‘ಸ್ಪಂದನ’ ಹಾಗೂ ‘ಅಭಿಮಾನ’ ದಂಥ ಒಳ್ಳೆಯ ಸಿನಿಮಾಗಳ ಮೂಲಕ ಪಿ.ಎನ್.ಶ್ರೀನಿವಾಸ್ ಕನ್ನಡ ಚಿತ್ರರಸಿಕರಿಗೆ ಪರಿಚಿತರು. ಇವತ್ತಿಗೂ ‘ಸ್ಪಂದನ’ ಚಿತ್ರದ ‘ಎಂಥಾ ಮರುಳಯ್ಯ ಇದು ಎಂಥಾ ಮರುಳು’ ಚಿತ್ರಗೀತೆ ಬಾನುಲಿಯ ಮೆಚ್ಚಿನ ಚಿತ್ರಗೀತೆ ವಿಭಾಗದ ಕಾಯಂ ಹಾಡುಗಳಲ್ಲೊಂದು. ಆದರೆ, ಶ್ರೀನಿವಾಸ್ ಗಾಂಧಿನಗರದಿಂದ ಇದ್ದಕ್ಕಿದ್ದಂತೆ ದೂರವಾದರು. ಅಮೆರಿಕಾಗೆ ಹಾರಿದ್ದರು. ಅವರ ಕಣ್ಮರೆ ಅಂಥ ದೊಡ್ಡ ಸುದ್ದಿಯೂ ಆಗಲಿಲ್ಲ. ಪುಟ್ಟಣ್ಣರ ವಿನಃ ನಿರ್ದೇಶಕ ಎನ್ನುವ ಪ್ರಾಣಿ ನಮ್ಮ ಚಿತ್ರರಸಿಕರ ಪಾಲಿಗೆ ಯಾವತ್ತೂ ಹೀರೋ ಆಗಿರಲೇ ಇಲ್ಲ. ಹಾಗಾಗಿ ಶ್ರೀನಿವಾಸ್ ಹೆಜ್ಜೆಗುರುತುಗಳ ಬಗ್ಗೆ ತಲೆ ಕೆಡಿಸಿಕೊಳ್ಳುವವರು ಯಾರು?

೨೦೦೩ರಲ್ಲಿ ಶ್ರೀನಿವಾಸ್ ಮತ್ತೆ ಬೆಂಗಳೂರಿನಲ್ಲಿ ಧುತ್ತೆಂದು ಪ್ರತ್ಯಕ್ಷರಾಗಿದ್ದರು. ಆಗವರ ಕೈಯಲ್ಲಿದ್ದುದು ಸಿನಿಮಾ ಅಥವಾ ಸಿನಿಮಾ ಸ್ಕ್ರಿಪ್ಟ್ ಅಲ್ಲ. ಎರಡು ಪುಸ್ತಕಗಳು. ಒಂದು ಕಾದಂಬರಿ, ‘ನಡೆ’ ಎಂದು ಶೀರ್ಷಿಕೆ. ಇನ್ನೊಂದು ಕಾದಂಬರಿಯಂತೆ ಕಾಣುವ ಸಿನಿಮಾ ತಂತ್ರಜ್ಞಾನ ಕುರಿತ ಪುಸ್ತಕ- ‘ಚಲನಚಿತ್ರ ನಿರ್ದೇಶಕ’.

ಸಿನಿಮಾದ ಶ್ರೀನಿವಾಸ್ ಇದ್ದಕ್ಕಿದ್ದಂತೆ ಲೇಖಕರಾದುದು ಹೇಗೆ? ಉಹುಂ, ಇದು ರಾತ್ರೋರಾತ್ರಿಯ ಜಾದೂವಲ್ಲ. ಬರವಣಿಗೆ ಶ್ರೀನಿವಾಸ್‍ಗೆ ಹೊಸತೂ ಅಲ್ಲ. ಈ ಮುನ್ನ ಕೂಡ ಅವರು ಬರೆದದ್ದುಂಟು. ‘ಮಾತುಗಳು’ ಎನ್ನುವ ಪ್ರಬಂಧ ಸಂಕಲನವನ್ನು ಪ್ರಕಟಿಸಿದ್ದೂ ಉಂಟು. ಆದರೆ, ಕರ್ನಾಟಕದಿಂದ ವಲಸೆ ಹೋಗಿದ್ದ ಶ್ರೀನಿವಾಸ್ ಅಮೆರಿಕಾವಾಸಿಯಾದುದರಿಂದ ಇದ್ಯಾವುದೂ ಸುದ್ದಿಯಾಗಿರಲಿಲ್ಲ. ಶ್ರೀನಿವಾಸ್‍ರ ಬರವಣಿಗೆ ತೆರೆಮರೆಯಲ್ಲೇ ಉಳಿಯಲು ಅವರ ವ್ಯಕ್ರಿತ್ವ ಕೂಡ ಕಾರಣವಿರಬೇಕು. ಸಿನಿಮಾದಲ್ಲಿ ಏಗಿದ್ದರೂ ಥಳಕ್ಕು ಬಳಕ್ಕು ಅವರಿಗೆ ಒಗ್ಗಿದಂತೆ ಕಾಣಿವುದಿಲ್ಲ. ನಗೆಯ ಗೆರೆಗಳು ದಟ್ಟವಾಗಿ ಕಾಣದ ಅವರ ಪೋಟೊ ನೋಡಿದರೆ, ಅವರು ಮನಿತಿನಮಲ್ಲರಂತೆ ಕಾಣುವುದೂ ಇಲ್ಲ. ‘ಮಾತುಗಳು’ ಪುಸ್ತಕದಲ್ಲೇ ಖರ್‍ಚಾಗಿದೆಯೋ ಏನೋ!

ಶ್ರೀನಿವಾಸ್‍ರ ‘ನಡೆ’ ಹಲವು ರೀತಿಗಳಿಂದ ವಿಶಿಷ್ಟವಾದುದು. ಶ್ರೀನಿವಾಸ್ ಬರಹಗಾರ ಮಾತ್ರವಲ್ಲ ‘ಸ್ಪಂದನ’ದಂತ ಒಳ್ಳೆಯ ಸಿನಿಮಾದ ನಿರ್ದೇಶಕರು. ಅವರ ಬರಹಗಳ ಮೂಲಕ ಕಾಣುವುದಾದರೆ ಅವರೊಬ್ಬ ಒಳ್ಳೆಯ ವಿಡಿಯೊಗ್ರಾಫರ್ ಕೂಡ. ‘ಮಾತುಗಳು’ ಮೂಲಕ ತಮ್ಮೊಳಗಿನ ಬರಹಗಾರನ ಶಕ್ತಿಯನ್ನು ಪ್ರಕಟಿಸಿದ್ದ ಶ್ರೀನಿವಾಸ್, ‘ನಡೆ’ಯ ಮೂಲಕ ಸಾಹಿತ್ಯದ ಕಗ್ಗಾಡಲ್ಲಿ ತಮ್ಮ ಹೆಜ್ಜೆಯೂರಿದ್ದಾರೆ. ಅವರದು ಅಳುಕಿನ ನಡೆಯಲ್ಲ; ಆತ್ಮಾವಿಶ್ವಾಸದ ನಡೆ, ದಿಟ್ಟತನದ ನಡೆ.

ಹೆಂಡತಿ ಮಕ್ಕಳೊಂದಿಗೆ ನಾಯಕ ನಯಾಗರ ಜಲಪಾತವನ್ನು ನೋಡಲು ಬಂದ ದೃಶ್ಯದೊಂದಿಗೆ ಕಾದಂಬರಿ ಪ್ರಾರಂಭವಾಗುತ್ತದೆ. ಜಲಪಾತದ ಎಲ್ಲಾ ಮುಖಗಳನ್ನು ತನ್ನ ವಿಡಿಯೋ ಕ್ಯಾಮರಾದಲ್ಲಿ ನಾಯಕ ಚಿತ್ರಿಸುವ ವಿವರಣೆ ಸಾಕಷ್ಟು ದೀರ್‍ಘವಾಗಿದೆ. ಭಾರತೀಯ ಹಾಗೂ ಪಾಶ್ಚಿಮಾತ್ಯ ಸಂಸ್ಕೃತಿಯ ಹೋಲಿಕೆಯೂ ಸೂಕ್ಷ್ಮವಾಗಿ ಕಾಣುತ್ತದೆ. ನಯಾಗರಾದ ಪರಿಸರದಲ್ಲಿನ ವಾಣಿಜ್ಯೀಕರಣ ಹಾಗೂ ಜೋಗದ ಸಹಜ ಪ್ರಕ್ರತಿಯ ಚಿತ್ರಣ ಇಲ್ಲಿದೆ. ಭಾರತೀಯ ಸಂಸ್ಕೃತಿಯ ಸಮರ್ಥನೆ ಕಾದಂಬರಿ ಉದ್ದೇಶವೇನೊ ಆನ್ನಿಸುತ್ತದೆ. ಆದರೆ, ಕ್ರಿಮಿನಲ್ ಲಾಯರ್ ಕೆ.ಕೆ.ಕಾಂತನ ಪ್ರವೇಶದೊಂದಿಗೆ ಕಥೆ ಬೇರೆಯೇ ಆದ ಆಯಾಮವನ್ನು ಪಡೆದುಕೊಳ್ಳುತ್ತದೆ.

‘ನಡೆ’ ಸಾವಿನ ಕುರಿತು ಚಿಂತಿಸುವ ಕಾದಂಬರಿ. ಇಲ್ಲಿನ ಸಾವು ವ್ಯಕ್ತಿಯ ಕೊನೆಯನ್ನು ಧ್ಯಾನಿಸುವ ಸಾವು ಮಾತ್ರವಾಗದೆ, ಜೀವಂತ ವ್ಯಕ್ತಿಯ ಸಾವಿನ ಕುರಿತೂ ಹೇಳುವುದು ವಿಶೇಷವಾಗಿದೆ.

‘ನಡೆ’ ಕೃತಿಯಲ್ಲಿ ಸಾವು ಮೂರು ರೀತಿಯಾಗಿ ಓದುಗನನ್ನು ಕಾಡುತ್ತದೆ. ಟರ್ಮಿನಲ್ ಕ್ಯಾನ್ಸರ್‌ಗೆ ತುತ್ತಾಗಿ ಸಾವಿನ ಹೊಸ್ತಿಲಲ್ಲಿ ನಿಂತಿರುವ ವೈಭವೋಪೇತ ಹೊಸ ಮುಖವಾಡದ ಮೋಹಕ್ಕಾಗಿ ಕೊಂದುಕೊಂಡ ತನ್ನ ವ್ಯಕ್ತಿತ್ವದ ಕುರಿತು ತಲ್ಲಣಗೊಳ್ಳುವ ಕ್ರಿಮಿನಲ್ ಲಾಯರ್ ಕೆ.ಕೆ.ಕಾಂತ್ ಹಾಗೂ ತನ್ನದಲ್ಲದ ಪರಿಸರದಲ್ಲಿ ಸಂಸ್ಕೃತಿ- ನುಡಿಯ ಕುರಿತು ಅಭದ್ರತೆ ಎದುರಿಸುವ ಸುಮಾ. ಈ ಮೂರು ಪಾತ್ರಗಳೂ ಸಾವಿನ ಸಮಸ್ಯೆ ಎದುರಿಸುತ್ತವೆ. ಇಲ್ಲಿ ಮೂರೂ ಪಾತ್ರಗಳ ಸಾವಿನ ಸಮಸ್ಯೆಯೂ ಒಂದಕ್ಕಿಂತ ಇನ್ನೊಂದು ಭಿನ್ನ. ಕೃಷ್ಣನದು ಭೌತಿಕ ಸಾವಿನ ಆತಂಕವಾದರೆ, ಕೆ.ಕೆ.ಕಾಂತನದು ಮಾನಸಿಕ ಸಾವಿನ ಭಯ. ಇವರಿಗಿಂತಲೂ ಹೆಚ್ಚು ಭಯಾನಕವಾದದ್ದು ಸುಮಾಳ ಪರಿಸ್ಥಿತಿ. ಆಕೆ ವ್ಯಕ್ತಿತ್ವದ ಪತನದ ಆತಂಕ ಎದುರಿಸುತ್ತಿದ್ದಾಳೆ. ಸುಮಾಳದು ಸಾಂಸ್ಕೃತಿಕ ತಲ್ಲಣ. ವಿಶೇಷವೆಂದರೆ ಮೂರೂ ಪಾತ್ರಗಳು ಸಾವಿನ ಹೊಸಿತಿಲಿಗೆ ಬಂದು ಮತ್ತೆ ಜೀವಗೊಳ್ಳುತ್ತವೆ. ಕೃಷ್ಣನ ಬದುಕು ಹಾಗೂ ವ್ಯಕ್ತಿತ್ವ ಸುಮಾಳ ಗೊಂದಲಗಳಿಗೆ ಉತ್ತರ ಒದಗಿಸಿದರೆ, ಸುಮಾ ಹಾಡುವ ‘ಜವರಾಯ ಬಂದರೆ…’ ಎನ್ನುವ ಜಾನಪದ ಗೀತೆ ಕೃಷ್ಟನ ಪಾಲಿಗೆ ಸಂಜೀವಿನಿ ಮಂತ್ರವಾಗುತ್ತದೆ.

ಸುಮಾ ಹಾಗೂ ಕೃಷ್ಣನ ವ್ಯಕ್ತಿತ್ವಗಳ ವೈಭವದಲ್ಲಿ ಕೆ.ಕೆ.ಕಾಂತ ಸೂರಗಿದಂತೆ ಕಂಡರೂ, ಆತನ ಬದುಕು ಹಾಗೂ ತೊಳಲಾಟಗಳು ಸುಮಾ ಹಾಗೂ ಕೃಷ್ಣರ ತೊಳಲಾಟಕ್ಕಿಂಥ ಕಡಿಮೆಯವಲ್ಲ. ತನ್ನ ಮೂಲರೂಪವನ್ನು ಕೊಂದುಕೊಳ್ಳುವ ಕೆ.ಕೆ.ಕಾಂತ ಶ್ರೀಮಂತಿಕೆಯ ಪ್ರಭಾವಳಿಯ ಹೊಸರೂಪು ಹೊಂದುತ್ತಾನೆ. ಆದರೆ, ಕಳಕೊಂಡದ್ದು ರೂಪವನ್ನು ಮಾತ್ರವಲ್ಲ ನೆಮ್ಮದಿಯನ್ನು ಕೂಡ ಎನ್ನುವ ಸತ್ಯ ಆತನಿಗೆ ಬೇಗನೆ ಅರ್ಥವಾಗುತ್ತದೆ. ಹೊಸ ಕಾಂತನನ್ನು ಒಪ್ಪಿಕೊಳ್ಳದ ಆತನ ಪತ್ನಿ ದೂರವಾಗುತ್ತಾಳೆ. ಕ್ಯಾನ್ಸರ್‌ನೊಂದಿಗೆ ಪತಿಯ ರೂಪದ ಸಾವೂ ಆಕೆಯನ್ನು ಕಾಡತೊಡಗುತ್ತದೆ. ಸಾವಿನೊಂದಿಗೆ ಕೆ.ಕೆ.ಕಾಂತನ ಕೊರಗು ಒಳಗೇ ಬೆಳೆಯುತ್ತದೆ. ಆ ಕೊರಗು ಸ್ಫೋಟಿಸುವುದು ನಿರೂಪಕ ಹಾಗೂ ಕಾಂತನ ಮುಖಾಮುಖಿಯೊಂದಿಗೆ. ನಿರೂಪಕನ ರೂಪ ಹಾಗೂ ಸಂಸಾರವನ್ನು ನೋಡಿದ ಕಾಂತನಿಗೆ ಆತನ ಪೂರ್ವರೂಪ ಹಾಗೂ ನೆಮ್ಮದಿಯ ದಿನಗಳು ಕಾಡತೊಡಗತ್ತವೆ. ವಿಹ್ವಲಗೊಳ್ಳುವ ಕಾಂತ ನಿರೂಪಕನ ರೂಪವನ್ನು ಕೊಲ್ಲಲು ಮುಂದಾಗುತ್ತಾನೆ. ಈ ಕೊಲ್ಲುವ ಆಟ ಹಾಗೂ ಸ್ವಂತಿಕೆ ಉಳಿಸಿಕೊಳ್ಳುವ ಹಠ- ಕಾದಂಬರಿಯ ಸಾರ್ಥಕ ಕ್ಷಣಗಳಲ್ಲಿ ಒಂದು.

‘ನಡೆ’ ಕಾದಂಬರಿಯನ್ನು ಅನಿವಾಸಿಯೊಬ್ಬನ ಸ್ವಗತ ಅಥವಾ ಸರ್ಕಸ್ಸು ಎಂದು ತಳ್ಳಿಹಾಕುವುದು ಸುಲಭ. ಆದರೆ, ಈ ಕೃತಿ ಮಾಮೂಲಿ ಪತ್ತೇದಾರಿ ಕಾದಂಬರಿಯಲ್ಲ. ಜನಪ್ರಿಯವಾಗುತ್ತಿರುವ ಜಾಗತಿಕ ಗ್ರಾಮದ ಪರಿಕಲ್ಪನೆಯಲ್ಲಿ ನಮ್ಮೆಲ್ಲರ ಬೇರುಗಳು ಸಡಿಲಾಗಿ ವಿಳಾಸಗಳ ಸ್ಮರಣೆ ಕಲಸುಮೇಲೋಗರವಾಗುತ್ತಿರುವ ಸಂದರ್ಭದಲ್ಲಿ ‘ನಡೆ’ ಆತ್ಮಾವಲೋಕನದ ನಡೆಯಾಗಿ ಕಾಣುತ್ತದೆ. ಕನ್ನಡದ ಕಾದಂಬರಿ ಕ್ಷೇತ್ರದಲ್ಲಿ ಪ್ರಯೋಗಗಳು ಕ್ಷೀಣಿಸುತ್ತಿರುವ ಸಂದಭದಲ್ಲಿ ‘ನಡೆ’ಯ ಹಲವು ಸಾಧ್ಯತೆಗಳು ಚೇತೋಹಾರಿಯಾಗಿ ಕಾಣಿಸುತ್ತದೆ. ತಾನೇ ಒಂದು ಪಾತ್ರವಾದರೂ, ಪಾತ್ರದಿಂದ ಹೊರ ನಿಂತು ಕಥೆ ಹೇಳುವ ಸಂಯಮವೂ ಲೇಖಕರಿಗೆ ಸಾಧ್ಯವಾಗಿದೆ.

‘ನಡೆ’ ಜನಪ್ರಿಯ ಧಾಟಿಯಲ್ಲಿ ಚಿತ್ರಿತವಾದ ಕಲಾತ್ಮಕ ಕಾದಂಬರಿ. ಪತ್ತೇದಾರಿಕೆಯ ಕುತೂಹಲದ ಬಂಧ ಹಾಗೂ ಲವಲವಿಕೆಯೊಳಗೊಂಡ ಶ್ರೀನಿವಾಸ್‍ರ ಬರವಣಿಗೆ ತೇಜಸ್ವಿ ಯವರ ಕಥೆ ಕಾದಂಬರಿಗಳನ್ನು ನೆನಪಿಸುತ್ತದೆ. ಶ್ರೀನಿವಾಸ್‍ರ ಬರವಣಿಗೆ ಸರಳವಾಗಿದೆ. ಸಂಕೀರ್‍ಣ ವಿಷಯಗಳನ್ನೂ ಮನಮುಟ್ಟುವಂತೆ ಸರಳವಾಗಿ ಹೇಳುವುದು ಅವರಿಗೆ ಸಾಧ್ಯವಾಗಿದೆ. ಆದರೆ, ಮೊಸರಿನಲ್ಲಿನ ಕಲ್ಲಿನಂತೆ ಅನಾವಶ್ಶಕ ಒತ್ತುಗಳು (ನಂಬಿಕ್ಕೊಂಡು, ಸಹಿಸಿಕ್ಕೊಂಡು, ಬಿಟ್ಟುಕ್ಕೊಂಡು, ಸಹಿಸಿಕ್ಕೊಂಡು….) ಕಿರಿಕಿರಿ ಉಂಟುಮಾಡುತ್ತವೆ.

ಕಾದಂಬರಿಯಲ್ಲಿನ ಕೃಷ್ಣ ಹಾಗೂ ಸುಮಾ ಪಾತ್ರಗಳು ಓದುಗನನ್ನು ತುಂಬಾ ದಿನ ಕಾಡುವುದರಲ್ಲಿ ಅನುಮಾನವಿಲ್ಲ. ಈ ಪಾತ್ರಗಳು ಕನ್ನಡ ಕಾದಂಬರಿ ಲೋಕದ ವಿಶಿಷ್ಟ ಪಾತ್ರಗಳು ಕೂಡ. ಅದೇ ರೀತಿ ನಯಾಗರಾದ ಜಲಲ ಧಾರೆಯ ಚಿತ್ರಣವು ಅಕ್ಷರಗಳ ಮೂಲಕವೇ ಚಿತ್ರವಾಗಿ ಓದುಗನ ಎದೆಯನ್ನು ತೇವವಾಗಿಸುವಷ್ಟು ಶಕ್ತವಾಗಿದೆ. ವೈಭವೋಪೇತ ‘ಲಿಮೊ’ ಕಾರು ಒಂದು ರೂಪಕವಾಗಿ ಕಾಡುತ್ತದೆ.

‘ಜವರಾಯ ಬಂದರೆ ಬರಿಗೈಲಿ ಬರಲಿಲ್ಲ’ ಎನ್ನುವ ಜನಪದ ಗೀತೆಯ ಬಳಕೆ ಕಾದಂಬರಿಯ ಯಶಸ್ಸಿನ ಸೂತ್ರಗಳಲ್ಲೊಂದು. ಈ ಹಾಡು ಕೃಷ್ಣನನ್ನು ಸಾವಿನ ಮನೆಯಿಂದ ವಾಪಸ್ಸು ಭೂಮಿಗೆ ಕರೆತರುತ್ತದೆ. ಜವರಾಯನ ಗೀತೆಯನ್ನು ಶ್ರೀನಿವಾಸ್ ಅದ್ಭುತವಾಗಿ ಬಳಸಿಕೊಂಡಿದ್ದಾರೆ. ಕಾದಂಬರಿಯ ಓದಿನ ನಂತರ, ಜವರಾಯನ ಹಾಡು ಗೊತ್ತಿಲ್ಲದವರು ಕೂಡ ಆ ಗೀತೆಯ ಬಗೆಗೆ ಕುತೂಹಲ ತಾಳುವುದರಲ್ಲಿ ಆಶ್ಚರ್‍ಯವಿಲ್ಲ. ಅದೇರೀತಿ, ಈಗಾಗಲೇ ಹಾಡು ಕೇಳಿದವರು ಗೀತೆಯ ಅರ್‍ಥಸಾಧ್ಯತೆಗಳ ಕುರಿತು ಇನ್ನೊಮ್ಮೆ ಚಿಂತಿಸಲು ಕಾದಂಬರಿ ಪ್ರೇರೇಪಿಸುತ್ತದೆ. ಕಥೆಯ ಸ್ಪೂರ್‍ತಿಗಾಗಿ ಸದಾ ಪಶ್ಚಿಮದತ್ತ ನೋಡುವ ನಮ್ಮ ಚಿಂತಕರಿಗೆ ಜನಪದದ ಸಿರಿಕಣಜವನ್ನು ಶ್ರೀನಿವಾಸ್ ‘ನಡೆ’ಯ ಮೂಲಕ ತೆರೆದಿದ್ದಾರೆ.

‘ನಡೆ’ ಕಾದಂಬರಿ ಶ್ರೀನಿವಾಸ್ ಅವರ ಪ್ರಯೋಗಶೀಲತೆಯ ಒಂದು ಸಾಧ್ಯತೆಯಾಗಿ ಕಾಣುತ್ತದೆ. ‘ನಡೆ’ಯನ್ನು ಪ್ರಕಟಿಸಿರುವ ಪುರೋಗಾಮಿ ಪ್ರಕಾಶನದ ಮಾವಿನಕೆರೆ ರಂಗನಾಥನ್ ಅವರಿಗೂ ಅಭಿನಂದನೆಗಳು ಸಲ್ಲುತ್ತವೆ.
*****