ಅಲ್ಲಿಯವರೆಗೆ ಇಲ್ಲಿಯ ಒಂದಿಬ್ಬರು ಗೆಳೆಯರನ್ನು ಕೇಳಿಕೊಳ್ಳುವೆ, ಊರಲ್ಲಿಯ ನಿಜವಾದ ಪರಿಸ್ಥಿತಿ ಹೇಗೆಂಬುದನ್ನು. ಸದ್ಯಕ್ಕೆ ನೀವು ಹೊರಡಿರಿ!” ಎಂದು ಇಬ್ಬರನ್ನು ಕಳುಹಿಸಿ ಚಿಕ್ಕಣ್ಣ ಶಾಲೆಯ ಕಡೆಗೆ ನಡೆದ. ಮುಖದಲ್ಲಿ ಉದ್ವೇಗ-ಭಯಗಳು ಒಡೆದು ತೋರುತ್ತಿದ್ದುವು. ಚಿಕ್ಕಣ್ಣ ವಿಚಾರಗಳನ್ನು ಬೇರೆ ಕಡೆಗೆ ಹೊರಳಿಸಲು ಯತ್ನಿಸಿ, ಮುಖದ ಮೇಲೆ ಸ್ವಾಭಾವಿಕ ಚರ್ಚೆಯನ್ನು ತರುವ ಪ್ರಯತ್ನದಲ್ಲಿದ್ದು, ಚಾವಡಿಯ ಮುಂದಿನಿಂದ ಹಾಯ್ದು ನಡೆದಿದ್ದ. ಚಾವಡಿಯಲ್ಲಿ ಮಿಲಿಟರಿಯವರು ಯಾರೂ ಇರಲಿಲ್ಲ. ಪಂತರೊಬ್ಬರೇ ಕುಳಿತಿದ್ದರು.

“ಇಲ್ಲಿತನ ಬಂದು ಹೋಗರೀ ಮಾಸ್ತರ” ಎಂದು ಪಂತರು ಗಂಭೀರವಾಗಿಯೇ ಚಿಕ್ಕಣ್ಣನನ್ನು ಕರೆದರು.

ಚಿಕ್ಕಣ್ಣ ಸ್ವಲ್ಪ ಸಚಿ೦ತ ಮುದ್ರೆಯಿಂದ ಚಾವಡಿಯ ಕಡೆಗೆ ಹೋಗುತ್ತಲೇ ಶಾಲೆಗೆ ಹೋಗಲು ವೇಳೆ ಆಗ್ತದೆ, ಹೋಗತೇನೆ!” ಎಂದ.

ಪಂತರು “ನಿಮ್ಮ ಕಡೆಗೇ ಸ್ವಲ್ಪ ಕೆಲಸ ಆದ ಬರ್ರಿ!” ಎಂದು ಹಾಸು ಗಂಬಳಿಯ ಮೇಲೆ ತೀರ ಸಮೀಪದಲ್ಲಿ ಕೂಡಲು ಹೇಳಿದರು. ಚಿಕ್ಕಣ್ಣ ಕುಳಿತ ಮೇಲೆ ಪಂತರು ಮೆಲ್ಲಗಿನ ದನಿಯಲ್ಲಿ ಮನೆಯೊಳಗೆ ಏನಾದರೂ ಕಾಂಗ್ರೆಸಿಗೆ ಸಂಬಂಧಿಸಿದ ಪುಸ್ತಕ… ಕಾಗದ ಇದ್ದರ ಎಲ್ಲ್ಯಾದರೂ ಬೇರೆ ಕಡೆಗೆ ತೆಗೆದಿಡಿರಿ…. ಇ೦ದು ನಾಳೆ ಇಷ್ಟರೊಳಗೆ ಮಿಲಿಟರಿ ಬರೋದದ ಅ೦ತ….” ಎ೦ದರು.

ಚಿಕ್ಕಣ್ಣನ ಮನಸ್ಸು ಮತ್ತೂ ಅಳುಕಿತು. ಕುಳಿತಲ್ಲಿಯೆ ಕೈ ಕಾಲುಗಳು ತಣ್ಣಗಾದುವು. ಅಲ್ಲಿಂದ ಎದ್ದು ಹೋಗುವ ಶಕ್ತಿಯೂ ಇಲ್ಲದಂತಾಯಿತವನಿಗೆ. ಮನಸ್ಸು ಇವರು ನನಗೇ ಕರೆದು ಹೇಳಲು ಕಾರಣವೇನು? ನನ್ನ ಮನೆಯನ್ನೇ ತಪಾಸಿಸಲು ಮಿಲಿಟರಿ ಬರುವುದಿದೆಯೋ? ಬಂದಿದೆಯೋ ಎನೋ! ನನ್ನ ಹೆಸರು- ನನಗೂ ಶಾಂತೇಶನಿಗೂ ಗೆಳೆತನವಿದ್ದುದು, ಅವರಿಗೆ ಗೊತ್ತಾಗಿದ್ದರೆ…. ನಮ್ಮ ಮನೆಯಲ್ಲಿಯೂ…. ಮಳ್ಳಮುದುಕಿ…. ಇಂತಹದೇನೂ ಅವಳಿಗೆ ಗೊತ್ತಿಲ್ಲ….. ಯಾರಾದರೂ ಸ್ವಲ್ಪ ಬೆದರಿಸಿ ಕೇಳಿದರೆ…. ಶಾಂತೇಶ ಬಂದಿದ್ದ, ಎರಡು ದಿನ ಇದ್ದ ಎಂದು ಹೇಳಿ ಬಿಡತಕ್ಕವಳು! ಆ ಮೇಲೆ ನನ್ನ ಗತಿಯೇನು?’ ಎಂದು ವಿಚಾರಿಸುತ್ತಲೇ…. “ಈ ಹೊತ್ತೇ ನಸುಕಿನಲ್ಲಿ ಯಾರೋ ಬಂದಂತೆ ಕಾಣುತ್ತದಲ್ಲ!” ಎಂದು ಕೇಳಿ ತನ್ನ ಸಂಶಯವನ್ನು – ತಾನು ಕಂಡದನ್ನು ಪ್ರಮಾಣಿಸಿ ನೋಡಲು ಚಿಕ್ಕಣ್ಣ ಯತ್ನಿಸಿದ ದನಿ, ನಡುಗಗೊಡಬಾರದೆಂದರೂ ಕೊಂಚ ನಡುಗದೆ ಇರಲಿಲ್ಲ.

“ಇದ್ದರೂ ಇರಬಹುದು! ಗೌಡರು ನಮಗೆ ಏನೂ ತಿಳಿಸುವುದಿಲ್ಲ!” ಎಂದರು ಪಂತರು. ಪಂತರ ಮಾತಿನಿಂದ ಚಿಕ್ಕಣ್ಣನ ಮನಸ್ಸು ಮತ್ತೂ ಅಲ್ಲೋಲಕಲ್ಲೋಲವಾಯಿತು. ಮೈಯೆಲ್ಲ ಬೆವರೊಡೆಯಿತು. ಆದರೂ ಮೆಲ್ಲನೆ ಏಳುತ್ತ “ನಮ್ಮ ಮನೆಯಲ್ಲಿ ಅಂತಹ ಯಾವ ಪುಸ್ತಕಗಳೂ ಇಲ್ಲ…!” ಎಂದು ಹೇಳಿ ಹೊರಡಲನುವಾದನು.

“ನಾ ಹೇಳಿದೆನೆಂದು ಯಾರ ಮುಂದೆಯೂ ಹೇಳಬೇಡಿ ಮತ್ತೆ!” ಎ೦ದರು ಪಂತರು. ತಮ್ಮ ಅಂಜಿಕೆಯನ್ನು ಪ್ರದರ್ಶಿಸಿ, ಹೆದರಿದವನ ಕಾಲಲ್ಲಿ ಹಾವನ್ನು ಬಿಟ್ಟರು.

“ಇಲ್ಲ.” ಎಂದು ಚಿಕ್ಕಣ್ಣ ಶಾಲೆಯತ್ತ ಸಾಗಿದ. ಕ್ಲಾಸಿನಲ್ಲಿ ವಿಷಯ ಸಾಗಿಸುವಷ್ಟು ಅವನ ಮನಸ್ಸು ಸ್ಥಿರವಾಗಲಿಲ್ಲ. ಕುಳಿತಲ್ಲಿಯೇ ತಲೆಯಲ್ಲಿ ಏನೇನೋ ವಿಚಾರಗಳು ಬರತೊಡಗಿದವು. ನನ್ನ ಮದುವೆ ನಿಶ್ಚಿತವಾಗಿದೆ…. ಇನ್ನೊಂದು ತಿಂಗಳಲ್ಲಿ ಮದುವೆ….ಸುತ್ತಲೂ ಭಾರತ ಸಂರಕ್ಷಣ ಕಾಯಿದೆಯಂತೆ ಸಂಶಯ ಬಂದ ಜನರನ್ನು ಹಿಡಿಯುತ್ತಲಿದ್ದಾರೆ….! ನನ್ನನ್ನು ಹಿಡಿದರೆ? ಹಿಡಿದರೂ ಹೋಗಲು ಅಡ್ಡಿಯಿಲ್ಲ! ಹೋಗಲು ತಕ್ಕಂತೆ ದೇಶಕಾರ್ಯವನ್ನಾದರೂ ನಾನು ಮುಂಚಿತ ಮಾಡಿರಬೇಕಿಲ್ಲ…; ಅತ್ತ ಅ೦ತಹ ದೇಶ ಕಾರ್ಯವನ್ನು ಮಾಡಿಲ್ಲ ಇತ್ತ ಮದುವೆಯೂ ಇಲ್ಲ ನಿಷ್ಕಾರಣವಾಗಿ ಸೆರೆಮನೆವಾಸ. ಮನೆಯವರಿಗೆ ಸಂಕಟ! ನಾ ಮೊದಲೇ ಬಡವ! ಮದುವೆ ಇಷ್ಟಕ್ಕೇ ನಿಂತಿತು. ಸೆರೆಮನೆ ಸೇರಿದ ಬಡ ಹುಡುಗನಿಗೆ ಆ ಮೇಲೆ ಇವರು ಹೆಣ್ಣು ಕೊಡುವರೋ ಇಲ್ಲವೊ? ಹೀಗಾದರೆ ಮುಪ್ಪಿನ ತಂದೆ ತಾಯಂದಿರು ಎಷ್ಟು ನೊ೦ದು ಕೊ೦ಡಾರು? ಈಗ ಮದುವೆಯ ಸಿದ್ಧತೆ ಮಾಡಬೇಕೋ… ಮಾಡಬಾರದೋ….. ಏನು ಸದ್ಯಕ್ಕೆ ನಿಲ್ಲಿಸಿಬಿಡಬೇಕೋ….? ಸಾಮಾನು ಸಿದ್ಧಗೊಳಿಸಬೇಡಿರೆಂದು….ಮನೆಯವರಿಗೆ ಹೇಗೆ ಹೇಳುವುದು…. ನನ್ನನ್ನು ಬಂಧಿಸುವರೆಂಬುದಾದರೂ ನಿಶ್ಚಿತವೇ? ಒಂದು ವೇಳೆ ನಿಶ್ಚಿತವಾದರೆ ಹಿರಿಯರು ಎಷ್ಟು ನೊಂದುಕೊಂಡಾರು? ಒಬ್ಬನೇ ಒಬ್ಬ ಮಗನ ಮದುವೆ ಮಾಡುವೆನೆಂದು ಉಬ್ಬಿನಲ್ಲಿದ್ದಾರೆ! ಬಡವನ ಮದುವೆಯ ಸನ್ನಾಹವೆಲ್ಲ ಆದ ಮೇಲೆ ಒಮ್ಮೆಲೇ ಹಿಡಿದುಬಿಟ್ಟರೆ….? ಎಂದು ಮೊದಲಾಗಿ ತನ್ನ ವಿಚಾರದಲ್ಲಿರುವಾಗಲೇ ಶಾಲೆ ಬಿಡುವ ಸೂಚನೆಯ ಗಂಟೆಯಾಯಿತು.

ಅದೊಂದು ಜೋಳದ ಹೊಲದೊಳಗಿನ ಬೇವಿನ ಮರ. ಅದರ ಸೂತ್ತಲೂ ಚೆನ್ನಾಗಿ ಜೋಳದ ನಿಲುವು ಇದೆ. ಆ ಗಿಡದ ನೆರಳಿನಲ್ಲಿ ಯಾರು ಕುಳಿತರೂ ಹಾದಿಯಿಂದ ಹೋಗುವವರಿಗೆ ಕಾಣುವಂತಿರಲಿಲ್ಲ. ಅಲ್ಲಿ ಕುಳಿತವರಿಗೆ ಮಾತ್ರ…. ದಾರಿಯಿಂದ ಯಾರು ಹೋದರೂ ಸ್ವಲ್ಪ ತಿಳಿಯುವಂತಿತ್ತು. ಅಂತಹ ಸ್ಥಳದಲ್ಲಿ ಕುಳಿತು ಚಿಕ್ಕಣ್ಣ, ಶಾಂತೇಶ, ರಾಮ, ಮೂವರೂ ಊಟ ಮಾಡಲು ಸಿದ್ಧರಾಗಿದ್ದರು.

“ಮುಂದಿನ ಕಾರ್ಯಕ್ರಮವೇನು?” ಚಿಕ್ಕಣ್ಣ ರೊಟ್ಟಿಯಗಂಟನ್ನು ಬಿಚ್ಚುತ್ತ ಕೇಳಿದ. “ವಿಜಾಪುರ ಜಿಲ್ಲೆಯಲ್ಲಿ ಒಂದು ಹಳ್ಳಿಯೊಳಗೆ ನಮ್ಮ ಆಪ್ತರಿದ್ದಾರೆ…. ಅಲ್ಲಿ ಹೋಗಿ ಕೆಲವು ದಿನ ನಿಲ್ಲುವುದು ಒಳಿತೆಂದು ನನಗೆ ತೋರುವುದು, ನಾನು ಕರೆದುಕೊಂಡು ಹೋಗಿ ಅವರನ್ನು ಇಟ್ಟು ಬರುವೆ…” ಎಂದು ರಾಮ ಶಾಂತೇಶನ ಮುಖದ ಕಡೆಗೆ ನೋಡುತ್ತ ಹೇಳಿದ.

ಶಾಂತೇಶ ಏನೋ ವಿಚಾರದಲ್ಲಿರುವಂತೆ ತೋರುತ್ತಿದ್ದಿತು. ಮೂವರ ಮೂರು ರೊಟ್ಟಿಗಳನ್ನು ಕೈಯಲ್ಲಿ ಹಿಡಿದು ತಿನ್ನತೊಡಗಿದರು. ಎಲ್ಲರೂ ಊಟ ಮಾಡುತಿದ್ದರಾದರೂ ಯಾರ ಲಕ್ಷವೂ ಸಂಪೂರ್ಣವಾಗಿ ಊಟದ ಕಡೆಗೆ ಇದ್ದಂತಿರಲಿಲ್ಲ. ಅಲ್ಲಿಂದ ಸಮಾಜದಲ್ಲಿಯೇ ಇದ್ದ ಹಾದಿಯಿಂದ ಯಾರಾದರೂ ಹಾಯ್ದು ಹೋದಂತಾದರೂ ಸಾಕು, ಅತ್ತ ಲಕ್ಷಪೂರ್ವಕವಾಗಿ ನಿರೀಕ್ಷಿಸುವರು. ಒಮ್ಮೆ ಅಕಸ್ಮಾತ್ತಾಗಿ ಒಂದು ಮೇಲಿನ ಹೆಂಟಿಯು ಬೀಳಲು, ಚಿಕ್ಕಣ್ಣ ಚಟ್ಟನೆ ಎದ್ದು ನಿಂತು ಬೆದರುಗಣ್ಣುಗಳಿಂದ ಸುತ್ತಲೂ ನಿರೀಕ್ಷಿಸತೊಡಗಿದ…. ಶಾಂತೇಶ ನಗುತ್ತ ಗಿಡದ ಮೇಲಿನ ಕಾಗೆಯು ಗೂಡಿನಿಂದ ಬಿತ್ತು’ ಎಂದು ಹೇಳಲು ಅವನ ಮನಸ್ಸಿಗೆ ಸ್ವಲ್ಪ ಸಮಾಧಾನವಾಯಿತು. ಒಮ್ಮೆ ಸ್ವಲ್ಪ ಗಾಳಿ ಬೀಸಿ ಜೋಳದ ದಂಟುಗಳ ಸಪ್ಪಳವಾಗಲು, ಮೂವರೂ ಯಾರೋ ಬಂದರೆಂದೇ ಭಾವಿಸಿದರು. ಹೀಗೆ ಅಸ್ಥಿರ ಮನಸ್ಸಿನಲ್ಲಿಯೆ ಊಟದ ಶಾಸ್ತ್ರವನ್ನೊಮ್ಮೆ ಮುಗಿಸಿದರು.

“ಎಲ್ಲಿಯಾದರೂ ದೂರ ಹೋಗಿ ಸುಮ್ಮನೆ ಕುಳಿತುಕೊಳ್ಳುವುದರಲ್ಲಿ ಅರ್ಥವಿಲ್ಲ. ಮನೆಯಿಂದ ಹೊರಬಿದ್ದ ಮೇಲೆ ಅದರಂತೆ ಏನಾದರೂ ದೇಶ ಕಾರ್ಯ ಮಾಡಲಿಕ್ಕೆ ಬೇಕು. ಜೊತೆಯವರು `ನೀವು ಹಿಂದೆ ಇರಬೇಕು…. ಎಂದರೆ ಕೆಲಸ ಮುಂದೆ ಸಾಗುವುದು….’ ಎಂದು ಹೇಳಿ, ನನ್ನನ್ನು ಬೇರೆಡೆಗೆ ಕಳಿಸಿಕೊಟ್ಟ ಉದ್ದೇಶವಾದರೂ ಏನು….?” ಎಂದು ಶಾಂತೇಶ ಕೈದೊಳೆಯುತ್ತ ಹೇಳಿದ.

“ನೀನೆನ್ನುವುದು ನಿಜವಾದುದೇ. ಆದರೆ ಕಾರ್ಯದ ಸ್ವರೂಪ, ಅದನ್ನು ಮಾಡುವ ರೀತಿ-ನೀತಿಗಳ ಸ್ಪಷ್ಟ ಜ್ಞಾನವಿರಬೇಕು…. ಮೇಲಾಗಿ ದೃಢನಿಶ್ಚಯವೂ ಬೇಕು. ಬೆಂಬಲಕ್ಕೆ ಜನತೆ ಬೇಕು. ಸ್ವತಃ ರಾಜದಂಡನೆಗೂ ಸೆರೆಮನೆ ವಾಸಕ್ಕೂ ಸಿದ್ಧನಿರಲಿಕ್ಕೆ ಬೇಕು…. ಪ್ರಸಂಗ ಬಂದರೆ ದೇಶಕ್ಕಾಗಿ ಆತ್ಮವನ್ನು ಬಲಿ ಕೊಡಲೂ ಹಿಂದೆ ಮುಂದೆ ನೋಡಲಾಗದು ಈಗ ನೀವು ಭಾವಿಸಿರುವಷ್ಟು ಈ ಕಾರ್ಯ ಸುಲಭವಲ್ಲ. ಕೂಡಲೆ ಕೊನೆಗೊಳ್ಳುವುದೂ ಅಲ್ಲ. ಸ್ವಾತಂತ್ರ್ಯ ಬಾಗಿಲಲ್ಲಿ ಕಾಯ್ದು ನಿಂತಿಲ್ಲ. ಈಗಲೇ ಸಿಕ್ಕೇ ತೀರುವುದೆಂದು ನಂಬಿ ಕಾರ್ಯ ಮಾಡಿ, ಆ ಮೇಲೆ ನಿರಾಶೆ ಗೊಳ್ಳುವುದರಲ್ಲಿ ಅರ್ಥವಿಲ್ಲ. ಜನತೆಯನ್ನು ಸ್ವಾತಂತ್ರದ ದಾರಿಯಲ್ಲಿ ಒಂದು ಹೆಜ್ಜೆ ಮುಂದಿಡಿಸುವುದಿಷ್ಟೇ…. ಇಂದಿನ ನಿಮ್ಮ ಹೊಣೆ…. ಆದುದರಿಂದ ಪೂರ್ಣ ವಿಚಾರ ಮಾಡಿ ಮುನ್ನುಗುವುದು ಒಳಿತು” ಎಂದು ಚಿಕ್ಕಣ್ಣ ತನ್ನ ಎಚ್ಚರಿಕೆಯನ್ನು ಸೂಚಿಸಿದ.

“ಜನತೆಯ ನೆರವು ಬೇಕಾದಷ್ಟಿದೆ. ಈ ಒಂದೆರಡು ದಿವಸಗಳಲ್ಲಿ ಊರಲ್ಲಿ ಯಾರು ಯಾರನ್ನು ಹಿಡಿದರೋ ಇನ್ನೂ ಗೊತ್ತಾಗಿಲ್ಲ. ಊರ ಕಡೆಯ ಸಮಾಚಾರ ತಿಳಿದುಕೊಂಡು ಮುಂದಿನ ಹೆಜ್ಜೆ ಪಡಬೇಕಾಗಿದೆ. ಈ ಹೊತ್ತು ಹೋಗಿ ನಮ್ಮ ನೆರೆಯ ಊರಲ್ಲಿ ಒ೦ದು ಸಾರ್ವಜನಿಕ ಸಭೆಯನ್ನು ಮಾಡಬೇಕು. ಮಿಲಿಟರಿಯವರು ಈ ಭಾಗಕ್ಕೆ ಬಂದು ಹುಡುಕು ವಷ್ಟರಲ್ಲಿ ಆ ದಿಶೆಗೆ ಕಾರ್ಯ ಮಾಡಿ ಅಧಿಕಾರಿಗಳಿಗೆ ಹುಚ್ಚು ಹಿಡಿಸಬೇಕು.” ಎಂದ ಚಿಕ್ಕಣ್ಣ ಹುರುಪಿನಿಂದ.

“ನೀವು ಎಲ್ಲಿ ಹೋಗಿ ಕಾರ್ಯ ಮಾಡಬಯಸಿದರೂ ಆ ಹಳ್ಳಿಯ ಜನರ ಬೆಂಬಲ ನಿಮಗೆ ಬೇಕು…. ಈ ದಿನಗಳಲ್ಲಿ ಒಮ್ಮೆಲೇ ಯಾರನ್ನೂ ನಂಬುವಂತಿಲ್ಲ. ಸುಮ್ಮನೆ ಹೋಗಿ ಸಾರ್ವಜನಿಕ ಸಭೆ ಮಾಡುವೆನೆಂದರೆ ಸಾಧ್ಯವೂ ಇಲ್ಲ, ಉಪಯೋಗವೂ ಇಲ್ಲ. ಒಳಗಿಂದೊಳಗೇ ಜನತೆಯ ಮನಸ್ಸನ್ನು ಸಿದ್ಧಗೊಳಿಸಲುಬೇಕು. ದೇಶದಲ್ಲಿ ಕಾರ್ಯ ಮಾಡುವ ಹಿರಿಯ ಮುಖಂಡರಾದರೂ ಸಿಗುವರೇನೋ ನೋಡಿ, ಅವರ ಹೆಜ್ಜೆ ತುಳಿಯಬೇಕು…. ಇಲ್ಲವಾದರೆ ಸಂಘಟನೆಯಿಂದ ಕೆಲಸವೂ ಆಗಲಿಕ್ಕಿಲ್ಲ…. ಕೂಡಲೆ ಜೇಲನ್ನೂ ಸೇರಬೇಕಾದೀತು….”

“ಬಿಡಿರಿ; ಹೀಗೆ ಎಂದಾದರೂ ಸರಕಾರದವರಿಗೆ ನಾವು ಸಿಕ್ಕಬಹುದೇ? ನಮ್ಮೂರ ನೆರೆಯ ಊರುಗಳಲ್ಲೆಲ್ಲ ಕಾರ್ಯಕರ್ತರಿದ್ದಾರೆ…. ಹಿಂದೆ ಚರಖಾ ಸಂಘಗಳನ್ನು ಸ್ಥಾಪಿಸಲೆಂದೂ, ಖಾದಿಯ ಮಾರಾಟಕ್ಕೆಂದೂ ಅಡ್ಡಾಡಿದಾಗಲೂ ಹಲವರನ್ನು ಕಂಡು ಪರಿಚಯ ಮಾಡಿಕೊಂಡಿದ್ದೇನೆ….” ನಡುವೆಯೆ ನುಡಿದ ಶಾಂತೇಶ.

“ಹಾಗಾದರೆ ಅಡ್ಡಿಯಿಲ್ಲ. ಇಂದು ಸಂಜೆಗೆ ಆ ಭಾಗಕ್ಕೇನೆ ಹೋಗಬಹುದು…….” ಎಂದು ಏನೋ ಧೇನಿಸುತ್ತ ಚಿಕ್ಕಣ್ಣ ಹೇಳಿದೆ.

“ಅದೆಲ್ಲ ಆಯಿತು; ಹೋಗಲಿಕ್ಕೆ ದಾರಿಯೊಂದು ಬೇಕಲ್ಲ….?” ಅತ್ತ ಹೋಗಲಿಕ್ಕೆ ಇದ್ದುದೊಂದೇ ದಾರಿ, ಹಿರಿಯೂರಿನ ಮೇಲಿಂದ ಹೋದುದು. ಆ ದಾರಿಯಲ್ಲಿಯೆ ಮಿಲಿಟರಿ ಓಡಾಟವಿದೆ. ಅಲ್ಲದೆ ನಮ್ಮ ಸುಳುಹಿನ ಮೇಲೆಯೇ ಇದ್ದಾರಂತೀರಲ್ಲ….?”

“ಅಹುದು; ಮಿಲಿಟರಿಯವರೇ ಇಲ್ಲೆಲ್ಲ ಸುತ್ತಾಡುತ್ತಿರುವರು…. ನಾನು ಮುಂಜಾನೆ ನಿಮ್ಮನ್ನು ಸಂಸ್ಥಾನದ ಹದ್ದಿ ಯ ಚಿಕ್ಕೂರಿಗೆ ಹೋಗಿರೆಂದು ಕಳುಹಿದೆ; ಅದು ನನ್ನ ತಪ್ಪು ಕಲ್ಪನೆ. ಎಲ್ಲಿ ಹೋದರೂ ಅವರು ಹಿಡಿಯುವರಂತೆ…. ನೀವು ಊರಲ್ಲಿ ಹೋಗದೆ ಇಲ್ಲಿ ದಾರಿಗೆ ಬಂದು ನಿಂತುದು ಒಳ್ಳೆಯದಾಯಿತು…. ಈಗ ನೀವು ಬೆಳೆಗುಂಟ ನಮ್ಮೂರ ಪಶ್ಚಿಮಕ್ಕಿರುವ ಕೆರೆಯ ಓರೆಗೆ ಬನ್ನಿ; ನಾನು ನಿಮ್ಮ ಸಾಮಾನುಗಳನ್ನು ಅಲ್ಲಿಗೆ ತಂದು ಮುಟ್ಟಿಸುವೆ. ಮಿಲಿಟರಿಯು ಈಗಾಗಲೆ ಊರಲ್ಲಿ ಬಂದು ಬಿಟ್ಟಂತಿದೆ” ಎಂದು ಚಿಕ್ಕಣ್ಣ ಹೇಳಿದ.

“ಹಾಗೆ ಮಾಡಿರಿ; ಆದರೆ ನಮ್ಮ ಸಾಮಾನುಗಳನ್ನು ಸ್ವಲ್ಪ ಎಚ್ಚರಿಕೆಯಿಂದಲೇ ತರಬೇಕು…. ಅದರಲ್ಲಿ ಕೆಲವು ಆಕ್ಷೇಪಾರ್ಹ ಕಾಗದಗಳಿವೆ…. ಅಲ್ಲದೆ – ಕ್ವಿಟ್ ಇಂಡಿಯಾ’ ದ ಒಂದು ಪ್ರತಿಯೂ ಉ೦ಟು….”

“ಇರಲಿ ನಾನೀಗ ಹೋಗುವೆ. ಆದಷ್ಟು ಎಚ್ಚರಿಕೆಯಿಂದ ತಕೊಂಡು ಬರುವೆ. ಪೋಲೀಸಿನವರೂ ನನ್ನ ನಡೆನುಡಿಗಳ ಮೇಲೆಯೇ ಲಕ್ಷವಿಟ್ಟಂತಿದೆ. ಬರುವಾಗ ಎಲ್ಲಿ ನಡೆದಿರೆಂದು ಓಲೆಕಾರನೊಬ್ಬ ಕೇಳಿದ…. ಚಿಕ್ಕೂರ ಪೋಷ್ಟ ಆಫೀಸಿನಲ್ಲಿ ಸ್ವಲ್ಪ ಕೆಲಸವಿದೆಯೆಂದು ಹೇಳಿ ಬಂದೆ…. ಬಹಳ ತಡವಾದರೆ…. ಮತ್ತೇನಾದರೂ ತರ್ಕ ಕಟ್ಟಿ ನಮ್ಮ ಮನೆ ಹೊಕ್ಕಾರು ಎಲ್ಲವೂ ತಪ್ಪಿತು. ಇನ್ನೂ ನಿಮ್ಮ ಸಾಮಾನುಗಳೆಲ್ಲ ಮನೆಯಲ್ಲಿಯೇ ಇವೆ…. ನೀವೂ ಆದಷ್ಟು ಬೇಗನೆ ಬನ್ನಿ ನಿಮಗೂ ಸಂಜೆಯಾಗುವುದು….” ಎಂದು ಚಿಕ್ಕಣ್ಣ ಹಾದಿಯ ಕಡೆಗೆ ನಡೆದ.

“ಆದಷ್ಟು ಮಿಲಿಟರಿಯ ಸುಳಿದಾಟವನ್ನು ತಿಳಿದುಕೊಂಡೇ ಬರ್ರಿ?” ಎಂದು ರಾಮು ಕಳ್ಳ ದನಿಯಿಂದ ಕೂಗಿ ಹೇಳಿದ….

ಚಿಕ್ಕಣ್ಣನು ಶಾಂತೇಶನ ಅರಿವೆ, ಕಾಗದ ಗಂಟುಗಳೆಲ್ಲವನ್ನೂ ಒಂದು ದೋತರದಲ್ಲಿ ಸುತ್ತಿ ಬಗಲಲ್ಲಿ ಹಿಡಿದುಕೊಂಡು, ಕೈಯಲ್ಲಿ ತಂಬಿಗೆ ತಕೊಂಡು ಮನೆಯಿಂದ ಹೊರಬಿದ್ದ. ಮೈ ಯಲ್ಲೊಂದು ಹಾಪ್ ಶರ್ಟು, ತಲೆಯ ಮೇಲೆ ಟೊಪ್ಪಿಗೆ ಇಲ್ಲ. ಜನಿವಾರವನ್ನು ಕಿವಿಗೆ ಹಾಕಿದ್ದ ಚಿಕ್ಕಣ್ಣನ ಈ ಸೋಗನ್ನು ಕಂಡು…. ಈತ ಧೋತರ ಒಗೆಯಲು ಕೆರೆಗೆ ನಡೆದಿದ್ದಾ ನೆಂದೇ ಯಾರೂ ಭಾವಿಸುವಂತಿತ್ತು….. ಆದರೂ ಚಿಕ್ಕಣ್ಣ ಮನೆಯಿಂದ ಹೊರಬೀಳುತ್ತಿರುವಾಗಲೇ ಒಬ್ಬ ಪೋಲೀಸನೂ ಅವರ ಮನೆಯ ಮುಂದಿನಿಂದಲೇ ಹಾಯ್ದು ಹೋದ; ಮೇಲಾಗಿ ಅವರ ಮನೆಯ ಕಡೆಗೆ ನಿರೀಕ್ಷಿಸುತ್ತ ಹೋದ ಬೇರೆ…. ಚಿಕ್ಕಣ್ಣನಿಗೂ ಹೆದರಿಕೆಯಾಯಿತು. ತನ್ನ ಮೇಲೆಯೆ ಇವರಿಗೆ ಪೂರ್ಣ ಸಂಶಯವಿದೆಯೆಂದು ಖಚಿತ. ಆದರೂ ಧೈರ್ಯದಿಂದ ಹಾಗೆಯೆ ಹೋಗಿ ಬಿಟ್ಟ, ಚಿಕ್ಕಣ್ಣ ಸ್ವಲ್ಪ ಮುಂದೆ ಹೋಗವಷ್ಟರಲ್ಲಿ ಯಾರೋ ಒಬ್ಬರು “ಯಾಕರೀ ಬಿಸಲಾಗಽ ಹೊರಬಿದ್ದಿರಿ?” ಎಂದು ಚಿಕ್ಕಣ್ಣನನ್ನು ಕೇಳಿದರು.

ಕೂಡಲೆ ಚಿಕ್ಕಣ್ಣನು “ಮುಂಜಾನೆ ಊರಿಂದ ಬಂದೆ; ಸ್ನಾನ ಮನೆಯಲ್ಲಿ ಆಯಿತು. ಧೋತರ ಒಕ್ಕೊಂಡು ಬರುವೆ….” ಎಂದು ಹೇಳಿ ಮುನ್ನಡೆದ. ಪೋಲೀಸಿನವರಿಗೂ ಅದು ಕೇಳಿಸಿತೇನೋ! ಅವನೂ ಏನನ್ನೋ ಮನದಲ್ಲಿ ಮಂಡಿಗೆ ಮಾಡಿ ಗೌಡರ ಮನೆಯೆತ್ತ ಅವಸರದಿಂದ ಸಾಗಿದ.

ಈಗಾಗಲೇ ಮಿಲಿಟರಿಯು ಚಿಕ್ಕಣ್ಣನ ಮನೆಯನ್ನು ಸುತ್ತುಗಟ್ಟಿ ಹೋಗತಕ್ಕದ್ದು, ಆದರೆ ಮಿಲಿಟರಿ ಜನರೆಲ್ಲ ನರಸೀಪುರದಿಂದ ಬರಲು ಸ್ವಲ್ಪ ವಿಲಂಬವಾಗಿದ್ದಿತು. ಯಾಕೆಂದರೆ ಮಿಲಿಟರಿ ಮೋಟಾರುಗಳಿಗೆ ಬರಲಿಕ್ಕೆ ಅನುಕೂಲವಾದ ದಾರಿಯಿರಲಿಲ್ಲ. ನಡುವೆ ಹೊಳೆಯೊಂದನ್ನು ದಾಟ್ಟ ಬೇಕಾಗಿದ್ದಿತು. ಹೀಗಿದ್ದರೂ ಮುಂಚಿತ ಬಂದ ಜನರು ಚಿಕ್ಕಣ್ಣನ ಮನೆಯ ಮೇಲೆ ಲಕ್ಷ್ಯವಿಟೇ ಇದ್ದರು.

ಚಿಕ್ಕಣ್ಣ ಊರ ಹೊರಗೆ ಸ್ವಲ್ಪ ದೂರ ಹೋಗಿದ್ದ. ಹಿಂದಿನಿಂದ ಯಾರೋ ಕೂಗಿ ಹೇಳಿದಂತಾಯಿತು.

“ಚಿಕ್ಕಣ್ಣ ನಿಮ್ಮ ಮನೆಯಲ್ಲಿ ಪೋಲೀಸಿನವರು ಹೊಕ್ಕಿರುವರು…. ಅಜ್ಜಿ ಕರೆಯುತ್ತಿರುವಳು, ನಿಮ್ಮನ್ನು!”

ಚಿಕ್ಕಣ್ಣ ಕೇಳದವನಂತೆ ಹಾಗೆಯೆ ಮುನ್ನಡೆದ. `ಯಾರೇ ಬರಲೊಲ್ಲರೇಕೆ ? ಅಜ್ಜಿಗಂತೂ ಹೆದರದಂತಿರಲು ಹೇಳಿ ಬಂದಿರುವೆ…. ಮನೆಯಲ್ಲಿ ಆಕ್ಷೇಪಾರ್ಹ ವಸ್ತುಗಳೇನೂ ಇಲ್ಲ. ಹಿಂದಿನಿಂದ ಏನೇ ಆಗಲಿ, ಈಗ ಶಾಂತೇಶನೊಬ್ಬ ಪಾರಾದನಲ್ಲ….!” ಎಂದು ಯೋಚಿಸುತ್ತಿರುವಾಗಲೇ ಗೊತ್ತಾದ ಸ್ಥಳವನ್ನು ತಲುಪಿದ ಚಿಕ್ಕಣ್ಣ.

ಅಷ್ಟರಲ್ಲಿ ಶಾಂತೇಶ, ರಾಮ ಅಲ್ಲಿ ಬಂದಿದ್ದರು. ಚಿಕ್ಕಣ್ಣ ಬರುವ ದಾರಿಯನ್ನೇ ಕಾಯುತ್ತಿದ್ದರು. ಚಿಕ್ಕಣ್ಣ ಕೆರೆಯ ಸಮೀಪದ ಮೊರಡಿಯ ಓರೆಯೊಂದರಲ್ಲಿ ಅವರಿಬ್ಬರಿಗೂ ಕುಳ್ಳಿರ ಹೇಳಿ, ತಂಬಿಗೆಯಲ್ಲಿ ತಾನು ತಂದ ಸಕ್ಕರೆ ಹಾಕಿದ ಹಾಲು ಕುಡಿಯಲು ಕೊಟ್ಟ. ಇಬ್ಬರೂ ಹಾಲು ಕುಡಿದು ಹೊರಡಲು ಸಿದ್ಧರಾದರು.

ಮುಂದಿನ ಕಾರ್ಯಕ್ರಮ ನಿಶ್ಚಯವಾದ ಮೇಲೆ ನನಗೆ ತಿಳುಹಿರಿ. ಆಗಾಗ ಕಾಗದ ಬರೆಯುತ್ತ ಇರಿ. ಸಾಧ್ಯವಿದ್ದಷ್ಟು ನಾನೂ ನೆರವಾಗುವೆ. ಪತ್ರ ಬರೆಯುವಾಗ ಹೆಸರನ್ನು ಬದಲಿಸಿ ಇಟ್ಟು ಕೊಳ್ಳಿ…. ಕವಿಗಳಂತೆ….” ಎಂದು ಮುಗುಳುನಗೆಯೊಡನೆ ಹೇಳಿ, ಚಿಕ್ಕಣ್ಣ ಇಬ್ಬರನ್ನೂ ಬೀಳ್ಕೊಟ್ಟನು. ಆಗ ಆ ಮೂವರ ಮುಖದ ಮೇಲೆ ವಿಜಯಶ್ರೀಯು ನಲಿಯುತ್ತಿದ್ದಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೪೮
Next post ಕರ್‍ಣಾಟಕ ಸೀಮೆಯಾಗೆ…

ಸಣ್ಣ ಕತೆ

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…