ನಾನು ನೀನು ಬೇರೆ ಏನು?
ಒಲಿದು ಬೆರೆತ ಹಾಲು ಜೇನು!
ಯುಗ ಯುಗಗಳ ಬಲಿದ ಆಸೆ
ಜನ್ಮಾಂತರಗಳ ಪಿಪಾಸೆ
ಫಲಿಸಿ ಬಂದ ಹೃದಯಂಗಮ
ನಮ್ಮೆದೆಗಳ ಸಂಗಮ ೧
ಗಂಗೆ ಯಮನೆ ಕೂಡಲಿಲ್ಲ
ಕರಿದು ಬಿಳಿದು ಬೆರೆಯಲಿಲ್ಲ
ನಾನು ನೀನು ಬೇರೆಯಲ್ಲ
ಅತುಲವೀ ಸಮಾಗಮ ೨
ಆಕಾಶದ ಚಿಕ್ಕೆ ಬೆಳೆಯು
ಕಡಲೊಡಲಿನ ರತ್ನ ಕಳೆಯು
ಎಣಿಕೆಯಿರದ ಬುವಿಯ ಸಿರಿಯು
ನಮ್ಮೊಲವನು ಮೀರದು ೩
ಕೂಡಿ ಬರಲು ನೀನು ನಾನು
ಉದಿಸಿ ಬಂತು ದೈವ ಭಾನು
ಈ ಪ್ರೀತಿಯ ಪುಣ್ಯ ಸಾನು
ಕೊನೆಯಿಲ್ಲದೆ ನಿಲ್ಲಲಿ ೪
ನಮ್ಮೊಲವೇ ಚೆಲುವಿನ ಸಿರಿ
ಈ ನಲಿವೇ ನಿಜದ ಲಹರಿ
ಆಶಿಷಗಳ ಕರೆವನು ಹರಿ
ಒಲಿದೆಮ್ಮಯ ಬಾಳಿಗೆ ೫
*****