Home / ಲೇಖನ / ಪುಸ್ತಕ / ಮೌನದೊಳಗೊಂದು ಅಂತರ್‍ಧಾನ – ಮುನ್ನುಡಿ

ಮೌನದೊಳಗೊಂದು ಅಂತರ್‍ಧಾನ – ಮುನ್ನುಡಿ

ಮೊದಮೊದಲು ಕವಿತೆಗಳನ್ನು ಮಾತ್ರ ಬರೆಯುತ್ತಿದ್ದೆ. ಆದರೆ ಕ್ರಮೇಣ ಕತೆಯ ಕಡೆ ನನಗರಿವಿಲ್ಲದೇ ನಡೆದ ನನ್ನ ನಡಿಗೆ ಇಂದು ಸಂಕಲನವೊಂದನ್ನು ತರುವಷ್ಟರ ಮಟ್ಟಿಗೆ ಬಂದಿದೆ. ಕತೆಗಳು ನನ್ನೊಳಗೆ ಹೊರಗಿಂದ ಬಂದು ಜೀವ ತಳೆಯುವವೋ ಅಥವಾ ಈ ಮೊದಲೇ ಅವು ಗಟ್ಟಿ ಬೇರೂರಿ ನೀರು ಮತ್ತು ಮಣ್ಣಿಗಾಗಿ ಕಾಯುತ್ತಿದ್ದವೋ ಗೊತ್ತಿಲ್ಲ. ಕವಿತೆ ಬರೆಯುವಾಗ ನಡೆಸುವ ಸಣ್ಣ ಸಣ್ಣ ಮರು ತಿದ್ದುವಿಕೆಯನ್ನು ಕತೆಯಲ್ಲಿ ಮಾತ್ರ ಮಾಡುವುದಿಲ್ಲ.

ಈ ಸಂಕಲನದಲ್ಲಿ ಒಟ್ಟು ಹನ್ನೆರಡು ಕತೆಗಳಿವೆ. ಮನಸ್ಸಿನ ಅಂತರ್ಗತ ಒಳಜಗತ್ತು ಮತ್ತು ಅದು ಹುದುಗಿಸಿಕೊಂಡಿರುವ, ಅದುಮಿಕೊಂಡಿರುವ, ಕೆಲವು ಬಾರಿ ಸ್ವತಃ ಅರ್ಥೈಸಲಾಗದ ವಿಚಾರಗಳು, ಭಾವಗಳು ಸಂವೇದನೆಗಳನ್ನು ಸೃಷ್ಟಿಸುತ್ತಲೇ, ಅಕ್ಷರಗಳಾಗಿ ಮೂಡಿ ವ್ಯಕ್ತವಾಗಿಯೂ, ಅವ್ಯಕ್ತವಾಗುಳಿಯುತ್ತವೆ. ಒಬ್ಬ ವ್ಯಕ್ತಿಯ ಒಂದಿಡೀ ವ್ಯಕ್ತಿತ್ವವೆಂದರೆ ತನ್ನ ಸ್ವಂತ ಅನುಭವ ಮತ್ತು ಪರರ ಅನುಭವಗಳಿಂದ ಪಡೆದ ಜ್ಞಾನ. ಖುಷಿ, ಸಂತೋಷ, ಬಂಧಗಳಲ್ಲಿಯ ಗಾಢತೆ, ನೋವು, ದುಃಖಗಳು, ಪಡೆದುಕೊಂಡ ಹೆಮ್ಮೆ, ಕಳೆದುಕೊಳ್ಳುವ ಭಯ, ಕಾಡುವ ಅಂತಃಪ್ರಜ್ಞೆ, ಸಂಬಂಧಗಳಲ್ಲಿಯ ಗೋಜಲು, ಇವೆಲ್ಲವೂ ನನ್ನ ನಿತ್ಯ ಕಾಡುವ ಸಂಗತಿಗಳು. ಹಾಗಾಗಿ ನನಗೆ ಬದುಕನ್ನು ಬಿಟ್ಟು, ಬರೆಯಲಾಗಲೇ ಇಲ್ಲ. ಕಾಲ್ಪನಿಕತೆಯ ನೆಲೆಯನ್ನು ಸೃಷ್ಟಿಸಿಕೊಂಡಷ್ಟು ಕತೆಗಳು ಉದುರಿಬಿದ್ದವು.

ಮುನ್ನುಡಿಯಲ್ಲಿ ನಾಡಿನ ಅತಿ ಪ್ರಮುಖ ಕತೆಗಾರರೆಂದು ಗುರುತಿಸಿಕೊಂಡಿರುವ ಶ್ರೀಧರ ಬಳಗಾರ ಸರ್ ಹೇಳಿದಂತೆ ಸ್ತ್ರೀಯರಿಗೇ ವಿಶಿಷ್ಟವಾದ ಅನುಭವ ಮತ್ತು ಹೊಸ ಸಂವೇದನೆಯಿಂದ ಬರೆಯುತ್ತಿರುವ ಜಾಗ್ರತ ಲೇಖಕಿಯರು ’ಮಹಿಳಾ ಸಾಹಿತ್ಯ’ ಎಂಬ ರಿಯಾಯಿತಿಯನ್ನೊ ಮೀಸಲಾತಿಯನ್ನೊ ಸಂಪೂರ್ಣವಾಗಿ ನಿರಾಕರಿಸಿದ್ದಾರೆ ಈ ವಿಚಾರವಾಗಿ ಬರಹಗಾರ್ತಿಯರಾದ ಮಹಿಳೆಯರ ಬರಹಗಳು, ಕತೆ, ಕವನಗಳು ಮೂಡಿಬರುತ್ತಿರುವುದು ಖುಷಿಯ ಸಂಗತಿ. ಗಂಡು ಹೆಣ್ಣಿನ ಅನುಭವಗಳು, ಸಂವೇದನೆಗಳು ಭಿನ್ನವಾಗಿರಬಹುದೇ ಹೊರತು, ಆ ಅನುಭವಗಳು ಸಂವೇದನೆಗಳು ಕಟ್ಟಿಕೊಡುವ ಅಕ್ಷರದ ಬಿಂಬಗಳಲ್ಲಿ ಭಿನ್ನತೆಗಳಿಲ್ಲ. ಸಾಹಿತ್ಯ ಜಗತ್ತು ಈ ಸೂಕ್ಷ್ಮತೆಯನ್ನು ಎತ್ತಿ ಹಿಡಿಯಲಿ ಎಂದು ಆಶಿಸುವೆ. ಇನ್ನು ಬಾಲ್ಯದ ಗಾಢ ಅನುಭವಗಳ ಜೊತೆ ಬೆಸೆದುಕೊಂಡಿರುವ ಆಕಾಶದ ನಿರಾಳತೆ, ಪ್ರೌಢ ಮನಸ್ಸಿನ ಪರಿಪಾಕದ ನೆಲೆಯಲ್ಲಿ ಮರೆಮಾಚುವ ನಿಜದ ಮುಖಗಳನ್ನು ಹುಡುಕುತ್ತಾ, ಅದೆಷ್ಟೋ ಭಾವಗಳನ್ನು , ಮುಖಗಳನ್ನು ತಟ್ಟುವ ನನ್ನ ಸಣ್ಣ ಪ್ರಯತ್ನಕ್ಕೆ ನಿಮ್ಮ ಬೆಂಬಲ ಸದಾ ಇರಲೆಂದು ಬಯಸುತ್ತೇನೆ.

ಮಿತಭಾಷಿ, ಸ್ವಂಯಮದ ನಡೆನುಡಿಯವರೂ, ತೃಪ್ತ ಭಾವಕ್ಕೆ ಇನ್ನೊಂದು ಹೆಸರಂತಿರುವ ನಾಡಿನ ಪ್ರಮುಖ ಕತೆಗಾರರಾದ ಶ್ರೀಧರ ಬಳಗಾರ ನನ್ನ ಕತೆಗಳಿಗೆ ಬೆಂಬಲ ನೀಡಿ, ಮುನ್ನುಡಿ ಬರೆದು ಕೊಟ್ಟು ಪ್ರೋತ್ಸಾಹಿಸಿದ್ದಾರೆ. ಇವರಿಗೆ ನನ್ನ ಮೊದಲ ವಂದನೆಗಳು.

ಈ ಸಂಕಲನದ ಹಸ್ತ ಪ್ರತಿಗೆ ಶ್ರೀಮತಿ ಸುಶೀಲಾ ಸೀತಾರಾಮ ಶೆಟ್ಟಿ ಸ್ಮಾರಕ ಕಥಾ ಬಹುಮಾನ ನೀಡಿ, ಪ್ರೋತ್ಸಾಹಿಸಿದ ಜಗಜ್ಯೋತಿ ಕಲಾವೃಂದ ಡೊಂಬಿವಿಲಿ, ಮುಂಬಯಿ ಇವರಿಗೆ ಆಭಾರಿಯಾಗಿದ್ದೇನೆ.

ಕತೆಗಳನ್ನು ಕಳಿಸಿದ ಕೆಲವೇ ದಿನಗಳಲ್ಲಿ ಮುದ್ರಿಸುವ ಭರವಸೆಕೊಟ್ಟು ಅತೀ ಕಡಿಮೆ ಅವಧಿಯಲ್ಲಿ ಪುಸ್ತಕವನ್ನು ಸುಂದರವಾಗಿ ಮುದ್ರಿಸಿಕೊಟ್ಟ ಬೆಂಗಳೂರಿನ ನಿವೇದಿತ ಪ್ರಕಾಶನದ ಉಮೇಶ ನಾಗಮಂಗಲ ಇವರಿಗೆ ನಾನು ಋಣಿ. ಮುಖಪುಟ ವಿನ್ಯಾಸ ಮಾಡಿದ ಅಜಿತ್ ಕೌಂಡಿಣ್ಯ ಶಿಡ್ಲಘಟ್ಟ ಇವರಿಗೆ ಕೃತಜ್ಞತೆಗಳು ನನ್ನ ಕತೆಗಳನ್ನು ಪ್ರಕಟಿಸಿ ಬೆಂಬಲ ನೀಡಿದ ತುಷಾರ, ಪ್ರಜಾವಾಣಿ, ಹೊಸ ದಿಗಂತ, ವಿಜಯಕರ್ನಾಟಕ, ಕೆಂಡಸಂಪಿಗೆ, ಅವಧಿ, ಬುಕ್ ಬ್ರಹ್ಮ, ಕರಾವಳಿ ಮುಂಜಾವು ಪತ್ರಿಕೆಗಳಿಗೂ, ಆಕಾಶವಾಣಿ ಧಾರವಾಡ ಕೇಂದ್ರಕ್ಕೂ ನನ್ನ ಕತೆಗಳನ್ನು ಮೆಚ್ಚಿ ಬೆಂಬಲಿಸಿದ ಎಲ್ಲ ಸ್ನೇಹಿತವರ್ಗಕ್ಕೂ, ಕುಟುಂಬವರ್ಗಕ್ಕೂ..

ಪ್ರೀತಿಯ ವಂದನೆಗಳು
ನಾಗರೇಖಾ ಗಾಂವಕರ

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...