ಅತ್ತ ಹಿಮಗಿರಿ ಕಂಡೆ ಸುತ್ತ ಸಾಗರ ಕಂಡೆ
ನಿನ್ನ ಕಾಣದೆ ಹೋದೆ ವೀರಭದ್ರಾ
ಜಾತಿ ಜಂಜಡದಲ್ಲಿ ಕೋತಿ ಕಾಳಗ ಕಂಡೆ
ನಿನ್ನ ಅರಿಯದೆ ನಿಂದೆ ವಿಶ್ವರುದ್ರಾ ॥
ಚರ್ಮ ದೇಹವ ನಂಬಿ ಚೂರು ದೇವರ ನಂಬಿ
ನೂರು ದಾರಿಯ ಹಿಡಿದೆ ವೀರಭದ್ರಾ
ಅತ್ತ ಸಾವಿನ ಹಬ್ಬ ಇತ್ತ ನೋವಿನ ಕಬ್ಬ
ಚಟದ ಚಟ್ಟಕೆ ಬಿದ್ದೆ ಅಗ್ನಿರುದ್ರಾ ॥
ಎಲ್ಲಿ ಬಡವರ ಗೋಳು ಹಸಿದ ಹೊಟ್ಟೆಯ ಹೋಳು
ನಾನಲ್ಲಿ ನಿನ್ನನ್ನು ಕ೦ಡುಕೊಂಡೆ
ಮುದ್ದು ಮಕ್ಕಳನೆ ನಾ ಪ್ರೀತಿ ಗೈದಾಗ
ಅಲ್ಲಿ ನೀ ನಿಂತದ್ದು ಕಂಡೆ ಕಂಡೆ
ಎಲ್ಲಿ ಪ್ರೀತಿಯು ಉಂಟು ನ್ಯಾಯ ನೀತಿಯು ಉಂಟು
ಅಲ್ಲಿ ಕ೦ಡೆನು ಕಂಡೆ ತಾಯಿರುದ್ರಾ
ದಾಸೋಹ ಭಾವದಲಿ ಬಿದ್ದವರ ಸೇವೆಯಲಿ
ಮನುಕುಲದ ಪ್ರೀತಿಯಲಿ ನೀನೆ ರುದ್ರಾ
*****


















