Home / ಲೇಖನ / ಚಲನಚಿತ್ರ / ಸಿದ್ಧಮಾದರಿಗಳಲ್ಲೇ ಸುಧಾರಣೆ ತಂದವರು

ಸಿದ್ಧಮಾದರಿಗಳಲ್ಲೇ ಸುಧಾರಣೆ ತಂದವರು

ಅಧ್ಯಾಯ ಹದಿಮೂರು

ಸಿನಿಮಾ ಮಾಧ್ಯಮವನ್ನು ಕನ್ನಡದಲ್ಲಿ ಗಂಭೀರವಾಗಿ ದುಡಿಸಿಕೊಳ್ಳಲು ಪ್ರಯತ್ನಿಸಿದವರಲ್ಲಿ ಹಾಗೂ ಅಂಥ ಪ್ರಯೋಗಗಳಿಗೆ ನಿಷ್ಠರಾಗಿಯೇ ಉಳಿದುಕೊಂಡವರಲ್ಲಿ ಎಂ.ಆರ್. ವಿಠಲ್ ಮೊದಲಿಗರು. ಇದರರ್ಥ ವಿಠಲ್‌ರವರ ಆಗಮನದವರೆಗೆ ಕನ್ನಡ ನಿರ್ಮಾಪಕ-ನಿರ್ದೇಶಕರು ಸಿನಿಮಾ ನಿರ್ಮಾಣವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲವೆಂದಲ್ಲ. ಒಂದು ಸಿದ್ಧ ಮಾದರಿಯಲ್ಲೇ ಚಲನಚಿತ್ರಗಳು ತಯಾರಾಗುತ್ತಿದ್ದ ಕಾಲದಲ್ಲಿ ಹೊಸ ಪ್ರಯೋಗಗಳ ಪ್ರಯತ್ನಗಳ ಕೊರತೆ ಎದ್ದು ಕಾಣುತ್ತಿತ್ತು. ಅಪಾರ ಬಂಡವಾಳ ಹೂಡಿಕೆ ಮತ್ತು ಲಾಭದ ದೃಷ್ಟಿಯೇ ಪ್ರಧಾನವಾಗಿದ್ದ ಚಿತ್ರ ನಿರ್ಮಾಣದಲ್ಲಿ ಸುರಕ್ಷೆಯ ಕಕ್ಷೆಯಲ್ಲೇ ಪರಿಭ್ರಮಿಸುವ ಅನಿವಾರ್ಯಕ್ಕೆ ನಿರ್ಮಾಪಕ-ನಿರ್ದೇಶಕರು ಜೋತು ಬಿದ್ದಿದ್ದರು. ಜನರನ್ನು ಸೆಳೆಯುವ ಚಿತ್ರ ನಿರ್ಮಾಣ ಸೂತ್ರವು ಅಂದಿನ ಯುಗದ ಸ್ವೀಕೃತ ನೀತಿಯಾಗಿತ್ತು. (ಈಗ ಅದಕ್ಕಿಂತ ಭಿನ್ನವಾದ ಚಿತ್ರವೇನೂ ಸಿಗದು!) ‘ಬೇಡರ ಕಣ್ಣಪ್ಪ’, ‘ಮೊದಲ ತೇದಿ’, ‘ಪ್ರೇಮದ ಪುತ್ರಿ’, ‘ಜಾತಕ ಫಲ’, ‘ಸ್ಕೂಲ್ ಮಾಸ್ಟರ್’, ‘ರಣಧೀರ ಕಂಠೀರವ’, ‘ಕಣ್ತೆರೆದು ನೋಡು’, ‘ವಿಜಯನಗರದ ವೀರಪುತ್ರ’ ಚಿತ್ರಗಳಂಥ ಪ್ರಯೋಗಗಳು ಅಲ್ಲೊಂದು ಇಲ್ಲೊಂದು ನಡೆದರೂ, ಅವುಗಳ ನಿರ್ದೇಶಕರೂ ತದನಂತರ ಮುಖ್ಯವಾಹಿನಿಯ ಸಿದ್ಧ ಸೂತ್ರಗಳಿಗೆ ಹಿಂದಿರುಗಿದರು. ಆದರೆ ಸದಭಿರುಚಿಯ ಉದ್ದೇಶದಿಂದ ಚಿತ್ರ ನಿರ್ಮಾಣಕ್ಕೆ ಇಳಿದ ನಿರ್ಮಾಪಕರು ಮತ್ತು ಅವರೊಡನೆ ನಿರ್ದೇಶಕರಾಗಿ ‘ನಂದಾದೀಪ’ ರೂಪಿಸಿದವರು ಮುಂದೆ ತಮ್ಮ ಉದ್ದೇಶಗಳಿಗೆ ನಿಷ್ಠರಾಗಿ ಕನ್ನಡ ಚಿತ್ರರಂಗವನ್ನು ಮುನ್ನಡೆಸಿದರು. ಈ ಚಿತ್ರದ ಮೂಲಕ ನಿರ್ಮಾಪಕರಾದ ವಾದಿರಾಜ್-ಜವಾಹರ್ ಜೋಡಿ ಮುಂದೆ ತಮ್ಮ ಸಂಸ್ಥೆಯ ಮೂಲಕ ಸದಭಿರುಚಿಯ ಚಿತ್ರಗಳನ್ನೇ ನೀಡಿತು. ನಿರ್ದೇಶಕ ಎಂ.ಆರ್. ವಿಠಲ್ ಕನ್ನಡ ಚಿತ್ರರಂಗದಲ್ಲಿ ತಮ್ಮ ‘ವಿಠಲ್ ಛಾಪ’ನ್ನು ಬಿಟ್ಟುಹೋದರು. ಕನ್ನಡ ಚಿತ್ರರಂಗವನ್ನು ಅಧ್ಯಯನ ಮಾಡುವವರು ಎಂ.ಆರ್. ವಿಠಲ್‌ರವರ ಕೊಡುಗೆಯನ್ನು ಕಡೆಗಣಿಸಲು ಸಾಧ್ಯವೇ ಇಲ್ಲ.

ಕನ್ನಡ ಚಿತ್ರರಂಗದ ಮುಖ್ಯವಾಹಿನಿಯ ಸಿನಿಮಾಗಳಲ್ಲಿ ಪ್ರಯೋಗಗಳನ್ನು ನಡೆಸಿದ ನಿರ್ದೇಶಕರ ಬಗ್ಗೆ ಮಾತನಾಡುವಾಗ ತಕ್ಷಣವೇ ಎನ್. ಲಕ್ಷ್ಮೀನಾರಾಯಣ್, ಪುಟ್ಟಣ್ಣ ಕಣಗಾಲ್, ಟಿ.ಎಸ್. ನಾಗಾಭರಣ ಮುಂತಾದವರ ಹೆಸರುಗಳನ್ನು ಬಳಸುತ್ತಾರೆ. ಎಂ.ಆರ್. ವಿಠಲ್‌ರವರ ನೆನಪಾಗುವುದು ಕಷ್ಟ. ಕಳೆದ ಶತಮಾನದ ಅರವತ್ತರ ದಶಕದಿಂದ ಪ್ರಜ್ಞಾಪೂರ್ವಕವಾಗಿ ವಿಭಿನ್ನ ವಸ್ತುಗಳ ಚಿತ್ರಗಳನ್ನು ನಿರ್ದೇಶಿಸಿ ಕನ್ನಡ ಚಿತ್ರರಂಗಕ್ಕೆ ಬಹುಮುಖ್ಯ ಕಾಣಿಕೆಗಳನ್ನು ಕೊಟ್ಟ ಎಂ.ಆರ್.ವಿಠಲ್ ದಕ್ಕಬೇಕಾದ ಮನ್ನಣೆಯಿಂದ ವಂಚಿತರಾದ ಸಜ್ಜನಿಕೆಯ ಮನುಷ್ಯ.

ಎಂ.ಆರ್. ವಿಠಲ್‌ರವರು ಆಗಿನ ಬಹುತೇಕ ನಿರ್ದೇಶಕರಂತೆ ರಂಗಭೂಮಿಯ ಹಿನ್ನೆಲೆಯಿಂದ ಬಂದವರಲ್ಲ. ಸುಶಿಕ್ಷಿತರು, ಒಳ್ಳೆಯ ಉದ್ಯೋಗಗಳಲ್ಲಿದ್ದವರು. ಸಿನಿಮಾ ಮಾಧ್ಯಮವನ್ನು ಗಂಭೀರವಾಗಿ ಪರಿಗಣಿಸಿ ಉತ್ತಮ ತಂತ್ರಜ್ಞರಾಗಲು ಬಯಸಿದವರು. ಸಿನಿಮಾ ಸಾಧ್ಯತೆಗಳನ್ನು ಅರಿಯಲು ಅದನ್ನೇ ಒಂದು ಪ್ರಯೋಗಶಾಲೆಯನ್ನಾಗಿ ಮಾಡಿಕೊಂಡವರು. ಕನ್ನಡ ಚಿತ್ರರಂಗವನ್ನು ಪ್ರವೇಶಿಸುವ ವೇಳೆಗೆ ಅವರ ವಯಸ್ಸು ಐವತ್ತನ್ನು ದಾಟಿತ್ತು. ಅಪಾರವಾದ ಓದು, ಅಧ್ಯಯನ ಮತ್ತು ಅನುಭವಗಳನ್ನು ಹೊತ್ತು ಅವರು ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದರು.

ಮೈಸೂರಿನಲ್ಲಿ ೧೯೦೮ ಆಗಸ್ಟ್ ೧೯ರಂದು ಜನಿಸಿದ ಮೈಸೂರು ರಾಘವೇಂದ್ರ ವಿಠಲ್ ಅವರು ಹುಟ್ಟಿದೂರಿನಲ್ಲಿಯೇ ಇಂಟರ್‌ಮೀಡಿಯೇಟ್ ಮುಗಿಸಿ, ವಿಮಾನಯಾನದಲ್ಲಿ ಎಂಜಿನಿಯರಿಂಗ್ ಶಿಕ್ಷಣ ಪಡೆಯಲು ಅಂದಿನ ಮದರಾಸಿನ ಆಂಧ್ರ ಏವಿಯೇಷನ್ ಸ್ಕೂಲ್‌ಗೆ ದಾಖಲಾದರು. ಒಂದು ವರ್ಷದ ಓದಿನ ನಂತರ ಬ್ರಿಟಿಷ್ ಸರ್ಕಾರ ಆ ಸಂಸ್ಥೆಯನ್ನು ಮುಚ್ಚಿತು. ಅನಂತರ ವಿಠಲ್‌ರವರು ಆಟೋಮೊಬೈಲ್ ಎಂಜಿನಿಯರಿಂಗ್ ಪದವಿ ಪಡೆದು ೧೯೨೮ರಲ್ಲಿ ಉದ್ಯೋಗಾರ್ಥಿಯಾಗಿ ಮುಂಬೈಗೆ ತೆರಳಿದರು. ಕೆಲಕಾಲ ಉದ್ಯೋಗಿಯಾಗಿದ್ದ ಅವರು ಕೊಲ್ಲಾಪುರಕ್ಕೆ ಬಂದು ಸ್ವಂತ ಗ್ಯಾರೇಜು ಆರಂಭಿಸಿದರು.

ಕೊಲ್ಲಾಪುರವು ಮೂವತ್ತರ ದಶಕದಲ್ಲಿ ಸಿನಿಮಾ ಚಟುವಟಿಕೆಗಳಿಗೆ ಕೇಂದ್ರ ಸ್ಥಾನವಾಗಿತ್ತು. ‘ಸತಿ ಸುಲೋಚನಾ’ ಸಹ ಅಲ್ಲಿಯೇ ತಯಾರಾಗಿತ್ತು. ಅಲ್ಲಿನ ಸಿನಿಟೋನ್ ಸಂಸ್ಥೆ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಅದರ ಮಾಲೀಕ ದಾದಾ ಸಾಹೇಬ್ ನಿಂಬಾಳ್ಕರ್ ಆ ಕಾಲದ ‘ಕಾಳಿಯ ಮರ್ದನ್’, ‘ಸ್ವರಾಜ್’, ‘ಸೀಮೇವಾರ್’, ‘ನೇತಾಜಿ ಪಲ್ಕರ್’ ಮುಂತಾದ ಪೌರಾಣಿಕ, ದೇಶಭಕ್ತಿ ಚಿತ್ರಗಳ ನಿರ್ದೇಶಕರಾಗಿ ಪ್ರಸಿದ್ಧರಾಗಿದ್ದರು. ಅವರ ಆಹ್ವಾನದ ಮೇರೆಗೆ ಸಿನಿಟೋನ್ ಸಂಸ್ಥೆಯಲ್ಲಿ ವಿಠಲ್‌ರವರು ಸೌಂಡ್ ಎಂಜಿನಿಯರ್ ಹುದ್ದೆ ಸ್ವೀಕರಿಸಿದರು. ಭಾರತೀಯ ಚಿತ್ರರಂಗದ ಪಿತಾಮಹನೆನಿಸಿದ ದಾದಾ ಸಾಹೇಬ್ ಫಾಲ್ಕೆ ಅವರ ಟಾಕಿ ಚಿತ್ರಗಳಿಗೆ ಶಬ್ದಗ್ರಹಣ ಮಾಡಿದರು. ಫಾಲ್ಕೆ ಅವರಿಂದ ನಿರ್ದೇಶನದ ಸೂಕ್ಷ್ಮಗಳನ್ನು ಅರಗಿಸಿಕೊಂಡರು. ವಿಠಲ್‌ರವರು ಕೊಲ್ಲಾಪುರ ಬಿಟ್ಟು ಅಂದಿನ ಅವಿಭಜಿತ ಭಾರತದ ಪ್ರಮುಖ ಸಿನಿಮಾಕೇಂದ್ರವೆನಿಸಿದ್ದ ಲಾಹೋರ್‌ಗೆ ತೆರಳಿ ಸೂಪರ್ ಸೌಂಡ್ ಸ್ಟುಡಿಯೋನಲ್ಲಿ ಶಬ್ದಗ್ರಹಣ ತಜ್ಞರಾದರು. ಜೊತೆಗೆ ಅಂದಿನ ಜನಪ್ರಿಯ ಜೋಡಿ ಸುರೇಂದ್ರ ಮತ್ತು ಊರ್ಮಿಳಾ ತಾರಾಗಣದ ‘ಆಗ್’ ಚಿತ್ರವನ್ನು ನಿರ್ದೇಶಿಸಿದರು. ಕೈತುಂಬಾ ಕೆಲಸವಿದ್ದರೂ ವಾತಾವರಣಕ್ಕೆ ಹೊಂದಿಕೊಳ್ಳಲಾಗದೆ ಮತ್ತೆ ಮುಂಬೈಗೆ ಬಂದರು. ಅನಂತರ ೧೯೩೯ರಲ್ಲಿ ಮದ್ರಾಸ್ ಸರ್ಕಾರದ ಆಹ್ವಾನದ ಮೇರೆಗೆ ಸರ್ಕಾರಕ್ಕೆ ಅನೇಕ ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿದರು. ಮದರಾಸಿನಲ್ಲಿರುವಾಗಲೇ ಅವರು ವಿದೇಶಿ ಸರ್ಕಾರಗಳ ಆಹ್ವಾನದ ಮೇರೆಗೆ ಫ್ರಾನ್ಸ್ ಮತ್ತು ಇಂಗ್ಲೆಂಡ್‌ಗೆ ತೆರಳಿ ಅಲ್ಲಿ ಚಿತ್ರ ನಿರ್ಮಾಣದ ಸೂಕ್ಷ್ಮಗಳನ್ನು ಅಭ್ಯಾಸ ಮಾಡಿದರು. ಮತ್ತೆ ಎರಡನೇ ಮಹಾಯುದ್ಧ ಮುಗಿದ ನಂತರ ಭಾರತಕ್ಕೆ ಮರಳಿ ಮಲಯಾಳಂ ಭಾಷೆಯಲ್ಲಿ ಚಿತ್ರ ನಿರ್ದೇಶಿಸಿದರು. ತಮಿಳು ಮತ್ತು ಮರಾಠಿ ಭಾಷೆಯ ಚಿತ್ರಗಳನ್ನೂ ನಿರ್ದೇಶಿಸಿದರು. ಅವರ ಮಿತ್ರ ಜಗನ್ನಾಥ್ ತಾವು ನಿರ್ದೇಶಿಸುತ್ತಿದ್ದ ‘ಧರ್ಮ ವಿಜಯ’ (೧೯೫೯) ಚಿತ್ರವನ್ನು ಚಿತ್ರೀಕರಿಸಿ ಪೂರ್ಣಗೊಳಿಸುವ ಹೊಣೆಗಾರಿಕೆಯನ್ನು ಎಂ.ಆರ್.ವಿಠಲ್‌ರವರಿಗೆ ವಹಿಸಿದರು. ಚಿತ್ರವನ್ನು ಪೂರೈಸಿಕೊಟ್ಟ ವಿಠಲ್‌ರವರು ಅದರ ಕ್ರೆಡಿಟ್ ತೆಗೆದುಕೊಳ್ಳಲು ಇಚ್ಛಿಸಲಿಲ್ಲ.

ಇಷ್ಟೊಂದು ಅಪಾರ ಅನುಭವಗಳಿದ್ದ ಎಂ.ಆರ್.ವಿಠಲ್‌ರವರನ್ನು ಅಧಿಕೃತವಾಗಿ ಕನ್ನಡ ಚಿತ್ರರಂಗಕ್ಕೆ ಎಳೆದುತಂದವರು ನಿರ್ಮಾಪಕ ಸೋದರರಾದ ವಾದಿರಾಜ್ ಮತ್ತು ಜವಾಹರ್‌ರವರು. ಆಗ ವಿಠಲ್‌ರವರಿಗೆ ಐವತ್ತೆರಡು ವರ್ಷ ವಯಸ್ಸು. ದಕ್ಷಿಣ ಕನ್ನಡ ಉಡುಪಿ ಮೂಲದ ನಟಿ ಹರಿಣಿಯವರ ಸೋದರರು ಉತ್ತಮ ಅಭಿರುಚಿಯ ಚಿತ್ರವನ್ನು ತೆರೆಗೆ ತರುವ ಸನ್ನಾಹ ನಡೆಸಿದ್ದರು. ವಾದಿರಾಜ್ ಅವರು ತಮಿಳು ರಂಗಭೂಮಿಯಲ್ಲಿ ಅನುಭವ ಗಳಿಸಿ ‘ಕೋಕಿಲವಾಣಿ’ ಮೂಲಕ ಕನ್ನಡ ಚಿತ್ರರಂಗಕ್ಕೂ ಪರಿಚಿತರಾಗಿದ್ದರು. ಸೋದರಿ ಹರಿಣಿಯವರು ‘ಜಗನ್ಮೋಹಿನಿ’ ಚಿತ್ರದ ಮೂಲಕ ಜನಪ್ರಿಯರಾಗಿದ್ದರು. ವಾದಿರಾಜ್‌ರವರು ತಮ್ಮದೇ ಕತೆಯೊಂದನ್ನು ಚಿತ್ರವಾಗಿಸುವ ಹಂಬಲದಿಂದಿದ್ದರು. (ನಂದಾದೀಪ ಚಿತ್ರಕತೆಯನ್ನು ರೂಪಿಸುವಾಗ ವಾದಿರಾಜ್ ಅವರು ವಿ.ಶಾಂತರಾಂ ಅವರ ಚಿತ್ರಗಳಿಂದ ಪ್ರಭಾವಿತರಾಗಿರಬಹುದೇನೋ ಎಂಬ ಅನುಮಾನ ಕಾಡುತ್ತದೆ.) ೧೯೬೨ರಲ್ಲಿ ತಮ್ಮ ‘ಶ್ರೀ ಭಾರತಿ ಚಿತ್ರಾ’ ಸಂಸ್ಥೆಯ ಮೂಲಕ ‘ನಂದಾದೀಪ’ ಚಿತ್ರ ನಿರ್ದೇಶಿಸಲು ಎಂ.ಆರ್. ವಿಠಲ್‌ರವರನ್ನು ಕರೆತಂದರು. ೧೯೬೩ನೇ ಸಾಲಿನಲ್ಲಿ ಮೊದಲ ಚಿತ್ರವಾಗಿ ‘ನಂದಾದೀಪ’ ಬಿಡುಗಡೆಯಾಯಿತು. ಆ ಚಿತ್ರದ ಕತೆ, ಸಂಗೀತ, ಸಂಭಾಷಣೆ, ಹಾಡುಗಳು, ಸಂಕಲನ ಮತ್ತು ನಿರ್ದೇಶಕರ ಹೊಸತನದ ನಿರೂಪಣೆ ಪ್ರೇಕ್ಷಕರಿಗೆ ಹೊಸ ಅನುಭವಲೋಕವನ್ನು ತೆರೆದಿಟ್ಟಿತು. ಆ ಮೂಲಕ ಕನ್ನಡ ಚಿತ್ರರಂಗದ ದಿಕ್ಕನ್ನು ನಿರ್ದೇಶಿಸಬಲ್ಲ ನಿರ್ದೇಶಕನೊಬ್ಬನ ಆಗಮನವಾಯಿತು.

‘ನಂದಾದೀಪ’ ಚಿತ್ರವು ಅದುವರೆಗಿನ ಚಿತ್ರಗಳಿಂದ ಭಿನ್ನವಾಗಿ ಕಂಡದ್ದು ಅದರ ವಸ್ತು ಮತ್ತು ನಿರೂಪಣೆಯಿಂದ. ಭಾರತೀಯ ಚಿತ್ರರಂಗದ ಅಂದಿನ ಪ್ರಸಿದ್ಧ ನಿರ್ದೇಶಕ ವಿ.ಶಾಂತಾರಾಮ್ ಅವರ ಪ್ರಭಾವ ವಿಠಲ್ ಅವರ ಮೇಲಿರುವಂತೆ ಕಾಣುತ್ತದೆ. ಜನಪ್ರಿಯ ಅಂಶಗಳನ್ನು ತೊರೆಯದೆ ಸಾಮಾಜಿಕ ಆಶಯಗಳನ್ನು, ಸಮಸ್ಯೆಗಳನ್ನು ಹೇಳುವ ಹಾಗೂ ‘ಬೋಲ್ಡ್’ ಎನಿಸುವ ವಿಷಯಗಳನ್ನು ನಿರೂಪಿಸುವ ತಾತ್ತ್ವಿಕ ನಿಲುವಿಗೆ ಶಾಂತಾರಾಮ್‌ರವರು ಬದ್ಧರಾಗಿದ್ದರು. ಅವರದು ಸುಧಾರಣವಾದಿಯ ಮನಸ್ಸು. ‘ನಂದಾದೀಪ’ ಸಹ ಅಂಥ ಆಶಯಗಳ ಗರ್ಭದಿಂದ ಮೈದಳೆದ ಚಿತ್ರ. ಇಲ್ಲೊಂದು ಪ್ರೇಮದ ಕತೆಯಿದೆ. ಆದರೆ ಮಾಮೂಲಿ ಕತೆಯಲ್ಲ. ಇಲ್ಲೊಂದು ಹೆಣ್ಣಿನ ಗೋಳಿನ ಕತೆಯಿದೆ. ಆದರೆ ಮಾಮೂಲಿ ಗೋಳಿನ ಕತೆಯಲ್ಲ. ಚಿರವಿರಹಿಗಳ ನೋವಿದೆ. ಪ್ರೇಮಿಗಳಿಬ್ಬರ ತ್ಯಾಗದ ಎಳೆಯಿದೆ. ಬಡತನದಿಂದಾಗಿ ಸಿರಿವಂತನ ಎರಡನೇ ಹೆಂಡತಿಯಾಗುವ ಹೆಣ್ಣಿನ ಅಸಹಾಯಕತೆಯಿದೆ. ಅನುಮಾನದ ಹುತ್ತ ತಂದೊಡ್ಡುವ ದುರಂತವಿದೆ. ಹಾಸ್ಯದ ದೃಶ್ಯಗಳಿವೆ. ಕೇಳಿದರೆ ಮತ್ತೊಮ್ಮೆ ಕೇಳಬೇಕೆನಿಸುವ ಇಂಪಾದ ಹಾಡುಗಳಿವೆ. ವೈಪಿಂಗ್, ಡಿಸಾಲ್ವ್ ಇತ್ಯಾದಿ ತಂತ್ರಗಳಿಂದ ಗಮನ ಸೆಳೆಯುವ ಸಂಕಲನವಿದೆ. ಎಲ್ಲಕ್ಕಿಂತಲೂ ಹೆಚ್ಚಾಗಿ ಎಂ.ಆರ್. ವಿಠಲ್‌ರವರ ‘ಸಿನಿಮಾ ಆಶಯ’ವನ್ನು ಸಮರ್ಥವಾಗಿ ಕಟ್ಟಿಕೊಡುವ ಚಿತ್ರ ಇದಾಗಿದೆ. ಆದುದರಿಂದ ಇದು ಅವರ ಚಿತ್ರ ಬದುಕಿನ ಪ್ರಾತಿನಿಧಿಕ ಚಿತ್ರವೆನಿಸುತ್ತದೆ.

ವಿಠಲ್‌ರವರ ‘ಸಿನಿಮಾ ಆಶಯ’ವನ್ನು ಮುಂದಿನಂತೆ ವಿವರಿಸಬಹುದು. ತಮ್ಮ ಸಮಕಾಲೀನ ಚಿತ್ರ ನಿರ್ದೇಶಕರಿಗಿಂತ ವಿಭಿನ್ನವಾದ ವಸ್ತುಗಳ ಆಯ್ಕೆಗೆ ವಿಠಲ್‌ರವರದು ಮೊದಲ ಆದ್ಯತೆ. ಸಾಮಾಜಿಕ ಸಂಪ್ರದಾಯಗಳನ್ನು ಸೂಕ್ಷ್ಮವಾಗಿ ವಿರೋಧಿಸುವ ಸುಧಾರಣಾವಾದಿಯ ಮನಸ್ಸು. ಭಾವಾವೇಶವನ್ನು ಆದಷ್ಟೂ ಮಂದ್ರಗೊಳಿಸುವುದು; ಭಾವೋನ್ಮಾದಕ್ಕಿಂತ ಬೌದ್ಧಿಕತೆಗೆ ಹೆಚ್ಚಿನ ಒತ್ತು; ಸಾಮಾಜಿಕ, ಕೌಟುಂಬಿಕ ಸಂಘರ್ಷದ ಜೊತೆಗೆ ಮಾನಸಿಕ ಪಾತಳಿಗಳ ವಿಶ್ಲೇಷಣೆ; ಪ್ರೀತಿ-ಪ್ರೇಮದ ಬಗ್ಗೆ ದೊಡ್ಡ ವ್ಯಾಖ್ಯಾನಗಳಿಲ್ಲದೆ ನವಿರಾಗಿ ನಿರೂಪಿಸುವ ಜಾಣ್ಮೆ; ದೊಡ್ಡ ಕಲಾವಿದರನ್ನು ಬಳಸಿಕೊಂಡು, ಜನಪ್ರಿಯ ಅಂಶಗಳೆನಿಸಿದ ಹಾಸ್ಯ ಸನ್ನಿವೇಶಗಳು, ಉತ್ತಮ ಸಾಹಿತ್ಯದ ಹಾಡುಗಳನ್ನು ಸಂದರ್ಭೋಚಿತವಾಗಿ ಅಡಕಗೊಳಿಸಿ ಮುಖ್ಯವಾಹಿನಿಯ ಚಿತ್ರಗಳಲ್ಲೇ ಪ್ರಯೋಗ ನಡೆಸುವುದು- ಇದು ವಿಠಲ್‌ರವರ ಸಿನಿಮಾ ನಿರ್ದೇಶನದ ವಿಧಾನವಾಗಿತ್ತು.

‘ನಂದಾದೀಪ’ ಚಿತ್ರದಲ್ಲಿ ಈ ಸುಧಾರಣವಾದಿಯ ಮನಸ್ಸು ಕಾರ್ಯನಿರ್ವಹಿಸಿರುವುದನ್ನು ಕಾಣಬಹುದು. ಶಂಕರನ ಜೊತೆಗಿನ ಪ್ರೀತಿಯ ಭಾವನೆಗಳನ್ನು ತೊರೆದು, ತಂದೆಯ ಋಣ ತೀರಿಸಲು ವಯಸ್ಸಾದ ಸಾಹುಕಾರನ ಎರಡನೇ ಪತ್ನಿಯಾಗಿ ಬರುವ ಗೌರಿ ಹೊಸ ಬದುಕನ್ನು ಪ್ರಜ್ಞಾಪೂರ್ವಕವಾಗಿ ಸ್ವೀಕರಿಸುತ್ತಾಳೆ. ವಿಫಲ ಪ್ರೇಮಿಯಾದ ಶಂಕರ್ ಸಮಾಜ ಸುಧಾರಣಾ ಕಾರ್ಯದಲ್ಲಿ ತನ್ನ ಬದುಕಿನ ಸಾರ್ಥಕವನ್ನು ಕಂಡುಕೊಳ್ಳುತ್ತಾನೆ. ಈ ನಡುವೆ ತನ್ನ ಶೀಲದ ಬಗ್ಗೆ ಸಂಶಯ ತೋರುವ ಗಂಡನ ವರ್ತನೆಯಿಂದ ಬೇಸತ್ತ ಗೌರಿ ತನ್ನ ಹಳೆಯ ಗೆಳೆಯನನ್ನು ಅರಸುತ್ತಾ ಬರುವಾಗ ಸ್ಫೋಟಕ್ಕೆ ಬಲಿಯಾಗುತ್ತಾಳೆ. ಹೊಸ ಬದುಕನ್ನು ಅರಸಿದ ಹೆಣ್ಣೊಬ್ಬಳು ದುರಂತದಲ್ಲೇ ಸಾಯಬೇಕಾದ ಸಂಪ್ರದಾಯದ ಚೌಕಟ್ಟಿಗೇ ನಿರ್ದೇಶಕರು ಜೋತು ಬಿದ್ದಿರುವುದೊಂದು ಮಾತ್ರ ಚಿತ್ರದ ದುರ್ಬಲ ಎಳೆ.

ಈ ಸುಧಾರಣಾವಾದಿಯ ಆಶಯಗಳನ್ನು ಅವರ ಎಲ್ಲ ಚಿತ್ರಗಳಲ್ಲಿ ಗುರುತಿಸಬಹುದು. ಸಾಮಾಜಿಕ ಆಶಯವಲ್ಲದೆ ಕೌಟುಂಬಿಕ ಸಂಘರ್ಷಗಳು, ಸೋದರ ಸಂಬಂಧಗಳ ಬಿರುಕು,ವಿವಾಹ ಪೂರ್ವ ಸಂಬಂಧಗಳು, ಮಾನಸಿಕ ತಾಕಲಾಟಗಳು, ವರದಕ್ಷಿಣೆ, ಗ್ರಾಮೀಣ ಸಮಸ್ಯೆ ಮೊದಲಾದವುಗಳನ್ನು ವಿಶ್ಲೇಷಿಸುವ ಪ್ರಯತ್ನವನ್ನು ಅವರು ಮಾಡಿದ್ದರು.

ತಮ್ಮ ವೃತ್ತಿ ಬದುಕಿನಲ್ಲಿ ಹದಿನೇಳು ಚಿತ್ರಗಳನ್ನು ವಿಠಲ್‌ರವರು ನಿರ್ದೇಶಿಸಿದರು. ಅವುಗಳಲ್ಲಿ ಇಂದಿಗೂ ಗಾಢವಾದ ಪ್ರಭಾವ ಬೀರುವ ಚಿತ್ರಗಳೆಂದರೆ ‘ನಂದಾದೀಪ’, ‘ಮಿಸ್.ಲೀಲಾವತಿ’, ‘ನಕ್ಕರೆ ಅದೇ ಸ್ವರ್ಗ’, ‘ಹಣ್ಣೆಲೆ ಚಿಗುರಿದಾಗ’ ಮತ್ತು ‘ಎರಡು ಮುಖ’ ಹಾಗೂ ‘ಪುನರ್ಮಿಲನ’.

ಸ್ತ್ರೀ ವಿಮೋಚನೆಯನ್ನು ಬೆಂಬಲಿಸುವಂತೆ ಆರಂಭದಲ್ಲಿ ಕಂಡರೂ ವಿಠಲ್‌ರವರ ಬಹುತೇಕ ಚಿತ್ರಗಳು ಅಂಥ ಹೆಣ್ಣುಗಳು ಸಾಮಾಜಿಕ ಕಟ್ಟುಪಾಡಿನಲ್ಲಿರುವುದೇ ಲೇಸೆಂಬ ಒಳ ಸಂದೇಶವನ್ನು ಸೂಚ್ಯವಾಗಿ ಹೇಳುತ್ತವೆ. ಅವರ ಎರಡನೆಯ ಚಿತ್ರ ’ಮಂಗಳ ಮುಹೂರ್ತ’ದ ನಾಯಕಿಯು ಆಧುನಿಕತೆಯಿಂದ ಆಕರ್ಷಣೆಗೊಂಡು ಸಂಗಾತಿಯನ್ನೇ ತಿರಸ್ಕರಿಸುತ್ತಾಳೆ. ತಾನೇ ಹೆಣೆದ ಬಲೆಯಲ್ಲಿ ತೊಡರಿಕೊಳ್ಳುತ್ತಾಳೆ. ಕೊನೆಗೆ ಆಧುನಿಕತೆಯ ಸೋಗು ಅರ್ಥವಾಗಿ ಮಾನವೀಯತೆಯತ್ತ ಒಲಿಯುತ್ತಾಳೆ.

೧೯೬೫ರಲ್ಲಿ ಬಿಡುಗಡೆಯಾದ ‘ಮಿಸ್ ಲೀಲಾವತಿ’ ಅನೇಕ ವಿಧದಿಂದ ಗಮನಾರ್ಹ ಚಿತ್ರ. ಸಂಪ್ರದಾಯಗಳ ಕಟ್ಟುಪಾಡಿನ ವಿರುದ್ಧ ಸಿಡಿದೇಳುವ ಹೆಣ್ಣೊಬ್ಬಳ ಸಾಹಸ, ತಳಮಳದ ನಿರೂಪಣೆಯ ಚಿತ್ರವದು. ಸಮಾಜದ ಒಟ್ಟು ಸಮುದಾಯದ ಅರ್ಧದಷ್ಟಿರುವ ಮಹಿಳೆಯರು ಅಸ್ಪೃಶ್ಯತೆಯ ಅಡಿಯಲ್ಲೇ ಮಡಿವಂತರು. ಸಂಪ್ರದಾಯದ ಬಿಗಿತದಿಂದ ಮನೆಯ ಮಾಡಿಂದ ಹೊರಬರಲಾಗದ ಈ ಗಾಂಧಾರಿ ಸ್ತ್ರೀ ಸಮೂಹ ಸ್ವಲ್ಪವೇ ಬಂಡೆದ್ದರೂ ಅದು ವಿಪ್ಲವದಂತೆ ಪುರುಷ ಸಮಾಜಕ್ಕೆ ಗೋಚರಿಸುತ್ತದೆ. ನಮ್ಮ ಚಲನಚಿತ್ರಗಳಂತೂ ಹೆಣ್ಣಿನ ತ್ಯಾಗ, ಶೀಲಸಂರಕ್ಷಣೆ, ಸಂಪ್ರದಾಯ ನಿಷ್ಠೆಯನ್ನು ಘನೀಕೃತಗೊಳಿಸಲು ಸಿಕ್ಕ ಅವಕಾಶಗಳನ್ನೆಂದೂ ವ್ಯರ್ಥ ಮಾಡಿಲ್ಲ. ಅಂಥ ಹಿನ್ನೆಲೆಯಲ್ಲಿ ವಿವಾಹಪೂರ್ವ ಲೈಂಗಿಕ ಸಂಪರ್ಕವನ್ನು ಅಂಗೀಕರಿಸಿ ಮದುವೆಯೆಂಬ ‘ಸಂಸ್ಥೆ’ಯನ್ನೆ ನಿರಾಕರಿಸುವ ಸ್ತ್ರೀ ಪಾತ್ರದ ಸೃಷ್ಟಿ ಆ ಕಾಲಕ್ಕೆ ತೀರಾ ‘ಬೋಲ್ಡ್’ ಎನಿಸಿತ್ತು. ಕೊನೆಗೂ ಬಂಡಾಯವೇಳುವ ಸ್ತ್ರೀ ಅನುಭವಿಸಲೇಬೇಕಾದ ಪರಿತಾಪದೊಂದಿಗೆ ಚಿತ್ರ ಕೊನೆಗೊಳ್ಳುತ್ತದೆ. ಮತ್ತೆ ಅದೇ ‘ಸಂಪ್ರದಾಯಕ್ಕೆ ಶರಣು’ ಹೇಳುವ ದೌರ್ಬಲ್ಯ ಇಲ್ಲಿಯೂ ತುಂಬಿದೆ. ಆಧುನಿಕತೆ, ಸ್ತ್ರೀ ಸ್ವಾತಂತ್ರ್ಯವೆಲ್ಲವನ್ನು ವಿಠಲ್ ಅವರು ಅಂದಿನ ಸಾಮಾಜಿಕ ಉದಾರವಾದಿ ನೆಲೆಯಲ್ಲಿ ನೋಡಿದಂತಿದೆ. ’ಎರಡು ಮುಖ’ ಚಿತ್ರದಲ್ಲೂ ಆಧುನಿಕ ನಾಗರಿಕತೆಯು ತರುವ ಭೋಗಕ್ಕೇ ಮನಸೋಲುವ ಹೆಣ್ಣಿನ ಪಾತ್ರವೇ ಮುಖ್ಯವಾಗಿದೆ. ಅವರ ಈ ಚಿತ್ರಗಳಲ್ಲಿ ಸ್ತ್ರೀಯರ ಬಂಡಾಯವೆಲ್ಲವೂ ಪುರುಷರ ಸಹಾನುಭೂತಿಗೆ ಮಣಿಯುತ್ತದೆ. ಇದು ಸಹ ಒಂದು ಸಿದ್ಧಮಾದರಿಯಂತೆ ಕಂಡರೂ ನಿರೂಪಣೆಯ ಕ್ರಮದಲ್ಲಿ ಅವರದು ಪ್ರಬುದ್ಧ ಹಾದಿಯಾಗಿತ್ತು.

‘ನಕ್ಕರೆ ಅದೇ ಸ್ವರ್ಗ’ ಚಿತ್ರವು ನರಸಿಂಹರಾಜು ಅವರ ನೂರನೆಯ ಚಿತ್ರ. ಇದು ‘ಮಿಸ್ ಲೀಲಾವತಿ’ಯ ಪುರುಷ ಆವೃತ್ತಿ. ಚಿತ್ರವು ಬಂಗಾಳಿಯ ‘ನೂತನ್ ಜೀವನ್’ ಚಿತ್ರವನ್ನು ಆಧರಿಸಿತ್ತು. ಇಲ್ಲಿ ಸಂಪ್ರದಾಯಗಳ ವಿರುದ್ಧ ಬಂಡೆದ್ದ ಚಿತ್ರದ ನಾಯಕ, ಬದುಕೆಂದರೆ ಸುಖವನ್ನರಸಲು ಭಗವಂತ ನೀಡಿದ ಅವಕಾಶ ಎಂದು ನಂಬಿದವನು. ಕಟ್ಟುಪಾಡುಗಳಿಲ್ಲದ ಸ್ವೇಚ್ಛೆಯೇ ಮಾನವ ಸ್ವಾತಂತ್ರ್ಯಕ್ಕೆ ರಹದಾರಿ ಎಂದು ತಿಳಿದು ಮಾನವ ಸಂಬಂಧಗಳ ಪೊಳ್ಳುತನವನ್ನು ಬಯಲಿಗೆಳೆವ ಪಾತ್ರದಲ್ಲಿ ನರಸಿಂಹರಾಜು ಅವರದು ಪ್ರಬುದ್ಧ ಅಭಿನಯ.(ಮೊದಲಬಾರಿಗೆ ನಾಯಕನ ಪಾತ್ರದಲ್ಲಿ ನರಸಿಂಹರಾಜು ನಟಿಸಿದ್ದರು). ಇದು ಅವರ ವೃತ್ತಿ ಬದುಕಿನ ಅತ್ಯಂತ ಸವಾಲಿನ ಹಾಗೂ ವಿಭಿನ್ನವಾದ ಪಾತ್ರ. ಒಂದೆಡೆ ಮಾನವ ಸಂಬಂಧಗಳು ಮರಳು ಸರಪಣಿಯ ಪ್ರತಿರೂಪ ಎಂದು ಭಾವಿಸುವ ನಾಯಕನಿದ್ದರೆ ಸಮಾನಾಂತರವಾಗಿ ‘ಬಾಳೊಂದು ಭಾವಗೀತೆ’ ಎಂದು ಹಾಡುತ್ತಾ, ಪ್ರೀತಿಯಲ್ಲೇ ಬದುಕನ್ನು ಕಂಡುಕೊಳ್ಳುವ ನಾಯಕನ ಸೋದರಿಯ ಕತೆಯಿದೆ. ವಿಧವಾ ವಿವಾಹ ಹಾಗೂ ಮಹಿಳಾ ಶಿಕ್ಷಣದ ವ್ಯಾಖ್ಯಾನವೇ ‘ಹಣ್ಣೆಲೆ ಚಿಗುರಿದಾಗ’ ಚಿತ್ರದ ವಸ್ತು. ತ್ರಿವೇಣಿಯವರ ಕಾದಂಬರಿಯಾಧಾರಿತ ಈ ಚಿತ್ರ ಸಂಪ್ರದಾಯ ಮತ್ತು ಆಧುನಿಕತೆಗಳ ನಡುವಿನ ತುಮುಲವನ್ನು ದಾಖಲಿಸುವ ಚಿತ್ರ. ‘ಹೂವು ಚೆಲುವೆಲ್ಲ ನಂದೆಂದಿತು’ ಎಂಬ ಹಾಡಿನಿಂದಲೇ ಇನ್ನೂ ನೆನಪಿನಲ್ಲಿರುವ ಈ ಚಿತ್ರವು ಆ ಕಾಲದ ಒಂದು ಹೊಸ ಪ್ರಯತ್ನವಾಗಿಯೇ ಮೂಡಿಬಂತು. ಈ ಚಿತ್ರದಲ್ಲಿ ವಿಠಲ್ ಅವರು ಸಂಪ್ರದಾಯಿ ವಿರೋಧಿ ನಿಲುವನ್ನು ತಳೆದು ತಮ್ಮ ಹಿಂದಿನ ಚಿತ್ರಗಳಿಗಿಂತ ಭಿನ್ನವಾಗಿರುವುದು ತೋರುತ್ತದೆ.

’ಮಾರ್ಗದರ್‍ಶಿ’ (೧೯೬೯) ಚಿತ್ರವು ಮತ್ತೆ ವಿಠಲ್‌ರವರ ಸುಧಾರಣಾವಾದಿ ಆಶಯಗಳನ್ನು ಬಿಂಬಿಸುವ ಚಿತ್ರ. ವಿದ್ಯಾವಂತ ಯುವಕನೊಬ್ಬ ಹಳ್ಳಿಗೆ ಹಿಂದಿರುಗಿ ಯುವಕರನ್ನು ಗ್ರಾಮಾಭಿವೃದ್ಧಿಯಲ್ಲಿ ತೊಡಗಿಸುವಲ್ಲಿ ಯಶಸ್ಸು ಕಾಣುತ್ತಾನೆ. ’ತರಾಸು’ ಅವರ ಕಾದಂಬರಿಯಾಧರಿಸಿದ್ದ ಈ ಚಿತ್ರವು ಗಾಂಧೀಜಿ ಮತ್ತು ವಿವೇಕಾನಂದರ ಆಶಯಗಳನ್ನು ಹೇಳಲು ಪ್ರಯತ್ನಿಸಿದೆ. ಸುಂದರ ಹೊರಾಂಗಣದಿಂದ ಸೆಳೆಯುತ್ತದೆ.

ಗಂಡ ಮತ್ತು ಹೆಂಡತಿಯರ ನಡುವಣ ಸಂಬಂಧಗಳ ಬಿಕ್ಕಟ್ಟನ್ನು ಕುರಿತ ‘ಪುನರ್ಮಿಲನ’ವು ಫ್ಲ್ಯಾಷ್‌ಬ್ಯಾಕ್ ತಂತ್ರವನ್ನು ಯಶಸ್ವಿಯಾಗಿ ಬಳಸಿಕೊಂಡಿದೆ. ಗಂಡ ಮತ್ತು ಹೆಂಡತಿ ತಮ್ಮ ದೃಷ್ಟಿಕೋನ, ಅನುಭವ, ಅಭಿಪ್ರಾಯಗಳನ್ನು ಪ್ರತ್ಯೇಕವಾಗಿ ಹೇಳುತ್ತಾ ಪ್ರೇಕ್ಷಕರನ್ನು ಚಿಂತನೆಗೆ ಹಚ್ಚುವ ಪ್ರಯತ್ನದಿಂದ ನವೀನವಾಗಿದೆ. ಕೆಲವು ವಿಮರ್ಶಕರು ಈ ಚಿತ್ರದ ತಂತ್ರವನ್ನು ಅಕಿರ ಕುರಸೊವನ ‘ರಾಷೋಮನ್’ಗೆ ಹೋಲಿಸಿದ್ದಾರೆ. ಇದು ಸ್ವಲ್ಪ ಅತಿಯಾಯಿತೆನಿಸುತ್ತದೆ. ಆದರೆ ಸಿದ್ಧ ಮಾದರಿಯನ್ನು ತೊರೆದ ಚಿತ್ರವಾಗಿ ಇದು ದಾಖಲಾರ್ಹ ಚಿತ್ರವಾಗಿದೆ.

‘ಎರಡು ಮುಖ’ ಚಿತ್ರವು ನಾಯಕಿ (ಜಯಂತಿ)ಯ ಸೀಳು ವ್ಯಕ್ತಿತ್ವವನ್ನು ದಾಖಲಿಸುವ ಮನೋವೈಜ್ಞಾನಿಕ ಚಿತ್ರವಾಗಿದೆ. ಬಹುಶಃ ಕನ್ನಡದ ಮೊದಲ ಮನೋವೈಜ್ಞಾನಿಕ ಚಿತ್ರ ಇದು. ಮಾನಸಿಕ ವಿಲಕ್ಷಣ ಪಾತ್ರಗಳನ್ನು ಚಿತ್ರದ ಹಾಸ್ಯದ ಟ್ರ್ಯಾಕನ್ನು ತುಂಬಿಸುತ್ತಿದ್ದ ಕಾಲದಲ್ಲಿ ’ಎರಡು ಮುಖ’ ಚಿತ್ರವು ಸೀಳು ವ್ಯಕ್ತಿತ್ವದ ವಿಶ್ಲೇಷಣೆಯಂಥ ಗಂಭೀರ ನಿರೂಪಣೆಯಲ್ಲಿ ತೊಡಗಿಸಿಕೊಂಡದ್ದು ಕುತೂಹಲಕರವಾಗಿ ಕಾಣುತ್ತದೆ.

ಹೀಗೆ ನಿರ್ದೇಶಿಸಿದ ಹದಿನೇಳು ಚಿತ್ರಗಳನ್ನು ವಿಭಿನ್ನವಾಗಿಯೇ ರೂಪಿಸಿದ ಎಂ.ಆರ್.ವಿಠಲ್ ಕನ್ನಡದಲ್ಲಿ ಸಿದ್ಧ ಮಾದರಿಯನ್ನು ತೊರೆದು ತಮ್ಮ ಮಾಧ್ಯಮಕ್ಕೆ ನಿಷ್ಠರಾಗಿ ಉಳಿದ ಮೊದಲ ನಿರ್ದೇಶಕರೆನಿಸಿದರು. ಅವರ ನಿರೂಪಣಾ ಕ್ರಮ ಸಮಕಾಲೀನ ನಿರ್ದೇಶಕರಿಗಿಂತ ಖಂಡಿತಾ ಭಿನ್ನವಾಗಿತ್ತು. ಆಯ್ಕೆ ಮಾಡಿಕೊಳ್ಳುತ್ತಿದ್ದ ವಸ್ತುಗಳೂ ‘ಬೋಲ್ಡ್’ ಆಗಿರುತ್ತಿದ್ದವು; ತಾಜಾತನದಿಂದ ಕೂಡಿರುತ್ತಿದ್ದವು. ಸಮಕಾಲೀನ ಜನಪ್ರಿಯ ಕಲಾವಿದರಾದ ರಾಜ್‌ಕುಮಾರ್, ಉದಯಕುಮಾರ್, ಜಯಂತಿ, ಅಶ್ವಥ್, ಆರೆನ್ನಾರ್, ಬಾಲಕೃಷ್ಣ, ನರಸಿಂಹರಾಜುರವರ ಪ್ರತಿಭೆಯನ್ನು ಸಮರ್ಥವಾಗಿ ದುಡಿಸಿಕೊಂಡರು. ಜಯಂತಿಯವರಂತೂ ‘ಮಿಸ್ ಲೀಲಾವತಿ’, ‘ಎರಡು ಮುಖ’ ಚಿತ್ರಗಳಲ್ಲಿ ಅಮೋಘವೆನಿಸುವ ಅಭಿನಯ ನೀಡಿದರೆ ನರಸಿಂಹರಾಜುರವರು ‘ನಕ್ಕರೆ ಅದೇ ಸ್ವರ್ಗ’ ಮತ್ತು ‘ಪ್ರೊಫೆಸರ್ ಹುಚ್ಚೂರಾಯ’ ಚಿತ್ರದಲ್ಲಿ ತಮ್ಮ ಜೀವಮಾನದ ಸಾಧನೆಯೆನಿಸುವಂಥ ಪಾತ್ರಗಳನ್ನು ನಿರ್ವಹಿಸಿದರು. ಅವರ ‘ಯಾರ ಸಾಕ್ಷಿ?’ ಮೂಲಕ ಮಂಜುಳಾ ನಾಯಕಿಯಾಗಿ ಕನ್ನಡದ ಬೆಳ್ಳಿತೆರೆಗೆ ಬಂದರು. ಅದಕ್ಕೂ ಮುನ್ನ ’ಎರಡುಮುಖ’ ಚಿತ್ರದಲ್ಲಿ ಬಾಲಕಲಾವಿದೆಯಾಗಿ ನಾಯಕಿಯ ತಂಗಿಯ ಪಾತ್ರ ನಿರ್ವಹಿಸಿದ್ದರು.

ಚಿತ್ರಕತೆ-ಸಂಭಾಷಣೆ ಸಂಪೂರ್ಣವಾಗಿ ಸಿದ್ಧಗೊಂಡ ನಂತರವೇ ಚಿತ್ರೀಕರಣ ಆರಂಭಿಸುತ್ತಿದ್ದ ವಿಠಲ್‌ರವರು ಚಲನಚಿತ್ರವು ನಿರ್ದೇಶಕನ ಮಾಧ್ಯಮ ಎಂದು ನಂಬಿದ್ದರು. ಪ್ರತಿಯೊಂದು ನಾಡು, ಪರಿಸರಕ್ಕೂ ತನ್ನದೇ ಆದ ಗುಣಲಕ್ಷಣ ಮತ್ತು ಸಂಸ್ಕೃತಿಯಿದ್ದು ಅದರ ಪರಿಧಿಯಲ್ಲಿಯೇ ಚಿತ್ರ ನಿರ್ಮಿಸಬೇಕೆಂದು ಆಶಿಸಿದ್ದವರು. ಜನಪ್ರಿಯ ಅಂಶಗಳನ್ನೂ ಸಮುಚಿತವಾಗಿ ಬೆರೆಸಿ ರಂಜನೀಯ ಚಿತ್ರಗಳನ್ನು ರೂಪಿಸಬಲ್ಲವರಾಗಿದ್ದರು. ಯಾರೂ ಧೈರ್ಯ ಮಾಡದ ವಸ್ತುಗಳನ್ನು ಆಯ್ಕೆ ಮಾಡಬಲ್ಲವರಾಗಿದ್ದರು. ಪ್ರಚಾರದಿಂದ ದೂರವಾಗಿಯೇ ಉಳಿದು ಉತ್ತಮ ಕಾಣಿಕೆಗಳನ್ನು ನೀಡಿದ ಅವರು ೧೯೯೯ರಲ್ಲಿ ನಿಧನರಾದರು. ಬದುಕಿದ್ದರೆ ಕನ್ನಡ ವಾಕ್ಚಿತ್ರ ಅಮೃತ ಮಹೋತ್ಸವದ ಸಂದರ್ಭದಲ್ಲಿ ಅವರಿಗೆ ನೂರು ವರ್ಷ ತುಂಬುತ್ತಿತ್ತು.
***

ಸೈಡ್ ರೀಲ್

* ಎಂ .ಆರ್. ವಿಠಲ್‌ರವರು ಕನ್ನಡ ಚಿತ್ರರಂಗಕ್ಕೆ ಬಂದಾಗ ಐವತ್ತೆರಡು ವರ್ಷವಾಗಿತ್ತು. ನಿವೃತ್ತಿಯ ಹತ್ತಿರದ ವಯಸ್ಸಿನಲ್ಲಿ ಚಿತ್ರ ನಿರ್ದೇಶಕರಾಗಿ ಬಂದ ಅವರು ೧೯೮೦ರವರೆಗೆ ಹದಿನೆಂಟು ವರ್ಷಗಳ ಕಾಲ ಸರಾಸರಿ ವರ್ಷಕ್ಕೊಂದರಂತೆ ಹದಿನೇಳು ಚಿತ್ರಗಳನ್ನು ನಿರ್ದೇಶಿಸಿದರು. ಎಲ್ಲಿಯೂ ವಸ್ತುವನ್ನು ಪುನರಾವರ್ತಿಸದ ದಿಟ್ಟತನ ಅವರಲ್ಲಿತ್ತು. ಅವರ ನಿರ್ದೇಶನದ ಚಿತ್ರಗಳ ಪಟ್ಟಿಯನ್ನೇ ನೋಡಿ. ನಂದಾದೀಪ (೧೯೬೩), ಮಂಗಳ ಮಹೂರ್ತ (೧೯೬೪), ಮಿಸ್ ಲೀಲಾವತಿ (೧೯೬೫), ನಕ್ಕರೆ ಅದೇ ಸ್ವರ್ಗ ಮತ್ತು ಮನಸ್ಸಿದ್ದರೆ ಮಾರ್ಗ (೧೯೬೭), ಪ್ರೇಮಮಯಿ (೧೯೬೨), ಹಣ್ಣೆಲೆ ಚಿಗುರಿದಾಗ (೧೯೬೮), ಮಾರ್ಗದರ್ಶಿ, ಎರಡು ಮುಖ ಮತ್ತು ಕಣ್ಣಾ ಮುಚ್ಚಾಲೆ (೧೯೬೯), ಯಾರ ಸಾಕ್ಷಿ? ಮತ್ತು ಬಾಳಪಂಜರ (೧೯೭೨), ಪ್ರೊ. ಹುಚ್ಚುರಾಯ ಮತ್ತು ಅಣ್ಣ ಅತ್ತಿಗೆ (೧೯೭೪), ಕೂಡಿ ಬಾಳೋಣ (೧೯೭೫), ಪುನರ್ಮಿಲನ (೧೯೭೭) ಹಾಗೂ ವರದಕ್ಷಿಣೆ (೧೯೮೦). ಇವುಗಳಲ್ಲಿ ‘ನಕ್ಕರೆ ಅದೇ ಸ್ವರ್ಗ’ (ನೂತನ್ ಜೀವನ್) ಮತ್ತು ‘ಮನಸ್ಸಿದ್ದರೆ ಮಾರ್ಗ’ (ಅಗ್ಗಿರಾಮುಡು)- ಎರಡೇ ರೀಮೇಕ್ ಚಿತ್ರಗಳು.

* ವಿಠಲಾಚಾರ್ಯರ ‘ವೀರಕೇಸರಿ’ ಚಿತ್ರದ ಹಲವು ಭಾಗಗಳನ್ನು (ಮೆಲ್ಲುಸಿರೇ ಸವಿಗಾನ… ಸೇರಿದಂತೆ) ವಿಠಲ್‌ರವರು ನಿರ್ದೇಶಿಸಿದರೂ, ಕ್ರೆಡಿಟ್ ಪಡೆಯಲು ನಿರಾಕರಿಸಿದರೆಂದು ಹೇಳಲಾಗುತ್ತದೆ.

* ಸಿನಿಮಾ ಸಂಗೀತ ಮತ್ತು ಗೀತೆಗಳ ಬಗ್ಗೆ ಅಪಾರವಾದ ಒಲವಿದ್ದ ವಿಠಲ್‌ರವರು ನಾದ ಮಾಧುರ್ಯ ಮತ್ತು ಅರ್ಥಗರ್ಭಿತ ಸಾಹಿತ್ಯದ ಹಾಡುಗಳನ್ನೆ ಅಳವಡಿಸುತ್ತಿದ್ದರು. ’ಗಾಳಿಗೋಪುರಾ… ನಿನ್ನಾಶಾತೀರ’, ’ನಲಿವ ಮನಾ’, ’ನಾಡಿನಂದಾ ಈ ದೀಪಾವಳಿ ಬಂತು’ (ನಂದಾದೀಪ), ’ದೋಣಿ ಸಾಗಲಿ ಮುಂದೆ ಹೋಗಲಿ’ (ಮಿಸ್ ಲೀಲಾವತಿ), ’ಬಾಳೊಂದು ಭಾವಗೀತೆ’; ’ಕನಸಿದೋ ನನಸಿದೋ…’; ’ನಗಬೇಕು ನಗಿಸಬೆಕು’ (ನಕ್ಕರೆ ಅದೇಸ್ವರ್ಗ), ’ಹೂವು ಚೆಲುವೆಲ್ಲ ನಂದೆಂದಿತು’, ’ಬಾರಾ ಒಲಿದು ಬಾರ’ (ಹಣ್ಣೆಲೆ ಚಿಗುರಿದಾಗ), ’ಈ ಜೀವನ ಬೇವು ಬೆಲ್ಲ’ (ಮನಸ್ಸಿದ್ದರೆ ಮಾರ್ಗ) ಇತ್ಯಾದಿ ಹಾಡುಗಳು ಇಂದಿಗೂ ಕನ್ನಡಿಗರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿವೆ. ಅಷ್ಟೆಲ್ಲ ಇದ್ದರೂ ಹಾಡುಗಳೇ ಇಲ್ಲದ ‘ಯಾರ ಸಾಕ್ಷಿ?’ ಚಿತ್ರವನ್ನು ತೆರೆಗಿತ್ತಿರುವುದು ಅವರಿಗಿದ್ದ ಪ್ರಯೋಗಶೀಲತೆಗೆ ಸಾಕ್ಷಿ.

* ‘ಮಿಸ್.ಲೀಲಾವತಿ’ ಚಿತ್ರದಲ್ಲಿ ಅಳವಡಿಸಿರುವ ಕುವೆಂಪು ಅವರ ‘ದೋಣಿಸಾಗಲಿ, ಮುಂದೆ ಹೋಗಲಿ’ ಕವನವನ್ನು ಕವಿವರ್ಯರಿಂದ ಅನುಮತಿ ಪಡೆದು ಕೊಡೈಕೆನಾಲ್‌ನ ರಮ್ಯ ಪರಿಸರದಲ್ಲಿ ಚಿತ್ರೀಕರಿಸಲಾಗಿತ್ತು. ಮೈಸೂರಿನ ಕುಕ್ಕರಹಳ್ಳಿಯ ಕೆರೆ ಮತ್ತು ಜೋಳದ ಹೊಲಗಳ ಹಿನ್ನೆಲೆಯಲ್ಲಿ ರಚಿತವಾದದ್ದೆಂದು ಹೇಳಲಾದ ಈ ಅಮರಗೀತೆಗೆ ತಮಿಳು ನಾಡಿನ ಕೊಡೈಕೆನಾಲ್ ದೃಶ್ಯವೈಭವದ ಮೆರಗು ನೀಡಿತ್ತು.

* ವಿಠಲ್ ನಿರ್ದೇಶನದ ’ಪ್ರೇಮಮಯಿ’ ಚಿತ್ರದ ಮೂಲಕ ಗಾಯಕ ಕೆ.ಜೆ. ಜೇಸುದಾಸ್, ’ನಕ್ಕರೆ ಅದೇ ಸ್ವರ್ಗ’ದ ಮೂಲಕ ಸಂಗೀತ ನಿರ್ದೇಶಕರಾದ ಎಂ. ರಂಗರಾವ್ ಮತ್ತು ಗಾಯಕ ಎಸ್.ಪಿ. ಬಾಲಸುಬ್ರಮಣ್ಯಂರವರು ಅವರು ಕನ್ನಡ ಚಿತ್ರರಂಗಕ್ಕೆ ಪರಿಚಯಗೊಂಡರು.

* ‘ನಕ್ಕರೆ ಅದೇ ಸ್ವರ್ಗ’ ಚಿತ್ರವನ್ನು ಆ ಕಾಲಕ್ಕೆ ದಾಖಲೆ ಎನಿಸಿದ ೧೯ ದಿನಗಳಲ್ಲಿ ಚಿತ್ರೀಕರಿಸಿದ್ದರು.

* ಈಗಲೂ ಎಂ.ಆರ್. ವಿಠಲ್‌ರವರನ್ನು ನೆನೆದಾಗ ದಿವಂಗತ ಎಂ.ವೆಂಕಟರಾಜು ಅವರ ಸಂಗೀತ ನಿರ್ದೇಶನದಲ್ಲಿ ಎಸ್.ಜಾನಕಿಯವರು ಹಾಡಿದ ‘ಗಾಳಿಗೋಪುರ… ನಿನ್ನಾಶಾತೀರ’ ನೆನಪಿಗೆ ಬರುತ್ತದೆ (ರಚನೆ: ಸೋರಟ್ ಅಶ್ವಥ್). ತಂಬೂರಿ ಹಿಡಿದು ಕುಳಿತು ರಾತ್ರಿಯ ಮಂದ ಬೆಳಕಿನಲ್ಲಿ ಹಾಡುತ್ತಾ ತನ್ಮಯತೆಯೇ ಹಿಮಾಲಯವಾದ ಹರಿಣಿಯವರ ಬಿಂಬಗಳ ಸರಣಿ ಕಣ್ಣುಗಳ ಮುಂದೆ ತೆರೆತೆರೆಯಾಗಿ ತೇಲಿಬರುತ್ತವೆ. ಜಾನಕಿಯವರ ರಾಗ ಮಾಧುರ್ಯ ಮೈಮನಗಳನ್ನು ಆವರಿಸಿಕೊಳ್ಳುತ್ತದೆ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...