ಮೋಡಗಳೇ
ಎತ್ತ ಹೋದರೆಲ್ಲಿ?
ಬನ್ನಿ ಈ ನಾಡ ಪ್ರವೇಶ ಮಾಡಿ
ನೀರ ಹನಿಗಳ ಚೆಲ್ಲಿ

ಹಾತೊರೆಯುತಿಹವು
ಮೊಳಕೆಯೊಡೆಯಲು
ಕಾಳು ಕಮರುವ ಮೊದಲಲ್ಲಿ
ಮೋಡಗಳೇ ಬನ್ನಿರಿಲ್ಲಿ
ನೀರ ಹನಿಗಳ ಚೆಲ್ಲಿ

ನಮ್ಮೂರ ಹಾದು ಹೋಗುವ ಮುನ್ನ
ಎಮ್ಮ ಜೀವಕೆ ಕಳೆಯ ತನ್ನಿ
ಸಾವಿರಾರು ಕೋಟಿ ಬದುಕಲಿನ್ನು
ಹಂಬಲಿಸುತಿವೆ ನಿನ್ನಾಸರೆಯನು

ಕಾಳಿಲ್ಲದಿದ್ದರೇನುಂಟು
ಎಲ್ಲ ಬರಡು ಬಂಜು
ಆಡಾಡಿ ಚೆಲ್ಲಾಡಿ
ಬನ್ನಿ ಮೋಡಗಳೇ
ಚೆಲ್ಲಿ ನೀರ ಹನಿಗಳ

ಮುಗಿಲ ಕಡೆ ಮುಖ ಚೆಲ್ಲಿದ ಕಣ್ಣಿಗೆ
ಹಿತವ ತೋರಿ ತಂಪನ್ನೀಯಲು
ಧರೆಯೊಡಲ ಧಗೆಯಾರಿಸಲು
ಬನ್ನಿ ಮೋಡಗಳೇ
ಚೆಲ್ಲಿ ನೀರ ಹನಿಗಳ

ಏಕೆ ಈ ಮುನಿಸು?
ತೊಡಿಸಿ ಈ ಧರೆಗೆ ಹಸಿರ ಹೊನ್ನು
ಬನ್ನಿ ಮೋಡಗಳೆ
ನೀರ ಹನಿಗಳ ಸುರಿಸಿ.
*****