Home / ಲೇಖನ / ಚಲನಚಿತ್ರ / ಹುಣಸೂರು ಮತ್ತು ಸತ್ಯ ಹರಿಶ್ಚಂದ್ರ

ಹುಣಸೂರು ಮತ್ತು ಸತ್ಯ ಹರಿಶ್ಚಂದ್ರ

ಅಧ್ಯಾಯ ಹದಿನೆಂಟು
ಕನ್ನಡ ಚಿತ್ರರಂಗಕ್ಕೂ ಹರಿಶ್ಚಂದ್ರನ ಬದುಕನ್ನು ಕುರಿತ ಚಿತ್ರಗಳಿಗೂ ವಿಚಿತ್ರವಾದ ನಂಟು ಇರುವಂತೆ ಕಾಣುತ್ತದೆ. ೧೯೪೩ರಲ್ಲಿ ಸುಬ್ಬಯ್ಯ ನಾಯ್ಡು ಮತ್ತು ಇತರರು ಎ.ವಿ.ಎಂ. ಸಂಸ್ಥೆಯ ನೆರವಿನೊಡನೆ ತಯಾರಿಸಿದ ಕನ್ನಡದ ‘ಸತ್ಯ ಹರಿಶ್ಚಂದ್ರ’ ಮೊಟ್ಟ ಮೊದಲ ಬಾರಿಗೆ ತಮಿಳು ಭಾಷೆಗೆ ಡಬ್ ಆಯಿತು. ಒಂದು ಹೊಸ ತಾಂತ್ರಿಕ ಆವಿಷ್ಕಾರಕ್ಕೆ ಕಾರಣವಾದ ‘ಸತ್ಯ ಹರಿಶ್ಚಂದ್ರ’ ಕನ್ನಡಚಿತ್ರವು ಅದೇ ವರ್ಷ ಬಿಡುಗಡೆಯಾದ ಮತ್ತೊಂದು ಒರಿಜನಲ್ ತಮಿಳು ‘ಸತ್ಯ ಹರಿಶ್ಚಂದ್ರ’ ಚಿತ್ರಕ್ಕಿಂತ ಯಶಸ್ವಿಯಾಯಿತು! ಆದರೆ ಈ ಡಬ್ಬಿಂಗ್ ಸಂಸ್ಕೃತಿ ಮುಂದೆ ಕನ್ನಡ ಚಿತ್ರರಂಗದ ಬೇರುಗಳನ್ನೇ ಅಲುಗಾಡಿಸುವಷ್ಟು ಪ್ರಬಲವಾಗಿ ಬೆಳೆದಿದ್ದನ್ನು ಹಿಂದಿನ ಲೇಖನಗಳಲ್ಲಿ ನೋಡಿದ್ದೇವೆ.

ಎವಿ‌ಎಂ ಸಂಸ್ಥೆಯಷ್ಟೇ ಪ್ರಸಿದ್ಧವಾದ ದಕ್ಷಿಣ ಭಾರತದ ಮತ್ತೊಂದು ಪ್ರತಿಷ್ಠಿತ ಚಿತ್ರ ನಿರ್ಮಾಣ ಸಂಸ್ಥೆ ‘ವಿಜಯಾ ಪ್ರೊಡಕ್ಷನ್ಸ್’. ಹರಿಶ್ಚಂದ್ರನ ಕತೆಯಾಧರಿಸಿದ ಎರಡನೇ ಅವತರಣಿಕೆ ‘ಸತ್ಯ ಹರಿಶ್ಚಂದ್ರ’ವನ್ನು ಆ ಸಂಸ್ಥೆ ೧೯೬೫ರಲ್ಲಿ ತಯಾರಿಸಿ ಬಿಡುಗಡೆ ಮಾಡಿತು. ಏಕಕಾಲದಲ್ಲಿ ತೆಲುಗು ಮತ್ತು ಕನ್ನಡ ಭಾಷೆಯಲ್ಲಿ ತಯಾರಾದ ಈ ಚಿತ್ರದ ತೆಲುಗು ಆವೃತ್ತಿಯಲ್ಲಿ ಎನ್‌ಟಿ‌ಆರ್ ಪ್ರಧಾನ ಭೂಮಿಕೆಯಲ್ಲಿದ್ದರು. ಕನ್ನಡ ಆವೃತ್ತಿ ಅಭೂತಪೂರ್ವ ಯಶಸ್ಸು ಗಳಿಸಿತು. ರಾಷ್ಟ್ರಪತಿಗಳ ರಜತ ಪದಕವನ್ನೂ ಪಡೆಯಿತು. ಅದು ಬಿಡುಗಡೆಯಾದ ನಲವತ್ತಮೂರು ವರ್ಷಗಳ ತರುವಾಯ ಬಣ್ಣದ ಲೇಪನ ಪಡೆದು ಸಂಸ್ಕರಣಗೊಂಡು ಮತ್ತೆ ಬಿಡುಗಡೆಯಾಯಿತು. ಇದು ಕನ್ನಡದಲ್ಲಿ ವರ್ಣವಾಗಿ ಮಾರ್ಪಟ್ಟ ಮೊದಲ ಕಪ್ಪು-ಬಿಳುಪು ಚಿತ್ರ.

‘ಸತ್ಯ’ ಎಂಬ ಅಮೂರ್ತ ಕಲ್ಪನೆ ಮತ್ತು ‘ಹರಿಶ್ಚಂದ್ರ’ ಎಂಬ ಪೌರಾಣಿಕ ವ್ಯಕ್ತಿ. ಈ ಎರಡೂ- ಭಾರತೀಯ ಪ್ರಜ್ಞೆಗೆ ಒಂದೇ ಆಗಿ ಗೋಚರಿಸುತ್ತವೆ. ‘ಸತ್ಯ’ ಎಂಬ ತಾತ್ತ್ವಿಕ ಪರಿಕಲ್ಪನೆ ಬಗ್ಗೆ ಜಗತ್ತಿನ ಚಿಂತಕರು ಅನೇಕ ರೀತಿಯಲ್ಲಿ ಜಿಜ್ಞಾಸೆ ನಡೆಸಿದ್ದಾರೆ. ಜಪಾನ್‌ನ ವಿಶ್ವವಿಖ್ಯಾತ ನಿರ್ದೇಶಕ ಅಕಿರಾ ಕುರಸೋವಾ ಸತ್ಯಕ್ಕೆ ಅನಂತಮುಖಗಳಿರುವ ಸಾಧ್ಯತೆಯನ್ನು, ಸತ್ಯದ ಪ್ರತಿಪಾದನೆಯು ಮನುಷ್ಯನ ಅಹಮಿಕೆಯು ನಿರ್ಧರಿಸುವ ಪರಿಯನ್ನು ಹಾಗೂ ಸತ್ಯವೆಂಬುದಕ್ಕೆ ಬಾಹ್ಯ ಪ್ರಮಾಣ ಯಾವುದೂ ಇಲ್ಲವೆಂದು, ಅದು ಜ್ಞಾತೃನಿಷ್ಠ ಮಾತ್ರವೆಂದು (Subjective) ತನ್ನ ‘ರಾಶೋಮನ್’ ಚಿತ್ರದಲ್ಲಿ ಅನನ್ಯವಾಗಿ ಕಟ್ಟಿಕೊಟ್ಟಿದ್ದಾನೆ. ಆದರೆ ಹರಿಶ್ಚಂದ್ರನ ‘ಸತ್ಯ’ದ ಪರಿಕಲ್ಪನೆಯೇ ಬೇರೆಯಾದದ್ದು. ‘ಸತ್ಯ’ ಎಂದರೆ ಆತನ ಪ್ರಕಾರ ವಚನ ಪರಿಪಾಲನೆ. ಸಮುದಾಯ ಅಂಗೀಕರಿಸಿದ ಸಾರ್ವಜನಿಕ ಮೌಲ್ಯಗಳಿಗೆ ತೋರಬೇಕಾದ ಕಡುನಿಷ್ಠೆ. ಸತ್ಯಪರಿಪಾಲನೆಯ ಹಾದಿಯಲ್ಲಿ ಎದುರಾಗುವ ಅಡ್ಡಿ ಆತಂಕಗಳು, ಮಾನವ ಸಂಬಂಧಗಳ ಪ್ರಭಾವಕ್ಕೆ ಸಿಲುಕದೆ ವ್ರತನಿಷ್ಠನಾಗಿರುವುದು. ಹರಿಶ್ಚಂದ್ರನ ಈ ಸತ್ಯನಿಷ್ಠೆಯನ್ನು ಭಾರತೀಯ ಪ್ರಜ್ಞೆ ಪ್ರಶ್ನಿಸದೆ ಅಂಗೀಕರಿಸಿದೆ. ಹರಿಶ್ಚಂದ್ರನ ಬದುಕು ಗಾಂಧೀಜಿಯವರನ್ನು ಸೇರಿದಂತೆ ಅನೇಕ ಮಹನೀಯರ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರಿದೆ. ಭಾರತದ ಜನಸಮೂಹದಲ್ಲಿ ಹರಿಶ್ಚಂದ್ರನ ಕತೆಯು ರಾಮಾಯಣದಷ್ಟೆ ಪರಿಚಿತ. ಹಾಗಾಗಿ ರಾಮನಷ್ಟೇ ಹರಿಶ್ಚಂದ್ರನ ಹೆಸರು ಜನರ ಆಡುಮಾತಿನಲ್ಲಿ ಪ್ರಸ್ತಾಪವಾಗುತ್ತದೆ. ಅನೇಕ ನಿರೂಪಣೆಯಲ್ಲಿ ಬಳಕೆಯಾಗುತ್ತದೆ.

ಇಲ್ಲಿ ಹುಣಸೂರು ಕೃಷ್ಣಮೂರ್ತಿಯವರು ರೂಪಿಸಿದ ಶ್ರೇಷ್ಠ ಕಲಾಕೃತಿ ‘ಸತ್ಯ ಹರಿಶ್ಚಂದ್ರ’ ಚಿತ್ರದ ಅನನ್ಯತೆಯ ಪರಿಶೀಲನೆಗೆ ಮಾತ್ರ ಲೇಖನ ಸೀಮಿತ. ಈ ಚಿತ್ರದ ಮೂಲಕ ಹುಣಸೂರರು ಪೌರಾಣಿಕ ಚಿತ್ರದ ಮಾದರಿಯೊಂದನ್ನು ರೂಪಿಸಿದರು. ಜೊತೆಗೆ ದೃಶ್ಯ ಸಂಯೋಜನೆ, ಕಲಾವಿದರ ಅಭಿನಯ, ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸುವ ನಿರೂಪಣೆ, ಅತ್ಯಂತ ಭಾವತೀವ್ರತೆಯ ಸನ್ನಿವೇಶಗಳಲ್ಲಿ ವಾಸ್ತವ ಬದುಕನ್ನು ಪಕ್ಕದಲ್ಲೇ ತಂದು ನಿಲ್ಲಿಸುವ ಕೌಶಲ್ಯದಿಂದ ಚಿತ್ರದ ಸೊಗಸನ್ನು ಹೆಚ್ಚಿಸಿದರು. ಪೌರಾಣಿಕ ವ್ಯಕ್ತಿಯೊಬ್ಬನ ಬದುಕಿನ ಏಳು-ಬೀಳುಗಳನ್ನು ವೈಭವೀಕರಿಸುವ ಬದಲು ಮನುಷ್ಯ ಸಮಾಜದ ವಿವಿಧ ನೋಟಗಳನ್ನು ಅವರು ಕಟ್ಟಿಕೊಟ್ಟರು. ಪ್ರಭುತ್ವ ಕಟ್ಟಿಕೊಂಡಿರುವ ಭ್ರಮಾತ್ಮಕ ಲೋಕವನ್ನು ಛಿದ್ರಗೊಳಿಸಿ ಸಾಮಾನ್ಯ ಬದುಕಿನ ನಿಜರೂಪಗಳನ್ನು ದರ್ಶನ ಮಾಡಿಸಿದರು. ಅರಮನೆ ಮತ್ತು ಸ್ಮಶಾನಗಳ ನಡುವೆ ನಿಜ ಯಾವುದಿರಬಹುದು ಎಂದು ಕ್ಷಣಕಾಲ ಪ್ರೇಕ್ಷಕರನ್ನು ಚಿಂತನೆಗೆ ಹಚ್ಚಿದ ಮೊದಲ ಚಿತ್ರವಿದು. ಹಾಗೆ ದೃಶ್ಯಗಳ ಸರಣಿಯನ್ನು ನಿರ್ಮಿಸಿ ಮಾಯಾ ಜಗತ್ತಿನ ತೆರೆಯನ್ನು ಸರಿಸಿ ನೋಡುವಂಥ ಅಪೂರ್ವವಾದ ಪ್ರಯತ್ನ ಈ ಚಿತ್ರದಲ್ಲಿದೆ.

ಈ ಚಿತ್ರದ ಕಥಾರಚನೆ ನಿರ್ಮಾಪಕರಾದ ಕೆ.ವಿ.ರೆಡ್ಡಿ ಅವರ ಹೆಸರಿನಲ್ಲಿಯೇ ಇದ್ದರೂ ಹುಣಸೂರು ಅವರು ರಾಘವಾಂಕನ ಹರಿಶ್ಚಂದ್ರ ಕಾವ್ಯದ ಅನೇಕ ದೃಶ್ಯಗಳಿಗೆ ಸಿನಿಮಾ ರೂಪ ನೀಡಿದ್ದಾರೆ. ಮುಖ್ಯವಾಗಿ ವಶಿಷ್ಠ-ವಿಶ್ವಾಮಿತ್ರರ ಹಣಾಹಣಿಯು “ಕೋಣನೆರಡುಂ ಹೋರೆ ಗಿಡಮಿಂಗೆ ಮಿತ್ತು” ಎನ್ನುವ ರಾಘವಾಂಕನ ಅಭಿಪ್ರಾಯವನ್ನೇ ಈ ಚಿತ್ರವು ದೃಶ್ಯರೂಪಕ್ಕೆ ತಂದಿರಿಸುತ್ತದೆ. ಮುನಿವರ್ಯರಿಬ್ಬರ ಪ್ರತಿಷ್ಠೆಯು ನಿರಪರಾಧಿ ಹರಿಶ್ಚಂದ್ರನ ಬದುಕನ್ನು ಪಲ್ಲಟಗೊಳಿಸುವ ಆ ದೃಶ್ಯವು ತೀವ್ರ ಸಂಭಾಷಣೆಯ ನಾಟಕೀಯ ದೃಶ್ಯಗಳಲ್ಲೇ ಅಪರೂಪದ್ದು. ಮೇನಕೆಯ ನರ್ತನದ ನಂತರವೇ ಈ ಹಣಾಹಣಿ ಆರಂಭವಾಗುವುದು ಒಂದು ಕ್ರೂರ ವ್ಯಂಗ್ಯವಾಗಿ ಮಾರ್ಪಡುತ್ತದೆ. ಮುಂದೆ ದಮನಕಾರಿ ಪ್ರವೃತ್ತಿಯನ್ನು ವಿಶ್ವಾಮಿತ್ರ ಪ್ರತಿನಿಧಿಸಿದರೆ, ಸಾಮಾಜಿಕ ನ್ಯಾಯದ ಪರವಾಗಿ ಹರಿಶ್ಚಂದ್ರ ನಿಲ್ಲುವ ಕತೆಯಾಗಿ ಚಿತ್ರ ಮಾರ್ಪಾಡಾಗುತ್ತದೆ.

ಈಗಾಗಲೇ ಹೇಳಿದಂತೆ ಹರಿಶ್ಚಂದ್ರನ ಕತೆಯನ್ನಾಧರಿಸಿದ ಎರಡು ಆವೃತ್ತಿಗಳು ಕನ್ನಡದಲ್ಲಿ ಬಂದಿವೆ. ಆದರೆ ೧೯೪೩ರ ಆವೃತ್ತಿಯನ್ನು ನಾನು ನೋಡಿಲ್ಲ. ತೆಲುಗು ಚಿತ್ರವನ್ನು ನೋಡಿದ್ದೇನೆ. ಆದರೆ ಕನ್ನಡ ಚಿತ್ರದ ನಾವೀನ್ಯ ಆ ಚಿತ್ರಕ್ಕಿಲ್ಲವೆಂದು ಖಂಡಿತಾ ಹೇಳಬಹುದು. ಈ ಚಿತ್ರದ ಮಹತ್ತ್ವವೆಂದರೆ, ಆ ಕಾಲದ ಅಧ ಕನ್ನಡ ಚಿತ್ರೋದ್ಯಮವೇ ಇದರಲ್ಲಿ ತೊಡಗಿಸಿಕೊಂಡಿತ್ತು. ವಿಶೇಷವಾಗಿ ಈ ಚಿತ್ರದಲ್ಲಿ ಅಭಿನಯಿಸಿದ ಕಲಾವಿದರ ತಂಡದಂತಹ ಸಂಯೋಜನೆ ಮುಂದೆ ಯಾವ ಚಿತ್ರದಲ್ಲೂ ಪುನರಾವರ್ತನೆಗೊಳ್ಳಲಿಲ್ಲ. ನಾಯಕ ನಟರಲ್ಲಿ ಪ್ರಸಿದ್ಧರಾಗಿದ್ದ ಕಲ್ಯಾಣಕುಮಾರ್ ಮತ್ತು ಪೋಷಕ ನಟರಲ್ಲಿ ಜನಪ್ರಿಯರಾಗಿದ್ದ ಟಿ.ಎನ್.ಬಾಲಕೃಷ್ಣ ಅವರನ್ನು ಹೊರತುಪಡಿಸಿದರೆ ಸರಿಸುಮಾರು ಎಲ್ಲ ಕನ್ನಡ ಕಲಾವಿದರ ಪ್ರಾತಿನಿಧ್ಯ ಈ ಚಿತ್ರದಲ್ಲಿದೆ. ರಾಜ್ (ಹರಿಶ್ಚಂದ್ರ), ಉದಯಕುಮಾರ್ (ವಿಶ್ವಾಮಿತ್ರ), ಕೆ.ಎಸ್.ಅಶ್ವಥ್ (ವಶಿಷ್ಠ), ಟಿ.ಆರ್.ನರಸಿಂಹರಾಜು (ನಕ್ಷತ್ರಿಕ), ಎಂ.ಎಸ್.ಸುಬ್ಬಣ್ಣ (ಕಾಲಕೌಶಿಕ), ಎಂ.ಪಿ. ಶಂಕರ್ (ವೀರಬಾಹು), ಕುಪ್ಪರಾಜ್ (ಸತ್ಯಕೀರ್ತಿ) ಇವರಲ್ಲದೆ ತೆಲುಗಿನ ಪ್ರಖ್ಯಾತ ಕಲಾವಿದ ಕೆ.ಪ್ರಭಾಕರರೆಡ್ಡಿ (ಈಶ್ವರ) ಮತ್ತು ಮಿಕ್ಕಿಲಿನೇನಿ (ಇಂದ್ರ) ಅವರೂ ನಟಿಸಿದ್ದಾರೆ. ಆಗತಾನೆ ಹಾಸ್ಯನಟರಾಗಿ ಪ್ರವರ್ಧಮಾನಕ್ಕೆ ಬರುತ್ತಿದ್ದ ದ್ವಾರಕೀಶ್, ರತ್ನಾಕರ್, ನಾಗೇಶ್, ರೇಲಂಗಿ, ಎಚ್.ಆರ್.ಶಾಸ್ತ್ರಿ, ಕೃಷ್ಣಶಾಸ್ತ್ರಿಯವರೂ ನಟಿಸಿದ್ದಾರೆ. ಚಂದ್ರಮತಿಯಾಗಿ ಪಂಡರೀಬಾಯಿ ಮತ್ತು ಕಲಹಕಂಠಿಯಾಗಿ ರಮಾದೇವಿ- ಎರಡೇ ಪ್ರಮುಖ ಸ್ತ್ರೀಪಾತ್ರಗಳು. ಆದರೆ ಮುಂದೆ ಬಹುದೊಡ್ಡ ಕಲಾವಿದರಾದ ವಾಣಿಶ್ರೀ (ನರ್ತಕಿ), ರಾಜಶ್ರೀ ಮತ್ತು ಮೀನಾಕುಮಾರಿ (ಮಾತಂಗ ಕನ್ಯೆಯರು), ಎಲ್.ವಿಜಯಲಕ್ಷ್ಮಿ (ಮೇನಕ) ಪಾತ್ರಗಳನ್ನು ನಿರ್ವಹಿಸಿದ್ದಾರೆ. ಹಾಗಾಗಿ ಇದು ಕಲಾವಿದರ ಸಮೂಹವನ್ನೆ ಒಳಗೊಂಡ ಚಿತ್ರ.
‘ಸತ್ಯ ಹರಿಶ್ಚಂದ್ರ’ವು ಸಿನಿಮಾದ ಕೆಲವು ಸೂಕ್ಷ್ಮಗಳನ್ನು ನಿರೂಪಣೆಯಲ್ಲಿ ಮೊದಲ ಬಾರಿಗೆ ಅಳವಡಿಸಿಕೊಂಡ ಚಿತ್ರ. ಈ ಚಿತ್ರದಲ್ಲಿ ಅಳವಡಿಸಿರುವ ಕನಸಿನ ದೃಶ್ಯಗಳು ಮುಂದಿನ ದುರಂತದ ಭಾಷ್ಯಗಳಾಗಿ ಕಾಣುತ್ತವೆ. ಅತ್ತ ಇಂದ್ರನ ಸಭೆಯಲ್ಲಿ ವಶಿಷ್ಠ-ವಿಶ್ವಾಮಿತ್ರರ ವೈಯಕ್ತಿಕ ಪ್ರತಿಷ್ಠೆಗೆ ಹರಿಶ್ಚಂದ್ರನ ಬದುಕು ಪಣವಾದಾಗ, ಇತ್ತ ಚಂದ್ರಮತಿ ಮಂಚದಿಂದ ಧಿಗ್ಗನೆದ್ದು ‘ಯಾವುದೋ ಭಯಂಕರ ಸ್ವರೂಪನಾದ ಮುನಿವರ್ಯನು ಆಗ್ರಹದಿಂದ ತಮ್ಮನ್ನು ಸಿಂಹಾಸನದಿಂದ ಕೆಳಕ್ಕೆ ತಳ್ಳಿದಂತೆ ಕನಸು ಕಂಡೆ’ ಎಂದು ಹರಿಶ್ಚಂದ್ರನಿಗೆ ಕನಸನ್ನು ವಿವರಿಸುತ್ತಾಳೆ. ಲೋಹಿತಾಶ್ವ ಹಾವು ಕಡಿದು ಸತ್ತ ಸಮಯದಲ್ಲೇ ಚಂದ್ರಮತಿಯ ತವಕ ಮತ್ತು ಹರಿಶ್ಚಂದ್ರ ಪಡುವ ಬಾಧೆ ಚಿತ್ರದ ತೀವ್ರತೆಯನ್ನು ಪರಾಕಾಷ್ಠೆಗೆ ಒಯ್ಯುತ್ತವೆ. ಹರಿಶ್ಚಂದ್ರ ಹೆಂಡತಿಯ ತಲೆಯನ್ನು ಕಡಿಯುವ ದೃಶ್ಯದಲ್ಲಿ ಕುಳಿತ ಚಂದ್ರಮತಿಯ ಕೊರಳಿನಿಂದ ಕೂದಲನ್ನು ಸರಿಸುವ ದೃಶ್ಯದಲ್ಲಿ ಇಟ್ಟಿರುವ ಕ್ಯಾಮೆರಾಕೋನ, ಸ್ಮಶಾನದ ಘೋರತೆ, ವಿಷಣ್ಣ ಭಾವವನ್ನು ಮೂಡಿಸಲು ಬಳಸಿರುವ ಬೆಂಕಿ ಮತ್ತು ನೆರಳು ಬೆಳಕಿನ ಸಂಯೋಜನೆಯು ಕತೆಯಿಂದಾಚೆಗೂ ಚಲಿಸಿ ಪ್ರೇಕ್ಷಕರಿಗೆ ಹೊಸ ಅನುಭವ ಲೋಕವೊಂದನ್ನು ದರ್ಶನ ಮಾಡಿಸುವಷ್ಟು ಸಶಕ್ತವಾಗಿದೆ.

ಎಲ್ಲ ಶ್ರೇಷ್ಠ ಕೃತಿಗಳು ತಮ್ಮೊಡಲಲ್ಲಿ ಅನೇಕ ದರ್‍ಶನಗಳನ್ನು ಅಡಗಿಸಿಟ್ಟುಕೊಂಡಿರುವಂತೆ ‘ಸತ್ಯ ಹರಿಶ್ಚಂದ್ರ’ ಸಹ ತನ್ನ ಕತೆಯ ಚೌಕಟ್ಟನ್ನು ಮೀರಿದ ಅನುಭವ ದ್ರವ್ಯವನ್ನು ಉಣ ಬಡಿಸುತ್ತದೆ. ವಿಶ್ವಾಮಿತ್ರನ ಋಣ ತೀರಿಸಲು ಹರಿಶ್ಚಂದ್ರ ತನ್ನ ಹೆಂಡತಿ, ಮಕ್ಕಳನ್ನು ಮಾರಿಕೊಳ್ಳುವ ದೃಶ್ಯ ಅದಕ್ಕೊಂದು ದೊಡ್ಡ ಉದಾಹರಣೆ. ಇಲ್ಲಿ ಹರಿಶ್ಚಂದ್ರನ ದುರಂತಕ್ಕಿಂತ ಸಾಮಾಜಿಕ ಬದುಕಿನ ಘೋರತೆ ದರ್ಶನವಾಗುತ್ತದೆ. ಪವಿತ್ರ ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿಯೇ ದಾಸ್ಯಪದ್ಧತಿ ಜೀವಂತವಾಗಿರುವುದು; ಜಾನುವಾರುಗಳ ಪ್ರದರ್ಶನದಂತೆ ಮಹಿಳೆಯರನ್ನು ಹರಾಜು ಹಾಕುವುದು ಅಂದಿನ ಸಾಮಾಜಿಕ ಸ್ಥಿತಿಗೆ ಕನ್ನಡಿ ಹಿಡಿಯುತ್ತದೆ. ಇವೆಲ್ಲಕ್ಕಿಂತಲೂ ಮನದಲ್ಲಿ ಸ್ಥಿರವಾಗಿ ನಿಲ್ಲುವ ದೃಶ್ಯವೆಂದರೆ ನಕ್ಷತ್ರಿಕ-ವೀರಬಾಹುವಿನ ಸಂಭಾಷಣೆ. ಹರಿಶ್ಚಂದ್ರನನ್ನು ಕೊಳ್ಳಲು ಮುಂದೆ ಬರುವ ವೀರಬಾಹುವಿನ ವೃತ್ತಾಂತವನ್ನು ಕೇಳಿದ ನಕ್ಷತ್ರಿಕ “ಅಯ್ಯಯ್ಯೋ… ಸ್ಮಶಾನ ಕಾಯುವ ಹೀನ ಕುಲದವನೇನೋ… ಛೇ… ಛೇ… ಹಾಗ್ಯಾಕೆ ಮುಂದುಕ್ ನುಗ್ ಬರ್‍ತಿಯೋ! ನಿನ್ನ ನೆರಳು ಬಿದ್ದರೆ ನನಗೆ ಮೈಲಿಗೆ ಆಗುತ್ತೆ. ದೂರ ಇರೋ ದೂರ ಇರೋ” ಎನ್ನುತ್ತಾನೆ. ಪ್ರತಿಕ್ರಿಯೆಯಾಗಿ ವೀರಬಾಹು “ನಾನೆಷ್ಟು ದೂರ ಹೋದ್ರೂನು ನಾನು ನೀನು ನಿಂತಿರೋದು ಒಂದೇ ನೆಲದ ಮೇಲಲ್ಲವಾ! ಈ ನಂಟನ್ನು ಹ್ಯಾಗ್ ತಪ್ಪಿಸ್ಕೊಳ್ತೀಯಾ ಅಂತಾ?” ಎಂದು ಕೇಳುವ ಪ್ರಶ್ನೆ ಪ್ರೇಕ್ಷಕನನ್ನು ಎದ್ದು ಕೂಡುವಂತೆ ಮಾಡುತ್ತದೆ. (ಹುಣಸೂರರು ಈ ರೀತಿಯ ದಮನಿತರ ಪ್ರಶ್ನೆಗಳನ್ನು ಅನೇಕ ಚಿತ್ರಗಳಲ್ಲಿ ಮತ್ತೆ ಮತ್ತೆ ತರುತ್ತಾರೆ) ಹಾಗೆಯೇ ಹೆತ್ತಮಗನ ಹೆಣವನ್ನು ಸುಡಲೂ ತೆರಿಗೆಯನ್ನು ನೀಡುವಂತಹ ಆಚರಣೆಗಳೆಲ್ಲವೂ ಅಂದಿನ ಸಾಮಾಜಿಕ ವಾಸ್ತವಗಳನ್ನು ತೆರೆದಿಡುತ್ತವೆ.

‘ಸತ್ಯ ಹರಿಶ್ಚಂದ್ರ’ ಚಿತ್ರವು ಮುಖ್ಯಘಟ್ಟ ತಲುಪುವುದು ರಾಜ ಹರಿಶ್ಚಂದ್ರ ಸ್ಮಶಾನ ಕಾಯುವ ವೀರದಾಸನಾಗುವ ಹಂತದಲ್ಲಿ. ಆಗ ಬಳಸಿರುವ ‘ವಿಧಿ ವಿಪರೀತ…’ ಹಿನ್ನೆಲೆ ಹಾಡು ಮತ್ತು ಅಲ್ಲಿನ ದೃಶ್ಯಗಳು ಕನ್ನಡ ಸಿನಿಮಾ ಇತಿಹಾಸದಲ್ಲೇ ಹೊಸ ಬಗೆಯ ದೃಶ್ಯ ಸಂಯೋಜನೆಯನ್ನು ಕಟ್ಟಿಕೊಟ್ಟಿವೆ. ರಾಜನೊಬ್ಬನ ಸಂಸಾರದಲ್ಲಾದ ಪಲ್ಲಟಗಳಿಗಿಂತಲೂ ಭ್ರಮೆ ಮತ್ತು ವಾಸ್ತವಗಳ ತಾಕಲಾಟದಂತೆ ಆ ದೃಶ್ಯಗಳು ಕಂಡುಬರುತ್ತವೆ. ಸಪ್ತದ್ವೀಪ ವಸುಂಧರೆಯಾಳಿದ ಹರಿಶ್ಚಂದ್ರನ ಅರಮನೆಯ ಹಿನ್ನೆಲೆಯಲ್ಲೇ ಮಷೀಮಯವಾದ ಸ್ಮಶಾನ ಬರುವುದು, ಕೈತುಂಬ ನವರತ್ನ ರಾಶಿಯ ದಾನ ಮಾಡಿದ ಚಂದ್ರಮತಿ ಮುಷ್ಟಿ ಕೂಳಿಗೆ ಕೈಚಾಚುವುದು, ಹಂಸತೂಲಿಕಾ ಪಟ್ಟದಲ್ಲಿ ಪವಡಿಸುತ್ತಿದ್ದ ಲೋಹಿತಾಶ್ವ ನೆಲದ ಮೇಲೆ ಮಲಗುವ ದೃಶ್ಯ ಸರಣಿಗಳು, ಪ್ರಭುತ್ವ ಮತ್ತು ಸಾಮಾನ್ಯ ಬದುಕನ್ನು ನೇರ ಮುಖಾಮುಖಿಯಾಗಿಸುತ್ತವೆ. ನವರತ್ನಕ್ಕಿಂತಲೂ ಅನ್ನದ ಕಾಳಿಗಿರುವ ಮಹತ್ತ್ವ, ಅರಮನೆಯ ವೈಭವದೆದುರು ಸ್ಮಶಾನದ ನಿಜವಾಸ್ತವ, ಬದುಕಿನ ನಶ್ವರ ಮತ್ತು ನಿರರ್ಥಕತೆ ಕಟ್ಟಿಕೊಡುವ ಸ್ಮಶಾನ ಮತ್ತು ಅರಮನೆಗಳು ಸೃಷ್ಟಿಸುವ ಭ್ರಮಾಲೋಕವನ್ನು ಅನಾವರಣಗೊಳಿಸುತ್ತವೆ. ಪ್ರಭುತ್ವದ ಪ್ರತೀಕವಾದ ರಾಜದಂಡಕ್ಕೂ ಸ್ಮಶಾನ ಕಾಯುವವನ ಕೋಲಿಗೂ ವ್ಯತ್ಯಾಸವಿಲ್ಲದಿರುವುದನ್ನು ಸಮರ್ಥವಾಗಿ ಚಿತ್ರ ಬಿಂಬಿಸುತ್ತದೆ.

ಕಲಾವಿದರೆಲ್ಲರೂ ಪೈಪೋಟಿಗೆ ಬಿದ್ದಂತೆ ನಟಿಸಿರುವುದು ಈ ಚಿತ್ರದ ವಿಶೇಷ. ಅದರಲ್ಲೂ ರಾಜ್‌ರವರ ವೃತ್ತಿ ಜೀವನದ ಅತ್ಯುತ್ತಮ ಅಭಿನಯಗಳಲ್ಲಿ ಇದೊಂದು. ಹರಿಶ್ಚಂದ್ರ ರಾಜ್ಯ ಬಿಡುವವರೆಗೂ ಸಾಮಾನ್ಯ ರಾಜನಂತೆ ಕಾಣುವ ರಾಜ್, ರಾಜ್ಯ ತೊರೆದ ನಂತರ ಹರಿಶ್ಚಂದ್ರನ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದವರಂತೆ ಕಾಣುತ್ತಾರೆ. ಅದರಲ್ಲೂ ಹರಿಶ್ಚಂದ್ರನ ತಳಮಳ, ಅಸಹಾಯಕತೆಯ ನಡುವೆಯೂ ತೋರುವ ನಿಷ್ಠುರ, ದೃಢಚಿತ್ತದಂತಹ ಸಂಕೀರ್ಣ ಭಾವಗಳನ್ನು ಹೊಮ್ಮಿಸುವ ಪರಿ ಅಧ್ಯಯನಕ್ಕೆ ತಕ್ಕುದಾಗಿದೆ. ಅಶ್ವಥ್, ಉದಯ್‌ಕುಮಾರ್, ನರಸಿಂಹರಾಜು, ಎಂ.ಪಿ.ಶಂಕರ್‌ರವರ ಅಭಿನಯ ಸಹ ಚಿತ್ರವನ್ನು ಮೇಲುಮಟ್ಟದಲ್ಲಿ ನಿಲ್ಲಿಸಿದೆ.

‘ಸತ್ಯ ಹರಿಶ್ಚಂದ್ರ’ ಚಿತ್ರದ ಹಾಡುಗಳು ಇಂದಿಗೂ ಅದೇ ಜನಪ್ರಿಯತೆಯನ್ನು ಉಳಿಸಿಕೊಂಡಿವೆ. ಅದರಲ್ಲೂ ‘ಕುಲದಲ್ಲಿ…’ ಹಾಡು ವಾದ್ಯಗೋಷ್ಠಿಗಳ ಮಂಗಳ ಗೀತೆಯಾಗಿ ಅಂಗೀಕೃತವಾಗಿದೆ.

೧೯೬೫ರಲ್ಲಿ ಸುಮಾರು ೫.೫ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣಗೊಂಡಿತೆಂದು ಹೇಳಲಾದ ಈ ಚಿತ್ರ ಮೊದಲ ಬಿಡುಗಡೆಯ ವೇಳೆಯಲ್ಲಿ ನೂರು ದಿನಗಳ ಪ್ರದರ್ಶನ ಕಂಡಿತ್ತು. ಅನಂತರ ಅನೇಕ ಬಾರಿ ಮರುಪ್ರದರ್ಶನಕ್ಕೆ ಬಂತು. ೧೯೯೨-೯೩ರಲ್ಲಿ ಮರುಬಿಡುಗಡೆಯಾದಾಗ ೫ ಕೇಂದ್ರಗಳಲ್ಲಿ ರಜತೋತ್ಸವ ಮತ್ತು ಸುಮಾರು ೧೧ ಕೇಂದ್ರಗಳಲ್ಲಿ ಶತದಿನೋತ್ಸವ ಆಚರಿಸಿಕೊಂಡು ದಾಖಲೆ ಮಾಡಿತು. ೨೦೦೮ರ ಏಪ್ರಿಲ್ ೨೪ ರಂದು ರಾಜ್‌ರವರ ಹುಟುಹಬ್ಬದ ದಿನ ಮೂರು ಕೋಟಿ ವೆಚ್ಚದಲ್ಲಿ ಬಣ್ಣದ ಲೇಪನ ಹಾಗೂ ಡಿ.ಟಿ.ಎಸ್. ತಂತ್ರವನ್ನು ಅಳವಡಿಸಿಕೊಂಡು ಬಿಡುಗಡೆಯಾದ ಚಿತ್ರಕ್ಕೆ ಮಾತ್ರ ಹಳೆಯ ಮಾಂತ್ರಿಕತೆಯನ್ನು ಪುನರಾವರ್ತಿಸಲಾಗಲಿಲ್ಲ. ಬದಲಾದ ಯುಗಧರ್ಮವೋ, ಕಪ್ಪು-ಬಿಳುಪಿನ ಆಕರ್ಷಣೆ ಬಣ್ಣಕ್ಕಿರಲಿಲ್ಲವೋ ತಿಳಿಯದು. ಆದರೆ ಈ ಚಿತ್ರ ಬಿಡುಗಡೆಯಾದಾಗ ಅದರಲ್ಲಿ ನಟಿಸಿದ್ದ ಕನ್ನಡ ಕಲಾವಿದರಲ್ಲಿ, ಉಳಿದಿದ್ದವರು ಕೆಲವರು ಮಾತ್ರ. ಅವರಲ್ಲಿ ಮುಖ್ಯರಾದವರು ದ್ವಾರಕೀಶ್, ನಾಗೇಶ್, ಕೆ.ಎಸ್.ಅಶ್ವಥ್ ಮತ್ತು ಎಂ.ಪಿ.ಶಂಕರ್. (ಈಗ ಎಂ.ಪಿ.ಶಂಕರ್ ವಿಧಿವಶರಾಗಿದ್ದಾರೆ. ವೀರಬಾಹು ಅಮರನಾಗಿದ್ದಾನೆ).
***

ಕನ್ನಡ ಚಿತ್ರರಂಗದ ಆರಂಭದಿಂದಲೂ ಅದರ ಬೆಳವಣಿಗೆಯಲ್ಲಿ ಪಾತ್ರವಹಿಸಿರುವ ಹುಣಸೂರು ಕೃಷ್ಣಮೂರ್ತಿಯವರು ಸಂಭಾಷಣೆ, ಹಾಡುಗಳು, ಚಿತ್ರಕಥೆ ರಚನಕಾರರಾಗಿ, ನಟ, ನಿರ್ಮಾಪಕ, ನಿರ್ದೇಶಕರಾಗಿ ಹಲವಾರು ಕ್ಷೇತ್ರಗಳಲ್ಲಿ ದುಡಿದವರು. ಹುಣಸೂರಿನಲ್ಲಿ ೯-೨-೧೯೧೪ರಂದು ಜನಿಸಿದ ಅವರು ಮೈಸೂರಿನ ಶಾರದಾ ವಿಲಾಸ ಸಂಸ್ಥೆಯಲ್ಲಿ ಓದುತ್ತಿರುವ ಕಾಲದಲ್ಲೇ ನಾಟಕಗಳಿಂದ ಆಕರ್ಷಿತರಾದವರು. ನಟನೆ ಮತ್ತು ನಾಟಕ ರಚನೆಯ ಹುಚ್ಚು ಅಂದಿನ ಚಿತ್ರನಿರ್ಮಾಣ ಕೇಂದ್ರವೆನಿಸಿದ್ದ ಮುಂಬೈಗೆ ಅವರನ್ನು ಸೆಳೆಯಿತು. ಆಗ ಹಿಂದೀ ಚಲನಚಿತ್ರರಂಗದಲ್ಲಿ ಖ್ಯಾತರಾಗಿದ್ದ ನಿರ್ದೇಶಕ ಹಿಮಾಂಷು ರಾಯ್, ವಿ.ಶಾಂತಾರಾಂ ಹಾಗೂ ಕಲಾವಿದರಾದ ದೇವಿಕಾರಾಣಿ, ಅಶೋಕ್ ಕುಮಾರ್ ಮುಂತಾದವರ ಸಹವಾಸ ದೊರಕಿತು. ಅಲ್ಲಿನ ಬಾಲಗಂಧರ್ವ ಸಭಾದಲ್ಲಿ ಕೆಲಸಕ್ಕೆ ಸೇರಿ ತಬಲ, ಹಾರ್ಮೋನಿಯಮ್ ವಾದ್ಯಗಳಲ್ಲಿ ಪರಿಶ್ರಮ ಪಡೆದರು. ಅಂದಿನ ಪ್ರಸಿದ್ಧ ನಾಟಕ ಸಂಸ್ಥೆಗಳಾದ ಪೆಂಡಾರ್ಕರ್ ಮತ್ತು ಸುರ್‌ನಾಯಕ್ ರವರ ಕಲಾಮಂಡಳಿಗೆ ಸೇರಿ ಅಭಿನಯ ಮತ್ತು ನಾಟಕ ರಂಗದ ಇತರ ವಿಭಾಗಗಳಲ್ಲೂ ಅನುಭವ ಗಳಿಸಿದರು. ಅನಂತರ ಹುಬ್ಬಳ್ಳಿಗೆ ಬಂದು ಗರುಡ ನಾಟಕ ಕಂಪನಿ, ಪೀರ್‌ಸಾಹೇಬ್‌ರವರ ಚಂದ್ರಕಲಾ ನಾಟಕ ಮಂಡಳಿ ಮತ್ತು ಗುಬ್ಬಿ ನಾಟಕ ಕಂಪನಿಗಳಲ್ಲೂ ಕಾರ್ಯನಿರ್ವಹಿಸಿದರು. ಗುಬ್ಬಿ ಕಂಪನಿಯವರಿಗಾಗಿ ಅವರು ರಚಿಸಿದ ‘ರಾಜಾ ಗೋಪಿಚಂದ್’ ನಾಟಕ ಸತತ ಐದುನೂರ ದಿನಗಳ ಪ್ರದರ್ಶನ ಕಂಡು ಆ ಕಾಲಕ್ಕೆ ದಾಖಲೆಯೆನಿಸಿತ್ತು.

ತಮ್ಮ ಮೊದಲ ನಾಟಕದ ಯಶಸ್ಸಿನಿಂದ ಪ್ರೇರಣೆಗೊಂಡ ಹುಣಸೂರರು ಚಿತ್ರಕತೆ ರಚನೆಗೆ ಕೈ ಹಾಕಿದರು. ಗುಬ್ಬಿ ಫಿಲಂಸ್ ತಯಾರಿಸಿದ ‘ಹೇಮರೆಡ್ಡಿ ಮಲ್ಲಮ್ಮ’ (೧೯೪೩) ಚಿತ್ರಕ್ಕೆ ಚಿತ್ರಕತೆಯನ್ನು ರಚಿಸಿದರು. ಅನಂತರ ಮಹಾತ್ಮ ಪಿಕ್ಚರ್ಸ್‌ರವರ ಚೊಚ್ಚಲ ನಿರ್ಮಾಣ ‘ಕೃಷ್ಣಲೀಲಾ’ ಚಿತ್ರದ ಕತೆ, ಚಿತ್ರಕತೆ ಮತ್ತು ಸಂಭಾಷಣೆ ಮೂಲಕ ಪೂರ್ಣ ಪ್ರಮಾಣದ ಚಿತ್ರ ಸಾಹಿತಿಯಾಗಿ ಹೊರಹೊಮ್ಮಿದರು. ಕೆಂಪರಾಜ ಅರಸು ನಾಯಕರಾಗಿದ್ದ ’ಮಹಾನಂದ’, ‘ರಾಜಾವಿಕ್ರಮ’ ಮತ್ತು ‘ನಳ ದಮಯಂತಿ’ ಮುಂತಾದ ಚಿತ್ರಗಳಿಗೆ ಸಂಭಾಷಣೆ ಬರೆದು ಬಹುಬೇಡಿಕೆಯ ಸಾಹಿತಿಯಾದರು. ’ಮಹಾನಂದ’ (೧೯೪೭) ಚಿತ್ರದ ಪ್ರಧಾನ ನಿರ್ಮಾಪಕರು ಸಹ ಹುಣಸೂರರೇ! ಮಹಾತ್ಮಾ ಪಿಕ್ಚರ್ಸ್‌ರವರ ಆರಂಭದ ಚಿತ್ರಗಳಿಗೆ ಇವರು ಖಾಯಂ ಸಾಹಿತಿಯಾಗಿದ್ದರು. ’ಕೆ.ಎಂ. ಹುಣಸೂರು’, ’ಗೌತಮ’ ಹೆಸರುಗಳಲ್ಲಿಯೂ ಸಂಭಾಷಣೆ, ಗೀತೆಗಳನ್ನು ರಚಿಸಿದರು. ಸಿನಿಮಾ ಸಂಭಾಷಣೆ ರಚನೆಯಲ್ಲಿ ಇವರು ಎಷ್ಟು ಬೇಡಿಕೆಯ ಸಾಹಿತಿಯಾಗಿದ್ದರೆಂದರೆ ೧೯೫೩ರಲ್ಲಿ ಬಿಡುಗಡೆಯಾದ ಎಂಟು ಚಿತ್ರಗಳಲ್ಲಿ ಆರು ಚಿತ್ರಗಳಿಗೆ ಇವರೇ ಸಾಹಿತ್ಯ ಒದಗಿಸಿದ್ದರು. ’ಮಂಗಳಗೌರಿ’ (೧೯೫೩) ಚಿತ್ರವನ್ನು ಇವರೇ ನಿರ್ದೇಶಿಸಿದ್ದರೂ, ನಿರ್ದೇಶಕರ ಹೆಸರು ಟಿ.ಆರ್. ಸುಂದರಂ ಅವರಿಗೆ ದಕ್ಕಿತು. ಹುಣಸೂರು ಅವರು ಸಾಹಿತ್ಯ ಒದಗಿಸಿದ ಹಲವಾರು ಚಿತ್ರಗಳ ನಿರ್ದೇಶಕರು ಇದ್ದದ್ದು ನೆಪಮಾತ್ರಕ್ಕೆ. ಉಳಿದಂತೆ ಇವರೇ ಚಿತ್ರ ನಿರ್ದೇಶಿಸುತ್ತಿದ್ದರೆಂದು ಹಲವಾರು ಹಿರಿಯರು ನೆನಪಿಸಿಕೊಳ್ಳುತ್ತಾರೆ. ’ಮಾಡಿದ್ದುಣ್ಣೋ ಮಹರಾಯ’ (೧೯೫೪) ಚಿತ್ರದಲ್ಲಿ ನಾಯಕನಟರಾಗಿ ಅಭಿನಯಿಸಿದ ಹುಣಸೂರರು ಮುಂದೆ ತಮ್ಮ ಸ್ವಂತ ನಿರ್ಮಾಣದ ’ವೀರಸಂಕಲ್ಪ’ (೧೯೬೪) ಚಿತ್ರದಲ್ಲೂ ನಾಯಕನ ಪಾತ್ರ ವಹಿಸಿದ್ದರು.

೧೯೬೦ರಲ್ಲಿ ತಯಾರಾದ ‘ಆಶಾಸುಂದರಿ’ ಚಿತ್ರದ ಮೂಲಕ ಅಧಿಕೃತವಾಗಿ ಸ್ವತಂತ್ರ ನಿರ್ದೇಶಕರಾದ ಹುಣಸೂರರು ಮುಂದೆ ಸುಮಾರು ೨೦ ಚಿತ್ರಗಳನ್ನು ನಿರ್ದೇಶಿಸಿದರು. ‘ಮದುವೆ ಮಾಡಿನೋಡು’ ಮತ್ತು ‘ಅಡ್ಡದಾರಿ’ ಚಿತ್ರಗಳನ್ನು ಹೊರತುಪಡಿಸಿದರೆ ಅವರ ನಿರ್ದೇಶನದ ಬಹುತೇಕ ಚಿತ್ರಗಳು ಪೌರಾಣಿಕ, ಜಾನಪದ, ಸಂತರ ಬದುಕನ್ನು ಆಧರಿಸಿದಂಥವು. ‘ಬಬ್ರುವಾಹನ’, ‘ಭಕ್ತಕುಂಬಾರ’, ‘ಭಕ್ತ ಸಿರಿಯಾಳ’, ‘ಕನ್ನಿಕಾಪರಮೇಶ್ವರಿ ಕತೆ’, ‘ವೀರಸಂಕಲ್ಪ’, ‘ದೇವರ ಗೆದ್ದ ಮಾನವ’, ‘ಜಗಮೆಚ್ಚಿದ ಮಗ’ -ಇವು ಹುಣಸೂರರು ನಿರ್ದೇಶಿಸಿದ ಕೆಲವು ಯಶಸ್ವಿ ಚಿತ್ರಗಳು. ಅಭಿನಯ, ಸಂಭಾಷಣೆಯಿಂದಲೇ ಜನಪ್ರಿಯ ಚಿತ್ರಗಳನ್ನು ರೂಪಿಸುತ್ತಿದ್ದದ್ದು ಹುಣಸೂರರ ಸಾಮರ್ಥ್ಯ. ‘ವೀರಸಂಕಲ್ಪ’ ಚಿತ್ರದಲ್ಲಿ ನೀಡಿದ ವೀರಾವೇಶದ ಅಭಿನಯ ಅವರ ನಟನಾ ಪ್ರತಿಭೆಗೆ ಸಾಕ್ಷಿಯಾಗಿತ್ತು. ಆದರೆ ಹುಣಸೂರರು ಕಲಾವಿದರ ಅಭಿನಯ ಪ್ರತಿಭೆಯನ್ನು ದುಡಿಸುವುದರಲ್ಲಿ ಹೆಚ್ಚು ಒಲವು ಬೆಳೆಸಿಕೊಂಡರು. ರಾಜ್‌ರಂಥವರಿಂದ ಉತ್ತಮ ಅಭಿನಯ ತೆಗೆಸುವುದರಲ್ಲಿ ಸಿದ್ಧಹಸ್ತರಾಗಿದ್ದರು. ‘ಸತ್ಯ ಹರಿಶ್ಚಂದ್ರ’, ‘ಕನ್ನಿಕಾ ಪರಮೇಶ್ವರಿ ಕತೆ’, ‘ಭಕ್ತ ಕುಂಬಾರ’, ‘ಬಬ್ರುವಾಹನ’, ‘ಜಗ ಮೆಚ್ಚಿದ ಮಗ’ ಚಿತ್ರದಲ್ಲಿ ರಾಜ್‌ರವರ ಅಭಿನಯ ರಸಿಕರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ.

ಎವರ್‌ಗ್ರೀನ್ ಪ್ರೊಡಕ್ಷನ್ಸ್ ಸಂಸ್ಥೆಯನ್ನು ಹುಟ್ಟುಹಾಕಿ ಅನೇಕ ಚಿತ್ರಗಳನ್ನು ತಯಾರಿಸಿದ ಹುಣಸೂರರು ಹಲವು ಕಲಾವಿದರನ್ನು ಪರಿಚಯಿಸಿದ್ದಾರೆ. ಎಂ.ಪಿ.ಶಂಕರ್ (ರತ್ನ ಮಂಜರಿ), ದ್ವಾರಕೀಶ್, ಬಿ.ಎಂ.ವೆಂಕಟೇಶ್, ವಾಣಿಶ್ರೀ (ವೀರಸಂಕಲ್ಪ) ಮುಂತಾದ ಕಲಾವಿದರು ಹುಣಸೂರರ ಗರಡಿಯಿಂದ ತಯಾರಾದವರು. ಮೊದಲ ಮೂವರು ಸಹ ತಮ್ಮ ಗುರುವಿನಂತೆ ಚಿತ್ರ ನಿರ್ಮಿಸಿ ಮತ್ತಷ್ಟು ಕಲಾವಿದರು, ತಂತ್ರಜ್ಞರಿಗೆ ಅವಕಾಶ ಕಲ್ಪಿಸಿದರು.

ಹುಣಸೂರರ ಪ್ರತಿಭೆಯನ್ನು ಸಮರ್ಥವಾಗಿ ಉಪಯೋಗಿಸಿ ಕೊಂಡವರಲ್ಲಿ ಸಿದ್ಧಲಿಂಗಯ್ಯ ಅಗ್ರಗಣ್ಯರು. ‘ಬಂಗಾರದ ಮನುಷ್ಯ’, ‘ಬೂತಯ್ಯನ ಮಗ ಅಯ್ಯು’ ಮುಂತಾದ ಚಿತ್ರಗಳ ಯಶಸ್ಸಿನಲ್ಲಿ ಹುಣಸೂರರ ಸಂಭಾಷಣೆ, ಹಾಡುಗಳ ಕಾಣಿಕೆಯನ್ನು ಮರೆಯುವಂತಿಲ್ಲ. ಹಾಡುಗಳಲ್ಲಿ ಪ್ರಾಸದ ಹಂಗನ್ನು, ವೈಭವದ ಸಾಲುಗಳನ್ನು, ವಿಶೇಷಣಗಳ ಮೆರವಣಿಗೆಯನ್ನು ತ್ಯಜಿಸಿದವರಲ್ಲಿ ಅವರೇ ಮೊದಲಿಗರು. ಚಿತ್ರದ ವಸ್ತು ಪುರಾತನವಾದರೂ, ಸಮಕಾಲೀನ ಚಿಂತನೆಗಳನ್ನು ಬೆರೆಸುತ್ತಿದ್ದ ಅವರ ಕ್ರಿಯಾಶೀಲತೆ ನವೀನವೆನಿಸುತ್ತಿತ್ತು. ಅವರು ರಚಿಸಿದ ‘ಬೊಂಬೆಯಾಟವಯ್ಯ’ (ಕೃಷ್ಣಗಾರುಡಿ), ‘ನಗು ನಗುತಾ ನಲಿ… ಬಾಳ ಬಂಗಾರ ನೀನು’ (ಬಂಗಾರದ ಮನುಷ್ಯ), ‘ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ…’ (ಸತ್ಯ ಹರಿಶ್ಚಂದ್ರ), ‘ಮಾನವ ದೇಹವು…’ (ಭಕ್ತ ಕುಂಬಾರ), ‘ಏಕೋ ಈ ಕೋಪ ಶಂಕರ…’, ‘ಶಿವ ಶಿವ ಎಂದರೆ ಭಯವಿಲ್ಲಾ…’ (ಭಕ್ತ ಸಿರಿಯಾಳ), ‘ಅಮೃತಮಯವೀ ಪ್ರೇಮ’ (ಆಶಾಸುಂದರಿ), ‘ನಿಂತಲ್ಲೇ ಅವಳು ಕುಳಿತಲ್ಲೆ ಅವಳು’ (ಕನ್ನಿಕಾ ಪರಮೇಶ್ವರಿ ಕತೆ), ‘ಹಾಡು ಬಾ ಕೋಗಿಲೆ…’ (ವೀರಸಂಕಲ್ಪ) ಮುಂತಾದ ಹಾಡುಗಳು ತಮ್ಮ ಮಾಧುರ್ಯ ಮತ್ತು ಅರ್ಥಗರ್ಭಿತ ಸಾಲುಗಳಿಂದ ಅಮರವಾಗಿವೆ.

ಸಿನಿಮಾಗಳಲ್ಲಿ ಛೇಡಿಸುವ ಹಾಡುಗಳನ್ನು ಜನಪ್ರಿಯಗೊಳಿಸಿದ ಕೀರ್ತಿ ಹುಣಸೂರರಿಗೇ ಸಲ್ಲಬೇಕು. ‘ರಾಜಲಕ್ಷ್ಮಿ’ ಚಿತ್ರದ ‘ಮಾರನಂಥ ರೂಪ ಕಂಡು ಮಾರುಹೋದೆ…’, ‘ಸಿಟ್ಯಾಕೊ ಸಿಡಿಕ್ಯಾಕೋ ನನ ಜಾಣ…’ (ವೀರ ಸಂಕಲ್ಪ), ‘ಹಣ್ಣು… ಹಣ್ಣು… ಗಂಜಾಂ ಮಾವಿನ ಹಣ್ಣು’ (ದೇವರ ಗೆದ್ದ ಮಾನವ), ‘ಗಂಡಿನ ಕಡೆಯ ನೆಂಟರು ನೀವು…’ (ಕನ್ನಿಕಾ ಪರಮೇಶ್ವರಿ ಕತೆ), ‘ಗಿಲಿ ಗಿಲಿ ಗಿಲಕ್ಕ ಕಾಲುಗೆಜ್ಜೆ ಥಣಕ್ಕಾ… ರಂಗೆದ್ದಿತೋ’ (ರತ್ನಮಂಜರಿ), ‘ಏರಿ ಮೇಲೆ ಏರಿ ಮೇಲೆ ಕೆಳಗೆ ಹಾರಿ…’ (ಜಗಮೆಚ್ಚಿದ ಮಗ), ‘ಮದುವೆ ಮಾಡಿಕೊಂಡು ಮನೆಯ ಹೂಡಿಕೊಂಡು…’ (ಮದುವೆ ಮಾಡಿ ನೋಡು), ‘ನನ್ನ ನೀನು, ನಿನ್ನ ನಾನು ಕಾದುಕೊಂಡು…’ (ಸತ್ಯ ಹರಿಶ್ಚಂದ್ರ) ಮುಂತಾದ ಹಾಡುಗಳ ಮೂಲಕ ಚಿತ್ರಕ್ಕೆ ಪ್ರೇಕ್ಷಕ ಸಮೂಹವನ್ನು ಸೆಳೆಯುವ ಚಮತ್ಕಾರವನ್ನು ಅಳವಡಿಸಿದವರು ಹುಣಸೂರರು. ಈ ತಂತ್ರವನ್ನು ಮುಂದೆ ಅನೇಕ ನಿರ್ದೇಶಕರು ಅನುಕರಿಸಿದರು.

ಎಲ್ಲಕ್ಕಿಂತ ಮುಖ್ಯವಾಗಿ ವಿಷಾದ ಮತ್ತು ಜೀವನ ನಿರರ್ಥಕತೆಯ ಭಾವದ ತತ್ತ್ವಪದದಂಥ ಹಾಡುಗಳ ಮೂಲಕ ಚಿತ್ರದ ಓಟದ ಗತಿಯನ್ನು ನಿರ್ದೇಶಿಸಲು ಹುಣಸೂರರು ಅಳವಡಿಸಿದ ತಂತ್ರ ಮುಂದೆ ಅಪಾರ ಜನಪ್ರಿಯತೆ ಪಡೆಯಿತು. ಹಾಗಾಗಿ ‘ಸತ್ಯ ಹರಿಶ್ಚಂದ್ರ’ ಚಿತ್ರದ ‘ವಿಧಿ ವಿಪರೀತ…’, ‘ದಲ್ಲಾಳಿ’ ಚಿತ್ರದ ‘ಆಗಿತ್ತು ತಲೆಯ ಮೇಲೆ ಜರಿಪೇಟ…’, ‘ಕನ್ಯಾದಾನ’ ಚಿತ್ರದ ‘ಬಣ್ಣದಲೇನಿದೆಯೋ ಬೆಡಗು…’, ‘ಬಂಗಾರದ ಮನುಷ್ಯ’ ಚಿತ್ರದ ‘ನಗು ನಗುತಾ ನಲಿ…’, ‘ಭಕ್ತ ಕುಂಬಾರ’ ಚಿತ್ರದ ‘ಮಾನವ ದೇಹವು…’, ‘ಬೂತಯ್ಯನ ಮಗ ಅಯ್ಯು’ ಚಿತ್ರದ ‘ವಿರಸವೆಂಬ…’ ಮುಂತಾದ ರಚನೆಗಳು ತತ್ತ್ವಜ್ಞಾನಿಯೊಬ್ಬನ ಚಿಂತನೆಗಳಂತೆ ಕಾಣಿಸಿಕೊಂಡು ಚಿತ್ರಗಳ ಮೌಲ್ಯವನ್ನು ಹೆಚ್ಚಿಸಿವೆ.

ಸಾಮಾಜಿಕ ಚಿತ್ರಗಳನ್ನು ಹೆಚ್ಚು ನಿರ್ದೇಶಿಸದಿದ್ದರೂ, ಸಮಾಜದ ಮೌಲ್ಯಗಳನ್ನು, ದಮನಿತರ ಮನೋಭಾವವನ್ನು ತಮ್ಮ ಚಿತ್ರಗಳಲ್ಲಿ ಮತ್ತು ಸಂಭಾಷಣೆಗಳಲ್ಲಿ ತಂದುಕೊಟ್ಟವರು ಹುಣಸೂರು ಕೃಷ್ಣಮೂರ್ತಿ. ತಮ್ಮೆಲ್ಲ ಶಕ್ತಿ ಸಾಮರ್ಥ್ಯಗಳನ್ನು ಧಾರೆಯೆರೆದು ರೂಪಿಸಿದ ‘ಸತ್ಯ ಹರಿಶ್ಚಂದ್ರ’ ಚಿತ್ರವೊಂದೇ ಅವರಿಗೆ ಕನ್ನಡ ಚಿತ್ರರಂಗ ಇತಿಹಾಸದಲ್ಲಿ ಮಹತ್ತರವಾದ ಸ್ಥಾನ ಕಲ್ಪಿಸಲು ಸಾಕು.

ಸೈಡ್ ರೀಲ್

– ‘ಸತ್ಯ ಹರಿಶ್ಚಂದ್ರ’ನ ಕತೆ ಯಾಕೋ ಏನೋ ಭಾರತದ ಚಿತ್ರರಂಗದ ಇತಿಹಾಸದಲ್ಲಿ ಹಾಸು ಹೊಕ್ಕಾಗಿದೆ. ಹಾಗೆ ನೋಡಿದರೆ, ಭಾರತೀಯ ಕಥಾಚಿತ್ರ ಪರಂಪರೆ ಆರಂಭವಾದದ್ದೆ ಹರಿಶ್ಚಂದ್ರನ ಬದುಕನ್ನು ತೆರೆಗೆ ತರುವ ಮೂಲಕ. ‘ರಾಜಾ ಹರಿಶ್ಚಂದ್ರ’ -ಭಾರತದ ಮೊದಲ ಕಥಾ ಚಲನಚಿತ್ರ. ದಾದಾಸಾಹೇಬ್ ಫಾಲ್ಕೆ ನಿರ್ಮಿಸಿ, ನಿರ್ದೇಶಿಸಿ ಅಭಿನಯಿಸಿದ ಚಿತ್ರ. ೧೯೧೩ರ ಮೇ ತಿಂಗಳಲ್ಲಿ ತೆರೆಕಂಡಿತು.

– ೧೯೧೩ರಿಂದ ಇದುವರೆಗೂ ಉರ್ದು, ಕನ್ನಡ, ತೆಲುಗು, ತಮಿಳು, ಗುಜರಾತಿ, ಹಿಂದಿ ಮತ್ತು ಒರಿಯಾ ಭಾಷೆಗಳಲ್ಲಿ ಸತ್ಯಹರಿಶ್ಚಂದ್ರನ ಕಥೆಯನ್ನಾಧರಿಸಿದ ಚಿತ್ರಗಳು ನಿರ್ಮಾಣಗೊಂಡಿವೆ.

– ‘ಸತ್ಯ ಹರಿಶ್ಚಂದ್ರ’ನ ಪಾತ್ರವನ್ನು ದಾದಾಸಾಹೇಬ್ ಫಾಲ್ಕೆ, ಪೃಥ್ವಿರಾಜ್ ಕಪೂರ್, ಎನ್‌ಟಿ‌ಆರ್, ಸುಬ್ಬಯ್ಯನಾಯ್ಡು ಮುಂತಾದ ಅಪ್ರತಿಮ ಕಲಾವಿದರು ನಿರ್ವಹಿಸಿದ್ದಾರೆ. ಆದರೆ ೧೯೬೫ರಲ್ಲಿ ಬಿಡುಗಡೆಯಾದ ‘ಸತ್ಯ ಹರಿಶ್ಚಂದ್ರ’ ಚಿತ್ರ ಮತ್ತು ರಾಜ್‌ರವರ ಅಭಿನಯ ಅನುಪಮವೆಂಬುದು ಬಹುತೇಕ ವೀಕ್ಷಕರ ಅಭಿಪ್ರಾಯ.

– ಹಾಡೇ ಇಲ್ಲದ ಬರೀ ತಿಲ್ಲಾನವನ್ನು ಬಳಸಿ ಮೇನಕೆಯ ನೃತ್ಯವನ್ನು ಈ ಚಿತ್ರದಲ್ಲಿ ಸಂಯೋಜಿಸಿದ್ದು ವಿಶಿಷ್ಟವೆನಿಸಿತ್ತು. (ಪ್ರಾಯಶಃ ಎರಡೂ ಭಾಷೆಗಳಲ್ಲಿ ಬಳಸಿಕೊಳ್ಳುವ ಕಾರಣಕ್ಕಿರಬಹುದು). ’ಬೇಡರ ಕಣ್ಣಪ್ಪ’ ಚಿತ್ರದ ’ಬೇಡರ ನೃತ್ಯ’ದ ನಂತರ ಬರೀ ಸಂಗೀತದ ಗತಿಗೆ ಚಿತ್ರೀಕರಿಸಿದ ಪೂರ್ಣ ಪ್ರಮಾಣದ ನೃತ್ಯದ ದೃಶ್ಯವಿದು. ಹಾಗೆಯೇ ನಾಮಪದಗಳನ್ನೊಳಗೊಂಡ ‘ನಮೋ ಭೂತನಾಥ…’ ಗೀತೆಯೂ ಎರಡೂ ಭಾಷೆಗಳಲ್ಲಿ ವ್ಯತ್ಯಾಸವಿಲ್ಲದೆ ಬಳಕೆಯಾಗಿದೆ

– ಕನ್ನಡದಲ್ಲೇ ಎರಡು ಬಾರಿ ‘ಸತ್ಯ ಹರಿಶ್ಚಂದ್ರ’ ಚಿತ್ರ ನಿರ್ಮಾಣವಾಗಿದೆ. ಕನ್ನಡದಲ್ಲಿ ಎರಡುಬಾರಿ ನಿರ್ಮಾಣಗೊಂಡ ಚಿತ್ರಗಳಲ್ಲಿ, ಎರಡನೆಯ ಆವೃತ್ತಿಯ ಬಹುತೇಕ ಚಿತ್ರಗಳಲ್ಲಿ ರಾಜ್ ಅಭಿನಯಿಸಿದ್ದಾರೆ. ಅವುಗಳಲ್ಲಿ ಸತ್ಯ ಹರಿಶ್ಚಂದ್ರ, ಭಕ್ತ ಪ್ರಹ್ಲಾದ, ಭಕ್ತ ಕುಂಬಾರ (ಮೊದಲು ಗೋರ ಕುಂಬಾರ), ಶ್ರೀನಿವಾಸ ಕಲ್ಯಾಣ, ಕವಿರತ್ನ ಕಾಳಿದಾಸ (ಮಹಾಕವಿ ಕಾಳಿದಾಸ), ನವಕೋಟಿ ನಾರಾಯಣ (ಪುರಂದರದಾಸರು) ಪ್ರಮುಖವಾದವು. ‘ಬೇಡರ ಕಣ್ಣಪ್ಪ’ ಎರಡನೇ ಬಾರಿಗೆ ‘ಶಿವಮೆಚ್ಚಿದ ಕಣ್ಣಪ್ಪ’(೧೯೭೮)ನ ಅವತರಣಿಕೆಯಲ್ಲಿ ತಯಾರಾದಾಗ ರಾಜ್‌ರವರು ‘ಶಿವಯ್ಯ’ನ ಪಾತ್ರ ವಹಿಸಿದ್ದರು. ಮೂಲ ‘ಬೇಡರ ಕಣ್ಣಪ್ಪ’ ಚಿತ್ರದಲ್ಲಿ ಆ ಪಾತ್ರವನ್ನು ಎಚ್.ರಾಮಚಂದ್ರ ಶಾಸ್ತ್ರಿ ಅವರು ವಹಿಸಿದ್ದರು. ‘ಶ್ರೀನಿವಾಸ ಕಲ್ಯಾಣ’ದ ಮೊದಲ ಆವೃತ್ತಿಯಲ್ಲಿ ರಾಜ್‌ರವರು ಮೊದಲ ಬಾರಿಗೆ ಸಿನಿಮಾದಲ್ಲಿ ಅಭಿನಯಿಸಿದ್ದರು.

– ‘ಸತ್ಯ ಹರಿಶ್ಚಂದ್ರ’ -ರಾಜ್‌ಕುಮಾರ್ ಮತ್ತು ಪಂಡರೀಬಾಯಿ ಅವರು ನಾಯಕ-ನಾಯಕಿಯಾಗಿದ್ದ ಕೊನೆಯ ಚಿತ್ರ. ಪಂಡರೀಬಾಯಿ ಅವರು ಪೋಷಕ ಪಾತ್ರಗಳತ್ತ ಹೊರಳಿ ಸಾಕಷ್ಟು ವರ್ಷಗಳಾದರೂ ಮತ್ತೆ ರಾಜ್ ಜೊತೆಯಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು..

– ಕನ್ನಡದಲ್ಲಿ ಅತಿ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದವರ ಪಟ್ಟಿಯಲ್ಲಿ ಸೇರಿರುವ ಭಾರ್ಗವ ಅವರು ’ವೀರಸಂಕಲ್ಪ’ ಚಿತ್ರದ ಸಹಾಯಕ ನಿರ್ದೇಶಕರಾಗಿ ಚಿತ್ರರಂಗ ಪ್ರವೇಶಿಸಿ ಹುಣಸೂರರ ಶಿಷ್ಯರಾಗಿ ಬೆಳೆದರು.

– ರಕ್ಕಸ ತಂಗಡಿ ಯುದ್ಧದ ನಂತರದ ವಿಜಯನಗರ ಆಳರಸರ ಕತೆಯ ಹಿನ್ನೆಲೆಯಿದ್ದ ’ವೀರಸಂಕಲ್ಪ’ ಚಿತ್ರವನ್ನು ಹುಣಸೂರರು ಹಂಪೆಯ ಅವಶೇಷಗಳ ಪರಿಸರದಲ್ಲಿಯೇ ಚಿತ್ರೀಕರಿಸಿದ್ದರು. ಅನೇಕ ಇತಿಹಾಸಕಾರರ ಕೃತಿಗಳನ್ನು ಆಧಾರವಾಗಿಟ್ಟುಕೊಂಡು ಚಿತ್ರಕತೆ ರಚಿಸಿದ್ದರು. ಬೆಂಗಳೂರಿನ ಹನುಮಾನ್ ವ್ಯಾಯಾಮ ಶಾಲೆಯ ಕುಸ್ತಿಪಟುಗಳು ಚಿತ್ರದ ಯುದ್ಧದ ಸನ್ನಿವೇಶಗಳಲ್ಲಿ ಭಾಗವಹಿಸಿದ್ದು ಚಿತ್ರದ ಆಕರ್ಷಣೆಗಳಲ್ಲೊಂದಾಗಿತ್ತು.
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....